ಇಂದಿನ ನಮ್ಮ ಸಂಘ ಸಂಸ್ಥೆಗಳು

ಇಂದಿನ ನಮ್ಮ ಸಂಘ ಸಂಸ್ಥೆಗಳು

ಮೊನ್ನೆ ಯಾವುದೋ ಕಾರಣಕ್ಕಾಗಿ, ಮೆಜೆಸ್ಟಿಕ್ ಕಡೆ ಹೋಗುತ್ತಿದ್ದೆ. ಅದೇ ಸಿಟಿ ಬಸ್ನಲ್ಲಿ ಕುಳಿತು ನನ್ನ ಪ್ರಯಾಣ ಸಾಗಿತ್ತು. ಬಸ್ಸು ಟೌನ ಹಾಲ್ ಸಿಗ್ನಲ್ ಹತ್ತಿರ ನಿಂತಿತ್ತು. ಬೆಂಗಳೂರಲ್ಲಂತೂ ಬಿಡಿ, ಜಾರಿ ಬಿದ್ದರೂ ಸಿಗ್ನಲ್ ಸಿಗತ್ತೆ. ಅಷ್ಟೊಂದು ಸಿಗ್ನಲಗಳು. ಹಾಗೆ ಪಕ್ಕದಲ್ಲಿರುವ ಟೌನ ಹಾಲ್ ಕಡೆ ಮುಖತಿರುಗಿಸಿದೆ, ನೋಡಿ ಆಶ್ಚರ್ಯವಾಯಿತು. ಸುಮಾರು ಸಾವಿರಕ್ಕು ಹೆಚ್ಚು ಜನ ಪುಲ್ಲ್ ಶೂಟು ಬೂಟೂ ಹಾಕಿಕೊಂಡು, ಕುತ್ತಿಗೆಗೆ ಕೆಮರಾ ತೂಗಿಕೊಂಡು ಸಾಲಾಗಿ ನಿಂತಿದ್ದರೂ. ನಾನಂತು ಇಷ್ಟೊಂದು ಜನ ಕ್ಯಾಮರಾ ತೂಗಿಕೊಂಡು ನಿಂತಿದ್ದನ್ನ ನೋಡಿರಲಿಲ್ಲ. ಯಾರಿಗೆ ಗೊತ್ತು ಯಾರಾದರು ಸರಿಯಾಗಿ ನೋಡಿ ಸೂಚಿಸಿದ್ದಲ್ಲಿ ಗಿನ್ನಿಸ್ ದಾಖಲೆಗೆ ಸೇರಿಸಬಹುದಿತ್ತು. ಯಾಕಪ್ಪ ಇಷ್ಟೊಂದು ಜನ ಅಂತ ಹಾಗೆ, ಪುರಭವನದ ಇನ್ನೊಂದು ಕಡೆ ನೋಡಿದೆ. ಅಲ್ಲಿ ಚಿಕ್ಕದೊಂದು ಬ್ಯಾನರ ತೂಗು ಹಾಕಲಾಗಿತ್ತು. " ಬೆಂಗಳೂರು ಪೋಟೋ ಮಾಲಿಕರ ಸಂಘ "

