ಜಯಂತರ ‘ತೆರೆದಷ್ಟೇ ಬಾಗಿಲು’, ನಿಮ್ಮ ಮನ ಬಾಗಿಲಿಗೆ

ಜಯಂತರ ‘ತೆರೆದಷ್ಟೇ ಬಾಗಿಲು’, ನಿಮ್ಮ ಮನ ಬಾಗಿಲಿಗೆ

ಮುಂಬಯಿಯ ಅವಸರದ ಬದುಕಿನ ಒಳಸುಳಿಗಳನ್ನು ಬಿಚ್ಚುವ ಕಾಯ್ಕಿಣಿಯವರ ಕಥೆ ತೆರೆದಷ್ಟೆ ಬಾಗಿಲು. ಇವರ ಕಥೆಗಳಲ್ಲಿ ಪಾತ್ರಗಳಷ್ಟೇ ಅಲ್ಲ, ಪಾತ್ರಗಳ ಮನಸ್ಸುಗಳು, ಹಾಗೆಯೇ ಪಾತ್ರದ ಪರಿಸರವೂ ಮಾತನಾಡುತ್ತವೆ ಎಂದು ಇತ್ತೀಚೆಗೆ ಸಂಧ್ಯಾರಾಣಿಯವರು ಬರೆಯುತ್ತಾರೆ. ಕಥೆ ಪ್ರಾರಂಭವಾಗುವುದೇ ಕನಸಿನಲ್ಲಿ. ಅವರ ಲೇಖನಿಯಿಂದ ಕಥೆ ಬಿಚ್ಚಿಕೊಳ್ಳುವ ಪರಿ ಅದ್ಭುತ. ಅವರು ಬಳಸುವ ಭಾಷೆಯ ಸ್ವಾದ, ಅವರು ಬಳಸುವ ಪ್ರತಿಮೆಗಳೆಡೆ, ಜೀವನದ ನವಿರುಗಳನ್ನು ಅವರು ನೋಡಿದ ರೀತಿ, ಬಳಸಿಕೊಂಡ ಬಗೆ, ಬಹುಶ: ಈ ರೀತಿಯಲ್ಲಿ ಜಯಂತ ದಲಿಗರು. ಎಲ್ಲಿಯೂ ಓದುಗರಿಗೆ ಅಭಿಪ್ರಾಯಗಳನ್ನು ಹೇರದೇ, ಏನು ಹೇಳಬೇಕೆನ್ನುವುದನ್ನು ಹೇಳದೇ, ಅರ್ಥೈಸುವ ಕಲೆಗಾರಿಕೆ ಜಯಂತರಿಗೆ ಒಲಿದಿದೆ. ಓದುಗರನ್ನು ಸೆಳೆಯುತ್ತ ಸಾಗುವ ಕಥೆಗಳು ಬಹು ಕಾಲದ ವರೆಗೆ ನೆನಪಿನಲ್ಲುಳಿಯುತ್ತವೆ. ಕಥೆಯ ವಿಸ್ತಾರವನ್ನು ಇನ್ನು ಪಾತ್ರ ಪರಿಸರಗಳ ಮೂಲಕವೇ ನೋಡೋಣ, ಓದುಗರಿಗೆ ಕಥೆಯನ್ನು ಅರ್ಥೈಸಲು, ಒಟ್ಟಾರೆ ಕಥೆಯ ಕೆಲವು ಮುಖ್ಯ ಹಂತಗಳನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತ, ಅವುಗಳ ಮಗ್ಗಲುಗಳನ್ನು ಓದುಗರೊಂದಿಗೆ, ಸಂವಾದಿಸುತ್ತ, ಚರ್ಚಿಸುವ ಪ್ರಯತ್ನವಿಲ್ಲಿದೆ.ಹಿರಿಯ ಸಾಹಿತಿ, ಯಶವಂತ ಚಿತ್ತಾಲರು, 'ಇಷ್ಟಕ್ಕೂ , ತಾನು ಹೊಳೆಯಿಸಲು ಹೊರಟ ಅರ್ಥ ಇದು; ಅದು ನಿಮಗೂ ಹೊಳೆಯಿತೇ? - ಎಂದು ಕೇಳುವ ಉದ್ಧಟತನ ಇವರ ಕತೆಯಲ್ಲಿ ಎಲ್ಲೂ ಪ್ರಕಟವಾಗಿಲ್ಲ. ಜಯಂತರ ಕತೆಗಳಲ್ಲಿ ಅದಕ್ಕೆ ಎಡೆಯಿಲ್ಲ ಎನ್ನುವುದೇ ಅವುಗಳ ಹೆಚ್ಚುಗಾರಿಕೆ' ಎನ್ನುವ ಅವರ ಮಾತು ಇಲ್ಲಿ ಉಲ್ಲೇಖನೀಯ.

  ‘ತೆರೆದಷ್ಟೆ ಬಾಗಿಲು’ ಕಥೆಯನ್ನು ಜಯಂತ ಬರೆದದ್ದು 1979 ರಲ್ಲಿ, ಕಥಾಸಂಕಲನ ರೂಪದಲ್ಲಿ ಪ್ರಕಟವಾಗಿದ್ದು, 1982ರಲ್ಲಿ , ಅದೇ ವರ್ಷ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ ಪಡೆದ ಹೆಮ್ಮೆ, ಹೆಗ್ಗಳಿಕೆ ಇದಕ್ಕಿದೆ. ಕಥೆಯನ್ನು ಆ ಕಾಲಘಟ್ಟದಲ್ಲಿಗೆ ಹೋಗಿ ಓದುವುದು ಇಲ್ಲಿ ಬಹು ಮಹತ್ವದ್ದು ಎನ್ನುವುದು ನನ್ನ ನಮ್ರ ಕೋರಿಕೆ,

(ಪ್ರಿಯರೇ, ಅಂಕಿಗಳಲ್ಲಿ ತೋರಿಸಿದ ಮಾತುಗಳು ತಮ್ಮೊಂದಿಗೆ ಚರ್ಚಿಸುವ ಸಾಲುಗಳು, ಸಂವಾದಗಳು)

                                            *****

   ಕತೆಯ ಪಾತ್ರಗಳು: ಸಂಜೂ –ಕಥಾ ನಾಯಕ (ಡಿಗ್ರೀ ಮುಗಿಸಿ ನೌಕರಿ ನೋಡುವ ವಯಸು)

ದಿನೂಮಾ- ಸಂಜೂನ ಅಪ್ಪ

ತಂತ್ರಿ- ಸಂಜೂನ ಗೆಳೆಯ

ಅಮ್ಮ, ಸರೋಜಿನಿ ಇತ್ಯಾದಿ.

ಇಷ್ಟು ಸಾಕು ಕತೆ ಅರ್ಥವಾಗಲು.

‘‘ಈಗಷ್ಟೆ ಏಳುವ ಮುಂಚೆ ನಡೆದ ಕನಸು, ತಾನು ಮೆರವಣಿಗೆಯ ಒಳಗಿದ್ದೇನೋ ಹೊರಗೋ ಸ್ಪಷ್ಟವಿಲ್ಲ. ಕನಸಿನಲ್ಲಿ ತುಸು ಸಾಗಿದ ಫೇರಿ, ಹಠಾತ್ತನೆ ದಿಡ್ಡಿ ಬಾಗಿಲೊಂದು ತೆರೆದಂತಾಗಿ ಅದರೊಳಗೆ ಹೊಕ್ಕಿತು. ಸ್ಮಶಾನದಲ್ಲಿ ಹೋಗುತ್ತಲೇ ಎಲ್ಲ ಮರೆಯಾಗಿ ಅಡಗಿಕೊಂಡಾಗ ಅಡಗಲು ಜಾಗ ಸಿಗದೇ ಭಯಾವಹ ಒತ್ತಡದಲ್ಲಿ ಎದುರಿಗಿದ್ದ ಶವ ಸುಡುವ ಜಾಗದಲ್ಲಿಯೆ ಅರೆ ಉರಿಯುತ್ತಿರುವ ಚಿತೆಯ ಮೇಲೇ ಮಲಗಿ ಬಿಡುತ್ತೇನೆ, ಕೈಕಾಲು ಕಣ್ಣು ಮುಚ್ಚಿಕೊಂಡು. ಎದ್ದ ರೋಮಗಳ ಹೆದರಿಕೆ ಇನ್ನೂ ಆರಿಲ್ಲ. ಎಚ್ಚರವಾಗಿ ಹೊರಗೆ ಕಿಟಕಿಯ ಹೊರಗೆ ಕಣ್ಣು ಹಾಯಿಸಿದಾಗ ಮನೆಯ ಮೊದಲ ಮಜಲಿಂದ ಕಾಣುವ ಜಿಟಿ ಜಿಟಿ ಮಳೆಯ ಮಚ್ಛರದಾನಿ. ತರಕಾರಿ ಪೇಟೆಯ ತೊಯ್ಯುವ …ವಿಧ ವಿಧ ತರಕಾರಿಗಳು. ಜನಗಳ ಮಧ್ಯೆಯೇ ನುಗ್ಗುವ ವಾಹನಗಳು’’ ……….

1) ಮುಂಬಯಿ ಬದುಕಿನ ಒಳಹೊರಗುಗಳನ್ನು ಪದರು ಪದರಾಗಿ ಬಿಡಿಸಿಡುತ್ತ ಕಥೆಯ ಚಿತ್ರಣ ಪ್ರಾರಂಭವಾಗುತ್ತದೆ. ಕಥೆಯಲ್ಲಿ ಕಿಟಕಿಯ ಮೂಲಕ ನೋಡಿದಾಗ ಮಳೆಯ ಹನಿಗಳನ್ನು ಮಚ್ಛರದಾನಿಗೆ ಹೋಲಿಸಿದ್ದು, ಚಿತೆಯ ಮೇಲೆ ಕೈಕಾಲು ಕಣ್ಣು ಮುಚ್ಚಿಕೊಂಡು ಮಲಗುವುದು, ಗಮನಿಸುವಂತಹ ಪ್ರತಿಮೆಗಳೊಂದಿಗೆ ಕತೆಗೆ ಚಾಲನೆ ಕೊಡುತ್ತವೆ. ಅತಿ ಸೂಕ್ಷ್ಮ ಮನಸ್ಸಿನೊಂದಿಗೆ, ಏಕಾಂತದಲ್ಲಿ, ಸಮಯವನ್ನು ಹೊಂದಿಸಿಕೊಂಡು ಓದುಬೇಕೆನಿಸುತ್ತದೆ. ಓದುಗ ಕಥೆಯ ಪಾತ್ರಗಳಲ್ಲಿ ತನ್ನನ್ನು ತಾ ಕಳೆದುಕೊಳ್ಳುವಂತಹ ನವಿರು ಸನ್ನಿವೇóಷಗಳ ಸೃಷ್ಟಿ ಗಮನಿಸಿ, ಸಂಜೂ ಅಪ್ಪನಿಗೆ ‘ದಿನೂಮಾ’ ಅನ್ನುವುದು, ಅಮ್ಮನಿಗೆ ಅಷ್ಟು ಇಷ್ಟವಿಲ್ಲ. ‘ಅಪ್ಪ’ ಎಂದು ಕರೆಯಲು ಕೇಳಿಕೊಳ್ಳುವ ಮಾತಿನ ಹಿಂದೆ ಅವಳ ಸಂಕಟವೇನಾದರೂ ಇರಬಹುದೆ ? ಅಥವಾ ಅದೊಂದು ಆಸೆಯೋ, ಗೊತ್ತಿಲ್ಲ. ಇಷ್ಟು ದೊಡ್ಡವನಾದರೂ ಅವನಿಗೆ ಹೇಳುವುದು ಅಮ್ಮನಿಗೆ ಸಾಧ್ಯವಾಗದೇ, ಕೊನೆಗೊಂದು ದಿನ ತನ್ನ ಅಭೀಪ್ಸೆ ತಿಳಿಸುತ್ತಾಳೆ……

‘’ಆದರೂ ಒಮ್ಮೆ ದಿನೂಮಾ ಇಲ್ಲದಾಗ, ಬೆಳೆದ ಮಗ ಏನಾದರೂ ತಿಳಿದುಕೊಳ್ಳುತ್ತಾನೋ ಅಂತ ತುಂಬ ದಿನದಿಂದ ಸಂಕಟದಿಂದ ಅದುಮಿಟ್ಟುಕೊಂಡಿದ್ದ ಏನನ್ನೋ ತಡವರಿಸುತ್ತ ಹೇಳಿದ್ದು ಅಸ್ಪಷ್ಟವಾಗಿದ್ದರೂ, ’’ಅವರನ್ನು ಅಪ್ಪಾ ಅಂತ ಕರಿಯೋ’ ಎಂದಿದ್ದು ತೀರ ಸ್ಪಷ್ಟವಾಗಿತ್ತು. ಅಂಗಲಾಚುವಿಕೆಯ ಅವಳ ದನಿಗೆ ಗಂಟಲು ಹಿಡಿಯುತ್ತದೆ ಸಂಜೂನಿಗೆ’’ ‘’ಹೀಗೆ ದಿನ ಕಳೆಯುತ್ತಿರಲು ಕೆಲಸದ ಇಂಟರವ್ಯೂಗಾಗಿ ಪೂನಾಕ್ಕೆ ಹೋಗಿ ಮರಳಿ ಬಂದಾಗ ಆಗಲೇ ಅಮ್ಮನನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದು ತಿಳಿದು ಗಾಬರಿಯಿಂದ ಅಲ್ಲಿ ಹೋದರೆ, ದಿನೂಮಾ (ಅಪ್ಪ) ಕೂಡ ಇಲ್ಲ. ಅಡ್ಮಿಟ್ ಮಾಡಿ ಹೋದವ ಇನ್ನೂ ಎಲ್ಲಿ ಇದ್ದಾನೊ, ಇನ್ನೂ ಯಾಕೆ ಬರಲಿಲ್ಲವೋ ಎಂಬ ದಿಗಿಲು. “ಒಳಗೆ ಅಮ್ಮನ ಬಳಿ ಇರಬಹುದು ಅಂತ ಏನೋ ವಿಲಕ್ಞಣ ನಿರಾಳತೆಯನ್ನು ಇಟ್ಟುಕೊಂಡಿರುತ್ತಾನೆ. ನಾಲ್ಕು ಗಂಟೆಗೆ ಸಂಜೂನನ್ನು ಹಾಗೂ ಅವನ ಗೆಳೆಯ ತಂತ್ರಿಯನ್ನು ಒಳಗೆ ಬಿಟ್ಟಾಗ ವೊದಲಿಗೆ ಅವನ ಎದೆ ಒಡೆದು ಹೋದ ಕಾರಣವೆಂದರೆ ಆ ವಿಶೇಷ ವಾರ್ಡಿನಲ್ಲಿ ಬಿಳಿಬಿಳೀ ಕಾಟುಗಳ ಮೇಲೆ ಮಲಗಿಸಿದ್ದ ಐದಾರು ರೋಗಿಗಳಲ್ಲಿ ಅಮ್ಮನನ್ನು ಗುರುತು ಹಿಡಿಯಲಾಗಲಿಲ್ಲ ಅವನಿಗೆ. ಆ ಒಂದು ಗುರುತು ಹಿಡಿಯಲಾಗದ ಸ್ಥಿತಿಯೇ ಅಮ್ಮನನ್ನು ಅವನಿಂದ ಬೇರೆ ಮಾಡಿದಂತೆ ಹಾಗೂ ಅಲ್ಲಿ ದಿನೂಮಾ ಇಲ್ಲ ಎಂಬ ದಿಗಿಲು ” ಎಂದೂ ಅಮ್ಮನನ್ನು ಹಾಗೆ ನೋಡದ ಅವಳ ಕೋಮಾದಲ್ಲಿದ್ದ ರಕ್ತಹೀನ ಮುಖ ದೇಹವನ್ನು ನೋಡಿ ನಖ ಶಿಖಾಂತ ನಡುಗುತ್ತಾನೆ. ಕೋಮಾದಲ್ಲಿದ್ದ ಅವಳು ಬೇರೆ ಲೋಕಕ್ಕೆ ಸಂದವಳಂತೆ ಗೋಚರಿಸಿ ಹಾಗೇ ಎದ್ದು ಬರುತ್ತಾನೆ’’.............

2) ತಾಯಿಯನ್ನು ಮೊದಲ ಬಾರಿ ಆಸ್ಪತ್ರೆಯ ಬಿಳಿ ಬಿಳಿ ಕಾಟುಗಳಲ್ಲಿ, ಗುರುತಿಸಲು ಸಾಧ್ಯವಾಗದೇ, ಆಗಲೇ ಆ ಸಂಬಂಧಗಳ ಅಗಲುವಿಕೆಯ ಸಣ್ಣ ಎಳೆಯಂತಹ ಭಯ, ದಿಗಿಲುಗಳ ಜೊತೆ ಅಲ್ಲಿ ಅಮ್ಮನ ಜೊತೆ ದಿನೂಮಾ (ಅಪ್ಪ) ಇಲ್ಲವೆನ್ನುವ ಕೊರತೆ, ತಾಯಿ ಇಲ್ಲದ ಅನಾಥ ಕಲ್ಪನೆ ದಿಗಿಲು ತುಂಬ ಸಹಜವಾಗಿ, ಹಾಗೂ ಸಂಜೂನ ತಕ್ಷಣದ ಮನಸ್ಥಿತಿಯಲ್ಲಿ ಎಷ್ಟು ಸಹಜವಾಗಿ ಪಡಿಮೂಡಿದೆ. ಅಮ್ಮನಿಂದ ದೂರ ಸರಿಯುವ ಕಲ್ಪನೆ ಎಲ್ಲೊ ಒಂದು ಕಡೆ ಬಹುಶ: ಇಂತಹ ಸನ್ನಿವೇಷಗಳನ್ನು ಎದುರಿಸಿದ ಬಹುತೇಕರು ಅನುಭವಿಸಿದ್ದರಬಹುದು ಅನ್ನಿಸುತ್ತಿದೆ. ನನಗಂತೂ ಇಂತಹ ಅನುಭವವಾಗಿದೆ, ತೀರ ಇತ್ತೀಚೆಗೆ.………….

‘’ದಿನೂಮಾ ಹಾಗು ಈ ತಂತ್ರಿಯ ತಂದೆ, ಹಳೆಯ ಗೆಳೆಯರು. ಅಮ್ಮ ಆಸ್ಪತ್ರೆಯಲ್ಲಿದ್ದಾಗ, ಈಗ ಆ ಗೆಳೆಯನ ಮನೆಯಿಂದಲೇ ದಿನದ ಊಟ ಬರುತ್ತಿದೆ. ಕೊನೆಗೂ ಅದೊಮ್ಮೆ ಅಮ್ಮನಿಗೆ ಎಚ್ಚರವಾದಾಗ ಅವಳ ಮಾತುಗಳನ್ನು ಕೇಳುತ್ತ ಕುಳಿತವನಿಗೆ ‘ಅಪ್ಪನೊಂದಿಗೆ, ಅವನ ಸ್ವಭಾವದೊಂದಿಗೆ ಹೊಂದಿಕೊಳ್ಳಲು ಹೇಳುತ್ತಾಳೆ. ಅವಳು ಬದುಕಿನಲ್ಲಿ ಏನೇನು ತಪ್ಪಿಸಿಕೊಂಡಳು ಎಂಬುದು ಅವಳಿಗರಿವಿಲ್ಲದೇ ಅವಳ ಬಾಯಿಂದ ಹೊರ ಬರುವುದನ್ನು ಕಾಯುತ್ತ ಆಲಿಸುತ್ತಾನೆ ಸಂಜೂ.’ಅಮ್ಮನಿಗೆ ಏನಾಗಿದೆ ಎಂದು ಯಾರೂ ಹೇಳುತ್ತಿಲ್ಲ, ಡಾಕ್ಟರರನ್ನು ಕಂಡು ಕೇಳೋಣವೆಂದರೆ ಅಮ್ಮನ ಬೇಡವೆಂಬ ರಂಪಾಟ. ದಿನೂಮಾನೊ ಇವನಿಲ್ಲದ ವೇಳೆಯಲ್ಲಿಯೇ ಬಂದು ಅಮ್ಮನನ್ನು ಕಾಣುತ್ತ, ಡಾಕ್ಟರುಗಳೊಂದಿಗೆ ವ್ಯವಹರಿಸುತ್ತ, ಇವನ ಕಣ್ಣು ತಪ್ಪಿಸುತ್ತಿದ್ದ. ಸಂಜೂಗೆ ತನ್ನ ಬಗ್ಗೆ ತನ್ನ ಊಟ ಇತ್ಯಾದಿಗಳ ಬಗ್ಗೆ ವಿಚಾರಿಸಿಕೊಳ್ಳುವುದನ್ನೂ ಅವಳು ಮರೆಯುವಂತೆ ಮಾಡಿ ಅವಳನ್ನು ಹಿಡಿದಿರುವ ಆ ಸಂಗತಿ ಯಾವುದು? ಎಂಬ ದಿಗಿಲು. ಇಂತಹ ದಿನಗಳಲ್ಲಿಯೇ ಏಕೆ ಆಫೀಸ್ ಕೆಲಸದ ಮೇಲೆ ಬೇರೆ ಊರಿಗೆ ದಿನೂಮಾ ಹೋದ. ಗೆಳೆಯ ತಂತ್ರಿಯ ಅಪ್ಪನ ಮುಂದೆ ತನ್ನ ದಿಗಿಲನ್ನು ಹೇಳ ಹೋದವನಿಗೆ ಮರಳಿ ಇವನಿಗೇ ಬುದ್ಧಿವಾದ ಹೇಳಿದ ಅವರಿಗೆ, ‘ಈಗ ಇಲ್ಲ ಅಂದ ಮಾತ್ರಕ್ಕೆ ನಿನ್ನ ಅಪ್ಪನಿಗೆ ಅಮ್ಮನ ಮೇಲೆ ಕಾಳಜಿ ಇಲ್ಲವೆಂತಲ್ಲ, ಅವರಿಗೆ ಜವಾಬ್ದಾರಿಗಳಿವೆ’ ಎಂದೆಲ್ಲ ಒಗಟಾಗಿ ಮಾತಾಡಿದಾಗ ಇನ್ನೂ ದಿಗಿಲಾಗುತ್ತದೆ. “ ಅವರಿಗೂ ಅವರ ಕಷ್ಟ ಇದೆ. ಅವರು ನಿಷ್ಕಾಳಜಿ ಅಂತ ನಿನಗೆ ಅನಿಸಬಾರದು” ಅಂತ ವಿಚಿತ್ರ ರೀತಿಯಲ್ಲಿ ತಮ್ಮ ಹಿರೇತನ ತೋರ್ಪಡಿಸುತ್ತಾರೆ. ಆಸ್ಪತ್ರೆಯಲ್ಲಿ ಬಾಚಣಿಗೆಯಿಂದ ಅಮ್ಮನ ಸೇವೆ ಮಾಡುತ್ತ, ಜಣಕಾಗಿದ್ದ ಅವಳ ಕೂದಲು ಬಾಚಲು ಸಹಕರಿಸುತ್ತ ದಿನಗಳು ಕಳೆಯುತ್ತಿದ್ವವು’’…………..

3) ಅಮ್ಮ ಏಕೆ ಆಸ್ಪತ್ರೆ ಸೇರಿದ್ದು ಎಂಬುದು ಇನ್ನು ಒಗಟಾಗಿಯೇ ಇದೆ ಕಥಾನಾಯಕನಿಗೆ. ಅದನ್ನು ತಿಳಿದುಕೊಳ್ಳಲು ಅಮ್ಮನ ಆಕ್ಷೇಪಣೆ ಏಕೆ ಎಂಬ ಸಂಗತಿಗಳು ಅವನಿಗೆ ವಿಚಿತ್ರ ಒಗಟಾಗಿ ಗೋಚರಿಸುತ್ತವೆ. ಸಹಜವಾಗಿ ಹೋದಾಗಲೂ, ಅಮ್ಮನ ಅನಾರೋಗ್ಯದ ಕುರಿತು ಹೇಳದೇ, ಅಪ್ಪನ ಗೆಳೆಯನ ಬುದ್ಧಿವಾದ, ಇದೆಲ್ಲ ಏಕೆ, ಅಪ್ಪನನ್ನು ಎತ್ತಿಕಟ್ಟಿ ಮಾತನಾಡುವ ಹಿರೇತನವೇಕೆ ತಂತಿಯ ತಂದೆಗೆ, ಅಮ್ಮನ ಹತ್ತಿರದಲ್ಲಿ ಕಾಣಿಸಿಕೊಳ್ಳದ ಅಪ್ಪನ ನಡವಳಿಕೆ, ಗೋಜಲು ಗೋಜಲಾಗಿ ಕಾಡುತ್ತವೆ, ಸಂಜೂಗೆ. ತನ್ನ ಬಗ್ಗೆ ತನ್ನ ಆರೋಗ್ಯ, ದಿನ ನಿತ್ಯದ ಚಟುವಟಿಕೆ, ಊಟ ಇತ್ಯಾದಿಗಳ ಬಗ್ಗೆ ವಿಚಾರಿಸಿಕೊಳ್ಳುವುದನ್ನೂ ಅವಳು ಮರೆಯುವಂತೆ ಮಾಡಿ ಅವಳನ್ನು ಹಿಡಿದಿರುವ ಆ ಸಂಗತಿ ಯಾವುದು? ಎಂಬ ದಿಗಿಲು, ಸಂಜೂಗೆ, ವಿಷಯಗಳು ಅಷ್ಟಷ್ಟೇ ತೆರೆದುಕೊಳ್ಳುತ್ತ ಕಥೆ ಸಾಗುತ್ತದೆ.

4) ಅಮ್ಮ ಇನ್ನೂ ಆಸ್ಪತ್ರೆಯಲ್ಲಿದ್ದಾಗ, ರಾತ್ರಿಯ ಸಮಯದಲ್ಲಿ, ಸಂಜೂ ಮನೆಯಲ್ಲಿರುತ್ತಾನೆ. ಹೀಗೆಯೇ ನಿದ್ದೆ ಹತ್ತದ ಚಡಪಡಿಕೆಯ ಒಗಟಿನ ರಾತ್ರಿಗಳು. ಇಂತಹುದೇ ಒಂದು ರಾತ್ರಿ ಮನೆಯಲ್ಲಿದ್ದಾಗ………………

‘’ ಹೀಗೆಯೇ ಒಂದು ದಿನ ರಾತ್ರಿ ಕೆಳ ಫ್ಲೋರಿನ ಗರಾಜಿನಲ್ಲಿ ರಾತ್ರಿಯಿಡೀ ಕೆಲಸ ನಡೆದಿದ್ದಾಗ, ಸೈಲೆನ್ಸರ್ ಇಲ್ಲದ ವೋಟಾರ್ ಬೈಕನ್ನು ಎಕ್ಷಲರೇಟ್ ಮಾಡಿ ಟೆಸ್ಟ್ ಮಾಡುತ್ತಿದ್ದ ಸದ್ದು ತೀರ ಭೀಕರವಾಗಿ, ಗರಾಜಿನ ವೆಲ್ಡಿಂಗಿನ ಜ್ವಾಲೆ ಕತ್ತಲ ಅವಕಾಶವನ್ನು ಕಿರ್ರೆಂದು ಬೆಳಗುತ್ತಿತ್ತು. ನಿದ್ದೆ ಬಾರದೇ ಒದ್ದಾಡುತ್ತಿದ್ದಾಗ, ಕರಗಂಟೆ ಅಬ್ಬರಿಸಿದಾಗ ಕೆದರಿದ ಕೂದಲಿನ ದಿನೂಮಾ ನೇರವಾಗಿ ಹೋಗಿ ಧಕ್ಕನೆ ಬೆತ್ತದ ಕುರ್ಚಿಯ ಮೇಲೆ ಕೂತು ಒಂದೇ ಉಸಿರಿನಲ್ಲಿ, “ಸಂಜೂ, ಅವಳು ಹೋದಳು” ಎಂದ. ಬೆಳಗಾಗುವುದನ್ನೇ ಕಾಯುತ್ತ ಹಾಗೋ ಹೀಗೋ ರಾತ್ರಿ ಕಳೆದರು. “ಒಳಗೆ ಹೋಗಿ ಅಡಿಗೆ ಮನೆಯಲ್ಲಿ ನಿಲ್ಲುವ ಸಂಜೂ, ಒಂದುಸಾರಿ ಒಲೆ, ಸ್ಟೋವು, ಬೀಸುಕಲ್ಲು, ಮೇಲೆ ವರಿಗೆ ಹರಿವಿಟ್ಟ ಅಮ್ಮನ ತಿಳಿನೀಲಿ ಹೂವಿನ ಸೀರೆ ಇವೆಲ್ಲ ಇನ್ನು ಅಮ್ಮನ ನೆನಪು ತರಲು ಮಾತ್ರ ಅಂದುಕೊಳ್ಳುತ್ತಾನೆ. ಬೆಳಿಗ್ಗೆಯೇ ಆಸ್ಪತ್ರೆಗೆ ತೆರಳಿ ಶವ ಸ್ಮಶಾನಕ್ಕೆ ಒಯ್ಯುವಾಗ ತಲೆಯಲ್ಲಿ ನಾನಾ ಯೋಚನೆಗಳೆಲ್ಲ ಸುನ್ನವಾಗಿ ತಲೆಗೋರುತ್ತಿದ್ದವು. “ದಿನೂಮಾ ರಾತ್ರಿಯ ಬೀದಿಯಲ್ಲಿ ಒಬ್ಬನೇ ನಡೆದು ಮನೆಗೆ ಬರುವಾಗ ಅವನ ತಲೆಯಲ್ಲಿ ಏನೇನು ನಡೆದಿರಬಹುದು…… ಅಂತೆಲ್ಲ ಯೋಚನೆಗಳು”

5) ಇವರಿಬ್ಬರ ಕೊಂಡಿಯಂತಿದ್ದ ಅಮ್ಮ ಸತ್ತಾಗ, ಯಾವುದೇ ದು:ಖವಿಲ್ಲದ, ಭೋರಿಡುವ ದು:ಖ ಇಬ್ಬರಿಗೂ ಅಗುವುದಿಲ್ಲ. ಆ ಮನೆಯಲ್ಲಿ ಆ ರಾತ್ರಿ ತಂದೆ ಮಗ ಇಬ್ಬರೂ ಇದ್ದರೂ, ಮನುಷ್ಯನಿಗೆ ಸಹಜವಾಗಿ ಆವರಿಸಬೇಕಾದ ದು:ಖ ಕಣ್ಣೀರಾಗಿ ಹರಿಯದೇ, ಕೇವಲ ಔಪಚಾರಿಕತೆಗೆ ಇಬ್ಬರೂ ಬೆಳಗಾಗುವುದನ್ನು ಕಾಯುತ್ತ ರಾತ್ರಿ ಕಳೆಯುವುದು, ಮುಂಬಯಿ ಬದುಕಿನ ಸಂಬಂಧ, ಕ್ಷೀಷೆಗಳ ಒಂದು ಮಗ್ಗುಲನ್ನು ಹೀಗೂ ಪರಿಚಯಿಸುತ್ತದೆಯೋ, ನಿನ್ನೆವರೆಗೂ ಇದ್ದ, ಒಂದು ಸಂಬಂಧ, ಬಾಳೆಲೆ ಉಂಡು ಬಿಸಾಕಿದಂತೆ, ಈಗ ಕೇವಲ ಔಪಚಾರಿಕವಾಗಿ, ಶುಷ್ಕವಾಗಿ ಅದು ಹೇಗೆ, ಬೆಳಗಾಗುತ್ತಲೇ, ಮಾಡುವ ಆ ಮುಂದಿನ ಕ್ರಿಯೆಗೆ ಹೆಚ್ಚು ಒತ್ತುಕೊಡುತ್ತದೆ ಈ ಮೆಟ್ರೊ ಬದುಕು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಬಹುದು, ಇಬ್ಬರೂ ಮನೆಯಲ್ಲಿ ಇದ್ದರೂ ಎರಡು ಭಿನ್ನ ವ್ಯಕ್ತಿಗಳಾಗಿ ಇರುತ್ತಾರೆ, ಮನೆಯ ಒಂದಾದ ಸದಸ್ಯರಾಗಿ ಅಲ್ಲ ಎನ್ನುವುದನ್ನು ಗಮನಿಸಬಹುದು. ಆ ಜೀವದ ಅಗಲಿಕೆಯ ನೋವು ಅಷ್ಟಾಗಿ ಅವರಿಬ್ಬರನ್ನು ಕಾಡುವುದಿಲ್ಲವೆಂಬುದು, ಬದುಕು ಅದೆಷ್ಟು ಯಾಂತ್ರಿಕವಾಗುತ್ತಿದೆ, ಸಂಕೀರ್ಣತೆಯಲ್ಲಿ ಕಳೆದುಹೋಗುತ್ತಿದೆ ಎಂಬುದರ ಸಂಕೇತವೇನೋ?...............

‘’ಈ ನಡುವೆ ಸಂಜೂಗೆ ಕಾರ್ಖಾನೆಯಲ್ಲಿ ಅಪ್ರೆಂಟಿಸ್ ಕೆಲಸ ಸಿಕ್ಕು ಪುಡಿಗಾಸಾದರೂ ಸಿಗುತ್ತಿದೆ. ತಂತ್ರಿಯ ತಂದೆ, “ತುಸು ಗಂಭೀರನಾಗಬೇಕು ನೀನು. ಜವಾಬ್ದಾರಿ ಬಂದಿದೆ” ಅಂತ ಬುದ್ಧಿವಾದ ಹೇಳಿದಾಗ ಇದು ಅಪ್ಪನ ಕರಾಮತ್ತು ಎಂದು ತಿಳಿಯುವಷ್ಟು ಪ್ರಬುದ್ಧ ಈಗ. ಅಮ್ಮ ಆಸ್ಪತ್ರೆ ಸೇರಿದ ಮತ್ತು ತನ್ಮೂಲಕ ಅಮ್ಮನ ಸಾವಿನ ಕಾರಣವನ್ನು ತಂತ್ರಿ ಕೊನೆಗೂ ಹೇಳಿದ. “ಯಾವುದಾದರೂ ಬೇರೆಯವರಿಂದ ನಿನಗೆ ತಿಳಿಯುವುದಕ್ಕಿಂತ ನನ್ನಿಂದಲೇ ತಿಳಿಯುವದು ಒಳ್ಳೆಯದು ಅನಿಸಿತು, ಆದ್ದರಿಂದ ಹೇಳಿದೆ – ಎಂದು ತನ್ನನ್ನು ತುಂಬ ಹಳಹಳಿಯಿಂದ ಸಮರ್ಥಿಸಿಕೊಂಡು ಹೊರಟುಹೋದ.” ಆದದ್ದಿಷ್ಟೆ ದಿನೂಮಾ, ಅಮ್ಮನ ಗರ್ಭಪಾತ ಮಾಡಿಸಿದ್ದ. ರಕ್ತಹೀನಳಾಗಿದ್ದ, ಏನೂ ನಿರೀಕ್ಷಿಸದ ಅಮ್ಮನಿಗೆ ಅದು ಒಗ್ಗಲಿಲ್ಲ. ಇದಿಷ್ಟೇ ಕಾರಣ. “ಆ ಕಾರಣ ನನಗೆಲ್ಲಿ ಗೊತ್ತಾಗಿದೆಯೋ ಅಂತ ಅಮ್ಮ ಅದೆಂಥ ಸಂಕಟಪಟ್ಟಳು- ಹುಚ್ಚಿಯಂತೆ ಎಳೆಮಗುವಿನಂತೆ .. ಡಾಕ್ಟರಿಂದ ನನ್ನನ್ನೆಳೆದು ರಂಪಮಾಡಿದ ಅಮ್ಮನ ಆ ನೋವಿನ ಎಳೆ ಈಗಲೇ ಕಣ್ಣೆದುರು ಹುರಿಗೊಂಡಂತಾಗುತ್ತದೆ. …….ಅಮ್ಮ ಕೋಮಾದಲ್ಲಿದ್ದ ದೃಶ್ಯ ಮತ್ತೊಮ್ಮೆ ಕಣ್ಣಿಗೆ ಕವಿದು ವೊಟ್ಟ ವೊದಲ ಬಾರಿಗೆ ಅಳುತ್ತಾನೆ”

6) ಸಂಜೂನ ವಯಸ್ಸಿನ ಮಗನಿರುವಾಗ, ತಾನು ಗರ್ಭಿಣಿ ಎಂಬ ಸತ್ಯ ಮಗನಿಗೆ ತಿಳಿಯಬಾರದೆನ್ನುವ ತಾಯಿಯ ಸಂಕಟ ಒಂದೆಡೆ, ಅಪ್ಪ ಯಾಕೆ ತನ್ನ ಕಣ್ತಪ್ಪಿಸಿ ಅಮ್ಮನನ್ನು ನೋಡಲು ಬರುತ್ತಾನೆ, ಎಂಬೆಲ್ಲ ಒಗಟುಗಳಲ್ಲಿ ಅದೊಂಥರ ತಪ್ಪೊಪ್ಪಿಗೆಯ ನಡವಳಿಕೆ ತಂದೆ, ತಾಯಂದಿರಲ್ಲಿ ಕಂಡುಬರುತ್ತದೆ, ಬೆಳೆದ ಮಗನಿಗೆ ಈ ವಿಷಯ ತಿಳಿಯದೇ, ಸುಖಾ ಸುಮ್ಮನೆ ಗೌಪ್ಯವಾಗಿ ಆಗಬೇಕೆಂದು ಅಂದುಕೊಂಡವರಿಗೆ, ತಮ್ಮ ಅನಿಸಿಕೆಗಳ ವಿರುದ್ಧ ನಡೆಯುವ, ತಮ್ಮ ಕೈಮೀರಿ ನಡೆಯುವ ಈ ಸಂಗತಿ ಅವರಿಬ್ಬರಿಗೂ ನುಂಗಲಾರದ, ಹೇಳಲಾರದಾಗಿತ್ತು ಎನ್ನುವುದೇ ಸಮಸ್ಯೆಯ ಮೂಲ. ಸಂಬಂಧಗಳ ಸೂಕ್ಷ್ಮತೆ ಎಂದರೆ ಇದು ಅಲ್ಲವೆ? ಬಹುಶ: ತಂದೆ, ತಾಯಿ, ಮಕ್ಕಳ ಸಂಬಂಧಗಳು ಮುಜುಗುರ ಅನುಭವಿಸುವ, ಯಾವುದೇ ಕಾಲ ಘಟ್ಟವನ್ನು ಮೀರಿದ ಸಂಗತಿ ಇಂಥವು ಎಂದು ಅನಿಸದಿರದೇ, ಇಂತಹ ಸಂಬಂಧ ಸೂಕ್ಷ್ಮ ಭಾವನೆಗಳ ಅನಾವರಣ ಅನುರಣನವಾಗುವ ಸಾಲುಗಳು ಮನಸೆಳೆಯುತ್ತವೆ. …………..

‘’ಈ ನಡುವೆ ಅಮ್ಮನ ಕಡೆಯವರು ಬಂದು ಅವಳ ಸಾವಿನ ಕುರಿತು ತಕರಾರು ಮಾಡಿ ಹೋದಾಗ, ದಿನೂಮಾ “ದರಿದ್ರ ಬುದ್ಧಿ” ಎನ್ನುತ್ತ ಒಳಗೆ ಬಂದವ ಇವನು ಏನಾಯಿತು ಎಂದು ಕೇಳಲಿ ಎಂದು ಶತಪಥ ಮಾಡಿದ. ತನ್ನ ಅತಿಬುದ್ಧಿವಂತಿಕೆಯ ಮೌನ ಬೇಡ ಎಂದು ‘ಏನಾಯಿತು?’ ಎಂದು ಕೇಳಿದಾಗ, ….” ಏನಿಲ್ಲ ದರಿದ್ರ ಬುದ್ಧಿ. ಅವಳ ಕಡೆಯವರೇ ಹಾಗೆ. ಲಾಭ ಉಂಟೋ ಎಲ್ಲ ಬೇಕು….” ಅಂತೇನೋ ಹೇಳುತ್ತ ಹೊರ ಕೋಣೆಗೆ ನಡೆದುಬಿಟ್ಟ. ದಿನೂಮಾ “ಅವಳು” “ಅವಳು” ಎನ್ನುವುದರಲ್ಲಿ ಸಂಜೂಗ್ಯಾಕೋ ನಿರ್ದಯ ಧ್ವನಿ ಕೇಳುತ್ತಿತ್ತು. ತಕ್ಷಣ ಆ “ಅವಳೇ” ತನ್ನ ಬಳಿ “ಅವರನ್ನು ಅಪ್ಪಾ ಅಂತ ಕರಿಯೋ” – ಎಂದು ಗುಟ್ಟು ಹೇಳಿದ ಹಾಗೇ ಹೇಳಿದ್ದು ನೆನಪಿಗೆ ಬಂದು ವಿಚಿತ್ರ ಉಮ್ಮಳ ಗದ್ಗದಕ್ಕೆ ಉಕುತ್ತಿತ್ತು. ಹೀಗೆ, “ಹೀಗೇ ಏನೇನೋ ಘಟನೆಗಳಿಗೂ ಅವುಗಳ ಹಿಂದಿನ ಭಾವನೆಗಳಿಗೂ ತಾಳೆ ಕೂಡುವುದು ಯಾವಾಗ? ಗೊತ್ತಾಗಲಿಲ್ಲ”

7) ಅಪ್ಪನಿಗೆ, ಅಮ್ಮನ ಮೇಲೆ, ಕೇವಲ ‘ಅವಳು’ ಎನ್ನುವ ಸಂಬಂಧದ ಗಂಧದ ಗಾಳಿ ಇಲ್ಲದ, ಒಣ ಶಬ್ದಗಳ ಮಾತು, ಆ ಮಾತಲ್ಲಿ ಪ್ರೀತಿ ಪ್ರೇಮ, ಮಮಕಾರಗಳ ಕೊರತೆಯ ಅಂಶವನ್ನು ತಟ್ಟನೇ ಗುರುತಿಸಿ, ಎಲ್ಲಿಯೂ ನೇರಾ ನೇರ ಹೇಳದೇ, ಓದುಗನಿಗೆ ಮನದಟ್ಟು ಮಾಡುವ ಕಲೆ ಜಯಂತರ ಕಥೆಯ ವೈಶಿಷ್ಟ್ಯ. ಓದಿದಂತೆ ತೆರೆಯುತ್ತ ಸಾಗುವುದು ಕಥಾನಕದ ಸರಳತೆ. ಸಂಜೂನ ಒಳ ಧ್ವನಿಯ ತರಂಗಗಳು ಕಥೆಯ ಓಘಕ್ಕೆ ಕೀಲೆಣ್ಣೆ ನೀಡುತ್ತ ಸಾಗುತ್ತವೆ……………

‘‘ಒಮ್ಮೆ ತಂತ್ರಿಯ ತಾಯಿ ತುಸು ಅಸ್ವಾಸ್ಥ್ಯದಿಂದ ನರಳುತ್ತಿದ್ದಾಗ ದಿನೂಮಾ ನಿಯಮಿತವಾಗಿ ಹೋಗಿ ಹಣ್ಣು ಹಂಪಲು ಕೊಟ್ಟು ಬರುತ್ತಿದ್ದ. ಅವನು ಅಲ್ಲಿದ್ದಾಗಲೇ ಒಮ್ಮೆ ಸಂಜೂ ಹೋಗಿಬಿಟ್ಟ. ಅವನಿಗೆ ಯಾಕೆ ಮುಜುಗುರವಾಯಿತೋ ಈಗಲೂ ಅರ್ಥವಾಗುತ್ತಿಲ್ಲ. ಇವನನ್ನ್ನು ಕಂಡವನೇ ಗೊಂದಲಗೊಂಡ. “ನನ್ನ ಅಮ್ಮನ ಅಸ್ವಾಸ್ಥ್ಯಕ್ಕೆ ತೋರದ ಅಕರಾಸ್ಥೆ ಇಲ್ಯಾಕೆ ತೋರಿಸುತ್ತೀ?”… ಎಂತೆಲ್ಲಾ ನಾನು ಮನಸ್ಸಿನಲ್ಲಿ ಬಗೆಯಬಹುದೆಂದು ತಬ್ಬಿಬ್ಬಾದನೋ ಏನೋ. ’ಮೊದಲು ಊಟ ಮಾಡಿಯೇ ಹೋಗುತ್ತೇನೆಂದಿದ್ದನಂತೆ. ಗೊಂದಲದಲ್ಲಿ ಅದನ್ನೂ ಮರೆತು ಹೊರಟು ಬಂದುಬಿಟ್ಟ. ನಾನು ಊಟ ಮಾಡಿ ಬಂದೆ. ಬಂದಾಗ ದಿನೂಮಾ “ ಆ ಸುಭಾಸ ನೋಡು, ಕೆಲಸಕ್ಕೆ ಹೇಗೆ ನಿಷ್ಠೆ ತೋರಿಸುತಾನೆ, ನಿನ್ನ ಅಪ್ರೆಂಟಿಸ್ ಶಿಪ್ ಮುಗಿಯಲಿಕ್ಕೆ ಬಂತು. ಬೇರೆ ಪ್ರಯತ್ನದ ಲಕ್ಷಣವೇ ಇಲ್ಲ ನಿಂದು” ಎಂದು ಮುಗಿಬಿದ್ದ. ಇದಕ್ಕೆ ಈ ವೇಳೆ ಬಿಟ್ಟರೆ ಬೇರೆ ಅವಕಾಶವೇ ಇಲ್ಲ ಎನ್ನುವ ಅವಸರ ಅವನ ಸರಣಿಗಿತ್ತು. ಅವನ ಎಂತೆಂಥ ನೋವುಗಳಿಗೂ ಇಂಥ ಸಿಟ್ಟು ಬಾಯಾಗಬಹುದೆಂದು ಹಾಗೇ ಸುಮ್ಮನೆ ಉಳಿದ’’…………..

8) ಹೀಗೆಯೇ ದಿನಗಳು ದೂಡುತ್ತಿದ್ದಾಗ, ಒಂದೇ ಮನೆಯಲ್ಲಿದ್ದರೂ, ಇತ್ತ ಸಂಜೂನ ನೌಕರಿ ಬೇಟೆ ಮಾಡುತ್ತಿದ್ದವನಿಗೆ, ಅತ್ತ ದಿನೂಮಾ ನಿಧಾನಕ್ಕೆ ದೂರ ದೂರ ಸರಿಯುತ್ತಿರುವ ಅನಿಸಿಕೆ ಸಂಜೂಗೆ, ಹೀಗಿರಲೊಂದು ದಿನ,………..

‘’ರಾತ್ರಿ ಕಿಟಕಿಯ ಬಳಿ ನಿಂತ ಆಕೃತಿ ಯಾರೆಂದು ಅಲುಗಾಡದೇ ಕಣ್ತೆರೆದು ನಿಟ್ಟಿಸಿದ. ಅದು ದಿನೂಮಾ. ‘ನಿದ್ದೆಗೆಡಿಸುವ ತನಕ ಅವನನ್ನು ಕಾಡುತ್ತಿರುವುದು ಏನು? ಕಾಡುವಷ್ಟರ ಮಟ್ಟಿಗಾದರೂ ನಿಜವಾಗಿರುವ ಆ ಸಂಗತಿಯನ್ನು ಮಾತಿನ ಮೂಲಕ ಹೇಗೆ ಭರಿಸಲಿ ತಾನು … ನಿದ್ದೆ ಬೀಳಲಿಲ್ಲ ಅವನಿಗೆ.’…………..

9) ತನ್ನ ತಾಯಿಗೆ, ತೋರದ ಅಕರಾಸ್ಥೆಯನ್ನು ದಿನೂಮಾ, ತನ್ನ ನಡವಳಿಕೆಯ ಮೂಲಕ, ತನ್ನ ಗೆಳೆಯನ ತಾಯಿಗೆ ತೋರುತ್ತಿರುವ ಸೂಕ್ಷ್ಮತೆಯನ್ನು ಎಳೆ ಎಳೆಯಾಗಿ ಬಿಡಿಸಿಡುವದಿದೆಯಲ್ಲಾ, ಇದೇ ಈ ಕಥೆಯ ನಿರೂಪಣಾ ಶೈಲಿ, ಜೀವಾಳ. ರೀಯಲ್ ಆಬ್ಸರ್ವೇಶನ್. ಅಪ್ಪನ ಪ್ರತಿ ನಡವಳಿಕೆಯನ್ನು ಕರಾರುವಾಕ್ಕಾಗಿ ಗಮನಿಸುವ ಸಂಜೂ, ತನ್ನ ತಪ್ಪಿನ ಅರಿವನ್ನು ಮುಚ್ಚಿಕೊಳ್ಳಲು ಮಗನಿಗೆ, ನೌಕರಿಗಾಗಿ ಹುಡುಕಲು ಹೇಳುವುದು, ತುಂಬ ಸಂಕೀರ್ಣ ಬದುಕಿನ ತಲ್ಲಣಗಳ, ತಾಕಲಾಟಗಳ ನವಿರು ಪರಿಚಯವನ್ನು ಈ ಸಾಲುಗಳು ಬಿಂಬಿಸುತ್ತವೆ, ರಾತ್ರಿ ಅಪ್ಪ ಕಿಟಕಿಯ ಹತ್ತಿರ ನಿಂತು ಹೊರಗೆ ದಿಟ್ಟಿಸುತ್ತ, ಅದೇನೋ ಯೋಚಿಸುತ್ತಿದ್ದುದನ್ನು ಗಮನಿಸುವ ಮಗ, ಅಷ್ಟು ಗಂಭೀರವಾಗಿರುವ ಸಂಗತಿ ಏನಿರಬಹುದು ಎನ್ನುವ ಮನದೊಳಗಿನ ಅವಲೋಕನಗಳ ದ್ವಂದ್ವ, ತುಂಬ ಸೊಗಸಾಗಿ ನಿರೂಪಿತವಾಗಿದೆ, ನವಿರು ಸಂಬಂಧಗಳ, ಮಾನಸಿಕ ತೊಳಲಾಟಗಳ ತಳಮಳಗಳು, ತುಮುಲಗಳು ಅರಳುತ್ತ, ಅಪ್ಪನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಹೆಣಗುವ ಪರಿ, ಕೆಲವು ವಿಲಕ್ಷಣ ಪ್ರಶ್ನೆಗಳಿಗೆ ಸಿಗದ ಉತ್ತರಗಳು, ಕಥಾನಾಯಕನ ಜೊತೆ ಓದುಗನಿಗೂ ಪ್ರಶ್ನೆಗಳ ಕುತೂಹಲ ಅವನೊಂದಿಗೆ ಸಾಗುತ್ತದೆ. ಮನಸ್ಸಿನಲ್ಲಿ ಮೂಡಿದುದನ್ನೆಲ್ಲ ಅಕ್ಷರಗಳನ್ನಾಗಿ ಮಾಡಲು ಸಾಧ್ಯವಿಲ್ಲ, ಆದಾಗ್ಯೂ ಇದರಲ್ಲಿ ಶತಶ: ಜಯಂತ ಯಶಸ್ವಿಯಾಗುತ್ತಾರೆ, ಭಾವನೆಗಳ ಒಂದೊಂದು ಎಳೆ ಎಳೆಯು ಪರಕಾಯ ಪ್ರವೇಶದಂತೆ, ಸೊಗಸಾದ ನಿರೂಪಣೆ!. ಜಯಂತ ಜಿ ಹ್ಯಾಟ್ಸ್ ಆಫ್…………..

‘’ನಡುರಾತ್ರಿ ಎಂದಿನಂತೆ ಎದ್ದಾಗ ಹೊರಗೆ ದೀಪವಿತ್ತು. ಹೊರಬಂದಾಗ ಸೋಫಾ ಮೇಲೆಯೇ ಒರಗಿ ಮಲಗಿದ್ದ, ದಿನೂಮಾ. ಸೋಫಾದ ಮೇಲೆ ಅಮ್ಮ ಮನೆಯಲ್ಲಿ ಸಾಮಾನ್ಯವಾಗಿ ಉಡುತ್ತಿದ್ದ ಬಿಳಿಹೂವಿನ ತಿಳಿ ಪತ್ತಲ ಹಾಸಿಕೊಂಡಿದ್ದ. ಎದೆ ಭಾರವಾಯಿತು. ಒಳಗೆ ಹೋಗಿ ಚಾದರ ತಂದು ಹೊದೆಸಿ ದೀಪವಾರಿಸಿ ಒಳ ಬಂದು ಕಿಟಕಿಗೆ ನಿಂತ. ಕೆಳಗೆ ಒದ್ದೆ ರಸ್ತೆ ಹಗಲೆಲ್ಲ ತರಕಾರಿ ಮಾರಿದ ಅವಶೇಷಗಳಲ್ಲಿ ರಾಡಿಯಾಗಿ ಮಂಕು ಬೀದಿ ದೀಪಗಳಡಿಗೆ ನಿದ್ದೆಯಿಲ್ಲದೆ ಜಾಗರಣೆ ಮಾಡುತ್ತಿತ್ತು.’’…………..

10) ಅಮ್ಮನಿಗೆ ಕೇವಲ ‘ಅವಳು’ ಎನ್ನುವ ಶುಷ್ಕ ಸಂಬಂಧವನ್ನು ಅಪ್ಪನಲ್ಲಿ ಗುರುತಿಸಿದ್ದರೂ, ದಿನೂಮಾ, ತನ್ನ ಅಮ್ಮನ ಆ ಸೀರೆಯ ಮೇಲೆ ಮಲಗಿದ ಪ್ರತಿಮೆ, ಮನುಷ್ಯ ಹೊರಗೆ ಹೇಗೆ ತೋರ್ಪಡಿಸಿದರೂ, ಆಂತರ್ಯದಲ್ಲಿ ಪ್ರೇಮಿಯೊಬ್ಬನಿರುತ್ತಾನೆ, ಸಂಬಂಧಗಳ ಒಳ ಆಳ, ಪ್ರೀತಿಯ ಝರಿ ಆಳದಲ್ಲೆಲ್ಲೋ ಪ್ರವಹಿಸುತ್ತ, ಮನುಷ್ಯ ಸಂಬಂಧಗಳನ್ನು ಬಿಡಿಸಲಾರದಂತೆ ಹೆಣಿದುಬಿಟ್ಟಿರುವ ಅಂಶ ನವಿರಾಗಿ ನಿರೂಪಿತವಾಗಿದೆ, ಮಾನವ ಪ್ರೀತಿ, ಪ್ರೇಮ ಸಂಬಂಧಗಳ ಇಂಬು, ಹೊರ ಜಗತ್ತಿಗೆ ತೋರಿಕೆಯಲ್ಲಿ ಬೇರೆ ಬೇರೆಯಾಗಿದ್ದರೂ, ಒಳ ದನಿ ಹೇಗೆ ದಾಖಲಾಗುತ್ತದೆ ಎಂಬುದರ ಪ್ರತೀಕವಾಗಿ ನಿಲ್ಲುತ್ತದೆ ಈ ಘಟನೆ. ಹಾಗೆಯೇ ಜಯಂತರು ಉಪಯೋಗಿಸಿದ ಪ್ರತಿಮೆ, ‘ನಿದ್ದೆಯಿಲ್ಲದೆ ಜಾಗರಣೆ ಮಾಡುವ ಒದ್ದೆ ರಸ್ತೆ’ ಮನಸ್ಸಿನ ದ್ವಂದ್ವಗಳ, ರಾಡಿಗಟ್ಟಿದ ಮನಸ್ಸಿನ ಪ್ರತೀಕವೂ ಆಗಿ ಹೌದು…………………..

‘’ಸ್ನಾನ ಮಾಡಿ ಹೊರ ಬಂದಾಗ ತಂತ್ರಿ ಬಂದು ಕೂತಿದ್ದ. “ಅಪ್ಪ ಕರೆಯುತ್ತಾರೆ ಬರಬೇಕಂತೆ” ಎಂದ. ಫ್ಲಾಸ್ಕಿನಲ್ಲಿ ಉಳಿದಿದ್ದ ಚಹಾವನ್ನು ಅವನಿಗೂ ಕೊಟ್ಟ. “ತನಗೆ ಇಲೆಕ್ಟ್ರಿಕ್ ಬಿಲ್ಲು ತುಂಬುವದುಂಟು. ನಂತರ ದಿನೂಮಾನನ್ನು ಅವನ ಆಫೀಸಿನಲ್ಲಿ ಭೆಟ್ಟಿಯಾಗಬೇಕು. ಆಮೇಲೆ ನಿಮ್ಮ ಮನೆಗೆ ಹೋಗುವಾ” –ಎಂದ. “ದಿನೂಮಾನದೇ ಸುದ್ದಿ. ಏನೋ ಅರ್ಜಂಟ್ ಉಂಟಂತೆ, ಅಪ್ಪ ಹೇಳಿದ್ದಾನೆ” –ಎಂದ. ಇಲೆಕ್ಟ್ರಿಕ್ ಬಿಲ್ಲು ತುಂಬಿ ಗಲೀಜು ರಸ್ತೆಯಲ್ಲಿ ನಡೆಯುತ್ತ ನಡೆದರು. ಸಂಜೂಗೆÀ ಮಾತನಾಡುವದು ತುಂಬಾ ಅವಶ್ಯಕವೆನಿಸಿಬಿಟ್ಟಿತ್ತು. ಮಾತಾಡಿ ಮಾತಾಡಿ ತನ್ನೊಳಗಿನ ಅಮೂರ್ತ ದಿಗಿಲುಗಳು ಮೂರ್ತಗೊಳ್ಳುವದನ್ನು ನೋಡಬೇಕಿತ್ತು. ಮಾತಿನಲ್ಲಾದರೂ ಅವುಗಳಿಗೊಂದು ಸುಸಂಗತ ಕ್ರಮ ಕಲ್ಪಿಸಬೇಕಿತ್ತು. ಹೀಗಾಗಿ ತಂತ್ರಿಯ ಸ್ವಂತ ಅರ್ಥಾರೋಪದ ಎಂಥ ಸಾಧ್ಯತೆಗಳನ್ನೂ ಲೆಕ್ಕಿಸದೆ ಭರ ಭರ ಮಾತನಾಡತೊಡಗಿದ. ಚತುರತೆಯ ಅಧಿಕಪ್ರಸಂಗದ ಎಲ್ಲ ಬಗೆಗಳನ್ನು ಬಕ ಬಕ ಆಡಿದ. ತಂತ್ರಿ ನಡುವೆ ಮೆತ್ತಗೆ “ ಈವತ್ತು ದಿನೂಮಾ ಮತ್ತು ಸರೋಜಿನಿಯರ ಸಂಬಂಧದ ಬಗ್ಗೆಯೇ ಮಾತನಾಡಬೇಕೆಂದಿದ್ದಾರೆ ಅಪ್ಪ” …… ಎಂದು ಈ ವರೆಗೆ ಅಸ್ಪಷ್ಟವಾಗೇ ಮರೆಯಲ್ಲಿ ನಿಂತಿದ್ದ ಸರೋಜಿನಿಯನ್ನು ಒಮ್ಮೆಲೆ ಮುಂದೆ ನೂಕಿದ. ಈ ತನಕ ದಿನೂಮಾನ ಪ್ರಭಾವಲಯಕ್ಕೆ ಎಂದೂ ಬಾರದೇ ಇದ್ದ ಸರೋಜಿನಿಯನ್ನು ಹೊಸದಾಗಿ ಆವಾಹನೆ ಮಾಡಬೇಕಾಯಿತು ಈಗ ದಿನೂಮಾನ ಒತ್ತಡದ ಮೂರ್ತಿಕರಣಕ್ಕೆ. ಹಿಂದೊಮ್ಮೆ ಸೂಕ್ಷ್ಮವಾಗಿ ಇದನ್ನೇ ಹೇಳಿದ್ದ ತಂತ್ರಿಯ ಈ ಹೇಳಿಕೆಗೆ ‘ನೀನಿದನ್ನು ಹೇಳಿದ್ದರಿಂದ ನಿನ್ನ ತಲೆಗೆ ಯಾವ ಪಾಪವೂ ಕಟ್ಟಿಕೊಂಡಿಲ್ಲ. ಸುಮ್ಮನೆ ತಲೆ ತಿನ್ನಬೇಡ’ – ಅಂತ ಅವನನ್ನು ನೋಯಿಸಿಬಿಟ್ಟಿದ್ದ. ದಿನೂಮಾನ ಈ ಹೊಸ ಅಧ್ಯಾಯಕ್ಕೆ ತಾನು ಸಿದ್ಧನಾಗದಿದ್ದುದರಿಂದಲೇ ಒಳಗಿಂದೊಳಗೇ ತಾನು ಈ ವಿಚಾರವನ್ನು ದೂರ ತಳ್ಲುತ್ತಿದ್ದೇನೋ ಏನೋ. ಎಂದೆನಿಸಿತು ಅವನಿಗೆ, “ಅಲ್ಲಾ ಅವರಿಗೆ ಹೊಣೆಗಾರಿಕೆ ಇರಬೇಕಿತ್ತಪ್ಪ. ವಿಶೇಷತಃ ಇಷ್ಟೊಂದು ಪ್ರಬುದ್ಧನಾದ ನೀನು ಇರುವಾಗ” ಅಂತೆಲ್ಲ ತಂತ್ರಿ ಅದು ಇವನ ಪರವಾಗುತ್ತದೆ ಅಂತ ತಪ್ಪು ತಿಳಿದಾಗ_ ‘ಈ ಬಗೆಯ ನಿನ್ನ ಚಾಡಿ ಸುಖದಿಂದ ನನಗೆ ಏನೂ ಲಾಭವಿಲ್ಲ’ –ಅಂತ ಮುಖದ ಮೇಲೆ ಹೊಡೆದ ಹಾಗೆ ಹೇಳಿಬಿಟ್ಟ. ಈಗ ತೆಪ್ಪಗೆ ನಡೆಯುತ್ತಿದ್ದ.’’……………

11) ಇದುವರೆಗೂ ಕಥೆಗಾರ ಹೇಳದ ಸಂಗತಿ, ಕಥೆಯಲ್ಲಿ ಎಲ್ಲರ ತುಮಲಗಳಿಗೆ ಉತ್ತರವಾಗಿ, ಸರೋಜಿನಿ ಈಗ ಕಥೆಯನ್ನು ಪ್ರವೇಶಿಸುತ್ತಾಳೆ, ಅವಳಿಲ್ಲದಿದ್ದರೂ, ಅವಳ ಸಲುವಾಗಿಯೇ ಕಥೆಯ ಪಾತ್ರಗಳಲ್ಲಿ, ಇಷ್ಟೆಲ್ಲ ಮಾನಸಿಕ ತೊಳಲಾಟಗಳು ನಡೆಯುತ್ತಿದ್ದುದು, ‘ಅವನಿಗೆ ಅಪ್ಪಾ ಅಂತ ಕರೆಯೋ? ಅನ್ನುವ ಅಮ್ಮನ ಕಳಕಳಿಯ ಪ್ರಾರ್ಥನೆ ಹಿಂದೆಯೂ, ಈ ಸರೋಜಿನಿಯೇ ಇದ್ದಳೋ, ಎಲ್ಲಿ ತನ್ನ ಅಮ್ಮನ ಪದಕ್ಕೆ ಧಕ್ಕೆ ಬಿದ್ದೀತೋ, ಎಂಬ ಕಳವಳ ಅಮ್ಮನಲ್ಲಿ ಇದ್ದೀತೊ, ಇಂತಹ ದಿಗಿಲು, ಅಮ್ಮನಿಂದ ಈ ಮಾತು ಆಡಿಸಿತ್ತೇ, ಗೊತ್ತಿಲ್ಲ, ಓದುಗನ ನಿರ್ಣಯಕ್ಕೆ ಬಿಟ್ಟ ವಿಷಯವಿದು. ಕಥೆಗಾರನ ಯಶಸ್ಸು ಕೂಡ ಇದರಲ್ಲಡಗಿದೆ. ಇದನ್ನೆಲ್ಲ ಯೋಚಿಸುವಾಗ ನಾವು ನಾವಾಗದೇ, ಆ ಪಾತ್ರಗಳಲ್ಲಿ ಒಂದಾಗಿ ಬಿಟ್ಟಿರುತ್ತೇವೆ……………

‘’ತಂತ್ರಿಯ ತಂದೆಯ ಬಳಿ ಹೋಗಬೇಕಾದವರು ಸೀದಾ ದಿನೂಮಾನ ಕಚೇರಿಗೆ ಹೋದಾಗ, ಅಲ್ಲಿ ಒಳಹೋಗುವಾಗ ತನ್ನದೇ ಅಥವಾ ತನಗಿಂತ ತುಸುವೇ ಹೆಚ್ಚು ವಯಸ್ಸಿನ ಹೆಣ್ಣೊಬ್ಬಳು ಆಫೀಸಿನಿಂದ ಹೊರಬಂದಳು. ಒಳಗೆ ಹೋದಾಗ ದಿನೂಮಾ ಒಂಥರಾ ಗಲಿಬಿಲಿಯಿಂದ “ಈಗಷ್ಟೆ ಬಂದಿರಾ?” – ಎಂದು ಒಂದಿಷ್ಟು ಕಾಗದ ಪತ್ರ ಕೆದರಿದ. ದಿನೂಮಾ ತಂತ್ರಿಯ ಜತೆ ತಂತ್ರಿಯ ತಂದೆಯ ಬಗ್ಗೆ ಏನೋ ಚೌಕಾಶಿ ಮಾಡುತ್ತಿದ್ದರೂ ನಡು ನಡುವೆ ಗುಂಗಿನಲ್ಲಿದ್ದಂತಿದ್ದ ಇವನನ್ನೇ ವಿಚಿತ್ರವಾಗಿ ಪರಿಶೀಲಿಸುತ್ತಿದ್ದ. ಸರಕ್ಕನೆ ಎದ್ದು ನಿಂತು” ಬನ್ನಿ ಚಾ ಕುಡಿಯುವಾ” –ಎಂದ. ಎಲ್ಲ ಎದ್ದು ಹೊರಬಂದರು _ ಹೊರ ಬಂದ ತಕ್ಷಣ ರಸ್ತೆಯನ್ನು ದಿನೂಮಾ ಒಮ್ಮೆ ನೀಳವಾಗಿ ನಿಟ್ಟಿಸಿದ. ಎಷ್ಟೆಲ್ಲ ಜನಗಳಿದ್ದರು. ಇವನಿಗೂ ಬಗೆಹರಿಯಲಿಲ್ಲ. ಕ್ಯಾಂಟೀನ ಹೊಕ್ಕುವಾಗ ಒಂದು ಸಲ ತಂತ್ರಿಯೆಂದು ತಿಳಿದು ದಿನೂಮಾ ಸಂಜೂನ ಹೆಗಲ ಮೇಲೆ ಕೈಯಿಟ್ಟುಬಿಟ್ಟಿದ್ದ. ನಂತರ ಬದಲಾಯಿಸಿದ. ದಿನೂಮಾನಿಗೆ ಬೇಕಾದುದೇನೋ ಇವನಿಂದ ಶಕ್ಯವಾಗದ್ದೇನೋ ಅಮ್ಮನಾಗಿ ಒದಗದ್ದೇನೋ - ಸರೋಜಿನಿಯಾಗಿ ಘಟಿಸುತ್ತಿರಬಹುದು. ಸರೋಜಿನಿಯ ಬಗ್ಗೆ ಗೌರವದಂಥದೇನೋ ಉಕ್ಕಲಾರಂಭಿಸಿತು ತನಗೆ. ತಾನು ಸರೋಜಿನಿಯನ್ನು ನೋಡಿರಬಹುದು ಎಂಬ ಅವನ ಊಹೆಯೇ ಅವನ ಎಷ್ಟೋ ಒತ್ತಡವನ್ನು ಕಡಿಮೆ ಮಾಡಿರಬಹುದೇ? ತಾನು ಆಗ ನೋಡಿದ ಹೆಣ್ಣೆ ಸರೋಜಿನಿ ಆಗಬೇಕಿತ್ತು ಅಂತ ಹುಂಬಹಟದ ಶ್ಚಾಸ ಬಿಟ್ಟ.

12) ಕ್ಯಾಂಟೀನ ಹೊಕ್ಕುವಾಗ, ತಂತಿಯೆಂದು ತಿಳಿದು ದಿನೂಮಾ ಮಗನ ಹೆಗಲ ಮೇಲೆ ಕೈಯಿಟ್ಟು ಬಿಟ್ಟಿದ್ದ, ನಂತರ ಕೈ ಬದಲಾಯಿಸಿದ. ತಂದೆ-ಮಗನಲ್ಲಿ ಆತ್ಮೀಯತೆಯ ಕೊರತೆ, ವಾತ್ಸಲ್ಯದ ಭಾವವಿಲ್ಲದಿರುವುದೇ?, ಅಥವಾ ಅಪ್ಪನ ಮುಜುಗುರ ಅವರನ್ನು ಹಾಗೆ ಆ ಕ್ಷಣದಲ್ಲಿ ಮಾಡಿಸಿತೇ? ಅಮ್ಮ ಇನ್ನಿಲ್ಲದ ಮೇಲೆ, ಅವರು ಮಾನಸಿಕವಾಗಿ ದೂರ ಸರಿಯುತ್ತಿರುವುದರ ಸಂಕೇತವೇ? ಜಯಂತರು ತಮ್ಮ ಸಾಕ್ಷ್ಮೀ ಪ್ರಜ್ಞೆಯಿಂದ ಮನುಷ್ಯ ಸಂಬಂಧಗಳಿಗೆ ಡೆಫನಿಶನ್ ಕೊಡದೇ, ಅದಷ್ಟು ಆ ಸ್ಥಿತಿಯ ಓಪನ್ ನೆಸ್ನಲ್ಲಿ ನಮ್ಮನ್ನು ಹೊಗಿಸಿ ಬಿಡುತ್ತಾರೆ ಎನ್ನುವುದನ್ನು ಈ ಘಟನೆಯಲ್ಲಿ ಗುರುತಿಸಬಹುದು ………………

‘’ಮನೆಗೆ ಬಂದು ಚಹಕ್ಕೆಂದು ಸ್ಟೌ ಹಚ್ಚುವಾಗ ಬಂದ ಸೀಮೆಎಣ್ಣೆಯ ವಾಸನೆಗೆ ಅಮ್ಮನ ನೆನಪಾಯಿತು. ದಿನೂಮಾನಿಗೆ ತನ್ನಲ್ಲಿ ಅಮ್ಮ ಕಾಣುತ್ತಿದ್ದಿರಬಹುದೇ? ಸರೋಜಿನಿಯಾಗಿ ಬಂದಿರುವ ಅವನ ಹೊಸ ಸಾಧ್ಯತೆಗೆ ನೀತಿ ಗೀತಿ ಇತ್ಯಾದಿ ದರಿದ್ರ ಎಳೆಗಳು ಸೇರಿಕೊಳ್ಳಲು ತನ್ನ ಇರವಿನ ನಿಮಿತ್ತವೇ ಸಾಕಲ್ಲ! ಏನೋ ಚಡಪಡಿಕೆ ಶುರುವಾಯಿತು……………….

13) ಅಪ್ಪ ಅಮ್ಮನ ಕೂಸಾಗಿ, ಈ ಜಗತ್ತಿಗೆ ಬಂದ ಮನುಷ್ಯ ಬೆಳೆದಂತೆಲ್ಲ, ಹೇಗೆ ಆ ಸಂಬಂಧಗಳು ಕಳಚಿ ಬೀಳುತ್ತವೆ. ತನ್ನದೇ ಮನೆಯಲ್ಲಿ ಇನ್ನೊಬ್ಬರಿಗೆ ಪ್ರವೇಶ ನೀಡಿ, ತಾನು ಆ ಮನೆಯಲ್ಲಿ ಪರಕೀಯ ಎನ್ನುವ ಸತ್ಯದ ಅರಿವು ಸಂಜೂನಿಗೆ ಅರಳುವುದರ ಹಿಂದೆ, ಮುಂಬಯಿ ಏಕೆ, ಎಲ್ಲ ವರ್ಗದಲ್ಲಿ, ಎಲ್ಲ ಸ್ಥರಗಳಲ್ಲಿ ಬದುಕು ರೂಪಾಂತರ ಹೊಂದುವ ಪ್ರಕ್ರಿಯೆ ಎಲ್ಲ ಸಾಧ್ಯತೆಗಳನ್ನು ಮೀರಿ, ನೀತಿ ಗೀತಿ ಇತ್ಯಾದಿ ಎಳೆಗಳ ದರಿದ್ರ ಎನಿಸುವ ಮಟ್ಟಿಗೆ ಸಂಬಂಧಗಳು ದೂರವಾಗುವ ಬದುಕಿನ ವಿವಿಧ ಮಜಲುಗಳ ಅನಾವರಣ ಹಾಗೆಯೇ ತೆರೆದುಕೊಳ್ಳುತ್ತ ಸಾಗುತ್ತದೆ………………

‘’ಕರೆಗಂಟೆ ಒತ್ತಿದಂತಾಗಿ ಅರನಿದ್ದೆ ಹರಿಯಿತು, ತಂತ್ರಿ ಬಂದಿರಬಹುದೆಂದು ಬಾಗಿಲು ತೆರೆದರೆ ಕನಸಿನಂತೆ ಅವಳೇ ನಿಂತಿದ್ದಳು -ಸರೋಜಿನಿ! ಸಂಜೂ ಅಲ್ಲವೇ? –ಎಂದಳು. ಹೌದು ಅನ್ನುತ್ತ ಬಾಗಿಲು ತೆಗೆದ. ಒಳಗೆ ಬಂದಳು. ವಿಚಿತ್ರ ಕಣ್ಣುಗಳಿಂದ ಮನೆಯನ್ನು ನೋಡಿದಳು. ದಿನೂಮಾನ ಖಾಸಗೀ ಸಂಗತಿಗಳನ್ನು ವೊದಲಬಾರಿಗೆ ನೋಡುತ್ತಿರುವ ಆತಂಕ ಅವಳ ಕಣ್ಣಲ್ಲಿತ್ತು. ತಾನು ಘಟನೆಯನ್ನು ನಂಬುತ್ತಲೇ ತಬ್ಬಿಬ್ಬಿನಲ್ಲಿ ಒಳಹೋಗಿ ರಪರಪ ನೀರೆರೆಚಿ ಮುಖವೊರೆಸಿ- ಅಡಿಗೆ ಕೋಣೆಗೆ ಹೋಗಿ- ಒಂದು ಕ್ಷಣವಂತೂ ಅವಳು ಹೊರಗೆ ಇದ್ದಾಳೆ ಎಂಬುದನ್ನು ಮರೆತು ಅವಾಕ್ಕಾಗಿ ಬಿಕೋ ನಿಂತ. ನಂತರ ಹೊರ ಬಂದ. ‘ನಾನು ಸರೋಜಿನಿ ಅಂತ. ಬಾಲವಾಡಿಯಲ್ಲಿ ಕಲಿಸುತ್ತಿದ್ದೇನೆ. ನನ್ನ ಬಗ್ಗೆ ನಿಮ್ಮ ದಿನೂಮಾ ಹೇಳಿರಲಿಕ್ಕಿಲ್ಲ” ಎನ್ನುತ್ತ ಕೂತುಕೊಂಡಳು.. ಅವಳ ಬಾಯಲ್ಲಿ ಸಲೀಸಾಗಿ ಬಂದ ‘ದಿನೂಮಾ’ ಶಬ್ದ ಯಾಕೋ ತನ್ನ ತಬ್ಬಿಬ್ಬನ್ನೂ ತುಸು ನೀವಿಕೊಂಡು ಹೋಯಿತು. ತನ್ನೊಳಗಿನ ಒತ್ತಡವನ್ನು ಮೀರಲು ನಡೆಸಿದ ಅವಳ ಸಾಹಸ ಅವಳ ಸಹಜ ಮಾತುಗಳನ್ನೂ ಮೀರಿ ಗೋಚರವಾಗುತ್ತಿತ್ತು. ಅವಳಿಗಿಂತ ಹೆಚ್ಚು ವಿಷಣ್ಣನಾಗುತ್ತ ನಡೆದ ತಾನು. ಮಾತುಗಳಿಗೂ ಆಚೆ ನಿಂತ ನಿಜದ ನಿಚ್ಚಳದ ಭಯ ಅಭೇಧ್ಯ ಮೌನವಾಗಿ ನಿಂತುಬಿಟ್ಟಿತು. ಎದುರಿಸಲಾಗಲಿಲ್ಲ ತನಗೆ, ಮೇಲೆ ತಾರಸಿ ನೋಡಿದ, ಆಗಂತೂ ಎದುರಿಗೆ ದಿನೂಮಾ ಇದ್ದುರುವಂತೆ ಅನಿಸಿಹೋಯಿತು. ಹ್ಯಾಗೆ ಎಲ್ಲಿಂದ ಶಬ್ದಗಳು ಬಂದವೋ ಗೊತ್ತಾಗುವ ವೊದಲೇ_ “ದಯವಿಟ್ಟು ಮದುವೆ ಆಗಿಬಿಡಿ ನೀವಿಬ್ಬರೂ” ಎಂದು ಬಿಟ್ಟ. ಧಳಕ್ಕನೆ ಅಳಲಾರಂಭಿಸಿದಳು ಸರೋಜಿನಿ. ಪುಟ್ಟ ಬಿಳಿ ಕರವಸ್ತ್ರದಲ್ಲಿ ಬಿಕ್ಕಳಿಕೆಗಳನ್ನು ಅವಳು ಶೇಖರಿಸತೊಡಗಿದಂತೆ- ಅಮಲಲ್ಲೋ ಎಂಬಂತೆ ಎದ್ದು ಒಳಬಂದು ಅಡಿಗೆಯೊಳವನ್ನೇ ದಿಟ್ಟಿಸಿದ. ಮತ್ತೆ ಹೊರಬಂದಾಗ “ತುಂಬ ಹಿಂಸೆ ಪಡ್ತಿದಾರೆ ಅವರು. ನಾನಿಲ್ಲಿ ಬಂದು ನಿಮಗೆ ಹೇಳಿದ್ದು ದಯವಿಟ್ಟು ಅವರಿಗೆ ಗೊತ್ತಾಗಬಾರದು” – ಅಂತ ಎದ್ದು ನಿಂತಳು. … ಆಚೆ ನಡೆದಳು……………….

14) ಮನುಷ್ಯ ಸಂಬಂಧಗಳಲ್ಲಿ ಕೆಲವನ್ನು ಎಂದೂ ಹೇಳಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಕೇವಲ ಅವು ಘಟಿಸುತ್ತವಷ್ಟೆ, ಮೂಕ ಸಾಕ್ಷಿಯಗಿ ಅವುಗಳನ್ನು ಬಂದಂತೆ ಸ್ವೀಕರಿಸುವ ಮನೋಭಾವ ಈ ಕಥಾನಾಯಕನದು. ಸರೋಜಿನಿಗೆ ಆದಾಗಲೇ ತನ್ನ ತುಮುಲಗಳ ಮಧ್ಯೆಯೇ ಸ್ಥಾನ ನೀಡಿ, ಅಪ್ಪನ ದ್ವಂದ್ವಕ್ಕೆ “ದಯವಿಟ್ಟು ಮದುವೆ ಆಗಿಬಿಡಿ ನೀವಿಬ್ಬರೂ” ಎಂಬ ಸರಳ ಪರಿಹಾರವನ್ನು ಸೂಚಿಸುತ್ತಾನೆ, ಆಗಲೇ ಅವನ ಮನಸ್ಸು ತೆಗೆದುಕೊಂಡ ನಿರ್ಧಾರದ ಹಿಂದೆ ಅವನ ಅತಂತ್ರತೆಯೂ ಕಾರಣವಿರಬಹುದೇ?, ಅಪ್ಪನ ಪರಿಸ್ಥಿತಿಗೆ ಪರಿಹಾರ ಮಾತ್ರವೇ…………….

‘’ಎದ್ದುಹೋಗಿ ಸ್ನಾನಕ್ಕೆ ನೀರಿಟ್ಟ. ಹ್ಯಾಂಗರಿಗೆ ಒಣಬಿದ್ದಿರುವ ಶರ್ಟುಗಳು ಗುಂಗುರು ಹಣ್ಣುಗೂದಲ ಹರವಾದ ಎದೆಯ ದಿನೂಮಾನ ಒಳಗಿನ ಬಡಿತವನ್ನು ಹಿಡಿದು ನಿಂತಂತೆ ತೂಗುತ್ತಿದ್ದವು. ಸರೋಜಿನಿ ಜರುಗಿ ಹೋದಳು. ತಾನು? ಚಹ ಮಾಡಿಕೊಂಡು ಕುಡಿಯುತ್ತ ಕೂತ. ಹೊರಗೆ ಕತ್ತಲು ಇಳಿಯುತ್ತ ಬೆಳಕು ಇಲ್ಲವಾಗುತ್ತಿತ್ತು. ಮಬ್ಬು ಕತ್ತಲೆಯಲ್ಲಿ ಮನೆಯ ಎಲ್ಲ ಪರದೆಗಳ ಹಿಂದೆ, ಕಪಾಟಿನ ಹಿಂದೆ ದಿನೂಮಾ ತನಗೆ ಹೆದರಿಕೊಂಡು ಹಣುಕುತ್ತ ನಿಂತಂತೆ ಅಸ್ಪಷ್ಟ ಭಾಸ.

15) ದಿನೂಮಾನಿಗೆ, ಮಗನ ಎದುರು ಹೇಳಲಾರದ ಹಿಂಜರಿಕೆ, ಮಾನಸಿಕ ತೊಳಲಾಟ, ಬದುಕಿನ ಮಹತ್ವದ ಘಟ್ಟದ ದ್ವಂದ್ವ. ಇರುವ ಒಂದೇ ಒಂದು ಸಂಬಂಧ, ಕಳಚಿಕೊಳ್ಳುವ ಭಯಾವಹ ಒತ್ತಡದ ಕ್ಷಣಗಳ ಚಡಪಡಿಕೆ ………

‘’ಏನೋ ಹೊಳೆದಂತಾಯಿತು. ಎದ್ದು ಹೋಗಿ ಡ್ರಾಯರಿನಿಂದ ಒಂದು ಕಾಗದ ತೆಗೆದು ದಿನೂಮಾನಿಗೊಂದು ಪತ್ರ ಬರೆದ- ದಿನೂಮಾ , ದಯವಿಟ್ಟು ಈ ಪತ್ರಕ್ಕೆ ತನ್ನನ್ನು ಕ್ಷಮಿಸು. ನಿನ್ನ ಮುಖಕ್ಕೆ ಕಲಂಕ ತರುವ ಕೆಲಸ ಮಾಡಿದ್ದೇನೆ ತಾನು. ಬರೆಯಲು ಬಾಯಿಲ್ಲವಾಗಿದೆ ತನಗೆ. ತನ್ನ ಸಹೋದ್ಯೋಗಿಯೊಬ್ಬಳ ಜತೆಯ ತನ್ನ ವ್ಯವಹಾರ ಕೈಮೀರಿದೆ. ಒಂದೇ ಅವಳನ್ನು ಮದುವೆಯಾಗಬೇಕು ಅಥವಾ ಕಣ್ತಪ್ಪಿಸಿಕೊಳ್ಳಬೇಕು- ಅಂಥ ಪರಿಸ್ಥಿತಿ. ಅದೂ ಅಲ್ಲದೇ ಆಫೀಸಿನ ಕೆಲ ಹಣವನ್ನು ತಪ್ಪು ಲೆಕ್ಕದಲ್ಲಿ ಬಳಸಿಕೊಂಡಿರುವೆ. ಇಂದೇ ಓಡಿಹೋಗುತ್ತಿದ್ದೇನೆ. ಅಂತೆಲ್ಲ ಬರೆಯುತ್ತ ಹೋದ. ಸಾಕು ಅನ್ನಿಸಿದಾಗ ನಿಲ್ಲಿಸಿದ. ದಿನೂಮಾನ ಕಣ್ಣಿಗೆ ಕಾಣುವಂತೆ ಇಟ್ಟ. ದಿನೂಮಾನ ಹಿಂಸೆ ಇದರಿಂದ ಎಷ್ಟು ಕಮ್ಮಿಯಾಗುತ್ತದೆ ಅನ್ನುವದು ಇನ್ನು ಅವನ ಅದೃಷ್ಟಕ್ಕೆ ಬಿಟ್ಟ ವಿಷಯ. ಹೊರಬಿದ್ದು ರಿಕ್ಷಾ ಹಿಡಿದು ಹಳೆ ಗೆಳೆಯ ವಸಂತನ ರೂಮಿನೆದುರು ಇಳಿದು ಹೋಗಿ ಬಾಗಿಲು ತಟ್ಟಲು – ಅರ್ಧ ಗಂಟೆಯೇ ಬೇಕಾಯಿತು. ಬಾಗಿಲು ತಟ್ಟುತ್ತಿರುವ ಈ ಕ್ಷಣಕ್ಕೆ ಮಾತ್ರ- ಆಸ್ಪತ್ರೆಯಲ್ಲಿ ಅತ್ತು ಚೀರಾಡಿದ ಅಮ್ಮ, ಈಗಷ್ಟೆ ಕಾರಣವಿಲ್ಲದೆ ಅತ್ತ ಸರೋಜಿನಿ ಎಲ್ಲ ಒಂದೇ ಅನಿಸಿದಂತಾಗಿ- ಅಮ್ಮನ ಗರ್ಭಪಾತಕ್ಕೂ ತನ್ನ ಕೈಮೀರಿರುವ ತನ್ನ ಇರುವಿಕೆಗೂ ಯಾವುದೋ ಸಂಬಂಧ ಝಗ್ಗನೆ ಹೊಳೆದುಹೋದಂತಾಗಿ ಬಿಕ್ಕಳಿಕೆಯೊಂದು ಉಕ್ಕಿ ಎದೆ ತುಂಬಿ ಬಂದಂತಾಯಿತು. ‘’ವಸಂತ’ ವಸಂತ’ ಅಂತನ್ನುತ್ತ ಜೋರಾಗಿ ಕದ ದಡ ದಡ ಬಡಿಯಲಾರಂಭಿಸಿದ.

16) ಕೊನೆಗೂ ತನ್ನ ಗೂಡು ಬಿಟ್ಟು ಮತ್ತೊಂದು ಗೂಡಿಗೆ ಸ್ಥಿಂತ್ಯಂತರದ ಯಾವ ಭಾವವೂ ಇಲ್ಲದೇ, ಕೇವಲ ಅಮ್ಮನ ನೆನಪೊಂದನ್ನು ತನ್ನಲ್ಲಿ ಕಾಪಿಟ್ಟುಕೊಂಡು ಸಂಜೂ, ಆ ಮನೆಯಿಂದ ಹೊರಬಿದ್ದು, ಸರೋಜಿನಿ, ದಿನೂಮಾರಿಗೆ ಶಾಶ್ವತ ಪರಿಹಾರ ಒದಗಿಸಿ ಹೊರಬರುವುದರೊಂದಿಗೆ ಕಥೆ ಮುಕ್ತಾಯವಾಗುತ್ತದೆ, ಜಯಂತ ಕಾಯ್ಕಿಣಿಯವರು ಬದುಕಿನ ವಿವಿಧ ಸ್ಥರಗಳಲ್ಲಿ, ಸೂಕ್ಷ್ಮಾತಿಸೂಕ್ಷ್ಮ ಭಾವ, ಸಂಗತಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಹಿಡಿದಿಡುತ್ತ, ಓದುಗನನ್ನು ತನ್ನ ಕತೆಯ ತೆಕ್ಕೆಗೆ ಎಳೆದುಕೊಳ್ಳುವಲ್ಲಿ ಸಫಲರಾಗುವುದನ್ನು ಈ ಕತೆಯಲ್ಲಿ ಅಷ್ಟೆ ಅಲ್ಲ, ಅವರ ಎಲ್ಲ ಕತೆಗಳಲ್ಲೂ ಕಾಣಬಹುದಾಗಿದೆ. ಕಥೆಯ ನಿರೂಪಣೆ, ಹೊಸ ಶೈಲಿಯೊಂದರಿಂದ ‘ತೆರೆದಷ್ಟೆ ಬಾಗಿಲು’ ಕನ್ನಡದ ಕಥಾ ಲೋಕದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಹೊಂದುತ್ತದೆ, ಈ ಕಾರಣಕ್ಕಾಗಿಯೇ ಜಯಂತ ಕನ್ನಡದ ಒಬ್ಬ ಅಪ್ರತಿಮ,, ಸೂಕ್ಷ್ಮ ಮಾನವೀಯ ಸಂಬಂಧಗಳ ಅವಲೋಕನಗಳ ಕತೆಗಾರರಾಗಿ ಬಹು ಎತ್ತರದಲ್ಲಿ ನಿಲ್ಲುತ್ತಾರೆ.

Rating
No votes yet

Comments

Submitted by lpitnal Sun, 01/05/2014 - 15:41

ಪ್ರಿಯರೇ, ಜಯಂತ ಕಾಯ್ಕಿಣಿಯವರ ಹೆಸರು, ಪೇಸ್ಟ್ ಮಾಡುವಾಗ , ಜಯಂತ ದ ಲಿ ಗ,( 4 ನೇ ಸಾಲು) ಈ ತರಹ ಸೇವ್ ಆಗಿದ್ದು ವಿಷಾದಿಸುತ್ತೇನೆ. ಅದು ಜಯಂತ ಕಾಯ್ಕಿಣಿ ಎಂದಾಗಬೇಕು. ತಮಗೆಲ್ಲ ವಂದನೆಗಳೊಂದಿಗೆ ಲಕ್ಷ್ಮೀಕಾಂತ ಇಟ್ನಾಳ.

Submitted by H A Patil Sun, 01/05/2014 - 17:54

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಜಯಂತ ಕಾಯ್ಕಿಣಿ ಯವರ ತೆರೆದಷ್ಟೆ ಬಾಗಿಲು ಕೃತಿಯ ಬಗೆಗೆ ನೀವು ವಸ್ತುನಿಷ್ಟ ವಿಮರ್ಶೆ ಮಾಡಿದ್ದೀರಿ, ನಿಮ್ಮ ವಿಮರ್ಶೆಯನ್ನು ಓದಿದ ನಂತರ ಮೂಲ ಕಥೆಯನ್ನು ಓದ ಬೇಕೆನಿಸುತ್ತದೆ. ಹೀಗೆಯೆ ಕನ್ನಡದ ಪ್ರಮುಖ ಲೇಖಕರ ಕೃತಿಗಗಳು ಕುರಿತು ಬರೆಯಿರಿ. ಧನ್ಯವಾದಗಳು.

ಆತ್ಮೀಯ ಹೆಚ್ ಎ ಪಾಟೀಲ್ ಸರ್, ಅವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು ಸರ್. ತಮ್ಮ ಎಂದಿನ ಪ್ರೀತಿಪೂರ್ವಕ ನುಡಿಗಳಿಗೆ ನಾನು ನಮ್ರ ಸರ್. ನಾವೆಲ್ಲ ಕನ್ನಡದ ಒಂದೊಂದು ಕತೆಯನ್ನು ಹೀಗೆ ಆರಿಸಿ, ಅದರ ಓದನ್ನು ಆಸ್ವಾದಿಸುತ್ತ, ಅದನ್ನು ದಾಖಲಿಸಿದಲ್ಲಿ, ಕನ್ನಡಕ್ಕೆ ಸಂಪದಿಗರು ಕೊಡುವ ಕೊಡುಗೆ ತುಂಬ ನಿಜವಾಗಿಯೂ ಅದೊಂದು ಅದ್ಭುತ ಪ್ರಯತ್ನವಾಗುತ್ತದೆ, ಹೀಗೆ ನಾಲ್ಕೆಂಟು ಓದುಗರು ಸೇರಿ ತಿಂಗಳಿಗೊಂದು ತಮ್ಮ ಓದಿನಲ್ಲಿ ರುಚಿಸಿದ ಕತೆಯ ಕುರಿತು ಬರೆಯುತ್ತ, ಮುಂದೊಂದು ದಿನ ಸಂಪದಿಗರು ಸೇರಿ, ನಾಡಿಗ್ ರ ಮನವೊಲಿಸಿ, ಅಚ್ಚುಹಾಕಿಸಿ, ಕೊಂಡು ಓದಿದರಾಯಿತು, ...........ತಮ್ಮ ಚಿಂತನೆಗೆ ಈ ವಿಚಾರ ಬಿಡುತ್ತ,......ತಮಗೆ ಮತ್ತೊಮ್ಮೆ ನಮಸ್ಕಾರಗಳು ಸರ್.

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು.
ತಮ್ಮ ಮರು ಪ್ರತಿಕ್ರಿಯೆ ಓದಿದೆ, ತಮ್ಮ ಅನಿಸಿಕೆ ಸರಿ ಎನ್ನಿಸಿತು ಕನ್ನಡ ಸಾಹಿತ್ಯದ ವಿಶೇಷ ಪರಣತಿಯಿರುವ ಅನೇಕರು ಸಂಪದದಲ್ಲಿ ಇದ್ದಾರೆ. ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ತೊಡಗಿಕೊಂಡಲ್ಲಿ ಇದೊಂದು ಹೊಪ ಪ್ರಯತ್ನವಾಗಿ ಸಂಪದದ ಚಿರಿತ್ರೆಯ ಪುಟಗಳಲ್ಲಿ ದಾಖಲಾಗುತ್ತದೆ. ಕವಿ ನಾಗರಾಜ, ಪಾರ್ಥಸಾರಥಿ, ಗಣೇಶ, ಶ್ರೀಧರ ಬಂಡ್ರಿ, ರಮೇಶ ಕಾಮತ, ನಾಗೇಶ ಮೈಸೂರು, ಸಪ್ತಗಿರಿ, ಹೊರಲಂ ವೆಂಕಟೇಶ, ಶ್ರೀಕರ ಮತ್ತು ಇನ್ನೂ ಅನೇಕ ಗಣ್ಯ ಸಂಪದಿಗರು ಈ ನಿಟ್ಟಿನಲ್ಲಿ ಪ್ರಯತ್ನಿಸಿದಲ್ಲಿ ಇದೊಂದು ಕ್ರಿಯಾತ್ಮಕ ಹೊಸ ಅರ್ಹ ಪ್ರಯತ್ನವಾಗುವುದರಲ್ಲಿ ಸಂಶಯವಿಲ್ಲ. ಧನ್ಯವಾದಗಳು.,

Submitted by sri.ja.huddar Mon, 01/06/2014 - 11:13

ಕಥೆ ವಿಚಾರ ಆಮೇಲೆ... ಮೊದ್ಲು ನಿಮ್ಮ ಸಾಹಿತ್ಯ ಪ್ರೀತಿಗೆ ಸಲಾಂ ! ಕಥೆ ಕುರಿತು ಬರೆದಿರುವ ನಿಮ್ಮ ಅಭಿಪ್ರಾಯಗಳು ಕಥೆ ಬರೆಯುವವರಿಗೆ ಮಾಗಱದಶಱನ ನೀಡುತ್ತವೆ. ವಂದನೆಗಳು.

ಆತ್ಮೀಯ ಹುದ್ದಾರ ರವರೇ, ತಮ್ಮ ಪ್ರೀತಿಯ ನುಡಿಗಳಿಗೆ ಮನ ನಮ್ರವಾಯಿತು. ಧನ್ಯವಾದಗಳು ಸರ್ ತಮಗೆ.

Submitted by nageshamysore Mon, 01/06/2014 - 20:50

ಇಟ್ನಾಳರೆ ನಮಸ್ಕಾರ, ಜಯಂತ ಕಾಯ್ಕಿಣಿಯವರ ಕಥೆಯ ಹೆಸರೆ ಕುತೂಹಲಕಾರಿಯಾಗಿದೆ - 'ತೆರೆದಷ್ಟೆ ಬಾಗಿಲು'. ನಾವು ಎಷ್ಟು ತೆಗೆಯುತ್ತೇವೊ ಅಷ್ಟು. ಮನದ ಬಾಗಿಲಾದರೂ ಅಷ್ಟೆ ತಾನೆ? ಮನ ಕೆಲವೊಮ್ಮೆ ಮುಚ್ಚಿದ ಕೊಡೆಯೂ ಹೌದು, ಮತ್ತೆ ಕೆಲವೊಮ್ಮೆ ಬಿಚ್ಚಿದ ಕೊಡೆಯೂ ಹೌದು - ಮನದ ಕದ ಎಷ್ಟು ತೆರೆದಿದೆ ಅನ್ನುವುದರ ಮೇಲೆ. ಕಥೆಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಪಾತ್ರಗಳ ಆಂತರ್ಯದ ದನಿಯನ್ನು ಹಿಡಿದು ಪದಗಳಾಗಿಸಿ, ಎಷ್ಟೊ ಓದುಗರ ಅನಿಸಿಕೆಗೆ ದನಿ ಕೊಟ್ಟ ನಿಮ್ಮ ಈ ಶ್ಲಾಘನೀಯ ಯತ್ನಕ್ಕೆ ಅಭಿನಂದನೆಗಳು. ಈ ಜಿಜ್ಞಾಸೆಯಲ್ಲಿ ಮಿಕ್ಕವರ ಅಭಿಪ್ರಾಯಗಳೂ ಸೇರಿ ಲೇಖಕರ ಮೂಲ ಅಶಯ ಹೆಚ್ಚೆಚ್ಚು ಜನರಿಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಬಹುಶಃ ಲೇಖಕರಿಗೆ ಮೂಲದಲ್ಲಿ ಅನಿಸಿರದೆ ಇದ್ದ ಹೊಳಹುಗಳೂ ಅನಾವರಣಗೊಳ್ಳಬಹುದು. ಒಟ್ಟಾರೆ ಸಾಹಿತ್ಯ ಪ್ರೇಮಿಗಳಿಗೆ ಮುದ ನೀಡುವ ವಿಶಿಷ್ಟ ಯತ್ನ ಮತ್ತು ಸಾಹಿತಿಗಳಿಗೆ ಸಲ್ಲಿಸುವ ಅರ್ಥಪೂರ್ಣ ನಮನ. ಅದಕ್ಕಾಗಿ ಧನ್ಯವಾದಗಳು ಮತ್ತು ಅಭಿನಂದನೆಗಳೂ ಸಹ :-)
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ಆತ್ಮೀಯ ನಾಗೇಶ ಜಿ, ಸಶಕ್ತ ಪ್ರತಿಕ್ರಿಯೆಗೆ ವಂದನೆಗಳು. ಜಯಂತ ರ ಹಲವಾರು ಕಥೆಗಳು ನನ್ನನ್ನು ಹೀಗೆ ಚಿಂತನೆಗೆ ಹಚ್ಚಿವೆ, ಬದುಕಿನ ಸಣ್ಣ ಅತಿ ಸಣ್ನ ಸೂಕ್ಷ್ಮಗಳನ್ನು ಅವರು ಗಮನಿಸುವ ಪರಿ ಅದ್ಭುತ. ಕೆಲವರಲ್ಲಿ ಅದು ನಿಸರ್ಗದೇಣಿಗೆಯಾಗಿ ಬಂದಿರುತ್ತೇನೊ. ಉದಾಹರಣೆಗೆ ಮೊನ್ನೆ ಮೊನ್ನೆ ನಾನು ಒಂದು ಇಂಟರನ್ಯಾಶನಲ್ ಸೆಮಿನಾರ್ ಗೆ ದೆಹಲಿಗೆ ಹೋಗಿದ್ದೆ, ಅಲ್ಲಿ ಇಂಡಿಯಾ, ಮಲೇಶಿಯಾ, ರಶಿಯಾ, ಜಪಾನ್ ಪ್ರತಿನಿಧಿಗಳು ಎಲ್ಲ ತಾಜ್ ಪ್ಯಾಲೇಸ್ ನಲ್ಲಿ ವಾರಗಟ್ಟಲೆ ಸೆಮಿನಾರ್ ಗಳು. ಮಲೇಶಿಯಾದ ಇಂಜಿನೀಯರ್ ಮಿತ್ರರೊಬ್ಬರು ತುಂಬ ಸೂಕ್ಷ್ಮ ಮಹಸ್ಥಿತಿಯುಳ್ಳವರಾಗಿದ್ದರು. ನಮಗೆಲ್ಲ ಒಂದು ದಿನ ಒಂದು ಕಿ, ಮೀ ದೆಹಲಿಯ ರಸ್ತೆ ತೋರಿಸಿ, ಅದರಲ್ಲಿ ಕಂಡುಬರುವ ನ್ಯೂನತೆಗಳನ್ನು ಪಟ್ಟಿಮಾಡಿ ಎಂದು ಅರ್ಧಗಂಟೆ ವೇಳೆ ನೀಡಲಾಯಿತು. ನಮ್ಮಲ್ಲಿ ಎಲ್ಲ ದೇಶದ ಪ್ರತಿನಿಧಿಗಳನ್ನೊಳಗೊಂಡು ಹೆಚ್ಚೆಂದರೆ 20 ಕ್ಕಿಂತ ಹೆಚ್ಚು ನ್ಯೂನತೆಗಳನ್ನು ಹುಡುಕಿದೆವು. ಮಲೇಶಿಯಾದ ಆ ಎಂಜಿನೀಯರ್ ನೂರಕ್ಕೂ ಹೆಚ್ಚು ನ್ಯೂನತೆಗಳನ್ನು, ಸುಧಾರಣೆಗಳನ್ನು ಪಟ್ಟಿಮಾಡಿ ನಮ್ಮೊಂದಿಗೆ ನಂತರ ಸೆಮಿನಾರ್ ಲ್ಲಿ ಹಂಚಿಕೊಂಡ. ಕೆಲವರಲ್ಲಿ ಅತಿ ಸೂಕ್ಷ್ಮತೆಯನ್ನುವುದು ಎಂಬೆಡ್ ಆಗಿರುತ್ತದೆ,. ಹೀಗೆ ಜಯಂತ ಕೂಡ. ತುಂಬ ಸೂಕ್ಷ್ಮ ಮನಸ್ಸಿನ ಕತೆಗಾರರು. ಅವರ ಯಾವುದೇ ಕತೆ ಅವಲೋಕಿಸಿದರೂ, ಮನಕ್ಕೆ ತಟ್ಟಿ ಓದಿಸಿಕೊಂಡು, ತಟ್ಟನೆ ನಮ್ಮ ಒಳಮನ ಸೇರಿಬಿಡುತ್ತದೆ. ಹೀಗೆ ಹಲವಾರು ಕತೆಗಾರರೂ ಇದ್ದಾರೆ. ಇಂತಹ ಕಲೆ ಸಿದ್ಧಿಸಿದುದರಿಂದಲೇ ಅವರು ಆ ಮಟ್ಟದಲ್ಲಿ ರಾರಾಜಿಸುತ್ತಾರೆ. ಅವರಿಗೊಂದು ಸಲಾಮ್ ಹೇಳ್ತಾ,.......... ನಾಗೇಶ ಜಿ, ಎಂದಿನಂತೆ ತುಂಬ ಸುಂದರವಾಗಿ, ವಿಮರ್ಶಿಸಿದ್ದೀರಿ, ತಮ್ಮ ಅನಿಸಿಕೆಯ ಸಾಲುಗಳು ನಿಜಕ್ಕೂ ಖುಷಿ ಕೊಟ್ಟವು, ಧನ್ಯವಾದಗಳು ಸರ್.

ಕವಿ ನಾ ಸರ್, ನಮಸ್ಕಾರ ಸರ್. ನಾನು ನಿಜಕ್ಕೂ ಶ್ರಮ ಪಡಲಿಲ್ಲ. ಜಯಂತ ರ ಕಥೆಯ ಸಾಗರಯಾನದಲ್ಲಿ ತೇಲುತ್ತ, ಖುಷಿಯಾಗಿ, ಅನಿಸಿಕೆಗಳನ್ನು ದಾಖಲಿಸುತ್ತ ಹೋದೆ, ಕೊನೆಗೆ ಈ ಪರಿ ಉದ್ದವಾಯಿತು. ಅಷ್ಟೆ ಸರ್. ತಮ್ಮ ಪ್ರೋತ್ಸಾಹಕರ ನುಡಿಗೆ ವಂದನೆಗಳು. ಆದರೆ ಆ ಹ್ಯಾಟ್ಸ್ ಆಫ್ ಗೆ ನಾನು ಲಾಯಕ್ಕಲ್ಲ. ಅದೇನಿದ್ದರೂ 'ಜಯಂತ ಕಾಯ್ಕಿಣಿ' ಯಂತಹ ಕತೆಗಾರರಿಗೆ ಸಲ್ಲಬೇಕಲ್ಲವೇ ಸರ್. ಧನ್ಯವಾದಗಳು ಸರ್ ಮತ್ತೊಮ್ಮೆ.