ಯಕ್ಷಗಾನ, ಇಂದು ನಮ್ಮಿಂದ ನಿಧಾನವಾಗಿ ಮರೆಯಾಗುತ್ತಿದೆಯೇ?

ಯಕ್ಷಗಾನ, ಇಂದು ನಮ್ಮಿಂದ ನಿಧಾನವಾಗಿ ಮರೆಯಾಗುತ್ತಿದೆಯೇ?

ಜನವರಿ ೨೬ ಹತ್ತಿರ ಬರುತ್ತಿದ್ದಂತೆ ನನಗೆ ನೆನಪಾಗುವುದು ನಮ್ಮೂರಲ್ಲಿ ನಡೆಯುವ ಯಕ್ಷಗಾನ. ನಾವು ಚಿಕ್ಕವರಿದ್ದಾಗ ಜನವರಿ ಪ್ರಾರಂಭವಾದೊಡನೆ, ನಮ್ಮೂರಲ್ಲಿ ಯಾವ ಪ್ರಸಂಗ ನಡೆಯಲಿದೆ, ಅದರಲ್ಲಿ ಯಾರು - ಯಾರು ಭಾಗವಹಿಸುತಿದ್ದಾರೆ, ಹಿಮ್ಮೆಳದಲ್ಲಿ ಯಾರಿದ್ದಾರೆ, ಮ್ಮುಮ್ಮೆಳದಲ್ಲಿ ಯಾರಿದ್ದಾರೆ, ವಿಧೂಷಕರೂ ಯಾರು, ಶ್ತ್ರೀ ಪಾತ್ರದಲ್ಲಿ ಯಾರಿದ್ದಾರೆ, ಎಂದೆಲ್ಲ ತಿಳಿದುಕೊಳ್ಳುವ ಕುತೂಹಲ. ಪ್ರಸಂಗ ನಿಶ್ಚಯವಾದೊಡನೆ, ಅದರ ಕರ ಪತ್ರಕ್ಕಾಗಿ ಹುಡುಕಾಟ. ಸಿಕ್ಕೊಡನೆ, ಅದರ ಒಂದೊಂದು ಶಬ್ಧವನ್ನು ಬಿಡದೇ ಓದುವುದು. ಶಾಲೆಗೆ ಹೋಗಿ ಗಣರಾಜೋತ್ಸವದ ಧ್ವಜ ಹಾರಾಟ ಮುಗಿಸಿದ ತಕ್ಷಣ ಮನೆಗೆ ಬಂದು, ಊಟದ ಶಾಸ್ತ್ರ ಮಾಡಿ, ಬಯಲಾಟ ನಡೆಯುವ ಸ್ಥಳಕ್ಕೆ ಆಗಮಿಸುವುದು. ಅಲ್ಲಿ ಚಪ್ಪರ ಹಾಕುವುದರಿಂದ ಹಿಡಿದು, ಬಜನೆ ಪ್ರಾರಂಭವಾಗುವವರೆಗೂ ಅಲ್ಲಿದ್ದು ಮತ್ತೆ ಮನೆಗೆ ಬಂದು ಮತ್ತೆ ರಾತ್ರಿ ಊಟದ ಶಾಸ್ತ್ರ ಮಾಡಿ, ಹಣ್ಣು ಹಂಪಲುಗಳ ಸವಾಲು ಪ್ರಾರಂಭವಾಗುತ್ತಿದಂತೆ ಮತ್ತೆ ಬಯಲಾಟದ ಸ್ಥಳಕ್ಕೆ ಹಾಜಾರ್. ಆಟ ಪ್ರಾರಂಭವಾಗುವುದರೊಳಗೆ ಎಲ್ಲಿ ಯಾವ ಅಂಗಡಿ ಇದೆ, ಏನೇನು ಇಟ್ಟು ಕೊಂಡಿದ್ದಾರೆ, ಎಲ್ಲ ವಿಕ್ಷಿಸಿ ಬರುವುದಷ್ಟೇ ನಮ್ಮ ಕೆಲಸ, ತೆಗೆದುಕೊಳಲ್ಲಂತು ಆಗುತ್ತಿರಲಿಲ್ಲ. ಯಾಕೆಂದರೆ ಆಗ ನಾವೆಲ್ಲ ಯಕ್ಷಗಾನ ನೋಡಲು ಬರುತ್ತಿದ್ದುದು ಬರೀ ಕೈಯಲ್ಲಿ. ಎಲ್ಲೋ ಅಪರೂಪಕ್ಕೆ ೨೫ ಪೈಸೆನೋ, ೫೦ ಪೈಸೆನೋ ಸಿಕ್ಕರೆ ನಮ್ಮ  ಖುಷಿಗೆ ಮಿತಿಯೇ  ಇರುತ್ತಿರಲಿಲ್ಲ. ಸಿಕ್ಕ ಹಣದಲ್ಲಿ ಹುರಿದ ಕಡಲೆಯನ್ನೋ, ಚೊಕಲೇಟನ್ನೋ ತೆಗೆದುಕೊಳ್ಳುತ್ತಾ, ಅಲ್ಲಿ ಇಲ್ಲಿ ಸುತ್ತಾಡುತ್ತಾ, ಆಮೇಲೆ ಯಕ್ಷಗಾನ ಪ್ರಾರಂಭವಾದ ಒಂದೆರಡು ಗಂಟೆಗಳಲ್ಲಿ ಯಾವುದೋ ಒಂದು ಮೂಲೆಯಲ್ಲಿ ಹೋಗಿ ಮಲಗಿಬಿಡುತ್ತಿದ್ದೆವು. ಆಗಾಗ ಏಳುತ್ತಾ ಮತ್ತೆ ಮಲಗುತ್ತಾ, ಕಡೆಯಲ್ಲಿ ಮಂಗಳ ಹಾಡು ಕಿವಿಗೆ ಬಿಳುತ್ತಿದ್ದಂತೆ ಎದ್ದು ಕಣ್ಣೊರಿಸುತ್ತಾ ಮನೆಗೆ ಬಂದು ಬಿಡುತ್ತಿದ್ದೆವು. ಆಗ ಮನೆಯಲ್ಲಿ ಅಪ್ಪ- ಅಮ್ಮನ್ನ ಬಿಟ್ಟರೆ ನಮ್ಮನ್ನ ಕೇಳುವವರಾರಿರಲಿಲ್ಲ, ನಾವು ಮಾಡಿದ್ದೇ ರಾಜ್ಯ. ಆಗಿನ್ನು ಮೀಸೆ ಮೂಡದ, ಶಾಲೆಗೆ ಹೋಗುವ ಚಿಕ್ಕ ಚಿಕ್ಕ ಮಕ್ಕಳು. ನನಗಿನ್ನು ನೆನಪಿದೆ ಮೊದಲ ಯಕ್ಷಗಾನ ನಡೆಯುತ್ತಿದ್ದದು, ನಮ್ಮೂರ ಕೆಳಗಿರುವ ಗದ್ದೆ ಬಯಲಲ್ಲಿ. ಮೊದಲು ಯಕ್ಷಗಾನಗಳು ನಡೆಯುತ್ತಿದ್ದುದು ಬಯಲಲ್ಲಿ ಆದ್ದರಿಂದ ಅದಕ್ಕೆ ಬಯಲಾಟ ಅಂತ ಕರೆಯುತ್ತಿದ್ದರು ಅನಿಸುತ್ತೆ. ಹಾಗೆ ಯಾವುದಾದರೂ ಮೇಳದವರು ಬಂದು ನಡೆಸಿಕೊಡುವ ಯಕ್ಷಗಾನಕ್ಕೆ ಮೇಳದ ಆಟ ಅಂತಾ ಹೇಳುತ್ತಿದ್ದರು. 

ನನಗಿನ್ನೂ ನೆನಪಿದೆ, ಮೊದಲು ನಮ್ಮೂರಲ್ಲಿ ಜನವರಿ ೨೬ ರಂದು ಒಂದು ಆಟವಾದರೆ, ಹಾಗೆ ಮಾರ್ಚ, ಎಪ್ರಿಲ್ ನಲ್ಲಿ ಬಜನೆ ಆಟ, ಹಾಗೆ  ಮೇ ನಲ್ಲಿ ಮಕ್ಕಳ ಆಟಗಳು ನಡೆಯುತ್ತಿದ್ದವು. ನಾವು ಚಿಕ್ಕವರಿದ್ದಾಗ ಹೊಸ್ತೋಟ ಮಂಜುನಾಥ ಭಾಗವತರು ಬಂದು ನಮ್ಮೂರಲ್ಲೇ ಉಳಿದು, ನಮ್ಮೂರ ಯುವಕ ಸಂಘದಲ್ಲಿ ಚಿಕ್ಕ-ಚಿಕ್ಕ ಮಕ್ಕಳಿಗೆಲ್ಲ ಯಕ್ಷಗಾನ ಹೇಳಿಕೊಟ್ಟು ಅವರಿಂದ ಒಂದು ಆಟ ಆಡಿಸಿ ಹೋಗುತ್ತಿದ್ದರು. ಆದರೆ ಕ್ರಮೇಣ ಅವರಿಗೆ ವಯಸ್ಸಾದಂತೆ ಅವರು ಬರುವುದು -ಉಳಿಯುವುದು ಇಲ್ಲಿ ಕಷ್ಟವಾದ್ದರಿಂದ, ಅವರು ಇಲ್ಲಿಗೆ ಬರುವುದು ತಪ್ಪಿಹೋಯಿತು. ಹಾಗೆ ಮುಂದೆ ಬಜನೆ ಆಟ ಮತ್ತು ೨೬ರ ಎರಡು ಆಟಗಳನ್ನೂ ಒಂದು ಗೂಡಿಸಿ ವರ್ಷಕ್ಕೆ ಒಂದೇ ಆಟವಾಗಿ ಮಾರ್ಪಟ್ಟಿತು. ಅಷ್ಟೇ ಅಲ್ಲ ಮೊದಲು ವರ್ಷಕ್ಕೆ ಒಂದಾದರೂ ಮೇಳದ ಆಟವಾಗುತ್ತಿತ್ತು. ಆದರೆ ಇವತ್ತು ಅವೆಲ್ಲ ನಿಂತೂ ಹೋಗಿವೆ. ಕಾರಣಗಳು ಹಲವು, ಅದರಲ್ಲಿ ಮೊದಲನೆಯದಾಗಿ ನುರಿತ ಯಕ್ಷಗಾನ ಪಟುಗಳ ಕೊರತೆ, ಇವತ್ತು ಯಕ್ಷಗಾನ ನೋಡುವುದನ್ನ ಬಿಟ್ಟರೆ ಅದನ್ನ ಕಲಿಯಬೇಕು ಅನ್ನುವ ಆಸಕ್ತಿ ನಮ್ಮ ಜನತೆಯಲ್ಲಿ ಕಡಿಮೆಯಾಗಿ ಬಿಟ್ಟಿದೆ. ಒಂದು ಕಾಲದಲ್ಲಿ ಅಂದರೆ ಇವತ್ತಿನ ಚಲನಚಿತ್ರ, ದೂರದರ್ಶನ, ರೇಡಿಯೋಗಳಿಲ್ಲದ ಸಮಯದಲ್ಲಿ ಯಕ್ಷಗಾನ ಒಂದು ಮನರಂಜನೆಯ ಸಾಧನವಾಗಿತ್ತು. ಕ್ರಮೇಣ ಚಲನಚಿತ್ರ ಯಕ್ಷಗಾನವನ್ನ ಹಿಂದಿಕ್ಕಿ, ತನ್ನ ಮುನ್ನಡೆಯನ್ನ ಸಾಧಿಸತೊಡಗಿತು. ಹಾಗೆ ಮುಂದೆ ದೂರದರ್ಶನ ಎಲ್ಲವನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ. ಅಷ್ಟೇ ಅಲ್ಲ ನೂರಾರು ಚಾನೆಲಗಳು, ನೂರಾರು ಧಾರವಾಹಿಗಳು ಇವೆಲ್ಲವು ಯಕ್ಷಗಾನವನ್ನ ಹಿಂದ್ದಿಕ್ಕಿ ಮುನ್ನಡೆಯನ್ನು ಸಾಧಿಸಿವೆ. ಜನ ಇವತ್ತು ದೂರ ದರ್ಶನಗಳ ದಾಸರಾಗುತ್ತಿದ್ದಾರೆ. ವೇಷಧರಿಸಿ ಕುಣಿದು, ರಾತ್ರಿಯೆಲ್ಲ ನಿದ್ದೆಗೆಟ್ಟು ಮನರಂಜನೆ ನೀಡುವ ಕಲಾವಿಧರು ಕಡಿಮೆಯಗುತ್ತಿದ್ದಾರೆ. ಕೆಲವು ಸಂಸ್ಥೆಗಳು ಯಕ್ಷಗಾನವನ್ನು ಜೀವಂತ ಇಡಲು ಪ್ರಯತ್ನಿಸುತ್ತಿದ್ದಾರೆ, ಆದರೆ ಇದು ಇವತ್ತಿನ ದೂರದರ್ಶನಗಳ ಮುಂದೆ, ತನ್ನ ಜನಪ್ರೀಯತೆಯನ್ನ ಕಳೆದುಕೊಳ್ಳುತ್ತಿದೆ. ಮುಂದೆ ಹೀಗಾದಲ್ಲಿ ಯಕ್ಷಗಾನ, ಅವನತಿಯ ಹಂತಕ್ಕೆ ತಲುಪಿದ್ದಲ್ಲಿ ಆಶ್ಚರ್ಯವೇನಿಲ್ಲ. ಹೀಗೆ ಮುಂದುವರೆದರೆ ಮುಂದೆ ನಮ್ಮ ಮಕ್ಕಳಿಗೆ ಯಕ್ಷಗಾನ ಹೀಗಿತ್ತು, ಹಾಗಿತ್ತು ಅಂತಾ ತೋರಿಸಲು ಸಾಕ್ಷಿಗಳಿರಲಿಕ್ಕಿಲ್ಲ. 

ಇಷ್ಟೆಲ್ಲ ಹೇಳಿ ಯಕ್ಷಗಾನ ಅಂದರೇನು ಅಂತ ಹೇಳದಿದ್ದಲ್ಲಿ ಈ ಲೇಖನ ಪೂರ್ತಿಯಾಗುವುದಿಲ್ಲ. ಮಾನವ ಸಮಾಜ ಜೀವಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಮನುಷ್ಯ ಒಂದು ಕಡೆ ನೆಲೆನಿಂತು, ಸಮಾಜ ಜೀವಿಯೊಡನೆ ತನಗಿರುವ ವಿಶ್ರಾಂತಿ ಸಮಯವನ್ನ ಮನರಂಜನೆಗಾಗಿ ಉಪಯೋಗಿಸಿಕೊಳ್ಳುತ್ತಿದ್ದ. ಹಾಗೆ ಮನರಂಜನಾ ಸಮಯದಲ್ಲಿ ಉದ್ಭವಿಸಿದ ಕಲೆಗಳು ಒಬ್ಬರಿಂದ ಇನ್ನೊಬ್ಬರಿಗೆ ತಲೆ ತಲಾಂತರದಿಂದ ಹರಿದು ಬಂದ ಜನಪದ ಕಲೆಗಳೆನಿಸಿಕೊಂಡಿವೆ. ಮಾನವ ವಿಕಾಶದೊಂದಿಗೆ ಕೆಲವು ಕಲೆಗಳು ಅವನತಿಯನ್ನ ಹೊಂದಿದ್ದರೆ, ಕೆಲವು ಕಲೆಗಳು ಇನ್ನೂ ಜೀವಂತವಾಗಿವೆ. ಅಂತಹ ಕಲೆಗಳಲ್ಲಿ ಯಕ್ಷಗಾನವು ಒಂದು. ಯಕ್ಷಗಾನ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜನರ ಒಂದು ಜಾನಪದ ಕಲೆ. ಇದು ಎಂದು, ಎಲ್ಲಿ, ಯಾವಾಗ ಹುಟ್ಟಿತು, ಹೇಗೆ ಹುಟ್ಟಿತು, ಅನ್ನುವುದು ಇನ್ನೂ ನಿಗೂಡ. ಜನರಿಂದ ಜನರಿಗಾಗಿ ತಲೆತಲಾಂತರದಿಂದ ನಡೆದು ಬಂದ ಜಾನಪದ ಕಲೆ. ಕೇರಳದ ಕಥಕ್ಕಳಿಗೆ ಸ್ವಲ್ಪ ಹತ್ತಿರದಲ್ಲಿರುವ ಕಲೆ. 

ಸಾವಿರಾರು ವರ್ಷಗಳ ಹಿಂದಿನ ಮಾತು, ಅಂದು ಭಾರತದ ಸಾಂಸ್ಕ್ರತಿಕ ಲೋಕದಲ್ಲಿ ಸಂಸ್ಕ್ರತ ರಾರಾಜಿಸುತ್ತಿದ್ದ ಕಾಲ. ಅಂದು ಸಂಸ್ಕ್ರತ ಕೇವಲ ಮೇಲ್ವರ್ಗದವರ ಭಾಷೆಯಾಗಿದ್ದರಿಂದ ಅಂದಿನ ಬಹುತೇಕ ಗ್ರಂಥಗಳು ಸಂಸ್ಕ್ರತದಲ್ಲೆ ಇದ್ದುದರಿಂದ ಸ್ತ್ರೀ ಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಅಂಥ ಒಂದು ಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಸಂಸ್ಕ್ರತವನ್ನ ಹಾಡು - ಕುಣಿತ ಮತ್ತು ಮಾತಿನ ಮೂಲಕ ಜನಸಾಮಾನ್ಯರಿಗೆ ತಿಳಿಹೇಳುವ ಮೂಲಕ ಯಕ್ಷಗಾನ ಉಗಮವಾಗಿರಬಹುದು. ಮುಂದೆ ಕ್ರಮೇಣ ಹಳೆಗನ್ನಡ ಬೆಳೆಯುತ್ತಿದ್ದ ಹಾಗೆ ಹಳೆಗನ್ನಡದ ಹಾಡುಗಳನ್ನ, ನವೀನ ಕನ್ನಡದಲ್ಲಿ ಜನಸಾಮಾನ್ಯರಿಗೆ ತಿಳಿಹೇಳುತ್ತಾ ಯಕ್ಷಗಾನ ಬದಲಾಗುತ್ತಾ ಬಂದಿರಬಹುದು ಎನ್ನುವುದು ನನ್ನ ಅನಿಸಿಕೆ. ಒಂದು ಕಾಲದಲ್ಲಿ ಕೇವಲ ಪೌರಾಣಿಕ ಪ್ರಸಂಗಗಳಿಗೆ ಮೀಸಲಾಗಿದ ಯಕ್ಷಗಾನ ಇವತ್ತು ಸಾಮಾಜಿಕ ಪ್ರಸಂಗಗಳತ್ತಲೂ ಹೆಜ್ಜೆ ಹಾಕುತ್ತಿದೆ.

ಯಕ್ಷಗಾನದಲ್ಲಿ ನ್ರತ್ಯವಿದೆ, ಸಂಗೀತವಿದೆ, ತಾಳ ಮದ್ದಳೆಗಳಿವೆ, ಮಾತಿದೆ, ತನ್ನದೇ ಆದ ವೇಷ ಭೂಷಣವಿದೆ, ಹಾಸ್ಯ ಶ್ರಂಗಾರಗಳಿವೆ. ತನ್ನದೇ ಆದ ಒಂದು ವಿಭಿನ್ನತೆಯನ್ನ ಹೊಂದಿದೆ. ಆದರೆ ಇಂದು ಅಂತಹ ಮಹಾನ ಕಲೆ ತನ್ನ ಅವನತಿಯತ್ತ ಮುಖಮಾಡಿ ನಿಂತಿದೆ. ಶಿವರಾಮ ಕಾರಂತರಂತಹ ಕೆಲವು ಬುದ್ದಿಜೀವಿಗಳು ಇದನ್ನ ಜೀವಂತ ಇಡಲು ಪ್ರಯತ್ನಿಸಿದ್ದಾರೆ. ಆದರೆ ಅದು ಕಷ್ಟ ಸಧ್ಯದ ಮಾತು. ಯಕ್ಷಗಾನ ಜೀವಂತ ಇಡಬೇಕು ಅಂತಾದಲ್ಲಿ ಊರಿಗೊಬ್ಬ ಶಿವರಾಮ ಕಾರಂತರೂ ಹುಟ್ಟಿ ಬಂದರೆ ಮಾತ್ರ ಸಾಧ್ಯ. ಇಲ್ಲವಾದಲ್ಲಿ ಈಗ ದೇವಸ್ಥಾನಗಳಲ್ಲಿ ಭಜನೆಗಳ ಬದಲಾಗಿ ಧ್ವನಿಮುದ್ರಿಕೆಗಳನ್ನ ಬಳಸಲಾಗುತ್ತದೆಯೋ, ಹಾಗೆ ಮುಂದೆ ಯಕ್ಷಗಾನ ಅಂದರೆ ಹೀಗಿತ್ತು, ಹಾಗಿತ್ತು ಅಂತಾ ಛಾಯಾಚಿತ್ರವನ್ನೊ, ಅಥವಾ ಧ್ವನಿ ಚಿತ್ರಗಳನ್ನು ತೋರಿಸಬೇಕಾದ ಅವಶ್ಯಕತೆ ಬರಬಹುದಾದಂತಹ ಪ್ರಸಂಗ ಬಂದರೂ ಆಶ್ಚರ್ಯ ಪಡಬೇಕಾದ ಅವಶ್ಯಕತೆ ಇಲ್ಲ.

--ಮಂಜು ಹಿಚ್ಕಡ್ 

Rating
No votes yet