ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ
ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ
ಬದುಕ ದಾರಿಯ ತಿರುವಲ್ಲಿ
ಗಾಯಾಳು ನೋವೊಂದು,
ನರಳುತ್ತಲಿತ್ತು,
ಗಾಯಕ್ಕೆ ಪ್ರೀತಿಯ ಮದ್ದನ್ನು ಸವರಲು
ಖುಷಿಯ ಕಣ್ಣುಗಳಿಂದ,
ಬೆರಗು ಹೊರಸೂಸಿತ್ತು,
ಇರುವುದೇ ಕರುಣೆ, ಇನ್ನೂ
ಮನುಷ್ಯರಲ್ಲಿ!
ಹೂ ದಳದಲ್ಲಿ ಸಾವೊಂದು
ಆತ್ಮಹತ್ಯೆ ಗೈದಿತ್ತು,
ಬದುಕೊಂದು ಕೊಡಿರೆಂದು
ಬರೆದಿಟ್ಟು ಸತ್ತಿತ್ತು,
ತನಗೂ ಬದುಕುವ ಹಕ್ಕಿದೆ
ಎಂಬ ವಾದ ಸಾವಿಗೆ!
ಸಾವನ್ನು ಸುಟ್ಟು ಮರಳುವಾಗ
ನೋವೊಂದು ಚೀರುತ್ತಲಿತ್ತು
ಸಾಕು ಸಾಕೆಂದು, ನೋವ ವೃತ್ತಿ,
ಕಣ್ಣೀರ ಕೋಡಿಗಳು, ತರಿದು ಹಾಕಿವೆ,
ತಡೆಯಲಾರೆ ಇನ್ನು ತಾ, ಪೀಡಿತರ ನೋವುಗಳ,
ಸಾವು ನೋವು ದುಖ ದುಮ್ಮಾನಗಳ
ವೃತ್ತಿ ಪ್ರವೃತ್ತಿಗಳ ನಿವೃತ್ತಿಗೆ ಕೂಗುತ್ತಲಿತ್ತು
ನೋವಲ್ಲಿ ಹಿಡಿಯಾಗಿ, ಶಾಂತಿಯ ಸನ್ನಿಧಿಗೆ,
ಬುದ್ಧ, ಕಿಸಾಗೌತಮಿಯರು ಎದುರಾಗಿ,
ಸೋತ ಜೀವಗಳಿಗೆ, ಸಾಸಿವೆ ತರಲು
ತಿಳಿಸುತ್ತ, ಸಾಂತ್ವನಿಸಿ, ಮೇಲೆತ್ತಿ
ಸಾವು ನೋವುಗಳಿಗೆ, ಜೀವ ತುಂಬಿ,
ಮತ್ತೆ ಮತ್ತೆ ಅಣಿಯಾಗಿಸುತಿಹರು
ಮತ್ತೆ ಮತ್ತೆ ಅಣಿಯಾಗಿಸುತಿಹರು!
ಚಿತ್ರ ಕೃಪೆ: ಅಂತರ್ಜಾಲ
Comments
ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ
ಸುಂದರ, ಅರ್ಥಗರ್ಭಿತ ಮತ್ತು ಭಾವಪೂರ್ಣ ಕವನ ಇಟ್ನಾಳರೇ. ನಿಮ್ಮ ಕವನಗಳನ್ನು ಓದಿದ ಮನಸ್ಸು ಸಂತಸಗೊಳ್ಳುತ್ತದೆ.
In reply to ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ by Vasant Kulkarni
ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ವಸಂತ ಕುಲಕರ್ಣಿ ರವರೇ, ಕವನಕ್ಕೆ ತಮ್ಮ ಅನಿಸಿಕೆ, 'ನಿಮ್ಮ ಕವನಗಳನ್ನು ಓದಿದ ಮನಸ್ಸು ಸಂತಸಗೊಳ್ಳುತ್ತದೆ.' ಎಂಬ ಮಾತು ನಿಜವಾಗಿಯೂ ಸ್ವತ: ಒಬ್ಬ ಕವಿ, ಲೇಖಕನಾಗಿದ್ದರೂ ತಮ್ಮ ಮಾತುಗಳು ಉದಾರತನದಿಂದ ಕೂಡಿದ್ದು, ತಾವಂದದ್ದು ತಮ್ಮ ದೊಡ್ಡತನ ತೋರಿಸುತ್ತದೆ ಗೆಳೆಯರೆ. ಕವನದ ಮೆಚ್ಚುಗೆಗೆ ದನ್ಯವಾದಗಳು.
ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಸಾವಿಲ್ಲದ ಮನೆಯ ಸಾಸುವೆ ಮನೆಯ ಸಾಸುವೆ ಸಾವಿನ ಅಸಿವಾರ್ಯತೆಯನ್ನು ಸಾರುವ, ಬುದ್ಧ ಕಿಸಾಗೌತಮಿಗೆ ಮಾಡಸುವ ಅನಿವಾರ್ಯದ ಸಾವಿನ ದರ್ಶನ ಅರ್ಥಪೂರ್ಣವಾಗಿ ಕವನದಲ್ಲಿ ಮೂಡಿ ಬಂದಿದೆ, ಧನ್ಯವಾದಗಳು.
In reply to ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ by H A Patil
ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ
ಸಾವು ನಿಶ್ಚಿತ ಸಂಗತಿ, ಈ ಅಂಶ ಕವನದಲ್ಲಿ ನವಿರು ಭಾಷೆಯಲ್ಲಿ ಮೂಡಿದೆ ಸುಂದರ ಕವನ ಸರ್.
In reply to ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ by sri.ja.huddar
ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ಹುದ್ದಾರರೆ, ತಮ್ಮ ಮೆಚ್ಚುಗೆಗೆ ಧನ್ಯವಾದಗಳು.
In reply to ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ by H A Patil
ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಾದ ಪಾಟೀಲ್ ಜಿ ಸರ್ ರವರೇ, ತಮ್ಮ ವಿದ್ಯಾರ್ಥಿಗೆ ಪ್ರೋತ್ಸಾಹ ನೀಡುವ ಗುರುವಿನಂತಹ ಮನಸ್ಸಿನ ಮೆಚ್ಚುಗೆಯ ನುಡಿಗಳನ್ನೇ ಯಾವತ್ತು ಹೇಳುತ್ತ, ಸ್ವತ: ಒಬ್ಬ ಕವಿ, ಲೇಖಕನಾಗಿಯೂ ಕೂಡ, ಅವುಗಳ ಕೊರತೆಯನ್ನು ಬದಿಗಿಟ್ಟು, ದೊಡ್ಡ ಮನಸ್ಸಿನಿಂದ ಪ್ರೋತ್ಸಾಹಿಸುವುದು ನಿಜಕ್ಕೂ ಪ್ರೇರಣೆ ಒದಗಿಸುತ್ತದೆ. ಧನ್ಯ ಸರ್ ಧನ್ಯ.
ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳ ಜಿ ನಮಸ್ಕಾರ,
.
ನೋವನ್ನೆ ಗಾಯಾಳುವಾಗಿಸಿದ್ದೀರಿ, ಸಾವಿಗೇ ಸಾವಿನ ಭೀತಿ ತಂದಿಟ್ಟಿರಿ. ಸಾವು ಬಯಸುವ ಗಾಯಾಳು ನೋವು ಸಾವು ಸಿಗದೆ ನರಳುತ್ತಿರುವ ಹೊತ್ತಿನಲ್ಲೆ, ಬದುಕ ಬಯಸುವ ಸಾವಿಗೆ ಸ್ಮಶಾನ ದರ್ಶನ ಮಾಡಿಸಿದ್ದೀರಿ. ಇಷ್ಟೆಲ್ಲ ಜಿಜ್ಞಾಸೆಯ ನಡುವೆಯೆ ಅವರವರ ಕರ್ಮದಲ್ಲಿ ಅವರವರನ್ನು ಬಂಧಿಸಿಟ್ಟು ಕರ್ಮನಿರತರಾಗಿಸಲು ಅಣಿ ಮಾಡಿಸುತ್ತೀರಿ. ಸಾವಿಗೆ ಸಂತಾಪ ಹೇಳಬೇಕೊ, ಗಾಯಾಳುವಿಗೆ ಸಾಂತ್ವನ ಹೇಳಬೇಕೊ ಗೊಂದಲದಲ್ಲಿರಬೇಕಾದರೆ, ಸದ್ಯ - ಬುದ್ಧ ಅಮ್ರಪಾಲಿಯರಿಗೆ ಆ ಹೊಣೆ ಹೊರೆಸಿ ನಿರಾಳವಾಗುವಂತೆ ಮಾಡಿದ್ದೀರಿ. ಅಂತೂ ಸಾಸಿವೆ ಹುಡುಕುವ ಕಷ್ಟ ನಮಗೆ ತಗುಲಿಸದೆ ಬದುಕಿಸಿದಿರಿ, ನಾವು ಗಾಯಾಳುವಾಗದೆ, ಸಾವಿನ ತೊಳಲಾಟಕೂ ಸಿಕ್ಕದೆ ಬದುಕಿಕೊಳ್ಳುವಂತಾಯ್ತು!
ಕವನದ ಹೆಸರು ಸಾಸಿವೆಯಾದರೂ , ಅಡಗಿದ ತತ್ವ ಕುಂಬಳವೆ :-)
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ by nageshamysore
ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ವಾಗ್ಮಿ, ಲೇಖಕ, ಕವಿ, ಸಶಕ್ತ ವಿಮರ್ಶಕರಾದ ನಾಗೇಶಜಿ, ಕವನದ ಸಾರವನ್ನು ಅರೆದು, ಅದರ ಒಳತಿರುಳುಗಳನ್ನು ಬಿಡಿ ಬಿಡಿಯಾಗಿ ಬಿಡಿಸಿಟ್ಟು, ಅದನ್ನು ರಸವತ್ತಾಗಿ, ಸಾಮಾನ್ಯರಿಗೂ ತಿಳಿಯುವ ರೀತಿಯಲ್ಲಿ ವರ್ಣಿಸುವುದಿದೆಯಲ್ಲಾ, ನಮ್ಮಂತಹವರಿಗೆ ನಿಜಕ್ಕೂ ಆಗದ ಸಂಗತಿ. ಬಹಳ ದಿನಗಳಿಂದ ಈ ಕವನ ಮನದಲ್ಲಿ ಕೆನೆಗಟ್ಟುತ್ತಿತ್ತು, ಈ ಹಾಡಿಗೆ ಮೂಲ ಪ್ರೇರಣೆ, ಆಶ್ಚರ್ಯವಾದರೂ ಸತ್ಯ, ಗುಲ್ಜಾರರ 'ಹಮನೆ ದೇಖಿ ಹೈ ಉನ್ ಆಂಖೋ ಕಿ ಮೆಹಕತೀ ಖುಶಬೂ', ಹಿಂದಿ ಸಿನೆಸಾಹಿತ್ಯದಲ್ಲಿ ಮೊತ್ತಮೊದಲಿಗೆ ಉಪಯೋಗಿಸಿದಾಗ, ಬಹಳ ಪ್ರತಿರೋಧ ಬಂದು, ಈ ಹಾಡನ್ನು ಹೇಗೆ ಅರಗಿಸಿಕೊಳ್ಳಬೇಕೆಂಬ ಒಳಚರ್ಚೆಗಳು ನಡೆದು, ಕೊನೆಗೂ , ಸ್ವತ: ರವೀಂದ್ರ ಸಂಗೀತ ಪಾರಂಗತ ಹೇಮಂತ ಕುಮಾರ ಇದನ್ನು ರೆಕಾರ್ಡ್ ಮಾಡುತ್ತಾರೆ. ನೋಡಿ, ತಮಗಾಗಿ ಬರೆದ ಗೀತೆಯನ್ನು, ಲತಾಜಿ ಕಡೆಯಿಂದ ಹೆಣ್ಣಿನ ಕಂಠದಲ್ಲಿ ಹಾಡಿಸುತ್ತಾರೆ. ಮೂಲವಾಗಿ ಹೆಣ್ಣನ್ನು ವರ್ಣಿಸಲು ರಚಿಸಿದ ಹಾಡಿದು. ಹೇಮಂತಕುಮಾರ ನೇಸಲ್ ವೈಸ್ ನಲಲ್ಇ ಹಾಡಿಸಬೇಕೆಂದು ಗುಲ್ಜಾರ್ ಬರೆದು ಹಾಡು, ಲತಾಜಿ ಹಾಡಿದಾಗ ಅದು ಒಂದು ಜೆಂಡರ್ ಲೆಸ್ ಗೀತೆಯಾಗಿ ಪರಿಣಮಿಸಿದ್ದು ಇತಿಹಾಸ. ಇನ್ನು ಈ ಹಾಡು ಕೂಡ, ಈ ಪ್ರಸಂಗಗಳನ್ನು ಗುಲ್ಜಾರ ರ ಪುಸ್ತಕ 'ಇನ್ ದಿ ಕಂಪನಿ ಆಫ್ ಎ ಪೊಯೆಟ್; ನುಸ್ರತ್ ಮುನ್ನು ಕಬೀರ್ ಬರೆದದ್ದು, ಸಂದರ್ಶನದ ರೂಪದ ಸಂಗ್ರಹ. ಈ ಹಾಡಿನಲ್ಲಿ ತಾವು ಹೇಗೆ 'ಅಬ್ ಸ್ಟ್ರಾಕ್ಟ್ ಇಮೇಜ್' ಬಳಸಿದೆ, ಎಂದೆಲ್ಲ ಹೇಳುತ್ತ ಹೋಗುವಾಗ, ಅದನ್ನು ಓದುತ್ತಿರುವಾಗ, ಕೆನೆಗಟ್ಟಿದ ಹಾಡು, 'ಸಾವಿಲ್ಲದ ಮನೆಯ ಸಾಸಿವೆ.' ತುಂಬ ಚನ್ನಾಗಿ ವಿಮರ್ಶಿಸಿದ್ದೀರಿ ಸರ್. ತಾವು ಒಪ್ಪಿದಲ್ಲಿ ಮುಂದೊಂದು ದಿನ ನನ್ನ ಕವನ ಸಂಕಲನದಲ್ಲಿ ಸೇರಿದಾಗ, ತಮ್ಮ ನುಡಿಗಳನ್ನು ಅದರ ಬೆನ್ನುಡಿ ಅಥವಾ ಸೂಕ್ತವಾಗಿ, ಬಳಸಲು ತಾವು ಅನುಮತಿಸಬೇಕೆಂದು ಪ್ರೀತಿಯಿಂದ ಕೋರುತ್ತೇನೆ. .ಮತ್ತೊಮ್ಮೆ ಧನ್ಯವಾದಗಳೊಂದಿಗೆ ತಮ್ಮ, .........ಲಕ್ಷ್ಮೀಕಾಂತ ಇಟ್ನಾಳ
In reply to ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ by lpitnal
ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳ ಜಿ, ತುಂಬಾ ದೊಡ್ಡ ಮಾತು - ಜತೆಗೆ 'ಆಲ್ ಇನ್ ಒನ್' ತರದ ಕ್ಯಾಪ್ ಬೇರೆ ತಲೆಗೇರಿಸುತ್ತಿದ್ದೀರ. ನಾನೊಬ್ಬ ಸಾಧಾರಣ ಸಂಪದಿಗನಷ್ಟೆ;ತಮ್ಮ ಮಿಕ್ಕೆಲ್ಲ ವಿವರಣೆ ತಮ್ಮ ಅಭಿಮಾನದ ದ್ಯೋತಕವಷ್ಟೆ. ಪ್ರತಿಕ್ರಿಯೆಯ ಕೆಲವು ತುಣುಕುಗಳು ನಿಮ್ಮ ಭವಿಷ್ಯದ ಕವನ ಸಂಕಲನದಲ್ಲಿ ಉಪಯೋಗವಾಗುವುದಾದರೆ ಧಾರಾಳವಾಗಿ ಬಳಸಿಕೊಳ್ಳಿ. ಹೂವಿಂದ ನಾರೂ ಸ್ವರ್ಗಕ್ಕೆ ಎಂದಂತೆ, ನಿಮ್ಮ ಪುಸ್ತಕದ ನೆಪದಲ್ಲಿ ನನ್ನ ಬರಹದ ತುಣುಕಿಗೂ ಸ್ವಲ್ಪ ಬೆಲೆ ಸಿಕ್ಕಂತಾಗುತ್ತದೆ. (ನನ್ನ ಕವನಗಳು ಆ ರೀತಿ ಪುಸ್ತಕವಾಗುವುದೊ ಇಲ್ಲವೊ ಗೊತ್ತಿಲ್ಲ)! .
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ by nageshamysore
ಉ: ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ನಾಗೇಶಜಿ, ಎನಗಿಂತ ಕಿರಿಯರಿಲ್ಲ ವೆನ್ನುವ ನಡವಳಿಕೆಯ ತಮ್ಮ ವಿನಮ್ರತೆಗೆ ಶರಣು. ಮತ್ತೊಮ್ಮೆ ಕೃತಜ್ಞತೆಗಳು ಸರ್.