' ಸಂಗಮದ ನಿರಂತರತೆ '
ಅನೇಕ ಸಂಗಮ ಸ್ಥಳಗಳನ್ನು ನಾವು
ನೋಡಿರುತ್ತೇವೆ
ತಂಗೆ ಭದ್ರೆಯರ ‘ಕೂಡಲಿಯ ಸಂಗಮ’
ಭೀಮೆ ಕೃಷ್ಣೆಯರ ‘ ಕೂಡಲ ಸಂಗಮ’
ಗಂಗಾ ಯಮುನಾ ಸರಸ್ವತಿಯರ
'ತ್ರಿವೇಣಿ ಸಂಗಮ'
ಈ ಸಂಗಮಗಳು ಬಹು ಮಾರ್ಮಿಕ
ಜೊತೆಗೆ ಬಾಳಿನ ಎಲ್ಲ ಸಾರ್ಥಕತೆ
ಮತ್ತು ನಿರರ್ಥಕತೆಗಳ ಸೂಚಕಗಳು
ಝರಿ ತೊರೆಗಳು ಹಳ್ಳಗಳಲ್ಲಿ ಅಸ್ತತ್ವ
ಕಳೆದು ಕೊಂಡರೆ ಹಳ್ಳ ಕೊಳ್ಳಗಳು
ನದಿಗಳಲ್ಲಿ ಅಂತರ್ಗತವಾಗುತ್ತವೆ
ನದಿಗಳು ಕಡಲ ಗರ್ಭ ಸೇರಿ
ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಇವೆಲ್ಲ
ಇಚ್ಛಾಮರಣಿಗಳು ದಾರಿಯುದ್ದಕ್ಕೂ
ಮೈತುಂಬ ಸಿಹಿ ಅಮೃತ ತುಂಬಿಕೊಂಡು
ಸಕಲ ಜೀವ ಜಾತಿಗಳ ದಾಹ ತಣಿಸುತ್ತ
ಬಂದು ಕಡಲಲ್ಲಿ ಮಿಳಿತಗೊಂಡು
ಉಪ್ಪು ನೀರಲಿ ಒಂದಾಗಿ ಬಿಡುತ್ತವೆ
ಈ ಸಂಗಮ ಸ್ಥಳಗಳು ನದಿಗಳು ಅಳಿಯುವ
ತಮ್ಮ ಅಸ್ತಿತ್ವ ಕಳೆದು ಕೊಳ್ಳುವ
ತಮ್ಮತನ ಕಳೆದು ಕೊಳ್ಳುವ ಒಂದು
ಅನಿವಾರ್ಯದ ಬದಲಾವಣೆಯ ತಾಣ !
ನದಿ ಪುಟಿಯುವ ಜೀವನದ ಸಂಕೇತವಾದರೆ
ಕಡಲು ಶಾಶ್ವತವಾದ ಮುಕ್ತಿಯ ತಾಣ !
ಇವುಗಳದು ಆತ್ಮ ಪರಮಾತ್ಮರ ಸಂಬಂಧ
ನಿರ್ದಯ ಸಾವು ಮನುಷ್ಯನ ಸಾವಿನಂತೆ
ನದಿ ಮೌನಿ ಆದರೆ ! ಮನುಷ್ಯ ಮೌನಿಯಲ್ಲ
ಅದೆ ಅವುಗಳ ನಡುವಿನ ಅಂತರ ಈ
ಸಂಗಮಗಳು ಪ್ರಕೃತಿಯ ಸೋಜಿಗಗಳು
ಯಾವ ವೇಣು ನಿನಾದ ದೂರದ ನದಿಗಳನ್ನು
ಕಡಲ ಸಾನಿಧ್ಯಕ್ಕೆ ಕರೆಯಿತು ?ಸಂಗಮದ
ಭೋರ್ಗರೆತ ಕಡಲ ಆರ್ಭಟ ಇವೆರಡರ
ಸಮ್ಮಿಳಿತ ಅವಿರತ ರೌದ್ರದ ಮೊರೆತದ ತಾರಕ
ನದಿ ಸಾಗರಗಳ ಸಂಗಮದ ತಟದಲಿ
ಸೂರ್ಯ ಚಂದ್ರರು ಉದಯಿಸಿ ಅಸ್ತಮಿಸುತ್ತಾರೆ
ಅನವರತವಾಗಿ ನದಿಗಳು ಕಡಲುಗಳಿಗೆ
ಧಾವಿಸಿ ಒಂದಾಗುತ್ತಲೆ ಇವೆ ಇನ್ನೂ ನಿಂತಿಲ್ಲ
ನದಿಗಳ ಸಾಗರ ಸೇರುವ ಧಾವಂತ
ಈ ಸಂಗಮಕೆ ಸೂರ್ಯ ಚಂದ್ರ ಗ್ರಹ ತಾರೆಗಳೆ
ಸಾಕ್ಷಿ ಎಲ್ಲಿಯ ವರೆಗೆ ಈ ಸಂಗಮಗಳ
ನಿರಂತರತೆ ? ಸೂರ್ಯ ತಣ್ಣಗಾಗುವ ವರೆಗೆ
ಭೂಮಿ ಬಂಜೆಯಾಗುವ ವರೆಗೆ ಮನುಷ್ಯ
ಪೂರ್ಣವಾಗಿ ಪ್ರಕೃತಿ ಪರಿಸರ ಹಾಳುಗೆಡವುವ ವರೆಗೆ!
***
ಚಿತ್ರ ಕೃಪೆ : ಅಂತರ್ ಜಾಲ
Comments
ಉ: ' ಸಂಗಮದ ನಿರಂತರತೆ '
ಹಿರಿಯರಾದ ಪಾಟೀಲ್ ಸರ್ ಅವರೇ, ಸಂಗಮದ ನಿರಂತರತೆ' ಕವನ ತುಂಬ ವಿಚಾರಪೂರ್ಣ ಗಹನ ವಿಚಾರಗಳನ್ನು ಹೊಂದಿದ ಕವಿತೆ.ಮೊದಲ ಓದಿಗೆ ಆಕರ್ಷಿಸಿದ ಸಾಲುಗಳಿವು, ತುಂಬ ವಿಚಾರಪೂರ್ಣ, ಕಾವ್ಯಮಯ.
1)ಇವೆಲ್ಲ
ಇಚ್ಛಾಮರಣಿಗಳು
2) ಯಾವ ವೇಣು ನಿನಾದ ದೂರದ ನದಿಗಳನ್ನು
ಕಡಲ ಸಾನಿಧ್ಯಕ್ಕೆ ಕರೆಯಿತು ?
3)ಈ ಸಂಗಮಗಳ
ನಿರಂತರತೆ ? ಸೂರ್ಯ ತಣ್ಣಗಾಗುವ ವರೆಗೆ
ಭೂಮಿ ಬಂಜೆಯಾಗುವ ವರೆಗೆ ಮನುಷ್ಯ
ಪೂರ್ಣವಾಗಿ ಪ್ರಕೃತಿ ಪರಿಸರ ಹಾಳುಗೆಡವುವ ವರೆಗೆ!
ಸರ್, ಮತ್ತೊಮ್ಮೆ ಧನ್ಯವಾದಗಳೊಂದಿಗೆ, -ಲಕ್ಷ್ಮೀಕಾಂತ ಇಟ್ನಾಳ
In reply to ಉ: ' ಸಂಗಮದ ನಿರಂತರತೆ ' by lpitnal
ಉ: ' ಸಂಗಮದ ನಿರಂತರತೆ '
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಈ ಕವನದ ಕುರಿತು ತಾವು ಬರೆದ ಮೆಚ್ಚುಗೆಯ ನುಡಿಗಳು ಕವನದ ಗಹನತೆಯನ್ನು ಹೆಚ್ಚಿಸಿವೆ ಎಂದು ಮಾತ್ರ ಹೇಳಬಲ್ಲೆ, ಮೆಚ್ಚುಗೆಗೆ ಧನ್ಯವಾದಗಳು.
ಉ: ' ಸಂಗಮದ ನಿರಂತರತೆ '
ನಮಸ್ಕಾರ ಸರ್
ತುಂಬಾ ಚನ್ನಾಗಿದೆ ಸರ್ ಕವನ
ನೀರು,ಗಾಳಿ,ಮನುಷ್ಯ, ಸಂಗಮ ಎಲ್ಲಿ ಕೂಡುವುದು ಅಲ್ಲಿ ಒಂದು ಧರ್ಮ ಶಕ್ತಿ ಉದ್ಬವವಾಗುತ್ತದೆ ,ಮನುಷ್ಯನ ಒಳ್ಳೆತನ ವು ಹೀಗೆ ಕೂಡಿದರೆ ಸೃಷ್ಠಿಯು ಸ್ವರ್ಗವಾಗುತದೆ.
ಧನ್ಯವಾದಗಳು
In reply to ಉ: ' ಸಂಗಮದ ನಿರಂತರತೆ ' by ravindra n angadi
ಉ: ' ಸಂಗಮದ ನಿರಂತರತೆ '
ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
ಈ ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ತಮ್ಮ ವಿಮರ್ಶೆ ಮನುಷ್ಯ ಸಾರ್ಥಕ ಬದುಕಿನ ಸಾರ ಕುರಿತು ಹೇಳುತ್ತದೆ. ತಮ್ಮ ಗ್ರಹಿಕೆಗೆ ಮತ್ತು ಅಭಿವ್ಯಕ್ತಿಯ ರೀತಿಗೆ ಧನ್ಯವಾದಗಳು.
ಉ: ' ಸಂಗಮದ ನಿರಂತರತೆ '
ಪಾಟೀಲರೆ ನಮಸ್ಕಾರ, ನಿಮ್ಮ ಅದಮ್ಯ ಕುತೂಹಲ, ಕೌತುಕದ ಅನಾವರಣದ ಮತ್ತೊಂದು ತುಣುಕು "ಸಂಗಮದ ನಿರಂತರತೆ". ನದಿ ಸಾಗರ ಸಂಗಮದ ಅನಿವಾರ್ಯತೆ ಬಹುಶಃ ಬದುಕಿನ ಅನಿವಾರ್ಯಗಳಿಗೊಂದು ಉದಾಹರಣೆ. ಬೇಕಿರಲಿ ಬಿಡಲಿ, ಕರ್ಮಬದ್ಧವಾದಂತೆ ಹರಿದು ಸಾಗರ ಸೇರುವ ಕರ್ಮಕಾಂಡ, ಮನುಜ ಜೀವಿಗಳ ಬದುಕಿನಲ್ಲೂ ಸಹ. ಕೆಲವೆ ಸಂತಸದ ಸಂಗಮವಾದರೆ ಮತ್ತೆ ಕೆಲವು ವಿಷಾದ. ಕೆಲವಕ್ಕೆ ಆತ್ಮಹತ್ಯೆ, ಮತ್ತೆ ಹಲವಕ್ಕೆ ಸಾರ್ಥಕತೆ. ಫಲಿತವೇನೆ ಇದ್ದರೂ ಸಂಗಮದ ಪಯಣ ಮಾತ್ರ ನಿರಂತರತೆ. ಸಂಗಮದ ಅನಂತ ಭಾವನೆಗಳ ಸಂಗಮದ ಕವಿತೆ ಹೃದ್ಯಂಗಮವಾಗಿ ಮೂಡಿದೆ, ಅಭಿನಂದನೆಗಳು - ನಾಗೇಶ, ಮೈಸೂರು :-)
In reply to ಉ: ' ಸಂಗಮದ ನಿರಂತರತೆ ' by nageshamysore
ಉ: ' ಸಂಗಮದ ನಿರಂತರತೆ '
ನಾಗೇಶ ಮೈಸೂರು ರವರಿಗೆ ವಂದನೆಗಳು.
ಈ ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ಕವನದಲ್ಲಿ ವಿಶೇಷವೇನೂ ಇಲ್ಲ ಆದರೆ ತಮ್ಮಂತಹ ಓದುಗರ ಓದು ಅದು ತಮ್ಮ ಮನದಾಳದಲ್ಲಿ ಬಿಚ್ಚಿಕೊಂಡು ವಿಮರ್ಶಾ ಮೂಸೆಯಲ್ಲಿ ಅರಳುವ ಪರಿ ಹೊಮ್ಮಿಸುವ ಅರ್ಥ ಸಂತಸ ತರುವಂತಹುದು, ವಿಮರ್ಶೆಯ ಕೃಪೆಗೆ ಧನ್ಯವಾದಗಳು.
ಉ: ' ಸಂಗಮದ ನಿರಂತರತೆ '
ಚೆನ್ನಾಗಿದೆ, ಪಾಟೀಲರೇ. ಈ ಸಂಗಮ ನಿರಂತರ - ಸೃಷ್ಟಿಯಾಗುತ್ತಿರುತ್ತದೆ, ಲಯವಾಗುತ್ತದೆ, ಪುನಃ ಮೈದಾಳುತ್ತದೆ.
In reply to ಉ: ' ಸಂಗಮದ ನಿರಂತರತೆ ' by kavinagaraj
ಉ: ' ಸಂಗಮದ ನಿರಂತರತೆ '
ಕವಿ ನಾಗರಾಜ ರವರಿಗೆ ವಂದನೆಗಳು.
ತಮ್ಮ ಅಭಿಪ್ರಾಯ ಓದಿದೆ, <<< ಈ ಸಂಗಮ ನಿರಂತರ ......... ಮೈದಾಳುತ್ತದೆ.>>> ತಮ್ಮ ಅಭಿಪ್ರಾಯ ಸತ್ಯ್ಸಯ ಸತ್ಯ ಪ್ರತಿಕ್ರಿಯೆಗೆ ಧನ್ಯವಾದಗಳು.