ಪ್ರೀತಿಗ್ಯಾವ ವೃತ್ತಿಯಮ್ಮ ಜಗದೀಶ್ವರಿ !!

ಪ್ರೀತಿಗ್ಯಾವ ವೃತ್ತಿಯಮ್ಮ ಜಗದೀಶ್ವರಿ !!

ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ ಎನ್ನೋ ಹಾಡನ್ನು ಕೇಳಿದ್ದೇವೆ ... ನನ್ನೀ ಕವನ "ಪ್ರೀತಿಗ್ಯಾವ ವೃತ್ತಿಯಮ್ಮ ಜಗದೀಶ್ವರಿ" ಅಂತ. ಯಾಕೆ ಅಂದರೆ ನಾನೊಂದು ನಾಲ್ಕು ವಿವಿಧ ವೃತ್ತಿಯವರನ್ನು ಹಿಡಿದು ಒಬ್ಬ ಅತ್ಯಂತ ಗುಣವಂತೆ, ಸುಗುಣಶೀಲ ಸುಂದರಿಯನ್ನು ಊಹಿಸಿಕೊಂಡು ಅವರನ್ನು ನಿಮ್ಮ ಭಾಷೆಯಲ್ಲಿ ವರ್ಣಿಸಿ ಎಂದಾಗ, ಅವರು ಹೇಳಿದ್ದು ಹೀಗೆ:

ನೀಲಿ ಆಕಾಶದಾಗೆ ಬಿಳೀ ಮೋಡದ ಮಧ್ಯದಿಂದ
ಕೆಂಪು ಕೆಂಪಾಗಿ ಬರ್ತಿರೋ ಅವಳನ್ನ ಕಂಡ್ರೆ
ಬಳ್ಳಾರಿ ಗಣಿಯಿಂದ ಕೆಂಪು ಧೂಳಿನ ಮಧ್ಯದಿಂದ
ಹೊರಬರ್ತಿರೋ ನನ್ ಲಾರೀನೇ ನೆನಪಾಯ್ತದೆ

ಕಪ್ಪು ಸೀರೆ ಉಟ್ಟು, ಬಂಗಾರ ಬಣ್ಣದ್ ರವಿಕೆ ತೊಟ್ಟು
ಸ್ಲೋ ಮೋಷನ್ನಾಗೆ ಬರ್ತಿರೋ ಅವಳನ್ನ ಕಂಡ್ರೆ
ಮಹಾಲಕ್ಷ್ಮೀ ಲೇ-ಔಟ್ ದಿಬ್ಬದ್ ರೋಡಿನ ಮೇಲೆ
ಏರ್ಲಾರದೆ ಏರೋ ನನ್ ಆಟೋರಿಕ್ಷಾ ನೆನಪಾಯ್ತದೆ

ಗೋಧಿ ಬಣ್ಣದ ಅವಳ ಮೈಯ ನೋಡ್ತಿದ್ರೆ
ನೆಟ್ಟಗೆ ಉದ್ಕಿರೋ ಅವಳ ಜಡೆ ನೋಡ್ತಿದ್ರೆ
ಟಕು ಟಕು ಸದ್ದು ಮಾಡೋ ಹೀಲ್ಸ್ ನೋಡ್ತಿದ್ರೆ
ಟಾಂಗಾಗೆ ಕಟ್ಟಿರೋ ನನ್ ಕುದುರೇನೇ ನೆನಪಾಯ್ತದೆ

ಚೌಕದ ಡಬ್ಬದಂತೆ ಕಡೆದಿಟ್ಟ ಶಿಲೆಯಂಥ ಅವಳ ಅಂದ
ತೆಳು ಅರಿಶಿನದ ದುಂಡಗಿನ ಮೊಗದ ಮೇಲಿನ ಕೆಂಪು
ತಿದ್ದಿ ತೀಡಿದ ಕ್ರೀಮು ಲೇಪಿಸಿದ ಸಂಪಿಗೆಯ ಮೂಗು ನೋಡ್ತಿದ್ರೆ
ಓವನ್’ನಿಂದ ಹೊರಬಂದ ಬಿಸಿ ಬಿಸಿ ಪಿಜ್ಜಾ ನೆನಪಾಯ್ತದೆ

 

 

Comments

Submitted by ಗಣೇಶ Fri, 12/13/2013 - 23:37

:))) ಭಲ್ಲೇಜಿ, ಸೂಪರ್ ಕವನ.
-"ಮಹಾಲಕ್ಷ್ಮೀ ಲೇ-ಔಟ್ ದಿಬ್ಬದ್ ರೋಡಿನ ಮೇಲೆ
ಏರ್ಲಾರದೆ ಏರೋ ನನ್ ಆಟೋರಿಕ್ಷಾ ನೆನಪಾಯ್ತದೆ"
ಇದು ನಮ್ಮ ಬೆಂಗಳೂರಿನದ್ದೇ ಅಲ್ವಾ? ನೋಡಲು ಅಂತ ಎತ್ತರ ಕಾಣಿಸದಿರುವುದರಿಂದ ಎಲ್ಲ ವಾಹನಗಳು ೩ ನೇ ಗೇರ್‌ನಲೇ ಬಂದು, ಏರಲಾಗದೇ, ನಂತರ ೨..೧ನೇ ಗೇರ್ ಹಾಕುವ ಸಮಯ ಕೆಲವೊಮ್ಮೆ ರಿಕ್ಷಾ/ಲಾರಿಗಳು ಹಿಂದೆ ಬರುವುದೂ ಇದೆ. ಮೆಟ್ರ‍ೋ ಮಾರ್ಗ ಮಾಡುವ ಸಮಯ ತುಂಬಾ ರಗಳೆ.. ಸ್ಲೋ ಮೋಷನ್ ಚಲುವೆಗೆ ಕನೆಕ್ಷನ್ ...ವ್ಹಾ
-ಟಕು ಟಕು ಸದ್ದು ಮಾಡೋ..... ಕುದುರೇನೇ ನೆನಪಾಯ್ತದೆ :):)

Submitted by bhalle Sat, 12/14/2013 - 02:38

In reply to by ಗಣೇಶ

ಧನ್ಯವಾದಗಳು ಗಣೇಶ್'ಜೀ
ವೃತ್ತಿ ಜೊತೆಗೇ ಕೆಲವರ ಮನಸ್ಸೂ,ಹೃದಯ ಮೌಲ್ಡ್ ಆಗಿ ಹೋಗಿರುತ್ತೆ ... ಆ ಕೋನ ಬಿಟ್ಟು ಬೇರೆ ರೀತಿಯಲ್ಲಿ ಯೋಚನೇನೇ ಮಾಡೋಲ್ಲ.

Submitted by makara Sat, 12/14/2013 - 09:00

ಭಲ್ಲೇಜಿ,
ನನ್ನ ಸ್ನೇಹಿತನೊಬ್ಬ, "ನನ್ನ ನಲ್ಲೆಯನ್ನು ನಾನು ನಕ್ಷತ್ರಗಳಿಗೆ ಹೋಲಿಸುತ್ತೇನೆ, ಏಕೆಂದರೆ ನನಗೂ ಅವಳಿಗೂ ಅಷ್ಟೇ ದೂರ" ಎಂದ ಕವನದ ಸಾಲೊಂದು ನೆನಪಾಯಿತು.

Submitted by bhalle Sat, 12/14/2013 - 23:23

In reply to by makara

ಚೆನ್ನಾಗಿದೆ ಶ್ರೀಧರರೇ ...ನಾನು ನನ್ನ ನಲ್ಲೆಯನ್ನು ಸಿಂಡ್ರೆಲ್ಲಾ'ಳಿಗೆ ಹೋಲಿಸುವೆ ಏಕೆಂದರೆ ಅವಳ ಹೆಸರಂತೆ ಇವಳ ಮುಖ ಯಾವಾಗಲೂ ಸಿಂಡರಿಸಿಕೊಂಡಿರುತ್ತೆ ಅಂದರಂತೆ ಯಾರೋ :-)