ಆಹಾ! ಹೇಗಿದೆ ನೋಡಿ, ಪುರಭವನವಂತು ಇರುವುದು ಅದಕ್ಕೆ, ದಿನಕ್ಕೊಂದು ಸಂಘ ಸಂಸ್ಥೆಗಳ ಸಮಾರಂಭ ನಡಿತಾನೆ ಇರುತ್ತೇ. ಒಂದು ದಿನ ಪೋಟೋ ಮಾಲಿಕರ ಸಂಘ, ಇನ್ನೊಂದು ದಿನ ಹೋಟೇಲ್ ಮಾಲಿಕರ ಸಂಘ, ಬಾರ್ ಮಾಲಿಕರ ಸಂಘ, ತಿರುಬೋಕಿಗಳ ಸಂಘ ಹೀಗೆ ದಿನಕೊಂದು ಸಂಘಗಳ ಕಾರ್ಯಕ್ರಮ. ಇದು ಪುರಭವನದಲ್ಲಷ್ಟೇ ಅಲ್ಲ, ಎಲ್ಲ ಕಡೆನೂ ಇದೇ ಪರಿಸ್ಥಿತಿ. ನಮ್ಮ ದೇಶದಲ್ಲಂತೂ ಬಿಡಿ, ನಾಯಿಕೊಡೆ ತರಹ, ದಿನಕ್ಕೊಂದು ಒಂದೊಂದು ಸಂಘಗಳು ಹುಟ್ಟುತ್ತಾನೇ ಇರುತ್ತದೆ. ನನಗನಿಸುತ್ತೆ ನಮ್ಮ ದೇಶದ ಜನ ಸಂಖ್ಯೆಗಿಂತ ಈ ಸಂಘಗಳ ಸಂಖ್ಯೆಯೇ ಹೆಚ್ಚಿರ ಬಹುದು ಅಂತಾ. ಹಾಗಿದ್ದರೆ ಈ ಸಂಘಗಳ ಸಾಧನೆಯಾದರೂ ಏನು? ಪ್ರತಿಯೊಂದು ಸಂಘವು ತನ್ನ ಸಂಘ ಪರಿವಾರಕ್ಕೆ ಒಳಪಡುವ ತೊಂದರೆಯಲ್ಲಿರುವ, ಬಡತನದಲ್ಲಿರುವ ಜನತೆಗಾಗಿ ಕೇವಲ ೫ರಿಂದ ೧೦ ಪ್ರತಿಶತ ಕೆಲಸ ಮಾಡಿದ್ದರು, ನಮ್ಮ ದೇಶ ಎಷ್ಟೋ ಮುಂದಿರುತ್ತಿತ್ತು.

ಇನ್ನೂ ಕೆಲವು ಸಂಘಗಳಿವೆ, ಅದಕ್ಕೆ ಸೇರ ಬಯಸುವ ಜನ ಇಂತಿಷ್ಟು ಹಣ ಪಾವತಿ ಮಾಡಿ ಸದಸತ್ವವನ್ನು ಪಡಿಬೇಕು ಅಂತಾ. ಅದರಲ್ಲೂ ವಿವಿಧ ಬಗೆ, ಅಜೀವ ಸದಶ್ಯತ್ವ, ಗೊಲ್ಡ್ ಪ್ಲ್ಯಾನ್, ಪ್ಲೆಟಿನಂ ಪ್ಲ್ಯಾನ್, ಹಾಗೆ ಹೀಗೆ ಅಂತಾ. ಆ ಮೇಲೆ ಮಾಡುವುದಾದರೂ ಏನು. ತಿಂಗಳಿಗೋ, ವರ್ಷಕೋ ಒಂದು ಕಿತ್ತು ಹೋಗಿರೋ ಸಮಾರಂಭ ಮಾಡಿ, ಹಾಗೆ ಹೀಗೆ ಅಂತಾ ಬೊಗಳೆ ಬಿಡೋದು. ಇನ್ನು ಕೆಲವು ಸಂಘಗಳಂತು ಹಣಾ, ಹೆಂಡ, ಹೆಣ್ಣು ಅಂತಾನೇ ಇರುತ್ತವೆ. ಹೊಸ ವರ್ಷ ಬಂದರೆ ಯಾವುದೋ ಒಂದು ನಟಿಯನ್ನಾ ತಂದು ನಂಗಾ ನಾಜ್ ಮಾಡಿಸೋದು. 

ನನಗಿನ್ನು ನೆನಪಿದೆ, ನಾನು ಬೆಂಗಳೂರಿಗೆ ಬಂದ ಆರಂಭದ ದಿನಗಳು. ಆಗಿನ್ನೂ ನೌಕರಿ ಅಂತಾ ಏನು ಇರಲಿಲ್ಲ. ಅಪ್ಪಾ- ಅಮ್ಮಾ ಕಳಿಸೋ ಹಣದಿಂದಲೇ ನನ್ನ ಜೀವನ ಹಾಗಿರೋವಾಗ ಯಾವನೋ ಒಬ್ಬ ರಷಿದಿ ಪುಸ್ತಕದೊಂದಿಗೆ ಬಂದು ನೋಡಪ್ಪಾ ನಮ್ಮದೇ ಆದ ಒಂದು ಸಂಘ ಇದೆ. ನೀನೂ ಯಾಕೆ ಸೇರಿಕೋ ಬಾರದು ಅಂತಾ! ಒಂಬತ್ತು ವರ್ಷಗಳ ಹಿಂದೆ ಅದರ ಸದಸ್ಯತ್ವದ ಬೆಲೆ ಒಂದು ಸಾವಿರ ಮಾತ್ರ. ಆದರೆ ನನಗೆ ಕನಿಷ್ಟ ಹತ್ತರಿಂದ, ಹದಿನೈದು ದಿನದ ಊಟ, ತಿಂಡಿಯ ಖರ್ಚು. ನಾನೇನಾದ್ರು ಆ ಸಂಘದ ಸದಸ್ಯನಾದರೆ ಹತ್ತರಿಂದ, ಹದಿನೈದು ದಿನ ಉಪವಾಸ ಇರಬೇಕಾಗಿರುತ್ತಿತ್ತು. ಅವನಿಗೆ ಹೇಳಿದೆ ನೋಡಾಪ್ಪಾ ನನ್ನಿಂದ ಸಾದ್ಯವಿಲ್ಲ ಅಂತಾ. ಎಷ್ಟು ವಿಚಿತ್ರ ಅಲ್ವಾ, ನಾನು ಹತ್ತು- ಹದಿನೈದು ದಿನ ಉಪವಾಸವಿದ್ದು, ಯಾವಾಗಲೋ ತಿಂಗಳಿಗೋ, ವರ್ಷಕೋ ನಡೆಯುವ ಒಂದು ಹೊತ್ತಿನ ಮ್ರಷ್ಟಾನ ಬೋಜನಕ್ಕಾಗಿ, ಅರ್ಥವಿಲ್ಲದ, ಗುರಿಯಿಲ್ಲದ ಸಮಾರಂಭಕ್ಕಾಗಿ ಒಂದು ಸಾವಿರ ರೂಪಾಯಿ ಕೊಡಬೇಕಿತ್ತು.

ಇಂದಿನ ಬಹುತೇಕ ಎಲ್ಲ ಸಂಘಗಳಿರೋದು ತಮ್ಮದೇ ಆದ ಸ್ಟೇಟಸ್ ಗೋಸ್ಕರ, ಹಣಕ್ಕೋಸ್ಕರ. ಹಣ- ಸ್ಟೇಟಸ ಇಲ್ಲಾ ಅಂದ್ರೆ ಇವತ್ತು ಯಾವ ಸಂಘ ಸಂಸ್ಥೆಗಳಿಗೂ ಅಡಿಪಾಯ ಅಂತಾನೇ ಇರ್ತಾ ಇರಲಿಲ್ಲ. ಸಾರ್ವಜನಿಕ ಹಿತರಕ್ಷಣೆಗೆ, ಬಡವರ ಕಷ್ಟಕ್ಕಾಗಿ ಹೋರಾಡುವಂತ ಸಂಘಗಳು ತುಂಬಾ ವಿರಳವಾಗಿವೆ, ಕೇವಲ ಬೆರಳೆಣಿಕೆಯಷ್ಟು ಸಂಘಗಳು ಇತಂಹ ಕಾರ್ಯದಲ್ಲಿ ತೊಡಗಿವೆ. ಇನ್ನು ಕೆಲವು ಸಂಘಗಳಂತು ಬಿಡಿ ಹೆಸರಿಗೆ ಸಮಾಜೋದ್ದಾರ, ಮಾಡೋದೆಲ್ಲ ನಾಲಾಯಕ್ ಕೆಲಸಗಳು. ಹೀಗೆ ಅರ್ಥವಿಲ್ಲದೆ  ಸಮಯ ವ್ಯರ್ಥ ಮಾಡೋ ಇಂತಹ ಸಂಘ ಸಂಸ್ಥೆಗಳೇಕೇ ಬೇಕು? ಅದರಿಂದ ನಮಗೇನು ಪ್ರಯೋಜನ ಅಲ್ಲವೇ? ಹೀಗೆ ಮಾಡೋದು ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನಿಸುತ್ತದೆ ಅಲ್ಲವೆ? ಈಗಂತೂ ಸಂಘಕ್ಕಾಗಿ ಹಣವೋ ಅಥವಾ ಹಣಕ್ಕಾಗಿ ಸಂಘವೋ ಎನ್ನುವುದೇ ನಮಗೆ ತಿಳಿಯದಾಗಿದೆ.

‍‍-‍ಮಂಜು ಹಿಚ್ಕಡ್

Rating
No votes yet