೨೦೬. ಲಲಿತಾ ಸಹಸ್ರನಾಮ ೯೮೬ರಿಂದ ೯೯೦ನೇ ನಾಮಗಳ ವಿವರಣೆ

೨೦೬. ಲಲಿತಾ ಸಹಸ್ರನಾಮ ೯೮೬ರಿಂದ ೯೯೦ನೇ ನಾಮಗಳ ವಿವರಣೆ

                                                                ಲಲಿತಾ ಸಹಸ್ರನಾಮ ೯೮೬ -೯೯೦

Trikoṇagā त्रिकोणगा (986)

೯೮೬. ತ್ರಿಕೋಣಗಾ

            ತ್ರಿಕೋಣ ಎಂದರೆ ತ್ರಿಭುಜ ಮತ್ತು ಈ ನಾಮವು ದೇವಿಯು ತ್ರಿಕೋಣದಲ್ಲಿ ನಿವಸಿಸುತ್ತಾಳೆ ಎಂದು ಹೇಳುತ್ತದೆ. ಇಲ್ಲಿ ಪ್ರಸ್ತಾಪಿಸಿರುವ ತ್ರಿಕೋಣವು, ಸರ್ವ-ಸಿದ್ಧಿ-ಪ್ರದಾ ಚಕ್ರವೆಂದು ಕರೆಯಲ್ಪಡುವ, ಶ್ರೀ ಚಕ್ರದ ಅತ್ಯಂತ ಒಳಗಿನ ಚಕ್ರವನ್ನು ಸೂಚಿಸುತ್ತದೆ. ಶ್ರೀ ಚಕ್ರದ ಪೂಜೆಯನ್ನು ಕೈಗೊಳ್ಳುವಾಗ ಈ ತ್ರಿಕೋಣವು ಪೂಜಿಸುವವನಿಗೆ ಅಭಿಮುಖವಾಗಿರಬೇಕು. ಇದು ಶ್ರೀ ಚಕ್ರದ ಎಂಟನೇ ಆವರಣವಾಗಿದೆ.

            ಈ ಅತ್ಯಂತ ಒಳಗಿನ ಚಕ್ರ ಮತ್ತು ಬಿಂದು; ಇವುಗಳು ಸೃಷ್ಟಿಯನ್ನು ಸಂಕೇತಿಸುತ್ತವೆ. ತ್ರಿಕೋಣವು ಶಕ್ತಿಯನ್ನು ಪ್ರತಿನಿಧಿಸಿದರೆ ಬಿಂದುವು ಶಿವನನ್ನು ಪ್ರತಿನಿಧಿಸುತ್ತದೆ. ಈ ತ್ರಿಕೋಣವು ಶಿವನ ಸೃಷ್ಟಿಯಾಗಿದೆ. ಈ ಸಂಗತಿಯು ಶಿವನು ಶಕ್ತಿಯನ್ನು ಸೃಷ್ಟಿಸಿದ ಎನ್ನುವ ಸಿದ್ಧಾಂತವನ್ನು ದೃಢಪಡಿಸುತ್ತದೆ. ಈ ಬಿಂದುವನ್ನು ಪರಾ ಅಂದರೆ ಬಿಂದು ತತ್ವ ಎಂದೂ ಸಹ ಕರೆಯಲಾಗುತ್ತದೆ. ಈ ಬಿಂದುವು ಸಾಲುಸಾಲಾಗಿ ತರಂಗಗಳನ್ನುಂಟು ಮಾಡುತ್ತದೆ ಇವನ್ನೇ ಸ್ಪಂದನ ಅಥವಾ ದಿವ್ಯ ಕಂಪನ ಅಥವಾ ಶಿವನ ಸೃಷ್ಟಿಯ ಮಿಡಿತವೆಂದೂ ಕರೆಯಲಾಗುತ್ತದೆ. ಈ ದಿವ್ಯ ಕಂಪನಗಳು ತ್ರಿಕೋಣವಾಗಿ ಮಾರ್ಪಡುತ್ತವೆ. ಈ ತ್ರಿಕೋಣವು ಎಲ್ಲಾ ವಿಧವಾದ ತ್ರಿಪುಟಿಗಳನ್ನು ಪ್ರತಿನಿಧಿಸುತ್ತದೆ, ಉದಾಹರಣೆಗೆ, ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳು, ಅಥವಾ ತ್ರಿಗುಣಗಳು, ಅಥವಾ ಪಶ್ಯಂತೀ, ಮಧ್ಯಮಾ ಮತ್ತು ವೈಖರೀ; ಅಥವಾ ಸೃಷ್ಟಿ, ಸ್ಥಿತಿ ಮತ್ತು ಲಯ, ಮೊದಲಾದವುಗಳು. ಬಿಂದುವಿನ ತ್ರಿಪುರಗಳಲ್ಲಿ, ಅಂದರೆ ತ್ರಿಕೋಣದ ಮೂರು ಭುಜಗಳಲ್ಲಿ ಎಲ್ಲಾ ದೇವತೆಗಳಿಗಿರುವ ಅಭೇದ್ಯವಾದ ಮಹಾನ್ ಸರ್ವವ್ಯಾಪಕತ್ವ ಗುಣವು ಸ್ಥಿತವಾಗಿದೆ ಎಂದು ಹೇಳಲಾಗುತ್ತದೆ. ದೇವತೆಗಳೆಂದರೆ ಈ ಪ್ರಪಂಚವನ್ನು ತೂಗಿಸಲು ಅವಶ್ಯವಿರುವ ವಿವಿಧ ರೀತಿಯ ಶಕ್ತಿಗಳು. ಅತ್ಯಂತ ಒಳಗಿನ ಚಕ್ರವು ಶ್ರೀ ಚಕ್ರದ ಉಳಿದೆಲ್ಲಾ ಚಕ್ರಗಳ ಉತ್ಪತ್ತಿಗೆ ಕಾರಣವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಬಿಂದುವು ಅತ್ಯಂತ ಒಳಗಿನ ತ್ರಿಕೋಣದ ಉಗಮಕ್ಕೆ ಕಾರಣವಾಗಿದ್ದರೆ ಉಳಿದೆಲ್ಲಾ ತ್ರಿಕೋಣಗಳು ಈ ಅತ್ಯಂತ ಒಳಗಿನ ತ್ರಿಕೋಣದಿಂದ ಉದ್ಭವಿಸಿವೆ. ಈ ವಿಷಯವು, ಶಿವನು ಶಕ್ತಿಯನ್ನು ಸೃಷ್ಟಿಸಿದ ಮತ್ತು ಶಕ್ತಿಯು ಉಳಿದೆಲ್ಲಾ ಸೃಷ್ಟಿಯನ್ನು ಉಂಟುಮಾಡಿದಳೆನ್ನುವ ಸಿದ್ಧಾಂತಕ್ಕೆ ಅನುಗುಣವಾಗಿದೆ. ಶ್ರೀ ಚಕ್ರವು ಸೃಷ್ಟಿ ಸಿದ್ಧಾಂತವನ್ನು ರೇಖಾಚಿತ್ರದ ಮೂಲಕ ಅಭಿವ್ಯಕ್ತಗೊಳಿಸುವುದರ ಹೊರತು ಮತ್ತೇನೂ ಅಲ್ಲ. ಪರಿಶುದ್ಧವಾದ ಜ್ಞಾನವನ್ನೂ ಸಹ ತ್ರಿಕೋಣವೆಂದು ಕರೆಯಲಾಗುತ್ತದೆ. ಈ ತ್ರಿಭುಜದ ಮೂರು ಕೋಣಗಳು ಮೂರು ವಿಧವಾದ ರೂಪಾಂತರಗಳನ್ನು ಸೂಚಿಸುತ್ತವೆ; ಅದೆಂದರೆ ಪ್ರಯೋಗ, ಅನುಭವ ಮತ್ತು ಅನುಭವಕ್ಕೆ ಕಾರಣವಾದ ವಸ್ತು (ನಾಮ ೨೫೪).

