ಆರ್ವೇಲ್ ನ ಕಾದ೦ಬರಿ ’ಎನಿಮಲ್ ಫಾರ್ಮ್’ನೊಳಗೊ೦ದು ಪ್ರಸ್ತುತ ಭಾರತವನ್ನು ಕಾಣುತ್ತ...

ಆರ್ವೇಲ್ ನ ಕಾದ೦ಬರಿ ’ಎನಿಮಲ್ ಫಾರ್ಮ್’ನೊಳಗೊ೦ದು ಪ್ರಸ್ತುತ ಭಾರತವನ್ನು ಕಾಣುತ್ತ...

ಅದು ಇ೦ಗ್ಲೆ೦ಡಿನ ಒ೦ದು ತೋಟ.ಒ೦ದು ದಿನ ಅಲ್ಲಿನ ಹಿರಿಯ ಹ೦ದಿಯೊ೦ದು ತೋಟದಲ್ಲಿನ ಎಲ್ಲಾ ಪ್ರಾಣಿಗಳನ್ನು ಸೇರಿಸಿ  ಗುಪ್ತ ಸಭೆಯೊ೦ದನ್ನು ಆಯೋಜಿಸುತ್ತದೆ.ಪ್ರಾಣಿಗಳ ಮೇಲೆ ಮನುಷ್ಯನ ದೌರ್ಜನ್ಯ, ದಬ್ಬಾಳಿಕೆಗಳನ್ನು ಪರಿಪರಿಯಾಗಿ ವರ್ಣಿಸುತ್ತಾ,ತಮ್ಮ ಮೇಲಿನ ದೌರ್ಜನ್ಯಗಳು ಕೊನೆಗಾಣಬೇಕಾದರೇ ಸ್ವಾತ೦ತ್ರ್ಯವೊ೦ದೇ ದಾರಿ ಎ೦ದು ಸಾರುತ್ತಾ,’ಇ೦ಗ್ಲೆ೦ಡಿನ ಪಶುಗಳು’ ಎ೦ಬ ಕ್ರಾ೦ತಿಗೀತೆಯೊ೦ದನ್ನು ಹಾಡಿ ಪ್ರಾಣಿಗಳನ್ನು  ಕ್ರಾ೦ತಿಯತ್ತ ಉತ್ತೇಜಿಸುತ್ತದೆ.ಉತ್ತೇಜಿತ ಪ್ರಾಣಿಗಳು  ಒ೦ದು ಅನೀರಿಕ್ಷಿತ ಸ೦ದರ್ಭದಲ್ಲಿ ತೋಟದ ಮಾಲೀಕನ ಮೇಲೆ ತಿರುಗಿ ಬೀಳುವ ಮೂಲಕ,ಅವನನ್ನು ತೋಟದಿ೦ದ ಓಡಿಸಿ ಸ್ವಾತ೦ತ್ರ್ಯವನ್ನು ಪಡೆದುಕೊ೦ಡು ಬಿಡುತ್ತವೆ.ತೋಟದ ಹೆಸರನ್ನು ’ಪ್ರಾಣಿಗಳ ತೋಟ’ ಎ೦ದು ಬದಲಾಯಿಸುವ ಪ್ರಾಣಿಗಳ ನಾಯಕತ್ವವನ್ನು ’ಸ್ನೋಬಾಲ್’ ಮತ್ತು ’ನೆಪೋಲಿಯನ್’ ಎ೦ಬ ಎರಡು ಬುದ್ದಿವ೦ತ ಹ೦ದಿಗಳು ವಹಿಸಿಕೊಳ್ಳುತ್ತವೆ.ಸ್ನೋಬಾಲ್ ಪ್ರಾಣಿಗಳಿಗೆ ಓದು ಬರಹ ಹೇಳಿಕೊಡುವ ಜವಾಬ್ದಾರಿ ವಹಿಸಿಕೊ೦ಡರೇ,ನೆಪೋಲಿಯನ್ ಪಶುತ್ವದ ಮೂಲತತ್ವಗಳನ್ನು ಪ್ರಾಣಿಗಳಿಗೆ ಹೇಳಿಕೊಡಲಾರ೦ಭಿಸುತ್ತದೆ. ’ಎಲ್ಲ ಪ್ರಾಣಿಗಳೂ ಸಮಾನ’  ಎನ್ನುವ ಧ್ಯೇಯವಾಕ್ಯದಡಿ ಈ ಪ್ರಾಣಿ ಸಾಮ್ರಾಜ್ಯ ನಡೆಯುತ್ತಿರುತ್ತದೆ 

ಮೊದಮೊದಲು ಎಲ್ಲವೂ ಸರಿಯಿರುತ್ತದಾದರೂ ಕೆಲಕಾಲದ ನ೦ತರ ಪ್ರಾಣಿಗಳ ನಾಯಕತ್ವದ ಗುರುತರ ಜವಾಬ್ದಾರಿ ತಮ್ಮ ಮೇಲಿರುವುದರಿ೦ದ ತಮ್ಮ ಆರೋಗ್ಯಕ್ಕೆ  ಮುಖ್ಯವೆ೦ಬ ಕಾರಣಕ್ಕೆ  ತೋಟದಲ್ಲಿ ಉತ್ಪತ್ತಿಯಾಗುವ ಹಾಲು ಮತ್ತೀತರ ಪೌಷ್ಠಿಕ ಆಹಾರಗಳನ್ನು ಪ್ರಾಣಿಗಳ ಮುಖ್ಯಸ್ಥರಾದ ಹ೦ದಿಗಳು ತಮಗಾಗಿ ಮಾತ್ರ ಮೀಸಲಿಡಲು ತೀರ್ಮಾನಿಸುತ್ತವೆ.ನಾಯಕರುಗಳಾದ ನೆಪೋಲಿಯನ್ ಮತ್ತು ಸ್ನೋಬಾಲ್ ನಡುವೆ ಭಿನ್ನಾಬಿಪ್ರಾಯದ ಕ೦ದಕವೇರ್ಪಡುತ್ತದೆ.ಪ್ರಾಣಿಗಳ ಏಳಿಗೆಗಾಗಿ ಗಾಳಿಗೋಪುರವೊ೦ದನ್ನು ನಿರ್ಮಿಸಬೇಕೆ೦ಬ ತನ್ನ ಯೋಜನೆಯನ್ನು ಸ್ನೋಬಾಲ್ ವಿವರಿಸಿದಾಗ,ನೆಪೋಲಿಯನ್ ಸ್ನೋಬಾಲ್ ನನ್ನು ತಾನು ಸಾಕಿದ ಗುಪ್ತ ನಾಯಿಗಳ ಸಹಾಯದಿ೦ದ ಬೆದರಿಸಿ, ತೋಟದಿ೦ದ ಓಡಿಸಿ ತೋಟಕ್ಕೆ ತಾನು ಏಕೈಕ ನಾಯಕನಾಗುತ್ತದೆ.

ಆರ೦ಭದ ದಿನಗಳಲ್ಲಿ ಎಲ್ಲ ಪ್ರಾಣಿಗಳ ಸಮ್ಮುಖದಲ್ಲಿ ನಡೆಯುತ್ತಿದ್ದ ಸಭೆಗಳು,ನೆಪೋಲಿಯನ್ ನಾಯಕತ್ವದಲ್ಲಿ ಮೇಲ್ವರ್ಗದ ಹ೦ದಿಗಳಿಗೆ ಮಾತ್ರ ಸೀಮಿತವಾಗುತ್ತವೆ.ಪ್ರಾಣಿಗಳ ಉದ್ಧಾರಕ್ಕಾಗಿ ಗಾಳಿಗೋಪುರದ ಯೋಜನೆ ತನ್ನದೇ ಎ೦ದು ತನ್ನ ಬಾಲಬಡುಕ ಪ್ರಾಣಿಗಳಿ೦ದ ಸಾರಿಕೊಳ್ಳುವ ನೆಪೋಲಿಯನ್,ಗಾಳಿಗೋಪುರದ ನಿರ್ಮಾಣ ಪ್ರಾಣಿಗಳ ಏಳಿಗೆಗೆ ಎಷ್ಟು ಮುಖ್ಯವೆ೦ದು ವಿವರಿಸಿ ಅವುಗಳಿ೦ದ ಗಾಳಿಗೋಪುರವನ್ನು ಕಟ್ಟಿಸಲಾರ೦ಭಿಸುತ್ತದೆ.ಎಲ್ಲ ಪ್ರಾಣಿಗಳೂ ಪಶುಸ೦ಕುಲದ ಅಭಿವೃದ್ಧಿಗಾಗಿ ಕಷ್ಟಪಟ್ಟು ಹಗಲಿರುಳು ಗಾಳಿಗೋಪುರಕ್ಕಾಗಿ ದುಡಿಯಲಾರ೦ಭಿಸುತ್ತವೆ.ಒಮ್ಮೆ ಅನೀರಿಕ್ಷಿತವಾಗಿ ಅರ್ಧ ನಿರ್ಮಾಣವಾಗಿದ್ದ ಗಾಳಿಗೋಪುರ ಬಿದ್ದು ಹೋದಾಗ,ಅದಕ್ಕೆ ಓಡಿ ಹೋದ ಸ್ನೋಬಾಲ್,ನ ಕುತ೦ತ್ತ್ರವೇ ಕಾರಣವೆ೦ದು ನೆಪೋಲಿಯನ್ ಬಾಲಬಡುಕರು ಮುಗ್ಧ ಪ್ರಾಣಿಗಳನ್ನು ನ೦ಬಿಸುವಲ್ಲಿ ಯಶಸ್ವಿಯಾಗುತ್ತಾರೆ.ಎರಡನೇ ಬಾರಿಯೂ ಅರ್ಧ ನಿರ್ಮಾಣವಾಗುವ ಗಾಳಿಗೋಪುರ ಮನುಷ್ಯರ ದಾಳಿಯಿ೦ದ ನೆಲಕಚ್ಚುತ್ತದೆ.ಪ್ರಾಣಿಗಳ ಏಳ್ಗೆಗಾಗಿ ಅತ್ಯ೦ತ ನಿಷ್ಠೆಯಿ೦ದ ದುಡಿಯುವ ಕುದುರೆ ’ಬಾಕ್ಸರ್’ ಗಾಯಗೊ೦ಡಾಗ,ಅದನ್ನು ನಿರ್ದಯವಾಗಿ ಕಸಾಯಿಖಾನೆಗೆ ಕಳುಹಿಸಲಾಗುತ್ತದೆ. ಒ೦ದೆಡೆ ತಮ್ಮ ಜನಾ೦ಗದ ಶ್ರೇಯಸ್ಸಿಗಾಗಿ ಪ್ರಾಣಿಗಳು ಕಷ್ಟಪಟ್ಟು ದುಡಿಯುತ್ತಿದ್ದರೇ ಇನ್ನೊ೦ದೆಡೆ ನೆಪೋಲಿಯನ್ ಮನುಷ್ಯರನ್ನು ಅನುಕರಿಸುತ್ತ,ಅವರ೦ತೇ ಎರಡು ಕಾಲುಗಳಲ್ಲಿ ನಡೆಯುತ್ತ ,ಆಗೊಮ್ಮೆ ಈಗೊಮ್ಮೆ ತನ್ನ ವಿರುದ್ಧ ಧ್ವನಿಯೆತ್ತುವ ಪ್ರಾಣಿಗಳ ಸದ್ದನ್ನು ತನ್ನ ಬಲಿಷ್ಟ ನಾಯಿಗಳ ಸಹಾಯದಿ೦ದ ಅಡಗಿಸುತ್ತ ಪ್ರಾಣಿಗಳ ಮೇಲೆ ದಬ್ಬಾಳಿಕೆ ನಡೆಸುತ್ತ ನೆಮ್ಮದಿಯಿ೦ದ ಬದುಕುತ್ತದೆ.ಈ ಹಿ೦ದೆ ತೋಟಗೀತೆಯಾಗಿ ( ರಾಷ್ಟ್ರಗೀತೆಯ೦ತೇ) ಘೋಷಿಸಲ್ಪಟ್ಟ ’ಇ೦ಗ್ಲೇ೦ಡಿನ ಪಶುಗಳು’ ಎ೦ಬ ಕ್ರಾ೦ತಿಗೀತೆಯ ಬದಲಾಗಿ ತನ್ನದೇ ಹೊಗಳಿಕೆಗಳಿರುವ ಕವಿತೆಯೊ೦ದನ್ನು  ತೋಟಗೀತೆಯಾಗಿ ಘೋಷಿಸುತ್ತದೆ.ಕೆಲಕಾಲದ ನ೦ತರ ’ಪ್ರಾಣಿಗಳೆಲ್ಲವೂ ಸಮಾನ’ ಎನ್ನುವ ಮೂಲ ಧ್ಯೇಯವನ್ನು  ನೆಪೋಲಿಯನ್ ’ಪ್ರಾಣಿಗಳೆಲ್ಲವೂ ಸಮಾನ,ಆದರೆ ಕೆಲವು ಪ್ರಾಣಿಗಳು ಮೆಲ್ಮಟ್ಟದವು’ ಎ೦ದು  ಬದಲಾಯಿಸುತ್ತದೆ. ಬಾಣಲೆಯಿ೦ದ ಬೆ೦ಕಿಗೆ ಬಿದ್ದ೦ತೇ,ಮೃಗಗಳ ಗುಲಾಮಗಿರಿ ,ಮನುಷ್ಯನಿ೦ದ ತಮ್ಮದೇ ಮೇಲ್ವರ್ಗದವರೆ೦ದುಕೊಳ್ಳುವ ಪ್ರಾಣಿಗಳ ಕೈಗೆ ವರ್ಗಾವಣೆಯಾಗಿರುತ್ತದಾದರೂ , ಮುಗ್ಧ, ಪೆದ್ದ ಪ್ರಾಣಿಗಳು ಮಾತ್ರ ತಾವು ಮನುಷ್ಯನ ಗುಲಾಮಗಿರಿಯಿ೦ದ ಮುಕ್ತವಾಗಿ,ಅದ್ಭುತ  ಸ್ವಾತ೦ತ್ರ್ಯವನ್ನನುಭವಿಸುತ್ತಿದ್ದೇವೆ ಎ೦ಬ ಭ್ರಮೆಗೊಳಗಾಗಿ ಬದುಕುತ್ತಿರುತ್ತವೆ.

1945ರಲ್ಲಿ ಪ್ರಕಟವಾದ  ಇ೦ಗ್ಲಿಷ ಕಾದ೦ಬರಿಕಾರ ಜಾರ್ಜ್ ಆರ್ವೆಲ್ ನ  ಕಾದ೦ಬರಿ ’ಅನಿಮಲ್ ಫಾರ್ಮ್’ನ ಸ೦ಕ್ಷಿಪ್ತ ಸಾರಾ೦ಶವಿದು.ರಷ್ಯನ್ನರ ಸಮತಾವಾದ ಮತ್ತು ಜೊಸೆಫ್ ಸ್ಟಾಲಿನ್ ರನ್ನು ಗುರಿಯಾಗಿಸಿಕೊ೦ಡು ರಚಿಸಲ್ಪಟ್ಟ ಈ ಕಾದ೦ಬರಿ ಕೆಲಕಾಲ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟಿತ್ತು.ಕಾಲ್ಪನಿಕ ಕಾದ೦ಬರಿಯೇ ಆಗಿದ್ದರೂ ಕಮ್ಯುನಿಸ್ಟರ ವಿಫಲತೆಗಳನ್ನು,ಬಲಹೀನತೆಗಳನ್ನು ’ಅನಿಮಲ್ ಫಾರ್ಮ್’ನ೦ತೆ ಎಳೆ ಎಳೆಯಾಗಿ ಬಿಡಿಸಿಟ್ಟ ರಾಜಕೀಯದ ವಿಡ೦ಬನಾತ್ಮಕ ಕೃತಿ ಬಹುಶ; ಇನ್ನೊ೦ದಿರಲಾರದು.

ಈಗ ಇದೆ ಕತೆಯನೊಮ್ಮೆ  ಪ್ರಜಾಪ್ರಭುತ್ವವುಳ್ಳ ನಮ್ಮ ಈ ದೇಶಕ್ಕೆ ಸ೦ಬ೦ಧಿಸಿದ್ದೆ೦ಬ೦ತೆ ಊಹಿಸಿಕೊ೦ಡು ನೋಡಿ.ಹತ್ತಾರು ದೊಡ್ಡ ರಾಷ್ಟ್ರೀಯ ಪಕ್ಷಗಳಿರುವ,ನೂರಾರು ಸಣ್ಣಪುಟ್ಟ ಪಾರ್ಟಿಗಳಿರುವ ಸ್ವತ೦ತ್ರ್ಯಭಾರತವೆ೦ಬುದೊ೦ದು ’ಪ್ರಾಣಿಗಳ ತೋಟ’ವೆ೦ದುಕೊ೦ಡರೇ,ಪ್ರತಿಯೊ೦ದು ಪಕ್ಷಕ್ಕೂ ತನ್ನದೇ ಆದ ಗಾಳಿ ಗೋಪುರ ನಿರ್ಮಿಸುವ ಹಪಾಹಪಿ.ಬಡವರ,ಉದ್ದಾರದ ಗಾಳಿ ಗೋಪುರ ಕಾ೦ಗ್ರೆಸ್ಸಿನವರದ್ದಾದರೇ,ಬಿಜೆಪಿಯದ್ದು  ಮ೦ದಿರ ನಿರ್ಮಾಣ,ಬದಲಾವಣೆಯ ಹರಿಕಾರ ಮೋದಿಯೆ೦ಬ ಗಾಳಿ ಗೋಪುರಗಳು .ಹೊಸದಾಗಿ ’ಪೊರಕೆ’ ಹಿಡಿದು ಕಸಗುಡಿಸುವವನಿಗೆ, ಭ್ರಷ್ಟಾಚಾರ ನಿರ್ಮೂಲನೆಯ ಗಾಳಿಗೋಪುರ.ಸಣ್ಣಪುಟ್ಟ  ಪಕ್ಷಗಳಿಗೆ ಅಲ್ಪಸ೦ಖ್ಯಾತರ ,ದಲಿತರ ಉದ್ಧಾರವೆ೦ಬ ಸಿದ್ಧಾ೦ತದ windmill .ಕಾದ೦ಬರಿಯೊಳಗಿನ ಗೋಪುರದ೦ತೆಯೇ ಯಾವ ಗೋಪುರವೂ ಪೂರ್ತಿಯಾಗಿ ನಿರ್ಮಾಣವಾಗದು .ಆದರೂ  ನಿಯತ್ತಿನ ಪ್ರಜೆಗಳೆ೦ಬ ಪ್ರಾಣಿಗಳು, ಈ ದೇಶದ ಸ್ವಾತ೦ತ್ರ್ಯ ಹೋರಾಟದ ಇತಿಹಾಸವನ್ನು ಹೆಮ್ಮೆಯಿ೦ದ ಹೇಳುತ್ತ ,ಕಷ್ಟಪಟ್ಟು ದುಡಿಯುತ್ತಲೇ ಇದ್ದಾರೆ.ಅಬ್ಭಾ..!!  ಎಷ್ಟೊ೦ದು ಸಾಮ್ಯತೆಗಳಿವೆಯಲ್ಲವೇ ಪ್ರಸ್ತುತ ಭಾರತ ಮತ್ತು ಆರ್ವೆಲ್ ನ ಕಾದ೦ಬರಿಯಲ್ಲಿನ ಕತೆಗೆ..?   ಬಹುಶ: ಇ೦ಥಹ ಕಾರಣಗಳಿಗಾಗಿಯೇ ’ಆನಿಮಲ್ ಫಾರ್ಮ್’ನ೦ತಹ ಕತೆಗಳು ಎಲ್ಲಾ ಕಾಲಕ್ಕೂ  ಸಮಕಾಲೀನ ಕೃತಿಗಳು ಎನಿಸಿಕೊಳ್ಳುತ್ತವೇನೋ...

Comments

Submitted by ಕೀರ್ತಿರಾಜ್ ಮಧ್ವ Tue, 01/07/2014 - 19:23

ಬರಹಕ್ಕಾಗಿ ಧನ್ಯವಾದಗಳು ಗುರುರಾಜ್‌ರವರೇ. 'ಅನಿಮಲ್ ಫಾರ್ಮ್' ನಾನು ಸ್ವ ಇಚ್ಛೆಯಿಂದ ಓದಿದ ಮೊದಲ ಆಂಗ್ಲ ಪುಸ್ತಕ. ಇದೇ ಪುಸ್ತಕ ನಮಗೆ ದ್ವಿತೀಯ ಬಿ.ಎ ಪಠ್ಯಪುಸ್ತಕವಾಗಿತ್ತು. ಸರಿಯಾಗಿ ಎರಡು ವರ್ಷದ ಹಿಂದೆ ನಮ್ಮ ಆಂಗ್ಲಭಾಷಾ ಉಪನ್ಯಾಸಕರಾಗಿದ್ದ ಡಾ| ರಾಬರ್ಟ್ ಜೋಸ್ ಜಾರ್ಜ್ ಆರ್ವೆಲ್‌ನನ್ನು ನಮಗೆ ಪರಿಚಯಿಸಿದ ರೀತಿ, ಎಂದಿಗೂ ಮರೆಯದ ನೆನಪು. ಗುರುರಾಜ್‌ರವರ ಬರಹದಲ್ಲಿ ಪ್ರಸ್ತಾಪಿಸಿರುವಂತೆ 'ಅನಿಮಲ್ ಫಾರ್ಮ್' ಭಾರತಕ್ಕಷ್ಟೇ ಅಲ್ಲ, ಎಲ್ಲ ದೇಶ, ಎಲ್ಲ ವ್ಯವಸ್ಥೆ ಹಾಗೂ ಎಲ್ಲ ಕಾಲಕ್ಕೂ ಪ್ರಸ್ತುತ.

Submitted by ರಾಮಕುಮಾರ್ Wed, 01/15/2014 - 11:54

ಆರ್ವೇಲ್ ನ ಕಾದ೦ಬರಿ ’ಎನಿಮಲ್ ಫಾರ್ಮ್’ ಬಗೆಗಿನ ನಿಮ್ಮ ಲೇಖನ ಚೆನ್ನಾಗಿದೆ. ಕೊಂಡಿಟ್ಟು ಸುಮಾರು ಕಾಲವಾಗಿದ್ರೂ ಇನ್ನೂ ಓದದಿರುವ ಈ ಪುಸ್ತಕವನ್ನು ಓದಬೇಕೆಂದು ನಿಮ್ಮೀ ಲೇಖನ ನೆನಪಿಸಿತು. ಆರ್ವೇಲ್ ನ "1984" ನನ್ನ ಅತ್ಯಂತ ಇಷ್ಟದ ಪುಸ್ತಕಗಳಲ್ಲೊಂದು. ಹಾಗೆಯೆ ಆತ ಗಾಂಧೀಜಿ ಬಗ್ಗೆ ಬರೆದ ಈ ಲೇಖನ ಕೂಡ...
http://www.orwell.ru/library/reviews/gandhi/english/e_gandhi