ಮೆರವಣಿಗೆ -ಲಕ್ಷ್ಮೀಕಾಂತ ಇಟ್ನಾಳ
ಮೆರವಣಿಗೆ -ಲಕ್ಷ್ಮೀಕಾಂತ ಇಟ್ನಾಳ
ಧೂಪ ದೀಪಗಳಲ್ಲಿ
ಗಂಟೆ ಜಾಗಟೆಗಳಲ್ಲಿ
ಮಂತ್ರ ಘೋಷಗಳ
ಭಾವಗೀತೆಗಳಲ್ಲಿ
ನನ್ನನ್ನೇ ನೆನೆದಿದ್ದ
ಅವನಿಲ್ಲದ ಬದುಕಲ್ಲಿ
ನಡೆದಿದೆ ಮೆರವಣಿಗೆ
ನೆನಪುಗಳ ಮೌನ ಮೆರವಣಿಗೆ
ಬದುಕಿನ ಹಾದಿಯಲ್ಲಿ
ಮುಳ್ಳುಗಳೆದುರಾದಲ್ಲಿ
ಹೂವ ತೋರಣ ಹಾಸಿ
ನಡೆಸುವೆನು ಕೈಪಿಡಿದು
ಎಂದಾಡದೇ, ಅಂಗೈಲಿ ಸಾಕಿದ
ನಲ್ಲನಿರದ ಬದುಕಲ್ಲಿ
ನಡೆದಿದೆ ಮೆರವಣಿಗೆ
ನೆನಪುಗಳ ಮೌನ ಮೆರವಣಿಗೆ
ಭೋರ್ಗರೆವ ಕಡಲಲ್ಲಿ
ನಾವೆ ಬುಡಮೇಲಾದಲ್ಲಿ
ಬಾಹುಗಳ ನೀಡಿ ಈಜಿ
ದಡ ಸೇರಿಸುವೆ ಎನ್ನದೆ
ತಾನೇ ದಡವಾದ
ಇನಿಯನಿಲ್ಲದ ಬದುಕಲ್ಲಿ
ನಡೆದಿದೆ ಮೆರವಣಿಗೆ
ನೆನಪುಗಳ ಮೌನ ಮೆರವಣಿಗೆ
ತಂದು ತಣಿಸುವೆ ತೃಷೆ
ಬೊಗಸೆಯಷ್ಟಾದರೂ ನೀರು
ಬತ್ತಿದ ನದಿ ಒರತೆಯನು
ಬರಿಗೈಲಾದರೂ ಬಗೆದು,
ಎನ್ನದೆ, ತಾನೆ ಒರತೆಯಾದ
ಗೆಳೆಯನಿಲ್ಲದ ಬದುಕಲ್ಲಿ
ನಡೆದಿದೆ ಮೆರವಣಿಗೆ
ನೆನಪುಗಳ ಮೌನ ಮೆರವಣಿಗೆ
ಹೆಜ್ಜೆ ಹೆಜ್ಜೆಗಳಲ್ಲು ಹೆಜ್ಜೆಗೂಡಿಸಿ
ಉಸಿರು ಉಸಿರಲ್ಲು ತನ್ನ ಬೆರೆಸಿ
ಬದುಕೆಂದರೆ ಜೇನೆಂದರೆ ಜೇನು
ಎಂದಕ್ಕರೆಯ ಸಕ್ಕರೆಯ ಕೋಟೆ ಕಟ್ಟಿದ
ಅವನಿಲ್ಲದ ನೆಲದಲ್ಲಿ
ಭಾರಗೀತೆಯ ಹೆಜ್ಜೆಗಳಲ್ಲಿ
ನಡೆದಿದೆ ಮೆರವಣಿಗೆ
ಬದುಕಿನ ಮೌನ ಮೆರವಣಿಗೆ
Comments
ಉ: ಮೆರವಣಿಗೆ -ಲಕ್ಷ್ಮೀಕಾಂತ ಇಟ್ನಾಳ
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
'ಮೆರವಣಿಗೆ' ಕವನ ನೆನಪುಗಳ ಮೌನ ಮೆರವಣಿಗೆ ಬದುಕಿನನ ಮೌನ ಮೆರವಣಿಗೆಯ ಸಾಗಿ ಬಂದ ರೀತಿಯನ್ನು ಬಹಳ ಸುಂದರವಾಗಿ ಮತ್ತು ಸ್ವಾರಸ್ಯಪೂರ್ಣವಾಗಿ ದಾಖಲಿಸಿದ್ದೀರಿ. ಕವನ ೋದಿ ಖುಷಿಯಾಯಿತು ಧನ್ಯವಾದಗಳು.
In reply to ಉ: ಮೆರವಣಿಗೆ -ಲಕ್ಷ್ಮೀಕಾಂತ ಇಟ್ನಾಳ by H A Patil
ಉ: ಮೆರವಣಿಗೆ -ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಾದ ಪಾಟೀಲ ಜಿ, ತಮ್ಮ ಬೆನ್ನುತಟ್ಟುವ ಪ್ರವೃತ್ತಿಗೆ, ಕವನದ ವಿಮರ್ಶೆಯ ಮೆಚ್ಚುಗೆಗೆ ಧನ್ಯವಾದಗಳು.
ಉ: ಮೆರವಣಿಗೆ -ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳರೆ, ಇನಿಯನಿಲ್ಲದ ಬದುಕಲ್ಲಿ...ನೆನಪುಗಳೇ..
ಮನಮುಟ್ಟುವ ಕವನ.
In reply to ಉ: ಮೆರವಣಿಗೆ -ಲಕ್ಷ್ಮೀಕಾಂತ ಇಟ್ನಾಳ by ಗಣೇಶ
ಉ: ಮೆರವಣಿಗೆ -ಲಕ್ಷ್ಮೀಕಾಂತ ಇಟ್ನಾಳ
ಗಣೇಶಜಿ, ಎಂದಿನಂತೆ ಮೆಚ್ಚುಗೆಗೆ ಕೃತಜ್ಞನು.