ತರ್ಕ - ಕುತರ್ಕ

ತರ್ಕ - ಕುತರ್ಕ

ಚಿತ್ರ

ತರ್ಕ - ಕುತರ್ಕ 
=========
ಮಧ್ಯಾನ ಊಟದ ಸಮಯಕ್ಕೆ ಫೋನ್ ಬಂದಿತ್ತು.
ನನ್ನ ಕಸಿನ್ ಸುಮ್ಮನೆ ಹೀಗೆ ಕಾಲ್ ಮಾಡೋದು, ನಂತರ ಏನಾದರು ಮಾತನಾಡೋದು, ಅಭ್ಯಾಸ. ಮಾತಿಗೆ ಇಂತದೆ ವಿಷಯವಾಗಲಿ, ಕಾಲಮಿತಿಯಾಗಲಿ ಇರಲ್ಲ. ಸರಿಯಾಗಿ ಹೇಳಬೇಕು ಅಂದರೆ ’ಕಾಡುಹರಟೆ’. 

’ಏನಪ್ಪ ಏನು ಮಾಡ್ತಾ ಇದ್ದೀಯ, ಊಟ ಆಯ್ತ, BUSY’ನ  ಎಲ್ಲ ಪ್ರಶ್ನೆಗಳು ಮುಗಿದು, ಮೈಲ್ ನಲ್ಲಿ ಕಳಿಸಿದ್ದ ಮೆಸೇಜ್, 
ವಾಯೇಜರ್ ಬಗ್ಗೆ ಮಾತು ಪ್ರಾರಂಭವಾಯಿತು, ಅಲ್ಲಿಂದ ಭಾರತದವರು ಚಂದ್ರಲೋಕಕ್ಕೆ ಕಳಿಸಿದ ನೌಕೆ, ಮಂಗಳಕ್ಕೆ ಕಳಿಸುತ್ತಿರುವ ನೌಕೆ ಎಲ್ಲದರ ಬಗ್ಗೆ ’ವಿಧ್ವತ್ ಪೂರ್ಣ’ ಚರ್ಚೆಯಾಯಿತು. ಸರಿ ಮುಂದೇನು, 

ಅವನು ಹೇಳಿದ
"ಅದೆಲ್ಲ ಸರಿ ನಮ್ಮ ಭಾರತ ಬಡರಾಷ್ಟ್ರವಲ್ಲವೆ, ಇಷ್ಟೊಂದು ಕೋಟಿ ಕೋಟಿ ಹಣ ಖರ್ಚು ಮಾಡಿದರೆ ಹೇಗೆ. ಅಷ್ಟು ಹಣದಲ್ಲಿ ಬಡವರಿಗೆ ಒಂದು ವರ್ಷ ಕೂಡಿಸಿ ಊಟಹಾಕಬಹುದಿತ್ತು, ಎಂದು ಬುದ್ದಿಜೀವಿಗಳೆಲ್ಲ, ಗಲಾಟೆ ಎಬ್ಬಿಸುತ್ತಾರೆ, ಸರ್ಕಾರದ ಹಣ ಅಷ್ಟೊಂದು ವ್ಯರ್ಥವಲ್ಲವ?" ಎಂದ.

"ಹೋಗಲಿ ಬಿಡು, ಸರ್ಕಾರದ ಹಣ ತಾನೆ, ನಿನ್ನ ಹಣ ಅಲ್ಲವಲ್ಲ, ನೀನು ಚಂದ್ರಲೋಕಕ್ಕಂತು ಹೋಗುವದಿಲ್ಲ " ಅಂದೆ

ಅವನಿಗೆ ವಿಷಯ ಸಿಕ್ಕಿತ್ತು, 
"ಸರ್ಕಾರದ ಹಣ ಎಂದರೆ ಹೇಗೆ, ಅದು ನನ್ನ ಹಣವೂ ಹೌದು, ಸರ್ಕಾರದ ಹಣವೆಂದರೆ ಏನು, ನಮ್ಮ ನಿಮ್ಮಲ್ಲರ ಕೈಲಿ ಕಟ್ಟಿಸಿಕೊಂಡಿರುವ ಟ್ಯಾಕ್ಸ್ ಹಣವಲ್ಲವೆ. ಹಾಗಾಗಿ ಪ್ರತಿಯೊಬ್ಬರಿಗು ಅದರ ಬಗ್ಗೆ ಮಾತನಾಡಲು ಹಕ್ಕಿದೆ" 

"ಸರಿಯಪ್ಪ ಹಕ್ಕಿದೆ, ಆದರೆ ಹಣವೆಂದರೆ ಏನು, ಅದೊಂದು ಪೇಪರ್ ಪೀಸ್ ತಾನೆ, ಹೋದರೆ ಹೋಗುತ್ತೆ ಬಿಡು, ಅದೇ ಹಣದಿಂದ ಏನು ಏನೊ ಮಾಡಲು ಸಾದ್ಯವಿತ್ತು ನಿಜ, ಆದರೆ ಸ್ವಲ್ಪ ಬಾಗ ಹೀಗೆ, ಮನುಷ್ಯನ ಕುತೂಹಲ ತಣಿಸಲು , ನಿಗೂಡಗಳನ್ನು ಅರ್ಥಮಾಡಿಕೊಳ್ಳಲು ಖರ್ಚು ಮಾಡಿದ್ದಾರೆ ಅಂದುಕೋ" 

"ಇರಬಹುದು, ಹಣ ಎಂದರೆ ಬರಿ ಪೇಪರ್ ಇರಬಹುದು, ಆದರೆ ಅದು ಹೊರಗಿನ ರೂಪವಾಯಿತು, ಹಣ ಎನ್ನುವದೊಂದು ತರ್ಕ, ಒಂದು ಅಮೂರ್ಥರೂಪ,  ಈಗ ನನ್ನ ಹತ್ತಿರ ಇರುವ ಹಣ ಎಂದರೆ ಏನಾಯಿತು, ಅದು ನನ್ನ ದುಡಿಮೆಯ ಉಳಿತಾಯದ ರೂಪ, ನನ್ನ ದುಡಿಮೆಯನ್ನು, ಕೆಲಸವನ್ನು ಹಣದ ರೂಪಕ್ಕೆ ಬದಲಾಯಿಸಿಕೊಂಡು, ಅದನ್ನು ನನಗೆ ಬೇಕಾದ ರೀತಿಗೆ ಖರ್ಚು ಮಾಡುವೆ, ಸರ್ಕಾರ ನನ್ನ ಹತ್ತಿರ ಕಂದಾಯ ರೂಪದಲ್ಲಿ, ಸೇಲ್ಸ್ ಟ್ಯಾಕ್ಸ್ ರೂಪದಲ್ಲಿ, ಸರ್ವೀಸ್ ಟ್ಯಾಕ್ಸ್ ರೂಪದಲ್ಲಿ, ಇನ್ ಕಮ್ ಟ್ಯಾಕ್ಸ್ ರೂಪದಲ್ಲಿ ಹಣ ಸಂಗ್ರಹಿಸುತ್ತಿದೆ ಅಂದರೆ, ನನ್ನ ದುಡಿಮೆಯ ಸ್ವಲ್ಪ ಬಾಗ , ನನ್ನ ಶ್ರಮವನ್ನು ಅವರಿಗೆ ದಾನ ಮಾಡುತ್ತಿರುವೆ ಎಂದು ಅರ್ಥ, ಅಂತಹ ಹಣವನ್ನು ವ್ಯರ್ಥ ಮಾಡುವುದು ಸರಿಯೆ " 

"ಆಯಿತಪ್ಪ ಈಗ ಹಣ ಎಂದರೆ ನಿನ್ನ ಶ್ರಮದ ರೂಪ ಎಂದೆ ಭಾವಿಸೋಣ, ನಿನ್ನ ಶ್ರಮದ ಸ್ವಲ್ಪ ರೂಪವನ್ನು ಅಲ್ಲವೆ ನೀನು ಟ್ಯಾಕ್ಸ್ ಕಟ್ಟುವುದು?" 

"ಹೌದು" 

"ಸರಿ ಈಗ ಸರ್ಕಾರ ನಿನಗೆ ಎಂದು, ಸಂಬಳ ಕೊಡುತ್ತದಲ್ಲ, ಅದರ ಅರ್ಥವೂ ಅದೇ ತಾನೆ, ನಿನ್ನ ಒಂದು ದಿನದ ಎಂಟುಗಂಟೆಗಳ ದುಡಿಮೆಗೆ ಪ್ರತಿಫಲವಾಗಿ, ಅಥವ ಸರ್ಕಾರವಲ್ಲದಿದ್ದರೂ, ಕಂಪನಿಯೊ, ಅಂಗಡಿಯೋ, ಅಥವ ಪ್ರವೇಟ್ ಕಂಪನಿಯೇ ಆಗಲಿ, ದಿನದ ದುಡಿಮೆಗೆ ತಾನೆ ಹಣ ಕೊಡುವುದು" 

"ಹೌದು" 

"ಈಗ ನೀನೆ ಆಗಲಿ, ಅಥವ ಯಾರೆ ಸರ್ಕಾರದ ಕೆಲಸವೆ ಆಗಲಿ, ಅಥವ ಕಂಪನಿಯೋ, ಅಥವ ಬ್ಯಾಂಕೋ, ಅಥವ ಪ್ರವೇಟ್ ಕಂಪನಿಯ ನೌಕರನೇ ಆಗಲಿ , ದುಡಿಮೆಯ ಪೂರ್ಣ ಅವಧಿ ಕೆಲಸ ಮಾಡುವುದಿಲ್ಲ, ಅಲ್ಲವೇ, ಕಾಫಿ ಎಂದೊ ಅಥವ ಫೋನ್ ಕಾಲ್, ಎಂದೊ ಅಥವ ಗೆಳೆಯರು ಬಂದರು, ಹುಷಾರಿಲ್ಲ, ಹೀಗೆ ನಾನಾ ಕಾರಣಗಳಿಂದ ದಿನದ ಸ್ವಲ್ಪ ಸಮಯವಾದರು ವ್ಯರ್ಥ ಮಾಡುವರಲ್ಲವೆ ?" 

"ಹೌದು..."      ಅವನ ದ್ವನಿ ಏಕೊ ಸ್ವಲ್ಪ ತಗ್ಗಿತ್ತು, 

"ಈಗ ನೀನೆ ನೋಡು ಆಫೀಸಿನ ಸಮಯದಲ್ಲಿ ನನ್ನ ಹತ್ತಿರ ಸುಮಾರು ಹದಿನೈದು ನಿಮಿಷ ಮಾತನಾಡಿದೆ ಎಂದರೆ ಏನು ಅರ್ಥ ಅಷ್ಟು ಕಾಲದ ಹಣವನ್ನು ನೀನು ಕೆಲಸ ಮಾಡುವ ಜಾಗಕ್ಕೆ ಮೋಸ ಮಾಡಿದಂತೆ ತಾನೆ ?"

"......." ಆ ಕಡೆಯಿಂದ ಉತ್ತರವಿಲ್ಲ 

"ಒಂದು ದಿನದ ಅಂತಹ ದುಡಿಮೆಯ ಹಣವನ್ನು ಲೆಕ್ಕ ಹಾಕಿದರೆ ಎಷ್ಟೋ ಆಗುತ್ತದೆ, ಹಾಗೆ ನಿನ್ನ ವರ್ಷ ಪೂರ್ತಿ ದುಡಿಮೆಯಲ್ಲಿ  ಕೆಲಸಕ್ಕೆ ಮೋಸ ಮಾಡಿದ ದುಡಿಮೆಯ ಹಣವನ್ನು ಲೆಕ್ಕ ಹಾಕಿದರೆ, ನೀನು ಕಟ್ಟುವ ಟ್ಯಾಕ್ಸ್ ಹಣಕ್ಕೆ ಹತ್ತಿರ ಹತ್ತಿರ ಸರಿ ಹೋಗುತ್ತದೆ ಅಲ್ಲವೆ ?" 

"ಅಂದರೆ ..." 

"ಅಂದರೆ ನಾವು ಯಾವ ಹಣವನ್ನು ಸರ್ಕಾರಕ್ಕೆ ಟ್ಯಾಕ್ಸ್ ರೂಪದಲ್ಲಿ ಕಟ್ಟುತ್ತೇವೋ ಸರಿ ಸುಮಾರು ಅಷ್ಟೇ ಹಣದ ಸಮಾನವಾದ ದುಡಿಮೆಯನ್ನು ವಂಚಿಸಿರುತ್ತೇವೆ, ಅಂದರೆ ನಾವು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಿಲ್ಲ ಎಂದು ಅರ್ಥವಲ್ಲವೆ ?" 

"ನೀನು ನನ್ನ ಹಾಗು ಕೆಲಸಗಾರರ ಮಾತು ಆಡಬಹುದು, ಆದರೆ ಸಾಮಾನ್ಯ ಕೂಲಿಯವರ, ಪೈಂಟರ್, ಅಥವ ಮತ್ಯಾರೊ ಇರುವರಲ್ಲ ಅವರ ಬಗ್ಗೆ ಏನು ಹೇಳುವೆ?"

"ನೀನು ಎಲ್ಲಿದ್ದರೂ ಅದೇ ಅಲ್ಲವೆ, ನಿನ್ನ ದುಡಿಮೆಯ ಸಮಯದಲ್ಲಿ ಸ್ವಲ್ಪ ತಿಂದು ಹಾಕಿರುವೆ, ಅದು ಸಿಗರೇಟ್ ಸೇದುವ ಕಾಲವಾಗಿರಬಹುದು, ಕಾಫಿ ಸಮಯ, ಮಾತಿನ ಸಮಯ ಹೀಗೆ, ಪ್ರತಿಯೊಬ್ಬರು ತಮ್ಮ ದುಡಿಮೆಯ ಸ್ವಲ್ಪ ಕಾಲ ವ್ಯರ್ಥಮಾಡುವರಲ್ಲವೆ, ಅದು ಸರಿ ಸುಮಾರು ನಾವು ಕಟ್ಟುವ ಟ್ಯಾಕ್ಸ್ ಹಣಕ್ಕೆ ಸಮನೆಂದುಕೊಂಡರೆ  ನಮ್ಮನ್ನು ಟ್ಯಾಕ್ಸ್ ಕಟ್ಟುವ ವ್ಯಥೆ ಅಷ್ಟಾಗಿ ಭಾದಿಸದು ಬಿಡು" ಎಂದೆ ತಮಾಷಿಯಾಗಿ

"ಸರಿ ಆದರೆ ವ್ಯಾಪರಿಗಳು ಅಥವ ತಳ್ಳುಗಾಡಿಯವರು ಅವರು ಯಾರದೇ ಸಮಯ ವ್ಯರ್ಥಮಾಡುವರಲ್ಲವಲ್ಲ ಅವರು ಟ್ಯಾಕ್ಸ್ ಕಟ್ಟಲ್ಲವೆ?" 
"ವ್ಯಾಪಾರಿಗಳು ಸಹ ಸರ್ಕಾರದ ಸವಲತ್ತನ್ನು ಯಾವುದೋ ರೂಪದಲ್ಲಿ ಸ್ವಾಹ ಮಾಡಿರುತ್ತಾರೆ ಬಿಡು, ಅದಕ್ಕೆ ಟ್ಯಾಕ್ಸ್ ಸಮವಾಗುತ್ತೆ " 

"ಅಂದರೆ ನೀನೀಗ ಏನು ಹೇಳುತ್ತಿರುವುದು " ಅಂದ

"ಮತ್ತೇನಿಲ್ಲ, ಈ ರೀತಿ, ಎಲ್ಲರೂ ತಮ್ಮ ವ್ಯರ್ಥಕಾಲದ ದುಡಿಮೆಯ ಹಣವನ್ನು ಸರ್ಕಾರಕ್ಕೆ ಕಟ್ಟಿರುತ್ತಾರಲ್ಲ, ಅಂತಹ ಸೋಮರಿತನದ ದುಡಿಮೆಯ ಹಣವನ್ನು ಸರ್ಕಾರ ಕಡೇಪಕ್ಷ ಒಳ್ಳೆಯ ಕಾರ್ಯಕ್ಕಾಗಿ ಉಪಯೋಗಿಸುತ್ತಿದೆ ಅಂದುಕೋ " ಎಂದೆ

ಅವನಿಗೆ ನನ್ನ ತರ್ಕ ಪೂರ್ತಿ ಅರ್ಥವಾಗಲಿಲ್ಲ, ಅವನಿಗೆ ಏಕೆ ನನಗೆ ನನ್ನ ತರ್ಕ ಪೂರ್ತಿ ಅರ್ಥವಾಗಲಿಲ್ಲ. 

"ಸರಿಯಪ್ಪ, ನನ್ನ ಊಟದಸಮಯ ಮುಗಿಯಿತು, ಒಳಹೋಗುವೆ" ಎನ್ನುತ್ತ ಫೋನ್ ಕಟ್ ಮಾಡಿದ.

ಪುನಃ ಅದೇಕೊ, ನಿನ್ನೆ ಮೊನ್ನೆ ಅವನ ಕಾಲ್ ಬಂದಿಲ್ಲ   :-)

 

ಚಿತ್ರಗಳು : 1,2,3 ಎಲ್ಲವನ್ನು ತೆಗೆದುಕೊಂಡಿದ್ದು ಈ ಲಿಂಕ್ ನಲ್ಲಿ 
https://www.google.co.in/search?q=wasting+time+in+duty+hours&source=lnms...

Rating
No votes yet

Comments

Submitted by H A Patil Mon, 12/23/2013 - 14:11

ಪಾರ್ಥ ಸಾರಥಿ ಯವರಿಗೆ ವಂದನೆಗಳು
'ತರ್ಕ ಕುತರ್ಕ' ಬಹುತೇಕ ನಮ್ಮ ಮನಸ್ಥಿತಿಯನ್ನು ಬಿಚ್ಚಿಡುವ ಒಂದು ವೈಚಾರಿಕ ಲೇಖನ, ಬರವಣಿಗೆ ಆಕರ್ಷಕವಾಗಿದೆ, ಸರಳ ವಾಗಿದೆ ಜೊತೆಗೆ ಸುಂದರವಾಗಿಯೂ ಇದೆ. ನಿಮ್ಮ ಕಸಿನ್ ಕುರಿತು ಬರತವಣಿಗೆ ಮುಗಿಸುವಾಗ << ಪುನಃ ಅದೇಕೋ ನಿನ್ನೆ ಮೊನ್ನೆ ಅವನ ಫೋನ್ ಕಾಲ್ ಬಂದಿಲ್ಲ >> ಎಂದಿದ್ದೀರಿ. ಅಲ್ಲ ಸ್ವಾಮಿ ನೀವು ಆ ರೀತಿ ಅವರನ್ನು ಕುರಿತು ಅಟ್ಟಾಡಿಸಿ ಸ್ವಲ್ಪವೂ ಕರುಣೆ ಇಲ್ಲದಂತೆ ಬರೆದು ತಲೆ ಮೇಲೆತ್ತದಂತೆ ಮಾಡಿ ಬಿಟ್ಟಿದ್ದೀರಿ, ಮತ್ತೆ ಮೇಲೆ ಕೊನೆಗೆ ಒಗ್ಗರಣೆ ಬೇರೆ ಅವರು ಹೇಗೆ ಫೋನು ಮಾಡುತ್ತಾರೆ ಸ್ವಾಮಿ, ಧನ್ಯವಾದಗಳು.