ನಾನೂ ನಿನ್ನಂತೆಯೇ ಇದ್ದೆ

ನಾನೂ ನಿನ್ನಂತೆಯೇ ಇದ್ದೆ

ಚಿತ್ರ

ನಗಬೇಡ ಮಗುವೆ

ನನ್ನ ನೋಡಿ|

ನಾನು ನಿನ್ನಂತೆಯೇ ಇದ್ದೆ

ಎಲ್ಲರನು ನೋಡಿ

ನಾನೂ ನಗುತಲಿದ್ದೆ||

 

ಹೊರಲಾರದ ಮೂಟೆಯ

ಹೊತ್ತು ಬಂದ ಸಿದ್ದನ

ನನ್ನಜ್ಜ ಗದರಿಸಿದಾಗ ಸಿಟ್ಟಾಗಿ

ಅಜ್ಜನ ಪೇಟವನು ಚಿರಂಡಿಯಲ್ಲಿ ಹಾಕಿದ್ದೆ.

ಏಟು ತಿಂದು ಅತ್ತಿದ್ದೆ||

 

ಮನೆಹೊರಗೆ ಕೂರಿಸಿ

ಸಿದ್ದನಿಗೆಕೊಟ್ಟ ತಂಗಳನ್ನವ

ತಿಂದು ವಾಂತಿ ಮಾಡಿದ್ದೆ|

ಎಲ್ಲರ ಕಣ್ ತಪ್ಪಿಸಿ

ಸಿದ್ದನ ಜೊತೆ ರೊಟ್ಟಿ ತಿಂದಿದ್ದೆ||

 

ನಾ ಹಾಗಿರಲು ಬಿಡಲಿಲ್ಲ ಜನ

ಬಿಳಿಯ ಹಾಳೆಯ ಮೇಲೆ ಗೀಜಿದರು|

ಅಳಿಸಲಾರದ ಕೊಳೆಯ ಮೆತ್ತಿದರು

ವಿಷವ ಬಿತ್ತಿದರು||

 

ನಾನು ಎಚ್ಚೆತ್ತಾಗ

ಹೊತ್ತು ಮೀರಿತ್ತು|

ಸಿದ್ದ ಸತ್ತಿದ್ದ

ಸಿದ್ದನ ಮಕ್ಕಳು ಮೊಮ್ಮಕ್ಕಳ

ರೋಷಕ್ಕೆ ಸಾಂತ್ವನ ಹೇಳುವ

ಸ್ಥಿತಿಯಲಿ ನಾನಿಲ್ಲ!!

 

ನೀ ಹಾಗಾಗುವುದು ಬೇಡ

ಎಲ್ಲರನು ಪ್ರೀತಿಸುವ

ಗುಣವು ನಿನ್ನದಾಗಲಿ|

ನಿನ್ನ ಮೊಗದಲಿ ನಗುವು

ಮಿನುಗುತಿರಲಿ||

Rating
No votes yet

Comments

Submitted by lpitnal Wed, 12/25/2013 - 09:14

ಶ್ರೀಧರಜಿ, ನಾನೂ ನಿನ್ನಂತೆಯೇ ಇದ್ದೆ, ಕವನ ಪ್ರಚಲಿತ ಹಾಗೂ ಕಳೆದು ಹೋದ ಗಳಿಗೆಗಳ ಕುರಿತು ಚನ್ನಾದ ಸಾಲುಗಳು ಮಗುಮುಖೇನ ವ್ಯಕ್ತವಾಗಿವೆ. ಅಂದು ಸಿದ್ಧ ಅನುಭವಿಸಿದ್ದನ್ನು ಇಂದು ಅಜ್ಜನ ಸಂತತಿ ಅನುಭವಿಸುವಂತಾಗಿದೆಯಲ್ಲವೆ? ಅಂದು ಶಿಕ್ಷೆಗೆ ಅರ್ಹನಿರಲಿಲ್ಲ, ಇಂದು ಅಜ್ಜನ ಸಂತತಿ ಕೂಡ. ಪ್ರಮಾದ ವೆಸಿಗದವರೇ ಬೇರೆ, ಶಿಕ್ಷೆ ಅನುಭವಿಸುವವರೇ ಬೇರೆ ಎಂದು ಮನದಲ್ಲಿ ಮೂಡಿದ ಅನಿಸಿಕೆಯನ್ನು ಹಂಚಿಕೊಳ್ಳೋಣವೆನಿಸಿತು. ಧನ್ಯವಾದಗಳು.

Submitted by hariharapurasridhar Wed, 12/25/2013 - 20:17

In reply to by lpitnal

lpitnal ರವರೇ, ನಮಸ್ತೆ
ನಿಮ್ಮ ಮಾತು ನಿಜ.ಎಂದೋ ಯಾರೋ ಮಾಡಿದ ತಪ್ಪಿಗೆ ಇಂದು ಮತ್ಯಾರೋ ನೋವು ಅನುಭವಿಸುತ್ತಿರುವುದು ಸುಳ್ಳಲ್ಲ. ಸ್ಪೃಶ್ಯ-ಅಸ್ಪೃಶ್ಯ ಸಮಸ್ಯೆಯು ಈಗ ಬೇರೆ ರೂಪವನ್ನು ಪಡೆದಿದೆ. ತಾರತಮ್ಯ ಮಾಡುವವರು ಅದರ ಫಲ ಅನುಭವಿಸಲಿ, ಆದರೆ ಯಾರು ನಿಜವಾಗಿ ಎಲ್ಲರೂ ಅಣ್ಣ ತಮ್ಮಂದಿರಂತೆ ಇರಬೇಕೆಂದು ಬಯಸುತ್ತಾರೋ ಅವರೂ ಸಹ ನೋವು ಅನುಭವಿಸುವಂತಾಗಿದೆ.ಸಮಸ್ಯೆಯನ್ನು ಪರಿಹರಿಸುವ ಬದಲು ಅದರ ದುರ್ಲಾಭವನ್ನು ಹಲವರು ಪಡೆದ ಪರಿಣಾಮ ಪರಿಸ್ಥಿತಿಯು ಇನ್ನೂ ಬಿಗಡಾಯಿಸುವಂತಾಗಿದೆ. ಸತ್ಯವನ್ನು ನುಡಿಯಲು ಅಂಜುವಂತಾಗಿದೆ. ಒಟ್ಟಿನಲ್ಲಿ ಎಲ್ಲವೂ ಸರಿಯಿಲ್ಲ, ಎಂಬ ಪರಿಸ್ಥಿತಿ ಇದೆ. ಎಲ್ಲರ ನಡುವೆ ಸೌಹಾರ್ಧತೆಯನ್ನು ತರುವುದು ಹೇಗೆಂದು ಸಾಮಾಜಿಕ ಚಿಂತಕರಿಗೂ ಚಿಂತೆಯಾಗಿದೆ. ಎಲ್ಲಕ್ಕೂ ಕಾರಣ ನಮ್ಮ ದೇಶಕ್ಕೆ ಸರಿಯಾದ ನಾಯಕತ್ವ ಇಲ್ಲದಿರುವುದು, ಎಂಬುದು ನನ್ನ ಅನಿಸಿಕೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಆರು ದಶಕಗಳ ನಂತರವೂ ಬಡವನ ಹಸಿವನ್ನು ನೀಗಲು ಸಾಧ್ಯವಾಗಿಲ್ಲ. ಅಜ್ಞಾನ ಹೋಗಿಲ್ಲ. ಈ ಎರಡು ಕೆಲಸ ಆಗುವವರೆಗೂ ನಾವೆಲ್ಲಾ ಒಂದು, ನಾವೆಲ್ಲಾ ಬಂಧು, ಎನ್ನುವ ಮಾತಿಗೆ ಕವಡೆ ಕಾಸಿನ ಬೆಲೆ ಇರುವುದಿಲ್ಲ. ವಿವೇಕಾನಂದರ ಚಿಂತನೆಯೂ ಇದೇ ಆಗಿತ್ತು. ಮುಂದಾದರೂ ಒಂದು ಉತ್ತಮ ಸರ್ಕಾರದ ರಚನೆಯಾಗಿ ಬಡವನ ಹಸಿವು ನೀಗಿ, ಅಜ್ಞಾನ ದೂರವಾದರೆ ಆನಂತರ ಬ್ರಾತೃತ್ವ ಹೇಳುವವರ ನಾಲಿಗೆಯ ಶಕ್ತಿ ಹೆಚ್ಚುತ್ತದೆ. ಸಮಸ್ಯೆಗಳು ಸಹಜವಾಗಿ ದೂರವಾಗುತ್ತದೆ. ಬೇರೆ ಏನು ಮಾತನಾಡಿದರೂ ಇಂತಾ ನೂರು ಕವನ ಬರೆದರೂ ಸಮಸ್ಯೆಯು ಹಾಗೆಯೇ ಉಳಿಯುತ್ತದೆ. ನಿಮ್ಮ ಕಳಕಳಿಗೆ ಧನ್ಯವಾದಗಳು.

Submitted by hariharapurasridhar Thu, 12/26/2013 - 10:59

In reply to by kavinagaraj

ಧನ್ಯವಾದಗಳು ನಾಗರಾಜ್. ಫೇಸ್ ಬುಕ್ ನಲ್ಲಿ ಯಾರೋ ಈ ಮಗುವಿನ ಚಿತ್ರಹಾಕಿದ್ದರು.ಮಗುವನ್ನು ನೋಡಿದಾಗೊಂದು ಕ್ಷಣ ನನ್ನ ಕಣ್ಮುಂದೆ ಬಂದುಹೋದ ಭಾವನೆಗಳಿಗೆ ಅಕ್ಷರಕೊಡುವ ಪ್ರಯತ್ನ ಮಾಡಿದೆ. ಅಷ್ಟೆ. ಒಂದು ವಿಚಾರ ಸತ್ಯವೆನಿಸುತ್ತದೆ...ಸಾಮಾಜಿಕ ತುಡಿತವಿದ್ದ ಎಲ್ಲರಿಗೂ ಇಂತಾ ಭಾವನೆಗಳು ಯಾವುದೋ ಕ್ಷಣದಲ್ಲಿ ಕಾಡಿಸದಿರದು,ಅಲ್ಲವೇ?