೨೦೪. ಲಲಿತಾ ಸಹಸ್ರನಾಮ ೯೭೭ರಿಂದ ೯೮೧ನೇ ನಾಮಗಳ ವಿವರಣೆ

೨೦೪. ಲಲಿತಾ ಸಹಸ್ರನಾಮ ೯೭೭ರಿಂದ ೯೮೧ನೇ ನಾಮಗಳ ವಿವರಣೆ

                                                                 ಲಲಿತಾ ಸಹಸ್ರನಾಮ ೯೭೭ - ೯೮೧

Daśamudrā-samārādhyā दशमुद्रा-समाराध्या (977)

೯೭೭. ದಶಮುದ್ರಾ-ಸಮಾರಾಧ್ಯಾ

           ದೇವಿಯು ಹತ್ತು ವಿಧವಾದ ಮುದ್ರೆಗಳ (ಬೆರಳಿನ ಸಂಕೇತಗಳ) ಮೂಲಕ ಪೂಜಿಸಲ್ಪಡುತ್ತಾಳೆ. ಸಮಾರಾಧನೆ ಎಂದರೆ ಪೂಜೆ.

           ಮುದ್ರೆಗಳು ಬೆರಳುಗಳ ಸಂಯೋಜನೆಯಿಂದ ಮಾಡುವ ವಿವಿಧ ರಚನೆಗಳಾಗಿದ್ದು ಅವು ಸಂಭಂದಿತ ದೈವದ ಶಕ್ತಿಯನ್ನು ಪ್ರತಿನಿಧಿಸುತ್ತವೆ. ಇವು ಸಾಧಕ ಮತ್ತು ದೈವದೊಂದಿಗೆ ವಿನಿಮಯವಾಗುವ ನಿಗೂಢ ಸಂಕೇತಗಳಾಗಿದ್ದು ಅವನ್ನು ಸಾರ್ವಜನಿಕವಾಗಿ ಎಂದಿಗೂ ಉಪಯೋಗಿಸಬಾರದು. ಮುದ್ರೆಗಳು ಬಹಳ ಶಕ್ತಿಯುತವಾದವುಗಳು. ಒಬ್ಬನು ಸೂರ್ಯ ಮತ್ತು ಚಂದ್ರರ ಕಿರಣಗಳ ಮೇಲೆ ಧ್ಯಾನಿಸುತ್ತಾ ಮಂತ್ರಗಳನ್ನು ಜಪಿಸಿದರೆ, ಅವನು ತ್ರಿವಿಧವಾದ ನಿಗೂಢ ಬಲವುಳ್ಳವನಾಗುತ್ತಾನೆ ಆಗ ಬ್ರಹ್ಮಾಂಡದ ಕಿರಣಗಳು ಹೊಳೆಯುತ್ತವೆ ಮತ್ತು ಅವು ಎಲ್ಲಾ ವಿಧವಾದ ಅಡಚಣೆಗಳನ್ನು ತೊಲಗಿಸಿ ತಕ್ಷಣವೇ ಅಜ್ಞಾನವು ಮನೋಸಾಗರದೊಳಗೆ ಕರಗುವಂತೆ ಮಾಡುತ್ತವೆ, ಎಂದು ಹೇಳಲಾಗುತ್ತದೆ.

           ಆಗಮ ಶಾಸ್ತ್ರಗಳನ್ನು ವಿಶಾಲವಾಗಿ ಮೂರು ವಿಭಾಗಗಳಾಗಿ ವಿಂಗಡಿಸಬಹುದು, ಅವೆಂದರೆ ವಾಮ ಮಾರ್ಗ, ತಂತ್ರ ಮಾರ್ಗ ಮತ್ತು ಕೌಲ ಮಾರ್ಗ. ಆಗಮ ಶಾಸ್ತ್ರಗಳು ಮೂರು ವಿಧವಾದ ಯಜ್ಞಗಳನ್ನು ಪ್ರತಿಪಾದಿಸುತ್ತವೆ, ಅವೆಂದರೆ ಯಾಗ, ಪೂಜೆ ಮತ್ತು ಜ್ಞಾನ. ಇನ್ನೊಂದು ವಿಧವಾದ ಪೂಜಾಕ್ರಮವಿದ್ದು ಅದನ್ನು ಪಂಚಾಂಗವೆಂದು ಕರೆಯಲಾಗುತ್ತದೆ, ಅದರಲ್ಲಿ ನ್ಯಾಸ (ದೇಹವನ್ನು ಪರಿಶುದ್ಧಗೊಳಿಸುವ ಉದ್ದೇಶದಿಂದ ದೇಹದ ವಿವಿಧ ಭಾಗಗಳಿಗೆ ಬೆರಳುಗಳ ಮೂಲಕ ಮಂತ್ರಪ್ರೋಕ್ಷಣೆ ಮಾಡುವುದು), ಮುದ್ರ, ಜಪ, ಪೂಜೆ ಮತ್ತು ಇತರೇ ದೇವತೆಗಳನ್ನು ಪೂಜಿಸುವುದು (ಉದಾಹರಣೆಗೆ ವರುಣ ಪೂಜೆಯನ್ನು ಯಜ್ಞದಲ್ಲಿ ಉಪಯೋಗಿಸುವ ಕಲಶ, ಪಾತ್ರೆಗಳನ್ನು ಪವಿತ್ರಗೊಳಿಸಲು ಮಾಡುವುದು). ಮುದ್ರೆಗಳನ್ನು ವಿವಿಧ ಬೀಜಾಕ್ಷರಗಳಲ್ಲಿನ ನಿಗೂಢ ಶಕ್ತಿಗಳನ್ನು ಹೊಂದಲು ಉಪಯೋಗಿಸಲಾಗುತ್ತದೆ. ಮುದ್ರೆಗಳು ಶಿವ ಮತ್ತು ಶಕ್ತಿಯರ ಐಕ್ಯತೆಯನ್ನು ಪ್ರತಿನಿಧಿಸುತ್ತವೆ (ಎಡಗಡೆಯ ಹಸ್ತವು ಶಕ್ತಿಯಾದರೆ, ಬಲಗಡೆಯ ಹಸ್ತವು ಶಿವನಾಗಿದೆ) ಮತ್ತು ಅವರ ಸಮಾಗಮದಿಂದ ಉಂಟಾಗುವ ಸುಪ್ತ ಶಕ್ತಿಯನ್ನೂ ಸಹ ಮುದ್ರೆಯು ಸೂಚಿಸುತ್ತದೆ.

          ದಶಮುದ್ರೆಗಳು ಅಥವಾ ಹತ್ತು ಮುದ್ರೆಗಳನ್ನು ಶ್ರೀ ವಿದ್ಯಾ ಅಥವಾ ಜಗನ್ಮಾತೆಯ ಪೂಜೆಯಲ್ಲಿ ಬಳಸಲಾಗುತ್ತದೆ. ಶ್ರೀ ಚಕ್ರವು ಒಂಬತ್ತು ಆವರಣಗಳನ್ನು ಹೊಂದಿದ್ದು ಪ್ರತಿಯೊಂದು ಆವರಣವೂ ಒಂದೊಂದು ಶಕ್ತಿ ದೇವತೆಯಿಂದ ಪಾಲಿಸಲ್ಪಡುತ್ತದೆ. ಈ ಪ್ರತಿಯೊಂದು ಶಕ್ತಿದೇವಿಗೂ ಒಂದೊಂದು ಮುದ್ರೆಯಿದ್ದು ಅದು ಒಂಬತ್ತು ಮುದ್ರೆಗಳನ್ನು ಸೂಚಿಸುತ್ತದೆ. ಒಂಬತ್ತನೇ ಆವರಣದಲ್ಲಿ ಲಲಿತಾಂಬಿಕೆಯನ್ನು ಯೋನಿ ಮುದ್ರೆಯ ಮೂಲಕ ಆರಾಧಿಸಲಾಗುತ್ತದೆ. ಪ್ರತಿಯೊಂದು ಆವರಣದಲ್ಲಿಯೂ ಅಲ್ಲಿನ ಶಕ್ತಿ ದೇವತೆಯನ್ನು ಅದಕ್ಕೆ ಸಂಭಂದಿಸಿದ ಮುದ್ರೆಯೊಂದಿಗೆ ಪೂಜಿಸುವುದಲ್ಲದೆ ಲಲಿತಾಂಬಿಕೆಯನ್ನು ಯೋನಿ ಮುದ್ರೆಯ ಮೂಲಕ ಪೂಜಿಸಲಾಗುತ್ತದೆ. ಯಾರಿಗೆ ಷೋಡಶೀ ಮಂತ್ರದ ದೀಕ್ಷೆಯು ಕೊಡಲ್ಪಟ್ಟಿರುತ್ತದೆಯೋ ಅವರು ದೇವಿಯನ್ನು ತ್ರಿಖಂಡ ಮುದ್ರೆಯ (ನಾಮ ೯೮೩) ಮೂಲಕ ಪೂಜಿಸುತ್ತಾರೆ. ತ್ರಿಖಂಡ ಮುದ್ರಾ ಎಂದರೆ ವಿವಧ ತ್ರಿಪುಟಿಗಳು ಐಕ್ಯಗೊಂಡು ಏಕವಾಗುವುದು. ಉದಾಹರಣೆಗೆ ಸಾಧಕ, ಅವನ ಗುರು ಮತ್ತು ದೇವಿ ಅಥವಾ ತಿಳಿಯುವವನು, ತಿಳಿಯುವ ಮಾರ್ಗ ಮತ್ತು ತಿಳಿಯಲ್ಪಡುವುದು, ಮೊದಲಾದವು. ಈ ಅಂಶವನ್ನು ನಾಮ ೨೫೪ರ ವಿವರಣೆಯಲ್ಲಿ ಪ್ರತ್ಯೇಕವಾಗಿ ಚರ್ಚಿಸಲಾಗಿದೆ. ತ್ರಿಖಂಡ ಮುದ್ರೆಯನ್ನು ಪೂಜಾಚರಣೆಯ ಸಮಯದಲ್ಲಿ ದೇವಿಯನ್ನು ಆವಾಹಿಸಲು ಉಪಯೋಗಿಸಲಾಗುತ್ತದೆ.

         ಈ ಮುದ್ರೆಗಳನ್ನು ಅರ್ಪಿಸುವುದರ ಸಮಯದಲ್ಲಿ, ಅವುಗಳಿಗೆ ಸಂಭಂದಿಸಿದ ಮಂತ್ರಗಳನ್ನು ಮತ್ತು ಬೀಜಾಕ್ಷರಗಳನ್ನು ಮಾನಸಿಕವಾಗಿ ಹೇಳಿಕೊಳ್ಳಬೇಕು.

Tripurā-śrivaśaṃkarī त्रिपुरा-श्रिवशंकरी (978)

೯೭೮. ತ್ರಿಪುರಾ-ಶ್ರೀವಶಂಕರೀ

           ತ್ರಿಪುರಾಶ್ರೀ ಎನ್ನುವುದು ಶ್ರೀ ಚಕ್ರದ ಐದನೆಯ ಆವರಣದಲ್ಲಿ ಉಪಸ್ಥಿತವಾಗಿರುವ ದೇವತೆಯಾಗಿದೆ. ಈ ಆವರಣವನ್ನು ಸಕಲ ವಸ್ತುಗಳನ್ನೂ ಕೊಡುವುದಾಗಿ ಭಾವಿಸಲಾಗುತ್ತದೆ (ಸರ್ವಾರ್ಥ-ಸಾಧಕಾ). ಈ ಆವರಣವು ಗುರು ಮತ್ತು ಶಿಷ್ಯರ ಭಾಂದವ್ಯವನ್ನು ಮತ್ತಷ್ಟು ಬೆಸೆಯುತ್ತದೆ. ಈ ಚಕ್ರವನ್ನು ಪೂಜಿಸುವಾಗ ವಿವಧ ವಸ್ತುಗಳ ನಾಮ ಮತ್ತು ರೂಪಗಳು ಆತ್ಮದಲ್ಲಿ ಲೀನವಾಗುತ್ತವೆ; ಇದು ಆತ್ಮ-ಸಾಕ್ಷಾತ್ಕಾರದಲ್ಲಿನ ಒಂದು ಪ್ರಮುಖ ಹಂತವಾಗಿದೆ. ಆವರಣಗಳಲ್ಲಿ ಪೂಜಿಸಲ್ಪಡುವ ದಶ ಶಕ್ತಿಗಳು ಭಗವಾನ್ ವಿಷ್ಣುವಿನ ದಶಾವತಾರಗಳನ್ನು ಸೂಚಿಸುತ್ತವೆ, ವಿಷ್ಣುವು ಈ ಜಗತ್ತನ್ನು ಅತ್ಯುತ್ತಮವಾಗಿ ಮತ್ತು ಮಂಗಳಕರವಾಗಿ ಸುಸ್ಥಿತಿಯಲ್ಲಿಡುವುದರ ಅಧಿಪತಿಯಾಗಿದ್ದಾನೆ.

          ಶ್ರೀ ಚಕ್ರವು ಒಂಬತ್ತು ಆವರಣಗಳನ್ನೊಳಗೊಂಡಿದ್ದು ಪ್ರತಿಯೊಂದು ಆವರಣದಲ್ಲೂ ಒಂದೊಂದು ದೇವತೆಯು ಉಪಸ್ಥಿತವಾಗಿರುತ್ತದೆ. ಆ ಎಲ್ಲಾ ದೇವತೆಗಳ ಹೆಸರುಗಳನ್ನೂ ಸಹ ಈ ಸಹಸ್ರನಾಮದ ವಿವಿಧ ನಾಮಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಸ್ತಾಪಿಸಲಾಗಿದೆ. ಆರೋಹಣ ಕ್ರಮದಲ್ಲಿ ಆ ದೇವತೆಗಳ ಹೆಸರುಗಳನ್ನು ಸೂಚಿಸುವ ನಾಮಗಳು ಹೀಗಿವೆ - ನಾಮ ೬೨೬, ೭೮೭, ೯೯೭, ೯೭೦, ೯೭೮, ೪೫೫, ೪೭೧, ೯೭೬ ಮತ್ತು ೨೩೪.

         ಈ ನಾಮವು ತ್ರಿಪುರಾಶ್ರೀಯು ಲಲಿತಾಂಬಿಕೆಯ ಒಂದು ಭಾಗವಾಗಿದ್ದಾಳೆ ಎಂದು ಸೂಚಿಸುತ್ತದೆ. ಅಥವಾ ಇನ್ನೊಂದು ವಿಧದಲ್ಲಿ ಹೇಳಬೇಕೆಂದರೆ ವಾಗ್ದೇವಿಗಳು ತ್ರಿಪುರಾಶ್ರೀ ದೇವಿಗೆ ತಮ್ಮ ಗೌರವವನ್ನು ವ್ಯಕ್ತಪಡಿಸುತ್ತಿದ್ದಾರೆನ್ನಬಹುದು, ಏಕೆಂದರೆ ಲಲಿತಾಂಬಿಕೆಯನ್ನು ಕಡೆಯ ನಾಮದಲ್ಲಿ ತೋರಿಸುವುದಕ್ಕಿಂತ ಮುಂಚಿತವಾಗಿ ಪರಮೋನ್ನತ ಜ್ಞಾನವನ್ನು ಕೊಡುವುದಕ್ಕಾಗಿ ಹೆಸರಾಗಿರುವ ಈ ದೇವಿಯನ್ನು ನೆನೆಯುತ್ತಾರೆ. ಈ ಸಹಸ್ರನಾಮದ ವೈಶಿಷ್ಠ್ಯವೇನೆಂದರೆ ಭಕ್ತನು ಕಡೆಯ ನಾಮದಲ್ಲಿ ಲಲಿತಾಂಬಿಕೆಯನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ಉದ್ಯುಕ್ತನಾದಂತೆ ಅವನು ಉತ್ಸಾಹಗೊಳ್ಳುತ್ತಾ ಸಾಗುವಂತೆ ಈ ಸಹಸ್ರನಾಮವು ಮಾಡುತ್ತದೆ. ಅಂತಿಮ ಸಾಕ್ಷಾತ್ಕಾರವು ಯಾವಾಗ ಒಬ್ಬನು ಪ್ರತಿಯೊಂದು ನಾಮವನ್ನೂ ಸರಿಯಾಗಿ ಅರ್ಥಮಾಡಿಕೊಳ್ಳುತ್ತಾನೋ ಆಗ ಉಂಟಾಗುತ್ತದೆ.

Jñānamudrā ज्ञानमुद्रा (979)

೯೭೯. ಜ್ಞಾನಮುದ್ರಾ

           ಇದನ್ನು ಚಿನ್ಮುದ್ರೆಯೆಂದೂ ಸಹ ಕರೆಯುತ್ತಾರೆ. ಈ ಮುದ್ರೆಯು ತೋರು ಬೆರಳು ಮತ್ತು ಹೆಬ್ಬೆಟ್ಟಿನ ತುದಿಗಳನ್ನು ಜೋಡಿಸಿ ಇತರೇ ಬೆರಳುಗಳನ್ನು ಚಾಚುವುದರ ಮೂಲಕ ಉಂಟಾಗುತ್ತದೆ. ಈ ಸಂಕೇತವು ಜೀವಾತ್ಮ ಮತ್ತು ಪರಮಾತ್ಮರ ಒಂದುಗೂಡುವಿಕೆಯನ್ನು ಸೂಚಿಸುತ್ತದೆ (ಆತ್ಮದೊಂದಿಗೆ ಬ್ರಹ್ಮದ ಐಕ್ಯತೆಯನ್ನು ಸೂಚಿಸುತ್ತದೆ). ಇದನ್ನು ಧ್ಯಾನ ಮುದ್ರೆಯೆಂದು ಕರೆಯಲಾಗುತ್ತದೆ, ಏಕೆಂದರೆ ಜ್ಞಾನವೆಂದರೆ ಜೀವಾತ್ಮ ಮತ್ತು ಪರಮಾತ್ಮದ ಏಕತ್ವವನ್ನು ಅರಿಯುವುದಾಗಿದೆ. ಭಗವಾನ್ ದಕ್ಷಿಣಾಮೂರ್ತಿಯು (ಶಿವನ ಒಂದು ಅವತಾರ. ಹೆಚ್ಚಿನ ವಿವರಗಳಿಗೆ ನಾಮ ೭೨೫ನ್ನು ನೋಡಿ) ತನ್ನ ಎಳೆಯ ಶಿಷ್ಯರಾದ ಸನಕ (ನಾಮ ೭೨೬ನ್ನು ನೋಡಿ) ಮತ್ತು ಇತರರಿಗೆ (ಬ್ರಹ್ಮನ ಔರಸ ಪುತ್ರರು) ದೀಕ್ಷೆಯನ್ನು ಕೊಡಲು ಚಿನ್ಮುದ್ರೆಯನ್ನು ಉಪಯೋಗಿಸಿದನು.

          ಈ ನಾಮವು ದೇವಿಯನ್ನು ಜ್ಞಾನಮುದ್ರಾ ಎಂದು ಕರೆಯುತ್ತದೆ ಏಕೆಂದರೆ ಆಕೆಯು ಜ್ಞಾನದ ಸಂಕೇತವಾಗಿದ್ದಾಳೆ. ದೇವಿಯು ಜ್ಞಾನಕ್ಕೆ ಸಂಕೇತವಾಗಿದ್ದಾಳೆ, ಏಕೆಂದರೆ ಮುದ್ರೆ ಎಂದರೆ ಸಂಕೇತವೆಂದೂ ಅರ್ಥೈಸಬಹುದು. ಮುದ ಎಂದರೆ ಆನಂದ ಮತ್ತು ರ ಎಂದರೆ ಕೊಡು ಮತ್ತು ಈ ಸಂದರ್ಭದಲ್ಲಿ ಈ ನಾಮದ ಒಟ್ಟು ಅರ್ಥವು ದೇವಿಯು ಜ್ಞಾನದ ಮೂಲಕ ತನ್ನ ಭಕ್ತರಿಗೆ ಪರಮಾನಂದವನ್ನು ದಯಪಾಲಿಸುತ್ತಾಳೆ ಎಂದಾಗುತ್ತದೆ.

Jñāna-gamyā ज्ञान-गम्या (980)

೯೮೦. ಜ್ಞಾನ-ಗಮ್ಯಾ

           ಗಮ್ಯ ಎಂದರೆ ತಲುಪಬೇಕಾದ ಗುರಿ ಎಂದರ್ಥ. ದೇವಿಯನ್ನು ಕೇವಲ ಜ್ಞಾನದ ಮೂಲಕವಷ್ಟೇ ತಲುಪಬಹುದು ಅಥವಾ ಆಕೆಯನ್ನು ಕೇವಲ ಜ್ಞಾನದ ಮೂಲಕವಷ್ಟೇ ಗ್ರಹಿಸಬಹುದು.

          ದೇವಿಯನ್ನು ಕೇವಲ ಮೂರು ಮಾರ್ಗಗಳಿಂದ ಹೊಂದಬಹುದು, ಭಾವನಾ ಅಥವಾ ಧ್ಯಾನದ ಮೂಲಕ (ನಾಮ ೧೧೩), ಎರಡನೆಯದು ಭಕ್ತಿಯ ಮೂಲಕ (ನಾಮ ೧೧೯) ಅಥವಾ ಜ್ಞಾನದ ಮೂಲಕ (ಪ್ರಸ್ತುತ ನಾಮ). ಅಂತಿಮವಾಗಿ ಧ್ಯಾನ ಮತ್ತು ಭಕ್ತಿಗಳು ಜ್ಞಾನದಲ್ಲಿ ಒಂದುಗೂಡಿದಾಗ ಆತ್ಮಸಾಕ್ಷಾತ್ಕಾರವು ಉಂಟಾಗುತ್ತದೆ.

ಕೃಷ್ಣನು ಕೆಳಗಿನ ಹೇಳಿಕೆಗಳು ಮೇಲಿನ ವಿಶ್ಲೇಷಣೆಗಳನ್ನು ದೃಢಪಡಿಸುತ್ತವೆ.

          “ಜ್ಞಾನದ ಮೂಲಕ ಕೈಗೊಂಡ ಯಜ್ಞವು ವಸ್ತುಗಳಿಂದ ಕೈಗೊಂಡ ಯಜ್ಞಕ್ಕಿಂತ ಶ್ರೇಷ್ಠವಾದದ್ದು. ಏಕೆಂದರೆ, ಎಲ್ಲಾ ಕಾರ್ಯಗಳು ಅಂತಿಮವಾಗಿ ಜ್ಞಾನದಲ್ಲಿಯೇ ಸೇರುತ್ತವೆ ಇದಕ್ಕೆ ಯಾವುದೂ ಹೊರತಲ್ಲ” (ಭಗವದ್ಗೀತಾ ೪.೩೩).

          "ಯಾರು ನಿರಂತರವಾಗಿ ಧ್ಯಾನದ ಮೂಲಕ ನನ್ನಲ್ಲಿ ಲೀನವಾಗಿರುತ್ತಾರೆಯೋ ಮತ್ತು ನನ್ನನ್ನು ಆದರದಿಂದ ಪೂಜಿಸುತ್ತಾರೆಯೋ, ಅವರಿಗೆ ನಾನು ವಿವೇಕ ಯೋಗವನ್ನು ಕರುಣಿಸುತ್ತೇನೆ ಮತ್ತದರ ಮೂಲಕ ಅವರು ನನ್ನಲ್ಲಿಗೆ ಬರುತ್ತಾರೆ. ಅವರ ಮೇಲೆ ನನ್ನ ಕೃಪೆಯನ್ನು ಹರಿಸಲು ನಾನು ಅವರ ಹೃದಯಗಳಲ್ಲಿ ನಿವಸಿಸಿ ಅಜ್ಞಾನದಿಂದ ಉಂಟಾದ ಕತ್ತಲೆಯನ್ನು ಹೊಡೆದೋಡಿಸಿ ವಿವೇಕದ ಜ್ಯೋತಿಯು ಬೆಳಗುವಂತೆ ಮಾಡುತ್ತೇನೆ" (ಭಗವದ್ಗೀತಾ ೧೦. ೧೦ ಮತ್ತು ೧೧). 

ವಿವೇಕದ ಕುರಿತಾಗಿ ಇನ್ನಷ್ಟು ವಿವರಗಳು:

            ವಿವೇಕವೆಂದರೆ ಏನು? ಎಲ್ಲವನ್ನೂ ತಿಳಿಯುವುದೇ (ಸರ್ವಜ್ಞತೆಯೇ) ವಿವೇಕವೇ? ಪತಂಜಲಿಯು ತನ್ನ ಯೋಗ ಸೂತ್ರದಲ್ಲಿ (೧.೨೫) ಹೇಳುವಂತೆ, "ಅವನಲ್ಲಿ ಸರ್ವಜ್ಞತ್ವದ ಬೀಜವು ನಿರತಿಶಯವಾಗಿರುತ್ತದೆ (ಇತರರಲ್ಲಿ ಅದು ಪರಿಮಿತವಾಗಿರುತ್ತದೆ)". ಈಗ ಒಂದು ಉದಾಹರಣೆಯನ್ನು ನೋಡೋಣ, ಒಬ್ಬನು ಮತ್ತೊಬ್ಬನಿಂದ ಹಣವನ್ನು ಕಳ್ಳತನ ಮಾಡುತ್ತಾನೆಂದಿಟ್ಟುಕೊಳ್ಳಿ; ಅವನು ಮಾಡಿದ ಕಳ್ಳತನವು ಯಾರಿಗೂ ಗೊತ್ತಾಗುವುದಿಲ್ಲವೆಂದು ತಿಳಿದುಕೊಂಡು. ಆದರೆ ಅದು ಆತ್ಮಸಾಕ್ಷಾತ್ಕಾರ ಹೊಂದಿದ ವ್ಯಕ್ತಿಗೆ ಗೊತ್ತಾಗುತ್ತದೆ, ಏಕೆಂದರೆ ಅವನ ಜ್ಞಾನವು ವ್ಯಕ್ತಿಗತವಾದುದಲ್ಲ ಆದರೆ ಅದು ಬ್ರಹ್ಮಾಂಡಕ್ಕೆ ಸಂಭಂದಪಟ್ಟದ್ದು. ವ್ಯಕ್ತಿಗತ ಜ್ಞಾನದ ಒಟ್ಟು ಮೊತ್ತವೇ ಬ್ರಹ್ಮಾಂಡ ಜ್ಞಾನವಾಗಿದೆ. ಸರ್ವಜ್ಞತೆಯು ಪ್ರಜ್ಞೆ ಅಥವಾ ಚೈತನ್ಯದ ಮೂಲಧಾತುವಾಗಿದೆ, ಅಲ್ಲಿ ಪ್ರಜ್ಞೆಯಿರುತ್ತದೆ ಮತ್ತು ಜ್ಞಾನವು ಇರುತ್ತದೆ. ಒಂದು ವೇಳೆ ಪ್ರಜ್ಞೆಯು ಸರ್ವವ್ಯಾಪಕವಾಗಿದ್ದಲ್ಲಿ ಅಥವಾ ಸರ್ವಾಂತರಯಾಮಿಯಾಗಿದ್ದಲ್ಲಿ ಅದು ಸಕಲವನ್ನೂ ಬಲ್ಲುದಾಗಿರುತ್ತದೆ. ಜ್ಞಾನವು ಸೂಕ್ತವಾದ ಮಾನಸಿಕ ಸ್ಥಿತಿಯಲ್ಲಿ ರೂಪಾಂತರಗೊಂಡ ಪ್ರಜ್ಞೆಯ ಹೊರತು ಮತ್ತೇನೂ ಅಲ್ಲ.

           ವಿವೇಕಾಚೂಡಾಮಣಿಯು (೪೦೮ - ೪೧೦) ಹೀಗೆ ಹೇಳುತ್ತದೆ, "ವಿವೇಕಿಯು ತನ್ನ ಹೃದಯದಲ್ಲಿ ಅನಂತವಾದ ಬ್ರಹ್ಮವನ್ನು ಅರಿಯುತ್ತಾನೆ; ಅದು ಶಬ್ದಗಳಿಗೆ ನಿಲುಕಲಾರದ್ದು, ಅದು ನಿತ್ಯ ಜ್ಞಾನ ಮತ್ತು ಪರಮಾನಂದದ ಸ್ವಭಾವವನ್ನು ಹೊಂದಿದೆ, ಅದಕ್ಕೆ ಹೋಲಿಸಬಹುದಾದ್ದು ಯಾವುದೂ ಇಲ್ಲ, ಅದು ಎಲ್ಲಾ ಪರಿಮಿತಿಗಳನ್ನು ಅಧಿಗಮಿಸುತ್ತದೆ, ಅದು ನಿತ್ಯ ಮುಕ್ತ ಮತ್ತು ನಿಷ್ಕ್ರಿಯ, ಅದು ಪರಿಮಿತಿಯಿಲ್ಲದ ವಿಶ್ವದಂತೆ, ವಿಭಜಿಸಲಾಗದ್ದು ಮತ್ತು ಪರಿಪೂರ್ಣವಾದದ್ದು. ವಿವೇಕಿಯು ತನ್ನ ಹೃದಯದಲ್ಲಿ ಸಮಾಧಿ ಸ್ಥಿತಿಯಲ್ಲಿ ಯಾವುದು ಕಾರ್ಯಕಾರಣಗಳಿಗೆ ನಿಲುಕಲಾರದೇ ಅದಕ್ಕೆ ಅತೀತವಾಗಿದೆಯೋ ಮತ್ತು ವಾಸ್ತವವಾಗಿ ಕಲ್ಪನೆಗೆ ಸಿಲುಕಲಾರದ್ದೊ, ಯಾವುದು ಏಕರೂಪವಾಗಿರುತ್ತದೆಯೊ (ಒಂದೇ ತೆರನಾಗಿರುತ್ತದೆಯೊ), ಎಣೆಯಿಲ್ಲದ್ದೊ, ತರ್ಕಕ್ಕೆ ನಿಲುಕಲಾರದ್ದೊ, ಆದರೆ ಅದರ ಇರುವಿಕೆಯು ವಿವೇಕಿಗಳ ಅನುಭವದಿಂದ ನಿರೂಪಿಸಲ್ಪಟ್ಟಿದೆಯೊ ಮತ್ತು ಮನುಷ್ಯನಿಗೆ ಆತ್ಮ-ಸಾಕ್ಷಾತ್ಕಾರದ ಮೂಲಕ ಅರಿವಿಗೆ ಬರುತ್ತದೆಯೊ ಆ ಪರಬ್ರಹ್ಮವನ್ನು ಅರಿಯುತ್ತಾನೆ. ವಿವೇಕವಂತನಾದ ಪುರುಷನು ತನ್ನ ಹೃದಯದಲ್ಲಿ ಸಮಾಧಿ ಸ್ಥಿತಿಯಲ್ಲಿ, ಆ ಅನಂತವಾದ ಬ್ರಹ್ಮವನ್ನು ಅರಿಯುತ್ತಾನೆ; ಅವನು ಅವ್ಯಯನು ಮತ್ತು ಮರಣರಹಿತನು, ಎಲ್ಲಾ ಅಸತ್ಯಗಳನ್ನು ಅಲ್ಲಗಳೆಯುವ ಅಂತಿಮ ಸತ್ಯನು, ಯಾರು ಅಲೆಯಿಲ್ಲದ ನಿಶ್ಚಲವಾದ ಸಾಗರಕ್ಕೆ ಸಮಾನನಾಗಿದ್ದಾನೆಯೋ, ಯಾವುದಕ್ಕೆ ನಾಮವಿಲ್ಲವೋ, ಯಾವುದರಲ್ಲಿ ಗುಣಗಳ ಎಲ್ಲಾ ರೂಪಾಂತರಗಳು ಲಯವಾಗಿವೆಯೋ ಮತ್ತು ಯಾವುದು ನಿತ್ಯ, ಆನಂದ ಮತ್ತು ಏಕವೋ".

Jñāna-jñeya-svarūpiṇī ज्ञान -ज्ञेय-स्वरूपिणी (981)

೯೮೧. ಜ್ಞಾನ-ಜ್ಞೇಯ-ಸ್ವರೂಪಿಣೀ

           ವಾಗ್ದೇವಿಗಳು ಈ ಸಹಸ್ರನಾಮದ ಕಡೆಯಲ್ಲಿ ಜ್ಞಾನದ ಮಹತ್ವವನ್ನು ಪದೇ ಪದೇ ಒತ್ತುಕೊಟ್ಟು ಹೇಳುತ್ತಿದ್ದಾರೆ. ಈ ನಾಮವು ದೇವಿಯು ಜ್ಞಾನವಾಗಿದ್ದಾಳೆ ಮತ್ತು ಅದನ್ನು ಅರಿಯುವವಳಾಗಿದ್ದಾಳೆ ಎಂದು ಹೇಳುತ್ತದೆ. ಹಿಂದಿನ ನಾಮವು ದೇವಿಯನ್ನು ಕೇವಲ ಜ್ಞಾನದ ಮೂಲಕವಷ್ಟೇ ಅರಿಯಬಹುದೆಂದು ಹೇಳಿದರೆ, ನಾಮ ೯೭೯ ದೇವಿಯು ಜ್ಞಾನದ ಸಂಕೇತವಾಗಿದ್ದಾಳೆ ಎಂದು ಹೇಳುತ್ತದೆ.

           ಕೃಷ್ಣನು ಇದನ್ನೇ ಭಗವದ್ಗೀತೆಯಲ್ಲಿ (೧೩. ೧೭) ವಿವರಿಸುತ್ತಾನೆ, "ಆ ಪರಬ್ರಹ್ಮವು ಎಲ್ಲಾ ಜ್ಯೋತಿಗಳ ಜ್ಯೋತಿಯಾಗಿದೆ ಎಂದು ಹೇಳಲಾಗುತ್ತದೆ, ಅದು ಸಂಪೂರ್ಣ ಮಾಯೆಗೆ ಅತೀತವಾಗಿದೆ ಮತ್ತು ಅದು ಸ್ವಯಂ ಜ್ಞಾನವೇ ಆಗಿದೆ, ಅದು ನಿಜವಾದ ವಿವೇಕದ ಮೂಲಕ ಪಡೆಯಲು ಯೋಗ್ಯತೆಯುಳ್ಳದ್ದಾಗಿದೆ ಮತ್ತು ಅದು ಪ್ರತ್ಯೇಕವಾಗಿ ಎಲ್ಲರ ಹೃದಯಗಳಲ್ಲಿ ಆಸೀನವಾಗಿದೆ".

           ಜ್ಞಾನವೆಂದರೆ ತಿಳುವಳಿಕೆ ಮತ್ತು ಇದು ಬ್ರಹ್ಮದ ಮೂಲಭೂತ ಲಕ್ಷಣವಾಗಿದೆ. ಜ್ಞೇಯ ಎನ್ನುವುದನ್ನು ಇಲ್ಲಿ ವಿಶೇಷಣವಾಗಿ ಉಪಯೋಗಿಸಲಾಗಿದೆ, ಏಕೆಂದರೆ ಒಬ್ಬ ಮನುಷ್ಯನ ಮೂಲಭೂತ ಕರ್ತವ್ಯವು ಆಕೆಯನ್ನು ಅರಿಯುವುದಾಗಿದೆ. ಅದರ ಅರ್ಥವು, ’ಕಲಿಯಬೇಕಾದದ್ದು, ತಿಳಿಯಬೇಕಾದದ್ದು, ಅರಿತುಕೊಳ್ಳಬೇಕಾದದ್ದು, ಅನ್ವೇಷಿಸಬೇಕಾದದ್ದು, ಗ್ರಹಿಸಬೇಕಾದದ್ದು, ವಿಚಾರಿಸಬೇಕಾದದ್ದು ಆಗಿದೆ. ನಾಮ ೯೮೦ರಲ್ಲಿ ಹೇಳಿದಂತೆ ದೇವಿಯನ್ನು ಕೇವಲ ಜ್ಞಾನದಿಂದಷ್ಟೇ ಅರಿಯಬಹುದು.

          ಶ್ವೇತಾಶ್ವತರ ಉಪನಿಷತ್ತು (೧.೧೨) ಹೀಗೆ ಹೇಳುತ್ತದೆ, "ನೀನು ಬ್ರಹ್ಮವು ಯಾವಾಗಲೂ ಅಂತರಂಗದಲ್ಲಿ ನಿವಸಿಸುತ್ತದೆ ಎನ್ನುವುದನ್ನು ಅರಿಯಬೇಕು. ಇದಕ್ಕಿಂತ ಶ್ರೇಷ್ಠವಾದ ಜ್ಞಾನವಾವುದೂ ಇಲ್ಲ. ಜೀವಿಯು (ಭೋಕ್ತನು), ಈ ಜಗತ್ತು (ಜೀವಿಯಿಂದ ಭೋಗಿಸಲ್ಪಡುವುದು) ಮತ್ತು ನಿರ್ದೇಶನ ನೀಡುವ ಅಂತರಂಗದಲ್ಲಿರುವ ಬ್ರಹ್ಮವು; ಈ ಮೂರೂ ಬ್ರಹ್ಮವೆಂದು ತಿಳಿ".

                                                                                ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 977 - 981 http://www.manblunder.com/2010/07/lalitha-sahasranamam-977-981.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Sun, 01/05/2014 - 11:58

ಶ್ರೀಧರರೆ,"೨೦೪. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೯೭೭ - ೯೮೧
______________________________
.
೯೭೭. ದಶಮುದ್ರಾ-ಸಮಾರಾಧ್ಯಾ
ಸಾಧಕ ದೈವ ವಿನಿಮಯದ ನಿಗೂಢ ಸಂಕೇತ, ಬೆರಳ ವಿವಿಧ ಸಂಯೋಜನೆ
ದೈವ ಶಕ್ತಿ ಪ್ರತಿನಿಧಿ ಶಕ್ತಿಯುತ ಮುದ್ರೆ, ಲಲಿತೆಗೆ ದಶವಿಧ ಪೂಜೆ ಆರಾಧನೆ
ಮುದ್ರಾರ್ಪಣೆ ಮಂತ್ರ ಬೀಜಾಕ್ಷರ ಮಾನಸಿಕ, ಸಾರ್ವತ್ರಿಕದಲಿ ಬಳಸದ ವಿದ್ಯ
ಜಪಿಸೆ ತ್ರಿವಿಧ ನಿಗೂಢ ಬಲ, ಅಜ್ಞಾನ ಕರಗಿಸುವ ದಶಮುದ್ರಾ-ಸಮಾರಾಧ್ಯಾ ||
.
ವಾಮ-ತಂತ್ರ-ಕೌಲಮಾರ್ಗ, ಆಗಮ ಶಾಸ್ತ್ರದಲಿ ಮೂರುವಿಭಾಗ
ಶಾಸ್ತ್ರಕೆ ಯಾಗ-ಪೂಜೆ-ಜ್ಞಾನ ತ್ರಿಯಜ್ಞ, ಪೂಜಾಕ್ರಮ ಪಂಚಾಂಗ
ನ್ಯಾಸ-ಮುದ್ರ-ಜಪ-ಪೂಜೆ-ಇತರೆ, ಮುದ್ರೆ ಬೀಜಾಕ್ಷರ ಶಕ್ತಿಮೂಲ
ಬೆಸೆದಹಸ್ತ ಶಿವಶಕ್ತಿ ಐಕ್ಯತೆ, ಸಮಾಗಮ ಸುಪ್ತಶಕ್ತಿ ಮುದ್ರೆಯಬಲ ||
.
ನವಾವರಣವಿಹ ಶ್ರೀ ಚಕ್ರದೆ, ಪ್ರತಿ ಆವರಣಕೊಂದು ಶಕ್ತಿ ದೇವತೆ
ಪ್ರತಿ ಶಕ್ತಿ ದೇವತೆಗಿಹ ಮುದ್ರೆ, ನವದೆ ಯೋನಿಮುದ್ರೆಯ ಲಲಿತೆ
ಷೋಡಶೀ ದೀಕ್ಷೆಯಿರೆ ತ್ರಿಖಂಡ ಮುದ್ರೆ, ದೇವಿ ಆವಾಹನೆಗೆ ಬಳಕೆ
ತ್ರಿಪುಟಿ ಐಕ್ಯವಾಗೆ ತ್ರಿಖಂಡಮುದ್ರ, ಸಾಧಕ-ಗುರು-ದೇವಿ ಏಕತ್ವಕೆ ||
.
೯೭೮. ತ್ರಿಪುರಾ-ಶ್ರೀವಶಂಕರೀ
ಗುರು ಶಿಷ್ಯರ ಭಾಂದವ್ಯ ಬೆಸೆವ ಸರ್ವಾರ್ಥ ಸಾಧಕಾ, ಐದನೆ ಆವರಣ
ವಿವಿಧವಸ್ತು ನಾಮರೂಪ ಆತ್ಮಲೀನ, ಮುನ್ನಡೆಹೆಜ್ಜೆ ಆತ್ಮಸಾಕ್ಷಾತ್ಕರಣ
ನವಾವರಣ ದಶ ಶಕ್ತಿ ವಿಷ್ಣು ದಶಾವತಾರ ಪ್ರತೀಕ, ಜಗ ಸುಸ್ಥಿತಿ ಬಾರಿ
ಪರಮೋನ್ನತ ಜ್ಞಾನದಾಯಿ ತ್ರಿಪುರಾಶ್ರೀ ಜತೆ, ತ್ರಿಪುರಾ-ಶ್ರೀವಶಂಕರೀ ||
.
ಶ್ರೀ ಚಕ್ರ ಪ್ರತಿ ಆವರಣದುಪಸ್ಥಿತ ದೇವತಾ, ಲಲಿತಾ ಸಾಕ್ಷಾತ್ಕಾರ ಹಂತ
ತ್ರಿಪುರಾ-ತ್ರಿಪುರೇಶೀ-ಶ್ರೀಮತ್ ತ್ರಿಪುರ ಸುಂದರೀ, ಅನುಕ್ರಮದೆ ಸ್ಥಾಪಿತ
ಸುವಾಸಿನೀ-ತ್ರಿಪುರ ಶ್ರೀವಶಂಕರೀ-ಮಾಲಿನೀ-ಸಿದ್ದೇಶ್ವರೀ-ತ್ರಿಪುರಾಂಬಿಕಾ
ಮಹಾ ತ್ರಿಪುರ ಸುಂದರಿ ನವಾವರಣ ಜತೆಗುಪಸ್ಥಿತೆ ದೇವಿ ಲಲಿತಾಂಬಿಕಾ ||
.
೯೭೯. ಜ್ಞಾನಮುದ್ರಾ
ಜ್ಞಾನದ ಸಂಕೇತ ದೇವಿ, ಪರಮಾನಂದವೀವಳು ಜ್ಞಾನದ ದ್ವಾರ
ತೋರ್ಬೆರಳು ಹೆಬ್ಬೆಟ್ಟತುದಿ ಕೂಡೆ ಚಿನ್ಮುದ್ರೆ, ದೇವಿ ಜ್ಞಾನಮುದ್ರಾ
ಜೀವಾತ್ಮ-ಪರಮಾತ್ಮ, ಆತ್ಮ-ಬ್ರಹ್ಮಾತ್ಮ ಐಕ್ಯತೆ ಸಂಕೇತಿಸಿ ಜ್ಞಾನ
ಅದ್ವೈತದ ಏಕತ್ವ ಅರಿವಾಗಿಸುತೆ, ಧ್ಯಾನ ಮುದ್ರೆ ಜ್ಞಾನ ವಾಹನ ||
.
೯೮೦. ಜ್ಞಾನ-ಗಮ್ಯಾ
ದೇವಿಯನ್ಹೊಂದೆ ಮೂರು ಮಾರ್ಗ, ಧ್ಯಾನಭಾವನಾ-ಭಕ್ತಿ-ಜ್ಞಾನ ಮುಖೇನ
ಧ್ಯಾನ-ಭಕ್ತಿ-ಜ್ಞಾನ ಒಗ್ಗೂಡಿ ಮಿಲನ, ಆತ್ಮಸಾಕ್ಷಾತ್ಕಾರದ ಕಾರ್ಯಕಾರಣ
ಜ್ಞಾನಯಜ್ಞಕಿಂತಾ ಯಜ್ಞವಿಲ್ಲ, ಅಜ್ಞಾನ ಕತ್ತಲ ಜ್ಯೋತಿ ದೇವಿ ಜ್ಞಾನಗಮ್ಯಾ
ಲಲಿತೆಯ ಸೇರೊ ಶಕ್ತಿ ಜ್ಞಾನಮುಖೇನವಷ್ಟೆ ಸಾಧ್ಯ, ಪರಬ್ರಹ್ಮಗ್ರಹಿಕೆ ಗಮ್ಯ ||
.
ವಿವೇಕದ ಕುರಿತಾಗಿ ಇನ್ನಷ್ಟು ವಿವರಗಳು :
___________________________________________
.
ನಿರತಿಶಯ ಸರ್ವಜ್ಞತ್ವ ಬೀಜ, ವ್ಯಕ್ತಿಗತವಲ್ಲದ ಬ್ರಹ್ಮಾಂಡ ಜ್ಞಾನ ವಿವೇಕ
ಸರ್ವವ್ಯಾಪಿ ಸರ್ವಾಂತರ್ಯಾಮಿ ಪ್ರಜ್ಞೆಗೆ, ಅರಿಯದ್ದೇನು ಎಲ್ಲ ಬಲ್ಲ ಲೆಕ್ಕ
ಬಿಡಿಜ್ಞಾನದ ಮೊತ್ತ ಬ್ರಹ್ಮಾಂಡಜ್ಞಾನ, ಸರ್ವಜ್ಞತೆಗೆ ಪ್ರಜ್ಞಾ ಮೂಲಧಾತು
ಪ್ರಶಸ್ತ ಮಾನಸಿಕ ಸ್ಥಿತಿಗೆ ಪ್ರಜ್ಞೆ ರೂಪಾಂತರಿಸೆ ಜ್ಞಾನ, ವಿವೇಕದ ಸಂಪತ್ತು ||
.
ಅನಂತ ಬ್ರಹ್ಮವನು ಹೃದಯದಲಿ ಅರಿತವನು ವಿವೇಕಿ
ಪರಬ್ರಹ್ಮವನರಿಯೆ ಹೃದಯ, ಸಮಾಧಿ ಸ್ಥಿತಿಗೆ ಸಿಲುಕಿ
ಅವ್ಯಯ-ಮರಣ ರಹಿತ-ಅಂತಿಮ ಸತ್ಯ-ನಿಶ್ಚಲ ಸಾಗರ
ನಾಮರಹಿತ-ನಿತ್ಯಾನಂದ-ಏಕ-ಬ್ರಹ್ಮಗುಣ ರೂಪಾಂತರ ||
.
ಶಬ್ದಕೆಟುಕದ ನಿತ್ಯಜ್ಞಾನ, ಹೋಲಿಕೆಯಿರದ ಪರಮಾನಂದ ಸ್ವಭಾವ
ಪರಿಮಿತಿಗಳನಧಿಗಮಿಸಿ ನಿತ್ಯಮುಕ್ತ, ನಿಷ್ಕ್ರಿಯ ವಿಶ್ವಾನಂತ ಸಂಭವ
ಅವಿಭಜಿತ ಪರಿಪೂರ್ಣ ಕಾರ್ಯಕಾರಣಾತೀತ, ಕಲ್ಪನಾತೀತ ಸುಖಿ
ಎಣೆಯಿರದ ತರ್ಕಾತೀತ ಏಕರೂಪಿಯ, ಅನುಭವದೆ ಗ್ರಹಿಸಿ ವಿವೇಕಿ ||
.
೯೮೧. ಜ್ಞಾನ-ಜ್ಞೇಯ-ಸ್ವರೂಪಿಣೀ 
ಜ್ಯೋತಿಗಳಾಜ್ಯೋತಿ ಪರಬ್ರಹ್ಮದ ಕೀರ್ತಿ, ಮಾಯಾತೀತ ಸ್ವಯಂ ಜ್ಞಾನ
ಜ್ಞಾನವೂ ಹೌದು ಜ್ಞಾನವರಿವವಳಹುದು, ವಿವೇಕ ಮುಖೇನಾ ಆಗಮನ
ಹೃದಯ ನಿವಸಿತ ಗ್ರಹಣಸಿದ್ಧ ಜ್ಞೇಯ, ಜೀವಿ-ಜಗ-ಬ್ರಹ್ಮ ಏಕತ್ವದ ಗಣಿ
ಕೇವಲ ಜ್ಞಾನದಿಂದರಿಯೆ ದೊರಕುವ ಲಲಿತೆ, ಜ್ಞಾನ-ಜ್ಞೇಯ-ಸ್ವರೂಪಿಣೀ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು