ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..

ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..

ಆಧುನಿಕ ಜೀವನದಲ್ಲಿ ಸಹಚರರಂತೆ ಕೈಗೂಡಿಸಿರುವ ಅನೇಕಾನೇಕ ಉಪಕರಣಗಳು, ನಮ್ಮ ದೈನಂದಿನ ಬದುಕನ್ನು ಸುಗಮಗೊಳಿಸಿದಷ್ಟೆ ಸಹಜವಾಗಿ, ಬದುಕುವ ಶೈಲಿಯಲ್ಲಿ ಬದಲಾವಣೆ ತಂದುಬಿಟ್ಟಿವೆ. ಆ ಬದಲಾವಣೆಯ ಒಂದು ಪ್ರಮುಖ ಬಳುವಳಿ - ಸೋಮಾರಿತನ. ಮಿಕ್ಸಿ, ಗ್ರೈಂಡರುಗಳು, ಫ್ರಿಡ್ಜು, ಗ್ಯಾಸು, ವಾಷರುಗಳು - ಯಾವುದನ್ನೆ ಹೆಸರಿಸಿದರೂ ಒಂದು ಮುಖದಲ್ಲಿ ಬಳಕೆಯ ಸುಗಮತೆಯಿದ್ದರೆ, ನಾಣ್ಯದ ಮತ್ತೊಂದು ಮುಖ ಅದರ ಅಡ್ಡ ಪರಿಣಾಮಗಳು. ಆಧುನಿಕ ಆಕರ್ಷಣೆಯನ್ನು ನಿಭಾಯಿಸಿ, ಸಂಭಾಳಿಸಿ, ಅಳವಡಿಸಿಕೊಳ್ಳದೆ ದೂರವಿರುವ ಸಂತರು ನಾವಲ್ಲದ ಕಾರಣ ಅದರ ಪರಿಧಿಗೆ ಸಿಗದೆ ಹೊರಗುಳಿಯುವುದು ಅಸಾಧ್ಯ.

ಆದರೆ ಬರಿ ಪರಿಧಿಯೊಳಗೆ ಸಿಕ್ಕು ಬಲೆಗೆ ಬಿದ್ದರಷ್ಟೆ ಸಾಲದು ಈ ಬಂಡವಾಳಶಾಹಿ ಪ್ರೇರಿತ ಬೇಡಿಕೆ-ಪೂರೈಕೆಯ ಜಗಕೆ. ಚಕ್ರ ನಿರಂತರ ತಿರುಗುತ್ತಿದ್ದರೆ ತಾನೆ ಬದುಕು? ಈ ಸಹಚರರಿಗೂ ಕಾಯಿಲೆಯಾಗುತ್ತದೆ, ಅಪಘಾತ, ಅವಘಡಗಳು ಸಂಭವಿಸುತ್ತವೆ, ಒರಟರ ಕೈಲಿ ನಲುಗಬೇಕಾಗುತ್ತದೆ, ಸರಿಯಾಗಿ ಬಳಸಲು ಬರದವರ ಪ್ರಯೋಗಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಅದರ ಆಯಸ್ಸು ಕುಂಠಿತವಾದಾಗ ಕೆಲವಕ್ಕೆ ವಾರಂಟಿಯ ಆಸರೆ ದೊರೆತರೆ, ಮತ್ತೆ ಕೆಲವಕ್ಕೆ ಕಾಸು ಕೊಟ್ಟು ರಿಪೇರಿ ಮಾಡಿಸುವ ತಲೆನೋವು. ಕೆಲವಂತೂ ಕಂತಿನಲ್ಲಿ ರಿಪೇರಿಯಾಗುತ್ತ ಅದರ ಖರ್ಚೆ ಕೊಂಡ ಖರ್ಚಿಗಿಂತ ಹೆಚ್ಚಾಗುವುದು ಅಪರೂಪವಲ್ಲ. ಕೆಲವಂತೂ ಪಾಳು ಬಿದ್ದ ಮನೆಯಂತೆ ಮೂಲೆ ಹಿಡಿದು ಕೂತು, ಅದರ ಹೊಸರೂಪಿನ, ಹೊಸ ಸಹಚರನಿಗಾಗಿ ಕಾಯುತ್ತ ಕೂರುವುದು ಸಾಮಾನ್ಯ ದೃಶ್ಯ. ಹಳೆಯದನ್ನು ಎಸೆದು ಹೊಸದನ್ನು ಕೊಳ್ಳಬೇಕೊ, ಹೊಸತನ್ನು ಹಳತರ ಜತೆ ಸಾಲಂಕೃತವಾಗಿರಿಸಿ ಮೆರೆಸಬೇಕೊ ಅಥವಾ ಹಳೆಯದರಲ್ಲೆ ಹೇಗೊ ಸಂಭಾಳಿಸಿ ದಿನದೂಡಬೇಕೊ ಎಂಬ ಗೊಂದಲದಲ್ಲಿ ಕೆಡವುತ್ತಲೆ ಹಳತಿನ ಜತೆ ಹೊಸ ಸರಕನ್ನು ಪೇರಿಸಿಡುತ್ತ ಹೋಗುವ ವೈಚಿತ್ರವು ಅಷ್ಟೆ ಸಾಧಾರಣ.

ಆ ಪರಿಸ್ಥಿತಿಯ ತೆಳುಹಾಸ್ಯದ ಅಣಕ, ವ್ಯಂಗ್ಯ ಈ ಕವನ : "ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ.."

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ಹೊಸದ ತಂದು ಹಳತ ಮರೆತುಬಿಡಿ..
_________________________

ಸ್ವದೇಶಿ ಬ್ರಾಂಡ್ ವಿದೇಶಿ ಬ್ರಾಂಡು
ಮೂರ್ನಾಕು ಕೂತೂರಿವೆ ಅಂಡು
ಒಂದಕ್ಕೆ ಜಾಡಿಮುರಿ, ಕೈ ಮುರಿದ ಕಿರಿಕಿರಿ
ಎರಡಕ್ಕೆ ಮೋಟಾರು ವೀಕು, ಕಾಸಿತ್ತೂ ಕಣ್ಣುರಿ
ಕೆಲಸ ಮಾಡದ ಮಿಕ್ಸಿ, ಯಾರಿಗಂತ ಹೇಳೋದ್ರಿ
ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..ಹೊಸದನ್ನೆ ತನ್ನಿರಿ ||

ಗುಡಿಸದ ಕಸಗಳು ಆಗದೆ ರಸಗಳು
ಮೂಲೆಯನೂ ಹಿಡಿಯದೆ ಹರಡಲೆಲ್ಲೆಲ್ಲೂ
ಇಲ್ಲಿಂದಲ್ಲಿಗೆ ಜಾಡಿಸಿ ಅಲ್ಲಿಂದಿಲ್ಲಿಗೆ ಓಡಿಸಿ ಮತ್ತೆ
ಮರು ಬಳಕೆ ತ್ಯಾಜ್ಯದಂತೆ ಬಳಸುವ ಕಹಿಯೋಗ
ನೆಗಡಿ ಕೆಮ್ಮು ಮೋಸ ಹಾಳು ವೈದ್ಯರ ಸ್ಟೈಲೆ ಹೊಸತು
ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..ವ್ಯಾಕ್ಯೂಮ್ ಕ್ಲೀನರ್ ತರಿಸಲ್ಹೊತ್ತು ||

ತೊಳೆಯದ ಪಾತ್ರೆ ಮುಸುರೆ ಪಿಸುರೆಗಳು
ಸಿಂಕಿನಲಿ ದಬ್ಬಾಕಿಕೊಂಡು ಬಿದ್ದಿರುವ ಗೋಳು
ಎರಡು ಗಂಟೆಗೆ ಗಬ್ಬು ಎರಡು ದಿನ ಅಯ್ಯೊ ಅಬ್ಬೆ!
ಪ್ರತಿದಿನವೂ ಬಂದು ಸೇರುತಿದೆಯಲ್ಲಾ ಹೊಸದು ಒಬ್ಬೆ
ಗಲಬರಿಸಿ ಬೆಳಗದ ತೊಳೆಯದ ಸೋಮಾರಿ ಸಹಜೀವನ
ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..ಡಿಶ್ ವಾಷರು ಹೊಸ ಸಾಮಾನ ||

ಗ್ಯಾಸೊಲೆ ಹೊತ್ತಿಸದ ಟಾರ್ಚು ತಿಂಗಳ ಖರ್ಚು
ವಾರಗಟ್ಟಲೆ ಕತ್ತರಿಸದ ತರಕಾರಿ ಕೊಳೆತೆ ಪೆಚ್ಚು
ನೋಡೆಸೆಯುವರಿಲ್ಲ ಬರಿ ಪ್ರಿಡ್ಜು ತುಂಬುವುದೆ ಆಯ್ತಲ್ಲ
ಹೊಸ ಸೊಪ್ಪು, ತರಕಾರಿ ಹಣ್ಣಿಗೆ ಜಾಗವೆ ಇರದೋಯ್ತಲ್ಲ
ಎಷ್ಟು ಬೇಕೊ ಅಷ್ಟು ತಂದುಣ್ಣುವ ಜೀವನ ಎಲ್ಹೋಯ್ತೊ ಅಣ್ಣ
ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ...ಹೊಸ ರೆಫ್ರಿಜಿರೇಟರು ಸೇಲಿದೆ ತಣ್ಣ ||

ಯಾವುದನೂ ಮಾಡದ ಹೆಣ್ಣುಗಳು, ಗಂಡುಗಳು
ರೂಮಿಗೊಂದು ಕೆಟ್ಟ ಬಂಧು ಡೀವೀಡಿ ಪ್ಲೇಯರುಗಳು 
ಎಷ್ಟು ಸೀಡಿ, ಕ್ಯಾಸೆಟ್ಟುಗಳು, ಎಷ್ಟು ಹಾರ್ಡ್ ಡಿಸ್ಕುಗಳು
ವೈರು ಪ್ಲಗ್ಗು ಕೇಬಲ್ಲುಗಳು, ಗೇಮು ಆಡೊ ಕನ್ಸೋಲುಗಳು
ಯಾವುದಕ್ಕೆ ಸರಿ ಯಾವುದೆಂದು ಗೊತ್ತೆ ಆಗದ ಗೊಂದಲಗಳು
ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ...ಹೊಸದ ತಂದು ಹಳತ ಮರೆತುಬಿಡಿ ||

Comments

Submitted by kavinagaraj Tue, 12/17/2013 - 10:15

ಈಗಿನ ಬ್ಯಾಟರಿ ಚಾಲಿತ ವಸ್ತುಗಳಿಗಿಂತ ಬ್ಯಾಟರಿ ರಹಿತ ವಸ್ತುಗಳೇ ಹೆಚ್ಚು ಬಾಳುತ್ತವೆ! ಮುಂದೊಮ್ಮೆ ನಮಗೂ ಬ್ಯಾಟರಿ ಅಳವಡಿಸಬೇಕಾದ ದಿನಗಳು ಬಂದಾವು!!

Submitted by nageshamysore Thu, 12/19/2013 - 05:57

In reply to by kavinagaraj

ಕವಿ ನಾಗರಾಜರೆ, ಏನು ಮಾಡುವುದು? ಇದೆಲ್ಲಾ ಕೊಳ್ಳುಬಾಕ ಸಂಸ್ಕೃತಿಯ ಆಯಾಚಿತ ಕೊಡುಗೆ. ಹೀಗಾಗಿ ನಾವು ಮುಂದೊಮ್ಮೆ ಬ್ಯಾಟರೀಚಾಲಿತ ಮಾನವರಾದರೆ ಅಚ್ಚರಿಯೇನೂ ಇರದು! 
.
ಹಾಗೆಯೆ ಹಳೆಯ ಯಾಂತ್ರಿಕ ಉಪಕರಣಗಳ ಹಾಗೆ ಗಟ್ಟಿಮುಟ್ಟಾದ ವಿನ್ಯಾಸದಲ್ಲಿ ಈಗಿನ ಉಪಕರಣಗಳೂ ಬರುವುದಿಲ್ಲ. ಮುಟ್ಟಿದರೆ ಮುನಿಯ ಹಾಗೆ ಬೇಗನೆ ಬಳಲಿ, ಬಾಡಿ, ಮೂಲೆ ಸೇರುತ್ತವೆ - ಜತೆಗೆ ಸರಿಯಾಗಿ 'ಸೇವೆ' (ಮೈಂಟೆನೆನ್ಸ್) ಮಾಡದಿದ್ದರೆ ಹಾಗೆಯೆ ಕೆಟ್ಟು ಮೂಲೆ ಸೇರುತ್ತವೆ.
.
ಕೈಲಿ ದುಡ್ಡಿದ್ದರೆ ಕೊಳ್ಳುಬಾಕ ಸಂಸ್ಕೃತಿಯು ರಿಪೇರಿಯ ಬದಲು, ಹೊರಗೆಸೆದು ಹೊಸದನ್ನು ಕೊಳ್ಳುವಂತೆ ಪ್ರೇರೇಪಿಸುತ್ತದೆ - ನಿಲ್ಲದ ನಿರಂತರ ವರ್ತುಲದಂತೆ ಸುತ್ತುತ್ತ :-)
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by H A Patil Thu, 12/19/2013 - 19:42

ನಾಗೇಶ ಮೈಸೂರು ರವರಿಗೆ ವಂದನೆಗಳು
'ಹೋಗ್ಲಿ ಬಿಡಿ ಹಾಳಾಗ್ಲಿ ಬಿಡ್ರಿ' ವರ್ತಮಾನದ ಸ್ಥಿತಿಗೆ ಹಿಡಿದ ಕೈಗನ್ನಡಿ ಯಂತಿದೆ ಈ ಕವನ, ಕವನದ ಆಶಯ ಮನಕ್ಕೆ ಹಿಡಿಸಿತು. ಧನ್ಯವಾದಗಳು.

Submitted by nageshamysore Fri, 12/20/2013 - 05:26

In reply to by H A Patil

ಪಾಟೀಲರೆ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಮ್ಮಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯ ಸ್ತರ ಹೆಚ್ಚಿದಂತೆ ಈ ಪರಿಣಾಮಗಳ ವ್ಯಾಪಕತೆಯೂ ಹೆಚ್ಚುತ್ತ ಹೋಗುತ್ತದೆ. ಆಗ ಹೆಚ್ಚು ಜನರು ಈ ವಿದ್ಯಾಮಾನಕ್ಕೆ ಸ್ವಯಂ ಸಾಕ್ಷೀಭೂತರಾಗಬಹುದೇನೊ. ಯಾಕೆಂದರೆ ಸುಮ್ಮನೆ ಅವರವರ ಮನೆಗಳಲ್ಲಿರುವ ಉಪಕರಣಗಳ ಸಂಖ್ಯೆಯತ್ತ ಒಮ್ನೆ ಕಣ್ಣು ಹಾಯಿಸಿದರೆ ಸಾಕು - ಎಲ್ಲವೂ ಬಟಾಬಯಲು :-)