          ತ್ರಿಕೋಣ ಮತ್ತು ಬಿಂದುಗಳು ಶಿವನ ಲಿಂಗಾಕಾರವನ್ನು ಪ್ರತಿನಿಧಿಸುತ್ತವೆ. ಲಿಂಗ ಪುರಾಣ (೨.೪೭.೯) ಹೀಗೆ ಹೇಳುತ್ತದೆ, "ಲಿಂಗದ ಪೀಠವು ಉಮಾ ದೇವಿಯಾದರೆ, ಲಿಂಗವು ಸ್ವಯಂ ಮಹೇಶ್ವರನೇ ಆಗಿದೆ. ಇವೆರಡನ್ನೂ ಪೂಜಿಸುವುದರ ಮೂಲಕ, ದೇವ ಮತ್ತು ದೇವಿಯರನ್ನು ಪೂಜಿಸಿದಂತಾಗುತ್ತದೆ". ದೇವಿಯು ತನ್ನ ಸೂಕ್ಷಾತಿಸೂಕ್ಷ್ಮ ರೂಪವಾದ ಕುಂಡಲಿನೀ ರೂಪದಲ್ಲಿ ಶಿವನೊಂದಿಗೆ ಸಮಾಗಮ ಹೊಂದಿದಾಗ, ಆಕೆಯಲ್ಲಿ ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳ ಗರ್ಭಾಂಕುರವಾಗುತ್ತದೆ ಮತ್ತು ಇದರ ಮೂಲಕ ತ್ರಿಗುಣಗಳ ಸಮತುಲ್ಯ ಸ್ಥಿತಿಯಲ್ಲಿ ಗೊಂದಲವುಂಟಾಗಿ ತನ್ಮೂಲಕ ಸೃಷ್ಟಿಯ ಉಗಮವಾಗುತ್ತದೆ. ಸಮಸ್ತ ಬ್ರಹ್ಮಾಂಡವು ಈ ತ್ರಿಕೋಣದಿಂದ ಉಗಮವಾಗುತ್ತದೆ ಮತ್ತು ಇದಕ್ಕೆ ಕಾರಣವು ಈ ಬಿಂದುವಾಗಿದೆ. ದೇವಿಯು ತನ್ನ ಸಂಗಾತಿಯು ಪೂಜಿಸಲ್ಪಟ್ಟಾಗ ಆನಂದತುಂದಿಲಳಾಗುತ್ತಾಳೆ (ನಾಮ ೯೭೪, ಬಿಂದು-ತರ್ಪಣ-ಸಂತುಷ್ಟ). ಎಷ್ಟೇ ಆದರೂ ಆಕೆಯು ಶಿವ-ಪ್ರಿಯಾ (ನಾಮ ೪೦೯) ಮತ್ತು ಶಿವ-ಪರಾ (ನಾಮ ೪೧೦) ಅಲ್ಲವೇ?

          ಮೇಲಿನ ಕಾರಣಗಳಿಗಾಗಿ ಶ್ರೀ ಚಕ್ರದ ಪೂಜೆಯನ್ನು ಕಟ್ಟುನಿಟ್ಟಾದ ಏಕಾಂತದಲ್ಲಿ ಕೈಗೊಳ್ಳಬೇಕೆಂದು ಪದೇ ಪದೇ ಹೇಳಲಾಗುತ್ತದೆ.

          ಭಾವನೋಪನಿಷತ್ತು, ದ್ಯಾಸದ (ಧ್ಯಾನದ ಮೂಲ ಶಬ್ದ) ಮೂಲಕ ಕೈಗೊಳ್ಳಬೇಕಾದ ಆಚರಣೆಗಳ ಕುರಿತಾಗಿ ವಿವರಿಸುತ್ತದೆ. ಶ್ರೀಕೃಷ್ಣನೂ ಸಹ ಮಾನಸಿಕ ಪೂಜೆಯನ್ನು ಮಾಡುವುದಕ್ಕೆ ಪ್ರೇರೇಪಿಸುತ್ತಾನೆ. ಅವನು ಭಗವದ್ಗೀತೆಯಲ್ಲಿ (೬.೨೫) ಹೀಗೆ ಹೇಳುತ್ತಾನೆ, "ಒಬ್ಬನು ನಿಧಾನವಾಗಿ ಮನಸ್ಸು ವಿಚಲಿತಗೊಳ್ಳದೇ ಇರುವುದನ್ನು ರೂಢಿಸಿಕೊಳ್ಳಬೇಕು, ಮನಸ್ಸನ್ನು ಆತ್ಮನಲ್ಲಿ (ಪರಬ್ರಹ್ಮನಲ್ಲಿ) ನಿಲ್ಲಿಸಿ, ಏನನ್ನೂ ಚಿಂತಿಸಕೂಡದು".

         ಈ ತ್ರಿಕೋಣವನ್ನು ಕೃಷ್ಣನು ಬ್ರಹ್ಮಯೋನಿ ಎಂದು ಕರೆಯುತ್ತಾನೆ. ಭಗವದ್ಗೀತೆಯಲ್ಲಿ (೧೪.೩) ಹೀಗೆ ಹೇಳುತ್ತಾನೆ, "ಮಮ ಯೋನಿರ್ಮಹದ್ಬ್ರಹ್ಮ" "मम योनिर्महद्ब्रह्म" ಅಂದರೆ ’ಸಕಲ ಜೀವಿಗಳ ಹುಟ್ಟಿಗೆ ಕಾರಣವಾದ, ಜನನಕ್ಕೆ ಮೂಲವಾದ ಎಲ್ಲಾ ವಸ್ತುಗಳ ಒಟ್ಟುಮೊತ್ತವಾದ ಬ್ರಹ್ಮ’. ಮುಂದಿನ ಶ್ಲೋಕದಲ್ಲಿ ಅವನು ಹೀಗೆ ಹೇಳುತ್ತಾನೆ, ಪ್ರಕೃತಿಯು ಗರ್ಭಧರಿಸುವ ತಾಯಿಯಾದರೆ, ನಾನು ಗರ್ಭವನ್ನು ಇಡುವ ತಂದೆಯಾಗಿದ್ದೇನೆ". ಇದು ಶ್ರೀ ಚಕ್ರದ ಅತ್ಯಂತ ಒಳಗಿನ ತ್ರಿಕೋಣ ಮತ್ತು ಬಿಂದುವಿಗೆ ಅತ್ಯಂತ ಸೂಕ್ತವಾದ ಉದಾಹರಣೆಯಾಗಿದೆ.

Anaghā अनघा (987)

೯೮೭. ಅನಘಾ

           ಅಘಾ ಎಂದರೆ ಪಾಪ, ಕಲ್ಮಶ, ಯಾತನೆ, ಮೊದಲಾದವು. ಈ ನಾಮವು ದೇವಿಯು ಅನಘಾ ಎಂದರೆ ಈ ಗುಣಗಳನ್ನು ಹೊಂದಿಲ್ಲವೆಂದು ಹೇಳುತ್ತದೆ. ಈ ನಾಮವು, ದೇವಿಯು ಪರಬ್ರಹ್ಮದ ವಿಶಿಷ್ಠ ಗುಣಗಳನ್ನು ಪರಿಪಾಲಿಸುತ್ತಿದ್ದಾಗ್ಯೂ, ಆಕೆಯು ಪರಿಶುದ್ಧಳಾಗಿರುವುದು ಮುಂದುವರೆಯುತ್ತದೆ. ದೇವಿಯು ಶಿವನ ವಿಸ್ತೃತ ಭಾಗವಾಗಿದ್ದಾಳೆ, ಆತನು ನಿರಂತರ ಪರಿಶುದ್ಧನಾಗಿರುತ್ತಾನೆ.

Adbhuta-cāritrā अद्भुत-चारित्रा (988)

೯೮೮. ಅದ್ಭುತ-ಚರಿತ್ರಾ

          ಅದ್ಭುತ ಎಂದರೆ ಅಸಾಮಾನ್ಯವಾದ, ಅತ್ಯಾಶ್ಚರ್ಯಕರವಾದ, ಸೋಜಿಗದ, ಮೊದಲಾದ ಅರ್ಥಗಳನ್ನು ಹೊಂದಿದೆ ಮತ್ತು ಚಾರಿತ್ರ್ಯ ಎಂದರೆ ನಡವಳಿಕೆ, ಒಳ್ಳೆಯ ಗುಣ, ಸ್ವಭಾವ, ಮೊದಲಾದ ಅರ್ಥಗಳಿವೆ. ಹಿಂದಿನ ನಾಮವು ಕೆಲವೊಂದು ಗುಣಗಳನ್ನು ನಕಾರಾತ್ಮಕವಾಗಿ ಹೇಳಿದರೆ ಈ ನಾಮವು ಕೆಲವೊಂದು ಲಕ್ಷಣಗಳನ್ನು ಸಕಾರಾತ್ಮಕವಾಗಿ ಹೇಳುತ್ತದೆ. ಈ ಎರಡೂ ನಾಮಗಳು, ದೇವಿಯ ಸಗುಣ ಬ್ರಹ್ಮದ ರೂಪವನ್ನು ವಿವರಿಸುತ್ತವೆ. ಈ ನಾಮವು ದೇವಿಯ ನಡವಳಿಕೆಯು ಅಸಾಮಾನ್ಯವಾದುದು ಮತ್ತು ಅದ್ಭುತವಾದದ್ದು ಎಂದು ಹೇಳುತ್ತದೆ. ಚಾರಿತ್ರ್ಯ ಎಂದರೆ ಸ್ತ್ರೀಯರ ಪಾತಿವ್ರತ್ಯವನ್ನೂ ಅಥವಾ ಪವಿತ್ರತೆಯನ್ನೂ ಸೂಚಿಸುತ್ತದೆ. ಈ ಸಂದರ್ಭದಲ್ಲಿ, ದೇವಿಯು ಪರಮ ಪರಿಶುದ್ಧಳು ಎಂದಾಗುತ್ತದೆ. ಈ ವಿಶ್ಲೇಷಣೆಯು ಈ ನಾಮವನ್ನು ಇರಿಸಿರುವ ಸ್ಥಾನಕ್ಕೆ ಸರಿಹೊಂದುತ್ತದೆ.

Vāñchitārtha-pradāyinī वाञ्चितार्थ-प्रदायिनी (989)

೯೮೯. ವಾಂಚಿತಾರ್ಥ-ಪ್ರದಾಯಿನೀ

            ದೇವಿಯು ಭಕ್ತರು ಬೇಡಿದ್ದನ್ನು ಕರುಣಿಸುತ್ತಾಳೆ. ಈ ಗುಣವನ್ನು ಇದುವರೆಗಾಗಲೇ ನಾಮ ೬೩ ಹಾಗು ೫೬೭ರಲ್ಲಿ ಚರ್ಚಿಸಲಾಗಿದೆ. ಲಲಿತಾ ತ್ರಿಶತಿಯಲ್ಲಿ ಮೂರು ನಾಮಗಳು, ೪೩, ೧೪೪ ಹಾಗು ೨೬೦ ಇದೇ ಅರ್ಥವನ್ನು ಕೊಡುತ್ತವೆ.

            ಸೌಂದರ್ಯ ಲಹಿರೀ (ಸ್ತೋತ್ರ ೪) ಈ ಗುಣವನ್ನು ವಿವರಿಸುತ್ತದೆ. ಅದು ಹೀಗೆ ಹೇಳುತ್ತದೆ, "ಹೇ ಭಗವತೀ, ಲೋಕಶರಣ್ಯೇ, ನಿನ್ನೊಬ್ಬಳನ್ನು ಹೊರತು ಪಡಿಸಿ ಇತರ ದೇವತೆಗಳೆಲ್ಲಾ ತಮ್ಮ ಎರಡು ಕೈಗಳಲ್ಲಿ ಅಭಯಮುದ್ರೆಯನ್ನೂ ವರಪ್ರದಮುದ್ರೆಯನ್ನೂ ಧರಿಸಿದ್ದಾರೆ, ನೀನೊಬ್ಬಳು ಮಾತ್ರ ಅಂಥ ಅಭಯ ಮತ್ತು ವರಪ್ರದ ಮುದ್ರೆಗಳನ್ನು ಅಭಿನಯಿಸುತ್ತಿಲ್ಲ, ಏಕೆಂದರೆ ನಿನ್ನ ಚರಣಗಳೇ ನಮ್ಮನ್ನು ಭಯದಿಂದ ಕಾಪಾಡುವುದಕ್ಕೂ ಮತ್ತು ಕೋರಿಕೆಗಿಂತ ಅಧಿಕವಾಗಿ ಫಲಗಳನ್ನು ಕೊಡುವುದಕ್ಕೂ ಸಮರ್ಥವಾಗಿವೆ". ಈ ಸ್ತೋತ್ರವು ಸೂಕ್ಷ್ಮವಾಗಿ ಬಾಲಾ ಮಂತ್ರ - ಐಂ-ಕ್ಲೀಂ-ಸೌಃ ऐं-क्लीं-सौः ಅನ್ನು ಸೂಚಿಸುತ್ತದೆ.

           ಕಂಚಿ ಪರಮಾಚಾರ್ಯರು ಹೀಗೆ ಹೇಳುತ್ತಾರೆ, "ಒಂದು ಆಕಾರದ ಮೇಲೆ ಧ್ಯಾನಿಸುವುದು ಅಥವಾ ಒಂದು ಮಂತ್ರವನ್ನು ಜಪಿಸುವಂತೆ ಮನಸ್ಸನ್ನು ಅನುಗೊಳಿಸುವುದು ಬಹು ಕಠಿಣವಾದದ್ದು. ಆದರೆ ಮೊದಲನೆಯ ಹೆಜ್ಜೆಯನ್ನಂತೂ ಇಡಲೇ ಬೇಕು. ಯಾವಾಗ ನಮ್ಮ ಮನಸ್ಸಿಗೆ ಹಿತವಾಗುತ್ತದೆಯೋ ಆಗ ಮಾತ್ರವೇ ನಾವು ಮೊದಲ ಹೆಜ್ಜೆಯನ್ನಿರುಸುತ್ತೇವೆ. ಆಧ್ಯಾತ್ಮಿಕ ಮಾರ್ಗದಲ್ಲಿ ಮನಸ್ಸಿಗೆ ಮುದ ನೀಡುವ ಮೊದಲನೇ ಹೆಜ್ಜೆಯಿದೆ, ಅದೆಂದರೆ ಅಂಬಿಕೆಯ ಪಾದಗಳು. ಯಾವುದೇ ಕಷ್ಟವಿಲ್ಲದೇ ಒಬ್ಬನು ತಾಯಿಯ ಪಾದಪದ್ಮಗಳ ಮೇಲೆ ಧ್ಯಾನಿಸುವುದನ್ನು ಆರಂಭಿಸಬಹುದು. ನಾವು ಆ ಪಾದಪದ್ಮಗಳ ಸೌಂದರ್ಯ ಮತ್ತು ತಂಪನ್ನು ಆಲೋಚಿಸುತ್ತಿದ್ದರೆ, ಮನಸ್ಸು ಅವುಗಳ ಮೇಲೆ ತಲ್ಲೀನವಾಗುವುದು ಅಭ್ಯಾಸವಾಗುತ್ತದೆ. ನಾವು ಈ ವಿಧವಾಗಿ ನಿರಂತರವಾಗಿ ಪೂಜಿಸುತ್ತಿದ್ದರೆ, ದೇವಿಯ ಕೃಪೆಯಿಂದಾಗಿ ಈ ಜನ್ಮಕ್ಕೆ ಮುಕ್ತಿಯು ದೊರಯುತ್ತದೆ. ಅಥವಾ ಒಬ್ಬರು ಮೊದಲು ದೇವಿಯ ಮಹಾತ್ಮ್ಯೆಯನ್ನು ಕೊಂಡಾಡುವ ಸ್ತುತಿ ಅಥವಾ ಸ್ತೋತ್ರಗಳನ್ನು ಓದಬಹುದು. ಮೊದಲನೆಯ ಹಂತವು ಓದುವುದಾಗಿದೆ, ಎರಡನೆಯದು ಜಪವಾದರೆ ಅದರ ನಂತರದ್ದು ಧ್ಯಾನವಾಗಿದೆ. ನಾವು ಈ ವಿಧವಾಗಿ ಧ್ಯಾನಿಸುತ್ತಿರಬೇಕಾದರೆ ಹೀಗೆ ಪ್ರಾರ್ಥಿಸಬೇಕು, "ಪರಾಶಕ್ತಿಯೇ ನನ್ನನ್ನು ಆಶೀರ್ವದಿಸು, ಪ್ರಾಣವು ಈ ದೇಹವನ್ನು ತ್ಯಜಿಸಿದಾಗ, ನಾನು ನಿನ್ನ ಧ್ಯಾನದಲ್ಲಿಯೇ ಮುಳುಗಿರಬೇಕು ಮತ್ತು ನಾನು ಪುನಃ ನಿನ್ನನ್ನು ಸೇರಬೇಕು". ಈ ವಿಧವಾಗಿ ನಾವು ದಿನ ನಿತ್ಯವೂ ದೇವಿಯ ಪಾದಪದ್ಮಗಳಲ್ಲಿ ಪ್ರಾರ್ಥಿಸುತ್ತಿದ್ದರೆ, ನಮ್ಮ ಪ್ರಾಣವು ದೇಹದಿಂದ ಹೊರಟು ಹೋಗುವ ಕ್ಷಣದಲ್ಲಿಯೂ ಸಹ ದೇವಿಯ ಮೇಲೆ ನಮ್ಮ ಧ್ಯಾನವು ಸ್ಥಿರವಾಗಿರುತ್ತದೆ; ಆಕೆಯ ಕೃಪೆಯಿಂದಾಗಿ. ಈ ದೇಹವು ಇಲ್ಲವಾದ ಮೇಲೆ ನಾವು ದೇವಿಯಲ್ಲಿ ಸಂಪೂರ್ಣವಾಗಿ ಲೀನವಾಗಬಹುದು, ಜನನ-ಮರಣಗಳ ಚಕ್ರದಿಂದ ಬಿಡುಗಡೆ ಹೊಂದಿ ನಾವೇ ಸ್ವತಃ ಪರಮಾನಂದವಾಗುತ್ತೇವೆ” (ಭಗವಂತನ ಧ್ವನಿ - ಸಂಪುಟ ೧; Voice of God – Volume I) .

Abhyāsātiśaya-jñātā अभ्यासातिशय-ज्ञाता (990)

೯೯೦. ಆಭ್ಯಾಸಾತಿಶಯ-ಜ್ಞಾತಾ

           ಅಭ್ಯಾಸ ಎಂದರೆ ಒಬ್ಬನ ದೃಷ್ಟಿಯನ್ನು ಅಥವಾ ಗಮನವನ್ನು ಕೇಂದ್ರೀಕರಿಸುವುದು (ಉಂಟು ಮಾಡುವುದು), ರೂಡಿಸಿಕೊಳ್ಳುವುದು, ಮೊದಲಾದ ಅರ್ಥಗಳಿವೆ. ಅತಿಶಯವೆಂದರೆ ಪ್ರಮುಖವಾದ, ಉನ್ನತವಾದ, ಎಣೆಯಿಲ್ಲದ, ಮೊದಲಾದ ಅರ್ಥಗಳನ್ನು ಹೊಂದಿದೆ ಮತ್ತು ಜ್ಞಾನವೆಂದರೆ ತಿಳಿದುಕೊಳ್ಳು, ಅಥವಾ ಅರಿತುಕೊಳ್ಳು ಎನ್ನುವ ಅರ್ಥಗಳನ್ನು ಹೊಂದಿದೆ. ಒಟ್ಟಾರೆಯಾಗಿ ಈ ನಾಮವು ಒಬ್ಬನು ತನ್ನ ಸಂಪೂರ್ಣ ಗಮನವನ್ನು ದೇವಿಯ ಪರಮೋನ್ನತ ಗುಣಗಳ ಮೇಲೇ ಕೇಂದ್ರೀಕರಿಸುವುದನ್ನು ನಿರಂತರವಾಗಿ ಅಭ್ಯಸಿಸಬೇಕು ಎಂದು ಹೇಳುತ್ತದೆ. ಇಲ್ಲಿ ದೇವಿಯನ್ನು ಅರಿಯುವಲ್ಲಿ ಮನಸ್ಸಿನ ಪಾತ್ರದ ಪ್ರಾಮುಖ್ಯತೆಯನ್ನು ಒತ್ತುಕೊಟ್ಟು ಹೇಳಲಾಗಿದೆ. ವಾಗ್ದೇವಿಗಳು ಇಲ್ಲಿ ದೇವಿಯ ಮಾನಸಿಕ ಪೂಜೆ ಅಥವಾ ಧ್ಯಾನದ ಕುರಿತು ಸೂಕ್ಷ್ಮವಾಗಿ ತಿಳಿಸಿದ್ದಾರೆ.

          ಬ್ರಹ್ಮಸೂತ್ರವು (೪.೧.೧) ಹೀಗೆ ಹೇಳುತ್ತದೆ, "ಉಪಾಸನೆಯನ್ನು ಪುನಃ ಪುನಃ ಮಾಡಬೇಕು, ಏಕೆಂದರೆ (ಉಪನಿಷತ್ತುಗಳು) ಉಪದೇಶಗಳನ್ನು ಅನೇಕ ಬಾರಿ ಹೇಳಿವೆ". ಅದರ ವಿವರಣೆ ಏನೆಂದರೆ ಹಾಗೆ ಪುನರುಚ್ಛರಿಸಲ್ಪಟ್ಟ ಸೂಚನೆಗಳನ್ನು ಶ್ರವಣ, ಮನನ ಮತ್ತು ನಿಧಿಧ್ಯಾಸನಗಳ (ಧ್ಯಾನ) ಮೂಲಕ ಮಾಡಬೇಕು. "ಅಹಂ ಬ್ರಹ್ಮಾಸ್ಮಿ" ನಾನು ಬ್ರಹ್ಮವಾಗಿದ್ದೇನೆ ಅಥವಾ "ತತ್ತ್ವಮಸಿ" ನಾನು ಅದು ಆಗಿದ್ದೇನೆ, ಎನ್ನುವ ಮಹಾನ್ ವಾಕ್ಯಗಳು  ಉಪನಿಷತ್ತುಗಳಲ್ಲಿ ಪುನರುಕ್ತವಾದ ಸೂಚನೆಗಳಾಗಿವೆ.  

          ಕೃಷ್ಣನೂ ಸಹ ಧ್ಯಾನದ ಮಹತ್ವವನ್ನು ಭಗವದ್ಗೀತೆಯಲ್ಲಿ (೯. ೨೨) ವಿಶೇಷವಾಗಿ ಹೇಳುತ್ತಾನೆ. ಅವನು ಹೀಗೆ ಹೇಳಿದ್ದಾನೆ, "ಯಾರು ನನ್ನನ್ನು (ಬ್ರಹ್ಮವನ್ನು) ಅನನ್ಯರಾಗಿ (ತಾವು ಮತ್ತು ಬ್ರಹ್ಮವು ಒಂದೇ ಎಂದು ಭಾವಿಸಿ)  ನಿರಂತರವಾಗಿ ಧ್ಯಾನಿಸುತ್ತಾ, ಉಪಾಸನೆಯನ್ನು ಮಾಡುತ್ತಾರೋ ಅವರ ಯೋಗಕ್ಷೇಮವನ್ನು ನಾನು ವಹಿಸಿಕೊಳ್ಳುತ್ತೇನೆ".

          ದೇವಿಯನ್ನು ನಿರಂತರವಾದ ಧ್ಯಾನದ ಮೂಲಕ ನೋಡಬೇಕೆಂದು ಹೇಳಲಾಗುತ್ತದೆ. ಸತತವಾದ ಧ್ಯಾನದ ಅಭ್ಯಾಸದಿಂದ, ಪರಮಾತ್ಮದಲ್ಲಿ ಆತ್ಮವು ಒಂದಾಗಿ ದೇವಿಯು ಆವಿರ್ಭಾವಗೊಳ್ಳುತ್ತಾಳೆ.

          ಮೊದಲು ದೇವಿಯ ಸ್ಥೂಲ ರೂಪ, ಸೂಕ್ಷ್ಮ ರೂಪ ಮತ್ತು ಸೂಕ್ಷಾತಿಸೂಕ್ಷ್ಮ ರೂಪಗಳನ್ನು ಚರ್ಚಿಸಿದ ನಂತರ ವಾಗ್ದೇವಿಗಳು, ನೇರವಾಗಿ ಆಕೆಯ ಭಕ್ತರಿಗೆ ಧ್ಯಾನವನ್ನು ಆಭ್ಯಸಿಸಲು ಉಪದೇಶಿಸುತ್ತಿದ್ದಾರೆ.

                                                                                ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 986 - 990 http://www.manblunder.com/2010/07/lalitha-sahasranamam-986-990.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Mon, 01/06/2014 - 20:58

ಶ್ರೀಧರರೆ, "೨೦೬. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೯೮೬ -೯೯೦
________________________________
.
೯೮೬. ತ್ರಿಕೋಣಗಾ
ಶ್ರೀ ಚಕ್ರದತಿಯೊಳಗಿನ ತ್ರಿಕೋಣ, ಸರ್ವ ಸಿದ್ಧಿ ಪ್ರದಾ ಚಕ್ರ
ಅಷ್ಟಮಾವರಣ ಶಿವ ಬಿಂದು ಜತೆ ಶಕ್ತಿ ತ್ರಿಕೋಣ ಸೃಷ್ಟಿಸಾರ
ಪರಾ ಕಂಪನ, ದಿವ್ಯ ಸ್ಪಂದನ ಸಾಲು ತರಂಗದಲಿ ತ್ರಿಕೋಣ
ಶಿವಸೃಷ್ಟಿಯಾಗಿ ನಿವಸಿತೆ ಲಲಿತೆ, ತ್ರಿಕೋಣಗಾ ಅನುಕರಣ ||
.
ಅನುಕರಣೆ ಮರುಕಳಿಸಿ ಮಿಕ್ಕೆಲ್ಲ ತ್ರಿಕೋಣ ಸೃಷ್ಟಿಸುತ ಶಕ್ತಿ
ಮೂಲ ತ್ರಿಕೋಣ ತ್ರಿಪುಟಿ ಸಂಗಮ, ಭುಜಾ ದೈವದುಪಸ್ಥಿತಿ
ಅಭೇದ್ಯ ಸರ್ವವ್ಯಾಪಕತ್ವ ಭುಜಕೆ, ಪರಿಶುದ್ಧಜ್ಞಾನ ತ್ರಿಕೋಣ
ಸೃಷ್ಟಿಸಿದ್ದಾಂತ ರೇಖಾಚಿತ್ರದಭಿವ್ಯಕ್ತಿ ಶ್ರೀಚಕ್ರ, ಮಿಕ್ಕೆಲ್ಲ ಗೌಣ ||
.
ತ್ರಿಭುಜದ ಕೋಣ ರೂಪಾಂತರ, ಪ್ರಯೋಗ-ಅನುಭವ-ಕಾರಣ ವಸ್ತು
ತ್ರಿಕೋಣ-ಬಿಂದು ಲಿಂಗಾಕಾರ, ಉಮಾಪೀಠ ಲಿಂಗಮಹೇಶ್ವರವಾಯ್ತು
ಕುಂಡಲಿನೀ ಬಿಂದು ಸಂಗಮಸ್ವರ, ಇಚ್ಛಾ-ಜ್ಞಾನ-ಕ್ರಿಯಾ ಗರ್ಭಾಂಕುರ
ಸಮತುಲ್ಯ ತ್ರಿಗುಣ ಅದುರಿ ಸೃಷ್ಟಿಗುಗಮ, ಸಕಲ ಬ್ರಹ್ಮಾಂಡಕೆ ಆಕರ ||
.
ಸಂಗಾತಿ ಪೂಜೆಗಾನಂದತುಂದಿಲೆ ಲಲಿತೆ, ಪ್ರಿಯಕರನೋಲೈಸೆ ಹರ್ಷ
ಸೃಷ್ಟಿ ಸಮಾಗಮ ಏಕಾಂತದ ಪೂಜೆ, ಕಟ್ಟುನಿಟ್ಟಿನಲಿ ಶೀ ಚಕ್ರ ಸ್ಮರಿಸ
ಬ್ರಹ್ಮಯೋನಿ ಪ್ರಕೃತಿ ತಾಯಿ, ಪರಬ್ರಹ್ಮ ಗರ್ಭವಿಡೆ ಸ್ಥಾಯಿ ಸೃಷ್ಟಿಗೆ
ಅವಿಚಲಿತಮನ ಮಾನಸಿಕ ಪೂಜೆ-ಧ್ಯಾನ, ಒಳತ್ರಿಕೋಣ ಬಿಂದುವಿಗೆ ||
.
೯೮೭. ಅನಘಾ
ನಿರಂತರದೆ ಪರಿಶುದ್ಧನಾಗಿಹ ಶಿವ, ದೇವಿಯವನ ವಿಸ್ತೃತ ಭಾಗ
ಪರಿಶುದ್ಧತೆ ನಿರಂತರ ತೊಳೆದೆ, ಪಾಪಕಲ್ಮಶಯಾತನೆಯ ಅಘಾ
ಪರಬ್ರಹ್ಮದ ಗುಣ ಪರಿಪಾಲಕಿ ಲಲಿತೆ, ಅವಗುಣಗಳಿರದಾ ಜಗ
ಶಿವನರ್ಧಾಂಗಿ ಪರಿಶುದ್ಧತೆಗೂ ಭಾಗಿ, ಲಲಿತೆ ತಾನಾಗಿರೆ ಅನಘಾ ||
.
೯೮೮. ಅದ್ಭುತ-ಚರಿತ್ರಾ
ಸ್ತ್ರೀ ಪಾತಿವ್ರತ್ಯ, ಪವಿತ್ರತೆಯೆ ಚಾರಿತ್ರ್ಯಾ,ಪರಿಶುದ್ಧತೆಗೆ ಭಾಷ್ಯ
ಅಸಾಮಾನ್ಯ ಅದ್ಭುತ ನಡವಳಿಕೆ ದೇವಿಯ ಅದ್ಭುತ ಚಾರಿತ್ರ್ಯಾ
ಸುಗುಣಗಳ ಭಂಢಾರ ಲಲಿತೆ, ಸಗುಣ ಬ್ರಹ್ಮ ರೂಪಿನಾ ಬಣ್ಣನೆ
ನಿರ್ಗುಣಾಸಗುಣ ರೂಪಿನಲನಾವರಣ ಲಲಿತೆ ಪರಬ್ರಹ್ಮ ತಾನೆ ||
.
೯೮೯. ವಾಂಚಿತಾರ್ಥ-ಪ್ರದಾಯಿನೀ
ಬೇಡಿದ ವರದಾಯಿನಿ ಪಾದದಲೇ ಲಲಿತೆ, ಭಕ್ತ ಬೇಡಿಕೆ ಈಡೇರಿಸುವಂತೆ
ಆಧ್ಯಾತ್ಮಿಕಮಾರ್ಗ ಮೊದಲ ಕಠಿಣ ಹೆಜ್ಜೆ, ದೇವಿ ಪಾದ ಧ್ಯಾನದಿಂದಿಡುತೆ
ತಲ್ಲೀನ ಮನ ಓದುತ ಜ್ಞಾನ, ಜಪ, ಧ್ಯಾನ ಹಂತ ಹಂತ ಮುಕ್ತಿಗಾಗೆ ಅಣಿ
ಚರಮಧ್ಯಾನ ದೇವಿಲೀನ, ಪರಮಾನಂದವೀವ ವಾಂಚಿತಾರ್ಥಪ್ರದಾಯಿನೀ ||
.
೯೯೦. ಅಭ್ಯಾಸಾತಿಶಯ-ಜ್ಞಾತಾ
ದೇವಿ ಪರಮೋನ್ನತ ಗುಣ, ನಿರಂತರಾಭ್ಯಾಸ ಗಮನ ಕೇಂದ್ರೀಕರಣ
ಮಾನಸಿಕ ಪೂಜೆಯಾಗಿ ಪುನರುಕ್ತಿ ಶ್ರವಣ-ಮನನ-ಧ್ಯಾನ ಮುಖೇನ
ಅನನ್ಯ ಭಾವದುಪಾಸನೆ, ದೇವಿಯ ಮನದಿಂದರಿವಾ ಧ್ಯಾನ ಸತತ
ಆತ್ಮ ಪರಮಾತ್ಮ ವಿಲೀನದೆ ಆವಿರ್ಭಾವ, ಅಭ್ಯಾಸಾತಿಶಯ-ಜ್ಞಾತಾ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು