೧೯೨. ಲಲಿತಾ ಸಹಸ್ರನಾಮ ೯೦೧ರಿಂದ ೯೦೫ನೇ ನಾಮಗಳ ವಿವರಣೆ

೧೯೨. ಲಲಿತಾ ಸಹಸ್ರನಾಮ ೯೦೧ರಿಂದ ೯೦೫ನೇ ನಾಮಗಳ ವಿವರಣೆ

                                                                   ಲಲಿತಾ ಸಹಸ್ರನಾಮ ೯೦೧-೯೦೫

Nāda-rūpiṇī नाद-रूपिणी (901)

೯೦೧. ನಾದ ರೂಪಿಣೀ

            ನಾಮ ೨೯೯ ನಾದ-ರೂಪದಲ್ಲಿ ವಿವರಿಸಿರುವ ವಿಷಯಗಳ ಹೊರತಾಗಿ ನಾದ ಎಂದರೆ ಶಿವ-ಶಕ್ತಿಯರು ರೂಪಾಂತರ ಹೊಂದುವುದಕ್ಕೆ ಮಾಡುವ ಮೊದಲ ಚಲನೆಯನ್ನೂ ಸಹ ನಾದ ಎನ್ನುವುದು ಸೂಚಿಸುತ್ತದೆ. ಶಕ್ತಿಯು ಈ ವಿಶ್ವವನ್ನು ತನ್ನ ನಾದಾಂತದಿಂದ ಭರ್ತಿಗೊಳಿಸಿದಾಗ; ಈ ಸೂಕ್ಷ್ಮ ಶಬ್ದವು ಸುಷುಮ್ನಾ ನಾಡಿಯಲ್ಲಿ ಅನುಭವಕ್ಕೆ ಬರುತ್ತದೆ. ಇಲ್ಲಿಯೂ ಸಹ ಆಕೆಯನ್ನು ನಾದ ಎಂದರೆ ಮಾರ್ಪಾಡಾಗದೇ ಇರುವ ಶಬ್ದ ಎಂದು ಕರೆಯಲಾಗುತ್ತದೆ. ನಾದದ ಅತ್ಯುನ್ನತ ಹಂತವಾದ ವಾಕ್ (ಮಾತು) ಯಾವುದೇ ವಿಧವಾದ ಸಂದೇಶವನ್ನು ಹೊಂದಿರುವುದಿಲ್ಲ. ಈ ಹಂತದಲ್ಲಿ ಮಾತನ್ನು ಹೇಳುವವನಿಗೂ ಮತ್ತು ಮಾತನ್ನು ಉದ್ದೇಶಿಸಲ್ಪಟ್ಟವನಿಗೂ ವ್ಯತ್ಯಾಸವು ಇರುವುದಿಲ್ಲ. ॐ ಓಂಕಾರವು ಶಬ್ದ ಬ್ರಹ್ಮದ ಈ ನಾದ ರೂಪವನ್ನು ಪ್ರತಿನಿಧಿಸುತ್ತದೆ. ಸಾಧಕನು ನಾದವನ್ನು ತನ್ನ ಹೃದಯದಲ್ಲಿ ನೆಲಗೊಂಡ ಪ್ರಕಾಶಿಸುವ ವಸ್ತುವೆನ್ನುವುದನ್ನು ಮನಗಾಣಬೇಕು. ಈ ಪ್ರಕಾಶವು ಪರಮ ಜ್ಞಾನದ ಸ್ವಭಾವವನ್ನು ಸಂಕೇತಿಸುತ್ತದೆ ಮತ್ತದು ಪರಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ಅವಶ್ಯಕವಾಗಿದೆ. ಈ ಒಂದು ಕಾರಣದಿಂದಾಗಿ ಕೇವಲ ಶಕ್ತಿ ಮಾತ್ರಳೇ ಶಿವನನ್ನು ತೋರಬಲ್ಲಳು ಎಂದು ಪ್ರತಿಪಾದಿಸಲಾಗುತ್ತದೆ (ನಾಮ ೭೨೭ ಶಿವ ಜ್ಞಾನ ಪ್ರದಾಯಿನೀ).

          ಶಕ್ತಿಯ ಕುರಿತಾದ ಅತ್ಯಂತ ಶ್ರೇಷ್ಠ ಕೃತಿಗಳಲ್ಲೊಂದಾದ ಕಾಮಕಲಾವಿಲಾಸದಲ್ಲಿ (ಸ್ತೋತ್ರ ೧೦), "ನಾದ ಬಿಂದುವಿನಿಂದ ಈ ಸಮಸ್ತ ಪ್ರಪಂಚದ ಉಗಮವು ಉಂಟಾಗುತ್ತದೆ", ಎಂದು ಹೇಳಲಾಗಿದೆ. ಈ ಅಂಶವನ್ನು ಮುಂಡಕ ಉಪನಿಷತ್ತೂ (೧.೧.೭) ಸಹ ದೃಢ ಪಡಿಸುತ್ತದೆ. ಅದು ಹೀಗೆ ಹೇಳುತ್ತದೆ, "ಅಕ್ಷರಾತ್ ಸಂಭವಿತ ವಿಶ್ವಂ" ಅಂದರೆ ಅಕ್ಷರದಿಂದ (ಶಬ್ದ ಬ್ರಹ್ಮದಿಂದ) ಈ ಪ್ರಪಂಚದ ಉಗಮವಾಯಿತು". ಪ್ರಸ್ತುತ ನಾಮವು ದೇವಿಯೇ ಈ ವಿಶ್ವಕಾರಕವಾದ ಶಬ್ದ ಬ್ರಹ್ಮವಾಗಿದ್ದಾಳೆನ್ನುವುದನ್ನು ದೃಢ ಪಡಿಸುತ್ತದೆ. ಶಬ್ದ ಬ್ರಹ್ಮವೆಂದರೆ ಮೂಲಭೂತವಾದ ಅವ್ಯಕ್ತ ಶಬ್ದ (ಪದ).

ಇನ್ನಷ್ಟು ವಿವರಗಳು:

           ಶಿವ ಪುರಾಣವು ॐ ಓಂಕಾರವು ಹಲವಾರು ಅಂಶಗಳನ್ನು ಒಳಗೊಂಡಿದೆ ಎಂದು ಹೇಳುತ್ತದೆ. ಇತರೇ ಅಂಶಗಳೊಂದಿಗೆ ॐ ಓಂಕಾರವು ಹಲವು ವಿಧವಾದ ಲಿಂಗಾಕಾರಗಳನ್ನು ಒಳಗೊಂಡಿದೆ. ಲಿಂಗ ಪುರಾಣವು (೧.೧೬) ಈ ಲಿಂಗವು ಹೇಗೆ ಉದ್ಭವವಾಯಿತು ಎನ್ನುವುದರ ವಿವರಣೆಯನ್ನು ಕೊಡುತ್ತದೆ. ಒಮ್ಮೆ ಬ್ರಹ್ಮ ಮತ್ತು ವಿಷ್ಣು ಇವರಿಬ್ಬರ ಮುಂದೆ ಒಂದು ಪ್ರಕಾಶಮಾನವಾದ ಲಿಂಗವು ಸಮುದ್ರದಲ್ಲಿ ಉದ್ಭವಿಸಿತು. ಅದಕ್ಕೆ ಸಾವಿರಾರು ಶಾಖೆಗಳುಳ್ಳ ಜ್ವಾಲೆಗಳಿದ್ದವು. ಅದಕ್ಕೆ ಆರಂಭವೂ ಇರಲಿಲ್ಲ, ಅಂತ್ಯವೂ ಇರಲಿಲ್ಲ ಅಥವಾ ಮಧ್ಯವೂ ಇರಲಿಲ್ಲ. ಅದನ್ನು ಹೋಲಿಸುವುದಕ್ಕಾಗಲಿ, ವಿವರಿಸುವುದಕ್ಕಾಗಲಿ ಸಾಧ್ಯವಿರಲಿಲ್ಲ ಮತ್ತದು ವಿಶೇಷವಾಗಿತ್ತು. ಅದುವೇ ಪ್ರಪಂಚದ ಮೂಲವಾಗಿತ್ತು. ಮತ್ತೊಂದು ಕಥೆಯೂ ಇದೆ; ಅದರಲ್ಲಿ ಬ್ರಹ್ಮ ಮತ್ತು ವಿಷ್ಣು ಇವರಿಬ್ಬರೂ ಆ ಲಿಂಗದ ಆದಿ ಮತ್ತು ಅಂತ್ಯಗಳನ್ನು ತಿಳಿಯಬಯಸಿದರೆಂಬುದಾಗಿ. ಹಲವಾರು ವಿಧದ ಲಿಂಗಗಳಿದ್ದು ಸೂಕ್ಷ್ಮವಾದ ಲಿಂಗಕ್ಕೆ ಸೂಕ್ಷ್ಮ-ಪ್ರಣವ ಎಂದು ಕರೆಯಲಾಗುತ್ತದೆ. ಈ ಸೂಕ್ಷ್ಮಲಿಂಗವನ್ನೊಳಗೊಂಡಂತೆ ಹಲವಾರು ವಿಧವಾದ ಸ್ಥೂಲ ಲಿಂಗಗಳಿವೆ. ಸ್ವಯಂಭು ಲಿಂಗವನ್ನು ಬಿಂದುವಿನೊಂದಿಗೆ ಗುರುತಿಸಲಾಗುತ್ತದೆ. ಸ್ವಯಂಭು ಎಂದರೆ ಸ್ವತಃ ಉದ್ಭವವಾದ. ಶಿವ ಪುರಾಣವು, "ನಾದಲಿಂಗ ಸ್ವಯಂಭುವಃ" ಎಂದು ಹೇಳುತ್ತದೆ.

Vijñāna-kalanā विज्ञान-कलना (902)

೯೦೨. ವಿಜ್ಞಾನ-ಕಲನಾ

            ವಿಜ್ಞಾನ ಎಂದರೆ ಬ್ರಹ್ಮವನ್ನು ಅರಿಯಲು ಅವಶ್ಯವಾಗಿರುವ ಜ್ಞಾನ ಮತ್ತು ಕಲನಾ ಎಂದರೆ ಪರಿಣಾಮವನ್ನುಂಟು ಮಾಡುವ. ಈ ನಾಮವು ಶಿವ ಜ್ಞಾನ ಪ್ರದಾಯಿನೀ (ನಾಮ ೭೨೭) ಎನ್ನುವುದರ ಮುಂದುವರೆದ ಭಾಗವಾಗಿದೆ. ದೇವಿಯು ಜ್ಞಾನವನ್ನು ಹೊಂದಿದ್ದಾಳೆನ್ನುವುದನ್ನು ನಾಮ ೬೩೪ - ’ಜ್ಞಾನದಾ’ವು ಸೂಚಿಸುತ್ತದೆ.

           ಈ ನಾಮವು ಬ್ರಹ್ಮಸಾಕ್ಷಾತ್ಕಾರಕ್ಕೆ ಬೇಕಾಗುವ ಅತ್ಯಂತ ಶ್ರೇಷ್ಠವಾದ ಜ್ಞಾನವನ್ನು ದೇವಿಯು ಕರುಣಿಸುತ್ತಾಳೆಂದು ಹೇಳುತ್ತದೆ. ಹದಿನಾಲ್ಕು ವಿಧದ ವಿದ್ಯೆಗಳಿವೆ. ಅವುಗಳಲ್ಲಿ ನಾಲ್ಕು ವೇದಗಳು (೧-೪), ವೇದಾಂಗಗಳು (೫-೧೧) (ಶಿಕ್ಷಾ, ಛಂದಸ್ಸು, ವ್ಯಾಕರಣ, ನಿರುಕ್ತ, ಜ್ಯೋತಿಷ ಮತ್ತು ಕಲ್ಪ), ಮೀಮಾಂಸಾ (ಪ್ರಗಾಢವಾದ ಆಲೋಚನೆ, ಮನನ, ಜಿಜ್ಞಾಸೆ, ಪರಿಗಣನೆ, ಅನ್ವೇಷಣೆ, ಪರೀಕ್ಷಣೆ, ಚರ್ಚೆ ಮೊದಲಾದವು. ವೇದ ಗ್ರಂಥಗಳ ವಿಶ್ಲೇಷಣೆ ಮಾಡುವ ವಿಧಾನವನ್ನು ಎರಡು ಪ್ರಧಾನ ವಿಭಾಗಗಳಾಗಿ ಮಾಡಲಾಗಿದೆ. ಮೊದಲನೆಯದು ಜೈಮಿನಿ ವಿರಚಿತ ಪೂರ್ವ ಮೀಮಾಂಸ ಅಥವಾ ಕರ್ಮ ಮೀಮಾಂಸ ಮತ್ತು ಎರಡನೆಯದು ಬಾದರಾಯಣ ವಿರಚಿತ ಉತ್ತರ ಮೀಮಾಂಸ ಅಥವಾ ಬ್ರಹ್ಮ-ಮೀಮಾಂಸ ಅಥವಾ ಶಾರೀರಕ ಮೀಮಾಂಸ ಇದನ್ನೇ ವೇದಾಂತವೆಂದು ಕರೆಯಲಾಗಿದ್ದು ಅದು ನೇರವಾಗಿ ಬ್ರಹ್ಮನ ಅಥವಾ ವಿಶ್ವಾತ್ಮದ ಗುಣ ಲಕ್ಷಣಗಳನ್ನು ಕುರಿತು ಪ್ರಮುಖವಾಗಿ ಚರ್ಚಿಸುತ್ತದೆ);  ನ್ಯಾಯ (೧೩) (ಪಾಶ್ಚಿಮಾತ್ಯ ಪದ್ಧತಿಗಳಲ್ಲಿ ಎಂಥೈಮೀಮ್ (Enthymeme) ಮತ್ತು ಸಿಲ್ಲೋಜಿಸಮ್ (Syllogism) ಎನ್ನುವ ಎರಡು ವಿಧಾನಗಳ ಮೂಲಕ ತರ್ಕಬದ್ಧ ನಿರ್ಣಯಕ್ಕೆ ಬರಲಾಗುತ್ತದೆ. ಸಿಲ್ಲೋಜಿಸಮ್ ಎನ್ನುವಲ್ಲಿ ಎರಡು ಆಧಾರ ವಾಕ್ಯಗಳು (ಪ್ರಧಾನ ಪ್ರಮೇಯ - Major Premise ಮತ್ತು ಉಪಪ್ರಮೇಯ - Minor Premise) ಮತ್ತು Predicate (Conclusive Premise) ಎನ್ನುವ ನಿರ್ಣಯಾತ್ಮಕ ವಾಕ್ಯವಿರುತ್ತದೆ. ಆಧಾರ ವಾಕ್ಯಗಳನ್ನು ಮತ್ತು ನಿರ್ಣಯಾತ್ಮಕ ವಾಕ್ಯಗಳನ್ನು ಒಟ್ಟಾಗಿ Premises ಅಥವಾ ಪ್ರಮೇಯಗಳು ಎಂದು ಕರೆಯುತ್ತಾರೆ. ಈ ವಿಧದಲ್ಲಿ ಸಿಲ್ಲೋಜಿಸಮ್‌ನಲ್ಲಿ ಮೂರು ಪ್ರಮೇಯಗಳಿರುತ್ತವೆ (Major Premise, Minor Premise ಮತ್ತು Conclusive Premise). ’ಎಂಥೈಮೀಮ್‌’ನಲ್ಲಿ ಕೇವಲ ಒಂದೇ ಆಧಾರ ವಾಕ್ಯವಿರುತ್ತದೆ; ಇನ್ನೊಂದು ಆಧಾರ ವಾಕ್ಯವು ಅಸಂಪೂರ್ಣವಾಗಿರುತ್ತದೆ ಅಥವಾ ಅದು ಸರ್ವವಿಧಿತವಾದದ್ದು (ಎಲ್ಲರಿಗೂ ತಿಳಿದದ್ದು) ಎಂದು ಪರಿಗಣಿಸಲಾಗಿರುತ್ತದೆ; ಹಾಗಾಗಿ ಈ ವಿಧಾನದಲ್ಲಿ ಕೇವಲ ಎರಡೇ ಪ್ರಮೇಯಗಳಿರುತ್ತವೆ (Major Premise ಮತ್ತು Conclusive Premise). ಹೀಗೆ ಪಾಶ್ಚಿಮಾತ್ಯ ಪದ್ಧತಿಯಲ್ಲಿ ಮೂರು ಅಥವಾ ಎರಡು ಪ್ರಮೇಯಗಳ ಪದ್ಧತಿಯನ್ನನುಸರಿಸಿದರೆ, ನೈಯ್ಯಾಯಿಕರು (ನ್ಯಾಯ ಪದ್ಧತಿಯನ್ನು ಅನುಸರಿಸುವವರು) ಪ್ರತಿಜ್ಞಾ, ಹೇತು, ಉದಾಹರಣ, ಉಪನಯ, ನಿಗಮನ - ಎನ್ನುವ ಐದು ವಿವಿಧ ರೀತಿಯ ಪ್ರಮೇಯಗಳನ್ನುಳ್ಳ ಪದ್ಧತಿಗಳನ್ನನುಸರಿಸುತ್ತಾರೆ; ಆದರೆ ವೇದಾಂತಿಗಳು ಕೇವಲ ಮೂರು ವಿಧಗಳನ್ನು ಅನುಸರಿಸುತ್ತಾರೆ. ನ್ಯಾಯ ಪದ್ಧತಿಯಲ್ಲಿ ವಿಷಯಕ್ಕೆ ಸಂಭಂದಿಸಿದಂತೆ ಇರುವ ಆಧಾರ ವಾಕ್ಯಗಳನ್ನು ’ಪೂರ್ವವತ್’ ಎಂದು ಕರೆದರೆ ನಿರ್ಣಯ ವಾಕ್ಯವನ್ನು ’ಶೇಷವತ್’ ಎಂದು ಕರೆಯಲಾಗುತ್ತದೆ. ಈ ಪದ್ಧತಿಯನ್ನು ಗೋತಮ ಅಥವಾ ಗೌತಮನು ಪ್ರತಿಪಾದಿಸಿದ್ದಾನೆ. ಇದು ಷಡ್ದರ್ಶನಗಳಲ್ಲಿ ಒಂದಾಗಿದೆ. ನ್ಯಾಯ ದರ್ಶನವು ಎಲ್ಲಾ ಭೌತಿಕ ಮತ್ತು ಅಧಿಭೌತಿಕ ವಿಷಯಗಳ ಕುರಿತಾಗಿ ಚರ್ಚಿಸುತ್ತದೆ ಮತ್ತು ‘ವೈಶೇಷಿಕ’ ದರ್ಶನವನ್ನು ಇದರ ಶಾಖೆಯೆಂದು ಹಲವು ವೇಳೆ ಪರಿಗಣಿಸಲಾಗುತ್ತದೆ.) ಮತ್ತು ಪುರಾಣಗಳು (೧೪) - ಹೀಗೆ ಇವು ಒಟ್ಟು ಹದಿನಾಲ್ಕು ವಿದ್ಯೆಗಳಾಗುತ್ತವೆ. ಈ ಹದಿನಾಲ್ಕು ವಿದ್ಯೆಗಳನ್ನು ತಿಳಿದುಕೊಳ್ಳುವುದನ್ನೇ ವಿಜ್ಞಾನವೆನ್ನುತ್ತಾರೆ.

Kalyā कल्या (903)

೯೦೩. ಕಲ್ಯಾ

            ಕಲ್ಯಾ ಎನ್ನುವುದಕ್ಕೆ ಅನೇಕ ಅರ್ಥಗಳಿವೆ; ಉದಾಹರಣೆಗೆ ಮಂಗಳಕರವಾದದ್ದು, ಕಲ್ಯಾಣವನ್ನುಂಟು ಮಾಡುವಂತಹುದು, ಸಿದ್ಧವಾಗಿರುವುದು, ಆದೇಶಾತ್ಮಕ, ಮುಂಜಾವು, ಶುಭ ಶಕುನ, ಮೊದಲಾದವು. ದೇವಿಯು ಈ ಎಲ್ಲಾ ಗುಣಗಳ ರೂಪದಲ್ಲಿದ್ದಾಳೆಂದು ಹೇಳಬಹುದು.

            ಲಲಿತಾ ತ್ರಿಶತಿಯ ನಾಮ ೧೪೬ ಸಹ ಕಲ್ಯಾ ಆಗಿದೆ. ದೇವಿಯು ಎಲ್ಲಾ ಲಲಿತ ಕಲೆಗಳಲ್ಲಿ ನುರಿತವಳಾಗಿದ್ದಾಳೆಂದು ಹೇಳಲಾಗುತ್ತದೆ. ದೇವಿಯೇ ಕಲೆಯ ಮೂರ್ತ ರೂಪವಾಗಿದ್ದಾಳೆಂದು ನಾಮ ೭೯೭ ಹೇಳುತ್ತದೆ.

Vidagdhā विदग्धा (904)

೯೦೪. ವಿದಗ್ಧಾ

            ವಿದಗ್ಧಾ ಎಂದರೆ ದೇವಿಯು ಚುರುಕು, ತೀಕ್ಷ್ಣವಾದ ಬುದ್ಧಿಯುಳ್ಳಯವಳು, ಚತುರತೆಯಿಂದ ಕೂಡಿದವಳು, ರಹಸ್ಯಾತ್ಮಕ, ಕೃತ್ರಿಮದ, ಕುತೂಹಲ ಹುಟ್ಟಿಸುವ ಮತ್ತು ಕುಟಿಲ ಗುಣವನ್ನು ಹೊಂದಿದವಳು ಮೊದಲಾದ ಅರ್ಥಗಳಿವೆ. ಈ ಗುಣಲಕ್ಷಣಗಳು ಈ ಪ್ರಪಂಚದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಉಂಟು ಮಾಡಲು ಅವಶ್ಯಕವಾಗಿವೆ. ಈ ಎಲ್ಲಾ ಗುಣಗಳು ಪರಬ್ರಹ್ಮದ ಗುಣಗಳಾಗಿದ್ದು ಈ ನಾಮವು ಮತ್ತೊಮ್ಮೆ ದೇವಿಯ ಪರಬ್ರಹ್ಮ ಸ್ವರೂಪವನ್ನು ದೃಢ ಪಡಿಸುತ್ತದೆ.

Baindavāsanā बैन्दवासना (905)

೯೦೫. ಬೈಂದವಾಸನಾ

            ಬೈಂದವ ಎಂದರೆ ಬಿಂದು ಅಥವಾ ಚುಕ್ಕೆ ಮತ್ತು ಆಸನ ಎಂದರೆ ಪೀಠ. ಈ ನಾಮವು ದೇವಿಯು ಬಿಂದುವಿನ ಮೇಳೆ ಕುಳಿತಿದ್ದಾಳೆ ಎಂದು ಹೇಳುತ್ತದೆ. ಬಿಂದುವಿಗೆ ಎರಡು ವಿಧವಾದ ವಿವರಣೆಗಳು ದೊರಯುತ್ತವೆ.

            ಶ್ರೀ ಚಕ್ರದಲ್ಲಿರುವ ಮಧ್ಯದ ಚುಕ್ಕೆಯನ್ನು ಬಿಂದುವೆಂದು ಕರೆಯಲಾಗುತ್ತದೆ. ಶ್ರೀ ಚಕ್ರದಲ್ಲಿ ಈ ಚುಕ್ಕೆಯನ್ನು ಅತ್ಯಂತ ಒಳಗಿರುವ ತ್ರಿಕೋಣದ ಮಧ್ಯದಲ್ಲಿರಿಸಲಾಗಿರುತ್ತದೆ ಅಥವಾ ಮೇರುವಾದರೆ ಅದನ್ನು ಅತ್ಯಂತ ಉನ್ನತವಾದ ಶಿಖರದ ಮೇಲೆ ಇರಿಸಲಾಗಿರುತ್ತದೆ. ಈ ಬಿಂದುವನ್ನು ಸರ್ವಾನಂದಮಯ ಚಕ್ರ ಅಥವಾ ಬೈಂದವ ಸ್ಥಾನ ಎಂದು ಕರೆಯಲಾಗುತ್ತದೆ. ಈ ಒಂಬತ್ತನೆಯ ಆವರಣದ ಸ್ಥಾನ ದೇವತೆಯು ಶ್ರೀ ಮಹಾ ತ್ರಿಪುರಸುಂದರೀ (ನಾಮ ೯೯೭) ಆಗಿದ್ದಾಳೆ. ಇಲ್ಲಿ ಆಕೆಯನ್ನು ಯೋನಿ ಮುದ್ರೆಯ ಮೂಲಕ ಪೂಜಿಸಲಾಗುತ್ತದೆ. ಯಾರು ಷೋಡಶೀ ಮಂತ್ರದ ದೀಕ್ಷೆಯನ್ನು ಪಡೆದಿರುತ್ತಾರೆಯೋ ಅವರು ಇಲ್ಲಿ ದೇವಿಯನ್ನು ತ್ರಿಖಂಡ ಮುದ್ರೆಯ ಮೂಲಕ ಪೂಜಿಸುತ್ತಾರೆ. ಲಲಿತಾಂಬಿಕೆಯು ಇಲ್ಲಿ ತನ್ನ ಅತ್ಯುನ್ನತ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಇಲ್ಲಿ ಆಕೆಯನ್ನು ಪರಾಭಟ್ಟಾರಿಕ (ಭಟ್ಟಾರ ಎಂದರೆ ಅತ್ಯಂತ ಶ್ರೇಷ್ಠವಾದ ಮತ್ತು ಪೂಜನೀಯವಾದ ಎಂದರ್ಥ) ಮತ್ತು ಮಹಾ-ಕಾಮೇಶ್ವರೀ ಎಂದು ಗೌರವಿಸಲಾಗುತ್ತದೆ.

           ಕಾಮಕಲಾ ರೂಪದಲ್ಲಿ (ವಿವರಗಳಿಗೆ ನಾಮ ೩೨೨ನ್ನು ನೋಡಿ) ಮೂರು ಬಿಂದುಗಳಿರುತ್ತವೆ. ಅವು ಬಿಳಿ, ಕೆಂಪು ಮತ್ತು ಬಹುವರ್ಣ. ಶ್ವೇತ ವರ್ಣವು ಶಿವನನ್ನು ಪ್ರತಿನಿಧಿಸಿದರೆ, ಕೆಂಪು ಬಿಂದುವು ಶಕ್ತಿಯನ್ನು ಪ್ರತಿನಿಧಿಸುತ್ತದೆ. ಆ ಬಿಂದುಗಳು ಆಕುಚನ ಮತ್ತು ಸಂಕುಚನಗೊಳ್ಳುವುದರ ಮೂಲಕ ಈ ವಿಶ್ವದ ಸೃಷ್ಟಿಗೆ ಕಾರಣವಾಗಿವೆ. ಬಹುವರ್ಣದ ಚುಕ್ಕೆಯು ಸೂರ್ಯನನ್ನು ಪ್ರತಿನಿಧಿಸುತ್ತದೆ. ಕಾಮ ಎನ್ನುವುದು ಸೂರ್ಯನನ್ನು ಪ್ರತಿನಿಧಿಸಿದರೆ ಕಲಾ ಎನ್ನುವುದು ಕೆಂಪು ಮತ್ತು ಬಿಳಿಯ ಚುಕ್ಕಿಗಳನ್ನು ಸೂಚಿಸುತ್ತದೆ. ಈ ಎಲ್ಲಾ ಮೂರು ಚುಕ್ಕೆಗಳನ್ನು ಒಂದುಗೂಡಿಸಿ ಕಾಮಕಲಾ (ನಾಮ ೩೨೨) ಎಂದು ಕರೆಯಲಾಗುತ್ತದೆ. ಕೆಂಪು ಮತ್ತು ಬಿಳಿಯ ಚುಕ್ಕೆಗಳು ದೈವೀ ಸಂಗಾತಿಗಳಾಗಿವೆ. ಅವುಗಳ ಒಂದುಗೂಡುವಿಕೆಯು ಏಕತೆರನಾಗಿ ಇರುತ್ತದೆ. ಈ ಮುಂಚೆ ಹಲವಾರು ನಾಮಗಳಲ್ಲಿ ಚರ್ಚಿಸಿದಂತೆ ಪ್ರಕಾಶ ರೂಪವು ಶಿವವಾದರೆ, ಶಕ್ತಿಯು ವಿಮರ್ಶ ರೂಪವಾಗಿದೆ. ಯಾವಾಗ ಪ್ರಕಾಶ ಮತ್ತು ವಿಮರ್ಶ ರೂಪಗಳ ಐಕ್ಯತೆಯು ಉಂಟಾಗುತ್ತದೆಯೋ ಅದನ್ನು ಅಹಂಕಾರ ಎಂದು ಕರೆಯಲಾಗುತ್ತದೆ. ಅಹಂಕಾರವು ಹಲವು ಅಕ್ಷರಗಳನ್ನು ಒಳಗೊಂಡಿದ್ದು ಅದು ಕ್ರಮೇಣ ಶಬ್ದ ಮತ್ತು ಅದರ ಅರ್ಥಗಳನ್ನು ಉತ್ಪತ್ತಿ ಮಾಡುತ್ತದೆ. ದೇವಿಯು ಕೆಂಪು ಬಿಂದುವಿನ ಮೇಲೆ ಆಸೀನಳಾಗಿರುವುದರಿಂದ ಈ ನಾಮವು ಆಕೆಯನ್ನು ಬೈಂದವಾಸನಾ ಎಂದು ಕರೆಯುತ್ತದೆ; ಈ ಆಸನವು ಪರಬ್ರಹ್ಮದ ಸೃಷ್ಟಿ ಕ್ರಿಯೆಯನ್ನು ಸೂಚಿಸುತ್ತದೆ.

           ಮೂರು ಬಿಂದುಗಳನ್ನು ಮೂರು ನಾಡಿಗಳಿಗೆ ಹೋಲಿಸಬಹುದು - ಇಡಾ, ಪಿಂಗಳಾ ಮತ್ತು ಸುಷುಮ್ನಾ. ಯಾವಾಗ ಈ ನಾಡಿಗಳ ಮೂಲಕ ಹರಿದ ಶಕ್ತಿಗಳು ಆಜ್ಞಾ ಚಕ್ರದಲ್ಲಿರುವ ಬಿಂದುವಿನಲ್ಲಿ ಒಂದುಗೂಡುತ್ತವೆಯೋ, ಆಗ ಸಾಧಕನು ತನ್ನ ವ್ಯಕ್ತಿಗತ ಪ್ರಜ್ಞೆಯ ಮಿತಿಯನ್ನು ಅಧಿಗಮಿಸಿ ಬ್ರಹ್ಮಾಂಡ ಪ್ರಜ್ಞೆಯ ಮಿತಿಯನ್ನು ಪ್ರವೇಶಿಸುತ್ತಾನೆ. ಈ ಮೂರು ನಾಡಿಗಳು ಸೇರುವ ಜಾಗವನ್ನು ಬಿಂದುವೆಂದು ಕರೆಯಲಾಗಿದ್ದು, ದೇವಿಯು ಈ ಜಾಗದಲ್ಲಿ ಆಸೀನಳಾಗಿದ್ದಾಳೆಂದು ಹೇಳಲಾಗುತ್ತದೆ. ಯಾವಾಗ ಒಬ್ಬ ಸಾಧಕನ ಆತ್ಮ, ವ್ಯಕ್ತಿಗತ ಪ್ರಜ್ಞೆ(ಚಿತ್ತ) ಮತ್ತು ಮನಸ್ಸುಗಳು ಈ ಬಿಂದುವಿನಲ್ಲಿ ಒಂದಾಗುತ್ತವೆಯೋ ಆಗ ಅವನು ಬ್ರಹ್ಮಾಂಡ ಪ್ರಜ್ಞೆಯನ್ನು ಪ್ರವೇಶಿಸುತ್ತಾನೆ.

                                                                                                         ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 901 – 905 http://www.manblunder.com/2010/07/lalitha-sahasranamam-901-905.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Sun, 01/12/2014 - 06:46

ಶ್ರೀಧರರೆ, "೧೯೨. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ - ಈ ಕಂತಿನೊಂದಿಗೆ ನಡುವೆ ಬಿಟ್ಟುಹೋಗಿದ್ದ ಹೋಮ್ವರ್ಕುಗಳೆಲ್ಲ ಮುಗಿದಂತಾಯ್ತು. ಈಗ ಕೊನೆಯ ಐದು ನಾಮಗಳಿಗಾಗಿ ಎದುರು ನೋಡುವಂತಾಗಿದೆ - ಸಾವಿರ ಮೆಟ್ಟಿಲ ಕೊನೆಯ ಹಂತ ತಲುಪಲು :-)
.
ಲಲಿತಾ ಸಹಸ್ರನಾಮ ೯೦೧-೯೦೫
____________________________
.
೯೦೧. ನಾದ ರೂಪಿಣೀ
ಶಬ್ದ ಬ್ರಹ್ಮ-ಅಕ್ಷರದಿಂದುಗಮಿತ ಪ್ರಪಂಚ, ಓಂಕಾರ ನಾದರೂಪ
ಮೂಲಭೂತ ಅವ್ಯಕ್ತ ಪದ ಶಬ್ದ ಬ್ರಹ್ಮ, ದೇವಿಯಾಗಿಹ ಸ್ವರೂಪ
ಮಾರ್ಪಾಡಾಗದ ಶಬ್ದ ನಾದ, ಲಲಿತೆಯಾಗುತ ನಾದ ರೂಪಿಣೀ
ಶಕ್ತಿ ಮಾತ್ರ ಶಿವನ ತೋರಬಲ್ಲಳು, ಪರಮಜ್ಞಾನ ನಾದಧಾರಿಣಿ ||
.
ಸಾಧಕ ಹೃದಯದೆ ನೆಲೆಸಿ, ಪ್ರಕಾಶಿತ ವಸ್ತು ನಾದ, ಪರಮ ಜ್ಞಾನ
ಶಿವ-ಶಕ್ತಿ ರೂಪಾಂತರಪೂರ್ವ ಚಲನೆ ನಾದ, ನಾದಾಂತ ಜಗಪೂರ್ಣ
ಮಾರ್ಪಾಡಾಗದ ಶಬ್ದರೂಪಿಣಿ ನಾದ, ಸೂಕ್ಷ್ಮಶಬ್ದ ಸುಷುಮ್ನಾ ನಾಡಿ
ನಾದೋನ್ನತ ಹಂತ ವಾಕ್ ಸಂದೇಶರಹಿತ, ಹೇಳುಕೇಳುಗ ಜೋಡಿ ||
.
ಇನ್ನಷ್ಟು ವಿವರಗಳು:
__________________________________________
.
ಓಂಕಾರ ಪ್ರಣವಾಂಶ ವಿವಿಧ ಲಿಂಗಾಕಾರದೆ, ಬ್ರಹ್ಮ-ವಿಷ್ಣುಗಳಿಗೆ ಉದ್ಭವ
ಶರಧಿ ಮೂಲ ಪ್ರಕಾಶ ಅಗಣಿತ ಜ್ವಾಲೆ ಶಾಖೆ, ಆದಿಮಧ್ಯಾಂತ್ಯ ಅಭಾವ
ವಿವರಣೆ-ಹೋಲಿಕೆಗತೀತ ಜಗಮೂಲ, ಸೂಕ್ಷ್ಮಲಿಂಗವಾಗಿ ಸೂಕ್ಷ್ಮ ಪ್ರಣವ
ಸ್ಥೂಲ ಸ್ವಯಂಭುಲಿಂಗ ಶಕ್ತಿಬಿಂದು ಸಹಿತ, 'ನಾದಲಿಂಗಸ್ವಯಂಭು' ಶಿವ ||
.
೯೦೨. ವಿಜ್ಞಾನ-ಕಲನಾ
ಬ್ರಹ್ಮವರಿಯಲವಶ್ಯವಿಹ ಜ್ಞಾನ ವಿಜ್ಞಾನ, ಪರಿಣಾಮವೆ ಕಲನಾ
ಬ್ರಹ್ಮಸಾಕ್ಷಾತ್ಕಾರದ ಶ್ರೇಷ್ಠಜ್ಞಾನ, ನೀಡಿ ಲಲಿತೆ ವಿಜ್ಞಾನ ಕಲನಾ
ಚತುರ್ವೇದ,ಷಡ್ವೇದಾಂಗ,ಮೀಮಾಂಸಾ,ನ್ಯಾಯ ಚತುರ್ದಶವಿದ್ಯೆ
ಅರಿಯುವಿಕೆಯೆ ವಿಜ್ಞಾನ, ಶಿವಜ್ಞಾನಪ್ರದಾಯಿನಿ ಜ್ಞಾನದಾ ಹೃದ್ಯೆ ||
.
ಚತುರ್ದಶಾ ವಿದ್ಯೆಯಲಿ ಚತುರ್ವೇದ ಸಾಮ-ಯಜುರ್-ಅಥರ್ವಣ-ಋಗ್ವೇದ
ಷಡ್ವೇದಾಂಗ ಶಿಕ್ಷಾ-ಛಂಧಸ್ಸು-ವ್ಯಾಕರಣ-ನಿರುಕ್ತ-ಜ್ಯೋತಿಷ-ಕಲ್ಪ ಹನ್ನೊಂದ
ಪ್ರಗಾಢಾಲೋಚನೆ, ಮನನ, ಜಿಜ್ಞಾಸೆ, ಚರ್ಚೆ, ಅನ್ವೇಷಣಾದೀ ಮೀಮಾಂಸಾ
ಪ್ರತಿಜ್ಞ-ಹೇತು-ಉದಾಹರಣ-ಉಪನಯ-ನಿಗಮನ ನ್ಯಾಯಪ್ರಮೇಯ ದರ್ಶ ||
.
೯೦೩. ಕಲ್ಯಾ
ಕಲ್ಯಾ ವಿವಿಧಾರ್ಥ ಶಬ್ದ ಮಂಗಳಕರ, ಕಲ್ಯಾಣ, ಸಿದ್ಧತೆ
ಆದೇಶಾತ್ಮಕ, ಮುಂಜಾವು, ಶುಭಶಕುನ ಅರ್ಥಗಳಂತೆ
ಸಕಲಾರ್ಥ ಗುಣ ರೂಪದಲಿಹ ಲಲಿತೆ, ಕಲ್ಯಾ ಸ್ವರೂಪ
ಲಲಿತಕಲಾಪರಿಣಿತೆ, ದೇವಿ ತಾನೆ ಕಲೆಗೆ ಮೂರ್ತರೂಪ ||
.
೯೦೪. ವಿದಗ್ಧಾ
ಸೃಷ್ಟಿ-ಸ್ಥಿತಿ-ಲಯ ತ್ರಿಕಾರ್ಯ ಜಟಿಲತೆಗೆ, ವಿದಗ್ಧಾ ಗುಣ-ಲಕ್ಷಣದ ಜತೆ
ತೀಕ್ಷ್ಣಬುದ್ಧಿ-ಚುರುಕು-ಚತುರತೆ-ನಿಗೂಢ-ಕೃತಿಮ-ಕುತೂಹಲ-ಕುಟಿಲತೆ
ಸಕಲವೂ ಪರಬ್ರಹ್ಮದ ಗುಣ, ಪರಬ್ರಹ್ಮಸ್ವರೂಪ ದೃಢಪಡಿಸುವ ಲಕ್ಷಣ
ಪರಬ್ರಹ್ಮ ಸ್ವರೂಪಿಣಿ ಲಲಿತೆ, ವಿದಗ್ಧಾ ರೂಪದೆ ನಿಭಾಯಿಸೊ ಜಾಣತನ ||
.
೯೦೫. ಬೈಂದವಾಸನಾ
ಬೈಂದವ-ಬಿಂದು, ಚುಕ್ಕೆ ಆಸನ-ಪೀಠ, ಬಿಂದು ಮೇಲುಪಸ್ಥಿತಳಿಹ ಲಲಿತ
ಶ್ರೀ ಚಕ್ರದ ನಡುಚುಕ್ಕೆ ಬಿಂದು, ಒಳಾಂಗಣ ತ್ರಿಕೋಣದ ನಡುವೆ ಇರಿಸುತ
ಶ್ರೀ ಮೇರುವಿನ ಅತ್ಯುನ್ನತ ಶಿಖರದೆ ನೆಲೆಸಿರುತ, ಸರ್ವಾನಂದಮಯ ಚಕ್ರ
ಬೈಂದವಸ್ಥಾನದೆ ಬೈಂದವಾಸನ, ಪರಾಭಟ್ಟಾರಿಕ ಮಹಾ-ಕಾಮೇಶ್ವರಿ ಚಿತ್ರ ||
.
ಶ್ವೇತ-ರೋಹಿತ-ಬಹುವರ್ಣ ತ್ರಿಬಿಂದು, ಬಿಳಿಯಾಗಿ ಶಿವ ಕೆಂಪು ಶಕ್ತಿ
ಅಕುಚನ ಸಂಕುಚನ ಶಿವ ಶಕ್ತಿ ಬಿಂದು, ವಿಶ್ವ ಸೃಷ್ಟಿ ಕಾರಣ ನಿಯುಕ್ತಿ
ಬಹುವರ್ಣ ಸೂರ್ಯ ಪ್ರತಿನಿಧಿ ಕಾಮ, ಶ್ವೇತ-ರೋಹಿತ ಕಲಾ ಚುಕ್ಕೆ
ತ್ರಿಬಿಂದು ಸಂಗಮ ಕಾಮಕಲಾ, ಕೆಂಪು-ಬಿಳಿ ದೈವೀಸಂಗಾತಿ ಜಗಕೆ ||
.
ಪ್ರಕಾಶರೂಪಿ ಶಿವ, ಶಕ್ತಿ ವಿಮರ್ಶಾ ಏಕರೂಪಿ ಐಕ್ಯತೆಯೆ ಅಹಂಕಾರ
ಶಬ್ಧ ಶಬ್ಧಾರ್ಥ ಉತ್ಪತ್ತಿ ಅಹಂಕಾರದಿಂದ, ಕೆಂಪು ಬಿಂದು ಸೃಷ್ಟಿ ಸ್ವರ
ದೇವಿ ಆಸನ ಬೈಂದವಾಸನಾ, ತ್ರಿಬಿಂದು ಇಡಾ.ಪಿಂಗಳಾ.ಸುಷುಮ್ನಾ
ಆತ್ಮ.ಚಿತ್ತ.ಮನ ತ್ರಿನಾಡಿಸಂಗಮ ಬಿಂದು, ಸಾಧಕ ಬ್ರಹ್ಮಾಂಡ ಪ್ರಜ್ಞಾ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು