ಬೆಳಗಾಗಿ ನಾನೆದ್ದು ಯ್ಯಾರ್ಯಾರ ನೆನೆಯಲಿ?

ಬೆಳಗಾಗಿ ನಾನೆದ್ದು ಯ್ಯಾರ್ಯಾರ ನೆನೆಯಲಿ?

ಪಾಸ್ವರ್ಡುಗಳ ತಕಧಿಮಿತ....ಈ ಮನ ಕದಪದಗಳಿಗಿದೆಯೆ ಸುಲಭದ ನೆನೆಯುವ ಹಾದಿ?
.
ನಾನು ತುಂಬಾ ಸಂಪ್ರದಾಯಬದ್ದ ಆಸಾಮಿ ಅಲ್ಲದಿದ್ದರೂ, ಕೆಲ 'ಸಡಿಲ' ನಂಬಿಕೆಗಳನ್ನು ಚಾಚೂತಪ್ಪದೆ 'ನಿಯಮಗಳಂತೆಯೆ' ಪಾಲಿಸುವವನು. ಬೆಳಗಾಗೆದ್ದ ತಕ್ಷಣ ದೇವರ ಮುಖ ನೋಡುವುದು ಅಂಥಹ ನಂಬಿಕೆಗಳಲ್ಲಿ ಒಂದು. ಹಳೆಯ ದಿನಗಳಲ್ಲಿ ಊರಿನಲ್ಲಾದರೆ, ಏಳುತ್ತಿದ್ದ ಹಾಗೆ ಗೋಡೆಯ ಮೇಲೆ ರಾರಾಜಿಸುತ್ತಿದ್ದ ದೇವರ ಪಟಗಳು , ಪೋಟೊಗಳು ಹೆಚ್ಚು ತ್ರಾಸವಿರದಂತೆ ದರ್ಶನ ಕೊಟ್ಟು ಆಶೀರ್ವದಿಸಿಬಿಡುತ್ತಿದ್ದವು; ಅಲ್ಲಿ ಪ್ರಶ್ನೆಯಿರುತ್ತಿದ್ದುದ್ದು ಬರಿ - ಅವು ಇಷ್ಟ ದೇವರುಗಳಾ, ಅಲ್ಲವಾ ಎಂಬುದಷ್ಟೆ.  ಆದರಿಲ್ಲಿ ವಾಸಿಸುವ ಬಾಡಿಗೆ ಮನೆಗಳಲ್ಲಿ ಗೋಡೆಗೆ ಮೊಳೆ ಹೊಡೆಯಲು, ಅಂಟಿಸಲು, ನೂರಾರು ತರಲೆಗಳು; ಏನೊ ಕಬೋರ್ಡಿನೊಳಗೊ, ಇಲ್ಲ ದೇವರ ಮನೆಯಲ್ಲೊ (ಹಾಗೊಂದು ಹೆಸರಿನ ಕೊಟಡಿ ಇದ್ದರೆ) ಒಂದಷ್ಟು ವಿಗ್ರಹಗಳು, ಪೋಟೊಗಳು ಇರುವುದನ್ನು ಬಿಟ್ಟರೆ. ಇಂತಹ ಕಡೆ ಏನು ಮಾಡುವುದು?
.
ಅಲ್ಲೆ ನೋಡಿ, ನಮ್ಮ ತಂತ್ರಜ್ಞಾನದ ತಾಕತ್ತಿನ ಅರಿವಾಗುವುದು. ಹೇಳಿ ಕೇಳಿ ಇದು ಮೊಬೈಲ್ ಯುಗ. ಮೊಬೈಲಿನಲ್ಲೆ ಕ್ಯಾಮರ ಸೇರಿಸಿಲ್ಲದ ಯಾವ ಮಾಡೆಲ್ಲಿದೆ ಹೇಳಿ? ಕನಿಷ್ಟವೆಂದರೂ ಚಿತ್ರಗಳ ಶೇಖರಣೆಗಂತೂ ಅಡ್ಡಿಯಿಲ್ಲವಲ್ಲಾ? ಅಲ್ಲದೆ ದಿನವೆಲ್ಲ ಮೊಬೈಲು ತಾನೆ ಯಾವಾಗಲು ಜತೆಯಿರುವ ಸಂಗಾತಿ - ರಾತ್ರಿಯೂ ಸಹ ಮಲಗಿದಾಗಲೂ ಕೈಗೆಟಕುವ ದೂರದಲ್ಲಿಯೆ ಬಿದ್ದು ಒದ್ದಾಡುವ ಅಪ್ಸರೆ. ಅಲ್ಲಿಗೆ ಸಿಕ್ಕಿತಲ್ಲಾ ಪರಿಹಾರ? ಬೇಕಾದ ದೇವರ ಪಟಗಳೆಲ್ಲ ಮೊಬೈಲಿನ ಬಯಲಲ್ಲಿ ಗುಡಿಕಟ್ಟಿ ನೆಲೆಸಿ ಸರ್ವದಾ ಪೂಜೆಗೊಳ್ಳುವ ಅಪೂರ್ವ ಅವಕಾಶ, ಭಕ್ತಿಯ ಪ್ರಕಾಶ....ಈಗಿರುವ ಟೆಕ್ನಾಲಜಿಯಲ್ಲಿ, ಬರಿ ಪೋಟೊ ಏಕೆ - ನೇರ ಬೇಕಾದ ದೇವಸ್ಥಾನಕ್ಕೆ (ಜಗತ್ತಿನಲೆಲ್ಲಿದ್ದರೂ ಸರಿ) ಅಂತರ್ಜಾಲದ ಮುಖಾಂತರ  ತೆರಳಿ, ರಿಮೋಟಾಗೆ ಅರ್ಚನೆ, ಪೂಜೆ, ಹರಕೆ ಸಲ್ಲಿಸಿಬಿಡಬಹುದು! (ಸದ್ಯ, ಯಾರಾದರೂ 'ಟೆಕ್ಕಿ' ದೇವಸ್ಥಾನದವರು ಇದನ್ನು ಕೇಳಿಸಿಕೊಂಡರೆ, ಇದನ್ನೆ ಹೊಸ ಬಿಸಿನೆಸ್ಸಾಗಿ ಆರಂಭಿಸಿಬಿಡಬಹುದು - ಆನ್ಲೈನ್ ಪೂಜಾ ಸರ್ವೀಸ್ ಅಂತ; ಯಾರಿಗೆ ಗೊತ್ತು, ಕೆಲವೆಡೆ ಆಗಲೆ ಇರಲೂಬಹುದೇನೊ...)
.
ಆದರೆ ನಾನ್ಹೇಳ ಹೊರಟ ವಿಷಯ ತುಸು ಬೇರೆಯೆ - ಯಥಾರೀತಿ ವಿಷಯಾಂತರವಾಗಿ ಹೋಯಿತು...ಮತ್ತೆ ವಿಷಯಕ್ಕೆ ಬರೋಣ. 'ಬೆಳಗಾಗಿ ನಾನೆದ್ದು ಯ್ಯಾರ್ಯಾರ ನೆನೆಯಲಿ' ಎನ್ನುತ್ತಲೆ ಮೊಬೈಲಿನಲ್ಲೆ ಎಲ್ಲಾ ದೇವರಿಗೂ ನಮಸ್ಕರಿಸುವ ಅಭ್ಯಾಸವಾಗಿ ಹೋಗಿದೆ, ಈಗ. ಆದರೆ ಅಲ್ಲಿಂದಲೆ ಶುರು ನೋಡಿ ಮನ 'ಕದಪದ'ಗಳ (ಪಾಸ್ವರ್ಡುಗಳ) ಕಾಟ! ಕದ ತಟ್ಟಿದರೆ ಬಾಗಿಲು ತೆರೆಯುವ ಹಾಗೆ, ಈ 'ಮನಪದ'ಗಳು ಕದ ತೆರೆಸುವುದರಿಂದ - ಪಾಸ್ವರ್ಡಿಗೆ "ಕದಪದ" ಅಥವಾ "ಮನಕದಪದ" ಎಂಬ ಅವತರಣಿಕೆ ಸೂಕ್ತವೆಂದು ಎಣಿಸಿ ಅದನ್ನೆ ಬಳಸಿದ್ದೇನೆ. ಮೊಬೈಲಿನ ಕದ ತೆರೆಸುವ ಕದಪದ ಮೊದಲು ನೆನಪಿಗಿರಬೇಕಾದ ಪ್ರಮುಖ 'ಪಾಸ್ವರ್ಡ್'.
.
ಅಲ್ಲಿಂದಾರಂಭವಾಗಿ ಹೊರಡುವ ಈ ಕದಪದ ರಥ ಎಲ್ಲೆಲ್ಲಿ ವಿಶ್ವವ್ಯಾಪ್ತಿ ನೋಡಿ. 'ಕರಾಗ್ರೆ ವಸತೇ ಲಕ್ಷ್ಮಿ'ಯಾದ ಮೇಲೆ, ಮಲಗಿದ್ದ ವೇಳೆಯಲ್ಲಿ ಬಂದಿರುವ 'ಮಿಂಚಂಚೆ'ಗಳನ್ನು ಮೆಲುವಾಗಿ ಸವರಿ, ನಂತರ ದೈನಂದಿನದತ್ತ ಗಮನ...ನೋಡಿ, ಅಲ್ಲೂ ಇ-ಮೈಲುಗಳಿಗೆ ಬೇಕು ಕದಪದ (2) ಇನ್ನು ಶೌಚಸ್ನಾನಾದಿಗಳನ್ನು ಮುಗಿಸಿ ಆಫೀಸಿಗೆ ಹೊರಡುತ್ತ ತಟ್ಟನೆ ನೆನಪಾಗುತ್ತದೆ - ಬರಿ ಕಾರ್ಡುಗಳಿಂದಲೆ ತುಂಬಿರುವ ಖಾಲಿ ಪರ್ಸು; ಸರಿ, ಬ್ಯಾಂಕೊಂದರ ಏ.ಟಿ.ಎಂ. ಮುಂದೆ ಗಾಡಿ ನಿಲ್ಲಿಸಿ ಹಣಕ್ಕಾಗಿ ಮೇಷಿನ್ನಿನ್ನ ಮುಂದೆ ನಿಂತರೆ, ಮತ್ತವನದೆ ಕಾಟ - ಕೇಳುತ್ತಾನೆ ಕದಪದ (3) ಇನ್ನು ಒಂದಕ್ಕಿಂತ ಹೆಚ್ಚು ಕಾರ್ಡುಗಳಿದ್ದರಂತೂ, ಪ್ರತಿಯೊಂದಕ್ಕೂ ಒಂದೊಂದು; ಜತೆಗೆ ಅಂತರ್ಜಾಲದಲಿ ಬಳಸಿದರೆ ಇನ್ನೊಂದು... ಕಿಸೆಗಷ್ಟು ದುಡ್ಡು ಸೇರಿಸಿ ಆಫೀಸಿಗೆ ಬಂದು ಕಂಪ್ಯೂಟರು ತೆರೆದರೆ ಅಲ್ಲೂ ಕದಪದ ಮುಖಾಂತರ ತಟ್ಟಿದರೆ ತೆರೆಯುವ ಬಾಗಿಲು (4). ಇಲ್ಲವಾದರೆ ಬಿಚ್ಚಿಕೊಳ್ಳದ ಪರದೆಯನ್ನೆ ನೋಡುತ್ತಾ ಕುಳಿತಿರಬೇಕಾದೀತು. ಅಲ್ಲೇನು ಸಾಮಾನ್ಯವೆ? ಯಾವ್ಯಾವುದೊ ಉದ್ದೇಶಕ್ಕೆಂದು ಎಷ್ಟೊ ಅಂತರ್ಜಾಲತಾಣಗಳಿಗೆ ಭೇಟಿ ಕೊಡುವ, ಸದಸ್ಯರಾಗಿರುವ ಸಾಮಾನ್ಯ ಪರಿಸ್ಥಿತಿ ಎಲ್ಲರದು. ಆಯಾ ತಾಣ, ಉದ್ದೇಶಗಳಿಗನುಗುಣವಾಗಿ ಅಲ್ಲೂ ಬೇಕು ಕದಪದ... (5). ಫೇಸ್ಬುಕ್, ಟ್ವಿಟ್ಟರು, ಯಾಹೂ ಮೈಯಿಲ್.....ಎಲ್ಲಕ್ಕೂ ಕದಪದವೆ ರಹದಾರಿ, ಮರೆತಿದ್ದರೆ ಅಬ್ಬೇಪಾರಿ!
.
ಸಾಲದೆಂಬಂತೆ ಈಗಿನ ದಿನಗಳಲ್ಲಿ ನೂರೆಂಟು ತರಹ ಕೆಲಸಗಳು, ಹೊಸತರದ ಕಂಪನಿಗಳು, ತುಪ್ಪನೆದ್ದು ಧೊಸಕ್ಕನೆ ಕುಸಿಯುವ ಆರ್ಥಿಕ ಸ್ಥಿತಿಗತಿಗಳು - ಇವೆಲ್ಲಕ್ಕೂ ತಳುಕು ಹಾಕಿಕೊಂಡೆ ಏರುಪೇರಾಗುವ ಉದ್ಯೋಗಗಳು - ಹೀಗೆ ಬದಲಾವಣೆಯ ಮೂಲಸರಕು ಎಲ್ಲೆಡೆಯು ಪ್ರಭಾವ ಬೀರಿ ಗೊಂದಲವನೆ ಬಿತ್ತು, ಗೊಂದಲವನೆ ಬೆಳೆದು, ಗೊಂದಲವನೆ ಪಸರಿಸುವ ಹಾಗೂ ಪ್ರಸರಿಸುವ ವಾತಾವರಣ; ಕೈಯಲ್ಲೊಂದು 'ರೆಸ್ಯೂಮ್' ಹಿಡಿದೆ ಒಡಾಡಬೇಕಾದ ಪರಿಸ್ಥಿತಿ...ಛೆ!ಛೇ! ಕೈಯಲ್ಲೇನೂ ಹಿಡಿಯಬೇಕಾಗಿಲ್ಲ ಬಿಡಿ. ಈಗದಕ್ಕೆ ಅಂತಲೆ ನೂರಾರು ವೆಬ್ಸೈಟುಗಳಿವೆ. ಅದರಲ್ಲೆ ಸರಿಯಾದ ಕೆಲವನ್ಹುಡುಕಿ ನಿಮ್ಮ ಪುರಾಣ ಪ್ರವರವನ್ನು ಅಲ್ಹಾಕಿಟ್ಟರಾಯ್ತಷ್ಟೆ. ಮತ್ತೆಲ್ಲಾ ಸುಗಮ; ಆದರೆ ಅಲ್ಲಿಗೂ ಬಿಡದ ಪಾಸ್ಕೋಡ್ ಭೂತ.... (6) ಪ್ರತಿ ಸೈಟಿಗೂ ಅದರದೆ ಆದ ಬಳಕೆದಾರನ ಹೆಸರು (ಯೂಸರ ನೇಮ್) ಮತ್ತು ಮನಕದಪದ (ಪಾಸ್ವರ್ಡ್) ಬೇಕೆ, ಬೇಕಲ್ಲಾ? 
.
ಇನ್ನು ಅಂತರ್ಜಾಲದ ಕಾಲ, ವಯಸಿನ ಮಾರ್ಜಾಲ. ಕಮ್ಯೂನೀಕೇಷನ್ ಈಗ ಮೊದಲಿನ ಹಾಗಲ್ಲ. ಈ ಮದುವೆ, ಡೇಟಿಂಗುಗಳ  ವಿಷಯವನ್ನೆ ತೆಗೆದುಕೊಳ್ಳಿ - ಅಲ್ಲೂ ಎಲ್ಲಾ 'ಆನ್ಲೈನ್'ಮಯವೀಗ. ಇಡೀ ಪ್ರಪಂಚದಲಿ ಯಾರು ಯಾರನು ಬೇಕಾದರೂ ಸಂಪರ್ಕಿಸಿ ಗುರುತಿಸಿ ನಂಟು ಬೆಳೆಸಬಹುದಾದ ಸಾಧ್ಯತೆ, ವ್ಯವಹರಿಸುವ ವ್ಯವಸ್ಥೆ. ಮತ್ತೆ ಅಲ್ಲಿಯು ನೀವು ನಿಮ್ಮ ಗುರುತಿನ ಚೀಟಿಯನ್ನು ತೋರಿಯೆ ಮುಂದುವರಿಯಬೇಕು - ಹೀಗಾಗಿ ಮತ್ತೊಂದು ಕದಪದ ಬಳಸಾಟ... (7)
.
ಶಾಪಿಂಗಿಗು ಈಗ ಆನ್ಲೈನಿನ ಸಹಚರ - ಎಚ್ಚರ, ಅಲ್ಲೂ ಬೇಕು ಮನಕದಪದ ಹಮ್ಮೀರ (8). ಆಷ್ಟೇಕೆ , ಈಗ ಬರೆಯುತ್ತಿರುವ ಬ್ಲಾಗಿಗೆ ರಹದಾರಿ ಕೊಡಿಸಲೂ ಸಹ ಅದರ ಕಾಲ್ಹಿಡಿಯದೆ ವಿಧಿಯಿಲ್ಲ (9). ಇದರ ನಡುವೆ 'ವೈಯಕ್ತಿಕ' ಮತ್ತು 'ವ್ಯವಹಾರ ಸಂಬಂಧಿ' ಜವಾಬ್ದಾರಿಗಳೂ ಒಟ್ಟಾಗಿ ಸೇರಿದ್ದರೆ, ಬೇಕಾದ ಕದಪದಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಈಗ ಇದು ಮುಂದುವರೆಯುವ ತರಹ ನೋಡಿದರೆ, ಎಲ್ಲೆಡೆಯೂ ಕದಪದಗಳ ಹಾವಳಿ ಹೆಚ್ಚುತ್ತಾ ಹೋಗುವುದೆ ಹೊರತು ಕಮ್ಮಿಯಾಗುವಂತೆ ಕಾಣುವುದಿಲ್ಲ. ಇದೂ ಸಹ ಬರಿ ಮೇಲ್ನೋಟಕೆ ಕಾಣುವ ಲೆಕ್ಕ. ಪ್ರತಿಯೊಬ್ಬರಲ್ಲೂ ಎಷ್ಟೊಂದು ಡೆಬಿಟ್ಟು/ಕ್ರೆಡಿಟ್ಟು ಕಾರ್ಡುಗಳಿರುತ್ತವೆ, ಎಷ್ಟೊಂದು ತರದ 'ಅಂತರ್ಜಾಲ ಪ್ರೇರಿತ ಮೆಂಬರ್ಷಿಪ್ಪು'ಗಳಿರುತ್ತವೆ, ಎಷ್ಟು ತರಹದ 'ವ್ಯಾಪಾರನಿಮಿತ್ತ' ಮತ್ತು 'ವೈಯಕ್ತಿಕ' ಖಾತೆಗಳಿರುತ್ತವೆ...ಹೀಗೆ ಲೆಕ್ಕ ಹಾಕುತ್ತಾ ಹೋದರೆ, ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಒಟ್ಟಿನಲ್ಲಿ ಈ ಪಾಸ್ವರ್ಡ್ಗಳ ಕಾಟದಿಂದ ಮುಕ್ತಿಯಂತೂ ಇಲ್ಲವೆನ್ನುವುದು ಸತ್ಯ.
l
ಇದು ಅಧುನಿಕತೆಯ ಒತ್ತಡದ ನಡುವೆ ಏಗಲೆಣಿಸುತ್ತಿರುವ ಒಂದು ಕಡೆಯ 'ವಿದ್ಯಾವಂತ' ಯಾ 'ಪ್ರಜ್ಞಾವಂತ' ಜಗದ ಸತ್ಯವಾದರೆ, ಇದರ ಮತ್ತೊಂದು ತುದಿಯಲ್ಲಿ ನಮ್ಮ ಕೆಂಚಣ್ಣ, ಬೋರಣ್ಣ, ತಮ್ಮಣ್ಣ ಹಾಗೂ ಸಿದ್ದಮ್ಮ, ನಾಗಮ್ಮ, ಕರಿಯಮ್ಮಗಳ ಈ ಆಧುನಿಕತೆಯ ಸೊಂಕೆ ಕಾಡದ / ಕಡೆಗಣಿಸಿದ ಮತ್ತೊಂದು ಜಗ. ಇವೆರಡರ ನಡುವಿನ 'ಬೇಲಿ ಮೇಲೆ ಕೂತ ಗುಂಪು' ಸ್ಥಿತ್ಯಂತರದ ನಡುವೆ ಸಿಕ್ಕಿ ಒದ್ದಾಡುವ ಮತ್ತೊಂದು ಜಗ. ಈ ಎಲ್ಲಾ ಜಗಗಳ ಸಮೀಕರಣಗಳು ಸಮತೋಲನದ ಸ್ಥಿತಿಗೆ ಎಂದಾದರೂ ಬರುವ ಸಾಧ್ಯತೆಯಿದೆಯೆ ಅಥವಾ ಮೂರು, ಸದಾಕಾಲ ತನ್ನಂತಾನೆ ಆದ ಜಗದಲ್ಲಿ ಸಮಾನಾಂತರವಾಗಿ ಮುಂದುವರೆಯಲಿವೆಯೆ - ಕಾಲವೆ ನಿರ್ಧರಿಸಬೇಕು...
.
ಕಾಲ ನಿರ್ಧರಿಸಲಿ ಬಿಡಲಿ , ತಂತ್ರಜ್ಞಾನ ಮಾತ್ರ ಬಿಡುವುದಿಲ್ಲ ಎಂದು ಕಾಣುತ್ತದೆ. ಕೆಂಚಿ, ಬೋರಿಯರಿಗೆ ಕದಪದದೊಡನೆ, ಮಾಹಿತಿಯೊಡನೆ ಕಂಪ್ಯೂಟರಿನಲಿ ಆಡುವುದು ಗೊತ್ತಿಲ್ಲ , ನಿಜ. ಆದರೆ ನಾಳಿನ ಜಗದಲ್ಲಿ 'ಬಯೊ ಮೆಟ್ರಿಕ್' ತಂತ್ರಜ್ಞಾನ ಹೆಚ್ಚು ಮಾಗಿ, ಪ್ರಬುದ್ದಗೊಂಡು ಸರಳ ಮತ್ತು ಸುಸಂಬದ್ಧ ಪಕ್ವತೆಯೊಂದಿಗೆ ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚಿದರೆ - ಹೆಚ್ಚು ಕಡಿಮೆ ಎಲ್ಲರು ಒಂದೆ ತರಹದ , ಅವರವರದೆ ಆದ 'ಜೈವಿಕ' ಕದಪದಗಳನ್ನು ಬಳಸಲು ಸಾಧ್ಯ. ಉದಾಹರಣೆಗೆ, 'ಬೆರಳಿನಚ್ಚೆಯ ಗುರುತು', ಕಣ್ಣಿನ 'ರೆಟೀನಾ ವಿನ್ಯಾಸ' ಇತ್ಯಾದಿ ತರದ ಕದಪದಗಳನ್ನು, ಜನ ಸಾಮಾನ್ಯರಿಂದಿಡಿದು - ಪ್ರಜ್ಞಾವಂತರವರೆಗೆ ಪಂಥ ಭೇಧವಿಲ್ಲದೆ ಉಪಯೋಗಿಸಲು ಸಾಧ್ಯ. ಏಕೆಂದರೆ ಈ ವಿಧಾನಗಳೆ ತೀರಾ ಸರಳ ಹಾಗೂ ಸಾಮಾನ್ಯಪ್ರಜ್ಞೆಯ ಎಟುಕಿಗೆ ಯಾವುದೇ ವಿಪರೀತ ಪ್ರಯತ್ನದ ನೆರವಿಲ್ಲದೆಯೆ ದಕ್ಕುವಂತಹದ್ದು. ಪ್ರಾಯಶಃ ಆ ಕಾಲ ಬರುವುದೋ , ಇಲ್ಲವೊ ಎಂಬುದಲ್ಲಾ ಪ್ರಶ್ನೆ; ಎಷ್ಟು ಬೇಗಾ ಅಥವಾ ಯಾವಾಗ ಎಂಬುದಷ್ಟೆ ಪ್ರಶ್ನೆ..
.
ಅಂಥಾ ಕಾಲ ಬರುವವರೆಗಂತೂ ಈ ಮನಕದಪದಗಳನ್ನು ಅವಲಂಬಿಸದೆ ವಿಧಿಯಿಲ್ಲ. ಅಂದಮೇಲೆ ಅವನ್ನು ಬಳಕೆಗೆ ಸೂಕ್ತವಾಗಿರುವಂತೆ ಏನಾದರೂ ಮಾಡಲು ಸಾಧ್ಯವಿಲ್ಲವೆ? ಎಷ್ಟೆಂದು ನೆನಪಿನಲಿಡಲು ಸಾಧ್ಯ? ಇಟ್ಟರೂ ಮರೆತುಹೋಗುವ ಸಾಧ್ಯತೆಗಳೆ ಹೆಚ್ಚು - ಅದರಲ್ಲೂ, ಅಪರೂಪದವುಗಳಾದರೆ ಇನ್ನು ತಾಪತ್ರಯ. ಬರೆದಿಟ್ಟುಕೊಳ್ಳಲೂ ಭಯ - ಹಾಳಾದರೆ ಅಥವ ಕಳುವಾದರೆ, ಸರ್ವನಾಶವಾದೀತೇನೊ ಎಂದು. ಮನದ ಪೆಟ್ಟಿಗೆಯಲ್ಲಿ ಭದ್ರವಾಗಿಡಲು ಹಾಳು ಮರೆವಿನ ಶಕ್ತಿ ಕೈ ಕೊಡುವ ಭೀತಿ; ಒಂದು ನೆನಪಿದ್ದರೆ, ಇನ್ನೊಂದಿರದು ಅಥವಾ ಅದರದು ಇದಕ್ಕೆ, ಇದರದು ಅದಕ್ಕೆ ಅದಲು ಬದಲಾಗಿ ಗೊಂದಲ. ಇನ್ನು ಕೆಲವೊಮ್ಮೆ ಕದಪದ ಸರಿಯಿದ್ದರೂ, 'ಅಪ್ಪರ ಕೇಸ್, ಲೋವರ ಕೇಸು' (ದೊಡ್ಡಕ್ಷರ, ಚಿಕ್ಕಕ್ಷರ) ಅದಲು ಬದಲಾಗೊ, ಅಥವ ಮರೆತುಹೋಗೊ ಕಾಡಿಸಿಬಿಡುವ ಪೀಡೆ. ಇನ್ನು ಕೆಲವೊಮ್ಮೆ - ಉಪಯೋಗಿಸಿದ ವಿಶೇಷ ಚಿಹ್ನೆಗಳು ಮರೆತೊ, ಅದಲುಬದಲಾಗೊ ಪಜೀತಿ. ಸೃಷ್ಟಿಸುವಾಗ ಅತಿ ಸುಲಭ ಹಾಗೂ ನೆನಪಲುಳಿಸುವಂತ ಹೆಸರನ್ನೆ ಆಯ್ಕೆ ಮಾಡಿದ್ದರೂ, ಮುಂದಿನ ಸಲ ಬಳಸುವಾಗ ನೆನಪೆ ನಾಪತ್ತೆ! ಹಾಗಾದಾಗೆಲ್ಲಾ "ಕದಪದ ಮರೆವಿನ" ವಿಭಾಗದಡಿ, ಮರೆಗುಳಿ ಪ್ರೊಫೆಸರನೆಂದು ಒಪ್ಪಿಕೊಂಡು, ಹೊಸ ಕದಪದ ಆರೋಪಿಸುವ ಪುನರಾವರ್ತನೆ ಕೆಲಸ. ಅಲ್ಲಿಗೆ ಸರಿಯಾದೀತೆಂಬುದು ಗ್ಯಾರಂಟಿಯೆ? ಖಂಡಿತಾ ಇಲ್ಲಾ...ಮುಂದಿನ ಸಲದ ಪ್ರಯತ್ನದಲ್ಲಿ ಮೊದಲನೆಯ ಬಾರಿಯ ಹಾಗು ಎರಡನೆ ಬಾರಿಯ ಕದಪದಗಳೆ ಕಲಸಿ ಗೊಂದಲವೆಬ್ಬಿಸಿ ಅತ್ತ ಮೊದಲಿನ ಕದಪದವೂ ಕೆಲಸ ಮಾಡುವುದಿಲ್ಲ, ಹೊಸದೂ ಮರೆಗುಳಿ ನೆನಪಡಿ ಸಿಕ್ಕು ಅಯೋಮಯ; ಮೂರನೆಯದಕ್ಕೆ ಮೊರೆ, ಮತ್ತದೆ ಪುರಾಣ :-)
.
ನಿಜ ಹೇಳಬೇಕೆಂದರೆ ತಾಂತ್ರಿಕವಾಗಿ, ಮೊದಲಿನ ದಿನಗಳಿಗ್ಹೋಲಿಸಿದರೆ ಈಗೆಷ್ಟೊ ಪಾಲು ವಾಸಿ. ಆ ದಿನಗಳಲ್ಲಿ ಕೆಲಸಕ್ಕೆ ಬಂದರೆ ಕಂಪ್ಯೂಟರು ತೆರೆಯಲೊಂದು ಕದಪದ, ಅಂತರಿಕಜಾಲ (ಇಂಟ್ರಾನೆಟ್) ತೆರೆಯಲಿನ್ನೊಂದು, ಅಂತರ್ಜಾಲಕೆ (ಇಂಟರ್ನೆಟ್) ಮತ್ತೊಂದು, ಮಿಂಚಂಚೆಗೆ (ಇ-ಮೈಯಿಲ್) ಮಗದೊಂದು...ಹೀಗೆ ಪ್ರತಿಯೊಂದಕ್ಕೂ ಬಿಡಿಬಿಡಿಯಾಗಿ ತಿನಿಸಬೇಕಿತ್ತು. ಈಗ ಅವೆಲ್ಲಾ ಎಷ್ಟೊ ಒಗ್ಗೂಡಿ ಒಂದೆ ಕದಪದವಾಗಿ ಪರಿವರ್ತಿತಗೊಂಡಿದೆ. ಇನ್ನೂ ಎಷ್ಟೊ ಹಳೆಯ ದಾರಿಯಲ್ಲೆ ಉಳಿದುಕೊಂಡಿದ್ದರೂ ಒಂದೊಂದಾಗಿ, ಬದಲಾವಣೆಯ ಗತಿ ಕಾಣುತ್ತಿವೆ. ಕೆಲವು ಕಂಪನಿಗಳಲ್ಲಿ ಇದರ ವೇಗ ಹಾಗೂ ತೀವ್ರತೆ ತೀಕ್ಷ್ಣವಾಗಿದ್ದರೆ, ಇನ್ನು ಕೆಲವು ಮಂದಗತಿಯ ಪಥದಲ್ಲಿಯೆ ಕುಂಟುತ್ತಾ ಸಾಗಿದ್ದರು, ಅಂತಿಮ ಗಮ್ಯ ಮಾತ್ರ ಒಂದೆ. ಈಗಿನ ಮತ್ತೊಂದು ಅಷ್ಟಾಗಿ ಎದ್ದು ಕಾಣಿಸದಿದ್ದರು, ಅಂತರ್ಗತವಾಗಿ ನಡೆಯುತ್ತಿರುವ ನಿಶ್ಯಬ್ದ ಕ್ರಾಂತಿಯೆಂದರೆ - ತಾಂತ್ರಿಕವಾಗಿ ಎಲ್ಲೆ ಪ್ರಗತಿಯಾದರೂ, ಹೊಸತಿನ ಅವಿಷ್ಕಾರವಾದರೂ ಅದು ಶೀಘ್ರವಾಗಿ ಪಸರಿಸುವ ವೇಗ ಮತ್ತು ಸಂಸ್ಥೆಗಳು ಅದನ್ನು ಆಪೋಷಿಸಿ ಜೀರ್ಣಿಸಿಕೊಳ್ಳುವ ಪ್ರಕ್ರಿಯೆ. ತಡವಾಗಿಯಾದರೂ, ನಿಧಾನವಾಗಿಯಾದರೂ, ಎಲ್ಲರೂ ಮಾರುಕಟ್ಟೆಯಲಿ ಕಾಣಸಿಗುವ 'ಉತ್ತಮ ಸುರಾಭ್ಯಾಸ ಸರಕು (ಬೆಸ್ಟ್ ಪ್ರಾಕ್ಟೀಸ್)' ಅನ್ನು ಎಡವಿ, ತಡವಿ, ಅಪ್ಪಿ, ಆಲಂಗಿಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ. ಇದು ಹೀಗೆ ಮುಂದುವರೆದು, ತಾರ್ಕಿಕವಾಗಿ ಎಲ್ಲರಿಗೂ ಎಟುಕುವಂತಹ ಸರಳ ರೀತಿಯ ಪರಿಹಾರ ಒದಗುವತನಕ ಹೇಗಾದರೂ ಸಂಭಾಳಿಸದೆ ವಿಧಿಯಿಲ್ಲ. 
.
ಸದ್ಯಕ್ಕಂತು ರಾಮಬಾಣದ ಪರಿಹಾರ ಇಲ್ಲವೆಂದ ಮೇಲೆ, ಈಗಿನ ನಿಭಾವಣೆ ಏನೆಲ್ಲಾ ತರಹ ಸಾಧ್ಯ, ಏನೆಲ್ಲಾ ಪಾಡು ಪಡಬೇಕು ಎಂದೆಲ್ಲ ನೋಡೋಣ:
.
1. ಮೊದಲನೆಯದಾಗಿ ಈ ಪಾಸ್ವರ್ಡ್ ಅಥವಾ ಕದಪದ / ಮನಕದಪದ ಸರಳವಾಗಿರಬಾರದಂತೆ - ಸಾಮಾನ್ಯ ಬಳಕೆಯಲ್ಲಿರುವ ಪದಗಳು, ಹೆಸರುಗಳು, ಹುಟ್ಟಿದ ದಿನಾಂಕಗಳು ಸುಲಭವಾಗಿ ಊಹಿಸಲು ಸಾಧ್ಯವಾಗಿಬಿಡುವುದರಿಂದ ಈ ಎಚ್ಚರಿಕೆ. ಮೊದಲು ಯಾವುದೇ ನಿಯಂತ್ರಣವಿರದೆ ಕದಪದ ಆಯೋಜಿಸಲು ಬಿಡುತ್ತಿದ್ದ ಎಷ್ಟೊ ತಂತ್ರಾಂಶಗಳು ಈಗ ದಿನಗಳೆದಂತೆ ಕೊಂಚ 'ಬುದ್ದಿವಂತಿಕೆ' ತೋರಿ, ಬಲವಂತದಿಂದಾದರೂ ಮಿಶ್ರಿತ ಪದಗುಚ್ಚಗಳನ್ನು ಮತ್ತು ಜತೆಗೆ ಅಂಕಿಯೆ ಮತ್ತಿತ್ತರ ವಿಶೇಷ ಸಂಜ್ಞೆಗಳನ್ನು ಬೆರೆಸುವಂತೆ ಪ್ರೇರೇಪಿಸುವ 'ಚಾಲೂಕುತನ' ತೋರುತ್ತವೆ; ಕನಿಷ್ಟ / ಗರಿಷ್ಟ ಸ್ಥಾನಾಕ್ಷರ ಬೇಕೆಂದು ದುಂಬಾಲು ಬೀಳುವ ತಂತ್ರಾಂಶಗಳೂ ಹೇರಳ. ಆದರೆ ಅಷ್ಟೆ ಅಶ್ಚರ್ಯಕರವಾಗಿ ಬರಿ ನಾಲ್ಕರಿಂದ ಆರಂಕಿಯಷ್ಟೆ ಬೇಡುವ ಬ್ಯಾಂಕಿನ ಏಟಿಏಮ್ಮುಗಳ ಪರಿ ಇನ್ನೊಂದೆಡೆ. ಬಹುಶಃ ತೀರಾ ಸಾಮಾನ್ಯ ಗ್ರಾಹಕರಿಗೂ ಉಪಯೋಗಿಸಲು ಸುಲಭವಿಟ್ಟಿರಬೇಕೆಂಬ ಆಶಯಕ್ಕೊ ಏನೊ, ಬ್ಯಾಂಕುಗಳೂ ಅದನ್ನು ಬದಲಿಸುವ ಗೋಜಿಗೆ ಹೋಗಿಲ್ಲ!
.
2. ಈ ಕದಪದಗಳ ಒಂದು ವ್ಯಂಗಪೂರ್ಣ ವೈಶಿಷ್ಟ್ಯವೆಂದರೆ - ಅದು ನೆನಪಿನಲಿಡಲಾಗುವಂತೆ ಸುಲಭ ಮತ್ತು ಸರಳವಿರಬೇಕಂತೆ; ಪರರಿಗೆ ಗೊತ್ತಾಗದ ಹಾಗೂ ಅನುಕರಿಸಲಾಗದಷ್ಟು ಕಠಿಣ ಯಾ ಕಷ್ಟಕರವೂ ಇರಬೇಕಂತೆ...ಅದೇ ನೋಡಿ ಕಷ್ಟದ ಕೆಲಸ; ಸರಳತೆ ಹಾಗೂ ಸಂಕೀರ್ಣತೆಯೆರೆಡು ಮೇಳೈಸಿದ ಹಾಗೆ ಮತ್ತು ಸುಲಭದಲ್ಲಿ ಮರೆಯಲಾಗದ ಹಾಗೆ ನೋಡಿಕೊಳ್ಳಬೇಕು. ಅದಕ್ಕೆಷ್ಟೊ ತರದ ದಾರಿಗಳನ್ನು ಹುಡುಕಿಕೊಳ್ಳಬಹುದು. ಅಲ್ಲಿ ಮುಖ್ಯ ಪಾಲಿಸಬೇಕಾದ ಒಂದು ಸರಳ ತತ್ವವೆಂದರೆ - ಅಕ್ಷರ, ಅಂಕಿಯ ಜತೆಗೆ ಕೀಲಿಮಣೆಯಲಿರುವ ಒಂದು ವಿಶೇಷ ಚಿಹ್ನೆಯನ್ನೂ ಖಡಾಖಂಡಿತವಾಗಿ ಸೇರಿಸುವುದು. ಅದರೆ ನೆನಪಿಡಲು ಸುಲಭವಾಗುವಂತೆ ಯಾವುದಾದರೂ ಕ್ರಮಾನುಸರಣೆಯನ್ನು ಅನುಸರಿಸಬೇಕು - ಉದಾಹರಣೆಗೆ- ಮೊದಲಿನಕ್ಷರ ಯಾವಾಗಲೂ ದಪ್ಪಕ್ಷರ (ಕ್ಯಾಪಿಟಲ್), ನಡುವಲೆಲ್ಲೊ ಅಂಕಿಗಳು, ಕೊನೆಯಲಿ ವಿಶೇಷ ಚಿಹ್ನೆಗಳು (ಉದಾಹರಣೆಗೆ ಅರ್ಧ ವಿರಾಮ ಚಿಹ್ನೆ)...
.
3. ಇನ್ನು ಈ ಕದಪದಗಳ ಉದ್ದ - ಈಗ ಮೊದಲಿನಂತೆ ಉದ್ದದ ಮೇಲಿನ ಮಿತಿ ಇರದಿದ್ದರೂ (ಕೆಲವು ಕಡೆ ಬಿಟ್ಟರೆ), ತೀರಾ ಉದ್ದದ ಕದಪದಗಳನ್ನು ನೆನಪಿಡುವುದೆ ಪ್ರಯಾಸ. ಎಲ್ಲಕ್ಕಿಂತ ಹೆಚ್ಚು ಪ್ರಯಾಸವೆಂದರೆ - ಯಾವ ಕದಪದ ಯಾವ ಬಾಗಿಲನ್ನು ತೆರೆಸುತ್ತದೆನ್ನುವುದರ ನೆನಪು. ಉದ್ದದ ಪ್ರಶ್ನೆಯನ್ನು ನಿಭಾಯಿಸಲು ಯಾವುದಾದರು ಮನದಟ್ಟಾದ ಹಾಗು ನೆನಪಿರುವ ವಾಕ್ಯವನ್ನು ಬಳಸಬಹುದು; ಇಲ್ಲವೆ ಅಂಥಹ ವಾಕ್ಯದ ಪದಗಳ ಮೊದಲಕ್ಷರಗಳನ್ನು ಹಿಂಜಿ, ಸಂಕ್ಷಿಪ್ತಗೊಳಿಸಿ ಅದಕ್ಕೆ ಸಂಖ್ಯೆ, ಚಿಹ್ನೆಗಳನ್ನು ಬೆರೆಸಿ ನೆನಪಿಡುವುದು ಇನ್ನೊಂದು ಬಗೆ. ಉದಾಹರಣೆಗೆ - ನೀವಿಷ್ಟ ಪಡುವ ಹಾಡೊಂದರ ಅಥವ ಗಾದೆಯೊಂದರ ಸಾಲಿನ ಪ್ರತಿಪದದ ಮೊದಲಕ್ಷರಗಳು - 'ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ' ಯಿಂದ 'ಬಿ, ಇ, ಇ, ಎನ್, ಕೆ' ಯನ್ನು ಆಯ್ದುಕೊಂಡು ಅದಕ್ಕೆ ಅಂಕೆ ಚಿಹ್ನೆಗಳನ್ನು ಮಿಶ್ರ ಮಾಡಿ, ನೆನಪಿಡುವ ಪ್ರಕ್ರಿಯೆಯನ್ನು ಸ್ವಲ್ಪ ಹಗುರಾಗಿಸಬಹುದು.
.
4. ಮತ್ತೊಂದು ಸಾಮಾನ್ಯವಾಗಿ ಕೊಡಲ್ಪಡುವ ಸಲಹೆ - ಒಂದೆ ಕದಪದ ಎಲ್ಲಾಕಡೆ ಬಳಸಬೇಡಿ ಎಂಬುದು. ಇದಂತೂ ತೀರಾ ಪಜೀತಿಯ ವಿಷಯ. ಒಂದನ್ನೆ ನೆನಪಿಡುವುದು ಕಷ್ಟ - ಅದರ ಜತೆಗೆ, ಯಾವ್ಯವ ಕದಪದ ಯಾವ್ಯಾವ ಕದ ತೆರೆಸೆ ಅನ್ನುವುದೂ ನೆನಪಿಡಬೇಕೆ! ವಿಧಿಯಿಲ್ಲ  - ಕೊನೆಗದು ನಿಮ್ಮ ವೈಯಕ್ತಿಕ ವಿಷಯಗಳ ಕದ ತೆರೆಸುವ ಕೀಲಿ ಕೈಯೂ ಆಗಿರುವುದರಿಂದ, ನಿಮ್ಮೆಚ್ಚರದಲಿ ನೀವಿರುವುದು ಒಳ್ಳೆಯದು ನೋಡಿ...ಹಾಳು ಕಣ್ಣಿಗೆ ಕಾಣದ ಕಳ್ಳರ ಕಾಟ ಒಂದೆರೆಡು ತರವಲ್ಲ. ನಿಮ್ಮ ಬೆನ್ನ ಹಿಂದೆಯೆ ನಿಮಗರಿವಿಲ್ಲದಂತೆಯೆ ಮಾಹಿತಿ ಕದ್ದು ಪರಾರಿಯಾಗಿಬಿಡುತ್ತಾರೆ. ಆ ದೃಷ್ಟಿಯಿಂದ ಕೆಲವು ಬೇರೆ ಬೇರೆ ಪಾಸ್ವರ್ಡ್ಗಳಿಟ್ಟುಕೊಂಡು ಬಳಸುವುದು ಕ್ಷೇಮ. ತೀರಾ ಹೆಚ್ಚು ಮಾಡಿಕೊಂಡು ಅದೂ ನೆನಪಾಗದೆ ನರಳುವಂತಿರಬಾರದು ಅಷ್ಟೆ...
.
5. ಒಂದು ವೇಳೆ ಮರೆತರು ಪ್ರಾಣಾಂತಿಕವೇನೂ ಇಲ್ಲವೆನ್ನಿ. ಮರೆತದ್ದನ್ನು ನೆನಪಿಸಲು ಅಥವ, ಅದನ್ನು ಅಳಿಸಿ ಹೊಸದನ್ನು ಪಡೆಯುವ ಸಲಕರಣೆ, ಪರಿಕರಗಳು ಎಲ್ಲರಲ್ಲೂ ಸಾಮಾನ್ಯವಾಗಿ ಇರುತ್ತವೆ - ಕೊಂಚ ತಲೆ ತಿನ್ನುವ 'ಪರೀಕ್ಷಾ ಪ್ರಶ್ನೆ' ಗಳನ್ನು ಹಾದು ಹೋಗಬೇಕಷ್ಟೆ (ಅದು ಇನ್ನೊಂದು ಬಗೆಯ ಸ್ಮರಣ ಶಕ್ತಿಯ ಪರೀಕ್ಷೆ, ಅದು ಬೇರೆ ಮಾತು ಬಿಡಿ). ಆದರೆ ಈ ಹೊಸದನ್ನು ಪಡೆವ ಸಂಭ್ರಮವೆ ಕದಪದಗಳ ಸಂಖ್ಯೆಯನ್ನು ಹೆಚ್ಚಿಸಿ ಮತ್ತಷ್ಟು ಗೊಂದಲವೆಬ್ಬಿಸುವ ಸಾಧ್ಯತೆಯೂ ಉಂಟು. ಕೆಲವು ಹಳೆಯ ಅಥವ ಮೊದಲ ನಾಲ್ಕೈದು ಬಾರಿಯ ತನಕದ ಕದಪದವನ್ನು ಮರುಬಳಸಲು ಒಪ್ಪದೆ ತಕರಾರು ಮಾಡುವುದರಿಂದ , ಹೊಸದೊಂದನ್ನು ಬಳಸಬೇಕಾಗುತ್ತದೆ - ಮತ್ತದನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಯಾವ ತಂತ್ರಾಂಶ / ಬಳಕೆಯ ಗಂಡನಿಗೆ ಯಾವ ಪಾಸ್ವರ್ಡ್ / ಕದಪದ ಹೆಂಡತಿಯೆಂಬುದನ್ನು ಕರಾರುವಾಕ್ಕಾಗಿ ನೆನಪಿಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಒಂದು ವಿಧದಲ್ಲಿ ಈ ಪಾಸ್ವರ್ಡುಗಳು ರಾಜನೊಬ್ಬನ ಅಂತಃಪುರದ / ಜನಾನಾದ ರಾಣಿಯರಿದ್ದ ಹಾಗೆ; ತಂದು ತಂದು ಹೊಸ ರಾಣಿಯರನ್ನು ಸೇರಿಸುತ್ತಲೆ ಇರುವುದರಿಂದ ಸಂಖ್ಯೆ ಬೆಳೆಯುತ್ತಾ ಹೋಗುತ್ತದೆ - ತಂದಿದ್ಯಾರನ್ನು, ಅವರ ಹೆಸರುಗಳೇನು ಅನ್ನುವುದು ನೆನಪಿನಲ್ಲಿಡಲಾಗದಂತೆ. ಏಷ್ಟೊ ಬಾರಿ, ರಾಜಕೀಯ ಕಾರಣಗಳಿಗಾಗಿ ತಂದ ಇಂತಹದೆ ಎಷ್ಟೊ ರಾಣಿಯರನ್ನು ಇಡಿ ಜೀವಮಾನದಲ್ಲೆ ಕೇವಲ ಒಂದೆರೆಡು ಬಾರಿಯಷ್ಟೆ ನೋಡಿರಬಹುದಾದ (ಕೇವಲ ಒಂದೇ ಬಾರಿ ಸಹ) ಸಾಧ್ಯತೆಗಳೂ ಸಾಕಷ್ಟು. ಬಹುಶಃ ಮುಂದೆಲ್ಲೊ ಆಕಸ್ಮಿಕವಾಗಿ ನೋಡಿ'ಯಾರೀಕೆ? ಎಲ್ಲೊ ನೋಡಿದ ಹಾಗಿದೆಯಲ್ಲ?' ಅಂತಲೂ ಎಷ್ಟೊ ಬಾರಿ ಅನಿಸಿರಬಹುದು....ನಮ್ಮ ಪಾಸ್ವರ್ಡುಗಳ ಕಥೆಯೂ ಹಾಗೆ - ಮನದೊಳಗಣ ಅಂತಃಪುರಕ್ಕೆ ತಂದು ತಂದು ಗುಡ್ಡೆ ಹಾಕುತ್ತಾ ಹೋದರೆ, ಯಾರು ನೆನಪಲಿ ಉಳಿಯುತ್ತಾರೊ, ಯಾರು ಪಟ್ಟಮಹಿಷಿಯಾಗಿ ಆಳುತ್ತಾರೊ, ಯಾರು ಮನ ಸಾಮ್ರಾಜ್ಯದ ರಾಣಿಯರಾಗುತ್ತಾರೊ ಹೇಳುವುದು ಹೇಗೆ? ಅವೆಲ್ಲ ತನ್ನಂತಾನೆ ನಿರ್ಧರಿಸಲ್ಪಡುವ ಮನ ಚಲನಶಾಸ್ತ್ರದ ಪ್ರತಿಮೆಗಳು!
.
6. ಇಷ್ಟೆಲ್ಲದರ ಮಧ್ಯೆಯು ಹೆಣಗದೆ ವಿಧಿಯಿಲ್ಲದಿರುವ ಕಾರಣ ಏನಾದರೂ ಒಂದು ಸುಲಭದ ದಾರಿಯನ್ನು ಕಂಡುಕೊಳ್ಳಲೇಬೇಕು. ಹಾಗೆಂದು ಹುಡುಕಾಟ ನಡೆಸಿರುವವರಿಗೆ ಒಂದು ಸಲಹೆಯ ರೂಪದ ಅಭಿಪ್ರಾಯ: 
6.1 ಮೊದಲೊಂದು ನಿಯಮ ರೂಪಿಸುಕೊಳ್ಳಿ -  ಉದಾಹರಣೆಗೆ ಈ ವರ್ಷ ಬಳಸುವ ಒಟ್ಟು ನಾಲ್ಕೈದು ಕದಪದಗಳು, ಮತ್ತು ಅದನ್ನು ಬಳಸುವ ಕ್ರಮಾನುಕ್ರಮ. ಹೀಗೆ ಪ್ರತಿವರ್ಷಕ್ಕೂ ನಿಮ್ಮಲ್ಲಿ ನಾಲ್ಕೈದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
6.2 ವರ್ಷದ ಆರಂಭದಲ್ಲಿ ನೀವು ಮೊದಲ ಬಾರಿಗೆ ಬಳಸುವಾಗ, ಹೊಸವರ್ಷದ ಮೊದಲ ಕದಪದಕ್ಕೆ ಬದಲಾಯಿಸಿಕೊಳ್ಳುತ್ತಾ ಹೋಗಿ. ಹೀಗೆ ಹೋದರೆ ನೀವು ಸದಾ ಬಳಸುವ ತಂತ್ರಾಂಶ / ಬಳಕೆಗಳು ಈ ಮೊದಲನೆಯ ಕದಪದಕ್ಕೆ ಬದಲಾಗುತ್ತವೆ. ಬೇರೆ ಬೇರೆ ಗುಂಪಿಗೆ ಬೇರೆಯದನ್ನು ಬಳಸಿ ಎಂಬುದು ಮತ್ತೊಂದು ಗಮನದಲ್ಲಿಡುವ ಅಂಶ. ಹೀಗೆ ಈ ಪ್ರಕ್ರಿಯೆ ಮುಂದುವರೆದರೆ ಮುಕ್ಕಾಲುಪಾಲು ಎಲ್ಲ ಕಡೆ ಈ ಐದರಲ್ಲಿ ಒಂದು ಕದಪದಕ್ಕೆ ಬದಲಾಗಿರುತ್ತದೆ. ಇಲ್ಲವಾದಲ್ಲಿ ಕಳೆದ ವರ್ಷದ ಐದರಲ್ಲಿ ಒಂದು ಮುಂದುವರೆದಿರುತ್ತದೆ. 
6.3 ನಡುವಲ್ಲಿ ಬದಲಿಸಬೇಕಿದ್ದರೂ ಈ ಐದರಲ್ಲಿ ಒಂದನ್ನು ಬಳಸಿ ಅಥವ ಅದಕ್ಕೆಂದೆ ನಿಯಮಿತವಾದ ಕದಪದವೊಂದನ್ನು ಉಪಯೋಗಿಸಿ. ಹೀಗಾದಲ್ಲಿ, ನೀವು ಕೆಲವೆ ಪಾಸ್ವರ್ಡುಗಳಲ್ಲಿ ಎಲ್ಲಾ ಕಡೆ ಅಡ್ಡಾಡುತ್ತ ನರ್ತಿಸಬಹುದು.
6.4 ಪ್ರಮುಖವಾದ, ತೀರಾ ವೈಯಕ್ತಿಕವಾದ ಕಡೆ ಬಳಸುವ ಕದಪದಗಳಿಗೆ ವಿಶೇಷ ಗಮನ ಕೊಡಿ. ಅದನ್ನು ನಿಯಮಿತ ರೂಪದಲ್ಲಿ, ಕೆಲವೆ ಕಡೆ ಬಳಸಿ ಮತ್ತು ಆದಷ್ಟೂ ಕಠಿಣವಿರುವಂತೆ ನೋಡಿಕೊಳ್ಳಿ. 
6.5 ಈ ಪ್ರಕ್ರಿಯೆಯಲ್ಲಿ ಯಾವಾಗಲೊ ಬಳಸುವ ಅಪರೂಪದ ಬಳಕೆಯ ತಂತ್ರಾಂಶ / ಜಾಗೆಗಳು ಸೇರಿಕೊಂಡರೆ ನೆನಪಿಡುವುದು ಮತ್ತು ನಿರ್ವಹಿಸುವುದು ಸುಲಭವಾಗುತ್ತದೆ. ಇಂತಹವುಗಳಿಗೆಂದೆ ಒಂದು ಬೇರೆಯೆ ಆದ ಕದಪದ ಮೀಸಲಾಗಿಟ್ಟರೆ. ವಾಸ್ತವಿಕವಾಗಿ ಈ ನಿಯಮವನ್ನು ಹೆಚ್ಚು ಕಡಿಮೆ ಎಲ್ಲಾ ಕಡೆ ಬಳಸಬಹುದು. ತೀರಾ ಸದಾ ಬಳಸುವ ಒಂದು ಕದಪದ, ತೀರಾ ವಿರಳ ಬಳಕೆಗೆ ಒಂದು, ಮಧ್ಯಮ ಬಳಕೆಗೆ ಒಂದು, ಇತ್ಯಾದಿ. ಆದರೆ, ಪ್ರತಿ ಬಳಕೆಯ ರೀತಿಗೊಂದೊಂದು ಎಂದು ಹೊರಡುವುದು ಉಚಿತವಲ್ಲ (ಉದಾಹರಣೆಗೆ -ಜಾಬ್ ಸೈಟ್ಸ್ಗೆ ಒಂದು, ವಾರ್ತಾಪತ್ರಿಕೆಗಳಿಗೆಲ್ಲಾ ಒಂದು..ಇತ್ಯಾದಿ)
.
ಈ ಮೂಲಭೂತ ಅಡಿಪಾಯದ ನೆಲೆಗಟ್ಟಿನಲ್ಲಿ, ಒಂದು ನಿಯಮಬದ್ಧತೆಯನ್ನು ಆರೋಪಿಸಿಕೊಂಡರೆ ಇದನ್ನು ನಿಭಾಯಿಸುವ ಪರಿಕರವೊಂದು ದೊರಕಿದಂತಾದೀತು - ಸರ್ವ ಪರಿಪೂರ್ಣವಿರದಿದ್ದರೂ, ಬಳಕೆಯ ಮಟ್ಟಿಗೆ ಸುರಕ್ಷಿತವೆನಿಸುವಷ್ಟರ ಮಟ್ಟಿಗೆ.
.
ಕೊನೆಯದಾಗಿ ಮುಕ್ತಾಯದ ಮಾತು. ಮುಂದೊಂದು ದಿನ ಇದೆಲ್ಲಾ ಸರಳಿಕೃತಗೊಂಡು ನಮ್ಮ ಕಣ್ಣು / ಕೈಬೆರಳುಗಳೆ ಕದಪದಗಳಾಗಿ (ಅಥವಾ ಇನ್ನಾವುದೊ ಅಂಗ - ಉದಾಹರಣೆಗೆ ಮಾಹಿತಿಯ 'ಚಿಪ್ಪೊಂದನ್ನು' ಹೇಗೊ ದೇಹದೊಳಕ್ಕೆ ಸೇರಿಸಿತ್ತೆಂದುಕೊಳ್ಳಿ!), ಜನಸಾಮಾನ್ಯರೂ ಎಗ್ಗಿಲದೇ (ಈ ನಾಡಿನ ಕೆಂಚ, ಬೋರಿಗಳೂ ಸಹ ಸಹಜವಾಗಿ) ಬಳಸಬಹುದಾದ ಸ್ಥಿತಿ ಬಂತೆಂದುಕೊಳ್ಳಿ. ಆಗ ಹೊಸತರದ ಪಂಥಗಳನ್ನು ಎದುರುಸಬೇಕಾಗುತ್ತದೆಯೊ, ಏನೊ. ಉದಾಹರಣೆಗೆ, ಆಗ ಸರಿಯಾದ ವ್ಯಕ್ತಿಯೊಬ್ಬನನ್ನು ಗುರುತಿಸಿ ಹೊತ್ತೊಯ್ದರೆ ಸಾಕು - ಅವನೆ ಅವನ ಪಾಸ್ವರ್ಡ್ ಆಗಿರುವುದರಿಂದ, ಅದನ್ನೆ ಬಳಸಿ ಅವನನ್ನು ಲೂಟಿ ಮಾಡಿಬಿಡಬಹುದು..ಅಂತಹದು ಆಗದ ಹಾಗೆ ತಂತ್ರಜ್ಞಾನವೂ ಸವಾಲಿಗೆ ಸವಾಲಾಗಿರುವಂತಹ ಉತ್ತರಗಳನ್ನು ಕಂಡು ಕೊಳ್ಳಬೇಕಾದ ಆಗತ್ಯವು ಆಗ ಇನ್ನು ಹೆಚ್ಚಾಗುತ್ತದೆ. ಒಟ್ಟಿನಲ್ಲಿ ಕಳ್ಳ ಪೋಲಿಸು ಆಟದ ಹಾಗೆ ತಂತ್ರಜ್ಞಾನ ಮತ್ತದನ್ನು ಏಮಾರಿಸುವವರ ನಡುವಿನ ಕಣ್ಣುಮುಚ್ಚಾಲೆ ಸದಾ ಮುಂದುವರೆದೇ ಇರುತ್ತದೆಂದು ಕಾಣುತ್ತದೆ, ಕೊನೆಯೆ ಇಲ್ಲದ ಹಾಗೆ!.
.
.
(ಸಂಪದ ಸೇರಿದ್ದ ಹೊಸತರಲ್ಲಿ ಬರೀ ಈ ಕವನ ಮಾತ್ರ ಸೇರಿಸಿದ್ದೆ - ಮನಕದಪದಗಳ ಕುರಿತದ್ದು. ಅದನ್ನಿಲ್ಲಿ ಮತ್ತೆ ಪುನರಾವರ್ತಿಸುತ್ತಿದ್ದೇನೆ - ಕವನ ಈ ಲೇಖನಕ್ಕೆ ಸಂಬಂಧಿಸಿದಂತೆ ಬರೆದ ಕಾರಣ)
(link: http://sampada.net/%E0%B2%85%E0%B2%82%E0%B2%A4%E0%B2%B0%E0%B2%82%E0%B2%9...)
.
ಅಂತರಂಗದಂತಃಪುರದ ಕದಪದ ಮನದನ್ನೆಯರು...!
__________________________________
.
ಈ ಆಧುನಿಕ ಯುಗದಲಿ 
ಒಬ್ಬೊಬ್ಬರೂ ರಾಜರು, ಮಹರಾಜರು,
ಚಕ್ರವರ್ತಿಗಳು.
ಎಲ್ಲರ ಮನದಲೂ ವಿಸ್ತಾರ
ವಾಹ್! ಎಷ್ಟು ದೊಡ್ಡ ಅಂತಃಪುರ!
ತುಂಬಿ ತುಳುಕುವ ಜನಾನದಲ್ಲಿ
ಎಷ್ಟೊಂದು ರಾಣಿಯರಿಲ್ಲಿ
ಮಹರಾಣಿಯರೆ ತುಂಬಿದ ಗಲ್ಲಿ
ಮನದನ್ನೆಯರೂ ಅಲ್ಲಲ್ಲಿ;
ಬರುವ ಬರದಿರುವ 
ಅರಸನ ಕಾಯುವ ಮಲ್ಲಿಗಳ
ಹೆಕ್ಕಿ, ಅಪ್ಪಿ, ಮುದ್ದಾಡಿ ಬಳಸುವ
ಸರ್ವಸ್ವವೇ ನೀನೆಂದು 
ಓಲೈಸುವ
ಬರದಿರುವನೆ? ಬಂದೆ ಬರುವ!
ಎಂದು ಗತ್ತಲಿ ಮೆರೆವ,
ಕ್ಷಣ ಗಳಿಗೆ ದಿನವೂ ಎಡಬಿಡದೆ
ಮನದಂತಃಪುರದ
ಮನದನ್ನೆಯರಾಗಿ 
ಜೊತೆಗೆ ಜೋತುಬಿದ್ದು 
ಜೋಳಿಗೆಯಾದ,
ಬರಲೆ ಇಲ್ಲವಲ್ಲವೆಂದು
ಬಾಯಾರಿ, ಕಾದು, ಬೇಸತ್ತು
ಹೆಚ್ಚೂಕಡಿಮೆ ಸತ್ತೂ ಹೋದ,
ಅರಸುತ್ತಲೆ ಬಳಲಿದ
ಎಷ್ಟೊಂದು ಅರಸಿಯರ 
ಬಳುಕು ನಲ್ಲೆಯರ
ಅವರ ದಾಸದಾಸಿಯರ
ಸದ್ದಿಂದಲೆ ತುಂಬಿ 
ಮೌನವಾಗಿ ಅಳುತಿಹ 
ಸಾವಿರ ಸಾವಿರ 
ಮನಕದಪದಗಳ ಅವಾಂತರ
ಈ 'ಪಾಸ್ವರ್ಡುಗಳೆಂಬ'
ರಾಣಿಯರಿಂದ ತುಂಬಿ
ಚೆಲ್ಲಾಡುವ
ನಮ್ಮ ನಿಮ್ಮೆಲ್ಲರ
ಈ ಮನದಂತಃಪುರ!
.
----------------------------------
ನಾಗೇಶ ಮೈಸೂರು, ಸಿಂಗಾಪುರ
----------------------------------

Comments

Submitted by H A Patil Sun, 12/22/2013 - 19:25

ನಾಗೇಶ ಮೈಸೂರು ರವರಿಗೆ ವಂದನೆಗಳು
'ಬೆಳಗಾಗಿ ನಾನೆದ್ದು ಯಾರ್ಯಾರ್ನ ನೆನೆಯಲಿ' ಒಂದು ಸಕಾಲಿಕ ಮತ್ತು ಸಂಪೂರ್ನ ಮಾಹಿತಿಯನ್ನೊಳಗೊಂಡ ವಿವರವುಳ್ಳ ಕವನ. ವಿವರವಾಗಿ ದಾಖಲಿಸುವ ನಿಮ್ಮ ತಾಳ್ಮೆ ಮತ್ತು ಏಕಾಗ್ರತೆಯನ್ನು ಮೆಚ್ಚಲೆಬೇಕು. 'ಕದಪದ' ಮತ್ತು 'ಮನಕದಪದ'ಗಳ ಕುರಿತು ಎಷ್ಟು ಸವಿವರ ವಾಗಿ ದಾಖಲಿಸಿದ್ದರಿ, ಓದಿ ಖುಷಿಯಾಯಿತು. ಇನ್ನೊಂದು ವಿಷಯ ಎರಡನೆ ಪ್ಯಾರಾದ ಕೊನೆಯಲ್ಲಿ <<< ( ಸಧ್ಯ ಯಾರಾದರೂ ಟೆಕ್ಕಿ .................ಕೆಲವೆಡೆ ಆಗಲೆ ಇರಲೂ ಬಹುದೇನೋ ) >>>. ಇಂತಹ ಆನ್ ಲೈನ್ ಪೂಜೆಯ ಪುರೋಹಿತರನ್ನು ನಾಗತಿಹಳ್ಳಿ ಚಂದ್ರಶೇಖರ ತಮ್ಮ ಚಿತ್ರವೊಂದರಲ್ಲಿ ತೋರಿಸಿ ಬಿಟ್ಟಿದ್ದಾರೆ. ಆ ಚಿತ್ರದ ಹೆಸರು ನನಗೆ ನೆನಪಿಗೆ ಬರುತ್ತಿಲ್ಲ, ಅದರಲ್ಲಿ ಪೋಷಕ ಪಾತ್ರಗಳಲ್ಲಿ ಸುರೇಶ ಹೆಬ್ಳಿಕರ್ ಮತ್ತು ಮಮತಾ ರಾವ್ ಅಭಿನಯಿಸಿದ್ದಾರೆ. ಅದು ಅಮೇರಿಕಾ ಅಮೇರಿಕಾ ನಂತರ ಬಂದ ಚಿತ್ರವಿರಬಹುದು. ಅದರಲ್ಲಿ ಬಿ.ಜಯಶ್ರೀ ಯವರು ಹಾಡಿದ << ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್ >> ಆಗ ಬಹಳ ಜನಪ್ರಿಯವಾದ ಹಾಡಾಗಿತ್ತು. ಉತ್ತಮ ವಿರಣೆಯುಳ್ಳ ಕವನ ಧನ್ಯವಾದಗಳು ಸರ್.

Submitted by nageshamysore Mon, 12/23/2013 - 05:12

In reply to by H A Patil

ಪಾಟೀಲರೆ ನಮಸ್ಕಾರ, ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು. ಪಾಸ್ವರ್ಡುಗಳ ಜಗ ಎಲ್ಲರನ್ನು ಕಾಡುವ ವಸ್ತುವಾದ್ದರಿಂದ ಸ್ವಲ್ಪ ವಿವರವಾಗಿ ದಾಖಲಿಸಿದೆ - ಅವುಗಳ ಜತೆ ಪರದಾಡುವ'ನಾನ್-ಐಟಿ' ಜನರಿಗೆ ಸ್ವಲ್ಪ ಉಪಯುಕ್ತವಾಗಬಹುದೆಂಬ ಅನಿಸಿಕೆಯಲ್ಲಿ. ಹಾಗೂ ಒಂದು ಪುಟ್ಟ ಮಾಹಿತಿ ಮರೆತುಹೋಯ್ತು - ನಿಗದಿತ ಅವಧಿಗೊಮ್ಮೆ ಕದಪದ ಬದಲಿಸಲು ಪ್ರೇರೇಪಿಸುವ ಕುರಿತು. ಅದು ಕೂಡ ಕದಪದ ನೆನಪಿಡುವ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತವೆ!

ನೀವು ಹೇಳಿದ 'ಕಾರ್ ಕಾರ್' ಹಾಡನ್ನು ಸಾಕಷ್ಟು ಬಾರಿ ಕೇಳುತ್ತಿರುತ್ತೇನೆ - ಯಾಕೆಂದರೆ ಅದು ನನ್ನ ಮಗನಿಗೆ ಪ್ರಿಯವಾಗಿದ್ದ ಹಾಡುಗಳಲ್ಲೊಂದು. ಈಗ ಇಲ್ಲಿ ಚಿತ್ರ / ವಿಡಿಯೊ ಸಿಗುತ್ತ ಹುಡುಕುತ್ತೇನೆ. ಚಿತ್ರದ / ಆನ್ಲೈನ್ ಪೂಜೆಯ ಮಾಹಿತಿಗೂ ಧನ್ಯವಾದಗಳು :-)

Submitted by ಶ್ರೀನಿವಾಸ ವೀ. ಬ೦ಗೋಡಿ Mon, 12/23/2013 - 14:07

In reply to by H A Patil

@H A Patil [ ಆ ಚಿತ್ರದ ಹೆಸರು ನನಗೆ ನೆನಪಿಗೆ ಬರುತ್ತಿಲ್ಲ]
ಪಾಟಿಲರೆ, ಆ ಚಿತ್ರ "ನನ್ನ ಪ್ರೀತಿಯ ಹುಡುಗಿ".

Submitted by H A Patil Tue, 12/24/2013 - 20:40

In reply to by ಶ್ರೀನಿವಾಸ ವೀ. ಬ೦ಗೋಡಿ

ಶ್ರೀನಿವಾಸ ಬಂಗೋಡಿ ಯವರಿಗೆ ವಂದನೆಗಳು ನನಗೆ ಮರೆತು ಹೋದ ಆ ಚಿತ್ರದ ಹೆಸರನ್ನು ತಿಳಿಸಿದ್ದೀರಿ ಧನ್ಯವಾದಗಳು.

Submitted by ಗಣೇಶ Sun, 12/22/2013 - 21:21

ನಾಗೇಶರೆ,
ಮನಕದಪದ- ಪಾಸ್ವರ್ಡ್‍ಗಿಂತಲೂ ಕಷ್ಟ ಈ ಪದ ನೆನಪಿಡುವುದು.. :) ಪಾಸ್ವರ್ಡ್‍ಗಳನ್ನು ನೆನಪಿಡಲು ನಾನು ಸುಲಭದ ದಾರಿ ಹುಡುಕಿದ್ದೆ. ಅದನ್ನು ಯಾರಿಗೂ ಸಿಗದ ಒಂದು ಪುಸ್ತಕದಲ್ಲಿ ಯಾವುದೋ ಪೇಜ್‌ನ ಎಡೆಯಲ್ಲಿ ಬರೆದಿಡುವುದು... ಸಮಸ್ಯೆ ಎಂದರೆ ಆ ಪುಸ್ತಕ ನೆನಪಿರುವುದಿಲ್ಲಾ:) ನೆಟ್‌ನಲ್ಲಿ ನನ್ನ ಪಾಸ್ವರ್ಡ್ ನೆನಪಿಡುವ ಕೆಲಸ ನನ್ನ ಕಂಪ್ಯೂಟರ್‌ನ ಫೈರ್ ಪಾಕ್ಸ್‌ಗೆ ವಹಿಸಿದ್ದೇನೆ. ಆದ್ದರಿಂದ ಬೇರೆ ಕಂಪ್ಯೂಟರ್‌ನಲ್ಲಿ ಸಂಪದ ಸಹ ಎಂಟರ್ ಆಗಲು ಸಾಧ್ಯವಿಲ್ಲ.:) ನೀವು ತಿಳಿಸಿದ ಉಪಾಯ ಚೆನ್ನಾಗಿದೆ.
ಅಂತರಂಗದಂತಃಪುರದ ಕದಪದ ಮನದನ್ನೆಯರು...! ಸೂಪರ್ ಕವನ. ಅದು ಹೇಗೋ ಓದದೇ ಮಿಸ್ ಮಾಡಿಕೊಂಡೆ- ಅಥವಾ ಓದಿ ಆಗ ಅರ್ಥಮಾಡಿಕೊಳ್ಳಲಿಲ್ಲವೋ..ಈಗಂತು ಚೆನ್ನಾಗಿ ಅರ್ಥವಾಯಿತು.

Submitted by nageshamysore Mon, 12/23/2013 - 05:30

In reply to by ಗಣೇಶ

ಗಣೇಶ್ ಜಿ,

ಕದಪದ ಸಾಕು, 'ಮನಕದಪದ' ಬರಿ ಅಲಂಕಾರಿಕವಷ್ಟೆ :-) ('ಖುಲ್ ಜಾ ಸಿಮ್ ಸಿಮ್' ಗಿಂತ ವಾಸಿ ಅಲ್ಲವಾ?).

ಮೊದಲು ಬರೆದಿದ್ದು ಕವನವೆ.  ಗೆಳೆಯರಿಂದ ಆಗಾಗ್ಗೆ ಬದಲಿಸಬೇಕಾದ ಪಾಸ್ವರ್ಡುಗಳು, ಅವನ್ನು ನೆನಪಿನಲ್ಲಿಡುವ ತಲೆನೋವನ್ನು ಕುರಿತು ಕೇಳುತ್ತಿದ್ದೆ. ಅದಕ್ಕೆ ಲಘು ಹಾಸ್ಯದ ಲೇಪನ ಕೊಟ್ಟು ಈ ಲೇಖನ ಬರೆದು ವಿಸ್ತರಿಸಿದ್ದು. ಈ ಕ್ಷಿಪ್ರ ಬದಲಾವಣೆಯ ದಿನಗಳಲ್ಲಿ ಕದಪದದ ವಿಧಾನಗಳು ಬದಲಾಗುತ್ತಲೆ ಇರುವುದರಿಂದ ಪ್ರಸ್ತುತ ಚಲಾವಣೆಯಲಿರುವ ವಿಧಾನ ಕುರಿತು ಬರೆದಿಟ್ಟೆ - ಒಂದು ರೀತಿಯ ದಾಖಲೆಯಂತೆ. ಮುಂದೊಮ್ಮೆ ಓದಿ, 'ಮೊದಲು ಎಷ್ಟು ಒದ್ದಾಟ ಇರುತ್ತಿತ್ತು ಕದಪದ ನೆನಪಿಡಲಿಕ್ಕೆ ' ಅಂತ ನೆನಸಿಕೊಳ್ಳಲಾದರೂ ಆಗಲಿ ಅಂತ :-)

ಸಂಪದದ ತುಂಬಾ ಹೊಸದಿನಗಳಲ್ಲಿ ಬರೆದ ಕವನ - ನೇರ ಕವಿತೆಯ ವಿಭಾಗದಲ್ಲಿ ಹಾಕಿದ್ದು. ಅಷ್ಟಾಗಿ ಗಮನ ಸೆಳೆಯಲಿಲ್ಲವೆಂದು ಕಾಣುತ್ತದೆ. ಈಗ ಕವನಕ್ಕೆ ಲೇಖನವೂ ಸೇರಿದ ಜಂಬೋ ರೀಡಿಂಗ್!

Submitted by lpitnal Wed, 12/25/2013 - 09:33

ಪ್ರಿಯ ನಾಗೇಶಜಿ, ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ, ಲೇಖನ ಪಾಸವರ್ಡಗಳ ಕುರಿತಾಗಿ, ತಂತ್ರಜ್ಞಾನದ ಕುರಿತು, ಅದರ ಕಳ್ಳರ ಕುರಿತು ನಾವು ಎಷ್ಟು ಎಚ್ಚರದಿಂದಿದ್ದರೂ ಕಡಿಮೆ ಎನ್ನುವ ಮಾತು ಅರ್ಥಪೂರ್ಣ. ಹಾಗೆಯೇ ಕವನವು ಚನ್ನಾಗಿ ಮೂಡಿದೆ. ಧನ್ಯವಾದಗಳು.

Submitted by nageshamysore Fri, 01/03/2014 - 20:14

In reply to by lpitnal

ಇಟ್ನಾಳ್ ಜಿ ನಮಸ್ಕಾರ,
.
ಈಗಿನ ತಂತ್ರಜ್ಞಾನ ಹಾಗೂ ವೇಗದ ಯುಗದಲ್ಲಿ ಎಷ್ಟು ಎಚ್ಚರದಲಿದ್ದರೂ ಏಮಾರಿಸುವ ಚಾಣಾಕ್ಷರಿರುವ ವಾತಾವರಣ. ಸಾಧ್ಯವಿದ್ದಷ್ಟು ಎಚ್ಚರವಿರುವುದೆ ನಮ್ಮಿಂದಾಗುವ ಕೆಲಸ. ತಮ್ಮೆ ಪ್ರತಿಕ್ರಿಯೆ, ಪ್ರೋತ್ಸಾಹಕ್ಕೆ ನಮ್ರಪೂರ್ಣ ಕೃತಜ್ಞತೆಗಳು :-)
.
ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು

Submitted by nageshamysore Fri, 01/03/2014 - 19:48

In reply to by kavinagaraj

ಕವಿ ನಾಗರಾಜರಿಗೆ ನಮಸ್ಕಾರ ಮತ್ತು ಧನ್ಯವಾದಗಳು.. ಕದಪದ (ಕದ ತೆರೆಸುವ ಪದ) ನನಗೂ ತುಂಬಾ ಹಿಡಿಸಿದ ಪದ. ರಹಸ್ಯ ಪದ, ಗುಟ್ಟಿನ ಪದ, ಕೀಲಿ ಪದ - ಹೀಗೆ ಎಷ್ಟೋ ತರಹದ ರೂಪಾಂತರ ಸಾಧ್ಯತೆಯಿದ್ದರೂ ಈ ಪದ ತುಸು ಲಾಲಿತ್ಯಪೂರ್ಣವಾಗಿದೆಯೆನಿಸಿದ್ದರಿಂದ ಅದನ್ನೆ ಬಳಸಿದೆ.

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು