೧೮೮. ಲಲಿತಾ ಸಹಸ್ರನಾಮ ೮೭೫ರಿಂದ ೮೮೧ನೇ ನಾಮಗಳ ವಿವರಣೆ

೧೮೮. ಲಲಿತಾ ಸಹಸ್ರನಾಮ ೮೭೫ರಿಂದ ೮೮೧ನೇ ನಾಮಗಳ ವಿವರಣೆ

                                                                      ಲಲಿತಾ ಸಹಸ್ರನಾಮ ೮೭೫- ೮೮೧

Tripuramālinī त्रिपुरमालिनी (875)

೮೭೫. ತ್ರಿಪುರಮಾಲಿನೀ

           ತ್ರಿಪುರಮಾಲಿನೀ ದೇವಿಯು ಶ್ರೀ ಚಕ್ರದ ಆರನೇ ಆವರಣದಲ್ಲಿ ಸ್ಥಿತವಾಗಿರುವ ಸರ್ವ ರಕ್ಷಾಕರ ಎಂದು ಕರೆಯಲ್ಪಡುವ ಉಪದೇವತೆ ಅಥವಾ ಯೋಗಿನಿಯಾಗಿದ್ದಾಳೆ. ಆಕೆಗೆ ಸಹಾಯಕಳಾಗಿರುವವಳು ನಿಗರ್ಭ-ಯೋಗಿನಿ (ಗರ್ಭದಿಂದ ಜನಿಸಿದವಳಲ್ಲ). ಈ ಆವರಣವು ಸೃಷ್ಟಿಯನ್ನು ಪ್ರತಿನಿಧಿಸುತ್ತದೆ. ಮಾಲಿನಿ ಎಂದರೆ ಕಾಮ (ಶಿವನ) ಹೆಂಡತಿ ಎನ್ನುವ ಅರ್ಥವೂ ಇದೆ. ತ್ರಿಪುರ ಎಂದರೆ ಪ್ರಜ್ಞೆಯ ಮೂರು ಮೂಲಭೂತ ಹಂತಗಳೂ (ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿ) ಆಗಬಹುದು. ಈ ಸಂದರ್ಭದಲ್ಲಿ ಈ ನಾಮವು ದೇವಿಯು ಪ್ರಜ್ಞೆಯ ಮೂರೂ ಹಂತಗಳನ್ನು ಪರಿಪಾಲಿಸುತ್ತಾಳೆಂದು ಹೇಳಬಹುದು. ಮತ್ತು ಪ್ರಜ್ಞೆಯ ಅಂತಿಮ ಹಂತವು ಶಿವಪ್ರಜ್ಞೆಯಾಗಿದೆ.

          ಇನ್ನೊಂದು ಹಂತದ ಪ್ರಜ್ಞೆಯೂ ಇದೆ. ಈ ಹಂತವು ಒಬ್ಬನು ನಿದ್ರಿಸಿದ ಕೂಡಲೇ ಮತ್ತು ಸ್ವಪ್ನಾವಸ್ಥೆಗೆ ಮುಂಚೆ ಉಂಟಾಗುತ್ತದೆ. ಈ ಹಂತದಲ್ಲಿ ದೈವೀ ಸಂವಹನವು ಏರ್ಪಡುತ್ತದೆ. ಈ ಹಂತವು ಬೆಳಿಗ್ಗೆ ನಿದ್ರೆಯಿಂದ ಏಳುವುದಕ್ಕೆ ಮುಂಚೆಯೂ ಇರುತ್ತದೆ. ಈ ಸ್ಥಿತಿಯಲ್ಲಿ ಒಬ್ಬನು ತನ್ನ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರವನ್ನು ನೇರವಾಗಿ ಭಗವಂತನಿಂದಲೇ ಪಡೆದುಕೊಳ್ಳಬಹುದು.

Nirāmayā निरामया (876)

೮೭೬. ನಿರಾಮಯಾ

            ದೇವಿಯು ರೋಗರಹಿತಳಾಗಿದ್ದಾಳೆ. ಮಯ ಎಂದರೆ ರೋಗಗಳಿಗೆ ಕೊಡುವ ವೈದ್ಯಕೀಯ ಚಿಕಿತ್ಸೆ. ರೋಗಗಳು ಎರಡು ವಿಧವಾಗಿವೆ; ಮೊದಲನೆಯದು ಶಾರೀರಿಕವಾದದ್ದರೆ ಮತ್ತೊಂದು ಮನಸ್ಸಿಗೆ ಸಂಭಂದಪಟ್ಟದ್ದಾಗಿದೆ. ದೇವಿಯು ಶರೀರ ಮತ್ತು ಮನಸ್ಸುಗಳಿಗೆ ಅತೀತಳಾಗಿದ್ದಾಳೆ, ಆಕೆಯೇ ಸರ್ವರೋಗಗಳಿಗೂ ಪರಿಹಾರಿಣಿಯಾಗಿದ್ದಾಳೆ; ನಾಮ ೫೫೧ ಸರ್ವ-ವ್ಯಾಧಿ-ಪ್ರಶಮನೀ ಹೇಳುವಂತೆ ಆಕೆಯು ಎಲ್ಲಾ ವಿಧವಾದ ರೋಗಗಳನ್ನು ಗುಣಪಡಿಸುತ್ತಾಳೆ.

Nirālambā निरालम्बा (877)

೮೭೭. ನಿರಾಲಂಬಾ

           ದೇವಿಗೆ ಯಾವುದೇ ಆಧಾರವಿಲ್ಲ ಆದರೆ ಎಲ್ಲವೂ ಆಕೆಯ ಆಕೆಯನ್ನು ಆಧರಿಸಿವೆ. ಈ ನಾಮವು ದೇವಿಯು ಸೃಷ್ಟಿ, ಸ್ಥಿತಿ ಮತ್ತು ಲಯ ಕ್ರಿಯೆಗಳನ್ನು ಕೈಗೊಳ್ಳಲು ಯಾರ ಮೇಲೆಯೂ ಅವಲಂಬಿಸಿಲ್ಲ ಎಂದು ಹೇಳುತ್ತದೆ. ದೇವಿಯ ಶಿವನ ಮೇಲೆಯೂ ಅವಲಂಬಿತಳಾಗಿಲ್ಲ; ಏಕೆಂದರೆ ಅವರಿಬ್ಬರ ನಡುವೆ ಭೇದವಿಲ್ಲ.

Svātmārāmā स्वात्मारामा (878)

೮೭೮. ಸ್ವಾತ್ಮಾರಾಮಾ

          ದೇವಿಯು ಆತ್ಮ ಸಂತೋಷಿಯಾಗಿದ್ದಾಳೆ ಅಂದರೆ ತನ್ನಷ್ಟಕ್ಕೆ ತಾನು ಸಂತೋಷಳಾಗಿರುತ್ತಾಳೆ.

          ಬೃಹದಾರಣ್ಯಕ ಉಪನಿಷತ್ತು (೧.೪.೩) ಹೀಗೆ ಹೇಳುತ್ತದೆ, "ಅವನು ಸಂತೋಷದಿಂದ ಇರಲೇ ಇಲ್ಲ. (ಯಾವಾಗ ಜನರು ಒಬ್ಬಂಟಿಯಾಗಿರುತ್ತಾರೋ ಆಗ ಅವರು ಸಂತೋಷವಾಗಿರುವುದಿಲ್ಲ). ಅವನು ಒಬ್ಬ ಸಂಗಾತಿಯನ್ನು ಬಯಸಿದ. ಆಗ ಅವನು ಒಬ್ಬರನ್ನೊಬ್ಬರು ತಬ್ಬಿಕೊಂಡ ಮನುಷ್ಯ ಮತ್ತು ಅವನ ಸಂಗಾತಿಯ ಗಾತ್ರದಷ್ಟು ಬೃಹತ್ತಾಗಿ ಬೆಳೆದ. ಅವನು ತನ್ನ ಶರೀರವನ್ನು ಇಬ್ಭಾಗವಾಗಿಸಿಕೊಂಡ ಅದರಿಂದ ಗಂಡ ಮತ್ತು ಹೆಂಡತಿ ಹೊರಹೊಮ್ಮಿದರು. ಆದ್ದರಿಂದ ಈ ದೇಹವು ಒಬ್ಬನ ಅರ್ಧ ಮಾತ್ರವೇ, ಹೋಳು ಮಾಡಿದ ಬೇಳೆ ಕಾಳಿನ ಒಂದರ್ಧದಂತೆ. ಆದ್ದರಿಂದ ಇನ್ನೊಂದರ್ಧ ಜಾಗವು ಹೆಂಡತಿಯಿಂದ ತುಂಬಲ್ಪಡುತ್ತದೆ. ಅವನು ಅವಳೊಂದಿಗೆ ಸಮಾಗಮ ಹೊಂದಿದ; ಅದರಿಂದ ಮಾನವರು ಜನಿಸಿದರು". ಪರಬ್ರಹ್ಮವು ತನ್ನನ್ನು ಶಿವ ಮತ್ತು ಶಕ್ತಿಯಾಗಿ ಅಥವಾ ಅಚರ ಶಕ್ತಿ ಮತ್ತು ಚರ ಶಕ್ತಿಯಾಗಿ ಎರಡಾಗಿ ವಿಭಜಿಸಿಕೊಳ್ಳುತ್ತಾನೆ. ಈ ಉಪನಿಷತ್ತು ಶಕ್ತಿಯು ಶಿವನಿಂದ ಉದ್ಭವಿಸಿದಳು ಎನ್ನುವುದನ್ನು ದೃಢಪಡಿಸುತ್ತದೆ. ಈ ಅಂಶವು ಶಿವ ಮತ್ತು ಶಕ್ತಿಯರು ಒಬ್ಬರಿಗಿಂತ ಒಬ್ಬರು ಭಿನ್ನರಲ್ಲ ಎಂದು ಹೇಳುವ ೫೩ನೇ ನಾಮವಾದ ಶಿವಾ ಎನ್ನುವುದನ್ನು ನಿರೂಪಿಸುತ್ತದೆ. ಅವರು ಬಹುವಿಧ ಕಾರ್ಯಕ್ರಮಗಳನ್ನು ನಿರ್ವಹಿಸುವ ಸಂಯುಕ್ತ ರೂಪವಾಗಿದ್ದಾರೆ. ಶಿವನು ಯಾವುದೇ ವಿಧವಾದ ಕಾರ್ಯಗಳಲ್ಲಿ ಭಾಗಿಯಾಗುವುದಿಲ್ಲ ಆದರೆ ಅವನು ಶಕ್ತಿಯಿಂದ ಜರುಗುವ ವಿವಿಧ ಕಾರ್ಯಗಳನ್ನು ಕೇವಲ ಸಾಕ್ಷೀಭೂತವಾಗಿ ನೋಡುತ್ತಾನಷ್ಟೆ. ಶಕ್ತಿಯು ಸ್ವತಂತ್ರವಾಗಿ ಕ್ರಿಯಾಶೀಲಳಾಗಿದ್ದಾಳೆ. ದೇವಿಯ ಸ್ವತಂತ್ರ ಸ್ವಭಾವದ ಕುರಿತಾಗಿ ಹಿಂದಿನ ನಾಮಗಳಲ್ಲಿ ಚರ್ಚಿಸಲಾಗಿದೆ.

           ಶಿವನು ಶಕ್ತಿಯ ಏಕೈಕ ಒಡೆಯನಾಗಿದ್ದಾನೆ. ಕಾಣಲ್ಪಡುವ ಈ ಸಮಸ್ತ ಸೃಷ್ಟಿಯು ಅವನ ಸ್ವಾಯತ್ತ ಶಕ್ತಿಯ (ನಾಮ ೭೨೩) ವೈವಿಧ್ಯತೆಯಷ್ಟೇ . ಇದನ್ನೇ ಪರಬ್ರಹ್ಮದ ವಿಮರ್ಶ ರೂಪದ ಇಚ್ಚಾ ಶಕ್ತಿಯ ಸ್ವತಂತ್ರ ಅಭಿವ್ಯಕ್ತಿ ಎಂದು ಹೇಳಲಾಗಿದೆ.

          ಈ ಸೃಷ್ಟಿಯು ದೇವಿಯ ಮನಸ್ಸಿನಿಂದ ಉದ್ಭವಿಸಿದೆಯಂದೂ ಮತ್ತು ವಿನಾಶಕಾಲದಲ್ಲಿ (ಮಹಾಪ್ರಳಯ ಕಾಲದಲ್ಲಿ), ಈ ವಿಶ್ವವು ಆಕೆಯ ಮನಸ್ಸಿನಲ್ಲಿ ಲೀನವಾಗಿ ಹೋಗುತ್ತದೆ ಎಂದು ಹೇಳಲಾಗುತ್ತದೆ. ಈ ವಿಶ್ವವು ದೇವಿಯ ಆಟದ ಮೈದಾನವಾಗಿದೆ (ಲೀಲಾ ಕ್ಷೇತ್ರವಾಗಿದೆ). ಈ ಪ್ರಪಂಚವು ದೇವಿಯ ಮನಸ್ಸಿನಿಂದ ಅನಾವರಣಗೊಂಡಿರುವುದರಿಂದ ಆಕೆಯೇ ಸ್ವಯಂ ಆಗಿ (ಆಕೆಯ ಮನಸ್ಸೇ) ಆಕೆಯ ಆಟದ ಬಯಲಾಗಿದೆ. ನಾಮ ೬೬೫ ’ಏಕಾಕಿನೀ’ಯನ್ನೂ ನೋಡಿ.

Sudhāsrutiḥ सुधास्रुतिः (879)

೮೭೯. ಸುಧಾಸ್ರುತಿಃ

           ’ಸುಧಾ-ಸಾರಾಭಿ ವರ್ಷಿಣೀ’ (ನಾಮ ೧೦೬) ಮತ್ತು ಚಂದ್ರಮಂಡಲ-ಮಧ್ಯಗಾ (ನಾಮ ೨೪೦) ಇವುಗಳಲ್ಲಿ ಚರ್ಚಿಸಿದ ದೈವೀ ಮಕರಂದದ (ಅಮೃತ) ಸ್ರವಿಸುವಿಕೆಗೆ ದೇವಿಯು ಕಾರಣಳಾಗಿದ್ದಾಳೆ.

           ದೈವೀ ಮಕರಂದದ ಸ್ರವಿಸುವಿಕೆಯ ಕುರಿತಾದ ವಿವರಣೆಗಳನ್ನು ಮೇಲೆ ತಿಳಿಸಿದ ನಾಮಗಳಲ್ಲಿ ಕೊಡಲಾಗಿದೆ. ಯಾವಾಗ ಕುಂಡಲಿನಿಯು ಆಜ್ಞಾ ಚಕ್ರವನ್ನು ಸೇರುತ್ತದೆಯೋ ಆಗ ಅದು ಪ್ರಚಂಡವಾದ ಶಕ್ತಿಯನ್ನು ಹೊಂದಿರುತ್ತದೆ ಮತ್ತದು ಹೊಳೆಯುತ್ತಿದ್ದು ಆಜ್ಞಾ ಚಕ್ರದಲ್ಲಿಯೇ ಅಥವಾ ಹಿಂದಲೆಯ ಚಕ್ರ ಅಥವಾ ಸಹಸ್ರಾರಗಳ ಮೂಲಕ ಪ್ರಸರಣವಾಗುತ್ತದೆ. ಹೀಗೆ ಶಕ್ತಿಯ ಪ್ರಸರಣವು ಸಹಜವಾದ ಕ್ರಿಯೆಯಾಗಿದೆ. ಅಥವಾ ಒಬ್ಬನು ಆಜ್ಞಾ ಚಕ್ರದ ಹಿಂಬದಿಯಲ್ಲಿರುವ ’ಅರಿವಿನ ಗ್ರಂಥಿ’ಯ (Pineal Gland) ಮೇಲೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಬಹುದು. ಆದರೆ,  ಇದನ್ನು ಸೂಕ್ತವಾದ ಮಾರ್ಗದರ್ಶನವಿಲ್ಲದೇ ಮಾಡಿದರೆ ಆ ವಿಧವಾದ ಅಭ್ಯಾಸವು ನರ ಸಂಭಂದಿತ ಸಮಸ್ಯೆಗಳನ್ನು ಹುಟ್ಟುಹಾಕಬಹುದು. ಯಾವಾಗ ಈ ಗ್ರಂಥಿಯು ಪ್ರಚೋದಿಸಲ್ಪಡುತ್ತದೆಯೋ ಆಗ ಅದು ಪ್ರಕಾಶವನ್ನುಂಟು ಮಾಡುತ್ತದೆ. ಈ ವಿಧವಾದ ಪ್ರಕಾಶದ ಸಮಯದಲ್ಲಿ ಒಬ್ಬನಿಗೆ ಮೇಲ್ದವಡೆಯ ಅಂಗುಳ ಅಥವಾ ತಾಲು ಭಾಗದಲ್ಲಿ ಮತ್ತು ಗಂಟಲಿನಲ್ಲಿ ದೈವೀ ಮಕರಂದದ ಹರಿಯುವಿಕೆಯ ಅನುಭವವುಂಟಾಗಬಹುದು. ಈ ಪ್ರದೇಶವನ್ನು ಮೃದು ಅಂಗುಳವೆನ್ನುತ್ತಾರೆ (ಒಳ ನಾಲಗೆ). ಸಾಮಾನ್ಯವಾಗಿ ಇದರ ಅನುಭವವು ಒಬ್ಬನು ಪರಮಾನಂದದ ಸ್ಥಿತಿಯಲ್ಲಿದ್ದಾಗ ಉಂಟಾಗುತ್ತದೆ. ದೇವಿಯ ಸೂಕ್ಷ್ಮಾತಿಸೂಕ್ಷ್ಮ ರೂಪವು ಕುಂಡಲಿನೀ ರೂಪವಾಗಿರುವುದರಿಂದ, ಈ ನಾಮವು ದೇವಿಯು ದಿವ್ಯವಾದ ಮಕರಂದವು (ಅಮೃತವು) ಹರಿಯುವುದಕ್ಕೆ ಕಾರಣವಾಗಿದ್ದಾಳೆ ಎಂದು ಹೇಳುತ್ತದೆ.

Samsāra-paṅka-nirmagna-samuddharaṇa-paṇḍitā सम्सार-पङ्क-निर्मग्न-समुद्धरण-पण्डिता (880)

೮೮೦. ಸಂಸಾರ-ಪಂಕ-ನಿರ್ಮಗ್ನ-ಸಮುದ್ಧರಣ-ಪಂಡಿತಾ

           ಯಾರು ಸಂಸಾರವೆಂಬ ಪಂಕದಲ್ಲಿ (ಕೆಸರಿನಲ್ಲಿ) ಸಿಲುಕಿದ್ದಾರೆಯೋ ಅವರನ್ನು ಪಾರು ಮಾಡುವ ಸಾಮರ್ಥ್ಯವನ್ನು ದೇವಿಯು ಹೊಂದಿದ್ದಾಳೆ. ಸಂಸಾರವೆಂದರೆ ಐಹಿಕವಾದ ಜೀವನ. ಯಾರು ದೇವಿಯನ್ನು ಕುರಿತು ಅನುಗಾಲವೂ ಚಿಂತಿಸುತ್ತಿರುತ್ತಾರೆಯೋ ಅವರು ಸಂಸಾರ ಬಂಧನದಲ್ಲಿ ಸಿಲುಕದೆ ಅವರು ಆಧ್ಯಾತ್ಮಿಕ ಜೀವನವನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಸಂಸಾರ ಎನ್ನುವುದು ಸಂಸಾರಿ ಎನ್ನುವು ಶಬ್ದದಿಂದ ನಿಷ್ಪತ್ತಿಗೊಳಿಸಲ್ಪಟ್ಟಿದೆ; ಅದರ ವಿವರಣೆಯು ಹೀಗಿದೆ - ನಿತ್ಯವಾದ ಜನನ ಮರಣಗಳ ರೂಪಾಂತರಗಳಿಗೆ ಒಳಪಡುವ ಜೀವಿಯೇ ಸಂಸಾರಿ. ಸಂಸಾರ ಶಬ್ದವನ್ನು ಗೃಹಸ್ಥಾಶ್ರಮವನ್ನು ಅನುಸರಿಸುತ್ತಿರುವ ಕೌಟುಂಬಿಕರಿಗೆ ಅನ್ವಯಿಸಬಾರದು. ಒಬ್ಬ ಮನುಷ್ಯನು ಅಗ್ನಿ ಕಾರ್ಯಗಳನ್ನು (ಯಜ್ಞ-ಯಾಗಾದಿಗಳನ್ನು) ತನ್ನ ಹೆಂಡತಿ ಇಲ್ಲದಿದ್ದರೆ ಮಾಡಬಾರದೆಂದು ಶಾಸ್ತ್ರಗಳು ನಿಷೇಧಿಸಿವೆ.

          ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (೧೨.೭) ಹೀಗೆ ಹೇಳಿದ್ದಾನೆ, "ಓಹ್ಞ್! ಅರ್ಜುನ, ಯಾರು ನನ್ನ ಮೇಲೆ ದೃಢವಾದ ಚಿತ್ತವನ್ನಿರಿಸುತ್ತಾರೆಯೋ ಅವರನ್ನು ನಾನು ಸಂಸಾರ ಸಾಗರದಿಂದ ತ್ವರಿತವಾಗಿ ಮುಕ್ತನಾಗಿಸುತ್ತೇನೆ".

Yajña-priyā यज्ञ-प्रिया (881)

೮೮೧. ಯಜ್ಞ-ಪ್ರಿಯಾ

            ದೇವಿಯು ಯಜ್ಞಗಳನ್ನು ಇಷ್ಟಪಡುತ್ತಾಳೆ. ಯಜ್ಞದಲ್ಲಿ ವಿವಿಧ ಬಗೆಯ ಆಹುತಿಗಳನ್ನು ವಿವಿಧ ದೇವ-ದೇವಿಯರನ್ನು ಪ್ರಸನ್ನಗೊಳಿಸಲು ಅರ್ಪಿಸಲಾಗುತ್ತದೆ. ನವಾವರಣ ಪೂಜೆಯನ್ನೇ ಯಜ್ಞ-ಕಾರ್ಯವೆಂದು ಪರಿಗಣಿಸಲಾಗುತ್ತದೆ. ಯಜ್ಞಃ ಎಂದರೆ ವಿಷ್ಣು ಎನ್ನುವ ಅರ್ಥವೂ ಇದೆ. ’ಯಜ್ಞೋವೈ ವಿಷ್ಣುಃ’ ಎಂದರೆ ಯಜ್ಞವೇ ವಿಷ್ಣು ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯು ತನ್ನ ಸಹೋದರನಾದ ವಿಷ್ಣುವಿನ ಬಗೆಗೆ ಒಲವನ್ನು ಹೊಂದಿದ್ದಾಳೆಂದು ಹೇಳಬಹುದು.

            ಕೃಷ್ಣನು ಭಗವದ್ಗೀತೆಯಲ್ಲಿ (೪.೨೪ ಮತ್ತು ೨೫), "ಅರ್ಪಣವು ಬ್ರಹ್ಮ, ಹವಿಸ್ಸು ಬ್ರಹ್ಮ, ಬ್ರಹ್ಮರೂಪವಾದ ಅಗ್ನಿಯಲ್ಲಿ ಬ್ರಹ್ಮದಿಂದಲೇ ಹೋಮಮಾಡಲ್ಪಟ್ಟಿತು; ಬ್ರಹ್ಮರೂಪವಾದ ಕರ್ಮದಲ್ಲಿ ಸಮಾಧಿಸ್ಥನಾದ ಪುರಷನಿಂದ ಹೊಂದಬೇಕಾದದ್ದು ಬ್ರಹ್ಮವೇ". ಕೆಲವು ಯೋಗಿಗಳು ಉಪಾಸನೆಯಿಂದಲೇ ದೈವಯಜ್ಞವನ್ನು ಮಾಡುತ್ತಾರೆ; ಇನ್ನು ಕೆಲವರು ಬ್ರಹ್ಮವೆಂಬ ಅಗ್ನಿಯಲ್ಲಿ ಯಜ್ಞದಿಂದಲೇ ಯಜ್ಞವನ್ನು ಹೋಮಮಾಡುತ್ತಾರೆ". (ಯಜ್ಞ, ಯಜ್ಞಾಗ್ನಿ, ಯಜ್ಞಕ್ಕೆ ಬೇಕಾದ ಕರಣಗಳು, ಹವಿಸ್ಸು ಮತ್ತು ಯಜ್ಞವನ್ನು ಮಾಡುವ ಕರ್ತೃ - ಎಲ್ಲಾ ಬ್ರಹ್ಮಮಯವೆಂದು ಈ ಶ್ಲೋಕದಲ್ಲಿ ಸೂಚಿಸಿದೆ. ಮುಮುಕ್ಷುವು ಮಾಡುವ ಸಮಸ್ತ ಕರ್ಮವೂ ಬ್ರಹ್ಮಾತ್ಮಕವೆಂದೇ ಭಾವಿಸಬೇಕು, ಏಕೆಂದರೆ ಪರಬ್ರಹ್ಮಕ್ಕಿಂತ ವ್ಯತಿರೇಕವಾದ ಯಾವ ವಸ್ತುವೂ ಇಲ್ಲ. ಉಪಾಧಿಗಳಿಂದ ಕೂಡಿದ ಆತ್ಮನನ್ನು ನಿರುಪಾಧಿಕವಾದ ಪರಬ್ರಹ್ಮ ಸ್ವರೂಪದಲ್ಲಿ ಕಾಣುವುದೇ ಬ್ರಹ್ಮಾಗ್ನಿಯಲ್ಲಿ ಮಾಡುವ ಯಜ್ಞ)

           ಯಜುರ್ವೇದ (೩.೫.೧೧) ಮತ್ತು ಋಗ್ವೇದ (೧.೧೬೪.೫೦) ಹೀಗೆ ಹೇಳುತ್ತವೆ, "यज्ञेन यज्ञमयजन्त देवाः ಯಜ್ಞೇನ ಯಜ್ಞಮಯಜಂತ ದೇವಾಃ" ಅಂದರೆ ಯಜ್ಞ ಭಾವನೆಯಿಂದ ದೇವತೆಗಳು ಯಜ್ಞವನ್ನು ಮಾಡಿದರು. (ಈ ಮಂತ್ರವು ಪುರುಷ ಸೂಕ್ತದ ಕಡೆಯ ಮಂತ್ರದ ಆರಂಭಿಕ ಸಾಲಾಗಿದೆ).

          ಯಜ್ಞದ ಕುರಿತು ಇನ್ನಷ್ಟು ವಿವರಗಳು: (ಋಗ್ವೇದ ಸಂಹಿತೆಯಲ್ಲಿನ ಸ್ವಾಮಿ ದಯಾನಂದ ಸರಸ್ವತಿಯವರ ಮಾತುಗಳಲ್ಲಿ). ಯಜ್ಞವೆಂದರೆ ಕೇವಲ ಆಹುತಿಗಳನ್ನರ್ಪಿಸುವ ಅಗ್ನಿಯಾಚರಣೆಯಲ್ಲ. ಅದು ಸಾಮಾಜಿಕ ಸ್ತರದಲ್ಲಿ ಕೈಗೊಳ್ಳುವ ಎಲ್ಲಾ ಸಾಧನೆಗಳನ್ನು ಒಳಗೊಂಡಿರುತ್ತದೆ; ಯಾವುದರ ಮೂಲಕ ಬಡತನ, ಯಾತನೆ, ರೋಗ-ರುಜಿನ ಮತ್ತದರ ಪರಿಣಾಮಗಳಿಂದ ಉಂಟಾಗುವ ಸ್ಥಿತಿಯನ್ನು ಬದಲಾಯಿಸಬಹುದೋ ಅದೆಲ್ಲವೂ ಯಜ್ಞವಾಗಿರುತ್ತದೆ ಮತ್ತು ತನ್ಮೂಲಕ ಉತ್ತಮ ಭವಿಷ್ಯ; ಮರಣಕ್ಕೂ ಮೀರಿದ್ದು ಅದರ ಆಶ್ವಾಸನೆಯೂ ಇರುತ್ತದೆ. ಕೇವಲ ಯಜ್ಞವನ್ನು ಮಾಡುವುದರ ಮೂಲಕ ಈ ಗುರಿಯನ್ನು ತಲುಪಲಾಗದು; ಅದರ ಹಿಂದೆ ಕಠಿಣವಾದ, ಪ್ರಾಮಾಣಿಕವಾದ ಮತ್ತು ಶ್ರದ್ಧಾಪೂರ್ವಕ ಭಕ್ತಿ ಇವುಗಳಿದ್ದರೆ, ಜ್ಞಾನದ ಎಲ್ಲಾ ವಿಭಾಗಗಳಲ್ಲಿ ಅದು ವಿಜ್ಞಾನ, ತಾಂತ್ರಿಕತೆ, ತತ್ವಶಾಸ್ತ್ರ  ಅಥವಾ ಆಧ್ಯಾತ್ಮಿಕತೆಯಾಗಲಿ ಅವು ಯಜ್ಞದ ಫಲವನ್ನು ಖಚಿತವಾಗಿ ಕೊಡುತ್ತವೆ. 

                                                                                                  ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 875 - 881 http://www.manblunder.com/2010/06/lalitha-sahasranamam-875-881.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Wed, 12/18/2013 - 03:08

ಶ್ರೀಧರರೆ,"೧೮೮. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ಧ :-)
.
ಲಲಿತಾ ಸಹಸ್ರನಾಮ ೮೭೫- ೮೮೧
________________________________
.
೮೭೫. ತ್ರಿಪುರಮಾಲಿನೀ
ಪ್ರಜ್ಞೆಯ ಮೂಲಭೂತಹಂತ ಜಾಗ್ರತ್-ಸ್ವಪ್ನ-ಸುಷುಪ್ತಿ, ಪರಿಪಾಲಕಿ ಲಲಿತೆ
ಅಂತಿಮ ಶಿವಪ್ರಜ್ಞೆ, ನಿದಿರೆಗು ಸ್ವಪ್ನ-ಎಚ್ಚರಕು ಮಧ್ಯೆ ದೈವಿಸಂವಹನವಂತೆ
ಶ್ರೀಚಕ್ರದ ಆರನೆ ಆವರಣದುಪಸ್ಥಿತ ಯೋಗಿನಿ, ಸರ್ವರಕ್ಷಾಕರ ಉಪದೇವಿ
ಕಾಮ-ಶಿವ ಸತಿಮಾಲಿನಿ ದೇವಿ, ತ್ರಿಪುರಮಾಲಿನೀ ಪ್ರತಿನಿಧಿ ಸೃಷ್ಟಿಗೆ ಛವಿ ||
.
೮೭೬. ನಿರಾಮಯಾ
ರೋಗದ ಬಗೆಯೆರಡಕು ಅತೀತಳು ದೇವಿ, ಶರೀರಾ ಮಾನಸಿಕ
ರೋಗರಹಿತಳಾಗಿ ನಿರಾಮಯಾ ಲಲಿತೆ, ಸರ್ವರುಜಾಪಹಾರಕ
ರೋಗ ಚಿಕಿತ್ಸೆಯೆ ಮಯ, ಕೊಡುವ ವೈದ್ಯೆಯಾಗಿ ದೇವಿ ಅಭಯ
ಶಾರೀರಿಕ ಮಾನಸಿಕದೆಲ್ಲಾ ರೋಗ ಪರಿಹರಿಸುತ ಮಾತೆ ವಿಜಯ ||
.
೮೭೭. ನಿರಾಲಂಬಾ
ಸೃಷ್ಟಿ ಸ್ಥಿತಿ ಲಯ ಕ್ರಿಯೆ ದೇವಿ, ಯಾರನವಲಂಬಿಸದೆ ನಡೆಸುವಳು
ಅವಲಂಬಿಸಳು ಸಾಕ್ಷಾತ್ ಶಿವನನು, ಭೇದವಿರದೇಕತೆ ಶಿವಶಕ್ತಿಗಳು
ಯಾವುದೆ ಆಧಾರವಿರದ ನಿರಾಲಂಬಾ, ಲಲಿತೆಯನಾಧರಿಸಿಹವೆಲ್ಲ
ಸರ್ವಕು ಆಧಾರವಿಹ ಸೂತ್ರಧಾರಿಣಿ, ನಿರಾಧಾರಿಣಿಯಾಗಿಹೆ ಸಕಲ ||
.
೮೭೮. ಸ್ವಾತ್ಮಾರಾಮಾ
ಶಿವಶಕ್ತಿ ವಿವಿಧ ಕಾರ್ಯನಿರ್ವಹಿಸುವ ಸಂಯುಕ್ತರೂಪ, ಶಿವಾ ಸಾಕ್ಷೀಭೂತ
ವಿಮರ್ಶಾರೂಪಿ ಶಿವನಿಚ್ಛಾಶಕ್ತಿಯಭಿವ್ಯಕ್ತಿ ಶಕ್ತಿ, ಸ್ವತಂತ್ರ ಕ್ರಿಯಾಶೀಲ ಮುಕ್ತ
ಪರಬ್ರಹ್ಮ ತಾನೆ ಹೋಳಾಗಿ ಸೃಜಿಸಿದ ಶಿವಶಕ್ತಿ ಅಚರಚರಶಕ್ತಿ ಇಬ್ಬಾಗಕ್ರಮ
ಮನ ಮೈದಾನದೆ ವಿಶ್ವ ಸೃಷ್ಟಿ ಲಯದಾಟಕೆ, ಅತ್ಮಸಂತುಷ್ಟೆ ಸ್ವಾತ್ಮಾರಾಮಾ ||
.
೮೭೯. ಸುಧಾಸ್ರುತಿಃ
ದೈವಿ ಮಕರಂದಾಮೃತ ಸ್ರವಿಸುತ, ದೇವಿ ಲಲಿತೆಯಾಗಿಹಳು ಸುಧಾಸ್ರುತಿಃ
ಕುಂಡಲಿನಿ ಆಜ್ಞಾಚಕ್ರದೆ ಪ್ರಚಂಡ ಶಕ್ತಿಯಲ್ಹೊಳೆದು ಪ್ರಸರಿಸಿ ಅರಿವಿನ ಗ್ರಂಥಿ
ಪ್ರಚೋದಿಸೆ ಗ್ರಂಥಿ ಪ್ರಕಾಶ, ಒಳನಾಲಿಗೆಯಲಿ ಅನುಭವ ಹರಿದ ಮಕರಂದ
ಗಂಟಲಿನಲಿ ತೊಟ್ಟಿಕ್ಕುವ ಅಮೃತ, ಸಾಧಕನ ಸ್ಥಿತಿಯಾಗಿರಲೆ ಪರಮಾನಂದ ||
.
೮೮೦. ಸಂಸಾರ-ಪಂಕ-ನಿರ್ಮಗ್ನ-ಸಮುದ್ಧರಣ-ಪಂಡಿತಾ 
ಸಂಸಾರದ ಕೆಸರಲಿ ಸಿಲುಕಿದ ಭಕ್ತರ ಪಾರುಮಾಡುವ ಸಮರ್ಥೆ ಲಲಿತಾ
ಆಧ್ಯಾತ್ಮಿಕದತ್ತ ನಡೆಸೊ ಸಂಸಾರ-ಪಂಕ-ನಿರ್ಮಗ್ನ-ಸಮುದ್ಧರಣ-ಪಂಡಿತಾ 
ಅನುಗಾಲವು ದೇವಿ ಚಿಂತನೆಯಲಿ, ಸಂಸಾರ ಬಂಧನಕೆ ಸಿಲುಕದ ಯುಕ್ತಿ
ದೃಢ ಚಿತ್ತವಿರಿಸಿದವರಿಗೆ ದೇವಿ, ಸಂಸಾರ ಸಾಗರದಿಂದಲಿ ತ್ವರಿತದೆ ಮುಕ್ತಿ ||
.
೮೮೧. ಯಜ್ಞ-ಪ್ರಿಯಾ
ದೇವ ದೇವಿ ಪ್ರೀತ್ಯರ್ಥ ಬಗೆಬಗೆಯಾಹುತಿ ಯಜ್ಞದೆ, ದೇವಿ ಯಜ್ಞ ಪ್ರಿಯಾ
ಯಜ್ಞ-ಯಜ್ಞಾಗ್ನಿ-ಯಜ್ಞೋಪಕರಣ-ಹವಿಸ್ಸು-ಕರ್ತೃ ಆಗೆಲ್ಲವು ಬ್ರಹ್ಮಮಯ
ಅನುಜ ಪ್ರಿಯ ವಿಷ್ಣುವು ಯಜ್ಞ, ಸಂಕಟ ವೈಪರೀತ್ಯ ಬದಲಾಯಿಸೆ ಯಜ್ಞ
ಕಠಿಣ ಶ್ರಮ ಪ್ರಾಮಾಣಿಕ ಶ್ರದ್ಧಾಭಕ್ತಿಗೆ ಖಚಿತ ಫಲ, ಸಕಲಕ್ಷೇತ್ರದ ಜ್ಞಾನ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು