೨೦೫. ಲಲಿತಾ ಸಹಸ್ರನಾಮ ೯೮೨ರಿಂದ ೯೮೫ನೇ ನಾಮಗಳ ವಿವರಣೆ

೨೦೫. ಲಲಿತಾ ಸಹಸ್ರನಾಮ ೯೮೨ರಿಂದ ೯೮೫ನೇ ನಾಮಗಳ ವಿವರಣೆ

                                                               ಲಲಿತಾ ಸಹಸ್ರನಾಮ ೯೮೨ - ೯೮೫

Yoni-mudrā योनि-मुद्रा (982)

೯೮೨. ಯೋನಿ-ಮುದ್ರಾ

            ನಾಮ ೯೭೭ರಲ್ಲಿ ಚರ್ಚಿಸಿದಂತೆ ದಶ ಮುದ್ರೆಗಳಲ್ಲಿ ಯೋನಿ ಮುದ್ರೆಯು ಒಂಬತ್ತನೆಯದಾಗಿದೆ. ಯೋನಿಯು ದೈವೀ ಸೃಜನಾತ್ಮಕ ಶಕ್ತಿಯ ವಿಶಿಷ್ಠ ಸಂಕೇತವಾಗಿದೆ. ಯೋನಿ ಮುದ್ರೆಯ ಮೂಲಕ ದೇವಿಯನ್ನು ಪೂಜಿಸುವುದೆಂದರೆ ದೈವೀ ಸೃಜನಾತ್ಮಕ ಶಕ್ತಿಯನ್ನು ಹೊಂದಲು ಆಕೆಯ ಅಪ್ಪಣೆಯನ್ನು ಕೋರುವುದಾಗಿದೆ. ಇಲ್ಲಿ ಸೃಜನಾತ್ಮಕತೆ ಎಂದರೆ ಸಾಧಕನು ಇದುವರೆಗೆ ಚರ್ಚಿಸಿದ ನಾಮಗಳ ಮಹತ್ವವನ್ನು ಸೂಕ್ತವಾಗಿ ಅರಿಯುವುದರ ಮೂಲಕ ಮಾರ್ಪಾಡು ಹೊಂದುವುದು ಅದರಲ್ಲೂ ವಿಶೇಷವಾಗಿ ೯೮೭ರ ನಂತರದ ನಾಮಗಳು ವಿವೇಕವನ್ನುಂಟು ಮಾಡುವುದರಿಂದ ಅವನಲ್ಲಿ ಮಾರ್ಪಟು ಉಂಟಾಗುತ್ತದೆ.

           ಭಗವದ್ಗೀತೆಯಲ್ಲಿ (೧೪. ೩) ಶ್ರೀಕೃಷ್ಣನು ಹೀಗೆ ಹೇಳುತ್ತಾನೆ, "ಮಮ ಯೋನಿ ಮಹದ್ ಬ್ರಹ್ಮಾ मम योनि महद् ब्रह्मा" ಅಂದರೆ ಪರಬ್ರಹ್ಮವೆಂದು ಕರೆಯಲ್ಪಡುವ ನನ್ನ ಮೂಲಸ್ವರೂಪವು ಸಕಲ ಜೀವಿಗಳಿಗೆ ಯೋನಿಯಾಗಿದೆ. ಯೋನಿ ಶಬ್ದವನ್ನು ಪ್ರಕೃತಿಯನ್ನು ಸೂಚಿಸಲು ಬಳಸಲ್ಪಡುತ್ತದೆ, ಏಕೆಂದರೆ ಪ್ರಕೃತಿಯು ಸೃಷ್ಟಿಗೆ ವಸ್ತುತಃ ಕಾರಣವಾಗಿದೆ.

           ತೊದಲ ತಂತ್ರದಲ್ಲಿ (೨.೨೫) ಶಿವನು ಪಾರ್ವತಿಗೆ ಹೀಗೆ ಹೇಳುತ್ತಾನೆ, "ಪ್ರಿಯೆ, ಈ ಯೋನಿ ಮುದ್ರೆಯು ಸಕಲ ರೋಗಗಳನ್ನು ಉಪಶಮನಗೊಳಿಸುತ್ತದೆ. ಓಹ್ಞ್! ದೇವಿಯೇ, ಅದನ್ನು ವ್ಯಾಪಕವಾಗಿ ವಿವರಿಸದೆ ಅದು ಮಹಾನ್ ರೋಗಗಳನ್ನು ನಾಶಪಡಿಸುತ್ತದೆ ಎಂದಷ್ಟೇ ಹೇಳಬಲ್ಲೆ, ಓಹ್ಞ್! ದೇವಿಯೇ ಉತ್ಪ್ರೇಕ್ಷೆಗೊಳಿಸದೇ ನಾನು ಈ ಮುದ್ರೆಯು ಮಂತ್ರದ ಸಿದ್ಧಿಯುಂಟಾಗುವಂತೆ ಮಾಡಿ ಅದು ಆತ್ಮದ ಕುರಿತಾಗಿ ಪ್ರತ್ಯಕ್ಷಾನುಭವವನ್ನು ಮತ್ತು ಸಾಧಕನಿಗೆ ಮುಕ್ತಿಯನ್ನೂ ಪ್ರಸಾದಿಸುತ್ತದೆ".

           ಯೋನಿ ಮುದ್ರೆಯು ಜಗನ್ಮಾತೆಗೂ ಮತ್ತು ಸಾಧಕನ ಮಧ್ಯೆ ಇರುವ ಗುಪ್ತ ಸಂಪರ್ಕ ಸಾಧನವಾಗಿದ್ದು ಭಕ್ತನು ದೇವಿಯನ್ನು ಜ್ಞಾನವನ್ನು ಕರುಣಿಸುವಂತೆ ಕೋರುತ್ತಾನೆ ಮತ್ತು ತನ್ಮೂಲಕ ಮುಕ್ತಿಯನ್ನು ಸಹ. ಯೋನಿ ಮುದ್ರೆಯನ್ನು ಎಂದಿಗೂ ಸಾರ್ವಜನಿಕವಾಗಿ ಉಪಯೋಗಿಸಬಾರದು.

          ಮೂರು ವಿಧವಾದ ಯೋನಿ ಮುದ್ರೆಗಳಿವೆ. ಮೊದಲನೆಯದನ್ನು ನವಾವರಣ ಪೂಜೆಯ ಸಮಯದಲ್ಲಿ ಉಪಯೋಗಿಸುತ್ತಾರೆ. ಎರಡನೆಯದನ್ನು ಆರಂಭಿಕ ಹಂತದಲ್ಲಿ ಕೈಗೊಳ್ಳುವ ಧ್ಯಾನದ ಅಭ್ಯಾಸದ ಸಮಯದಲ್ಲಿ ಬಳಸುತ್ತಾರೆ. ಎರಡೂ ಕೈಗಳಲ್ಲಿನ ಐದೂ ಬೆರಳುಗಳನ್ನು ಶಿರಸ್ಸಿನಲ್ಲಿರುವ ಗ್ರಹಣೇಂದ್ರಿಯಗಳನ್ನು ನಿರ್ಭಂದಿಸಲು ಉಪಯೋಗಿಸಿ ತನ್ಮೂಲಕ ಸೂಕ್ಷ್ಮವಾದ ಅಂತರಂಗದ ಶಬ್ದವನ್ನು ಆಲಿಸುತ್ತಾರೆ. ಮೂರನೆಯದು, ಉಸಿರಿನ ನಿಯಂತ್ರಣದೊಂದಿಗೆ, ಯೋಗ ಭಂಗಿ ಮತ್ತು ಮುದ್ರೆಯನ್ನೊಳಗೊಂಡಿರುತ್ತದೆ ಮತ್ತು ಇದು ಹೆಚ್ಚಾಗಿ ಕುಂಡಲಿನೀ ಚಲನೆಗೆ ಸಂಭಂದಪಟ್ಟದ್ದಾಗಿದೆ.

          ಈ ನಾಮವು ದೇವಿಯು ಯೋನಿ ಮುದ್ರೆಯ ಸ್ವರೂಪದಲ್ಲಿದ್ದಾಳೆ ಎಂದು ಹೇಳುತ್ತದೆ.

Trikhaṇḍeśī त्रिखण्डेशी (983)

೯೮೩. ತ್ರಿಖಂಡೇಶೀ

           ತ್ರಿಖಂಡ ಎನ್ನುವುದು ಹತ್ತನೆಯ ಮುದ್ರೆಯಾಗಿದೆ. ಈ ಮುದ್ರೆಯನ್ನು ಪೂಜಾಚರಣೆಗಳ ಸಮಯದಲ್ಲಿ ದೇವಿಯನ್ನು ಆವಾಹಿಸುವುದಕ್ಕೆ ಬಳಸಲಾಗುತ್ತದೆ. ತ್ರಿಖಂಡ ಮುದ್ರೆ ಎಂದರೆ ವಿವಿಧ ತ್ರಿಪುಟಿಗಳು ಒಂದಾಗಿ ಲೀನವಾಗುವುದಾಗಿದೆ. ಉದಾಹರಣೆಗೆ ಸಾಧಕ, ಅವನ ಗುರು ಮತ್ತು ದೇವಿ ಅಥವಾ ಜ್ಞಾನಿ, ಜ್ಞಾತೃ ಮತ್ತು ಜ್ಞೇಯ ಇವುಗಳು ತ್ರಿಪುಟಿಗಳಾಗಿವೆ. ಎಲ್ಲಾ ತ್ರಿಪುಟಿಗಳನ್ನೂ ಒಂದರಲ್ಲಿಯೇ ಸಂಯಕ್ತವಾಗಿ ಲೀನಗೊಳಿಸಬೇಕೆನ್ನುವ ಈ ಪರಮೋನ್ನತವಾದ ಜ್ಞಾನವನ್ನೇ ಸಾಧಕನು ಹಿಂದಿನ ನಾಮದಲ್ಲಿ ಯೋನಿ ಮುದ್ರೆಯನ್ನುಪಯೋಗಿಸಿ ಹೊಂದಲು ಬಯಸಿದ್ದು.

          ಈ ಮುದ್ರೆಯು ಪಂಚದಶೀ ಮಂತ್ರದ ಮೂರು ಕೂಟಗಳನ್ನು ಸೂಚಿಸುತ್ತದೆ ಎಂದೂ ಹೇಳಲಾಗುತ್ತದೆ. ಹಾಗಾಗಿ ವಿಶಾಲಾರ್ಥದಲ್ಲಿ ಈ ಮುದ್ರೆಯನ್ನು ಬ್ರಹ್ಮಮುದ್ರೆಯೆಂದೂ ಕರೆಯಬಹುದು. ಈ ಮುದ್ರೆಯಲ್ಲಿ ಮುಂಚಾಚಿರುವ ಬೆರಳುಗಳ ಜೊತೆಯು ಸೃಷ್ಟಿ, ಸ್ಥಿತಿ ಮತ್ತು ಲಯವನ್ನು ಸೂಚಿಸುತ್ತವೆ.

Tri-guṇā त्रि-गुणा (984)

೯೮೪. ತ್ರಿ-ಗುಣಾ

           ದೇವಿಯು ತ್ರಿಗುಣಗಳು ಅಥವಾ ಸತ್ವ, ರಜೋ ಮತ್ತು ತಮೋ ಗುಣಗಳ ರೂಪದಲ್ಲಿರುತ್ತಾಳೆ. ಸತ್ವ ಎಂದರೆ ಪರಿಶುದ್ಧವಾದ ಗುಣ ಮತ್ತು ಜ್ಞಾನ. ಉಳಿದರೆಡು ಗುಣಗಳ ಅಸ್ತಿತ್ವವು ಸತ್ವ ಗುಣದಲ್ಲಿ ಪ್ರಧಾನವಾಗಿರುವುದಿಲ್ಲ ಮತ್ತು ಈ ಗುಣವು ಅತ್ಯಂತ ಪರಿಶುದ್ಧತೆಯನ್ನು ಹೊಂದಿದೆ. ರಜೋ ಗುಣವು ಕಾಮನೆಗಳ ಚಟುವಟಿಕೆಗಳಿಂದ ಕೂಡಿದೆ. ತಮೋ ಗುಣವು ಜಡತ್ವ ಅಥವಾ ಅಜ್ಞಾನದಿಂದ ಕೂಡಿದೆ. ಈ ಎರಡೂ ಗುಣಗಳಲ್ಲಿ ಇತರೇ ಗುಣಗಳ ಶೇಷವು ಹೆಚ್ಚಾಗಿರುತ್ತದೆ. ಗುಣಗಳೆಂದರೆ ಪ್ರಕೃತಿಯ ಹುಟ್ಟು ಸ್ವಭಾವಗಳು. ಅಹಂ ಮತ್ತು ಬುದ್ಧಿ ಇವುಗಳು ಪ್ರಕೃತಿಯ ಎಲ್ಲಾ ಉತ್ಪನ್ನಗಳಲ್ಲಿ ಏಕಕಾಲದಲ್ಲಿ ಅಸ್ತಿತ್ವದಲ್ಲಿರುತ್ತವೆ; ಆದರೆ ಅವುಗಳು ಪ್ರತಿಯೊಂದು ವ್ಯಕ್ತಿಯಲ್ಲೂ ಅಸಮಾನವಾದ ಪ್ರಮಾಣಗಳಲ್ಲಿ ಹಂಚಲ್ಪಟ್ಟಿರುತ್ತವೆ. ಒಬ್ಬ ವ್ಯಕ್ತಿಯಲ್ಲಿನ ಪ್ರಧಾನ ಗುಣವು ಆ ವ್ಯಕ್ತಿಯ ಆಲೋಚನೆ ಮತ್ತು ಕ್ರಿಯೆಗಳಲ್ಲಿ ಪ್ರತಿಫಲನವಾಗುತ್ತವೆ.

          ಕೃಷ್ಣನು ಭಗವದ್ಗೀತೆಯಲ್ಲಿ (೧೪.೫ರಿಂದ ೧೪.೯) ಗುಣಗಳ ಕುರಿತು ವಿವರಿಸುತ್ತಾನೆ, "ಸತ್ವ, ರಜಸ್ಸು ಮತ್ತು ತಮಸ್ಸು ಎಂಬ ಪ್ರಕೃತಿಯಿಂದ ಹುಟ್ಟಿದ ಗುಣಗಳು ಅವ್ಯಯನಾದ ಆತ್ಮನನ್ನು ದೇಹದಲ್ಲಿ ಬಂಧಿಸುತ್ತವೆ. ಇವುಗಳಲ್ಲಿ, ಸತ್ವಗುಣವು ನಿರ್ಮಲವಾದುದರಿಂದ ಪ್ರಕಾಶವೂ ಅನಾಮಯವೂ (ನಿರುಪದ್ರವವೂ) ಆಗಿದೆ. ಅದು ಸುಖಸಂಗದಿಂದಲೂ, ಜ್ಞಾನಸಂಗದಿಂದಲೂ ಆತ್ಮನನ್ನು ಬಂಧಿಸುತ್ತದೆ. ರಜೋಗುಣವು ರಾಗಾತ್ಮಕವಾದದ್ದು. ಅದು ತೃಷ್ಣ ಮತ್ತು ಸಂಗ ಇವುಗಳನ್ನು ಉಂಟುಮಾಡುವುದು. ಅದು ಕರ್ಮಫಲದಿಂದಾಗಿ ಆತ್ಮನನ್ನು ಬಂಧಿಸುತ್ತದೆ. ತಮೋಗುಣವು ಅಜ್ಞಾನದಿಂದ ಹುಟ್ಟಿದುದೆಂದೂ, ಸಮಸ್ತಪ್ರಾಣಿಗಳನ್ನು ಮೋಹಪಡಿಸುತ್ತದೆ ಮತ್ತು ಅದು ಆತ್ಮನನ್ನು ಪ್ರಮಾದ,  ಆಲಸ್ಯತನ, ನಿದ್ರೆ ಇವುಗಳಿಂದ ಬಂಧಿಸುತ್ತದೆ. (ಸತ್ವವು ಒಬ್ಬನನ್ನು ಸಂತೋಷಕ್ಕೆ ದೂಡಿದರೆ, ರಜಸ್ಸು ಕರ್ಮಕ್ಕೆ ಮತ್ತು ತಮಸ್ಸು ಒಬ್ಬನಿಗೆ ಪ್ರಮಾದವನ್ನುಂಟು ಮಾಡುವ ಗುಣವನ್ನು ಪ್ರಚೋದಿಸುತ್ತದೆ ಮತ್ತದು ನಿದ್ರೆ ಮತ್ತು ಆಲಸ್ಯತನವನ್ನುಂಟು ಮಾಡುತ್ತದೆ)." ಭಗವದ್ಗೀತೆಯ ೧೪ನೇ ಅಧ್ಯಾಯವು ವಿಶೇಷವಾಗಿ ಗುಣಗಳ ಕುರಿತಾಗಿ ಚರ್ಚಿಸುತ್ತದೆ. ಕೃಷ್ಣನು ಪುನಃ (೧೪.೨೦) ಹೀಗೆ ಹೇಳುತ್ತಾನೆ, "ದೇಹಿಯು ದೇಹೋತ್ಪತ್ತಿಗೆ ಕಾರಣವಾಗಿರುವ ಈ ಮೂರು ಗುಣಗಳನ್ನು ದಾಟಿ, ಜನ್ಮ, ಮೃತ್ಯು, ಮುಪ್ಪು, ಇವುಗಳ ದುಃಖಗಳಿಂದ ಬಿಡಲ್ಪಟ್ಟವನಾಗಿ ಅಮೃತತ್ವವನ್ನು ಹೊಂದುತ್ತಾನೆ".

         ನಾಮ ೧೩೯ ನಿರ್ಗುಣಾ ಆಗಿದ್ದು ಅದರಲ್ಲಿ ದೇವಿಯು ಗುಣರಹಿತಳಾಗಿದ್ದಾಳೆ ಎಂದು ಹೇಳಿದರೆ ಈ ನಾಮವು ದೇವಿಯು ಗುಣಗಳ ಮೂರ್ತರೂಪವಾಗಿದ್ದಾಳೆ ಎಂದು ಹೇಳುತ್ತದೆ. ಇದು ವಿರೋಧಾಬಾಸವಲ್ಲ. ನಾಮ ೧೩೯ ಆಕೆಯ ನಿರ್ಗುಣ ಬ್ರಹ್ಮದ ಸ್ಥಿತಿಯನ್ನು ಹೇಳಿದರೆ ಈ ನಾಮವು ದೇವಿಯ ಸಗುಣ ಬ್ರಹ್ಮದ ಸ್ಥಿತಿಯನ್ನು ಹೇಳುತ್ತದೆ. ಹೆಚ್ಚಿನ ವಿವರಗಳಿಗೆ ನಾಮ ೩೯೭ ’ಮೂಲಪ್ರಕೃತಿಃ’ಯನ್ನು ನೋಡಿ.

         ಈ ನಾಮವು ತ್ರಿಗುಣಗಳು ದೇವಿಯಿಂದಲೇ ಜನಿಸುತ್ತವೆ ಎಂದು ಹೇಳುತ್ತದೆ. ಸೃಷ್ಟಿಯು ತ್ರಿಗುಣಗಳಿಲ್ಲದೇ ಸಾಧ್ಯವಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಈ ನಾಮವು ದೇವಿಯ ಶ್ರೀ ಮಾತೆಯ ಸ್ಥಾನವನ್ನು ದೃಢಪಡಿಸುತ್ತವೆ.

Ambā अम्बा (985)

೯೮೫. ಅಂಬಾ

          ಇದೊಂದು ಬೆರಗುಗೊಳಿಸುವ ಹೇಳಿಕೆಯಾಗಿದೆ. ಸಾಧಕನು ಈ ಹಂತದಲ್ಲಿ ಪರಮಾನಂದಕ್ಕೆ ಹತ್ತಿರವಾದ ಸ್ಥಿತಿಯನ್ನು ತಲುಪುತ್ತಾನೆ. ಅಂಬಾ ಎಂದರೆ ತಾಯಿ. ವಾಗ್ದೇವಿಗಳು ದೇವಿಯ ವಿವಿಧ ಸ್ವರೂಪ ಮತ್ತು ಗುಣಲಕ್ಷಣಗಳನ್ನು ಬಣ್ಣಿಸುವಾಗ ಸಂತೋಷವನ್ನು ತಡೆದುಕೊಳ್ಳಲಾಗದೇ, ಭಾವಪೂರ್ಣರಾಗಿ ದೇವಿಯನ್ನು ಅಂಬಾ ಎಂದು ಕರೆದಿದ್ದಾರೆ. ನಿಜವಾದ ಅಕಳಂಕ ಭಕ್ತಿಯಿಂದ ಸಹಸ್ರನಾಮವನ್ನು ಪಠಿಸುತ್ತಿದ್ದರೆ ಇದು ಒಬ್ಬರ ಅನುಭವಕ್ಕೆ ಬರುತ್ತದೆ.

ಬ್ರಹ್ಮವನ್ನು ಭಾಷೆಯ ಮೂಲಕ ಪ್ರತಿನಿಧಿಸುವ, ಅಪರೂಪವಾಗಿ ಬಳಸಲ್ಪಡುವ ’ಗುಣ-ಧರ್ಮ’ ಎನ್ನುವ ಒಂದು ಶಬ್ದವಿದೆ. ಗುಣಧರ್ಮವೆಂದರೆ ಮಾನಸಿಕವಾದ ಮತ್ತು ಮೌಖಿಕ ಭಾಷಾಭಿವ್ಯಕ್ತಿಯಾಗಿದ್ದು ಅದರ ಶಬ್ದಶಃ ಅರ್ಥವು, ಅವಿಭಜಿತ ಸತ್ಯವಾದ ಬ್ರಹ್ಮವು ವಿವಿಧ ಲಕ್ಷಣಗಳ ಮೂಲಕ ವ್ಯಕ್ತಗೊಳ್ಳುತ್ತದೆ. ಹಿಂದಿನ ನಾಮದಲ್ಲಿ ವಿವರಿಸಿದಂತೆ, ದೇವಿಯು ಇಂತಹ ಲಕ್ಷಣಗಳನ್ನು ಅಭಿವ್ಯಕ್ತಗೊಳಿಸುವಾಕೆಯಾದ್ದರಿಂದ ಆಕೆಯನ್ನು ಅಂಬಾ ಎಂದು ಸಂಬೋಧಿಸಲಾಗಿದೆ.   

                                                                              ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 982 - 985 http://www.manblunder.com/2010/07/lalitha-sahasranamam-meaning-982-985.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Mon, 01/06/2014 - 20:56

ಶ್ರೀಧರರೆ, "೨೦೫. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ:-)
.
ಲಲಿತಾ ಸಹಸ್ರನಾಮ ೯೮೨ - ೯೮೫
_______________________________
.
೯೮೨. ಯೋನಿ-ಮುದ್ರಾ
ಸೃಷ್ಟಿಗೆ ಕಾರಣ ಪ್ರಕೃತಿ, ಮೂಲ ಬ್ರಹ್ಮರೂಪವೆ ಸಕಲ ಜೀವಿಗೆ ಯೋನಿ
ದಶಮುದ್ರೆಯಲೊಂಭತ್ತನೆಯ, ದೈವೀ ಸೃಜನಾತ್ಮಕತೆ ಸಾಂಕೇತಿಕ ದನಿ
ಸಾಧನೆ ಹಾದಿಯ ಜ್ಞಾನದೆ, ವಿವೇಕವುದಿಸಿ ದೇವಿಯನುಮತಿ ಸುಸೂತ್ರ
ಯೋನಿಮುದ್ರಾ ಸ್ವರೂಪದಲಿ, ಅಪ್ಪಣೆಯೀವಳು ದೇವಿ ಯೋನಿಮುದ್ರಾ ||
.
ಸಕಲ ರುಜೋಪಶಮನಿ, ಮಹಾನ್ ರೋಗನಾಶಿನಿ ಯೋನಿ ಮುದ್ರಾ ಶಕ್ತಿ
ಆತ್ಮದ ಪ್ರತ್ಯಕ್ಷಾನುಭವ ಪ್ರಸಾದಿಸುವ ಮಂತ್ರ ಸಿದ್ಧಿ, ಜತೆ ಸಾಧಕಗೆ ಮುಕ್ತಿ
ಸಾಧಕ ಜಗನ್ಮಾತೆ ಮಧ್ಯೆ ಗುಪ್ತ ಸಂಪರ್ಕ ಸಾಧನ, ಜ್ಞಾನ ಕರುಣಿಸೆ ಲಲಿತ
ತನ್ಮುಖೇನ ಮುಕ್ತಿ ಬೇಡುವ ಯೋನಿಮುದ್ರೆ, ಸಾರ್ವಜನಿಕ ಬಳಕೆ ನಿಷೇದಿತ ||
.
ತ್ರಿವಿಧ ಯೋನಿ ಮುದ್ರೆ ಪ್ರಚಲಿತ, ಪ್ರಥಮವ ನವಾವರಣ ಪೂಜೆಗೆ ಬಳಸುತ;
ದ್ವಿತೀಯ ವಿಧ ಧ್ಯಾನಾಭ್ಯಾಸ ಆರಂಭ ಹಂತ, ಗ್ರಹಣೇಂದ್ರಿಯ ನಿರ್ಬಂಧಿಸುತ
ಅಂತರಂಗ ಶಬ್ದ ಆಲಿಕೆ ಧ್ಯಾನ, ಕೈ ಬೆರಳ ಉಪಕರಣ; ಮೂರನೆ ನಿಯಂತ್ರಣ
ಉಸಿರು, ಯೋಗ ಭಂಗಿ ಮುದ್ರೆಯೊಡಗೂಡಿ ಕುಂಡಲಿನಿ ಚಲನೆಗೆ ಪ್ರೇರೇಪಣ ||
.
೯೮೩. ತ್ರಿಖಂಡೇಶೀ
ಹತ್ತನೆ ದಶಮುದ್ರೆ ತ್ರಿಖಂಡೇಶೀ, ದೇವಿ ಆವಾಹನೆಗೆ ಬಳಸುತೆ
ತ್ರಿಪುಟಿಗಳೊಂದಾಗೆ ಲೀನವಾಗಿ, ಜ್ಞಾನಿ-ಜ್ಞಾತೃ-ಜ್ಞೇಯಾ ಏಕತೆ
ಸಾಧಕ-ಗುರು-ದೇವಿ ತ್ರಿಪುಟಿ, ವಿಲೀನಕಿರೆ ಪರಮೋನ್ನತ ಜ್ಞಾನ
ಪಂಚದಶೀ ತ್ರಿಕೂಟ ಬ್ರಹ್ಮಮುದ್ರೆ, ತ್ರಿಕಾರ್ಯ ಸಂಕೇತ ಸೂಚನ ||
.
೯೮೪. ತ್ರಿ-ಗುಣಾ
ಸೃಷ್ಟಿಯ ಮೂಲ  ವಸ್ತು ತ್ರಿಗುಣ, ದೇವಿಯಿಂದಲೆ ಜನಿಸಿದ ಕಾರಣ
ಶ್ರೀ ಮಾತೆ ತ್ರಿಗುಣದ ರೂಪದೆ, ವ್ಯಕ್ತಿಗಳಲ್ಹಂಚಿದ ಅಸಮ ಪ್ರಮಾಣ
ಪರಿಶುದ್ಧ ಗುಣ-ಜ್ಞಾನ ಸತ್ವ, ಕಾಮನೆ ಚಟುವಟಿಕೆ ರಾಜಸದ ಗುಣ
ಜಡತ್ವ-ಅಜ್ಞಾನ ತಮೋ, ಅಹಂ ಬುದ್ಧಿ ಏಕಕಾಲೆ ಅಸ್ತಿತ್ವ ತ್ರಿಗುಣಾ ||
.
ಪ್ರಕೃತಿ ಜನ್ಯ ತ್ರಿಗುಣ, ಬಂಧಿಸುತ ಅವ್ಯಯಾತ್ಮನ ದೇಹವಾಗಿಸಿ ಸದನ
ನಿರ್ಮಲ ಪ್ರಕಾಶ ನಿರುಪದ್ರವಿ ಸತ್ವ, ಸುಖಜ್ಞಾನ ಸಂಗದೆ ಆತ್ಮ ಬಂಧನ
ರಾಗಾತ್ಮಕ ರಾಜಸದಿಂದ ತೃಷ್ಣ-ಸಂಗ, ಕರ್ಮಫಲದಿಂದಾ ಆತ್ಮ ಬಂಧನ
ಮೋಹ ಅಜ್ಞಾನದ ತಮೋಗುಣ, ನಿದಿರಾಲಸ್ಯಪ್ರಮಾದದೆ ಆತ್ಮಬಂಧನ ||
.
೯೮೫. ಅಂಬಾ
ಪರಮಾನಂದದ ಹತ್ತಿರ ಸಾಧಕ ಯಾತ್ರೆ, ಹರ್ಷಾತೀರೇಖ ಭಾವ ಯಾತ್ರೆ
ದೇವಿ ನಾಮಪಠನೆ ಅಕಳಂಕ ಭಕ್ತಿಯಸೆಲೆ, ಅಂಬಾ ಎಂದ ಸಂತಸ ಜಾತ್ರೆ
ಅವಿಭಜಿತ ಅವ್ಯಕ್ತ ಸತ್ಯಾ ಬ್ರಹ್ಮ, ವ್ಯಕ್ತವಾಗುವ ವಿವಿಧ ಗುಣ ಲಕ್ಷಣ ಮರ್ಮ
ಭಾಷೆ ಬ್ರಹ್ಮ ಪ್ರತಿನಿಧಿಸುವ ಮಾನಸಿಕ ಮೌಖಿಕ, ಭಾಷಾಭಿವ್ಯಕ್ತಿ ಗುಣಧರ್ಮ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು