೧೯೩. ಲಲಿತಾ ಸಹಸ್ರನಾಮ ೯೦೬ರಿಂದ ೯೧೧ನೇ ನಾಮಗಳ ವಿವರಣೆ

೧೯೩. ಲಲಿತಾ ಸಹಸ್ರನಾಮ ೯೦೬ರಿಂದ ೯೧೧ನೇ ನಾಮಗಳ ವಿವರಣೆ

                                                                ಲಲಿತಾ ಸಹಸ್ರನಾಮ ೯೦೬ - ೯೧೧

Tattvādikā तत्त्वादिका (906)

೯೦೬. ತತ್ತ್ವಾಧಿಕಾ

            ದೇವಿಯು ಸಾಮಾನ್ಯವಾಗಿ ಚರ್ಚಿಸುವ ಎಲ್ಲಾ ೨೪ ಅಥವಾ ೩೬ ತತ್ವಗಳಿಗೆ ಅತೀತಳಾಗಿದ್ದಾಳೆ. ಹೆಚ್ಚಿನ ವಿವರಗಳಿಗೆ ನಾಮ ೪೨೪ರ ವಿವರಣೆಯನ್ನು ನೋಡಿ.

Tattvamayī तत्त्वमयी (907)

೯೦೭. ತತ್ತ್ವಮಯೀ

           ಇದು ಹಿಂದಿನ ನಾಮದ ಮುಂದುವರೆದ ಭಾಗವಾಗಿದೆ. ಈ ನಾಮವು ದೇವಿಯು ತತ್ವಗಳ ಮೂರ್ತರೂಪವಾಗಿದ್ದಾಳೆ ಎಂದು ಹೇಳುತ್ತದೆ. ತತ್ವಗಳನ್ನು ಈ ಅಭೂತಪೂರ್ವ ಸೃಷ್ಟಿಗೆ ಕಾರಣವಾಗಿರುವ ಅಂತಿಮ ಸಿದ್ಧಾಂತಗಳು ಅಥವಾ ಸಾರ ಎಂದು ವಿವರಿಸಬಹುದು. ಆತ್ಮಸಾಕ್ಷಾತ್ಕಾರ ಹೊಂದಿದ ವ್ಯಕ್ತಿಯನ್ನು ತತ್ವದರ್ಶಿ ಎನ್ನುವುದರ ಹಿಂದೆ ಇರುವ ಉದ್ದೇಶವೇನೆಂದರೆ ಅವನು ಸತ್ಯವನ್ನು ಮನಗಂಡಿದ್ದಾನೆ ಎನ್ನುವುದಾಗಿದೆ. ತತ್ವಗಳ ಕುರಿತಾದ ಜ್ಞಾನವನ್ನು ದರ್ಶನವೆನ್ನುವುತ್ತಾರೆ ಅದರ ಅರ್ಥ ಆಧ್ಯಾತ್ಮಿಕ ಅನಾವರಣ. ತತ್ವಗಳನ್ನು ಬಾಹ್ಯಕರಣಗಳನ್ನುತ್ತಾರೆ (ಹೊರಗಿನ ಸಲಕರಣೆಗಳು ಅಥವಾ ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ ಇವುಗಳ ಅಂಶಗಳು) ಅಂತಃಕರಣಕ್ಕೆ (ಒಳಗಿನ ಸಲಕರಣೆಗಳೆಂದರೆ ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ) ಪ್ರತಿಯಾಗಿ. ಪಂಚ ಮಹಾಭೂತಗಳು ಅಥವಾ ಮೂಲ ಧಾತುಗಳು ತತ್ವಗಳಾಗಿ ವಿಭಜಿಸಲ್ಪಡುತ್ತವೆ - ಅವುಗಳು ಗ್ರಹಣೇಂದ್ರಿಯಗಳು, ತನ್ಮಾತ್ರಗಳು ಮತ್ತು ಕರ್ಮೇಂದ್ರಿಯಗಳು. ಪಂಚ ಮಹಾಭೂತಗಳೊಂದಿಗೆ  ಇಂದ್ರಿಯಗಳು ಮತ್ತು ತನ್ಮಾತ್ರೆಗಳು ಸೇರಿ ಒಟ್ಟು ಇಪ್ಪತ್ತು ತತ್ವಗಳಾಗುತ್ತವೆ. ಈ ಇಪ್ಪತ್ತು ತತ್ತ್ವಗಳೊಂದಿಗೆ ನಾಲ್ಕು ಅಂಶಗಳನ್ನುಳ್ಳ ಅಂತಃಕರಣವು (ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರಗಳು) ಸೇರಿ ಇಪ್ಪತ್ತನಾಲ್ಕು ತತ್ವಗಳಾಗುತ್ತವೆ; ಇವನ್ನು ಆತ್ಮ ತತ್ವಗಳೆನ್ನುತ್ತಾರೆ. ಆರು ಅಂಶಗಳನ್ನುಳ್ಳ ವಿದ್ಯಾ ತತ್ವವು, ನಾಲ್ಕು ಅಂಶಗಳುಳ್ಳ ಶುದ್ಧ ವಿದ್ಯಾ ತತ್ವದೊಂದಿಗೆ ಸೇರಿಕೊಂಡು ಇನ್ನೂ ಹತ್ತು ತತ್ವಗಳು ಉಂಟಾಗುತ್ತವೆ. ಇದರೊಂದಿಗೆ ಇನ್ನೆರಡು ಶ್ರೇಷ್ಠವಾದ ಶಕ್ತಿ ತತ್ವ ಮತ್ತು ಶಿವ ತತ್ವಗಳು ಸೇರಿಕೊಂಡು ಒಟ್ಟು ತತ್ವಗಳ ಸಂಖ್ಯೆಯು ೩೬ ಆಗುತ್ತದೆ.

            ಈ ನಾಮವು ದೇವಿಯು ಮೇಲೆ ಹೇಳಲ್ಪಟ್ಟ ತತ್ವಗಳ ಸ್ವರೂಪದಲ್ಲಿದ್ದಾಳೆಂದು ಹೇಳುತ್ತದೆ. ದೇವಿಯನ್ನು ಪರಬ್ರಹ್ಮವೆಂದು ಈ ಸಹಸ್ರನಾಮದ ಅನೇಕ ನಾಮಗಳ ಮೂಲಕ ದೃಢವಾಗಿ ಹೇಳಲಾಗಿದೆ. ಪರಬ್ರಹ್ಮದ ಮೂಲಭೂತ ಲಕ್ಷಣವು ಸರ್ವವ್ಯಾಪಕತೆ. ತತ್ವಗಳು ಪ್ರಕೃತಿಗೆ ಸಂಭಂದಿಸಿದವು. ದೇವಿಯು ಪರಬ್ರಹ್ಮ ಹಾಗೂ ಪ್ರಕೃತಿ ಎರಡೂ ಆಗಿರುವುದರಿಂದ ಈ ನಾಮವು ದೇವಿಯು ತತ್ವಗಳ ಮೂರ್ತರೂಪವೆಂದು ಹೇಳುತ್ತದೆ.

            ಹಿಂದಿನ ನಾಮವು ದೇವಿಯು ತತ್ವಗಳಿಗೆ ಅತೀತಳಾಗಿದ್ದಾಳೆಂದು ಹೇಳಿತ್ತು. ಬ್ರಹ್ಮವು ಯಾವುದೇ ವಿಧವಾದ ಕ್ರಿಯೆಗಳೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುವುದಿಲ್ಲ. ಹಿಂದಿನ ನಾಮವು ಆಕೆಯನ್ನು ಪರಬ್ರಹ್ಮವೆಂದು ಪರಿಗಣಿಸಿ ಆಕೆಯು ತತ್ವಗಳಿಗೆ ಅತೀತಳಾಗಿದ್ದಾಳೆ ಎಂದು ಹೇಳಿದರೆ ಈ ನಾಮವು ದೇವಿಯನ್ನು ಪ್ರಕೃತಿಯೆಂದು ಪರಿಗಣಿಸಿ ಆಕೆಯನ್ನು ತತ್ವಗಳ ಮೂರ್ತರೂಪವೆಂದು ಕರೆಯುತ್ತದೆ.

            ಇನ್ನೂ ಹೆಚ್ಚಿನ ವಿವರಣೆಗಳನ್ನು ನಾಮ ೯೯೧ರಲ್ಲಿ ನೋಡೋಣ.

Tattvamartha-svarūpiṇī तत्त्वमर्थ-स्वरूपिणी (908)

೯೦೮. ತತ್ತ್ವಮರ್ಥ-ಸ್ವರೂಪಿಣೀ

           ತತ್ ಎಂದರೆ ಪರಬ್ರಹ್ಮ ಮತ್ತು ತ್ವಂ ಎಂದರೆ ಆತ್ಮ. ಇವೆರಡರ ಸಂಯೋಗವನ್ನು ಸಾಕ್ಷಾತ್ಕಾರ ಅಥವಾ ಆತ್ಮ-ಸಾಕ್ಷಾತ್ಕಾರ ಎನ್ನುತ್ತಾರೆ.

           ಈ ನಾಮವು ದೇವಿಯನ್ನು ಮಹಾ ವಾಕ್ಯದ ಸ್ವರೂಪದಲ್ಲಿದ್ದಾಳೆಂದು ಹೇಳುತ್ತದೆ; ಉದಾ: "ತತ್ ತ್ವಂ ಅಸಿ" (ಅದು ನೀನೇ ಆಗಿದ್ದೀಯಾ). ದೇವಿಯ ಕೃಪೆಯಿಲ್ಲದಿದ್ದರೆ ತತ್ತ್ವಮಸಿ ಮಹಾನ್ ವಾಕ್ಯದ ಅರ್ಥವನ್ನು ಗ್ರಹಿಸಲಾಗುವುದಿಲ್ಲ.

           ತತ್ತ್ವಮಸಿ ವಾಕ್ಯವು ಛಾಂದೋಗ್ಯ ಉಪನಿಷತ್ತಿನ (೬.೮.೭) ಹೇಳಿಕೆಯಾಗಿದೆ. ಆ ಉಪನಿಷತ್ತು ಹೀಗೆ ಹೇಳುತ್ತದೆ, "ಯಾವುದು ಎಲ್ಲದಕ್ಕಿಂತಲೂ ಸೂಕ್ಷ್ಮವಾಗಿದೆಯೋ ಅದು ಆತ್ಮವಾಗಿದೆ. ’ತತ್ ಸತ್ಯಂ’ ಅದುವೇ ಸತ್ಯವಾಗಿದೆ; ’ಸಃ ಆತ್ಮ’ ಅದುವೇ ಆತ್ಮವಾಗಿದೆ, ’ತತ್ ತ್ವಮ್ ಅಸಿ’ ಅದು ನೀನೇ ಆಗಿದ್ದೀಯಾ". ಈ ಉಪನಿಷತ್ತು, ಪರಿಶುದ್ಧ ಆತ್ಮದ ಸಾರವು ಆತ್ಮದ ನಿಜವಾದ ಗುರುತಾಗಿದೆ ಎಂದು ದೃಢಪಡಿಸುತ್ತದೆ.

Sāmagāna-priyā सामगान-प्रिया (909)

೯೦೯. ಸಾಮಗಾನ-ಪ್ರಿಯಾ

           ಸಾಮ ಎಂದರೆ ಸಾಮ ವೇದ ಮತ್ತು ಗಾನ ಎಂದರೆ ಹಾಡುಗಳು ಮತ್ತು ಪ್ರಿಯಾ ಎಂದರೆ ಇಷ್ಟಪಡುವವಳು. ಈ ನಾಮವು ದೇವಿಯು ಸಾಮವೇದದ ಗಾಯನವನ್ನು ಇಷ್ಟ ಪಡುತ್ತಾಳೆ ಅಥವಾ ಯಾರು ಸಾಮ ವೇದವನ್ನು ಗಾಯನ ಮಾಡುತ್ತಾರೆಯೋ ಅವರನ್ನು ಇಷ್ಟ ಪಡುತ್ತಾಳೆ ಎಂದು ಹೇಳುತ್ತದೆ. ಸಾಮ ವೇದದ ಶ್ಲೋಕಗಳನ್ನು ಸ್ವರ ಬದ್ಧವಾಗಿ ರೂಪಿಸಲಾಗಿದೆ. ಶಿವನು ಸಹ ಸಾಮ ವೇದ ಪ್ರಿಯನಾಗಿದ್ದಾನೆ ಎಂದು ಹೇಳಲಾಗುತ್ತದೆ. ವಾಲ್ಮೀಕಿ ಪ್ರಣೀತ ರಾಮಾಯಣದ ಪಾತ್ರವಾದ ರಾವಣನೂ ಸಹ ಶಿವನನ್ನು ಸಾಮಗಾನದ ಮೂಲಕ ಹಾಡಿ ಹೊಗಳಿ ವರಗಳನ್ನು ಪಡೆದನೆಂದು ಹೇಳಲಾಗುತ್ತದೆ. ಇದು ವಾಲ್ಮೀಕಿ ರಾಮಾಯಣದ ಉತ್ತರ ಕಾಂಡದಲ್ಲಿ (೧೬. ೩೪) ಬರುತ್ತದೆ. "ದಶಾನನನು ಶಿವನ ಮಹಿಮೆಯನ್ನು ಸಾಮ ವೇದದ ಗಾನಗಳಿಂದ ಹಾಡಿ ಹೊಗಳಿದನು". ಕೃಷ್ಣನೂ ಸಹ ಭಗವದ್ಗೀತೆಯಲ್ಲಿ (೧೦.೨೨), "ವೇದಗಳಲ್ಲಿ ನಾನು ಸಾಮ ವೇದ", ಎಂದು ಹೇಳಿದ್ದಾನೆ.

          ಛಾಂದೋಗ್ಯ ಉಪನಿಷತ್ತು (೧.೬.೧) ಋಗ್ವೇದ ಮತ್ತು ಸಾಮ ವೇದಗಳಿಗೆ ದೃಢವಾದ ಸಂಭಂದವನ್ನು ಕಲ್ಪಿಸುತ್ತದೆ. "ಭೂಮಿಯು ಋಗ್ವೇದದಂತೆ ಇದೆ ಮತ್ತು ಅಗ್ನಿಯು ಸಾಮವೇದದಂತೆ ಇದೆ. ಸಾಮವೇದವು ಋಗ್ವೇದವನ್ನು ಆಧರಿಸಿದೆ, ಆದ್ದರಿಂದ ಸಾಮವೇದವನ್ನು ಋಗ್ವೇದವನ್ನು ಆಧರಿಸಿ ಗಾಯನ ಮಾಡಲಾಗುತ್ತದೆ. ಭೂಮಿಯು "ಸಾ" ಆಗಿದೆ ಮತ್ತು ಅಗ್ನಿಯು, "ಅಮ" ಆಗಿದೆ ಅವೆರಡೂ ಸೇರಿ ಸಾಮವಾಗಿದೆ". ಛಾಂದೋಗ್ಯ ಉಪನಿಷತ್ತು ಮತ್ತು ಕೇನ ಉಪನಿಷತ್ತುಗಳೆರಡೂ ಸಾಮವೇದಕ್ಕೆ ಸೇರಿದ ಪ್ರಮುಖ ಉಪನಿಷತ್ತುಗಳಾಗಿವೆ.

ಸಾಮವೇದದ ಕುರಿತು ಇನ್ನಷ್ಟು ವಿವರಗಳು:

             ಸಾಮವೇದವು ಎರಡು ಭಾಗಗಳನ್ನು ಹೊಂದಿದೆ. ಮೊದಲನೇ ಭಾಗವು ಹಾಡಬೇಕಾಗಿರುವ ಋಕ್ ಮಂತ್ರಗಳನ್ನು ಸೂಚಿಸುವ ಪಠ್ಯವನ್ನೊಳಗೊಂಡಿದೆ. ಎರಡನೇ ಭಾಗವು ವಾಸ್ತವವಾಗಿ ಹಾಡಬೇಕಾದ ಮಂತ್ರಗಳ ಪೂರ್ಣ ಪಾಠವನ್ನು ಒಳಗೊಂಡಿದೆ. ಹಾಗಾಗಿ ಮೊದಲನೇ ಭಾಗದಲ್ಲಿರುವ ಪ್ರತಿಯೊಂದು ಮಂತ್ರವೂ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಾಮಗಾನದ ಮಂತ್ರಗಳನ್ನು ಕೊಡಲು ವಿಸ್ತರಿಸಲ್ಪಟ್ಟಿವೆ. ಸಾಮ ವೇದದಲ್ಲಿ ೧೮೭೫ ಮಂತ್ರಗಳಿವೆ ಎಂದು ಹೇಳಲಾಗುತ್ತದೆ. ವೇದಾಂಗವಾದ ಶಿಕ್ಷಾವು ವೇದಗಳನ್ನು ಪಠಿಸುವ ವೈಜ್ಞಾನಿಕ ಮತ್ತು ಶುದ್ಧವಾದ ಪಠಣ ಕ್ರಮದ ಕುರಿತಾಗಿ ತಿಳಿಸಿಕೊಡುತ್ತದೆ. ಶಿಕ್ಷಾವು ವರ್ಣ, ಸ್ವರ, ಮಾತ್ರ, ಬಲಮ್, ಸಾಮ ಮತ್ತು ಸಂತಾನ ಎಂದು ಉಪಭಾಗಗಳಾಗಿ ವಿಭಜಿಸಲ್ಪಟ್ಟಿದೆ. ಇವು ಅನುಕ್ರಮವಾಗಿ ಅಕ್ಷರ, ಉಚ್ಛಾರಣಾ ಪದ್ಧತಿ, ಉಚ್ಛರಿಸಲಿಕ್ಕೆ ತಗಲುವ ಸಮಯ, ಪ್ರಯತ್ನ, ಸಮಾನವಾದ ಧ್ವನಿ ಹಾಗು ನಿರಂತರತೆ ಮತ್ತು ಪಠ್ಯಗಳಾಗಿವೆ. ಸಾಮವೇದದ ಮಾದರಿ ಋಕ್ ಅನ್ನು ಇಲ್ಲಿ ಕೆಳಗೆ ಕೊಡಲಾಗಿದೆ. ಅಕ್ಷರಗಳ ಮೇಲೆ ಕೊಟ್ಟಿರುವ ಸಂಖ್ಯೆಗಳು ಆ ಅಕ್ಷರವನ್ನು ಎಷ್ಟು ಬಾರಿ ಉಚ್ಛರಿಸಬೇಕೆಂದು ತಿಳಿಸಿಕೊಡುತ್ತದೆ. (१ ಎನ್ನುವುದು ಸಂಖ್ಯೆ ೧, २ ಎನ್ನುವುದು ಸಂಖ್ಯೆ ೨ಮತ್ತು ३ ಎನ್ನುವುದು ಸಂಖ್ಯೆ ೩).

  १ ३    १    २     ३ २ १   ३ २      ३ २    १

अगने  आ  याहि   वीतये  गुणानो   हव्य  दातये

Saumyā सोम्या (910)

೯೧೦. ಸೋಮ್ಯಾ

             ಈ ನಾಮವನ್ನು ಸೌಮ್ಯಾ ಎಂದೂ ಉಚ್ಛರಿಸಲಾಗುತ್ತದೆ. ಸೋಮ ಎನ್ನುವುದು ಉಮೆಯೊಂದಿಗಿರುವ ಶಿವನ ಕುರಿತಾಗಿ ಹೇಳುತ್ತದೆ; ಇದು ಶಿವನ ಒಂದು ಭಾಗವಾಗಿದೆ. ಇದರ ಕುರಿತು ಇದುವರೆಗಾಗಲೇ ನಾಮ ೩೯೨ರ ವಿವರಣೆಯಲ್ಲಿ ನೋಡಿದ್ದೇವೆ.

ಸೋಮ್ಯ ಎಂದರೆ ಚಂದ್ರನನ್ನು ಹೋಲುವ ಅಂದರೆ ಮಂಗಳಕರವಾದ, ಸಂತೋಷಕರವಾದ, ಆಹ್ಲಾದಕರವಾದ, ಉತ್ಸಾಹದಿಂದ ಕೂಡಿದ, ಮುಂತಾದ ಅರ್ಥಗಳಿವೆ. ಈ ಎಲ್ಲಾ ಗುಣಗಳು ದೇವಿಗೆ ಅನ್ವಯಿಸುತ್ತವೆ.

             ಈ ನಾಮವು ದೇವಿಯು ಸೋಮಯಾಗದ ಮೂಲಕ ಪೂಜಿಸಲು ಯೋಗ್ಯಳೆಂದು ಸಹ ಹೇಳುತ್ತದೆ.

ಸೋಮಯಾಗದ ಕುರಿತಾಗಿ ಇನ್ನಷ್ಟು ವಿವರಣೆಗಳು:

            ವೇದ ಕಾಲದ ಅಂತಿಮ ಘಟ್ಟದಲ್ಲಿ ರಚಿಸಲ್ಪಟ್ಟ ಶ್ರೌತ ಸೂತ್ರಗಳು (ಉದಾಹರಣೆಗೆ ಆಪಸ್ತಂಭ ಶ್ರೌತ ಸೂತ್ರಗಳು) ಆ ಶ್ರೌತ ಸೂತ್ರಗಳ ಆಚರಣೆಯ ಕುರಿತಾಗಿ ಅನೇಕ ವ್ಯಾಖ್ಯಾನಗಳನ್ನು ಕೊಡುತ್ತವೆ. ಈ ಆಚರಣೆಯ ಪ್ರಮುಖ ಅಂಶವು ಆಹುತಿಗಳ (ಅಗ್ನಿಯಲ್ಲಿ ಅರ್ಪಿಸುವ ವಿವಿಧ ವಸ್ತುಗಳ)  ಮತ್ತು ಆವಾಹಿಸಬೇಕಾದ ದೇವತೆ (ಯಾರಿಗೆ ಆಹುತಿಗಳನ್ನು ಅರ್ಪಿಸುತ್ತೇವೆಯೋ ಆ ದೇವತೆಯ ಕುರಿತು ಹೇಳುತ್ತದೆ) ಮತ್ತು ವೈರಾಗ್ಯದ (ಯಾಗವನ್ನು ಮಾಡುವುದರಿಂದ ದೊರೆಯುವ ಫಲದ ಬಗ್ಗೆ ವೈರಾಗ್ಯ ತೆಳೆಯುವುದರ) ಕುರಿತಾಗಿದೆ. ಶ್ರೌತ ಸೂತ್ರಗಳು ಪ್ರಮುಖವಾಗಿ ಮೂರು ವಿಧಗಳಾಗಿ ವಿಭಜಿಸಲ್ಪಟ್ಟಿವೆ. ಅವುಗಳೆಂದರೆ ಹವಿರ್ಯಜ್ಞ ಅಥವಾ ಇಷ್ಟಿ; ಉದ್ದೇಶಿತ ಪ್ರಾಣಿ ಬಲಿ ಮತ್ತು ಸೋಮ ಆಚರಣೆಗಳು. ಸೋಮಯಾಗವನ್ನು ಮಾಡಲು ಅನೇಕ ನಿಬಂಧನೆಗಳಿವೆ. ಒಬ್ಬನು ಅವಶ್ಯವಾಗಿ ಮದುವೆಯಾಗಿರಬೇಕು ಮತ್ತು ಸೋಮಯಾಗ ಮಾಡುವುದು ಪರಂಪರಾನುಗತವಾಗಿ ಬಂದಿರಬೇಕು. ಸೋಮ ಎನ್ನುವುದು ಒಂದು ಪವಿತ್ರ ಸಸ್ಯವಾಗಿದ್ದು ಅದು ಎತ್ತರವಾದ ಪರ್ವತ ಶ್ರೇಣಿಗಳಲ್ಲಿ ಬೆಳೆಯುತ್ತದೆ; ಅದರ ರಸವನ್ನು ಯಜ್ಞ ಮಾಡುವಾದ ಆಹುತಿಯಲ್ಲಿ ಅರ್ಪಿಸಲಾಗುತ್ತದೆ. ಸೋಮಯಾಗದ ಪ್ರಮುಖ ಲಕ್ಷಣವೇನೆಂದರೆ ಅದರಲ್ಲಿ ಮೂರು ಜನ ಪುರೋಹಿತರು ಸಾಮವೇದದ ಗಾಯನಗಳನ್ನು ಅನುಕ್ರಮವಾಗಿ ಒಟ್ಟಾಗಿ ಹಾಡುತ್ತಾರೆ. 

Sadāśiva-kuṭumbinī सदाशिव-कुटुम्बिनी (911)

೯೧೧. ಸದಾಶಿವ-ಕುಟುಂಬಿನೀ

            ದೇವಿಯು ಸದಾಶಿವನ ಸಂಗಾತಿ ಅಥವಾ ಸದಾಶಿವ/ಶಿವನ ಕುಟುಂಬಕ್ಕೆ ಸೇರಿದವಳಾಗಿದ್ದಾಳೆ. ಲಲಿತಾ ತ್ರಿಶತೀ ನಾಮ ೨೩೧ ಸಹ ಸದಾಶಿವ-ಕುಟುಂಬಿನೀ ಆಗಿದೆ.

           ಸದಾಶಿವ ಎನ್ನುವುದು ಒಂದು ತತ್ವ ಅಥವಾ ಸಿದ್ಧಾಂತವಾಗಿದೆ; ಇದು ಶಿವನ ಪರಿಶುದ್ಧ ಅಂಶವಾಗಿದ್ದು; ಈ ಹಂತದಲ್ಲಿ ಒಬ್ಬನು ತನ್ನ ಸ್ವಂತ ದೇಹದ ಅಂಗವೋ (ಅಹಂ ಅಂದರೆ ನನ್ನದೇ)  ಎನ್ನುವಂತೆ ಈ ವಿಶ್ವದ ವೈವಿಧ್ಯರಹಿತ ಸ್ಥಿತಿಯ ಅನುಭವವನ್ನು ಪಡೆಯುತ್ತಾನೆ. ಇದನ್ನೇ ಬೇರೆಯ ಮಾತುಗಳಲ್ಲಿ ಹೇಳಬೇಕೆಂದರೆ ಒಬ್ಬನು ’ಅಹಮ್ ಇದಮ್’ ಅಥವಾ ’ಇದು ನಾನೇ’ ಅಥವಾ ಈ ವಿಶ್ವವೇ ನಾನು ಎನ್ನುವ ಅನುಭವವನ್ನು ಈ ಸದಾಶಿವ ಹಂತದಲ್ಲಿ ಹೊಂದುತ್ತಾನೆ. ಆತ್ಮ ಸಾಕ್ಷಾತ್ಕಾರದ ಹಾದಿಯಲ್ಲಿ ಐದು ಅಂತಿಮ ಹಂತಗಳಿವೆ. ಅವೆಂದರೆ, ಆರೋಹಣ ಪದ್ಧತಿಗನುಗುಣವಾಗಿ, ಶುದ್ಧ ವಿದ್ಯಾ, ಈಶ್ವರ, ಸದಾಶಿವ, ಶಕ್ತಿ ಮತ್ತು ಅಂತಿಮವಾಗಿ ಶಿವ; ಪರಮೋನ್ನತನಾದವನು.

                                                                            ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 906 - 911 http://www.manblunder.com/2010/07/lalitha-sahasranamam-906-911.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Sat, 01/11/2014 - 21:18

ಶ್ರೀಧರರೆ, "೧೯೩. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ, ತಮ್ಮ ಪರಿಷ್ಕರಣೆಗೆ ಸಿದ್ಧ:-)
.
ಲಲಿತಾ ಸಹಸ್ರನಾಮ ೯೦೬ - ೯೧೧
______________________________
.
೯೦೬. ತತ್ತ್ವಾಧಿಕಾ
ತತ್ವಗಳಾ ಅಧಿಪತಿ ದೇವಿಯೊಡತಿ ತತ್ವಗಳಿಗೆ
ಇಪ್ಪತ್ತನಾಲ್ಕು- ಮೂವತ್ತಾರು ತತ್ವದ ಗಣನೆಗೆ
ಮೂಲ ರೂಪಿಣಿ ತತ್ವಕೆ ಪ್ರಕೃತಿ ಪುರುಷ ಗಣಕ
ತತ್ವಗಳೆಲ್ಲಕು ಅತೀತಳಾಗಿ, ಲಲಿತೆ ತತ್ತ್ವಾಧಿಕ ||
.
೯೦೭. ತತ್ತ್ವಮಯೀ
ಪರಬ್ರಹ್ಮ ರೂಪಿಣಿಯಾಗಿ ತತ್ತ್ವಾಧಿಕ, ಪ್ರಕೃತಿ ಸ್ವರೂಪಿಣಿಯಾಗಿ ತತ್ತ್ವಮಯೀ
ತತ್ವ ಮೂರ್ತ ರೂಪ ಲಲಿತೆ, ತತ್ವಗಳೆಲ್ಲದರ ಸ್ವರೂಪದಲಿಹ ಮಹಾ ತಾಯಿ
ಪರಬ್ರಹ್ಮ ಮೂಲಭೂತ ಲಕ್ಷಣ ಸರ್ವವ್ಯಾಪಕತ್ವ, ಪ್ರಕೃತಿಗೆ ಸಂಬಂಧಿತ ತತ್ವ
ಪ್ರಕೃತಿ ಪರಬ್ರಹ್ಮಗಳೆರಡರ ಸ್ವರೂಪದಲಿ ದೇವಿ, ತತ್ವ ಮೂರ್ತರೂಪ ಮಹತ್ವ ||
.
ಅಂತಿಮ ಸಿದ್ದಾಂತ ಸಾರವೆ ತತ್ವ, ಅಭೂತಪೂರ್ವ ಸೃಷ್ಟಿಕಾರಣ ದರ್ಶನ
ಸತ್ಯ ಸಾಕ್ಷಾತ್ಕರಿಸಿದವ ತತ್ವ-ದರ್ಶಿ, ತತ್ವ ಜ್ಞಾನ ಆಧ್ಯಾತ್ಮಿಕ ಅನಾವರಣ
ಪಂಚಭೂತ ಆಕಾಶ-ವಾಯು-ಅಗ್ನಿ-ನೀರು-ಭೂಮಿ ಬಾಹ್ಯಕರಣ ತತ್ವಾಂಶ
ಒಳಸಲಕರಣೆ ಮನಸ್ಸು-ಬುದ್ಧಿ-ಚಿತ್ತ-ಅಹಂಕಾರ, ಅಂತಃಕರಣ ಪ್ರತ್ಯಾಂಶ ||
.
ಅಂತಃಕರಣ ಜತೆ, ಪಂಚ ಮಹಾಭೂತ-ಇಂದ್ರಿಯ-ತನ್ಮಾತ್ರೆ ಇಪ್ಪತ್ನಾಲ್ಕು
ಗ್ರಹಣೇಂದ್ರಿಯ-ತನ್ಮಾತ್ರ-ಕರ್ಮೇಂದ್ರಿಯ ಸೇರಿ ಆತ್ಮ ತತ್ವಗಳಾದ ಸರಕು
ಆರು ವಿದ್ಯಾತತ್ವಕೆ ನಾಲ್ಕು ಶುದ್ಧವಿದ್ಯಾತತ್ವ ಜತೆಗೂಡಿದ ಹತ್ತರ ಸೊಬಗು
ಶ್ರೇಷ್ಠಾತಿ ಶ್ರೇಷ್ಠದ ಶಕ್ತಿ-ಶಿವದೆರಡು ತತ್ವ ಸಂಗಮ ಮೂವತ್ತಾರಾಗಿ ಬೆಡಗು ||
೯೦೮. ತತ್ತ್ವಮರ್ಥ-ಸ್ವರೂಪಿಣೀ
ತತ್-ಪರಬ್ರಹ್ಮ, ತ್ವಂ-ಅತ್ಮ ಸಂಯೋಗವೆ ಆತ್ಮ-ಸಾಕ್ಷಾತ್ಕಾರ
'ತತ್ ತ್ವಂ ಅಸಿ' ಮಹಾವಾಕ್ಯ ಸ್ವರೂಪಿಣಿ, ಗ್ರಹಿಸಲರ್ಥ ಸಾರ
ಸೂಕ್ಷ್ಮಾತಿಸೂಕ್ಷ್ಮ-ಸತ್ಯರೂಪಿ ಆತ್ಮ, ಅದುವೆ ನೀನಾದ ಒಳದನಿ
ಪರಿಶುದ್ದಾತ್ಮ ಸಾರ ನಿಜಾತ್ಮ ಗುರುತು, ತತ್ತ್ವಮರ್ಥ-ಸ್ವರೂಪಿಣೀ ||
.
೯೦೯. ಸಾಮಗಾನ-ಪ್ರಿಯಾ
ಸಾಮವೇದ ಗಾಯನ, ದೇವಿ ಲಲಿತೆಗೆ ಪ್ರಿಯಗಾನ
ಸ್ವರಬದ್ಧ ಸಾಮವೇದಶ್ಲೋಕ, ಶಿವ ಕೂಡ ಮೆಚ್ಚುವನ
ರಾವಣಸ್ವರ ಋಗ್ವೇದಾಕರ, ಸಾಮವೇದ ಕೃಷ್ಣಮಯ
ಸಾ-ಭೂಮಿ, ಅಮ-ಅಗ್ನಿ ಋಗ್ವೇದ ಸಾಮಗಾನಪ್ರಿಯಾ ||
.
ಸಾಮವೇದದ ಕುರಿತು ಇನ್ನಷ್ಟು ವಿವರಗಳು :
________________________________
ಸಾಮವೇದಕೆರಡು ಭಾಗ, ೧೮೭೫ ಮಂತ್ರ ಸಂಪುಟ
ಪ್ರಥಮ ಋಕ್ ಮಂತ್ರ ಸೂಚಿ, ದ್ವಿತೀಯ ಪೂರ್ಣಪಾಠ
ವರ್ಣ-ಸ್ವರ-ಮಾತ್ರ-ಬಲಮ್-ಸಾಮ-ಸಂತಾನವೆ ಶಿಕ್ಷಾ
ವೇದಾಂಗ ಶುದ್ಧ ಪಠನ ಕ್ರಮ ಭಾಗ, ವೈಜ್ಞಾನಿಕ ಸ್ಪರ್ಷ ||
.
೯೧೦. ಸೋಮ್ಯಾ
ಶಿವನೊಂದು ಭಾಗ ಸೋಮ, ಉಮೆಯೊಂದಿಗಿಹ
ಸೋಮ್ಯಾ-ಸೌಮ್ಯಾ ದ್ವೈತ ಉಚ್ಛಾರ ಸಮಾನಾಗಿಹ
ಮಂಗಳಕರ-ಆಹ್ಲಾದಕರ-ಹರ್ಷೋಲ್ಲಾಸ ಚಂದಿರಾ
ಸೋಮ ಯಾಗ ಯೋಗ್ಯ, ಲಲಿತೆಗನ್ವಯ ಸಾಕಾರ ||
.
ಸೋಮಯಾಗದ ಕುರಿತಾಗಿ ಇನ್ನಷ್ಟು ವಿವರಣೆಗಳು :
_______________________________________________
.
ಶ್ರೌತಾಚರಣೆ ವ್ಯಾಖ್ಯಾನ ಶೌತಸೂತ್ರ, ಆಹುತಿ-ಆವಾಹಿತ ದೈವ-ಫಲ ವೈರಾಗ್ಯ
ಹವಿರ್ಯಜ್ಞ-ಪ್ರಾಣಿ ಬಲಿ-ಸೋಮಾಚರಣೆ, ತ್ರಿವಿಧ ವಿಭಜಿತಸೂತ್ರ ಸಮಷ್ಟಿಭಾಗ್ಯ
ಸೋಮಯಾಗ ನಿರ್ಬಂಧಿತ, ವಿವಾಹಿತ-ಪರಂಪರಾನುಗತ-ಪವಿತ್ರ ಸೋಮ ಸಸ್ಯ
ತ್ರಿಪುರೋಹಿತ ಸಾಮವೇದ ಅನುಕ್ರಮ ಸಹಗಾಯನ, ಯಜ್ಞಾಹುತಿ ಸೋಮರಸ ||
.
೯೧೧. ಸದಾಶಿವ-ಕುಟುಂಬಿನೀ
ಸದಾಶಿವವೆನೆ ತತ್ವಾ-ಸಿದ್ಧಾಂತ, ಶಿವನಾ ಪರಿಶುದ್ಧ ಅಂಶ
ವಿಶ್ವದ ವೈವಿಧ್ಯರಹಿತ ಸ್ಥಿತಿಯನುಭವ, ಅಹಂ ಭಾಗಾಂಶ
ಬ್ರಹ್ಮಜ್ಞಾನಹಂತ ಶುದ್ಧವಿದ್ಯಾ-ಈಶ್ವರ-ಸದಾಶಿವ-ಶಕ್ತಿ-ಶಿವ
ಸದಾಶಿವ ಕುಟುಂಬಿನೀ ದೇವಿ, ಸದಾಶಿವಸಂಗಾತಿ ವೈಭವ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು