೧೮೬. ಲಲಿತಾ ಸಹಸ್ರನಾಮ ೮೬೨ರಿಂದ ೮೬೭ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೮೬೨-೮೬೭
Kārya- kāraṇa-nirmuktā कार्य- कारण-निर्मुक्ता (862)
೮೬೨. ಕಾರ್ಯ-ಕಾರಣ-ನಿರ್ಮುಕ್ತಾ
ದೇವಿಯು ಕಾರ್ಯ-ಕಾರಣ ಪರಿಣಾಮಗಳಿಗೆ ಒಳಗಾಗುವುದಿಲ್ಲ. ಕೇವಲ ಪರಬ್ರಹ್ಮವೊಂದೇ ಕಾರ್ಯ-ಕಾರಣದಿಂದ ಮುಕ್ತವಾಗಿದೆ. ಕೃಷ್ಣನು, ಇದನ್ನೇ ಭಗವದ್ಗೀತೆಯಲ್ಲಿ (೩.೨೨) ವಿವರಿಸುತ್ತಾನೆ. "ನನಗೆ ಈ ಮೂಜಗಗಳಲ್ಲಿಯೂ ಕೈಗೊಳ್ಳಬೇಕಾದುದೇನೂ ಇಲ್ಲ, ಅಥವಾ ನನ್ನಿಂವದ ಹೊಂದಲ್ಪಡದೇ ಇರುವ ಮಹತ್ವವಾಗಿರುವುದನ್ನು ನಾನು ಹೊಂದಬೇಕಾಗಿಯೂ ಇಲ್ಲ, ಆದರೂ ಸಹ ನಾನು ಕರ್ಮನಿರತನಾಗಿದ್ದೇನೆ". (ಕೆಲವೊಂದು ಕೃತಿಗಳು, ಶ್ವೇತಾಶ್ವತರ ಉಪನಿಷತ್ತಿನಲ್ಲಿ (೬.೮) ಹೇಳಿರುವ “न तस्य कार्यं करणं च विद्यते ನ ತಸ್ಯ ಕಾರ್ಯಂ ಕರಣಂ ಚ ವಿದ್ಯತೇ” ಎನ್ನುವುದನ್ನು ಉಲ್ಲೇಖಿಸುತ್ತವೆ. ಈ ಉಪನಿಷತ್ತಿನಲ್ಲಿ ಕರಣಂ ಎಂದು ಹೇಳಿದೆಯೇ ಹೊರತು ಕಾರಣಂ ಅಲ್ಲ. ಈ ಉಪನಿಷತ್ ವಾಕ್ಯದ ಅರ್ಥ ’ಅವನಿಗೆ ಶರೀರವೂ ಇಲ್ಲ ಅಥವಾ ಅವಯವಗಳೂ ಇಲ್ಲ’. ಕೆಲವು ಇತರೇ ಗ್ರಂಥಗಳು ಈ ಕರಣಂ ಮತ್ತು ಕಾರಣಂ ಎರಡೂ ಒಂದೇ ಎಂದು ಹೇಳಿ ಅದನ್ನು ಕಾರಣವೆಂದೇ ವಿಶ್ಲೇಷಿಸುತ್ತವೆ).
ಕಾರ್ಯ-ಕಾರಣದ ಕುರಿತು ಇನ್ನಷ್ಟು ವಿವರಗಳು:
ಇಪ್ಪತ್ತೈದು ತತ್ವಗಳನ್ನು ವಿಶಾಲವಾದ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ ಅವುಗಳು ಪ್ರಕೃತಿಗೆ ಉಂಟು ಮಾಡುವ ಕಾರ್ಯ ಮತ್ತು ಕಾರಣಗಳ ಆಧಾರದ ಮೇಲೆ. ಎಲ್ಲಕ್ಕಿಂತ ಪ್ರಮುಖವಾದ ತತ್ವವೆಂದರೆ ಮೂಲಪ್ರಕೃತಿ (ನಾಮ ೩೯೭) ಇದು ಪ್ರಕೃತಿಯ ಮೂಲ ಸ್ವರೂಪವಾಗಿದ್ದು ಇದು ಕಾರ್ಯವಲ್ಲ. ಮೂಲಪ್ರಕೃತಿಯು ‘ಪರಿಣಾಮ ಅಥವಾ ಕಾರ್ಯವಲ್ಲ’ ಅದು ಮೂಲ ‘ಕಾರಣ’ವಾಗಿದೆ. ಸಾಂಖ್ಯ ಸೂತ್ರವು (೧.೬೧), "ಮೂಲ ವಸ್ತುವು ತ್ರಿಗುಣಗಳ ಸಂಪೂರ್ಣ ಸಮತುಲ್ಯ ಸ್ಥಿತಿಯನ್ನು ಹೊಂದಿರುತ್ತದೆ; ಈ ಮೂಲ ವಸ್ತುವಿನಿಂದ ಮಹತ್ತರವಾದದ್ದು - ಮಹತ್ (ನಿರ್ಣಯಿಸುವ ಸಾಮರ್ಥ್ಯ); ಆ ಮಹತ್ತಿನಿಂದ ಅಹಂಕಾರಕ್ಕೆ ಕಾರಣವಾದ ಮಾಯೆ, ಆ ಮಾಯೆಯಿಂದ ಐದು ತನ್ಮಾತ್ರೆಗಳು ಮತ್ತು ಎರಡು ವಿಧವಾದ ಇಂದ್ರಿಯಗಳು (ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು); ಮತ್ತು ಅವುಗಳನ್ನನುಸರಿಸಿ ಉತ್ಪನ್ನವಾಗುವು ಸ್ಥೂಲ ಧಾತುಗಳು (ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ನಿರುತ್ ಮತ್ತು ಭೂಮಿ). ಇವೆಲ್ಲವುಗಳೊಂದಿಗೆ ಆತ್ಮವು ಸೇರಿ ಇವುಗಳ ಸಂಖ್ಯೆಯು ಒಟ್ಟು ಇಪ್ಪತ್ತೈದು ತತ್ವಗಳಾಗುತ್ತವೆ", ಎಂದು ಹೇಳುತ್ತದೆ.
ಮುಂದಿನದೇ, ’ಕಾರ್ಯ ಮತ್ತು ಕಾರಣ’ ಇದು ಅಂತಃಕರಣದೊಳಗಿನ ಬುದ್ಧಿ ಮತ್ತು ಅಹಂಕಾರಗಳನ್ನು ಹಾಗು ಐದು ತನ್ಮಾತ್ರಗಳನ್ನು (ಶಬ್ದ, ಸ್ಪರ್ಷ, ರೂಪ, ರಸ, ಗಂಧ) ಒಳಗೊಂಡಿದೆ - ಇವುಗಳ ಸಂಖ್ಯೆಯು ಏಳು. ಇವುಗಳನ್ನು ಕಾರ್ಯ ಮತ್ತು ಕಾರಣಗಳೆಂದು ಏಕೆ ವರ್ಗೀಕರಿಸಿದ್ದಾರೆಂದರೆ, ಇವುಗಳು ಇತರೇ ಕಾರಣಗಳಿಂದ ಉದ್ಭವವಾಗಿ ಇತರೇ ಕಾರ್ಯಗಳನ್ನು (ಪರಿಣಾಮಗಳನ್ನು) ಉಂಟು ಮಾಡುತ್ತವೆ. ಆದ್ದರಿಂದ ಅವು ಕಾರ್ಯ-ಕಾರಣ ಎರಡೂ ಆಗಿವೆ. ಉದಾಹರಣೆಗೆ, ಬುದ್ಧಿಯು ಪ್ರಕೃತಿಯ ಉತ್ಪನ್ನವಾಗಿದೆ; ಮತ್ತು ಬುದ್ಧಿಯು ಅಹಂಕಾರವನ್ನು ಉಂಟು ಮಾಡುತ್ತದೆ ಮತ್ತು ಅಹಂಕಾರವು ಐದು ವಿಧವಾದ ತನ್ಮಾತ್ರೆಗಳನ್ನು ಉತ್ಪತ್ತಿ ಮಾಡುತ್ತವೆ. ಆದ್ದರಿಂದ ಇವುಗಳು ಕಾರಣ ಮತ್ತು ಕಾರ್ಯ ಎರಡೂ ಆಗಿವೆ. ಮುಂದಿನ ವರ್ಗವು ಕೇವಲ ಕಾರ್ಯ (ಪರಿಣಾಮ) ಮಾತ್ರವೇ ಆಗಿವೆ; ಇವುಗಳ ಸಂಖ್ಯೆಯು ಹದಿನಾರು ಆಗಿದೆ. ಇವು ಯಾವುದೇ ವಿಧವಾದ ಪರಿಣಾಮವನ್ನುಂಟು ಮಾಡುವುದಿಲ್ಲ ಅಥವಾ ‘ಕಾರಣ’ಗಳಾಗಿಲ್ಲ; ಅವುಗಳೆಂದರೆ ಜ್ಞಾನೇಂದ್ರಿಯಗಳು ಅಥವಾ ಗ್ರಹಣೇಂದ್ರಿಯಗಳಾದ ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗು (೫), ಕರ್ಮೇಂದ್ರಿಯಗಳು ಅಥವಾ ಕೆಲಸ ಮಾಡುವ ಅಂಗಗಳು - ಬಾಯಿ, ಪಾದಗಳು, ಹಸ್ತಗಳು, ವಿಸರ್ಜನಾಂಗ ಮತ್ತು ಜನನೇಂದ್ರಿಯ (೫), ಐದು ಮೂಲ ಧಾತುಗಳು ಅಥವಾ ಪಂಚಭೂತಗಳು - ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ (೫), ಮತ್ತು ಅಂತಃಕರಣದ ಭಾಗವಾದ ಮನಸ್ಸು (೧) ಹೀಗೆ ಕಾರ್ಯಗಳ ಸಂಖ್ಯೆಯು ೧೬ ಆಗಿದೆ. ಮೂರನೇ ವರ್ಗವು ಕಾರಣವೂ ಅಲ್ಲ ಕಾರ್ಯವೂ ಅಲ್ಲ. ಈ ವರ್ಗದಲ್ಲಿ, ಕೇವಲ ಪುರಷ ಅಥವಾ ಆತ್ಮವು ಬರುತ್ತದೆ. ಪುರುಷವು ತನ್ನಷ್ಟಕ್ಕೆ ತಾನೇ ಮಾರ್ಪಾಟು ಹೊಂದುವುದಿಲ್ಲ. ಆತ್ಮವು ಪ್ರಕೃತಿಯೊಂದಿಗೆ ಅನುಬಂಧವನ್ನು ಹೊಂದಿದಾಗ ಮಾತ್ರವೇ ರೂಪಾಂತರ ಹೊಂದಲು ಸಾಧ್ಯವಾಗುತ್ತದೆ. ಆದ್ದರಿಂದ ಮೂಲ ಪ್ರಕೃತಿಯಿಂದ ಉಳಿದ ಇಪ್ಪತ್ತನಾಲ್ಕು ತತ್ವಗಳು ಉದ್ಭವವಾಗುತ್ತದೆ ತನ್ಮೂಲಕ ಸೃಷ್ಟಿಯ ಅನಾವರಣವಾಗುತ್ತದೆ. ಕೆಲವೊಬ್ಬರ ಅಭಿಪ್ರಾಯದಂತೆ, ಅಂತಃಕರಣವು ಕೇವಲ ಮನಸ್ಸು, ಬುದ್ಧಿ, ಅಹಂಕಾರಗಳನ್ನು ಮಾತ್ರವೇ ಒಳಗೊಂಡಿರುತ್ತದೆ; ಅದರಲ್ಲಿ ಚಿತ್ತವನ್ನು ಸೇರಿಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಇಪ್ಪತ್ತೈದು ತತ್ವಗಳನ್ನು (ಐದು ಮಹಾಭೂತಗಳು, ಐದು ತನ್ಮಾತ್ರಗಳು, ಐದು ಜ್ಞಾನೇಂದ್ರಿಯಗಳು ಮತ್ತು ಐದು ಪಂಚೇಂದ್ರಿಯಗಳು), ಅಂತಃಕರಣ (೩), ಪುರಷ/ಆತ್ಮ (೧) ಮತ್ತು ಪ್ರಕೃತಿ (೧) ಹೀಗೆ ಲೆಕ್ಕಮಾಡಲಾಗುತ್ತದೆ.
Kāma-keli-taraṅgitā काम-केलि-तरङ्गिता (863)
೮೬೩. ಕಾಮ-ಕೇಳಿ-ತರಂಗಿತಾ
ದೇವಿಯು ಶಿವನ ಸಾಂಗತ್ಯದಲ್ಲಿ ಆನಂದ ವಿಹ್ವಲಳಾಗುತ್ತಾಳೆ. ಕಾಮ ಎಂದರೆ ಶಿವ. ದೇವಿಯು ನಾಮ ೩೭೬ರಲ್ಲಿ ಹೇಳಿರುವಂತೆ ‘ಶೃಂಗಾರ ರಸ ಸಂಪೂರ್ಣಾ’ ಆಗಿದ್ದಾಳೆ. ಪ್ರೇಮವು ಲಲಿತಾಂಬಿಕೆಯ ಒಂದು ಪ್ರಮುಖವಾದ ಗುಣವಾಗಿದೆ. ಈ ನಾಮವು ದೇವಿಯು ಶಿವನೊಂದಿಗೆ ಸಮಾಗಮಗೊಂಡಾಗ ಹೊಂದುವ ಆನಂದದ ಅಲೆಗಳ ಕುರಿತಾಗಿ ಹೇಳುತ್ತದೆ (ಅಲೆಗಳು ಒಂದರ ನಂತರ ಒಂದು ತ್ವರಿತವಾಗಿ ಉತ್ಪನ್ನವಾಗುತ್ತವೆ).
Kanat-kanaka-tāṭaṅkā कनत्-कनक-ताटङ्का (864)
೮೬೪. ಕನತ್-ಕನಕ-ತಾಟಂಕಾ
ಹೊಳಪಿನ ಬಂಗಾರದದಿಂದ ಮಾಡಲ್ಪಟ್ಟ ಮಿರಮಿರನೆ ಮಿಂಚುವ ಕಿವಿಯೋಲೆಗಳನ್ನು ದೇವಿಯು ಧರಿಸಿದ್ದಾಳೆ. ಸೌಂದರ್ಯ ಲಹರಿಯು (ಸ್ತೋತ್ರ ೨೮), "ನಿನ್ನ ಕಿವಿಯೋಲೆಗಳ (ತಾಟಂಕಗಳ) ಶಕ್ತಿಯಿಂದಾಗಿ ಶಿವನು ಅಮರನಾಗಿದ್ದಾನೆ; ಘೋರವಾದ ಹಾಲಾಹಲವನ್ನು ಕುಡಿದ ನಂತರ", ಎಂದು ಸ್ತುತಿಸುತ್ತದೆ. ಸೂರ್ಯ ಮತ್ತು ಚಂದ್ರರೇ ದೇವಿಯ ಕಿವಿಯೋಲೆಗಳು ಎಂದು ಹೇಳಲಾಗುತ್ತದೆ.
ಶಿವಾನಂದ ಲಹರಿಯು (ಸ್ತೋತ್ರ ೧೬), "ಮನ್ಮಥನ ಸಂಹಾರಕನಿಗೆ (ಶಿವನಿಗೆ), ವಾಹನವು ಒಂದು ಮುದಿ ಎತ್ತಾಗಿದೆ. ವಿಷವೇ ಅವನ ಆಹಾರವಾಗಿದೆ. ದಿಕ್ಕುಗಳೇ ಅವನಿಗೆ ಅಂಬರವಾಗಿವೆ (ಬಟ್ಟೆಯಾಗಿವೆ). ಉರಿಯುವ ಸ್ಮಶಾನವೇ ಅವನ ಆಟದ ಬಯಲಾಗಿದೆ. ಅವನ ಆಭರಣಗಳಾದರೋ ವಿಷದ ಹಾವುಗಳಾಗಿವೆ. ಓಹ್ಞ್! ತಾಯೇ! ಇವೆಲ್ಲುವುದರ ಹೊರತಾಗಿಯೂ ಅವನಿನ್ನೂ ಈಶ್ವರ ಪದವಿಯಲ್ಲಿ ಇದ್ದಾನೆಂದರೆ, ಅದು ಕೇವಲ ನಿನ್ನ ಮಹಿಮೆಯಿಂದಾಗಿ, ನಿನ್ನ ಸೌಭಾಗ್ಯದಿಂದಾಗಿ" ಎಂದು ವರ್ಣಿಸುತ್ತದೆ.
Līlā-vigraha-dhāriṇī लीला-विग्रह-धारिणी (865)
೮೬೫. ಲೀಲಾ-ವಿಗ್ರಹ-ಧಾರಿಣೀ
ದೇವಿಯು ಮಕ್ಕಳ ಆಟದಂತೆ ಹಲವಾರು ರೂಪಗಳನ್ನು ಧರಿಸುತ್ತಾಳೆ. ಈ ನಾಮವು ದೇವಿಯು ಹೇಗೆ ವಿವಿಧ ಅವತಾರಗಳನ್ನು ಎಷ್ಟು ಸುಲಭವಾಗಿ ಧರಿಸಬಲ್ಲಳು ಎಂದು ಹೇಳುತ್ತದೆ. ನಾಮ ೪೦೧ ಮತ್ತು ನಾಮ ೮೨೪ ಸಹ ಇದೇ ವಿಷಯವನ್ನು ಚರ್ಚಿಸುತ್ತವೆ.
ಕೃಷ್ಣನು ವಿವಿಧ ಅವತಾರಗಳನ್ನು ಧರಿಸುವುದಕ್ಕೆ ದೀರ್ಘವಾದ ವಿವರಣೆಯನ್ನು ಕೊಡುತ್ತಾನೆ. "ಜನ್ಮರಹಿತನೂ ಮರಣರಹಿತನೂ ಆಗಿದ್ದರೂ ಸಹ ಮತ್ತು ಎಲ್ಲಾ ಜೀವಿಗಳ ಒಡೆಯನಾಗಿದ್ದರೂ ಸಹ, ನಾನು ನನ್ನ ಯೋಗ ಮಾಯೆಯಿಂದ ರೂಪಾಂತರ ಹೊಂದುತ್ತೇನೆ" (ಭಗವದ್ಗೀತಾ, ೪.೭). "ಯಾವಾಗ ಧರ್ಮವು ಕೆಳಮುಖವಾಗಿ ಮತ್ತು ಅಧರ್ಮವು ಮೇಲ್ಮುಖವಾಗಿ ಹೆಚ್ಚುತ್ತಿರುತ್ತದೆಯೋ, ಆಗ ನಾನು ಅವತರಿಸುತ್ತೇನೆ" (ಭಗವದ್ಗೀತಾ, ೪.೭). "ಶಿಷ್ಠರನ್ನು ರಕ್ಷಿಸುವುದಕ್ಕಾಗಿ ಮತ್ತು ದುಷ್ಟರನ್ನು ನಾಶಗೊಳಿಸುವುದಕ್ಕಾಗಿ ಮತ್ತು ಧರ್ಮವನ್ನು ಸ್ಥಾಪಿಸುವುದಕ್ಕಾಗಿ ನಾನು ಯುಗಯುಗಳಲ್ಲೂ ಜನಿಸುತ್ತೇನೆ" (ಭಗವದ್ಗೀತಾ, ೪.೮). ಈ ಪ್ರಸಿದ್ಧ ಸಂಸ್ಕೃತ ಶ್ಲೋಕವನ್ನು ಕೆಳಗಡೆ ಕೊಡಲಾಗಿದೆ.
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|
ಧರ್ಮ-ಸಂಸ್ಥಾಪನಾರ್ಥಾಯ ಸಮ್ಭಾವಮಿ ಯುಗೇ ಯುಗೇ||
परित्राणाय साधूनां विनाशाय च दुष्कृताम्।
धर्म-संस्थापनार्थाय सम्भावमि युगे युगे॥
ಲೀಲಾ ಎನ್ನುವುದು ಯೋಗ ವಾಶಿಷ್ಠದಲ್ಲಿನ ಒಂದು ಪಾತ್ರದ ಹೆಸರೂ ಆಗಿದೆ (ಉತ್ಪತ್ತಿ ಪ್ರಕರಣದ ಎರಡನೇ ಕಥೆ). ಲೀಲಾಳ ತಪಸ್ಸಿನ ಪ್ರಭಾವದಿಂದ ಸರಸ್ವತೀ ದೇವಿಯು ಅವಳ ಮುಂದೆ ಪ್ರತ್ಯಕ್ಷಳಾಗಿ ಸಾಕ್ಷಾತ್ಕಾರದ ಕುರಿತಾದ ಲೀಲಾಳ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತಾಳೆ.
Ajā अजा (866)
೮೬೬. ಅಜಾ
ದೇವಿಯು ಹುಟ್ಟಿಲ್ಲದವಳು. ಶ್ವೇತಾಶ್ವತರ ಉಪನಿಷತ್ತು (೪.೫) ಈ ಸ್ಥಿತಿಯನ್ನು ವಿವರಿಸುತ್ತದೆ. ಉಪನಿಷತ್ತುಗಳು ಪ್ರಕೃತಿಯನ್ನು ಅಜಾ ಎಂದು ವರ್ಣಿಸುತ್ತವೆ. ಅದು (ಪ್ರಕೃತಿಯು) ತನ್ನ ರೂಪಗಳನ್ನು ಬದಲಿಸಿದರೂ ಸಹ ಅದು ಜನ್ಮರಹಿತವಾಗಿದೆ ಮತ್ತು ಅನಾದಿಯಾಗಿದೆ.
Kṣaya-vinirmuktā क्षय-विनिर्मुक्ता (867)
೮೬೭. ಕ್ಷಯ-ವಿನಿರ್ಮುಕ್ತಾ
ದೇವಿಯು ನಾಶವಿಲ್ಲದವಳಾಗಿದ್ದಾಳೆ. ಇಲ್ಲಿ ನಾಶವೆಂದರೆ ಮರಣ. ಯಾವಾಗ ಹುಟ್ಟು ಇರುವುದಿಲ್ಲವೋ ಆಗ ಸಾವೂ ಇರುವುದಿಲ್ಲ. ಬ್ರಹ್ಮವು ಹುಟ್ಟು ಮತ್ತು ಸಾವುಗಳಿಗೆ ಅತೀತವಾಗಿದೆ ಏಕೆಂದರೆ ಎಲ್ಲವೂ ಅದರಿಂದಲೇ ಉಗಮವಾಗುತ್ತವೆ. ಕೃಷ್ಣನು ಭಗವದ್ಗೀತೆಯಲ್ಲಿ (೨.೭೭), "ಹುಟ್ಟಿದವನಿಗೆ ಮರಣವು ನಿಶ್ಚಯವು ಮತ್ತು ಮರಣಿಸಿದವನಿಗೆ ಹುಟ್ಟುವುದ ಅನಿವಾರ್ಯ", ಎಂದು ಹೇಳಿದ್ದಾನೆ. ದೇವಿಯು ಪರಬ್ರಹ್ಮವಾಗಿರುವುದರಿಂದ ಆಕೆಗೆ ಹುಟ್ಟು-ಸಾವುಗಳಿಲ್ಲ.
ಈ ನಾಮವು, ದೇವಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ಒಬ್ಬನು ಏಕಾಂತ ಸ್ಥಳಗಳಿಗೆ ಹೋಗಿ ತಪಸ್ಸನ್ನಾಚರಿಸಬೇಕಿಲ್ಲ ಎನ್ನುವ ಅರ್ಥವನ್ನೂ ಕೊಡುತ್ತದೆ (ಇದು ಭಗವದ್ಗೀತೆಯ ೬ನೇ ಅಧ್ಯಾಯದ ೯ನೇ ಶ್ಲೋಕದ ಅಭಿಪ್ರಾಯಕ್ಕೆ ವಿರುದ್ಧವಾಗಿದೆ). ದೃಢ ಭಕ್ತಿಯೊಂದೇ ಸಾಕು ದೇವಿಯನ್ನು ಪಡೆಯಲು. ಆಕೆಯ ಭಕ್ತರು ಮಾತ್ರವೇ ಐಹಿಕ ಸಂಪದಗಳನ್ನು ಮತ್ತು ಸಂಪೂರ್ಣ ಮುಕ್ತಿಯನ್ನು ಪಡೆಯಬಲ್ಲರು ಎಂದು ಹೇಳಲಾಗಿದೆ (ಸಹಸ್ರನಾಮದ ಉತ್ತರ ಭಾಗದಲ್ಲಿ ಹೇಳಿರುವಂತೆ).
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 862 - 867 http://www.manblunder.com/2010/06/lalitha-sahasranamam-862-867.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೮೬. ಲಲಿತಾ ಸಹಸ್ರನಾಮ ೮೬೨ರಿಂದ ೮೬೭ನೇ ನಾಮಗಳ ವಿವರಣೆ
ಶ್ರೀಧರರೆ,"೧೮೬. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೮೬೨-೮೬೭
_____________________________________
.
೮೬೨. ಕಾರ್ಯ-ಕಾರಣ-ನಿರ್ಮುಕ್ತಾ
ದೇವಿಗಿಲ್ಲ ಕಾರ್ಯ-ಕಾರಣ ಪರಿಣಾಮ, ವಿಮುಕ್ತ ಲಲಿತಾ ಪರಬ್ರಹ್ಮ
ಕೈಗೊಳ್ಳಲೇನಿರದೆ, ಹೊಂದಲ್ಪಡದುದ ಬಯಸದ ಬ್ರಹ್ಮ ನಿರತಕರ್ಮ
ಶರೀರ ಅವಯವಗಳಿರದ ನಿರಾಕಾರ ಬ್ರಹ್ಮವೆ ಸಗುಣ ನಿರ್ಗುಣ ಶಕ್ತ
ನಿಯತಿಯಾ ನಿಯಾಮಕ ಲಲಿತೆಯಾಗಿ ಕಾರ್ಯ-ಕಾರಣ-ನಿರ್ಮುಕ್ತಾ ||
.
ಕಾರ್ಯ-ಕಾರಣದ ಕುರಿತಾದ ಇನ್ನಷ್ಟು ವಿವರಗಳು:
__________________________________________
.
ಪ್ರಕೃತಿಗುಂಟು ಮಾಡುವ ಕಾರ್ಯಕಾರಣ ಇಪ್ಪತ್ತೈದು ತತ್ವ ಚತುರ್ಗಣ
ಮುಖ್ಯತತ್ವ ಮೂಲಪ್ರಕೃತಿ, ಕಾರ್ಯ-ಪರಿಣಾಮವಲ್ಲದ ಮೂಲಕಾರಣ
ಮೂಲವಸ್ತು ತ್ರಿಗುಣ ಸಂತುಲಿತ ಸ್ಥಿತಿಗುತ್ಪನ್ನ ಮಹತ್-ಅಹಂ-ಮಾಯ
ಪಂಚ ತನ್ಮಾತ್ರೆ-ಜ್ಞಾನೇಂದ್ರಿಯ-ಕರ್ಮೇಂದ್ರಿಯ-ಮಹಾಭೂತ,ಆತ್ಮತತ್ವ ||
.
ಸಪ್ತ ಕಾರ್ಯಕಾರಣ ಬುದ್ಧಿ-ಅಹಂಕಾರ, ಶಬ್ದ-ಸ್ಪರ್ಷ-ರೂಪ-ರಸ-ಗಂಧ ತನ್ಮಾತ್ರ
ಸ್ವಯಂ ಕಾರ್ಯ ಕಾರಣ ದ್ವಿಪಾತ್ರ, ಪ್ರಕೃತಿಯುತ್ಪನ್ನ ಬುದ್ಧಿಯಲ್ಹುಟ್ಟೀ ಅಹಂಕಾರ
ಪಂಚ ತನ್ಮಾತ್ರೆಗೆ ಜನಕ ಅಹಂಕಾರ, ಕಾರ್ಯಕೆ ಕಾರಣ ಮತ್ತಾಗಿರೆ ಕಾರ್ಯಭಾರ
ಮತ್ತೊಂದು ವರ್ಗ ಬರಿ ಕಾರ್ಯ-ಪರಿಣಾಮದ ಸಾರ, ಒಟ್ಟಾಗಿರೆ ಸಂಖ್ಯೆ ಹದಿನಾರ ||
.
ಕಾರ್ಯಕಾರಕ ಷೋಡಶ ಗಣ, ಗ್ರಹಣೇಂದ್ರಿಯ ಕಿವಿ-ಚರ್ಮ-ಕಣ್ಣು-ನಾಲಿಗೆ-ಮೂಗು
ಕರ್ಮೇಂದ್ರಿಯ ಬಾಯಿ-ಪಾದ-ಹಸ್ತ-ವಿಸರ್ಜನಾಂಗ-ಜನನೇಂದ್ರೀಯ ಸೇರಿ ಹತ್ತಾಗು
ಪಂಚಭೂತಧಾತು ಆಕಾಶ-ವಾಯು-ಅಗ್ನಿ-ನೀರು-ಭೂಮಿ, ಅಂತಃಕರಣಾಂಶ ಮನಸ್ಸು
ಸೇರೆಲ್ಲ ಕಾರ್ಯಗಳಾಗಿಸಿ ಹದಿನಾರು, ಕಾರ್ಯಕಾರಣವಲ್ಲದ ಮೂರನೆ ವರ್ಗಕೆಣಿಸು ||
.
ಕಾರ್ಯ ಕಾರಣವೆರಡೂ ಅಲ್ಲದ ಪುರಷ-ಆತ್ಮ, ಮಾರ್ಪಾಡಿಗೆ ಪ್ರಕೃತಿಯ ಸಮಾಗಮ
ತನ್ಮೂಲಕ ಮೂಲಪ್ರಕೃತಿಯಿಂದುಗಮ ಇಪ್ಪತ್ನಾಲ್ಕು ತತ್ವ , ಸೃಷ್ಟಿಯನಾವರಣ ಧರ್ಮ
ಅಂತಃಕರಣದೆ ಮನಸ್ಸು-ಬುದ್ಧಿ-ಅಹಂಕಾರ, ಚಿತ್ತ ಸೇರದಿರೆ ಪುರಷಾತ್ಮ-ಪ್ರಕೃತಿ ಐದು
ಮಹಾಭೂತ-ತನ್ಮಾತ್ರೆ-ಜ್ಞಾನೇಂದ್ರಿಯ-ಪಂಚೇಂದ್ರಿಯದಿಪ್ಪತ್ತು, ತತ್ವಗಳಾಗಿ ಇಪ್ಪತ್ತೈದು ||
.
೮೬೩. ಕಾಮ-ಕೇಳಿ-ತರಂಗಿತಾ
ಕಾಮರೂಪಿ ಶಿವನ ಸಾಂಗತ್ಯದಲಿ ಆನಂದ ವಿಹ್ವಲ ದೇವಿ
ಶೃಂಗಾರ ರಸ ಸಂಪೂರ್ಣೆ ಲಲಿತೆ, ಶಿವ ಸಮಾಗಮ ಛವಿ
ಪ್ರೇಮವೆ ದೇವಿಯ ಪ್ರಮುಖ ಗುಣ, ಮಿಲನಾನಂದ ತ್ವರಿತ
ಅಲೆಯಂತುಕ್ಕುವ ಹರ್ಷದೆ ದೇವಿ ಕಾಮ-ಕೇಳಿ-ತರಂಗಿತಾ ||
.
೮೬೪. ಕನತ್-ಕನಕ-ತಾಟಂಕಾ
ಫಳಫಳಿಸುವ ಹೊನ್ನಿನ ಹೊಳಪಲಿ ಮಿರಮಿರ ಮಿನುಗಿ ಕಿವಿಯೋಲೆ
ಘೋರ ಹಾಲಾಹಲ ಆಪೋಶೀತ ಶಿವನನೆ ಅಮರನಾಗಿಸಿ ಶಕ್ತಿಯಲೆ
ಮುದಿ ಎತ್ತೆ ವಾಹನ, ವಿಷಾಹಾರ, ದಿಕ್ಕೇ ಅಂಬರ, ಮಸಣ ಬಯಲು
ಕನತ್ ಕನಕ ತಾಟಂಕಾ ಮಹಿಮೆಗೆ, ಸೌಭಾಗ್ಯಕೆ ಈಶ್ವರ ಪದದೊಳು ||
.
೮೬೫. ಲೀಲಾ-ವಿಗ್ರಹ-ಧಾರಿಣೀ
ಕೀಳುಗರೆದು ಧರ್ಮವ ಮೇಲೇರೆ ಅಧರ್ಮ, ರೂಪಾಂತರಿಸಿ ಯೋಗಮಾಯೆ
ತರತರಾವತಾರರೂಪ ಲೀಲಾಜಾಲ ಧಾರಣೆ, ಜನನ ಮರಣರಹಿತನ ದಯೆ
ಶಿಷ್ಠರಕ್ಷಣೆ, ದುಷ್ಟಶಿಕ್ಷೆ, ಧರ್ಮ ಸಂಸ್ಥಾಪನಾರ್ಥಾಯ ಲೀಲಾ-ವಿಗ್ರಹ-ಧಾರಿಣೀ
ಯುಗಯುಗದೆ ಜನಿಸುತೆ ಲಲಿತೆ, ಯೋಗವಾಶಿಷ್ಠ ಲೀಲಾಗು ಸಾಕ್ಷಾತ್ಕಾರಿಣಿ ||
.
೮೬೬. ಅಜಾ
ಜನನ ಮರಣವಿಲ್ಲದ ನಿಜ, ಲಲಿತೆ ನಿನಗಿಲ್ಲದ ಹುಟ್ಟಿನ ಗೋಜ
ಅಯೋನಿಜ ಹುಟ್ಟೆ ತೇಜ, ಬ್ರಹ್ಮದ ಅಪರೂಪ ಸ್ಥಿತಿಯು ಅಜಾ
ಪ್ರಕೃತಿಯಾಗಿಹ ಅಜಾ, ರೂಪವನು ಬದಲಿಸಿದಂತೆಯೆ ಸಹಜ
ಜನ್ಮರಹಿತ ಅನಾದಿಸಹಿತ, ಮೂಲ ಹೇಳಲಾಗದ ಬ್ರಹ್ಮಕುಂಜ ||
.
೮೬೭. ಕ್ಷಯ-ವಿನಿರ್ಮುಕ್ತಾ
ಹುಟ್ಟೇ ಇಲ್ಲದ ಲಲಿತಾ ಬ್ರಹ್ಮ, ಸಾವೆಲ್ಲಿ ಬಂತು ನಿಯತಿಗವಳೇ ಪರಮ
ನಾಶವಿಲ್ಲದ ದೇವಿ ಹುಟ್ಟು ಸಾವಿಗತೀತ, ಅವಳಿಂದಲೆ ಎಲ್ಲವು ಉಗಮ
ಜನನ ಮರಣ ಜೀವಿಗನಿವಾರ್ಯ ನಿಶ್ಚಿತ, ಪರಬ್ರಹ್ಮ ಕ್ಷಯ ವಿನಿರ್ಮುಕ್ತಾ
ದೃಢಭಕ್ತಿಗೆ ತೃಪ್ತ ಸಂಪದ ಮುಕ್ತಿ ಕೊಡುತ, ಇರಲಿಬಿಡಲಿ ತಪ ಏಕಾಂತ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು