ಜೀವನ ವೇದ-1

ಜೀವನ ವೇದ-1

ಎಲ್ಲರೂ ಕಷ್ಟ ಪಡುವುದೇ ಮುಂದಿನ ಸುಖದ ಜೀವನಕ್ಕಾಗಿ- ಎಂಬುದು ಸಾಮಾನ್ಯ ಅಭಿಪ್ರಾಯ.  ನೀನು ಹೇಗಿದ್ದೀಯಾ? ಎಂದು ಕೇಳಿದರೆ, ಸಂತೋಷವಾಗಿದ್ದೀನಿ, ಎನ್ನುವವರು ಎಷ್ಟು ಮಂದಿ? ಆತ್ಮೀಯರು ಯಾರಾದರೂ ಎದುರಿಗೆ ಸಿಕ್ಕಿದರೆ ಸಾಕು  ತಮ್ಮ ಜೀವನದ ಕಷ್ಟಗಳನ್ನು ಹೇಳಿಕೊಳ್ಳುವವರೇ ಹೆಚ್ಚು. ತಮಾಶೆ ಎಂದರೆ ಹೀಗೆ ಹೇಳಿಕೊಳ್ಳುವುದರಿಂದ ಕೇಳಿಸಿಕೊಂಡವನು ಇವನಿಗೆ ಏನೂ ಸಹಾಯಮಾಡಲಾರ, ಎಂಬ ಸತ್ಯವು ಹೇಳಿಕೊಂಡವನಿಗೂ ಗೊತ್ತು.ಆದರೂ ಇಂತಾ ಒಂದು ವ್ಯರ್ಥ ಪ್ರಲಾಪಗಳು ಇದ್ದದ್ದೇ. ಹೇಳಿಕೊಂಡವನಿಗೆ ಏನೋ ಒಂದು ರೀತಿಯ ಹಗುರವಾದ ಭಾವ. ಕೇಳುವವನಿಗೆ ತಾಳ್ಮೆ ಬೇಕು , ಅಷ್ಟೆ.ಇನ್ನೂ ದೊಡ್ಡ ತಮಾಶೆ  ಎಂದರೆ ಕೇಳಿಸಿಕೊಂಡವನ ಸಮಸ್ಯೆ ಹೇಳಿಕೊಂಡವನಿಗಿಂತ ಹೆಚ್ಚಿರಲೂ ಬಹುದು.

 ಜೀವನ ಎಂದರೆ ಹಿಡಿಯಷ್ಟು ಸುಖ, ಬೆಟ್ಟದಷ್ಟು ಕಷ್ಟ- ಎಂಬುದು ಸಾಮಾನ್ಯರ ಮಾತು. ಯಾಕೆ ಹೀಗೆ? ಜೀವನದಲ್ಲಿ ನೆಮ್ಮದಿ ಸಿಗುವುದು  ಯಾಕೆ ದುಸ್ತರವಾಗುತ್ತದೆ? ಸುಖೀಕುಟುಂಬ ಎಂಬುದು ಗಗನಕುಸುಮವೇ? ಜೀವನದಲ್ಲಿ ಸುಖವಾಗಿರಲು, ನೆಮ್ಮದಿಯಾಗಿರಲು ನಮ್ಮ ಋಷಿಮುನಿಗಳು ಏನಾದರೂ ಸೂತ್ರಗಳನ್ನು ನೀಡಿದ್ದಾರೆಯೇ? ನಮ್ಮ ಆಧುನಿಕ ವಿಜ್ಞಾನದ ಸಲಕರಣೆಗಳು ಜೀವನಕ್ಕೆ ಎಷ್ಟು ನೆಮ್ಮದಿಯನ್ನು ಕೊಟ್ಟಿದೆ? ಎಷ್ಟು ನೆಮ್ಮದಿ ಹಾಳಾಗಿದೆ? ಹೀಗೆಲ್ಲಾ ಯೋಚಿಸುವಾಗ ಕಟ್ಟ ಕಡೆಗೆ ನಾವು ಆಶ್ರಯಿಸುವುದು ನಮ್ಮ ಋಷಿ ಮುನಿಗಳು ನೀಡಿದ ಮಾರ್ಗವನ್ನು. ಆ ಹೊತ್ತಿಗೆ ನಮ್ಮ ಜೀವನದ ಆಯುಷ್ಯವು ಬಹುಪಾಲು ಮುಗಿದಿರುತ್ತದೆ. ಕಡೆಯ ದಿವಸಗಳನ್ನು ಭಗವಚ್ಚಿಂತನೆಯಲ್ಲಿ ಕಳೆಯುತ್ತಾ ಅ೦ತಿಮ ದಿನಗಳನ್ನು ಎಣಿಸುವಂತಹ ಸ್ಥಿತಿ  ಬರಬೇಕೇ? ಅಧ್ಯಾತ್ಮ ಚಿಂತನೆ  ಎಂದರೆ ವೃದ್ಧಾಪ್ಯದಲ್ಲಿ ಮಾಡಬೇಕಾದ್ದೇ? ನಮ್ಮ ಜೀವನಕ್ಕೆ ನಿಜವಾಗ ಮಾರ್ಗದರ್ಶನ ಎಲ್ಲಿದೆ? ಇನ್ನು ಮುಂದೆ ಚಿಂತನೆ ಮಾಡುತ್ತಾ ಸಾಗೋಣ, ನನ್ನೊಡನೆ ನೀವೂ ಬರುವಿರಾ?

ಸ್ವರ್ಗ ಎಲ್ಲಿದೆ? 

ಸತ್ತಮೇಲೆ ಸ್ವರ್ಗ-ನರಕಗಳೋ? ಬದುಕಿದ್ದಾಗಲೋ? ಸ್ವರ್ಗವೆಲ್ಲಿದೆಯೋ ಗೊತ್ತಿಲ್ಲ.ಆದರೆ ಹಲವಾರು ಮನೆಗಳು  ನಿತ್ಯ ನರಕವಾಗಿ  ಇರುವುದಂತೂ ಸತ್ಯ. ಹಾಗಾದರೆ ಮನೆಗಳನ್ನು ಸ್ವರ್ಗವಾಗಿ ಮಾಡಲು ಸಾಧ್ಯವಿಲ್ಲವೇ?ಸಾಧ್ಯ, ಎನ್ನುತ್ತದೆ ವೇದ. ಮನೆಯು ಸ್ವರ್ಗದಂತಿರಬೇಕಾದರೆ ಹೀಗಿರಬೇಕು ಎಂದು ವೇದವು  ಕೆಲವು ಜೀವನ ಸೂತ್ರಗಳನ್ನು  ಹೇಳುತ್ತದೆ. ಅದನ್ನು ಅನುಸರಿಸಿದ್ದೇ ಆದರೆ ಮನೆಯನ್ನು ಸ್ವರ್ಗ ಮಾಡುವುದೇನೂ ಕಷ್ಟಸಾಧ್ಯವಲ್ಲ.

ಹಿಂದುಗಳಲ್ಲಿ ವಿವಾಹ ಸಂದರ್ಭದಲ್ಲಿ ಸಪ್ತಪದೀ ಎಂಬ ಒಂದು ಕಾರ್ಯಕ್ರಮವಿರುತ್ತದೆ. ಪುರೋಹಿತರು ಏನೋ ಮಂತ್ರ ಹೇಳುತ್ತಾರೆ. ವಧು-ವರರು ಒಟ್ಟು ಏಳು ಹೆಜ್ಜೆ ಹಾಕುತ್ತಾರೆ. ಮದುವೆಗೆ ಬಂದವರೆಲ್ಲಾ ಹರಟೆಹೊಡೆಯುತ್ತಿರುತ್ತಾರೆ. ಕ್ಯಾಮರಾಮನ್ ಮಾತ್ರ ಚಿತ್ರೀಕರಣವನ್ನು ಮಾಡಲು ಸಾಹಸ ಪಡುತ್ತಿರುತ್ತಾನೆ. ಚಿತ್ರೀಕರಣವಾದರೂ ಯಾಕಾಗಿ? ಮದುವೆ ಮುಗಿದಮೇಲೆ ಮನೆಗೆ ಬಂದ ಬಂಧುಬಳಗಕ್ಕೆ ಒಂದಿಷ್ಟು ದಿನ ವೀಡಿಯೋ ತೋರಿಸಿ ಕೊನೆಗೆ ವೀಡಿಯೋ ಸಿ.ಡಿ ಯಾವುದೋ ಜಾಗ ಸೇರಿದರೆ ಮುಗಿಯಿತು. ಅಷ್ಟೆ. ಆದರೆ ಜೀವನಕ್ಕೆ ಈ ಕಾರ್ಯಕ್ರಮದಿಂದ ವಧು-ವರರು ಏನಾದರೂ ಉಪಯೋಗ ಮಾಡಿಕೊಂಡರೇ? ಆ ಏಳು ಮಂತ್ರಗಳು ಒಂದೊಂದೂ ಉತ್ಕೃಷ್ಟ. ಅದರಲ್ಲಿ ಒಂದು ಮಂತ್ರದ ಅರ್ಥವನ್ನು ಇಲ್ಲಿ ತಿಳಿಯೋಣ.

ಸಖೇ ಸಪ್ತಪದೀ ಭವ 

ನೀನು ನನಗೆ ಮಿತ್ರಳಂತೆ ಇರು/ನೀನು ನನಗೆ ಮಿತ್ರನಂತೆ ಇರು ಇದು ವಿವಾಹ ಸಂದರ್ಭದಲ್ಲಿ  ಗಂಡು-ಹೆಣ್ಣು ಪರಸ್ಪರ ಹೇಳಿಕೊಳ್ಳುವ ಮಾತು. ನಾನೂ ನೀನೂ ಪರಸ್ಪರ ಮಿತ್ರರಂತೆ ಇರೋಣ ಎಂಬ ಸಂಕಲ್ಪವನ್ನು ನೂರಾರು ಜನರ ಮುಂದೆ ಮಾಡುವುದೇ ಸಪ್ತಪದೀ. ಎಷ್ಟು ಜನರಿಗೆ ಇದು ಆ ಸಂದರ್ಭದಲ್ಲಿ ಅರ್ಥವಾಗುತ್ತದೋ ಗೊತ್ತಿಲ್ಲ. ಒಂದು ವೇಳೆ ಅರ್ಥವಾಗಿ ಅದರಂತೆ ಜೀವನ ಮಾಡಿದ್ದೇ ಆದರೆ ಅದೇ ಸ್ವರ್ಗ. ಸ್ವರ್ಗ ಇನ್ನೆಲ್ಲೂ ಇಲ್ಲ. ಪತಿ-ಪತ್ನಿಯರು ಪರಸ್ಪರ ಮಿತ್ರರಂತೆ ಇದ್ದರೆ ಆ ದಾಂಪತ್ಯ ಹೇಗಿದ್ದೀತೂ? ದಾಂಪತ್ಯವು ಗಟ್ಟಿಯಾಗಿ ಸದಾಕಾಲ ಸಂತೋಷವಾಗಿರಲೆಂದು ನಮ್ಮ ಹಿರಿಯರು ಕೊಟ್ಟ ಸೂತ್ರ ಸಪ್ತಪದೀ.

ಸಖೇ ಸಪ್ತಪದೀ ಭವ  ಎಂಬ ಮಂತ್ರವನ್ನು ಹೇಳಿ ಮದುವೆಯಾಗಿದ್ದೇನೆ. ಇದಕ್ಕೆ ಮದುವೆಗೆ ಬಂದ    ನೂರಾರು ಜನರು ಸಾಕ್ಷಿಯಾಗಿದ್ದಾರೆ,ಎಂದು ಯಾರಾದರೂ ಮದುವೆಯ ನಂತರ ಯೋಚಿಸಿದ್ದಾರೆಯೇ? ಹಾಗೆ ಒಂದು ವೇಳೆ ಮಂತ್ರದ ಅರ್ಥವನ್ನು ತಿಳಿದು ಮನ: ಪೂರ್ವಕವಾಗಿ ವಧು-ವರರು ಈ ಮಂತ್ರವನ್ನು ಹೇಳಿದ್ದೇ ಆದರೆ ಈಗ ನಡೆಯುತ್ತಿರುವಂತಹ ಡೈವರ್ಸ್ ಗಳು ನಡೆಯಲು ಸಾಧ್ಯವೇ?

         ಡೈವರ್ಸ್ ಗಳ ವಿಚಾರದಲ್ಲಿ ಎಂತಹ ಚರ್ಚೆಗಳನ್ನು ಟಿ.ವಿ. ಮಾಧ್ಯಮಗಳಲ್ಲಿ ಮಾಡುತ್ತಾರೆ! ಗಂಡು-ಹೆಣ್ಣಿಗೆ ಹೊಂದಾಣಿಕೆ ಆಗದಿದ್ದಮೇಲೆ ಜೀವನ ಪರ್ಯಂತ ಹೀಗೆಯೇ ಕಾಲ ಹಾಕಲು ಸಾಧ್ಯವೇ? ಅದಕ್ಕೆ ನನ್ನ ಮಗಳಿಗೆ ಡೈವರ್ಸ್ ಕೊಟ್ಟು ಬಾ ಎಂದು ಹೇಳಿದೆ ಎಂದು ಒಬ್ಬ ತಾಯಿಯು ಹೇಳುತ್ತಾಳೆಂದರೆ,ಎಂತಹ ಸಂದರ್ಭದಲ್ಲಿ ಈ ಸಮಾಜವಿದೆ! ಎಂಬುದನ್ನು ಸ್ವಲ್ಪ ಆಳವಾಗಿ ಚಿಂತನೆ ನಡೆಸಬೇಡವೇ?

ಡೈವರ್ಸ್ ಕೊಡುವ ಪರಿಸ್ಥಿತಿ ಯಾಕೆ ಬಂತು? ಈ ಬಗ್ಗೆ ಪತಿ-ಪತ್ನಿಯರಾಗಲೀ ಅಥವಾ ಅವರ ಅಪ್ಪ-ಅಮ್ಮನಾಗಲೀ ವಿಚಾರ ಮಾಡುತ್ತಾರೆಯೇ? ಮದುವೆಗೆ ಮುಂಚೆ ಹಣಕ್ಕೋ, ಪದವಿಗೋ, ರೂಪಕ್ಕೋ ಬಲಿಯಾಗಿ ಮದುವೆಯಾದಮೇಲೆ ಈಗ ಸಂಸಾರದಲ್ಲಿ ಸುಖವಿಲ್ಲ ಎಂದರೆ ಹೇಗೆ ಸಿಗಲು ಸಾಧ್ಯ? ಆ ಬಗ್ಗೆ ಮದುವೆಗೆ ಮುಂಚೆ ಯೋಚಿಸಬೇಕಿತ್ತು ,ಅಲ್ವಾ?  ಮದುವೆ ಎಂದರೆ ಇದು ಜೀವನ ಪರ್ಯಂತದ ಕುಟುಂಬವ್ಯವಸ್ಥೆ.ಅದು ಸುಭದ್ರವಾಗಿರಬೇಕೆಂದರೆ ಗಂಡು-ಹೆಣ್ಣಿನ ನಡುವೆ ಹೊಂದಾಣಿಕೆಗೆ ನೋಡಬೇಕಾದ ಅಂಶಗಳೇನೆಂಬ ಬಗ್ಗೆ ನಮಗೆ ಅರಿವಿರಬೇಕಲ್ಲವೇ?

ಸಾಮಾನ್ಯವಾಗಿ ಮದುವೆ ಮಾಡುವಾಗ ಹಿಂದು ಸಮಾಜದಲ್ಲಿ ಹೆಚ್ಚು ಮಹತ್ವಕೊಡುವುದು ಗಂಡು-ಹೆಣ್ಣಿನ ಜಾತಕ. ಇಷ್ಟು ಗುಣಗಳಿದ್ದರೆ ಮದುವೆ ಮಾಡಿಕೊಳ್ಳಬಹುದು,ಇಲ್ಲದಿದ್ದರೆ ಇಲ್ಲ. ಮದುವೆಯಾಗಬೇಕಾದ ಹುಡುಗ-ಹುಡುಗಿರ ವಿದ್ಯೆ, ರೂಪ, ಸ್ವಭಾವಗಳ ಹೊಂದಾಣಿಕೆಯಾಗಬೇಕಲ್ಲವೇ? ಹುಡುಗಿ ಅತ್ಯಂತ ಶ್ರೀಮಂತ ಮನೆಯವಳಾಗಿದ್ದು ಹಣದಾಸೆಯಿಂದ ಹುಡುಗನು ಆಕೆಯನ್ನು ಮದುವೆಯಾಗಿದ್ದರೆ ಈ ದಂಪತಿಗಳ ಜೀವನದಲ್ಲಿ ಹೊಂದಾಣಿಕೆ  ಬರಲು ಸಾಧ್ಯವೇ? ಶ್ರೀಮಂತರಾದವರೆಲ್ಲಾ ಕೆಟ್ಟವರಲ್ಲ. ಶ್ರೀಮಂತ ಮನೆಯ ಹುಡುಗ-ಹುಡುಗಿಯರಲ್ಲೂ ಬಡವರನ್ನು ಮದುವೆಯಾಗಬೇಕೆಂದು ಬಯಸುವವರೂ ಇದ್ದಾರೆ. ಅಂತಹ ಸಂದರ್ಭದಲ್ಲಿ ಅವರ ಶ್ರೀಮಂತಿಕೆ-ಬಡತನ ಗಣನೆಗೆ ಬರುವುದಿಲ್ಲ ಬದಲಾಗಿ ಅವರ ಸ್ವಭಾವಗಳು, ಸದ್ಗುಣಗಳು ಗಣನೆಗೆ ಬರುತ್ತವೆ.ಈ ವಿಚಾರಗಳನ್ನು ಗಮನಿಸದೆ ಎಲ್ಲವೂ ಸರಿಯಾಗಿದೆ ಜಾತಕ ಒಂದು ಕೂಡಿಬಂದರೆ ಮದುವೆ ಆದಂತೆಯೇ ಎಂಬ ವಿಚಾರವಿದ್ದರೆ ಅದೇ ಬಲು ಅಪಾಯದ ಅಂಶವೆಂಬುದು ಹಲವರಿಗೆ ಅರ್ಥವಾಗುವುದೇ ಇಲ್ಲ.

ಜಾತಕದ ವಿಚಾರದಲ್ಲಿ ನನ್ನ ಸ್ವಂತ ಅನುಭವ ಹೇಳಿಬಿಡುವೆ.ನಮ್ಮ ದೂರದ ಸಂಬಂಧಿಯನ್ನು ನಾನು ಮದುವೆಯಾಗಬೇಕೆಂಬ ಸಲಹೆ ಬಂತು. ಒಪ್ಪಿ ಮದುವೆಯಾಗುವುದೆಂದು ತೀರ್ಮಾನವೂ ಆಯ್ತು. ನಿಶ್ಚಿತಾರ್ಥದ ದಿನ ಲಗ್ನ ಪತ್ರಿಕೆ ಬರೆಯಲು ಪುರೋಹಿತರು ಜಾತಕ ಕೇಳುತ್ತಾರೆ. ಹೆಣ್ಣಿನ ