ಬೆಟ್ಟ ಹತ್ತೋಣ ಬನ್ನಿರೋ..೨ (ಹತ್ತುವ ಮುನ್ನ)

ಬೆಟ್ಟ ಹತ್ತೋಣ ಬನ್ನಿರೋ..೨ (ಹತ್ತುವ ಮುನ್ನ)

ಚಿತ್ರ

ಗಡಾಯಿ ಕಲ್ಲು(ಜಮಾಲಾಬಾದ್ ಕೋಟೆ) ಹತ್ತುವ ಮೊದಲು ಕೆಲವು ಅಗತ್ಯ ಸೂಚನೆಗಳನ್ನು ಹೇಳುವೆ. ಚಾರಣ ಮಾಡಿ ಅಭ್ಯಾಸವಿಲ್ಲದ ಹೊಸಬರು ತಿಳಕೊಳ್ಳಲು-
-ಸಾಧ್ಯವಾದಷ್ಟು ನೀರಿನ ಬಾಟಲುಗಳು ಪ್ರತಿಯೊಬ್ಬನ ಬ್ಯಾಗಲ್ಲೂ ಇರಬೇಕು. ಬೆನ್ನಿಗೆ ನೇತು  ಹಾಕುವಂತಹದ್ದು (ಸ್ಕೂಲ್ ಬ್ಯಾಗ್ ತರಹ) ಉತ್ತಮ. ಕ್ಯಾಂಡಿ, ಚಾಕಲೇಟುಗಳು-ಹಾದಿಯುದ್ದಕ್ಕೂ ಚಪ್ಪರಿಸಲು.(ಗುಡ್ಡದ ಮೇಲೆ ಒಂದು ಕೆರೆಯಿದೆ. ಉಪಯೋಗಿಸಲು ಮನಸ್ಸಾಗದು. ಇನ್ನೊಂದು ಕಡೆ ನೀರಿನ ಒರತೆ ಸ್ವಲ್ಪ ಇದೆ. ಇನ್ನು ಸ್ವಲ್ಪ ದಿನದಲ್ಲಿ ನಿಲ್ಲಬಹುದು- ಚಿತ್ರ ೩ ಮತ್ತು ೪ )
-ಸ್ಲಿಪ್ಪರ್‌ಗಳ ಬದಲು ಸ್ಪೋರ್ಟ್ಸ್ ಶೂ ಉಪಯೋಗಿಸುವುದು ಉತ್ತಮ.
-ಸನ್ ಸ್ಕ್ರೀನ್ ಲೋಶನ್/ಕೋಲ್ಡ್ ಕ್ರೀಂಗಳೂ ಜತೆಗಿರಲಿ. (ಫುಲ್ ಕೈ ಶರ್ಟ್ ಹಾಕಿದ್ದರಿಂದ, ನನಗೆ ಹುಲ್ಲಿನೆಡೆಯಲ್ಲಿ ಹೋಗುವಾಗ ಏನೂ ತೊಂದರೆ ಆಗಲಿಲ್ಲ. ಅರ್ಧಕೈ ಶರ್ಟ್ ಹಾಕಿದವರಿಗೆ ಹುಲ್ಲಿನಿಂದಾಗಿ ತುರಿಕೆ ಮತ್ತು ಸೂರ್ಯನ ಬಿಸಿಲಿಗೆ ಉರಿ ಆಯಿತು.)
-ಬಿಸಿಲ ಝಳ ಜಾಸ್ತಿ ಇರುವಾಗ ಹ್ಯಾಟ್/ ಛತ್ರಿ ಸಹ ಬೇಕು.
-ಒಂದೆಡೆ ರಸ್ತೆ ಇಬ್ಬಾಗವಾಗಿ ಬಲಗಡೆಯದ್ದು ಸುಲಭದ ಹಾದಿ, ಎಡಗಡೆಯದ್ದು ಸ್ವಲ್ಪ ಕಷ್ಟದ ಹಾದಿ ಸಿಗುವುದು. ನಾವು ಕಷ್ಟದ ಹಾದಿಯನ್ನೇ ಆಯ್ಕೆ ಮಾಡಿ ಹೋದೆವು (ಚಿತ್ರ ೫). ಅಲ್ಲಿ ಒಂದೆಡೆ ಎತ್ತರದ ಬಂಡೆಯನ್ನು ಏರಬೇಕಾಗಿ ಬಂತು. ಎಲ್ಲರನ್ನು ಹತ್ತಿಸಿ ದಾಟಿದ ಮೇಲೆ ನಾನು ಹತ್ತಲು ಹೊರಟೆ. ಟೈಟ್ ಜೀನ್ಸ್ ಪ್ಯಾಂಟ್ ಹಾಕಿದ್ದರಿಂದ, ಕಾಲು ಅಷ್ಟು ಎತ್ತರಕ್ಕೆ ಇಡಲು ಆಗಲೇ ಇಲ್ಲ. ಹೇಗೋ ಕಷ್ಟಪಟ್ಟು ದಾಟಿದೆ ಅನ್ನಿ. ಅದಕ್ಕೇ ಸ್ವಲ್ಪ ಸಡಿಲ ಇರುವ ಡ್ರೆಸ್ ಹಾಕಿಕೊಳ್ಳುವುದು ಉತ್ತಮ.
-ಕೋಟೆ ಕಟ್ಟಿದವರೇ ತಮ್ಮ ಹೆಸರನ್ನು ಅಲ್ಲೆಲ್ಲೂ ಕೆತ್ತಿಲ್ಲ. ಕೋಟೆ ಹತ್ತಿದವರು ತಮ್ಮ ಹೆಸರನ್ನು ಅಲ್ಲಿ ಬರೆಯುವುದು ಬೇಡ (ಚಿತ್ರ ೬).
-ಪ್ಲಾಸ್ಟಿಕ್ ಬಾಟಲ್, ತಟ್ಟೆ ಇತ್ಯಾದಿ ಖಾಲಿಯಾದ ಮೇಲೆ ಅಲ್ಲಿ ಎಸೆಯದೇ ತಮ್ಮ ಬ್ಯಾಗಲ್ಲೇ ಪುನಃ ತುಂಬಿಸಿಕೊಳ್ಳಬೇಕು.
-ಬಿಎಸ್‌ಎನ್‌ಎಲ್/ಏರ್‌ಟೆಲ್  ಮೊಬೈಲ್ ರೇಂಜ್ ಬೆಟ್ಟದ ಮೇಲೂ ಸಿಗುತ್ತದೆ. ಆಗಾಗ ಮನೆಯವರಿಗೆ ನಿಮ್ಮ ಕ್ಷೇಮ ಸಮಾಚಾರ ತಿಳಿಸಬಹುದು. (ಕೊನೆಯ ಚಿತ್ರ- ಗುಡ್ಡದ ಮೇಲೆ ಇರುವ unmanned microwave repeater station- http://en.wikipedia.org/wiki/Repeater )
- ಅತೀ ಮುಖ್ಯ ವಿಷಯ : ನಿಮ್ಮ ಜತೆ ಮಕ್ಕಳಿದ್ದರೆ, ಅವರ ಪಾಡಿಗೆ ಹೋಗಲು ಬಿಡಬೇಡಿ. ಚಾಕಲೇಟು ಇತ್ಯಾದಿ ಕೊಟ್ಟುಕೊಂಡು, ಕತೆ ಹೇಳಿಕೊಂಡು, ಜತೆಯಲ್ಲೇ ಇರುವಂತೆ ನೋಡಿಕೊಳ್ಳಬೇಕು. (ಚಿತ್ರ ೭ ಗಮನಿಸಿ- ಸ್ವಲ್ಪ ಹುಡುಗಾಟ ಆಡಿದರೆ ಪಾತಾಳ..)
ಇನ್ನು ಬೆಟ್ಟ ಹತ್ತೋಣ ಬನ್ನಿ..
(ಇನ್ನೂ ಇದೆ)

Rating
No votes yet

Comments

Submitted by nageshamysore Mon, 12/23/2013 - 04:55

ಗಣೇಶ್ ಜಿ, ಜಾಗ ಚಿತ್ರಗಳಲ್ಲೆ ತುಂಬಾ ಕುತೂಹಲಕಾರಿಯಾಗಿದೆ. ಬಹುಶಃ ಹತ್ತಲು ಸುಲಭವಲ್ಲ ಅನ್ನುವ ಕಾರಣ ಜಾಗವನ್ನು 'ತೀರಾ' ಗಬ್ಬೆಬ್ಬಿಸಲು ಸಾಧ್ಯವಾಗಿಲ್ಲವೆಂದುಕೊಳ್ಳುತ್ತೇನೆ (ಚಿತ್ರ ಆರರಂತೆ ಹೆಸರು ಬರೆದುದರ ಹೊರತಾಗಿ). ಚಿತ್ರ ನಾಲ್ಕರ ನೀರಿನ ಒರತೆಗೆ ಎಲೆ ಇಟ್ಟು ತೋರಿಸಿದ ರೀತಿ ಚೆನ್ನಾಗಿದೆ.  ಚಾರಣದ ಮುಂದಿನ ಭಾಗ ವಿವರಣೆಗೆ ಕಾಯುತ್ತಿದ್ದೇನೆ :-)

Submitted by ಗಣೇಶ Tue, 12/24/2013 - 23:51

In reply to by nageshamysore

-ಬಹುಶಃ ಹತ್ತಲು ಸುಲಭವಲ್ಲ ಅನ್ನುವ ಕಾರಣ...
ನಾಗೇಶರೆ, ಪಾರ್ಥರು ನನ್ನೊಂದಿಗೆ ಫೋಟೋ ತೆಗೆಯಲು "ಪನೊರಮ ವ್ಯೂ" ತೆಗೆಯಬಹುದಾದ ಕ್ಯಾಮರಾ ತೆಗೆದುಕೊಂಡು ಬರುವೆ ಅಂದಿದ್ದರು. ಆ ಗಾತ್ರದ ನಾನೇ ಬೆಟ್ಟ ಹತ್ತಿದ್ದೇನೆ ಅಂದ ಮೇಲೆ ಸುಲಭ ಅಂದೇ ಲೆಕ್ಕ.. ಜನವರಿಯಿಂದ ಮೇ ವರೆಗೂ ಚಾರಣಿಗರ ಧಾಳಿ-ಧಾಂದಲೆ ಇರುವುದು.
--ಚಿತ್ರ ನಾಲ್ಕರ ನೀರಿನ ಒರತೆಗೆ ಎಲೆ ಇಟ್ಟು ತೋರಿಸಿದ ರೀತಿ ಚೆನ್ನಾಗಿದೆ.
ಊಟದ ಸಮಯ...ಕೆರೆಯ ನೀರಲ್ಲಿ ಗಲೀಜಿಲ್ಲದಿದ್ದರೂ ಕೈತೊಳೆಯಲು ಮನಸ್ಸಾಗಲಿಲ್ಲ. ನಾವು ತೆಗೆದುಕೊಂಡು ಹೋದ ನೀರು ಕೈತೊಳೆಯಲೇ ಖಾಲಿಯಾಗಬಹುದು ಎಂದಾಲೋಚಿಸಿ, ಕಲ್ಲಿಗೆ ತಾಗಿಯೇ ಇಳಿಯುತ್ತಿದ್ದ ನೀರಿಗೆ ಎಲೆಯನ್ನಿಟ್ಟು ಪ್ರಯತ್ನಿಸಿದೆ...ದೊಡ್ಡ ಸಂಶೋಧನೆ ಮಾಡಿದಷ್ಟು ಖುಷಿಯಾಯಿತು :) ಅದಕ್ಕೆ ನೆನಪಿಗೆ ಫೋಟೋ ತೆಗೆದೆ...

Submitted by H A Patil Mon, 12/23/2013 - 13:59

ಗಣೇಶ ರವರಿಗೆ ವಂದನೆಗಳು
'ಬೆಟ್ಟ ಹತ್ತೋಣ ಬನ್ನಿರೊ' ಎರಡೂ ಲೇಖನಗಳನ್ನು ಓದಿರುವೆ, ಬರಹ ಓದಿ ಚಿತ್ರಗಳನ್ನು ನೋಡಿ ಜಮಾಲಾಬಾದ ಕೋಟೆ ಮತ್ತು ಆ ಫಾಸಲೆಯ ಪರಿಸರ ನ್ವತಃ ನೋಡಿದಷ್ಟು ಅನುಭವ ನೀಡಿತು. ಜಮಾಲಾಬಾದ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು.

Submitted by ಗಣೇಶ Wed, 12/25/2013 - 00:01

In reply to by H A Patil

ಪ್ರವಾಸ ಕಥನಗಳನ್ನು ಓದುವಾಗ ನನಗೂ ಹಾಗೇ..ನಾನೇ ಸುತ್ತಾಡಿದ ಹಾಗೇ ಅನುಭವಿಸುವೆ. ಇಲ್ಲೂ ನನ್ನ ಉದ್ದೇಶ-ನೋಡಲು ಸಾಧ್ಯವಿಲ್ಲದವರಿಗೆ ತಾವೇ ನೋಡಿದ ಹಾಗೆ ಕೊಂಚ ಮಟ್ಟಿಗೆ ಅನಿಸಿದರೂ ಸಾಕು. ಇನ್ನು ಹೋಗಲು ಸಾಧ್ಯವಿರುವವರಿಗೆ ಹುಮ್ಮಸ್ಸು ಬರಬೇಕು.. ಧನ್ಯವಾದಗಳು ಪಾಟೀಲರೆ.

Submitted by ಗಣೇಶ Sat, 12/28/2013 - 00:30

In reply to by kavinagaraj

ಧನ್ಯವಾದ ಕವಿನಾಗರಾಜರಿಗೆ.
ಸಂಪದದ ಹೊಸರೂಪ ಬಹಳ ಇಷ್ಟವಾಯಿತು.
ಎಲ್ಲೆಲ್ಲಿ ನೋಡಲಿ "ಸಂಪದ"ವನ್ನೇ ಕಾಣುವೆ..ಟ್ವಿಟ್ಟರ್,ಫೇಸ್ ಬುಕ್, ಗೂಗ್‌ಲ್ ಪ್ಲಸ್...ಹೀಗೇ ಎಲ್ಲಾ ಕಡೆ ಸಂಪದ ಬೆಳಗಲಿ..
ಹೊಸವರ್ಷದಲ್ಲಿ ಸಂಪದಿಗರೆಲ್ಲರ ಪರ್ಸಲ್ಲೂ, ಬ್ಯಾಂಕ್ ಅಕೌಂಟಲ್ಲೂ "ಸಂಪದ" ಹೆಚ್ಚಲಿ ಎಂದು ಹಾರೈಸುವ
-ಗಣೇಶ.

Submitted by lpitnal Wed, 12/25/2013 - 09:23

ಆತ್ಮೀಯ ಗಣೇಶಜಿ, ಬೆಟ್ಟ ಹತ್ತೋಣ ಬನ್ನಿರೋ, ಚಾರಣದ ವಿವರಗಳ ಜೊತೆ ಸುಂದರ ಆಪ್ತ ಅನುಭವಗಳನ್ನು ನೀಡುವ ಲೇಖನಮಾಲೆ, ಹೀಗೆ ಕೆಲ ವರ್ಷಗಳ ಹಿಂದೆ ಕೊಲ್ಲೂರು ಮೂಕಾಂಬಿಕೆ ದರ್ಶನ ಮುಗಿಸಿ, ಶಿವಮೊಗ್ಗಕ್ಕೆ ಬರುವಾಗ ಬರುವ ದಾರಿಯಲ್ಲಿ ಕೊಡಚಾದ್ರಿ ಶಂಕರ ಪೀಠಕ್ಕೆ ಅರ್ಧ ದಾರಿ ಜೀಪಲ್ಲಿ ಮೇಲೇರಿ, ಅಲ್ಲಿಂದ ಮೇಲಕ್ಕೆ, ಚಾರಣ ಮಾಡಿ ಮನೆಮಂದಿಯೆಲ್ಲ ಖುಷಿಪಟ್ಟಿದ್ದು ಈ ಸಮಯ ನೆನಪಾಯ್ತು. ಚಾರಣದ ನೋವು ನಂತರ ಹಿತವಾದ ನೋವಾಗಿ ಪರಿಣಮಿಸಿ ತುಸು ದಿನ ಅದರ ನೆನಪು ನೀಡಿ ಇನ್ನೂ ಹೆಚ್ಚು ಹೆಚ್ಚು ಸಂತೋಷ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಸುಂದರ ಮಾಲಿಕೆ, ನಡುವೆ ಎಚ್ಚರಗಳ ಸಾಲು ಬೇಕೇ ಬೇಕು. ಧನ್ಯವಾದಗಳು ಗಣೇಶಜಿ. ಮುಂದುವರೆಸಿ,........

Submitted by ಗಣೇಶ Sat, 12/28/2013 - 00:24

In reply to by lpitnal

ಇಟ್ನಾಳರೆ,
ಕೊಲ್ಲೂರಿಗೆ ೨ ಬಾರಿ ಹೋದಾಗಲೂ ಕೊಡಚಾದ್ರಿ ಮೇಲೇ ಕಣ್ಣಿತ್ತು. ಸಮಯವಿರದಿದ್ದರಿಂದ ಹತ್ತಲಾಗಲಿಲ್ಲ. ದೇವಿಯ ಅನುಗ್ರಹವಿದ್ದರೆ ಮುಂದಿನ ವರ್ಷ ಕೊಡಚಾದ್ರಿ ಚಾರಣ ಮಾಡುವೆ. ತಮ್ಮ ಮೆಚ್ಚುಗೆಗೆ ಧನ್ಯವಾದಗಳು.-ಗಣೇಶ.