ವೈಕುಂಠ ಏಕಾದಶಿ: ಭಾಗ - ೧

ವೈಕುಂಠ ಏಕಾದಶಿ: ಭಾಗ - ೧

                                                                                                     ವೈಕುಂಠ ಏಕಾದಶಿ: ಭಾಗ - ೧

                 ತಿರುಮಲ ತಿರುಪತಿ ದೇವಸ್ಥಾನಗಳು, ತಿರುಪತಿ; ಇವರು ವೈಕುಂಠ ಏಕಾದಶಿ ಆಚರಣೆಯ ಹಿನ್ನಲೆ ಮತ್ತು ಅದರ ಮಹತ್ವದ ಕುರಿತು ಒಂದು ಕಿರುಹೊತ್ತುಗೆಯನ್ನು ೨೦೦೬ರಲ್ಲಿ ಪ್ರಕಟಿಸಿರುತ್ತಾರೆ. ಅದರಲ್ಲಿ ಡಿಸೆಂಬರ್ ತಿಂಗಳಿನ ೧೬ನೇ ತಾರೀಕಿನಿಂದ ಪ್ರಾರಂಭವಾಗುವ ಧನುರ್ಮಾಸದ ವ್ರತ ಮತ್ತು ವೈಕುಂಠ ಏಕಾದಶಿಯ ಕುರಿತಾದ ವಿವರಗಳಿವೆ. ಅದರ ಕನ್ನಡ ಅವತರಣಿಕೆ ಲಭ್ಯವಿದಯೋ ಇಲ್ಲವೋ ತಿಳಿಯದು, ಹಾಗಾಗಿ ಕನ್ನಡ ಬಲ್ಲ ಆಸಕ್ತರು ಇದರಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಆ ಕಿರು ಪುಸ್ತಕದ ಅನುವಾದವನ್ನು ನಾನು ಮಾಡಿದ್ದೇನೆ. ಇದರಿಂದ ಸಂಭಂದಪಟ್ಟವರಿಗೆ ಉಪಯೋಗವಾದರೆ ನಾನು ಕೃತಾರ್ಥನಾದಂತೆ. ಇಂದು ಮಾರ್ಗಶಿರ ಶುಕ್ಲ ಏಕಾದಶಿ ಇದ್ದು, ಈ ಶುಭ ದಿನದಂದು ಇದರ ಮೊದಲ ಕಂತನ್ನು ಪ್ರಕಟಿಸಿದರೆ ಒಳಿತಾಗುವುದೆಂದು ಬಯಸಿ ಅದರ ಮೊದಲನೇ ಭಾಗವನ್ನು ಇಂದು ಸಂಪದದಲ್ಲಿ ಸೇರಿಸಿದ್ದೇನೆ. 
                                                                                                         *******

                                                  ವೈಕುಂಠ ಏಕಾದಶಿ

                                                (ಮುಕ್ಕೋಟಿ ಏಕಾದಶಿ)

                                                       ರಚನೆ:

                              ವಿದ್ವಾನ್, ಡಾಕ್ಟರ್ ಪಮಿಡಿಕಾಲ್ವ ವೆಂಕಟಸುಬ್ಬಯ್ಯ,

                                        ಡಾಕ್ಟರ್ ಆಕೆಳ್ಲ ವಿಭೀಷಣ ಶರ್ಮ

                                                       ***

                            ಏಕಾದಶೀನಮಂ ಕಿಂಚಿತ್ ಪಾವನಂ ನ ಚ ವಿದ್ಯತೇ l

                            ಸ್ವರ್ಗಮೋಕ್ಷಪ್ರದಾ ಹ್ಯೇಷ ರಾಜ್ಯಪುತ್ರಪ್ರದಾಯಿನೀ ll

                                                     ***

                                              ಪ್ರಕಾಶಕರು

                                       ಧರ್ಮಪ್ರಚಾರಪರಿಷತ್ತು

                              ತಿರುಮಲ ತಿರುಪತಿ ದೇವಸ್ಥಾನಗಳು,

                                      ತಿರುಪತಿ - ೫೧೭ ೫೦೧

                                              ******

                                                        ಮುನ್ನಡಿ

                            "ವೆಂಕಟೇಶ! ಪಾಹಿ ಮಾಂ, ವೆಂಕಟೇಶ! ರಕ್ಷ ಮಾಮ್"

           ತಿರುಮಲ ತಿರುಪತಿ ದೇವಸ್ತಾನಗಳು ಧರ್ಮಪ್ರಚಾರಪರಿಷತ್ತಿನ ಮೂಲಕ ಅನೇಕ ಅಮೂಲ್ಯವಾದ ಪುಸ್ತಕಗಳನ್ನು ಮುದ್ರಿಸಿ ಆಸ್ತಿಕ ಜಿಜ್ಞಾಸುಗಳಿಗೆ ಉಚಿತವಾಗಿ ಪುಸ್ತಕಪ್ರಸಾದ ರೂಪದಲ್ಲಿ ಕೊಡುತ್ತಿದೆ. ಜನಗಳಲ್ಲಿ ಐಕ್ಯತೆಯನ್ನು, ಸೋದರ ಮನೋಭಾವವನ್ನು, ಧರ್ಮಚಿಂತನೆಯನ್ನು, ಆಧ್ಯಾತ್ಮಿಕ ಆಸಕ್ತಿಯನ್ನು, ಭಕ್ತಿತತ್ತ್ವವನ್ನು ಪ್ರೇರೇಪಿಸುವುದರಲ್ಲಿ ಧಾರ್ಮಿಕ ಪುಸ್ತಕಗಳ ಪ್ರಕಟಣೆ ಮತ್ತು ವಿತರಣೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.

           ಶ್ರೀ ಪಾರ್ಥಿವನಾಮ ಸಂವತ್ಸರದ ಶ್ರಾವಣಪೂರ್ಣಿಮೆಯಂದು ತಿ.ತಿ.ದೇ. ಕಲ್ಯಾಣ ಮಂಟಪದಲ್ಲಿ ನಿರ್ವಹಿಸಿದ ಶ್ರೀ ಪದ್ಮಾವತೀ ಶ್ರೀನಿವಾಸ ಕಲ್ಯಾಣ ಮಹೋತ್ಸವಗಳು ಭಕ್ತರನ್ನು ವಿಶೇಷವಾಗಿ ಆಕರ್ಷಿಸಿದವು. ಆಗ ಪ್ರಕಟಿಸಿ, ಪುಸ್ತಕ ಪ್ರಸಾದ ರೂಪದಲ್ಲಿ ಹಂಚಿದ "ಶ್ರಾವಣಪೂರ್ಣಿಮ" ಪುಸ್ತಕವು ಭಕ್ತರಿಗೆ ಬಹಳಷ್ಟು ಪ್ರಯೋಜಕಾರಕವಾಗಿದೆ.

          ಭಾರತೀಯರಿಗಿರುವಷ್ಟು ಹಬ್ಬ-ಹರಿದಿನಗಳು ಇತರೇ ದೇಶಗಳವರಿಗೆ ಇಲ್ಲ. ಪ್ರತಿಯೊಂದು ಹಬ್ಬಗಳಲ್ಲೂ ಎಷ್ಟೋ ಧಾರ್ಮಿಕ, ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಆರೋಗ್ಯಕ್ಕೆ ಸಂಭಂದಿಸಿದ ವಿಷಯಗಳು ಅಡಕಗೊಂಡಿರುತ್ತವೆ. ಅವುಗಳನ್ನು ಗುರುತಿಸಿ ಅವುಗಳ ಆಂತರ್ಯವನ್ನು ಗ್ರಹಿಸಿ (ಸಾರವನ್ನು ಗ್ರಹಿಸಿ), ಆಯಾ ಹಬ್ಬಗಳನ್ನು, ವ್ರತಗಳನ್ನೂ ಭಕ್ತಿಶ್ರದ್ಧೆಗಳಿಂದ ಆಚರಿಸಿದರೆ ಇಹಪರಗಳಲ್ಲಿ ಸದ್ಗತಿಯುಂಟಾಗುತ್ತದೆ.

          ವೈಕುಂಠ ಏಕಾದಶಿ (ಮುಕ್ಕೋಟಿ ಏಕಾದಶಿ) ಅನೇ ಈ ಕಿರು ಹೊತ್ತುಗೆಯನ್ನು; ತಿರುಮಲೆಯಲ್ಲಿ ಬಹಳಷ್ಟು ವಿಜೃಂಭಣೆಯಿಂದ ಜರುಗುವ ಮುಕ್ಕೋಟಿ ಏಕಾದಶಿ ಶುಭದಿವಸದಂದು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚುತ್ತಿದ್ದೇವೆ. ಮೆದುಳನ್ನು ಚುರುಕುಗೊಳಿಸುವ ಸಾಧನಗಳಲ್ಲಿ ಪುಸ್ತಕವು ಬಹಳ ಪ್ರಬಲವಾದುದಾಗಿದೆ.

          ಯಾವುದೇ ಕೆಲಸವನ್ನಾಗಲೀ ಅರಿತು ಮಾಡುವುದೊಳಿತು. ಆದ್ದರಿಂದ ’ಮುಕ್ಕೋಟಿ ಏಕಾದಶಿ’ ಎಂದರೇನು, ಹೇಗೆ ಮತ್ತು ಏತಕ್ಕಾಗಿ ಇದನ್ನು ಆಚರಿಸಬೇಕು ಎನ್ನುವುದು ಪ್ರಾಜ್ಞರಾದ ಹಿರಿಯರಿಗೆ ತಿಳಿದೇ ಇರುತ್ತದೆ. ಆದರೆ ಸಾಮಾನ್ಯ ಜನರಿಗೆ ಈ ಪ್ರಕಟಣೆಯ ದ್ವಾರ ಸ್ವಲ್ಪ ಮಟ್ಟಿಗೆ ಉಪಯೋಗವಾಗುವುದೆನ್ನುವ ಆಲೋಚನೆಯಿಂದ ’ವೈಕುಂಠ ಏಕಾದಶಿ’ ವೈಶಿಷ್ಠ್ಯವನ್ನು ಈ ಪುಸ್ತಕದಲ್ಲಿ ವಿವರಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

          ಈ ಶುಭಕಾರ್ಯ ಸಾಧನೆಗೆ ಡಾll ಪಮಿಡಿಕಾಲ್ವ ವೆಂಕಟಸುಬ್ಬಯ್ಯ, ಕಾರ್ಯದರ್ಶಿಗಳು, ಧರ್ಮಪ್ರಚಾರ ಪರಿಷತ್ತು, ಡಾll ಆಕೆಳ್ಲ ವಿಭೀಷಣ ಶರ್ಮ, ತಿ.ತಿ.ದೇ. ದೃಶ್ಯ-ಶ್ರವಣ ಯೋಜನೆಯ ಉದ್ಯೋಗಿಗಳು; ಇವರೀರ್ವರೂ ಬಹು ತಾಳ್ಮೆಯಿಂದ ಈ ಪುಸ್ತಕವನ್ನು ಸಂಪಾದಿಸಿದ್ದಾರೆ, ಅವರಿಗೆ ನಮ್ಮ ಧನ್ಯವಾದಗಳು.

          ಆಸ್ತಿಕಲೋಕವು ಈ ಪುಸ್ತಕ ಪ್ರಸಾದವನ್ನು ಸ್ವೀಕರಸಿ, ಭಕ್ತಿಶ್ರದ್ಧೆಗಳಿಂದ ವಾಚಿಸಿ, ’ವೈಕುಂಠ ಏಕಾದಶಿ’ ಪ್ರಭಾವವನ್ನು ಅರಿತು, ಶ್ರೀ ಹರಿಯ ಸೇವೆಯಲ್ಲಿ ಧನ್ಯರೂ, ಕೃತಕೃತ್ಯರೂ ಆಗಲಿ ಎಂದು ಹಾರೈಸುತ್ತೇವೆ.

                                                                                    ಸದಾ ಶ್ರೀ ಸ್ವಾಮಿಯ ಸೇವಾನಿರತ

                                                                                      ಏ.ಪಿ.ವಿ.ಎಸ್. ಶರ್ಮ,

ತಿರುಪತಿ,                                                                            ಕಾರ್ಯನಿರ್ವಹಣಾಧಿಕಾರಿ,

೦೧-೦೧-೨೦೦೬                                                                  ತಿ.ತಿ.ದೇವಸ್ಥಾನಗಳು

                                                                                               ******

                                                                                    ವಿನಯಪೂರ್ವಕ ಅರಿಕೆ

            “ಕಲೌ ವೇಂಕಟನಾಯಕಃ” - ಕಲಿಯುಗ ಪ್ರತ್ಯಕ್ಷದೈವ ಶ್ರೀ ವೇಂಕಟಾಚಲಪತಿ. ವೆಂಕಟಾದ್ರಿಗೆ ಸಮಾನವಾದ ಕ್ಷೇತ್ರ, ವೇಂಕಟೇಶ್ವರನಿಗೆ ಸಮಾನವಾದ ದೈವವು ವಿಶ್ವದಲ್ಲಿಯೇ "ನ ಭೂತೋ ನ ಭವಿಷ್ಯತಿ". ಶ್ರೀ ಸ್ವಾಮಿಯ ಸೇವೆಯೇ ಕಲಿತಾಪಕ್ಕಿರುವ ಏಕೈಕ ಮಾರ್ಗ, "ಸ್ವಾಮಿಯ ಸನ್ನಿಧಿಯೇ ಭಕ್ತರ ಪಾಲಿಗೆ ಮಹಾನಿಧಿ".

            "ನಿತ್ಯ ಕಲ್ಯಾಣ ಹಸಿರು ತೋರಣ" ಎಂದು ಪ್ರಜ್ವಲಿಸುವ ತಿರುಮಲ ಕ್ಷೇತ್ರದಲ್ಲಿ ಶ್ರೀ ಸ್ವಾಮಿಗೆ ಎಷ್ಟೋ ಅಸದಳವಾದ ಉತ್ಸವಗಳನ್ನು ಭಕ್ತಿಶ್ರದ್ಧೆಗಳಿಂದ ನೆರವೇರಿಸುತ್ತಿದ್ದಾರೆ. ಯಾವುದೇ ಉತ್ಸವಕ್ಕೆ ಅಥವಾ ಯಾವುದೇ ಹಬ್ಬ ಹರಿದಿನಗಳಿಗಿಲ್ಲದ ಪ್ರತ್ಯೇಕತೆ ಸ್ವಾಮಿಯ ಸನ್ನಿದಿಯಲ್ಲಿ ಜರುಗುವ ಈ ವೈಕುಂಠ ಏಕಾದಶಿ ಉತ್ಸವಕ್ಕೆ ಲಭಿಸಿದೆ. ‘ವೈಕುಂಠ ದ್ವಾರ’ವನ್ನು ಒಂದು ಇಡೀ ದಿನ ತೆರೆದಿಡುವ ಮಹೋತ್ಸವವೇ ಈ ‘ವೈಕುಂಠ ಏಕಾದಶಿ ಉತ್ಸವ’. ಈ ದಿವ್ಯ ದ್ವಾರದ ಮೂಲಕ ಸ್ವಾಮಿಯನ್ನು ದರ್ಶಿಸಬೇಕೆಂದು ಅಪೇಕ್ಷಿಸುವ ಲಕ್ಷ್ಯಾಂತರ ಭಕ್ತರು ಅಂದು ತಿರುಮಲೆಗೆ ಬರುತ್ತಾರೆ; ಅದೊಂದು ದಿವ್ಯಾನುಭೂತಿ, ಅದೊಂದು ಚಿರಸ್ಮರಣೀಯ ಅನುಭವ, ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮುಕ್ಕೋಟಿ ಏಕಾದಶಿಯ ಪರ್ವದಿನದಂದು ಶ್ರೀ ಹರಿಯ ಸೇವೆಯನ್ನು ಕೈಗೊಳ್ಳುವ ಅವಕಾಶ - ಇದು ವರ್ಷಕ್ಕೆ ಒಂದೇ ಬಾರಿ ಒದಗುವ ಮಹಾಭಾಗ್ಯ. ಮರುದಿನ ದ್ವಾದಶಿಯಂದು ಪುಷ್ಕರಣಿಯಲ್ಲಿ ಆಚರಿಸುವ ಚಕ್ರಸ್ನಾನವು ಅನೇಕ ಕೋಟಿ ಜನ್ಮಗಳ ಪುಣ್ಯಫಲ.

            ತಿರುಮಲೆಯಲ್ಲಿ ವರ್ಷದಲ್ಲಿ ನಾಲ್ಕು ಬಾರಿ ಸ್ವಾಮಿಗೆ ಚಕ್ರಸ್ನಾನವನ್ನು ಮಾಡಿಸಲಾಗುತ್ತದೆ. ೧) ಅನಂತ ಪದ್ಮನಾಭ ವ್ರತದ ದಿನ ಅಂದರೆ ಭಾದ್ರಪದ ಶುಕ್ಲ ಚತುರ್ದಶಿಯಂದು ೨) ೧೦ ದಿವಸಗಳ ಕಾಲ ನಡೆಯುವ ಬ್ರಹ್ಮೋತ್ಸವದ ಕಡೆಯ ದಿನ ೩) ವೈಕುಂಠ ಏಕಾದಶಿಯ ಮರುದಿನ ಅಂದರೆ ದ್ವಾದಶಿಯಂದು ಮತ್ತು ೪) ರಥ ಸಪ್ತಮಿಯ ದಿವಸ ಮಧ್ಯಾಹ್ನಃ. ಇದರಲ್ಲಿ ವೈಕುಂಠ ಏಕಾದಶಿಯಂದು ಮೂರು ಲೋಕಗಳಲ್ಲಿರುವ ಮೂರುಕೋಟಿ ಐವತ್ತು ಲಕ್ಷ ಪುಣ್ಯತೀರ್ಥಗಳು ಸೂಕ್ಷ್ಮ ರೂಪದಲ್ಲಿ ಸ್ವಾಮಿಯ ಪುಷ್ಕರಣಿಯಲ್ಲಿ ಆವಾಹಿಸುತ್ತವೆ. ಸಕಲ ದೇವತೆಗಳೂ ಆ ದಿನದಂದು ಸ್ವಾಮಿ ಸನ್ನಿಧಿಯಲ್ಲಿ ಉಪಸ್ಥಿತರಿರುತ್ತಾರೆ. ಇಂತಹ ಮಹತ್ತರವಾದ ವೈಕುಂಠ ಏಕಾದಶಿ ಮತ್ತು ದ್ವಾದಶಿಗಳ ವಿಶೇಷಗಳನ್ನು ಸಂಗ್ರಹವಾಗಿ ಮುದ್ರಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಬೇಕೆನ್ನುವ ತಿ.ತಿ.ದೇವಸ್ತಾನಗಳ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಯುತ ಏ.ಪಿ.ವಿ.ಎಸ್. ಶರ್ಮ ಅವರ ಆಶಯ  ಮತ್ತು ಆದೇಶವನ್ನೇ ಭಗವದಾಜ್ಞೆಯಾಗಿ ಶಿರಸಾ ವಹಿಸಿ, ಹಿರಿಯರ ಕೃತಿಗಳ ಆಧಾರದ ಮೇಲೆ ಈ ಚಿಕ್ಕ ಹೊತ್ತುಗೆಯನ್ನು ಬೆಳಕಿಗೆ ತರುತ್ತಿದ್ದೇವೆ.

           ಈ ಕೃತಿಯ ರಚನೆಯಲ್ಲಿ ಆತ್ಮೀಯ ಸಹೋದರನಾದ ಡಾll ಆಕೆಳ್ಲ ವಿಭೀಷಣ ಶರ್ಮ ಇವರ ಸಹಕಾರವು ಮಹತ್ತರವಾದುದು. ಈ ಪುಸ್ತಕ ರಚನೆಯಲ್ಲಿ ಸಹಾಯವೊದಗಿಸಿದ ಹಿರಿಯರಿಗೂ ಹಾಗು ಗ್ರಂಥ ರಚನಾಕಾರರಿಗೆ ನಮ್ಮ ಹೃದಯಪೂರ್ವಕ ಕೃತಜ್ಞತೆಗಳು. ಈ ರೂಪದಲ್ಲಿ ಶ್ರೀ ಸ್ವಾಮಿಯ ಸೇವಾ ಕೈಂಕರ್ಯವನ್ನು ಕೈಗೊಳ್ಳಲು ಕಾರಣಕರ್ತರಾದ ತಿ.ತಿ.ದೇವಸ್ಥಾನಗಳ ಹಿರಿಯ ಅಧಿಕಾರಿಗಳಿಗೆ ವಿನಯಪೂರ್ವಕ ನಮನಗಳು.

          ಪಾಠಕ ಮಹಾಶಯರಿಗೆ ಆನಂದಿಂದೊಗೂಡಿದ ನಮಸ್ಕಾರಗಳು.

          "ಸಿಗುವುದೇ ಇಂತಹ ಸೇವೆ (ದೊರಕುನಾ ಇಟುವಂಟಿ ಸೇವ)"

 

                                                                             ಶ್ರೀ ಸ್ವಾಮಿಯ ಧಾರ್ಮಿಕ ಸೇವೆಯಲ್ಲಿ,

                                                                               ಪಮಿಡಿಕಾಲ್ವ ಚೆಂಚುಸುಬ್ಬಯ್ಯ

ತಿರುಪತಿ                                                                                ಕಾರ್ಯದರ್ಶಿ

೦೧-೦೧-೨೦೦೬                                                               ಧರ್ಮಪ್ರಚಾರ ಪರಿಷತ್

                                                                             ತಿರುಮಲ ತಿರುಪತಿ ದೇವಸ್ಥಾನಗಳು

                                                                                            ******

                                                                               ಓಂ ನಮೋ ವೇಂಕಟೇಶಾಯ

          ಸಕಲವೂ ಕಾಲನ ಆಧೀನಕ್ಕೆ ಒಳಪಟ್ಟಿದೆ. ಅನಂತವಾದ ಕಾಲವು ಭಗವತ್-ಸ್ವರೂಪವೆಂದು "ಕಾಲಃ ಕಲಯತಾಮಹಮ್" ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಕಾಲವು ಶ್ರೀ ವಿಷ್ಣುವಿನ ಆಜ್ಞೆಯನುಸಾರ ಕಾರ್ಯಪ್ರವೃತ್ತವಾಗಿದೆ ಎಂದು ಹಿರಿಯರು ಹೇಳುತ್ತಾರೆ. ಅನಂತ ಶಕ್ತಿಯುಳ್ಳ ಕಾಲವನ್ನು ಸೌರಂ, ಚಾಂದ್ರಂ, ಸಾವನಂ (ದಿನದ ವಿಭಾಗ. ಒಂದೊಂದು ಸಾವನದ ಮಧ್ಯೆ ಬರುವುದೇ ತ್ರಿ ಸಂಧ್ಯಾಕಾಲಗಳು - ಪ್ರಾತಃ ಸಂಧ್ಯಾಕಾಲ, ಮಧ್ಯಾಹ್ನ ಸಂಧ್ಯಾಕಾಲ ಮತ್ತು ಸಾಯಂ ಸಂಧ್ಯಾಕಾಲ), ನಾಕ್ಷತ್ರಂ ಎಂದು ನಾಲ್ಕು ಪದ್ಧತಿಗಳಿಗನುಗುಣವಾಗಿ ಲೆಕ್ಕಹಾಕಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸೌರ ಮತ್ತು ಚಾಂದ್ರಮಾನಗಳನ್ನು ಪ್ರಮುಖವಾಗಿ ಬಳಸುತ್ತಾರೆ. ನಾವು ಚೈತ್ರ, ವೈಶಾಖ ಮೊದಲಾದ ಮಾಸಗಳನ್ನು ಮತ್ತು ಪಾಡ್ಯ (ಪ್ರತಿಪದ), ಬಿದಿಗೆ (ದ್ವಿತೀಯ), ತದಿಗೆ (ತೃತೀಯ), ಚವತಿ (ಚತುರ್ಥಿ) ಮೊದಲಾದ ತಿಥಿಗಳನ್ನು ಚಾಂದ್ರಮಾನ ಪದ್ಧತಿಯಂತೆ ಲೆಕ್ಕಹಾಕುತ್ತಿದ್ದೇವೆ. ಅಮವಾಸ್ಯೆಯ ದಿವಸ ಚಂದ್ರನು ಇರುವ ನಕ್ಷತ್ರವನ್ನು ಆಧರಿಸಿ ಚೈತ್ರಾದಿ ಮಾಸಗಳನ್ನು ಗಣಿಸುತ್ತೇವೆ. ಉದಾಹರಣಗೆ ಅಮಾವಾಸ್ಯೆಯ ದಿನ ಚಂದ್ರನು ಚಿತ್ತಾ ನಕ್ಷತ್ರದಲ್ಲಿ ಇದ್ದರೆ ಆ ದಿನದಿಂದ ಚೈತ್ರ ಮಾಸವೆಂದು ಗಣಿಸಲಾಗುತ್ತದೆ. (ಉತ್ತರ ಭಾರತದಲ್ಲಿ ಹುಣ್ಣಿಮೆಯ ದಿವಸ ಚಂದ್ರನಿರುವ ನಕ್ಷತ್ರವನ್ನು ಆಧರಿಸಿ ತಿಂಗಳುಗಳನ್ನು ಲೆಕ್ಕ ಹಾಕಲಾಗುತ್ತದೆ ಅದನ್ನು ’ಪೂರ್ಣಿಮಾಂತ’ ಪದ್ಧತಿ ಎಂದು ಕರೆದರೆ ದಕ್ಷಿಣದಲ್ಲಿ ನಾವು ಅನುಸರಿಸುವುದನ್ನು ‘ಅಮಾಂತ್ಯ’ ಪದ್ಧತಿ ಎಂದು ಕರೆಯುತ್ತಾರೆ). ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪಯಣಿಸುವ ಸೂರ್ಯನ ಚಲನೆಯನ್ನು ಆಧರಿಸಿ ಗಣಿಸುವ ಮಾಸಗಳನ್ನು ಸೌರಮಾಸಗಳೆಂದು ಕರೆಯಲಾಗುತ್ತದೆ. ಉದಾಹರಣೆಗೆ ಮಕರ ಮಾಸ ಮೊದಲಾದವುಗಳು ಸೌರಮಾನ ಪದ್ಧತಿಯನ್ನು ಬಿಂಬಿಸುತ್ತವೆ. ಸೂರಃ ಅಂದರೆ ಸೂರ್ಯ, “ಸರತಿ ಚರತೇತಿ ಸೂರಃ” ಅನ್ನುವುದು ಈ ಪದದ ವ್ಯುತ್ಪತ್ತಿ. ಸೌರಮಾಸಗಳು ಇಂಗ್ಲೀಷ್ ತಾರೀಕುಗಳನ್ನು ಹೋಲುತ್ತವೆ ಮತ್ತು ಸಾಮಾನ್ಯವಾಗಿ ಅವು ಇಂಗ್ಲೀಷ್ ತಾರೀಕಿನಂತೆಯೇ ನಿಖರವಾಗಿ ಅದೇ ತಾರೀಕುಗಳಂದು ಪ್ರಾರಂಭವಾಗುತ್ತವೆ. ಹಾಗಾಗಿ ಸೌರಮಾನ ಪದ್ಧತಿಯನ್ನು ಅನುಸರಿಸುವ ತಮಿಳರಿಗೆ ಏಪ್ರಿಲ್ ೧೪ರಂದು ಮೇಷಮಾಸ ಪ್ರಾರಂಭವಾಗಿ ಅದುವೇ ಅವರಿಗೆ ವರ್ಷದ ಆರಂಭವಾಗುತ್ತದೆ. "ರವೇಃ ಸಂಕ್ರಮಣಂ ರಾಶೌ ಸಂಕ್ರಾಂತಿರಿತಿ ಕಥ್ಯತೇ" ಎನ್ನುವುದನ್ನು ಅನುಸರಿಸಿ ಪ್ರತಿ ತಿಂಗಳೂ ಒಂದೊಂದು ಸಂಕ್ರಾಂತಿ ಉಂಟಾಗುತ್ತದೆ. ಅದರಂತೆ ಉತ್ತರಾಯಣ ಪುಣ್ಯಕಾಲವು ಮಕರ ಸಂಕ್ರಾಂತಿಯಾದ ಜನವರಿ ೧೪ರಂದು ಆರಂಭವಾಗಿ ಜುಲೈ ೧೬ರವರೆಗೆ ಇರುತ್ತದೆ. ಜುಲೈ ೧೭ರಿಂದ ಜನವರಿ ೧೩ರವರೆಗೂ ದಕ್ಷಿಣಾಯನ ಪುಣ್ಯಕಾಲವು ಇರುತ್ತದೆ.

          "ಅಯನೇ ದಕ್ಷಿಣೇ ರಾತ್ರಿರುತ್ತರೇ ತು ದಿವಾ ಭವೇತ್" ಎಂದು ಕಪಿಂಜಲ ಸಂಹಿತೆಯ ವಾಕ್ಯವು ಹೇಳುತ್ತದೆ, ಇದರರ್ಥ ‘ದಕ್ಷಿಣಾಯನವು ರಾತ್ರಿಯಾದರೆ ಉತ್ತರಾಯಣವು ಹಗಲು’. ಮಾನವರ ಒಂದು ಸಂವತ್ಸರ ಕಾಲವು ದೇವತೆಗಳಿಗೆ ಒಂದು ಅಹೋರಾತ್ರಿಯ ದಿನ. ಸೂರ್ಯನು ಧನುಸ್ಸು ರಾಶಿಯನ್ನು ಪ್ರವೇಶಿಸುವ ದಿನವು ಧನುರ್ಮಾಸ ಪ್ರಾರಂಭವಾಗುತ್ತದೆ. ಈ ತಿಂಗಳಿನ ಪ್ರಾತಃಕಾಲವು ಬಹಳ ಮಹತ್ತರವಾದುದು. "ಧನುಸ್ಸಂಕ್ರಾಂತಿಮಾರಭ್ಯ ಮಾಸಮೇಕಂ ವ್ರತಂ ಚರೇತ್" ಅಂದರೆ ಧನುರ್ಮಾಸದ ಒಂದು ತಿಂಗಳಿನಲ್ಲಿ ಶ್ರೀ ಹರಿಯನ್ನು ವಿಧಿಬದ್ಧವಾಗಿ ಬ್ರಾಹ್ಮೀಕಾಲದಲ್ಲಿ ಪೂಜಿಸಿದರೆ, "ಕೋದಂಸ್ಥೇ ಸವಿತರಿ ಪ್ರತ್ಯೂಷಃ ಪೂಜಯೇತ್ ಹರಿಮ್l ಸಹಸ್ರಾಬ್ದಾರ್ಚನ ಫಲಂ ದಿನೇನೈಕೇನ ಸಿದ್ಧ್ಯತಿ" - ಧನುರ್ಮಾಸದಲ್ಲಿ ಒಂದು ದಿನ ಉಷಃಕಾಲದಲ್ಲಿ ಶ್ರೀಹರಿಯನ್ನು ಪೂಜಿಸಿದರೆ ಸಾವಿರ ವರ್ಷಗಳ ಕಾಲವು ನಿತ್ಯವೂ ಅರ್ಚಿಸಿದ ಪುಣ್ಯಫಲವು ಉಂಟಾಗುತ್ತದೆ. ೩೦ ದಿವಸಗಳ ಕಾಲ ಅರ್ಚನೆ ಮಾಡಿದವರಿಗೆ ೩೦ಸಾವಿರ ವರ್ಷಗಳ ಕಾಲ ನಿತ್ಯ ಪೂಜೆ ಮಾಡಿದ ಅಂದರೆ ಅನಂತ ಪುಣ್ಯವು ಲಭಿಸುತ್ತದೆ. ಅನಂತನನ್ನು ಅನಂತವಾಗಿ ಪೂಜಿಸಿದರೆ ಅನಂತ ಫಲವೇ ಸಿದ್ಧಿಸುತ್ತದೆಯಲ್ಲವೇ?

           ಧನುರ್ಮಾಸವು ಸೌರಮಾನದ ಪ್ರಕಾರ ಬಂದರೆ, ಶುಕ್ಲ ಪಕ್ಷ ಏಕಾದಶಿ ತಿಥಿಯು ಚಾಂದ್ರಮಾನದಂತೆ ಬರುತ್ತದೆ. ಪ್ರತಿ ತಿಂಗಳಿನಲ್ಲಿಯೂ ಎರಡು ಏಕಾದಶಿಗಳು  (ಶುಕ್ಲ -ಏಕಾದಶಿ ಮತ್ತು ಬಹುಳ -ಏಕಾದಶಿ) ಬರುತ್ತವೆ. (ಅಧಿಕ ಮಾಸದಲ್ಲಿ ಮತ್ತೆರಡು ಏಕಾದಶಿಗಳು ಅಧಿಕವಾಗಿ ಬರುತ್ತವೆ). ಹೀಗೆ ಸಾಮಾನ್ಯವಾಗಿ ವರ್ಷದಲ್ಲಿ ೨೪ ಏಕಾದಶಿಗಳು ಬರುತ್ತವೆ. ಪ್ರತಿ ಏಕಾದಶಿಯೂ ಸಹ ಬಹಳಷ್ಟು ಪವಿತ್ರವಾದುದು. "ಗೃಹಸ್ಥೋ ಬ್ರಹ್ಮಚಾರೀಚ ಅಹಿತಾಗ್ನಿಸ್ತಥೈವ ಚl ಏಕಾದಶ್ಯಾಂ ನ ಭುಂಜೀತ ಪಕ್ಷಯೋ ಉಭಯೋರಪಿ" - ಬ್ರಹ್ಮಚಾರಿ, ಗೃಹಸ್ಥ, ನಿತ್ಯಾಗ್ನಿಹೋತ್ರ ಮಾಡುವವನು ಯಾರಾದರೂ ಸಹ ಉಭಯ ಏಕಾದಶಿಗಳಲ್ಲಿಯೂ ಭೋಜನವನ್ನು ಸ್ವೀಕರಿಸಬಾರದೆನ್ನುವುದು ಶಾಸ್ತ್ರವಾಕ್ಯವಾಗಿದೆ. ಈ ವಿಧವಾದ ನಿಷ್ಠೆಯಿಂದ ಕೂಡಿರುವ ಏಕಾದಶಿ ದಿವಸವು ಶ್ರೀ ವಿಷ್ಣುವಿಗೆ ಇತರೇ ತಿಥಿಗಳಿಗಿಂತ ಅಧಿಕ ಪ್ರಿಯಕರವಾದುದಾಗಿದೆ. ಆದ್ದರಿಂದ ಏಕಾದಶಿಯ ದಿನವನ್ನು "ಹರಿವಾಸರಂ" ಎಂದು ಹಿರಿಯರು ಹೇಳಿರುತ್ತಾರೆ.

           ೨೪ ಏಕಾದಶಿಗಳಲ್ಲಿ, ಸೌರಮಾಸದಲ್ಲಿ ಪ್ರಶಸ್ತವಾದ ಧನುರ್ಮಾಸದಲ್ಲಿ (ಮಾರ್ಗಶಿರ-ಪುಷ್ಯ ಮಾಸಗಳಲ್ಲಿ) ಬರುವ ಶುಕ್ಲಪಕ್ಷ ಏಕಾದಶಿಯು ’ವೈಕುಂಠ ಏಕಾದಶಿ’ ಎಂದು ಪ್ರಸಿದ್ಧವಾಗಿದೆ. ಇದನ್ನೇ ’ಮುಕ್ಕೋಟಿ ಏಕಾದಶಿ’ ಎಂದೂ ಆಂಧ್ರ ದೇಶದವರು ಕರೆಯುತ್ತಾರೆ. ಶ್ರೀ ಮನ್ನಾರಾಯಣನಾದ ವಿಷ್ಣುವಿಗೆ ಸೂರ್ಯನು ಬಲಗಣ್ಣಾದರೆ, ಚಂದ್ರನು ಎಡಗಣ್ಣಾಗಿದ್ದಾನೆ. ಸೌರಮಾನದ ಪ್ರಕಾರ ಬರುವ ಧನುರ್ಮಾಸ ಮತ್ತು ಚಾಂದ್ರಮಾನದ ಪ್ರಕಾರ ಅದರಲ್ಲಿ ಬರುವ ’ವೈಕುಂಠ ಏಕಾದಶಿಯು, ಕಣ್ಣುಗಳು ಬೇರೆ ಬೇರೆಯಾದರೂ ಸಹ ದೃಷ್ಟಿ ಒಂದೇ ಎನ್ನುವಂತೆ ಸೂರ್ಯಚಂದ್ರರು ಬೇರೆ ಬೇರೆಯಾಗಿ ಕಾಣಿಸಿದರೂ ಸಹ ಅವರ ಕಾಂತಿ ತತ್ತ್ವವು ಒಂದೇ ಎನ್ನುವ ಮಹಾನ್ ತತ್ತ್ವವನ್ನು ಸಾರುತ್ತದೆ.

            ’ವೈಕುಂಠ ಏಕಾದಶಿ’ಯು ಸಾಮಾನ್ಯವಾಗಿ ಮಾರ್ಗಶಿರ-ಪುಷ್ಯ ಮಾಸಗಳಲ್ಲೇ ಬರುತ್ತದೆ. ರಾವಣನ ಬಾಧೆಯನ್ನು ತಾಳಲಾರದೆ ದೇವತೆಗಳು ಬ್ರಹ್ಮನೊಡಗೂಡಿ ವೈಕುಂಠವನ್ನು ಹೊಕ್ಕು ಹರಿವಾಸರವಾದ ಮಾರ್ಗಶಿರ ಶುಕ್ಲ ಏಕಾದಶಿ ದಿನದಂದು ಶ್ರೀ ಹರಿಯನ್ನು ಪ್ರಾರ್ಥಿಸಿ ತಮ್ಮ ಬವಣೆಯನ್ನು ಭಿನ್ನವಿಸಿಕೊಂಡರು. ಶ್ರೀ ಹರಿಯು ಬ್ರಹ್ಮಾದಿ ದೇವತೆಗಳಿಗೆ ದರ್ಶನವನ್ನು ಕೊಟ್ಟು ಅವರನ್ನು ಬಾಧೆಗಳಿಂದ ಮುಕ್ತರನ್ನಾಗಿ ಮಾಡುವುದಾಗಿ ಅಭಯವಿತ್ತನು. ಈ ಏಕಾದಶಿಯೇ ದೇವತೆಗಳಿಗೆ ತಮ್ಮ ಬಾಧೆಗಳಿಂದ ಮುಕ್ತರಾಗಲು ಮಾರ್ಗವನ್ನು ತೋರಿಸಿತು. ಇನ್ನೊಂದು ವೃತ್ತಾಂತದ ಪ್ರಕಾರ ಶ್ರೀ ಹರಿಯಿಂದ ಸಂಹರಿಸಲ್ಪಟ್ಟ ಮಧುಕೈಟಭರು ದಿವ್ಯರೂಪಗಳನ್ನು ಧರಿಸಿ, ದಿವ್ಯವಾದ ಜ್ಞಾನವನ್ನು ಹೊಂದಿ, "ದೇವಾ, ವೈಕುಂಠದಂತಹ ಮಂದಿರವನ್ನು ನಿರ್ಮಿಸಿ, ಏಕಾದಶಿ ಪೂಜೆಯನ್ನು ಆಚರಿಸಿ, ನಿನ್ನನ್ನು ದರ್ಶಿಸಿ, ನಮಸ್ಕರಿಸಿ, ಉತ್ತರದ್ವಾರ ಮಾರ್ಗದ ಮೂಲಕ ನಿನ್ನನ್ನು ಸಮೀಪಿಸುವವರಿಗೆ ಶ್ರೀವೈಕುಂಠ ಪ್ರಾಪ್ತಿಯನ್ನು ಕರುಣಿಸಿಬೇಕು" ಎಂದು ಪ್ರಾರ್ಥಿಸಿದರು. ಆಗ ಶ್ರೀಹರಿಯು "ತಥಾಸ್ತು" ಎಂದು ಅವರ ಬೇಡಿಕೆಯನ್ನು ಮನ್ನಿಸಿದನು. ಹಾಗಾಗಿ ಈ ಏಕಾದಶಿಗೆ ’ಮೋಕ್ಷೋತ್ಸವ ದಿನ’ವೆಂದೂ ಹೆಸರು. ಮುಕ್ಕೋಟಿ ದೇವತೆಗಳ ಬಾಧೆಗಳನ್ನು ನಿವಾರಿಸಿದ ದಿನವಾದ್ದರಿಂದ ಇದಕ್ಕೆ ‘ಮುಕ್ಕೋಟಿ ಏಕಾದಶಿ’ ಎಂದೂ ಹೆಸರು. ಮುಕ್ಕೋಟಿ ಎನ್ನುವುದು ೩೩ ಕೋಟಿ ದೇವತೆಗಳನ್ನು ಸಾಂಕೇತಿಕವಾಗಿ ಸೂಚಿಸಲಾಗಿದೆ ಎಂದೂ ಹೇಳುತ್ತಾರೆ. ಈ ದಿನವು ವೈಕುಂಠ ದರ್ಶನವನ್ನು ಮಾಡಿಸುತ್ತದೆಯಾದ್ದರಿಂದ ಇದು ’ವೈಕುಂಠ ಏಕಾದಶಿ’ ಆಗಿದೆ. ಭಗವಂತನ ದರ್ಶನವನ್ನು ಈ ದಿನ ಮಾಡುವುದರಿಂದ ಇದು "ಭಗವದವಲೋಕನದಿನಂ" ಕೂಡಾ ಆಗಿದೆ.

           ಮಾರ್ಗಶಿರ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯು - ಮೋಕ್ಷದೈಕಾದಶಿ ಮತ್ತು ಪುಷ್ಯ ಶುಕ್ಲದ ಏಕಾದಶಿಯು "ಪುತ್ರದೈಕಾದಶಿ". ಸುಕೇತುವೆಂಬ ರಾಜನು ವಿಶ್ವೇದೇವತೆಗಳ ಉಪದೇಶಕ್ಕನುಗುಣವಾಗಿ ಪುಷ್ಯಶುಕ್ಲ ಏಕಾದಶಿ ವ್ರತವನ್ನು ಆಚರಿಸಿ, ಭಗವದನುಗ್ರಹದಿಂದ ಪುತ್ರಸಂತಾನವನ್ನು ಪಡೆದನೆಂದು ಪದ್ಮಪುರಾಣವು ಹೇಳುತ್ತದೆ.

           ಸಕಲ ಪಾಪಗಳಿಂದ ವಿಮುಕ್ತಿ ಹೊಂದಿ ಜನ್ಮರಾಹಿತ್ಯತೆಯನ್ನುಂಟು ಮಾಡುವ ‘ಶ್ರೀಕೈವಲ್ಯ ಪ್ರಾಪ್ತಿ’ಯನ್ನು ಹೊಂದಲು ವೈಕುಂಠ ಏಕಾದಶಿ ವ್ರತಕ್ಕಿಂತ ಶ್ರೇಷ್ಠವಾದ ವ್ರತವಿಲ್ಲ.

           ದೇವದಾನವರು ಈ ಏಕಾದಶಿ ಉಪವಾಸವನ್ನು ಕೈಗೊಂಡು ಹಗಲೂ-ಇರುಳೂ ಕಷ್ಟಪಟ್ಟು, ಕ್ಷೀರಸಾಗರವನ್ನು ಮಥಿಸಿದಾಗ, ದ್ವಾದಶಿ ದಿವಸ ಶ್ರೀ ಮಹಾಲಕ್ಷ್ಮಿಯು ಸಮುದ್ರದಿಂದ ಉದ್ಭವಿಸಿ ಹೊರಬಂದು ದೇವತೆಗಳಿಗೆ ಪ್ರತ್ಯಕ್ಷವಾಗಿ ಅವರನ್ನು ಅನುಗ್ರಹಿಸಿದಳು. ಅಂದಿನಿಂದ ಯಾರು ಈ ಏಕಾದಶಿಯಂದು ಹಗಲೂ-ಇರುಳೂ ಉಪವಾಸ ಮತ್ತು ಜಾಗರಣೆಗಳನ್ನು ಮಾಡಿ ಶ್ರೀ ಹರಿಯನ್ನು ನುತಿಸುತ್ತಾರೆಯೋ ಅವರಿಗೆ ಶ್ರೀ ಸ್ವಾಮಿಯ ಕೃಪೆಯಿಂದ ಮುಕ್ತಿಯು ಕರತಲಾಮಲಕವಾಗುತ್ತದೆ (ಹಸ್ತಗತವಾಗುತ್ತದೆ) ಎನ್ನುವ ನಂಬಿಕೆಯು ಹುಟ್ಟಿಕೊಂಡಿದೆ.

           ಶುಕ್ಲ ಏಕಾದಶಿಯ ದಿನ ಸೂರ್ಯನಿಂದ ಹೊರಹೊಮ್ಮುವ ’ಹನ್ನೊಂದನೇ ಕಲಾ’ವು ಚಂದ್ರನನ್ನು ಪ್ರವೇಶಿಸುತ್ತದೆ. ಬಹುಳ ಏಕಾದಶಿಯಂದು ಚಂದ್ರಮಂಡಲದಿಂದ ಹನ್ನೊಂದನೇ ಕಲಾವು ಸೂರ್ಯಮಂಡಲವನ್ನು ಪ್ರವೇಶಿಸುತ್ತದೆ. ಹೀಗೆ ಬಂದು ಹೋಗುವುದರಿಂದ ’ಏಕಾದಶಿ’ ಎನ್ನುವ ಹೆಸರು ಸಾರ್ಥಕತೆಯನ್ನು ಪಡೆದಿದೆ. "ಏಕಾದಶ್ಯಾಮುಪವಸೇನ್ನ ಕದಾಚಿದತಿಕ್ರಮೇತ್" ಅಂದರೆ ಏಕಾದಶಿಯಂದು ತಪ್ಪದೇ ಉಪವಾಸವನ್ನು ಮಾಡಬೇಕು. "ಉಪವಾಸಃ ನ ವಿಜ್ಞೇಯಃ, ಸರ್ವಭೋಗವಿವರ್ಜಿತಃ" ಅಂದರೆ ಉಪವಾಸ ಮಾಡುವ ದಿನದಂದು ಪಾಪಕೃತ್ಯಗಳಿಂದ ದೂರವುಳಿದು, ಸಕಲ ಭೋಗಗಳನ್ನು ತ್ಯಜಿಸ ಬೇಕು ಅಂದರೆ ಪುಣ್ಯಕಾರ್ಯಗಳನ್ನು ಮಾಡುವುದೇ ಉಪವಾಸವೆಂದು ದೊಡ್ಡವರು ಹೇಳಿರುವ ಮಾತು. ಇಂದ್ರಿಯಗಳನ್ನು ನಿಗ್ರಹಿಸಿ, ೧೧ ಇಂದ್ರಿಯಗಳನ್ನು (ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಮನಸ್ಸು ಇವುಗಳನ್ನು ಒಟ್ಟಾಗಿ ೧೧ ಇಂದ್ರಿಯಗಳೆನ್ನುತ್ತಾರೆ) ಭಗವಂತನ ಸೇವೆಯಲ್ಲಿ ತೊಡಗಿಸುವುದೇ ನಿಜವಾದ ಉಪವಾಸವಾಗಿದೆ. ಏಕಾದಶಿ ವ್ರತವು ದಶಮಿಯ ರಾತ್ರಿಯಿಂದ ಪ್ರಾರಂಭವಾಗಿ ದ್ವಾದಶಿ ದಿನದ ಉದಯದೊಂದಿಗೆ ಪೂರ್ತಿಗೊಳ್ಳುತ್ತದೆ. ಸಕಲರೂ ಈ ವ್ರತವನ್ನು ಆಚರಿಸಬಹುದು.

          ಎಂಟು ವರ್ಷದೊಳಗಿನ ಬಾಲಕರು ಮತ್ತು ಎಂಬತ್ತು ವರ್ಷ ವಯಸ್ಸು ದಾಟಿದ ವೃದ್ಧರು ಉಪವಾಸವನ್ನು ಮಾಡಬೇಕಾದದ್ದಿಲ್ಲ ಎಂದು ಕಾತ್ಯಾಯನ ಸ್ಮೃತಿಯು ಹೇಳುತ್ತದೆ. 

                                                                                      ******

                                                                                                                                          ಮುಂದುವರೆಯುವುದು..........................

 

 

 

 

Rating
No votes yet

Comments

Submitted by ಗಣೇಶ Fri, 12/13/2013 - 23:22

ಶ್ರೀಧರ್‌ಜಿ, ಮುಕ್ಕೋಟಿ ಏಕಾದಶಿಯಂದು ಜನಗಳಿಗಿಂತ ಜಾಸ್ತಿ ದೇವತೆಗಳೇ ತಿರುಪತಿಯಲ್ಲಿರುವರು! ಕಣ್ಣಿಗೆ ಕಾಣಿಸುತ್ತಿದ್ದರೆ..!
ಒಂದು ಹಳೇ ನೆನಪು- ಏಕಾದಶಿ ವೃತ ತಪ್ಪದೇ ಮಾಡುವ ನನ್ನ ಮಿತ್ರನೊಬ್ಬ, ಕ್ಲಾಸ್‌ನಲ್ಲಿ ಸುಸ್ತಾಗಿ ನಿದ್ರಿಸುತ್ತಿದ್ದ.. "ಹೋ..ಈ ದಿನ ಏಕಾದಶಿ.." ಅಂತ ಆತನ ನಿದ್ರೆ ನೋಡಿ ಗುರುಗಳು ಹಾಸ್ಯ ಮಾಡುತ್ತಿದ್ದರು. :)

Submitted by makara Sat, 12/14/2013 - 08:47

In reply to by ಗಣೇಶ

ಗಣೇಶ್‌ಜಿ,
ಬಹುಶಃ ನಿಮ್ಮ ಮಿತ್ರ ಯೋಗನಿದ್ರೆ ಮಾಡುತ್ತಿದ್ದಿರ ಬೇಕು, ದೇವೇಗೌಡರಂತೆ ಸಭೆಯಲ್ಲಿ ಕುರಿತು ದೇಶದ ಬಗ್ಗೆ ಚಿಂತಿಸುತ್ತಿರಬಹುದಲ್ಲವೇ? :)

Submitted by sathishnasa Sat, 12/14/2013 - 21:15

ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುತ್ತಿರುವ ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು ಶ್ರೀಧರ್ ರವರೇ, ಮತ್ತೊಮ್ಮೆ ಧನ್ಯವಾದಗಳೊಂದಿಗೆ .............ಸತೀಶ್

Submitted by makara Sun, 12/15/2013 - 21:37

In reply to by sathishnasa

ಸತೀಶ್ ಅವರೆ,
ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಬೇಕಾದರೆ ಅದಕ್ಕೆ ಸೂಕ್ತ ಓದುಗರೂ ಇರಬೇಕಲ್ಲವೇ. ಅಂತಹ ಸದ್ಬುದ್ಧಿಯುಳ್ಳ ಓದುಗರು ಸಂಪದದಲ್ಲಿದ್ದಾರೆ ಹಾಗಾಗಿ ಈ ಅವಕಾಶ ನನಗೆ ಉಂಟಾಗಿದೆ. ನಾನು ನಿಮ್ಮಂಥ ಓದುಗರಿಗೆ ಆಭಾರಿಯಾಗಿದ್ದೇನೆ. ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಧನ್ಯವಾದಗಳು.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