ಸರಕಾರಿ ಶಾಲೆಯಲ್ಲಿ ಒಂದು ದಿನ ಸಾಮಾನ್ಯ ಗಣಕಯಂತ್ರ ಜ್ಞಾನ ಪಾಠ ಮಾಡಲು ಹೋದಾಗ

ಸರಕಾರಿ ಶಾಲೆಯಲ್ಲಿ ಒಂದು ದಿನ ಸಾಮಾನ್ಯ ಗಣಕಯಂತ್ರ ಜ್ಞಾನ ಪಾಠ ಮಾಡಲು ಹೋದಾಗ

          ಅದೊಂದು ಹಳೆಯ ಕಟ್ಟಡದಲ್ಲಿರುವ ಶಾಲೆ. ಆ ಶಾಲೆಯ ಮುಂದಿದ್ದ ಪುಟ್ಟ ಅಂಗಳದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಾಲು-ಸಾಲಲ್ಲಿ ನಿಂತು ಪ್ರಾರ್ಥನೆಯನ್ನು ಹಾಡುತ್ತಿದ್ದರು.ಸ್ವಲ್ಪ ಜನ ಹೊಸ ಸಮವಸ್ತ್ರ ಧರಿಸಿದ್ದರೆ, ಸುಮಾರು ಜನ ಹಳೆಯ ಬಿಳಿ ನೀಲಿ ಸಮ ವಸ್ತ್ರ ಧರಿಸಿದ್ದರು. ಹೊಸದಾಗಿ ಸೇರ್ಪಡೆಯಾದ ಸ್ವಲ್ಪ ಹುಡುಗರು, ಬೇರೆ ಬಣ್ಣದ ಬಟ್ಟೆ ಧರಿಸಿದ್ದರು. ತಡವಾಗಿ ಬಂದ ಬಾಲಕ-ಬಾಲಕಿಯರು ಬೀಗ ಹಾಕಿದ ಗೇಟಿನ ಹೊರಗಡೆ ನಿಂತಿದ್ದರು.ಅವರಿಗೆ ಏನು ಶಿಕ್ಷೆ ಕಾದಿತ್ತೊ? ಪ್ರಾರ್ಥನೆಯ ನಂತರ ಶಾರೀರಿಕ ಶಿಕ್ಷಕರು ಸರಳವಾದ ವ್ಯಾಯಾಮಗಳನ್ನು ಮಾಡಿಸಿದರು.ಉಳಿದ ಶಿಕ್ಷಕ-ಶಿಕ್ಷಕಿಯರು ತಮ್ಮ ತಮ್ಮ ಮನೆಗಳ ಕಷ್ಟಸುಖಗಳ ಬಗ್ಗೆ ಮಾತಲ್ಲಿ ತೊಡಗಿದ್ದರು.ವ್ಯಾಯಾಮ ಮುಗಿದ ನಂತರ ಶಾಲೆಯ ಮುಖ್ಯಮಂತ್ರಿಯಾದ ಬಾಲಕಿಯೊಬ್ಬಳು, ಆ ದಿನದ ವೃತ್ತಪತ್ರಿಕೆಯಿಂದ ೨-೩ ಮುಖ್ಯಾಂಶಗಳನ್ನು ಓದಿದಳು.ಶಾಲಾ-ಮುಖ್ಯಾಧ್ಯಾಪಕರು ವಿಧ್ಯಾರ್ಥಿಗಳಿಗೆ ತಮ್ಮ ತಮ್ಮ ವರ್ಗಗಳಿಗೆ ಹೊಗಲು ಆದೇಶಿಸಿದರೆ, ತಡವಾಗಿ ಬಂದ ವಿದ್ಯಾರ್ಥಿಗಳಿಗೆ ತಪ್ಪನ್ನು ಪುನರಾವರ್ತಿಸದಿರಿ ಎಂದು ಗದರಿಸಿ ಆಯಾ ತರಗತಿಗೆ ಕಳಿಸಿದರು.

          ಅಲ್ಲಿಯ ಕೇಶವಮೂರ್ತಿ ಶಿಕ್ಷಕರು ನನಗೆ ಮೊದಲನೇ ಮಹಡಿಯಲ್ಲಿದ್ದ ಗಣಕಯಂತ್ರದ ಕೊಠಡಿಯನ್ನು ತೋರಿಸಿಕೊಟ್ಟರು. ಗಣಕಯಂತ್ರಗಳಿರುವ ಕೊಠಡಿಯ ಬೀಗ ತೆಗೆದ ತಕ್ಷಣ, ನನ್ನೊಂದಿಗಿದ್ದ ಎಂಟನೇ ವರ್ಗದ ೧೨ ಮಕ್ಕಳು ಓಡಿ ಹೋಗಿ ಗಣಕಯಂತ್ರಗಳ ಮುಂದೆ ಹೋಗಿ ಕುಳಿತರು. ಗಣಕಯಂತ್ರಗಳ ಬಗ್ಗೆ ಸ್ವಲ್ಪ ಜ್ಞಾನ ಇದ್ದ ಹುಡುಗರು ಸರಿಯಾದ ಗುಂಡಿಗಳನ್ನು ಒತ್ತಿ ಗಣಕಯಂತ್ರಗಳನ್ನು ಆರಂಭಿಸಿದರು ಕೂಡ.ಉಳಿದವರು ಕೀಬೋರ್ಡ್ ಮೌಸ್‍ಗಳನ್ನು ಒತ್ತುತ್ತಲೊ, ಸರ್ ಸರ್ ಅಂತ ಕೂಗುತ್ತಲೊ,ಅಲ್ಲಿಂದ ಇಲ್ಲಿಂದಿಲ್ಲಿಗೆ ಓಡಾಡತೊಡಗಿದರು.ಗಣಕಯಂತ್ರಗಳು ಶುರು ಆದ ಕೂಡಲೆ ಸ್ವಲ್ಪ ಬಾಲಕರು ಗೇಮ್ಸ್ ಆಡುತ್ತೇವೆ ಅಂತ ಕೂಗತೊಡಗಿದರೆ, ಎರಡು ಹುಡುಗರು ಪೇಂಟ್ ಪ್ರೊಗ್ರಾಮ್ ಅನ್ನು ಆರಂಭಿಸಿ, ಮನೆ ಚಿತ್ರ ಬಿಡಿಸತೊಡಗಿದರು.ಎಲ್ಲ ಹುಡುಗರನ್ನು ಸಂಭಾಳಿಸಿ ಸಮಜಾಯಿಸಿ ಸಮಾಧಾನಿಸುವುದರೊಳಗೆ ಸ್ವಲ್ಪ ಹೊತ್ತೇ ತಗುಲಿತು.ಕಪ್ಪು ಹಲಗೆಯ ಮೇಲೆ ಒಂದು ರಜಾ ಅರ್ಜಿಯನ್ನು ಬರೆದು, ಹುಡುಗರಿಗೆ ಅದನ್ನೇ ಟೈಪ್ ಮಾಡಲು ಹೇಳಿದೆನು.ಗಣಕಯಂತ್ರಗಳ ಸಂಖ್ಯೆ ಬಾಲಕರಿಗಿಂತ ಕಡಿಮೆ ಇದ್ದರಿಂದ, ಒಂದೊಂದು ಗಣಕಯಂತ್ರದ ಮುಂದೆ ೨-೩ ಹುಡುಗರು ಕುಳಿತಿದ್ದರು.ಹುಡುಗರ ನಡುವೆ ಆಗಾಗ ಕೀಬೋರ್ಡ್ ಮೌಸ್‍ಗಳಿಗೆ ಕಿತ್ತಾಟ ಪದೆ ಪದೆ ನಡೆಯುತ್ತ ಇತ್ತು."ಸರ್ ನನಗೆ ಟೈಪ್ ಮಾಡೋಕೆ ಬಿಡ್ತಾ ಇಲ್ಲಾ" "ಸರ್ ಆವಾಗಿಂದ ಇವನೇ ಟೈಪ್ ಮಾಡುತ್ತ ಇದ್ದಾನೆ" "ಹಾಗಲ್ಲ ಮಾಡೊದು ನಾನು ತೋರಿಸುತ್ತೇನೆ" "ನೀನೇ ಎಲ್ಲ ಹಾಳು ಮಾಡಿದ್ದು" ಈ ಮಾತುಗಳು ಮೇಲಿಂದ ಮೇಲೆ ಕೇಳಿ ಬರುತ್ತಾ ಇದ್ದವು.ಮಧ್ಯದಲ್ಲಿ ಮುಖ್ಯೊಪಾಧ್ಯಾಯರು ಬಂದಾಗ ಸ್ವಲ್ಪ ಹೊತ್ತು ಸುಮ್ಮನೆ ಇದ್ದದ್ದು ಹೊರತು ಪಡಿಸಿದರೆ, ಮಕ್ಕಳ ಗದ್ದಲ ಊರಿನಲ್ಲಿ ನೆರೆಯುವ ಜಾತ್ರೆಯನ್ನು ಮೀರಿಸುವಂತಿತ್ತು.ಆದರೂ ಎರಡು  ತಂಡಗಳು ಬೇಗನೆ ಟೈಪಿಂಗ್ ಮುಗಿಸಿ "ಸರ್ ಗೇಮ್ಸ್ ಆಡಬಹುದಾ?" ಎಂದು ಕೇಳಿದರು. ಅವರಉ ಬರೆದ ಅರ್ಜಿಯನ್ನು ಇನ್ನಷ್ಟು ಸುಧಾರಿಸಲು ಸಲಹೆ ಕೊಟ್ಟೆನು.ಉಳಿದ ತಂಡಗಳು ಮುಗಿಸುವುದರೊಳಗೆ ಒಂದು ಘಂಟೆ ಕಳೆಯಿತು. ಸಮಯ ಅಷ್ಟು ಬೇಗ ಕಳೆದಿದ್ದು ಗೊತ್ತೇ ಆಗಲಿಲ್ಲ.ಆಮೇಲೆ ಹುಡುಗರನ್ನು ಗಣಕಯಂತ್ರದ ಮುಂದಿನಿಂದ ಏಳಿಸುವುದು ಇನ್ನೊಂದು ಸವಾಲೇ ಆಗಿತ್ತು.ಅವರನ್ನೆಲ್ಲ ಅವರ ತರಗತಿಗೆ ಕಳುಹಿಸಿ  ಅವರ ನಂತರ ಬಂದ ಬಾಲಕಿಯರ ಗುಂಪಿಗೆ ಅದೇ ಪಾಠ ಪುನರವರ್ತಿಸಿದ್ದಾಯಿತು. ಹುಡುಗಿಯರು ಸ್ವಲ್ಪ ಶಾಂತ ಸ್ವಭಾವದವರಾದ್ದರಿಂದ ಆ ಪಾಠವನ್ನು ನಿಭಾಯಿಸುವುದು ಸ್ವಲ್ಪ ಸುಲಭವಾಯಿತು.

            ಇದೆಲ್ಲ ಆಗಿದ್ದು ಒಂದು ಶನಿವಾರದ ದಿನ ಕತ್ತರಿಗುಪ್ಪೆ ಹತ್ತಿರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.ನನಗೆ ಚೆನ್ನಾಗಿ ಪರಿಚಯ ಇದ್ದ ಪ್ರಸನ್ನರವರು ಕಳೆದ ೨ ವರ್ಷಗಳಿಂದ ಮಕ್ಕಳಿಗೆ ಸಾಮಾನ್ಯ ಗಣಕಯಂತ್ರ ಜ್ಞಾನದ ಪಾಠವನ್ನು ಶನಿವಾರದ ದಿನ ನಡೆಸಿಕೊಂಡು ಬಂದಿದ್ದಾರೆ. ಆ ವಾರ ಪ್ರಸನ್ನರವರು ಆಫ಼ೀಸ್‍ನ ಕಾರ್ಯದ ನಿಮಿತ್ತ ಪರವೂರಿನಲ್ಲಿದ್ದರಿಂದ, ಆ ದಿನ ನನಗೆ ಆ ಕೆಲಸವನ್ನು ವಹಿಸಿದ್ದರು.ಪಾಠ ಮಾಡುವುದರೆಂದರೆ ನನಗೆ ಒಂದು ರೀತಿಯ ಅಂಜಿಕೆ. ಅದರಲ್ಲೂ ಮಕ್ಕಳಿಗೆ ಕಲಿಸುವುದು ಕಷ್ಟ ಎಂದು  ಗೊತ್ತಿದ್ದರಿಂದ, ಆ ಕೆಲಸವನ್ನು ಮುಂಚೆ ಆದಷ್ಟು ತಪ್ಪಿಸಿಕೊಂಡಿದ್ದೆ.ಆದರೆ ಆ ದಿನ ಒಪ್ಪಿಕೊಂಡು ಹೋಗಿದ್ದೆ. ಅಲ್ಲಿ ಹೋಗಿದ್ದರಿಂದ ಒಳ್ಳೆಯ ಅನುಭವವೇ ಆಯಿತು.

            ಇದಾದ ನಂತರ ಮನೆಯ ಹತ್ತಿರದ ವೀರಭದ್ರ ನಗರ ಶಾಲೆಗೆ ಹೋಗಿ ಅಲ್ಲಿಯ ಮುಖ್ಯಾಧ್ಯಾಪಕರನ್ನು ಕಂಡು ಮಾತನಾಡಿಸಿದೆನು. ಆ ಶಾಲೆಗೆ ಹತ್ತಿರದ ಪಿ.ಇ.ಎಸ್ ವಿದ್ಯಾ ಶಿಕ್ಷಣ ಸಂಸ್ಥೆಯು ಆ ಶಾಲೆಗೆ ಹತ್ತು ಒಳ್ಳೆಯ ಗಣಕಯಂತ್ರಗಳ ಜೊತೆಗೆ ಒಂದು ಪ್ರೊಜೆಕ್ಟರ್‌ನ್ನು ಕೂಡ ದಾನವಾಗಿ ಕೊಟ್ಟಿದ್ದಾರೆ.ಮೊದಲ ೨ ವರ್ಷ ಒಬ್ಬ ಶಿಕ್ಷಕರನ್ನು ಕೂಡ ನೇಮಿಸಿ ಅವರಿಗೆ ಸಂಬಳವನ್ನು ಕೊಟ್ಟು ಪಾಠಗಳು ಸರಿಯಾಗಿ ನಡೆಯುವಂತೆ ನೋಡಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಾರಣಾಂತರಗಳಿಂದ ನಿಂತು ಹೋಗಿದ್ದರ ಬಗ್ಗೆ ಮುಖ್ಯಾಧ್ಯಾಪಕರು  ವಿಷಾದಿಸಿದರು. ಆ ಪಾಠವನ್ನು ನಾನು ೨೦೧೪ ಜನವರಿಯಿಂದ ಮುಂದುವರಿಸುತ್ತೇನೆ ಎಂದಾಗ ಖುಶಿಯಿಂದ ಸಹಕರಿಸುವುದಾಗಿ ಹೇಳಿದರು.ಆಮೇಲೆ ಮನೆಗೆ ಬಂದು ,ಈ ಕಾರ್ಯದಿಂದ ಆಗಬಹುದಾದ ಉಪಯೋಗಗಳ ಬಗ್ಗೆ ಯೋಚಿಸುತ್ತ ಕುಳಿತೆನು. ಯಾರು ಶಿಕ್ಷಕರು ಹೋಗದಿದ್ದರೆ, ಆ ಕೊಠಡಿಗೆ ಯಾರು ಹೊಗದೆ ಸುಮ್ಮನೆ ಆ ಗಣಕಯಂತ್ರಗಳನ್ನು ಹಾಳಾಗಲು ಬಿಟ್ಟು ಬಿಡುತ್ತಾರೆ.ಸುಮ್ಮನೆ ಹೊದ್ದುಕೊಂಡು ಸಮಯವನ್ನು ವ್ಯರ್ಥ ಮಾಡುವುದರ ಬದಲು ಅಲ್ಲಿ ಹೋಗುವುದರಿಂದ ಮಕ್ಕಳಿಗೆ ಏನನ್ನಾದರು ಕಲಿಸಿ ಕೊಟ್ಟ ಹಾಗಾಗುತ್ತದೆ.ಅಕ್ಕ ಪಕ್ಕದ ಬಡವ ಮಕ್ಕಳ ಆಗು ಹೋಗುಗಳ ಬಗ್ಗೆ ಅರಿವಾಗುತ್ತದೆ. ನನ್ನ ತಾಳ್ಮೆ ಪರೀಕ್ಷೆಯ ಜೊತೆಗೆ ಮಕ್ಕಳಿಗೆ ಪಾಠ ಮಾಡುವುದು ಹೇಗೆ ಎಂದು ಕಲಿಯಬಹುದು. ಮತ್ತು ಕೊನೆಯದಾಗಿ ನಾನು ಈ ಕಾರ್ಯ ಮಾಡುವುದನ್ನು ನೋಡಿ ಇನ್ನೊಂದಿಬ್ಬರು ಕೂಡ ಇದನ್ನೇ ಅನುಕರಿಸಿದರೆ ಇನ್ನೂ ಒಳ್ಳೆಯದೇ. ನೋಡಬೇಕು ಇದು ಯಾವ ದಾರಿಯಲ್ಲಿ ಸಾಗುತ್ತೆ ಎಂದು.

 

Rating
No votes yet

Comments

Submitted by ಶ್ರೀನಿವಾಸ ವೀ. ಬ೦ಗೋಡಿ Wed, 01/08/2014 - 13:00

ಒಳ್ಳೆಯ ಕೆಲಸ, ಒಳ್ಳೆಯದಾಗಲಿ.
"ನಾನು ಈ ಕಾರ್ಯ ಮಾಡುವುದನ್ನು ನೋಡಿ ಇನ್ನೊಂದಿಬ್ಬರು ಕೂಡ ಇದನ್ನೇ ಅನುಕರಿಸಿದರೆ ಇನ್ನೂ ಒಳ್ಳೆಯದೇ."
+೧