ಆಪತ್ತು ಕಾದಿದೆ ಎಚ್ಚರ!
ಪ್ರಿಯ ಸಂಪದಿಗ ಮಿತ್ರರೇ, ನನ್ನ ಅನುಭವ ಮತ್ತು ಅರಿವಿನ ಪರಿಮಿತಿಯಲ್ಲಿ ಒಂದು ಚಿಂತನೆಯನ್ನು ಮಂಡಿಸಿರುವೆ. ಇದು ನಮ್ಮ ದೇಶದ ಭವಿಷ್ಯಕ್ಕೆ ಸಂಬಂಧಿಸಿದ್ದು. ಆದ್ದರಿಂದ ಎಲ್ಲರಿಗೂ ಸೇರಿದ್ದು. ನನ್ನ ಅಭಿಪ್ರಾಯ ಸರಿಯಾಗಿರಬಹುದು ಅಥವಾ ತಪ್ಪಾಗಿರಬಹುದು.ಎರಡರಲ್ಲಿ ಒಂದಾಗಿರಲು ಮಾತ್ರ ಸಾಧ್ಯ ತಾನೇ? ನಿಮ್ಮ ಅರಿವಿನ ಬೆಳಕಿನಲ್ಲಿ ಈ ವಿಚಾರದ ಚಿಂತನೆ ಮಾಡಿ. ನನ್ನ ಚಿಂತನೆ ಸರಿ ಇದ್ದರೆ ನನಗೇನೂ ಶಹಬಾಸ್ ಗಿರಿ ಬೇಡ. ಸರಿಎನಿಸಿದರೆ ಆಗ ನಮ್ಮೆಲ್ಲರ ಹೊಣೆ ಹೆಚ್ಚಾಗುತ್ತದೆ. ತಪ್ಪು ಎಂದಾದರೆ ನನ್ನ ಊಹೆ ಎಲ್ಲಿ ತಪ್ಪಾಗಿದೆ? ಎಂದು ಹೇಳಿ. ಈಗ ವಿಷಯಕ್ಕೆ ಪ್ರವೇಶಿಸುವೆ.
ನಮ್ಮ ದೇಶದ ಜನ ಜಸಂಖ್ಯೆಯಲ್ಲಿ 60% ಕ್ಕಿಂತ ಹೆಚ್ಚಿನವರು ಯುವಕರೇ.ಅಂಕಿ ಅಂಶ ಸ್ವಲ್ಪ ಆಚೀಚೆಯೂ ಇರಬಹುದು. ಒಟ್ಟಿನಲ್ಲಿ ದೇಶದಲ್ಲಿ ಅರ್ಧ ಭಾಗಕ್ಕಿಂತ ಹೆಚ್ಚು ಯುವಕರು.ಅಂದರೆ ಸುಮಾರು 35 ವರ್ಷಕ್ಕಿಂತ ಕಿರಿಯರು. ಪ್ರಪಂಚದಲ್ಲೇ ಮೊದಲನೆಯ ಸ್ಥಾನ. ಈ ಅಂಕಿ ಅಂಶ ಕೇಳಿದೊಡನೆ ನಮ್ಮ ದೇಶದ ಬಗ್ಗೆ ಹೆಮ್ಮೆ ಪಡುವವರೇ ಹೆಚ್ಚು. ಇದರ ಹಿಂದೆ ಮುಂದೆ ಸ್ವಲ್ಪ ಚಿಂತನೆ ನಡೆಸಿದರೆ ಗಾಬರಿ ಆಗದೆ ಇರದು. ಈಗ ಯುವಕರ ಸಂಖ್ಯೆ ಹೆಚ್ಚಿದೆ ಎಂದರೆ ಇನ್ನು ಹತ್ತು ವರ್ಷಗಳ ನಂತರವೂ ಇದೇ ಪರಿಸ್ಥಿತಿ ಇರುವುದಿಲ್ಲವೆಂಬ ಅಂಶ ನಮಗೆ ತಿಳಿದಿರಬೇಕು.
ನಮ್ಮ ಯುವಕರಿಗೆ ಯಾವುದೇ ವಿಚಾರವು ಕಿವಿಗೆ ಬಿದ್ದಾಗ ಅದರ ಬಗ್ಗೆ ಸ್ವಲ್ಪ ಚಿಂತನೆ ಮಾಡುವ ಪ್ರವೃತ್ತಿ ಇದೆಯೇ? ಯುವಕರ ಸಂಖ್ಯೆ ಸಧ್ಯ ನಮ್ಮದೇಶದಲ್ಲಿ ಹೆಚ್ಚಿದೆ ಎಂಬ ಅಂಶ ತಿಳಿದಾಗ ನಾನು ಯೋಚನೆ ಮಾಡಿದ್ದೇನು ಗೊತ್ತಾ? ನನ್ನ ಬಾಲ್ಯದ ನೆನಪು ಮಾಡಿಕೊಂಡೆ. ಅಂದರೆ ಈಗ್ಗೆ ಐದು ದಶಕಗಳ ಹಿಂದೆ. ಆಗ ನಮ್ಮ ನಮ್ಮ ಮನೆಯಲ್ಲಿ ನಮ್ಮ ಅಪ್ಪ-ಅಮ್ಮನೇ ಯುವಕರು.ಜೊತೆಯಲ್ಲಿ ನಮ್ಮ ಮನೆಯಲ್ಲಿದ್ದ ವೃದ್ಧರು ಎಷ್ಟು ಜನ ಗೊತ್ತಾ? ನಮ್ಮ ತಂದೆಯವರ ತಾಯಿ [ಅಜ್ಜಿ], ನಮ್ಮ ತಾಯಿಯವರ ತಾಯಿ[ಅಜ್ಜಿ] ನಮ್ಮ ದೊಡ್ದಮ್ಮ, ನಮ್ಮ ಸೋದರತ್ತೆ [ಇವರು ಇಬ್ಬರೂ ಚಿಕ್ಕವಯಸ್ಸಿನಲ್ಲಿ ವಿಧವೆ ಆಗಿದ್ದವರು]. ನಾವು ಆರು ಜನ ಮಕ್ಕಳು. ಅಂದರೆ ವೃದ್ಧರು-ಯುವಕರು-ಮಕ್ಕಳ ಅನುಪಾತವು 4 : 2 : 6 ಆಗಿತ್ತು. ಅಂದರೆ 12 ಜನರಲ್ಲಿ ಯುವಕರ ಸಂಖ್ಯೆ 2 ಮಾತ್ರ ಎಂಬುದನ್ನು ಗಮನಿಸಬೇಕು. ಅಂದರೆ ಯುವಕರ ಸಂಖ್ಯೆ ಪ್ರತಿಶತ 20ಕ್ಕಿಂತ ಕಡಿಮೆ. ಇದು ನಮ್ಮ ಮನೆಯ ಒ೦ದುಕಾಲದ ಉಧಾಹರಣೆ. ಅದೇ ಸಮಯದಲ್ಲಿ ನಮ್ಮೂರಲ್ಲಿ ಎಲ್ಲರ ಮನೆಯ ಜಗಲಿಯ ಮೇಲೆ ಕುಳಿತು ಕೊಂಡು ಬಿಸಲು ಕಾಯಿಸಿಸುವ ಅಜ್ಜಿಯರನ್ನು ನೋಡ ಬಹುದಿತ್ತು. ಸಾಮಾನ್ಯವಾಗಿ ವೃದ್ಧರ ಸಂಖ್ಯೆ ಕಡಿಮೆ ಇತ್ತು. ವೃದ್ಧೆಯರ ಸಂಖ್ಯೆ ಹೆಚ್ಚಿತ್ತು.
ಅಂದಿನ ಕಾಲದ ಇನ್ನೊಂದು ವಿಶೇಷವನ್ನೂ ತಿಳಿಸಿಬಿಡುವೆ. 10-12 ಜನರಿರುವ ಮನೆಯಲ್ಲಿ ದುಡಿಯುವವರೆಷ್ಟು ಜನ? ಮನೆಯ ಯಜಮಾನ ಮಾತ್ರ. ಇದೆಲ್ಲವನ್ನೂ ನಾವು ಗಮನಿಸಬೇಕು. ಈ ದಿನಗಳಲ್ಲಿ? ಪತಿ ಪತ್ನಿ ಇಬ್ಬರೂ ಉದ್ಯೋಗ ಮಾಡಬೇಕು. ಇರುವ ಒಂದು ಮಗುವನ್ನು ಅವರ ದುಡಿಮೆಯಲ್ಲಿ ಸಾಕಬೇಕು.ಅವರಪ್ಪ-ಅಮ್ಮನನ್ನು ಸಾಕುವ ಹೊಣೆಯೂ ಕಮ್ಮಿ.ಕಾರಣ ಏನು ಗೊತ್ತೇ? ಅವರಪ್ಪ ಅಮ್ಮನಿಗೆ ಐದಾರು ಜನ ಮಕ್ಕಳು. ವಯಸ್ಸಾದ ಅಪ್ಪ-ಅಮ್ಮ ಯಾರದೋ ಒಬ್ಬರ ಮನೆಯಲ್ಲಿ ಇದ್ದರಾಯ್ತು.
ಈಗ ಮತ್ತೆ ಸೀರಿಯಸ್ ವಿಚಾರಕ್ಕೆ ಬರೋಣ. ಈಗ ಯುವಕರ ಸಂಖ್ಯೆಯು ದೇಶದ ಅರ್ಧಭಾಗ ಜನಸಂಖ್ಯೆಗಿಂತ ಹೆಚ್ಚಿದೆಯಲ್ಲಾ ,ಇದು ಇನ್ನೆಷ್ಟು ವರ್ಷ? ಈಗಿನ ಯುವಕರಿಗೆಲ್ಲಾ ಸಾಮಾನ್ಯವಾಗಿ ಒಂದೇ ಮಗು ಅಲ್ಲವೇ? ಇಂದಿನ ಮಕ್ಕಳು ಯುವಕರಾದಾಗ ನಮ್ಮ ದೇಶದ ಸ್ಥಿತಿ ಏನು? ಯೋಚನೆ ಮಾಡಿ. ಅದಕ್ಕೆ ಬಹಳ ವರ್ಷಗಳೇನೂ ಬೇಕಿಲ್ಲ. ಕೇವಲ ಇನ್ನು ಹತ್ತು ವರ್ಷಗಳಲ್ಲಿ ಈಗ ನಲವತ್ತರ ಒಳಗೆ ಇರುವ ಯುವಕರೆನಿಸಿರುವವರೆಲ್ಲಾ ವೃದ್ಧರ ಗುಂಪಿಗೆ ಸೇರುತ್ತಾರೆ. ಆಗ ಇಂದಿನ ಯುವಕರ ಮಕ್ಕ್ಕಳು ಯುವಕರ ಗುಂಪುಗೆ ಸೇರುತ್ತಾರೆ. ಆಗಿನ ಸ್ಥಿತಿ ಊಹಿಸಿ ನೋಡಿ.
ಪುನ: ನನ್ನ ಬಾಲ್ಯದ ಅಂಕಿ ಅಂಶ ಹೇಳಿದೆನಲ್ಲಾ! ಅದೇಸ್ಥಿತಿಗೆ ಬರಲು ಕೇವಲ ಹತ್ತು ವರ್ಷ ಸಾಕು.ಹೇಗೆ ಅಂತೀರಾ?
ಈಗ ನಮ್ಮಂತ ವಯಸ್ಸಿನ [50-60] ಜನರು ಇದ್ದೀವಲ್ಲಾ, ಅವರು ಇನ್ನೂ ಹತ್ತಿಪ್ಪತ್ತು ವರ್ಷ ಬದುಕಿರುತ್ತೇವೆ. ಆ ಸಮಯಕ್ಕೆ ನಮ್ಮ ಮಕ್ಕಳು 40ದಾಟಿರುತ್ತಾರೆ. ಅವರ ಮಕ್ಕಳು [ ಮಗ ಅಥವಾ ಮಗಳು] ಯುವಕರೆನಿಸಿರುತ್ತಾರೆ.ನೆನಪಿರಲಿ. ನಮ್ಮ ಮಕ್ಕಳು ಒಬ್ಬ ಮಗ ಅಥವಾ ಒಬ್ಬ ಮಗಳಿಗೆ ಮಾತ್ರ ಜನ್ಮ ಕೊಟ್ಟರೆ ಅದು ನಮ್ಮ ಪುಣ್ಯ.ದೇಶದ ಪುಣ್ಯ.
ಅಂದಿನ ಪರಿಸ್ಥಿತಿ ಹೇಗಿರ ಬಹುದು? ಊಹಿಸಿ. ನಾವು ಬದುಕಿರಬಹುದು.ನಾವಿಬ್ಬರು ವೃದ್ಧರು. ಜೊತೆಗೆ ಮಗ ಸೊಸೆ ಅಥವಾ ಮಗಳು ಅಳಿಯ ಇಬ್ಬರೂ 40 ದಾಟಿರುತ್ತಾರೆ.ಅವರ ಮಗ/ಮಗಳು ಮಾತ್ರವೇ ಯುವಕರು. ಅಂದರೆ
ವೃದ್ಧರು= 4
ಯುವಕರು=1
ಈಗ ಹೇಳಿ ಅಂದಿನ ವೃದ್ಧ ಮತ್ತು ಯುವಕರ ಅನುಪಾತ ಎಷ್ಟಿರುತ್ತದೆ 4 : 1 ಅಂದರೆ ದೇಶದ ಜನಸಂಖ್ಯೆಯಲ್ಲಿ ಯುವಕರ ಸಂಖ್ಯೆ ಪ್ರತಿಶತ 25 ಮಾತ್ರ. ಆಗ ಮತ್ತೆ ದೇಶದ ತುಂಬೆಲ್ಲಾ ವೃದ್ಧರೇ!!!
ನಮ್ಮ ಮೊಮ್ಮಕ್ಕಳು ಮಕ್ಕಳನ್ನು ಹೆರುತ್ತಾರೋ ಅಥವಾ ಮಕ್ಕಳನ್ನು ಸಾಕುವ ಗೋಜಿಗೇ ಹೋಗದೇ ಕಾಲ ಹಾಕುತ್ತಾರೋ, ಯಾರಿಗೆ ಗೊತ್ತು? ಆಗ ದೇಶದ ಪರಿಸ್ಥಿತಿ? ಗಾಬರಿ ಹುಟ್ಟಿಸುತ್ತಿಲ್ಲವಾ? ಇನ್ನೊಂದು ವಿಚಾರ ಬಹಳ ಮುಖ್ಯ ವಾದುದು ಅದೇನು ಗೊತ್ತಾ? ಇದೆಲ್ಲವೂ ಹಿಂದು ಜನ ಸಂಖ್ಯೆಯ ಮೇಲೆ ಮಾತ್ರ ಪರಿಣಾಮ ಬೀರುತ್ತಿದೆ. ಹೀಗೇ ಸಾಗಿದರೆ ನಮ್ಮ ದೇಶದಲ್ಲಿ ಹಿಂದುಗಳು ಅಲ್ಪ ಸಂಖ್ಯಾತರಾಗುವ ಕಾಲ ದೂರವಿಲ್ಲ. ಕಾರಣ ಒಂದೇ ಒಂದು ಮಕ್ಕಳನ್ನು ಹೆರುವ ಅಥವಾ ಮಕ್ಕಳೇ ಬೇಡವೆನ್ನುವ ಕೆಟ್ಟಚಾಳಿ ಹಿಂದುಗಳಲ್ಲಿ ಮಾತ್ರ!!! ನೆನಪಿರಲಿ ಈ ವಿಚಾರವನ್ನು ಪೂರ್ವಾಗ್ರಹದಿಂದ ಹೇಳಿಲ್ಲ. ದೇಶದ ಮುಂದಿನ ಭವಿಷ್ಯವನ್ನು ಯೋಚಿಸಿದರೆ ಭಯವಾಗುತ್ತದೆ. ಸರಿಯಾದ ನಿರ್ಧಾರವನ್ನು ಮಾಡುವ ಹೊಣೆ ಇಂದಿನ ಯುವಕರದು. ಇಂದಿನ ಯುವ ದಂಪತಿಗಳು ಎರಡು ಮೂರು ಮಕ್ಕಳನ್ನು ಹೆರದೇ ಹೋದರೆ ನೆನಪಿರಲಿ ನಮ್ಮ ದೇಶದ ಆಯಸ್ಸೂ ಕೂದ ಕ್ಷೀಣಿಸುವುದರಲ್ಲಿ ಅನುಮಾನವಿಲ್ಲ. ಈಗೇನೋ ದೇಶದ ಜನಸಂಖ್ಯೆ ವಿಷದಂತೆ ಬೆಳೆಯುತ್ತಿದೆ ಎಂದು ಗಾಬರಿಯಾಗುತ್ತಿದೆಯಲ್ಲಾ , ಹೀಗೇ ಸಾಗಿದರೆ ನಮ್ಮ ದೇಶಕ್ಕೆ ಆಯಸ್ಸು ಹೆಚ್ಚೆಂದರೆ ಎರಡು ಶತಮಾನಗಳು!! ಮುಂದಿನ ಮಕ್ಕಳಿಗೆ ಮಕ್ಕಳೇ ಬೇಡವೆಂದರೆ ದೇಶವು ಉಳಿಯುವುದಾದರೂ ಹೇಗೆ? ಯೋಚಿಸಿ! ಯುವಕರಿಗೆ ತಿಳಿ ಹೇಳಿ. ಇಂದಿನ ಸ್ವಾರ್ಥದ ಬದುಕಿನಲ್ಲಿ ನಮ್ಮ ದೇಶಕ್ಕೆ ಆಧಾರವಾಗಿದ್ದ ಒಂದು ಭವ್ಯ ಸಂಸ್ಕೃತಿ ಪರಂಪರೆ ಮಾಯವಾಗಲು ಹೆಚ್ಚು ದಿನ ಬೇಕಿಲ್ಲ.ಜೋಪಾನ!! ಜೋಪಾನ!
ಯಾವುದೋ ಪೂರ್ವಾಗ್ರಹದಿಂದ ಹೇಳಿರುವ ಮಾತಲ್ಲಾ ಇದು. ಯಾರೇ ಒಬ್ಬ ವ್ಯಕ್ತಿ ಪೂರ್ವಾಗ್ರಹವಿಲ್ಲದೆ ಭಾರತದ ಸಂಸ್ಕೃತಿಯ ಬಗ್ಗೆ ಯೋಚಿಸಲಿ. ಋಷಿಪ್ರಣೀತವಾದ ಮತ್ತೊಂದು ಸಂಸ್ಕೃತಿ ವಿಶ್ವದಲ್ಲೆಲ್ಲೂ ಸಿಗದು.ವಿಶ್ವವು ಶಾಂತಿ ನೆಮ್ಮದಿ ಯಿಂದ ಇರಬೇಕಾದರೆ ನಮ್ಮ ಋಷಿಮುನಿಗಳು ಹಾಕಿಕೊಟ್ಟ ಮಾರ್ಗವು ವಿಶ್ವದ ಜನರಿಗೆ ಬೇಕಾಗಿದೆ. ಈ ಬಗ್ಗೆ ಹಲವಾರು ವಿದೇಶೀ ವಿದ್ವಾಂಸರು ನೀಡಿರುವ ಹೇಳಿಕೆಗಳಿವೆ. ಅಂತಹಾ ಒಂದು ಭವ್ಯ ಸಂಸ್ಕೃತಿಯ ವಾರಸುದಾರವು ನಾವು ನಾವು ನಮ್ಮ ಸಂಸ್ಕೃತಿಯನ್ನು ಕಡೆಗಣಿಸುತ್ತಾ ನಮ್ಮ ಸಂಖ್ಯೆಯನ್ನೂ ಕಡಿಮೆ ಮಾಡಿಕೊಳ್ಳುತ್ತಾ ಹೋದರೆ ನಮ್ಮ ದೇಶಕ್ಕಷ್ಟೇ ಅಲ್ಲ ಇಡೀ ವಿಶ್ವಕ್ಕೆ ಇದು ಶುಭಸೂಚಕವಲ್ಲ. ವಿಶ್ವದ ಹಿತದೃಷ್ಟಿ ಯಿಂದ ಭಾರತದ ಸಂಸ್ಕೃತಿ ಉಳಿಯಬೇಕು. ಇದನ್ನು ಉಳಿಸಬೇಕಾದವರು ಇಂದಿನ ಯುವಕರು.
Comments
ಉ: ಆಪತ್ತು ಕಾದಿದೆ ಎಚ್ಚರ!
ಹಿರಿಯರೇ
-ನೀವ್ ಈ ಲೇಖನ ಬರೆದು ಸೇರಿಸಿದ 2 ದಿನಗಳಲ್ಲೇ -
ಈ ದಿನದ(24-12-2013) ವಿಜಯ ಕರ್ನಾಟಕದಲ್ಲಿ ಒಂದು ಸುದ್ಧಿ ಇದೆ -
ಅದು ಅತಿ ಪ್ರಾಮುಖ್ಯ ವಿಷ್ಯವೇ ಸೈ. ಅದು ಚೀನಾದ ವಿವಾದಿತ ಮಸೂದೆ -ಒಂದು ಮಗು ಪಾಲಿಸಿಯ ಸಡಿಲಿಕೆ -2 ಕ್ಕೆ ಹೆಚ್ಚಿಸುವಿಕೆ ..http://bit.ly/1e7LOdK
ಸಧ್ಯದ ಜಾಗತಿಕ ಜನಸಂಖ್ಯಾ ಪ್ರಮಾಣ ನೋಡಿದರೆ ,
ಒಮ್ಮೆ ಈ ಬಗ್ಗೆ ಆಲೋಚಿಸಿದರೆ ಭವಿಷ್ಯದ ಬಗ್ಗೆ ಆತಂಕ ಆಗೋದು ಸಹಜ ..
ನಿಜಕ್ಕೂ ಇದು ಆತಂಕ ತರುವ ಸಂಗತಿ ಮತ್ತು - ಯೋಚಿಸಿ ಕಾರ್ಯಪ್ರವೃತ್ತರಾಗಲಿಕ್ಕೆ ತಕ್ಕುದಾದ ಸಮಯ ..
ಮಕ್ಕಳಿರಲವ್ವ ಮನೆ ತುಂಬಾ ಎಂದಿದ್ದು -ಮುಂದೆ
ಒಂದು ಮಗು ದೇಶಕ್ಕೆ ನಗು ಆಗಿದ್ದು
...!!
ಇಲ್ಲಿ ಕೆಲ ಲಿಂಕ್ ಇವೆ ಅವುಗಳಲ್ಲಿ ಈ ವಿಷ್ಯದ ಬಗ್ಗೆ ದೀರ್ಘ ವಿವರಣೆ ಇದೆ ..http://bit.ly/1c4cqt3
http://bit.ly/19azuX4
http://bit.ly/1jDJyBV
http://bit.ly/1eBTSIg
http://bit.ly/1eBTUQv
http://bit.ly/1gTJJqM
ಆ ಎಲ್ಲ ವಿಷಯಗಳು ಗೋಜಲು ಆಗಿವೆ -ಆದರೆ ನಿಮ್ಮ ಲೇಖನ ಸರಳವಾಗಿದ್ದು ವಿಷ್ಯದ ಪ್ರಾಮುಖ್ಯತೆ ಗಂಭೀರತೆ ಮನದಟ್ಟು ಮಾಡಿಸುತ್ತದೆ..
ಇಂತಹ ಒಂದು ಗಂಭೀರ ಪ್ರಮುಖ ಬರಹಕ್ಕೆ ಒಂದೂ ಪ್ರತಿಕ್ರಿಯೆ ಬಾರದಿರುವುದು ...!!
ಶುಭವಾಗಲಿ
\|/
In reply to ಉ: ಆಪತ್ತು ಕಾದಿದೆ ಎಚ್ಚರ! by venkatb83
ಉ: ಆಪತ್ತು ಕಾದಿದೆ ಎಚ್ಚರ!
ಏನ್ ಮಾಡೋದು ಸಪ್ತಗಿರಿವಾಸಿಯವರೇ, ಸಾಮಾನ್ಯವಾಗಿ ಜನರಿಗೆ ಬರಹಗಳು ಆಕರ್ಶಣೀಯವಾಗಿರಬೇಕು, ಗಾಭರಿ ಹುಟ್ಟಿಸುವಂತಿದ್ದರೆ ನಾಲ್ಕು ದಿನ ಇದ್ದು ಕಂತೆ ಬಿಸಾಕೋಕೆ ಇದಕ್ಕೆಲ್ಲಾ ಯಾಕೆ ತಲೆ ಕೆಡಸಿಕೊಳ್ಳಬೇಕು? ಅನ್ನೋ ಭಾವನೆ. ಒಂದು ಘಟನೆ ನೆನಪಾಗುತ್ತಿದೆ. ಸಂಜೆ ಮಳೆ ಸಮಯ. ಒಬ್ಬ ಹೆಣ್ಣು ಮಗಳು ತನ್ನ ಮಗುವನ್ನು ಶಾಲೆಯಿಂದ ಕರೆದುಕೊಂಡು ಬಂದಳು.ಬಂದ ಕೂಡಲೇ ಆಕೆಯ ಬಾಯಲ್ಲಿ ಹೊರಟ ಮಾತೇನು ಗೊತ್ತಾ? ಇನ್ನು ಹಾಳಾದ್ದು ಎಷ್ಟು ಬೇಕಾದರೂ ಮಳೆ ಸುರಿದುಕೊಳ್ಳಲಿ! ಮಳೆ ಏನೂ ನಮ್ಮ ಮಾತಿನಂತೆ ಹುಯ್ಯುವುದಿಲ್ಲ. ನನಗನ್ನಿಸಿದ್ದು ಏನು ಗೊತ್ತಾ? ನಾವು ಎಷ್ಟು ಚಿಕ್ಕದಾಗಿ ಯೋಚನೆ ಮಾಡ್ತೀವಿ! ಮಳೆ ಹುಯ್ಯುತ್ತಿದ್ದರೆ ಛತ್ರಿ ಹಿಡಿದು ಮಗುವನ್ನು ಕರೆದುಕೊಂಡು ಬರಲು ಸಾಧ್ಯವಿರಲಿಲ್ಲವೇ? ಆದರೆ ಮಳೆಗೆ ಶಪಿಸುವ ಜನರೂ ಇದ್ದಾರಲ್ಲಾ! ಹಾಗೆಯೇ ಸಧ್ಯದ ನಮ್ಮ ಜೀವನ ನಡೆದರಾಯ್ತು. ಮುಂದೆ ಹಾಳಾಗಿ ಹೋಗಲೀ, ಯಾರಿಗೆ ಬೇಕು? ಹೀಗೆ ಯೋಚಿಸುವ ಜನರಿಗೂ ಮಕ್ಕಳಿರುತ್ತಾರೆ. ಮುಂದೆ ಏನಾದರೂ ಕೆಟ್ಟದಾದರೆ ಇವರ ಮಕ್ಕಳೂ ಅನುಭವಿಸಬೇಕು, ಅನ್ನೋ ವಿಚಾರವೂ ಇವರ ಬುದ್ಧಿಗೆ ಹೊಳೆಯುವುದಿಲ್ಲ. ಪ್ರಪಂಚ ಹೀಗೇನೇ.
In reply to ಉ: ಆಪತ್ತು ಕಾದಿದೆ ಎಚ್ಚರ! by hariharapurasridhar
ಉ: ಆಪತ್ತು ಕಾದಿದೆ ಎಚ್ಚರ!
ತಪ್ಪು ಹರಿಹರಪುರಶ್ರೀಧರ್ ಅವರೆ,
೨೪ ಗಂಟೆ ಟಿವಿ ಚಾನಲ್‌ಗಳಲ್ಲಿ ಪ್ರಳಯ-ಪ್ರಳಯ ಅಂತ ಡಾಂ ಢೂಂ...ಅಂತಭಯಾನಕ ಚಿತ್ರಗಳನ್ನು ತೋರಿಸಿ ತೋರಿಸಿ ಜನರಿಗೆ ನಿಮ್ಮ "ಆಪತ್ತು ಕಾದಿದೆ ಎಚ್ಚರ" ಹಾಸ್ಯ ಬರಹದಂತೆ ಕಾಣುವುದು. :)
ಮಕ್ಕಳನ್ನು ಹುಟ್ಟಿಸಿದರೆ ಮಾತ್ರ ಸಾಕಾ? ಈ ಕಾಲದಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿದರೂ..ತಮ್ಮ ಸ್ಟೇಟಸ್, ಒಂದು ಮಗುವಿನ ಪೋಷಣೆ, ವಿದ್ಯಾಭ್ಯಾಸ..ಇತ್ಯಾದಿಗೆ ಹಣಹೊಂದಿಸಲು ಒದ್ದಾಡುವರು. "ಒಂದು ಕಣ್ಣು ಕಣ್ಣಲ್ಲ" ಎಂಬ ಹಿರಿಯರ ಒತ್ತಾಯಕ್ಕೆ ಕಟ್ಟುಬಿದ್ದು ಎರಡು-ಮೂರು ಹೆತ್ತು ಜೀವನ ಸಾಗಿಸಲು ಕಷ್ಟಪಡುವ ಅನೇಕ ಜನರಿದ್ದಾರೆ."ಒಂದು ಮಗು-ಆ ಮಗುವಿಗೆ ಉತ್ತಮ ವಿದ್ಯೆ+ಉದ್ಯೋಗ ದೊರಕಿದರೆ ಸಾಕು." ನಿಮ್ಮ ಹಾಗೂ ಸಪ್ತಗಿರಿವಾಸಿ ಒದಗಿಸಿದ ಸ್ಟೆಟಿಸ್ಟಿಕ್ ಲೆಕ್ಕ ಮಾಡುತ್ತಾ ಹೋದರೆ ೨೧೦೦ರಲ್ಲಿ ಭೂಮಿ ಖಾಲಿಯಾಗುವುದು. :)
-ಅಂತಹಾ ಒಂದು ಭವ್ಯ ಸಂಸ್ಕೃತಿಯ ವಾರಸುದಾರವು ನಾವು ನಾವು ನಮ್ಮ ಸಂಸ್ಕೃತಿಯನ್ನು ಕಡೆಗಣಿಸುತ್ತಾ....
ಯಾವ ಸಂಸ್ಕೃತಿ!? ಈಗಾಗಲೇ ಕಲರ್ ಮಾತ್ರ ಭಾರತೀಯರದ್ದಿರುವ ಅಮೆರಿಕನ್ ಮಕ್ಕಳು/ ಯುವಕರನ್ನೇ ಸುತ್ತಲೂ ಕಾಣುತ್ತಿರುವೆ. :(
In reply to ಉ: ಆಪತ್ತು ಕಾದಿದೆ ಎಚ್ಚರ! by ಗಣೇಶ
ಉ: ಆಪತ್ತು ಕಾದಿದೆ ಎಚ್ಚರ!
ಗಣೇಶರೇ,
ನಿಮ್ಮ ಹಾಸ್ಯ ನನಗೆ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ನನಗಿಲ್ಲ. ನಿಮ್ಮ ಅಭಿಪ್ರಾಯವನ್ನು ನಮ್ಮಂತ ದಡ್ದರಿಗೂ ಅರ್ಥವಾಗುವಂತೆ ಹೇಳಿ.ಬುದ್ದಿವಂತರಿಗೆ ಮಾತ್ರ ಅರ್ಥವಾದರೆ ಸಾಕಾ?
ಉ: ಆಪತ್ತು ಕಾದಿದೆ ಎಚ್ಚರ!
'ಪುನರಪಿ ಜನನಂ ಪುನರಪಿ ಮರಣಂ' ಸೂತ್ರ ಒಪ್ಪಿರುವಾಗ ಚಿಂತೆಯೇಕೆ? 'ಮುಂದೆ ಸರಿಹೋದೀತು' ಎಂದು ಆಶಾವಾದಿಗಳಾಗೋಣ.