೧೮೭. ಲಲಿತಾ ಸಹಸ್ರನಾಮ ೮೬೮ರಿಂದ ೮೭೪ನೇ ನಾಮಗಳ ವಿವರಣೆ

೧೮೭. ಲಲಿತಾ ಸಹಸ್ರನಾಮ ೮೬೮ರಿಂದ ೮೭೪ನೇ ನಾಮಗಳ ವಿವರಣೆ

                                                                          ಲಲಿತಾ ಸಹಸ್ರನಾಮ ೮೬೮-೮೭೪

Mugdhā मुग्धा (868)

೮೬೮. ಮುಗ್ಧಾ

           ದೇವಿಯು ಸುಂದರವಾಗಿದ್ದಾಳೆ. ಮುಗ್ಧಾ ಎಂದರೆ ಅಮಾಯಕಳು ಎಂದರ್ಥ. ಮುಗ್ದತೆ ಎನ್ನುವುದು ಇನ್ನೊಬ್ಬರಿಗೆ ಹಾನಿಯನ್ನುಂಟು ಮಾಡುವ ಸ್ವಭಾವವನ್ನು ಹೊಂದಿಲ್ಲದೇ ಇರುವುದು. ದೇವಿಯು ಜಗನ್ಮಾತೆಯಾಗಿರುವುದರಿಂದ ಆಕೆಯು ತನ್ನ ಮಕ್ಕಳಿಗೆ ಹಾನಿಯನ್ನುಂಟು ಮಾಡಲಾರಳು. ಈ ಮುಗ್ಧತೆಯ ಗುಣದಿಂದಾಗಿ ದೇವಿಯು ಸುಂದರವಾಗಿದ್ದಾಳೆ.

           ದೇವಿಯು ಏಕೆ ಸುಂದರಳಾಗಿದ್ದಾಳೆ ಎಂದರೆ, "ಆಕೆಯು ಸ್ವಯಂ-ಶಕ್ತಿಯು ವ್ಯಕ್ತವಾಗುವುದಕ್ಕೆ ಕಾರಣೀಭೂತಳಾಗಿದ್ದಾಳೆ; ಅದು ಅಭೂತಪೂರ್ವವಾದ ಶಿವನ ಸ್ವಾತಂತ್ರ್ಯ ಶಕ್ತಿಯಾಗಿದೆ" (ತಂತ್ರಲೋಕ ೭.೭೧). ದೇವಿಯ ಸೌಂದರ್ಯವನ್ನು ಕುರಿತು ಹೇಳುವ ಇತರೇ ನಾಮಗಳು ೪೮ ಮಹಾಲಾವಣ್ಯ-ಸೇವಧಿಃ, ಮತ್ತು ೪೬೨ ತೇಜೋವತೀ; ಆಗಿವೆ.

Kṣipra-prasādinī क्षिप्र-प्रसादिनी (869)

೮೬೯. ಕ್ಷಿಪ್ರ-ಪ್ರಸಾದಿನೀ

           ಕ್ಷಿಪ್ರ ಎಂದರೆ ಶೀಘ್ರವಾಗಿ. ಬೇರೆ ದೇವರುಗಳನ್ನು ಪೂಜಿಸಿದರೆ ಮುಕ್ತಿಯು ನಿಧಾನವಾಗುತ್ತದೆ ಎಂದು ಹೇಳಲಾಗುತ್ತದೆ, ಆದರೆ ಲಲಿತಾಂಬಿಕೆಯನ್ನು ಪೂಜಿಸಿದರೆ ಮುಕ್ತಿಯು ಈ ಜನ್ಮದಲ್ಲಿಯೇ ಲಭಿಸುತ್ತದೆಂದು ಹೇಳಲಾಗುತ್ತದೆ. ಈ ಅಂಶದ ನಿರೂಪಣೆಗೆ, ದೇವಿಯ ಮಹಾ ಷೋಡಶೀ ಮಂತ್ರಗಳಂತಹವು ಈ ಜನ್ಮದಲ್ಲಿಯೇ ಮುಕ್ತಿಯನ್ನು ಕೊಡಬಲ್ಲುವು ಎಂದು ಹೇಳುತ್ತಾರೆ. ಈ ಮಂತ್ರ ಪಠಣೆಯಿಂದ ಕೂಡಿದ ಮಾರ್ಗ-ವಿಧಾನವನ್ನೇ ’ಮೋಕ್ಷ ಸಾಧನ’ ಅಥವಾ ಮುಕ್ತಿ ಮಾರ್ಗ ಎಂದು ಕರೆಯಲಾಗಿದೆ. ಇದು ಏಕೆಂದರೆ ಪರಬ್ರಹ್ಮವಾದ ಶಿವ ಮತ್ತು ದೇವಿಯು ಭಿನ್ನರಲ್ಲ ಮತ್ತು ದೇವಿಯೊಬ್ಬಳೇ ನಿಜವಾದ ಭಕ್ತನನ್ನು ಶಿವನ ಸನಿಹಕ್ಕೆ ಕರೆದೊಯ್ಯಬಲ್ಲಳು.

          ಪ್ರಾರ್ಥನೆ, ಜಪ ಮತ್ತು ಯಜ್ಞ-ಯಾಗಿದಿಗಳನ್ನು ನಿತ್ಯ-ನಿಯಮಿತವಾಗಿ ಮಾಡದೇ ಹೋದರೆ ಒಬ್ಬನಿಗೆ ಮುಕ್ತಿಯು ಮುಂದಿನ ಜನ್ಮದಲ್ಲಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ; ಏಕೆಂದರೆ ನಿರಂತರವಾದ ಸಾಧನೆಯಿಲ್ಲದೇ ಹೋದರೆ ಮುಕ್ತಿ ಹೊಂದುವುದು ಮುಂದಿನ ಜನ್ಮಕ್ಕೆ ಮುಂದೂಡಲ್ಪಡುತ್ತದೆ.

         ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (೧೬.೫), "ದೈವೀ ಸಂಪತ್ತು ಮೋಕ್ಷಕ್ಕೆ ಸಾಧನವಾಗಿದೆ", ಎಂದು ಹೇಳುತ್ತಾನೆ. ಆ ದೈವೀ ಸಂಪತ್ತನ್ನು ಪರಿಶುದ್ಧವಾದ ಭಕ್ತಿಯ ಮೂಲಕ ಗಳಿಸಿಕೊಳ್ಳಬಹುದು.

ಮೋಕ್ಷದ ಕುರಿತಾಗಿ ಇನ್ನಷ್ಟು ವಿವರಗಳು:

            ಸೌಃ (सौः) ಬೀಜಾಕ್ಷರವನ್ನು ಅಮೃತ ಬೀಜವೆಂದು ಕರೆಯುತ್ತಾರೆ. ಯಾರು ಈ ಬೀಜಾಕ್ಷರದ ಮೇಲೆ ಸತತವಾಗಿ ೪೮ ನಿಮಿಷಗಳ ಕಾಲ ಸಂಪೂರ್ಣ ದೃಷ್ಟಿಯನ್ನು ಕೇಂದ್ರೀಕರಿಸಬಲ್ಲನೋ, ಅವನಿಗೆ ಬಹುವಿಧವಾದ ಮಂತ್ರಗಳ ಮತ್ತು ಮುದ್ರೆಗಳ ಸಮೂಹವೇ ಕೈವಶವಾಗುತ್ತವೆ (ಅವನ ಅಧೀನಕ್ಕೊಳಗಾಗುತ್ತವೆ). ಒಂದು ವೇಳೆ ಈ ಸಾಧನೆಯನ್ನು ಅವನು ಒಂಭತ್ತು ತಾಸುಗಳ ಕಾಲ ನಿರಂತರವಾಗಿ ಮುಂದುವರೆಸಬಲ್ಲನಾದರೆ ಅವನ ಬಳಿಗೆ ಎಲ್ಲಾ ದೇವಾನು ದೇವತೆಗಳು ಬಂದು ಅವನಿಗೆ ಮೋಕ್ಷವನ್ನು ಕರುಣಿಸುತ್ತಾರೆ (ಪರಾ-ತ್ರಿಶಿಕ-ವಿವರಣ ೯ -೧೮).

Antarmukha-samārādhyā अन्तर्मुख-समाराध्या (870)

೮೭೦. ಅಂತರ್ಮುಖ-ಸಮಾರಾಧ್ಯ

            ದೇವಿಯು ಯಾರು ಅಂತದೃಷ್ಟಿಯುಳ್ಳವರೋ ಅವರಿಂದ ಪೂಜಿಸಲ್ಪಡುತ್ತಾಳೆ. ದೇವಿಯನ್ನು ಅಂತರಂಗದಲ್ಲಿ ಹುಡುಕುವ ಮೂಲಕ ಸಾಕ್ಷಾತ್ಕರಿಸಿಕೊಳ್ಳಬೇಕು. ಇದು ಆತ್ಮವು ಶರೀರದೊಳಗೆ ನಿವಸಿಸುತ್ತದೆ ಎನ್ನುವ ಸಿದ್ಧಾಂತದ ಮೇಲೆ ಆಧರಿಸಿದೆ.

ಇನ್ನಷ್ಟು ವಿವರಗಳು:

            ಶ್ರೀ ಕೃಷ್ಣನು, ಅಂತರಂಗ ಶೋಧನೆಯ ಬಗ್ಗೆ ಲೆಕ್ಕವಿಲ್ಲದಷ್ಟು ವಿವರಣೆಗಳನ್ನು ೪೭ ಶ್ಲೋಕಗಳನ್ನುಳ್ಳ ಭಗವದ್ಗೀತೆಯ ೬ನೆಯ ಅಧ್ಯಾಯವಾದ ‘ಧ್ಯಾನಯೋಗ’ದಲ್ಲಿ ಕೊಡುತ್ತಾನೆ; ಇದರ ಕುರಿತಾದ ಸ್ವಾಮಿ ಚಿನ್ಮಯಾನಂದರ ವಿವರಣೆಯನ್ನು ಸಂಕ್ಷಿಪ್ತವಾಗಿ ಇಲ್ಲಿ ಕೊಡಲಾಗಿದೆ. ಫಲಾಪೇಕ್ಷೆಯಿಲ್ಲದೆ ಕೈಗೊಂಡ ಕರ್ಮ ಯೋಗವು ಒಳ್ಳೆಯ ಧ್ಯಾನವನ್ನು ಮಾಡಲು ಬಾಹ್ಯ ಸಾಧನವಾಗಿದೆ. ಕೆಳಸ್ತರದ ಸಾಧನಗಳು ಉಚ್ಛ ಸ್ತರದ ಸಾಧನಗಳ ನಿರ್ವಹಣೆ ಮತ್ತು ಶಿಸ್ತಿಗೆ ಒಳಪಡುವ ಪ್ರಕ್ರಿಯೆಗಳನ್ನೆಲ್ಲಾ ಒಟ್ಟಾಗಿ ಆಧ್ಯಾತ್ಮಿಕ ಯುಕ್ತಿಗಳೆಂದು ಕರೆಯಲಾಗಿದೆ. ಯಾವುದೇ ಗುರುವು ಹೊಣೆಯನ್ನು ತೆಗೆದುಕೊಳ್ಳಲಾರ; ಯಾವುದೇ ಶಾಸ್ತ್ರಗಳು ಈ ವಿಧವಾದ ಆಶ್ವಾಸನೆಯನ್ನು ಕೊಡಲಾರವು, ಯಾವುದೇ ಅವತಾರ ಪುರುಷನಾಗಲಿ ತನ್ನ ದೈವೀ ಕೃಪೆಯಿಂದ ಈ ಕೆಳಸ್ತರವನ್ನು ಮೇಲಿನ ಸ್ತರವನ್ನಾಗಿ ಮಾರ್ಪಡಿಸಲಾರ. ಕೆಳಗಿನ ಸ್ತರದಲ್ಲಿರುವವರು ನಿಧಾನವಾಗಿ ಮತ್ತು ನಿಯಮಿತವಾಗಿ ಮೇಲಿನ ಸ್ತರದ ಪ್ರಭಾವ ಮತ್ತು ಶಿಸ್ತಿಗೆ ಒಗ್ಗಿಕೊಳ್ಳುವಂತೆ ಮಾಡಲು ಅವಶ್ಯವಾಗಿ ತರಬೇತಿಯನ್ನು ಕೊಡಬೇಕು. ಒಮ್ಮೆ ಒಬ್ಬ ಸಾಧಕನು ತನ್ನ ಜೀವಿತಕಾಲದಲ್ಲಿ ಯೋಗಾರೂಢ ಹಂತಕ್ಕೆ ತಲುಪಿದಾಗ ಮತ್ತು ಅವನು ಸಮಚಿತ್ತವುಳ್ಳವನಾಗಿದ್ದಾಗ, ಪರಮಾತ್ಮದ ಮೇಲೆ ಧ್ಯಾನಿಸುವಾಗ ಅವನ ಮನಸ್ಸು ವಿಚಲಿತಗೊಳ್ಳದೆ ಏಕಾಗ್ರತೆಯಿಂದ ಕೂಡಿರತ್ತದೆ, ಆತ್ಮನಿಗ್ರಹ ಹೊಂದಿದೆ ಒಬ್ಬನು, ಶಾಂತಚಿತ್ತನಾಗಿ ತನ್ನ ಧ್ಯಾನವನ್ನು ದೃಢವಾಗಿ ಎಲ್ಲಾ ಪರಿಸ್ಥಿತಿಗಳಲ್ಲೂ ಮಾಡಬಲ್ಲ; ಅನುಕೂಲವಿರಲಿ ಅಥವಾ ಪ್ರತಿಕೂಲವಿರಲಿ, ತನ್ನ ವ್ಯಕ್ತಿತ್ವದ ಎಲ್ಲಾ ಹಂತಗಳಲ್ಲಿ. ತನ್ನ ಆತ್ಮವನ್ನು ಸರಿಯಾಗಿ ತಿಳುದುಕೊಳ್ಳುತ್ತಾ ಅದರ ಫಲವಾಗಿ ತನ್ನ ಆತ್ಮವನ್ನು ಅರಿತು, ಅವನು ಸರ್ವವ್ಯಾಪಿಯಾದ ಆತ್ಮವೇ ಆಗುತ್ತಾನೆ. ಯಾರಿಗೆ ತಾನು ಸರ್ವಾಂತರಯಾಮಿಯಾದ ಆತ್ಮವೆಂದು ಅರಿವುಂಟಾಗುತ್ತದೆಯೋ, ಅವನಿಗೆ ಸಮಸ್ತ ವಿಶ್ವವೂ ತನ್ನ ಸ್ವಂತವೇ ಆಗುತ್ತದೆ ಮತ್ತು ಅದರಿಂದಾಗಿ ವಿಶ್ವದೊಂದಿಗಿನ ಅವನ ಸಂಭಂದವು ಎಲ್ಲಾ ವಿವಿಧ ಭಾಗಗಳಲ್ಲೂ ಒಂದೇ ತೆರನಾಗಿ ಸಮಾನವಾಗಿರುತ್ತದೆ. ಈ ಹಂತವನ್ನು ಹೊಂದುವುದಕ್ಕಾಗಿ ಸಾಧಕನು ತನ್ನ ಮಾನಸಿಕ ಮತ್ತು ದೈಹಿಕ ಪೂರ್ವಾಗ್ರಹಗಳಿಂದ ದೂರವುಳಿಯಬೇಕು.

Bahirmukha-sudurlabhā बहिर्मुख-सुदुर्लभा (871)

೮೭೧. ಬಹಿರ್ಮುಖ-ಸುದುರ್ಲಭಾ

           ಹಿಂದಿನ ನಾಮವು ಈ ನಾಮದೊಂದಿಗೆ ಸೇರಿಕೊಂಡು ಆತ್ಮಸಾಕ್ಷಾತ್ಕಾರದ ಪ್ರಕ್ರಿಯೆಯನ್ನು ಹೇಳುತ್ತದೆ. ಯಾರಿಗೆ ಅಂತರಂಗದೊಳಗೆ ತಮ್ಮ ದೃಷ್ಟಿಯನ್ನು ಸಾರಿಸಲಾಗುವುದಿಲ್ಲವೋ ಅಂತಹವರಿಗೆ ದೇವಿಯು ದೊರಕುವುದು ಕಷ್ಟಸಾಧ್ಯ. ಅಂತರಂಗ ದೃಷ್ಟಿಗೆ ಮೂಲಭೂತವಾಗಿ ಬೇಕಾಗಿರುವುದು ಮನಸ್ಸು. ಇಂದ್ರಿಯಗಳನ್ನು ನಿಗ್ರಹಿಸಿಕೊಳ್ಳದೇ ಇದ್ದರೆ, ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಕಠಿಣವಾದದ್ದು. ಈ ನಾಮವು ದೇವಿಯನ್ನು ಬಾಹ್ಯ ಸಾಧನಗಳಿಂದ ಹೊಂದಲಾಗದು ಎಂದು ಹೇಳುತ್ತದೆ.

           ಸೌಂದರ್ಯ ಲಹರಿಯು (ಸ್ತೋತ್ರ ೯೫), "ಯಾರು ತಮ್ಮ ಇಂದ್ರಿಯಗಳನ್ನು ನಿಗ್ರಹಿಸಿಕೊಂಡಿರುವುದಿಲ್ಲವೋ ಅಂತಹವರಿಗೆ ನಿನ್ನನ್ನು ಹೊಂದುವುದು ಬಹು ಕಷ್ಟವಾಗಿರುತ್ತದೆ", ಎಂದು ಹೇಳುತ್ತದೆ.

           ಕಠೋಪನಿಷತ್ತು (೨.೧.೨) ಸಹ ಇದನ್ನು ವಿವರಿಸುತ್ತದೆ, "ತಿಳುವಳಿಕೆಯಿಲ್ಲದ ಜನರು ಬಾಹ್ಯ ವಸ್ತುಗಳ ಹಿಂದೆ ಬಿದ್ದು ಅವರು ಅನಿವಾರ್ಯವಾಗಿ ವಿಶಾಲವಾಗಿ ಹರಡಲ್ಪಟ್ಟಿರುವ ಮರಣದ ಬಲೆಯಲ್ಲಿ ಸಿಲುಕುತ್ತಾರೆ. ಆದರೆ ಎಲ್ಲಿ ನಿಜವಾದ ಅಮರತ್ವವು ಇದೆ ಎನ್ನುವುದನ್ನು ವಿವೇಕಿಗಳು ತಿಳಿದಿದ್ದಾರೆ. ಆದ್ದರಿಂದ ಅವರು ಪ್ರಪಂಚದಲ್ಲಿರುವುದನ್ನೆಲ್ಲಾ ತಿರಸ್ಕರಿಸುತ್ತಾರೆ; ಏಕೆಂದರೆ ಇವೆಲ್ಲಾ ಅಲ್ಪಕಾಲ ಬಾಳುವವು ಎನ್ನುವುದು ಅವರಿಗೆ ತಿಳಿದಿದೆ".

          ಈ ನಾಮವು ಯಾರು ಇಂದ್ರಿಯ ಸುಖಗಳಿಗೆ ದಾಸರಾಗಿರುತ್ತಾರೆಯೋ ಅವರಿಗೆ ದೇವಿಯನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ವ್ಯಸನಗಳಿಗೆ ದಾಸರಾಗುವುದು ಮತ್ತು ಅವಶ್ಯಕತೆಗಳಿಗೆ ಅಂಟಿಕೊಳ್ಳುವುದು ಬೇರೆ ಬೇರೆಯಾಗಿವೆ.

          ನಾಮ ೧೮೮ ದುರ್ಲಭಾ. ದುರ್ಲಭಾ ಎಂದರೆ ಕಷ್ಟಕರವಾದದ್ದು ಮತ್ತು ಸುದುರ್ಲಭಾ ಎಂದರೆ ಅತೀ ಕಷ್ಟವಾದದ್ದು.

Trayī त्रयी (872)

೮೭೨. ತ್ರಯೀ

            ತ್ರಯೀ ಎಂದರೆ ಮೂರು ಮತ್ತು ಇಲ್ಲಿ ಅದು ಮೂರು ವೇದಗಳಾದ ಋಗ್, ಯಜುರ್ ಮತ್ತು ಸಾಮ ಇವುಗಳನ್ನು ಸೂಚಿಸುತ್ತದೆ. ವಾಸ್ತವವಾಗಿ ದೇವಿಯು ವೇದಗಳ ಮಾತೆಯಾಗಿ ಗೌರವಿಸಲ್ಪಡುತ್ತಾಳೆ (ನಾಮ ೩೩೮, ವೇದ ಜನನೀ). ಈ ನಾಮವು ದೇವಿಯು ತ್ರಿವೇದಗಳ ರೂಪದಲ್ಲಿದ್ದಾಳೆಂದು ಹೇಳುತ್ತದೆ.

            ದೂರ್ವಾಸ ಋಷಿ ವಿರಚಿತ ಶಕ್ತಿ ಮಹಿಮ್ನಃ ಸ್ತೋತ್ರವು (ಶ್ಲೋಕ ೫,೬ ಮತ್ತು ೭) ಈ ನಾಮದ ಕುರಿತ ವಿವರಣೆಯನ್ನು ಒದಗಿಸುತ್ತದೆ. ವಾಗ್ಭವ ಬೀಜವಾದ ಐಂ (ऐं) ವೇದಗಳ ಬೀಜವಾಗಿದೆ. ಋಗ್ವೇದವು ಅ (अ) ಅಕ್ಷರದಿಂದ ಮೊದಲುಗೊಳ್ಳುತ್ತದೆ, ಯಜುರ್ವೇದವು ಇ (इ) ಅಕ್ಷರದಿಂದ ಆರಂಭವಾಗುತ್ತದೆ ಮತ್ತು ಸಾಮವೇದವು ಅ (अ) ಅಕ್ಷರದಿಂದ ಮೊದಲುಗೊಳ್ಳುತ್ತದೆ. ಅ + ಇ = ಏ; ಏ + ಅ = ಐ अ + इ = ए; ए + अ = ऐ. ಒಂದು ಬಿಂದುವನ್ನು ऐ(ಐ) ಅಕ್ಷರಕ್ಕೆ ಸೇರಿಸಿದಾದ ಅದು ಐಂ (ऐं) ಆಗುತ್ತದೆ. ಈ ಐಂ (ऐं) ಅಕ್ಷರದ ಪ್ರಕಾಶವೇ ಎಲ್ಲಾ ಮಂತ್ರ ಮತ್ತು ತಂತ್ರಗಳನ್ನು ಪ್ರಜ್ವಲಗೊಳಿಸುತ್ತದೆ. ಈ ವಾಗ್ಭವ ಬೀಜದಿಂದಲೇ ಉಗಮಗೊಂಡ ಐವತ್ತು ಅಥವಾ ಐವತ್ತೊಂದು ಅಕ್ಷರಗಳು ಈ ಸಹಸ್ರನಾಮದ ಕರ್ತೃಗಳಾದ ಎಂಟು ವಾಗ್ದೇವಿಗಳಿಗೆ ಹಂಚಲ್ಪಟ್ಟು ಅವುಗಳು ಶಬ್ದಗಳ ಉಗಮಕ್ಕೆ ಕಾರಣವಾಗಿವೆ. ಆದ್ದರಿಂದ ವಾಗ್ಭವ ಬೀಜವು ವೇದಗಳ ಬೀಜವಾಗಿದೆ. ಇದನ್ನು ಪಂಚದಶೀ ಮಂತ್ರದ ಪ್ರಥಮ ಕೂಟವಾದ ವಾಗ್ಭವ ಕೂಟಕ್ಕೂ ಅನ್ವಯಿಸಿಕೊಳ್ಳಬಹುದು.

Trivarga-nilayā त्रिवर्ग-निलया (873)

೮೭೩. ತ್ರಿವರ್ಗ-ನಿಲಯಾ

           ತ್ರಿವರ್ಗವೆಂದರೆ ಭೂತ, ವರ್ತಮಾನ ಮತ್ತು ಭವಿಷ್ಯತ್ ಅಥವಾ ಧರ್ಮ, ಅರ್ಥ ಮತ್ತು ಕಾಮ (ನಾಲ್ಕು ಪುರುಷಾರ್ಥಗಳಲ್ಲಿ ಮೂರು; ನಾಲ್ಕನೆಯದು ಮೋಕ್ಷವಾಗಿದೆ). ದೇವಿಯು ಮೋಕ್ಷವನ್ನು ದಯಪಾಲಿಸುವುದರಿಂದ, ಈ ನಾಮವು ದೇವಿಯು ಉಳಿದ ಮೂರು ಪುರಷಾರ್ಥಗಳಲ್ಲಿಯೂ ಸ್ಥಿತಳಾಗಿದ್ದಾಳೆಂದು ಹೇಳುತ್ತದೆ. ಅಥವಾ ದೇವಿಯು ಕಾಲದ ಮೂರು ಅವಸ್ಥೆಗಳಾದ ಭೂತ, ವರ್ತಮಾನ ಮತ್ತು ಭವಿಷ್ಯತ್ ಇವುಗಳಲ್ಲೆಲ್ಲಾ ಸ್ಥಿತಳಾಗಿರುತ್ತಾಳೆಂದು ಹೇಳಬಹುದು.

           ನಾಮ ೭೬೦ ತ್ರಿವರ್ಗ ಧಾತ್ರೀ ಸಹ ಇದೇ ಅರ್ಥವನ್ನು ಕೊಡುತ್ತದೆ.

Tristhā त्रिस्था (874)

೮೭೪. ತ್ರಿಸ್ಥಾ

           ಈ ನಾಮವು ಹಿಂದಿನ ನಾಮವನ್ನು ಒತ್ತಿ ಹೇಳುವುದಾಗಿದೆ. ಈ ನಾಮವು ದೇವಿಯು ಎಲ್ಲಾ ತ್ರಿಪುಟಿಗಳಲ್ಲಿಯೂ ಸ್ಥಿತಳಾಗಿದ್ದಾಳೆಂದು ಹೇಳುತ್ತದೆ. ಎಷ್ಟೋ ತ್ರಿಪುಟಿಗಳು ಇವೆ. ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲ; ಬ್ರಹ್ಮ, ವಿಷ್ಣು ಮತ್ತು ರುದ್ರ; ಸೃಷ್ಟಿ, ಸ್ಥಿತಿ, ಲಯ; ಓಂ (ॐ)ನ ಮೂರು ಅಕ್ಷರಗಳಾದ ಅ, ಉ ಮತ್ತು ಮ; ಮೂರು ವಿಧವಾದ ಕರ್ಮಗಳು ಪ್ರಾರಬ್ಧ, ಸಂಚಿತ, ಆಗಾಮ್ಯ ಅಥವಾ ಕ್ರಿಯಮಾಣ; ತ್ರಿಗುಣಗಳಾದ - ಸತ್ವ, ರಜೋ ಮತ್ತು ತಮಸ್; ಮೂರು ಶಕ್ತಿಗಳಾದ ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳು ಮೊದಲಾದವು. ಶ್ರೀ ಚಕ್ರವು ವೃತ್ತಗಳು, ಕೋನಗಳು ಮತ್ತು ಗೆರೆಗಳಿಂದ ರಚಿಸಲ್ಪಟ್ಟಿದೆ ಎನ್ನುವುದನ್ನೂ ಸಹ ಇಲ್ಲಿ ಸ್ಮರಿಸಬಹುದು.

           ಮಾರ್ಕಂಡೇಯ ಪುರಾಣವು (೨೧.೩೬ರಿಂದ ೩೮), "ನಿನ್ನೊಳಗೆ ಕಾಲದ ತ್ರಿಮಾತ್ರಗಳು (ಹ್ರಸ್ವ, ದೀರ್ಘ ಮತ್ತು ಮಧ್ಯಮ) ನಿವಾಸವಾಗಿವೆ, ಓ ದೇವಿಯೇ, ಅಸ್ತಿತ್ವದಲ್ಲಿರುವುದೆಲ್ಲಾ ಅಸ್ತಿತ್ವದಲ್ಲಿಲ್ಲ; ಮೂರು ವೇದಗಳು, ಮೂರು ಜ್ಞಾನಗಳು, ತ್ರಿವಿಧವಾದ ಅಗ್ನಿಗಳು, ಮೂರು ವಿಧವಾದ ಬೆಳಕುಗಳು, ಮೂರು ವರ್ಣಗಳು, ಮೂರು ಗುಣಗಳು, ಮೂರು ವಿಧವಾದ ಶಬ್ದಗಳು ಮತ್ತು ಮೂರು ಆಶ್ರಮಗಳು (ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ), ಮೂರು ಕಾಲಗಳು, ಜೀವದ ಮೂರು ಸ್ಥಿತಿಗಳು, ಮೂರು ವಿಧವಾದ ಪಿತೃಗಳು (ವಸು, ರುದ್ರ ಮತ್ತು ಆದಿತ್ಯ), ದಿನ-ಹಗಲು ಮತ್ತು ವಿರಾಮ. ತ್ರಿಪುಟಿಗಳ ಈ ಪ್ರಮಾಣವು ನಿನ್ನ ಸ್ವರೂಪದೊಳಗಿವೆ ಓ ದೇವಿ ಸರಸ್ವತಿಯೇ" ಎಂದು ಸ್ತುತಿಸುತ್ತದೆ.

ಇನ್ನಷ್ಟು ವಿವರಗಳು:

            ಯಾವಾಗ ಮೂರನೆಯ ವ್ಯಕ್ತಿ (ನರ ಅಥವಾ ಮಾನವ), ಎರಡನೇ ವ್ಯಕ್ತಿ (ಶಕ್ತಿ) ಮತ್ತು ಮೊದಲನೇ ವ್ಯಕ್ತಿ (ಶಿವ) ಇವು ಮೂರನ್ನು ಒಂದೇ ಬಾರಿ ಪ್ರಯೋಗಿಸಿದಾಗ, ಏಕಕಾಲಕ್ಕೆ ಕೆಳಸ್ತರವು ಉಚ್ಛ ಸ್ತರದಲ್ಲಿರುವುದರೊಳಗೆ ಲೀನವಾಗುತ್ತದೆ, ಉಚ್ಛಸ್ತರದೊಳಗೆ ಏಕೆಂದರೆ ಉನ್ನತವಾದುದರೊಳಗೆ ಕೆಳಸ್ತರದ ಸತ್ಯವು ಅಡಗಿದೆ. ಇದರರ್ಥ ಶಿವನ ಅಂಶವು ಶಕ್ತಿಯೊಳಗೆ ಅಡಕವಾಗಿದೆ ಮತ್ತು ಶಕ್ತಿಯ ಅಂಶವು ನರನೊಳಗೆ ಅಡಕವಾಗಿದೆ. ಆದ್ದರಿಂದ ಶಿವನು ಎಲ್ಲ ಕಡೆಯೂ ಇದ್ದಾನೆ. ನರ ರೂಪವು ಮೊದಲು ಶಕ್ತಿ ರೂಪಕ್ಕೆ ಏರುತ್ತದೆ ತದನಂತರ ಶಿವರೂಪಕ್ಕೆ ಏರುತ್ತದೆ. ನರ ರೂಪವು ಮಧ್ಯದಲ್ಲಿರುವ ಶಕ್ತಿ ರೂಪವನ್ನು ಬದಿಗಿಟ್ಟು ನೇರವಾಗಿ ಶಿವರೂಪಕ್ಕೆ ಏರಲಾಗದು. ಈ ಕಾರಣಕ್ಕಾಗಿಯೇ ಶಿವನು ದೇವಿಯನ್ನು (ಶಕ್ತಿಯನ್ನು) ಯಾವಾಗಲೂ ಎರಡನೇ ವ್ಯಕ್ತಿಯಾಗಿ ಸಂಭೋದಿಸುತ್ತಾನೆ. ಇದನ್ನೇ ತ್ರೈತ ಸಿದ್ಧಾಂತವೆಂದು ಕರೆಯಲಾಗುತ್ತದೆ. ಶಿವನು ಪ್ರಕಾಶವೆಂದು ಕರೆಯಲ್ಪಟ್ಟರೆ, ಶಕ್ತಿಯು ವಿಮರ್ಶ ಎಂದು ಕರೆಯಲ್ಪಟ್ಟಿದ್ದಾಳೆ ಮತ್ತು ಇವರಿಬ್ಬರ ಸಾಮರಸ್ಯವು ಭಿನ್ನತೆಯಲ್ಲಿರುವ ಏಕತ್ವವೆಂದು ಕರೆಯಲಾಗುತ್ತದೆ ಮತ್ತದು ಮಾನವ ಜೀವಿಯಾಗಿದೆ. 

                                                                                        ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 868 - 874 http://www.manblunder.com/2010/06/lalitha-sahasranamam-868-874.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Sat, 12/14/2013 - 22:15

ಶ್ರೀಧರರೆ,"೧೮೭. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೮೬೮-೮೭೪
________________________.
೮೬೮. ಮುಗ್ದಾ
ಪರರಿಗೆ ಹಾನಿ ಬಯಸದ ಅಮಾಯಕ ಗುಣವೆ ಮುಗ್ದತೆ
ಮಕ್ಕಳಿಗೆ ಹಾನಿಯ ಮಾಡದ ಜಗನ್ಮಾತೆ ಮುಗ್ದಾ ಲಲಿತೆ
ಮುಗ್ದತೆಯೆ ಸೌಂದರ್ಯವ್ಹೆತ್ತು ದೇವಿ ಕಾರಣೀಭೂತಳಾಗಿ
ಶಿವನಿತ್ತ ಸ್ವಾತಂತ್ರ ಶಕ್ತಿ, ಸ್ವಯಂ ಶಕ್ತಿ ರೂಪದೆ ವ್ಯಕ್ತವಾಗಿ ||
.
೮೬೯. ಕ್ಷಿಪ್ರ-ಪ್ರಸಾದಿನೀ
ಭಿನ್ನರಲ್ಲದ ಶಿವಶಕ್ತಿ ಪರಬ್ರಹ್ಮ, ದೇವಿ ಶಿವನೆಡೆಗೊಯ್ಯೊ ಆಧಾರ ಸ್ತಂಭ
ಶೀಘ್ರದೆ ಮುಕ್ತಿಯಫಲ ನೀಡುವ ಕ್ಷಿಪ್ರ ಪ್ರಸಾದಿನೀ ದೇವಿ ಪೂಜಿಸೆ ಲಾಭ
ಮಹಾ ಷೋಡಶಾದೀ ಮಂತ್ರ ನೀಡುತ ಶಕ್ತಿ, ಪ್ರಸ್ತುತ ಜನ್ಮದಲಿರೆ ಮುಕ್ತಿ
ಪ್ರಾರ್ಥನೆ ಜಪಾದಿ ಪೂಜೆ ಭಕ್ತಿಯಿರದೆ, ಮರುಜನ್ಮಕೆ ದೂಡೊ ಅನುಮತಿ ||
.
ಮೋಕ್ಷದ ಕುರಿತಾಗಿ ಇನ್ನಷ್ಟು ವಿವರಗಳು :
______________________________________________
ಸೌಃ ಬೀಜಾಕ್ಷರ ಅಮೃತ ಬೀಜ, ಬೀಜಾಕ್ಷರಕಿಡೆ ಸತತ ದೃಷ್ಟಿಯ ವೃಷ್ಟಿ
ನಲವತ್ತೆಂಟು ನಿಮಿಷಕೆ ಕರಗತ ಬಹುವಿಧ, ಮಂತ್ರ ಮುದ್ರೆಯ ಸಮಷ್ಟಿ
ನವತಾಸಿನ ನಿರಂತರ ದೃಷ್ಟಿ ಸಾಧನೆಗೆ ಬಂದಿಳಿಯೊ ದೇವಾನುದೇವತೆ
ಸಂಪೂರ್ಣ ಕೇಂದ್ರಿಕೃತ ಅನಿರ್ಬಂಧಿತ ದೃಷ್ಟಿಶಕ್ತಿಗೆ ಮೋಕ್ಷ ಕರುಣಿಸುತೆ ||
.
೮೭೦. ಅಂತರ್ಮುಖ-ಸಮಾರಾಧ್ಯ
ಅಂತರ್ದೃಷ್ಟಿಯುಳ್ಳವರಿಂದ ಪೂಜಿತೆ, ಸಾಕ್ಷಾತ್ಕಾರವಡಕ ಅಂತರಂಗದೆ
ಶರೀರದೊಳಾತ್ಮ ಪರಬ್ರಹ್ಮ ಸ್ವರೂಪಿ, ಬಾಹ್ಯಕರ್ಮ ಸಾಧನೆ ಕೆಳಸ್ತರದೆ
ಮಾನಸಿಕ ದೈಹಿಕ ಪೂರ್ವಾಗ್ರಹ ವರ್ಜಿಸಿ ಮೇಲಿನ ಸ್ತರ ತಲುಪೆ ಸಾಧ್ಯ
ಯೋಗಾರೂಢ ಸಮಚಿತ್ತ ಆತ್ಮವರಿತ ಅಹಂ ಅಂತರ್ಮುಖ-ಸಮಾರಾಧ್ಯ ||
.
೮೭೧. ಬಹಿರ್ಮುಖ-ಸುದುರ್ಲಭಾ
ಇಂದ್ರಿಯ ನಿಗ್ರಹದೆ ಮನ ನಿಯಂತ್ರಿಸೆ, ಅಂತರಂಗಕೆ ದೃಷ್ಟಿ ಸುಲಭ
ಬಾಹ್ಯಸಾಧನಕೆ ದೊರಕದ ದೇವಿ ಲಲಿತೆ, ಬಹಿರ್ಮುಖ-ಸುದುರ್ಲಭಾ
ಬೆನ್ನು ಹತ್ತಿದ ಲೌಕಿಕ ಸುಖ ಇಂದ್ರಿಯ ದಾಸ್ಯ, ಪುನರ್ಜನ್ಮಕಿಹ ಖಚಿತ
ವ್ಯಸನ ದಾಸರಾಗದ ವಿವೇಕಿ ಜನ, ಕಮಲದೆಲೆಗೆ ನೀರಂತಂಟಿ ಉಚಿತ ||
.
೮೭೨. ತ್ರಯೀ
ಋಗ್ ಯಜುರ್ ಸಾಮ ವೇದತ್ರಯ, ಸ್ವರೂಪಿ ಮಾತೆಯಾಗಿ ಲಲಿತೆ ತ್ರಯೀ
ಋಗ್ವೇದದ ಆರಂಭಾಕ್ಷರ-ಅ, ಇ-ಯಜುರ್ವೇದ, ಅ-ಸಾಮವೇದದ ಸ್ಥಾಯಿ
ಅ-ಇ-ಅ-ಬಿಂದು ಸೇರಿ ವಾಗ್ಭವ ಬೀಜ-ಐಂ, ಪ್ರಜ್ವಲಗೊಳಿಸಿ ಮಂತ್ರ ತಂತ್ರ
ವಾಗ್ಭವ ಬೀಜದೆ ಉಗಮ ವರ್ಣಮಾಲೆ, ವಾಗ್ದೇವಿಗಳಿಂದ ಶಬ್ದವಾಗಿ ಸೂತ್ರ ||
.
೮೭೩. ತ್ರಿವರ್ಗ-ನಿಲಯಾ
ಭೂತ-ವರ್ತಮಾನ-ಭವಿಷ್ಯತ್, ಧರ್ಮ-ಅರ್ಥ-ಕಾಮಗಳೆಲ್ಲ ತ್ರಿವರ್ಗ
ನಾಲ್ಕನೆ ಪುರುಷಾರ್ಥ ಮೋಕ್ಷ, ದಯಪಾಲಿಸೊ ದೇವಿ ಕರುಣೆ ಸ್ವರ್ಗ
ಮಿಕ್ಕ ಮೂರು ಪುರುಷಾರ್ಥದಲಿಹಳು ದೇವಿ, ತ್ರಿಕಾಲಾವಸ್ಥೆ ಸಮಯ
ಉಪಸ್ಥಿತಳಿಹಳು ಲಲಿತಾಪರಬ್ರಹ್ಮ, ತ್ರಿವರ್ಗಧಾತ್ರಿ ತ್ರಿವರ್ಗ ನಿಲಯ ||
.
೮೭೪. ತ್ರಿಸ್ಥಾ
ತ್ರಿಪುಟಿಗಳೆ ಅಗಣಿತವಿರುತ, ಲಲಿತಾ ಬ್ರಹ್ಮ ಎಲ್ಲದರಲಿಹ ಉಪಸ್ಥಿತಿ
ಭೂತ-ವರ್ತಮಾನ-ಭವಿಷ್ಯತ್ ತ್ರಿಕಾಲ, ಬ್ರಹ್ಮ-ವಿಷ್ಣು-ರುದ್ರ ತ್ರಿಮೂರ್ತಿ
ಸೃಷ್ಟಿ-ಸ್ಥಿತಿ-ಲಯ ತ್ರಿಕಾಲ, ಅ-ಉ-ಮ ಓಂಕಾರದ ಮೂರಕ್ಷರ ಸಹಿತಾ
ತ್ರಿಕರ್ಮ ಪ್ರಾರಬ್ದ-ಸಂಚಿತ-ಆಗಾಮ್ಯ, ತ್ರಿಗುಣ ತ್ರಿಶಕ್ತಿ ಶ್ರೀಚಕ್ರಕೂ ತ್ರಿಸ್ಥಾ ||
.
ಹ್ರಸ್ವ-ದೀರ್ಘ-ಮಧ್ಯಮ ತ್ರಿಮಾತ್ರ ದೇವಿ ನಿವಸಿತ, ಅಸ್ತಿತ್ವವೆಲ್ಲ ಅನಸ್ತಿತ್ವ
ತ್ರಿವೇದ, ತ್ರಿವಿಧ ಜ್ಞಾನ, ತ್ರಿವಿಧಾಗ್ನಿ, ತ್ರಿರೂಪಿ ಬೆಳಕು, ತ್ರಿವರ್ಣಗಳ ಸತ್ವ
ತ್ರಿಗುಣ, ತ್ರಿವಿಧ ಶಬ್ದ, ಗೃಹಸ್ಥ-ವಾನಪ್ರಸ್ಥ-ಸಂನ್ಯಾಸಾಶ್ರಮ, ತ್ರಿಕಾಲವಿಹ
ಬಾಲ್ಯ-ಯೌವ್ವನ-ವೃದ್ಧಾಪ್ಯ, ವಸು-ರುದ್ರ-ಆದಿತ್ಯ ತ್ರಿಪಿತೃಗಳಾದಿ ಸಮೂಹ ||
.
ಇನ್ನಷ್ಟು ವಿವರಗಳು:
_____________________
ಮೊದಲನೆ ವ್ಯಕ್ತಿ ಶಿವ, ಎರಡನೆ ವ್ಯಕ್ತಿ ಶಕ್ತಿ, ಮೂರನೆಯವ ನರಮಾನವ
ಶಿವನ ಅಂಶ ಶಕ್ತಿಯೊಳಗಡಕ, ಶಕ್ತಿಯಂಶ ನರನಲಡಗಿಹ ಸ್ತರದ ಭಾವ
ನರರೂಪ ಮೊದಲೇರಿ ಶಕ್ತಿರೂಪಕೆ, ತದನಂತರ ಶಿವರೂಪಕೆ ಅನುಕ್ರಮ
ಶಿವ ಪ್ರಕಾಶ ಶಕ್ತಿ ವಿಮರ್ಶ ಸಾಮರಸ್ಯ ಭಿನ್ನತೆಯಲೇಕತೆ ಮಾನವ ಜನ್ಮ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು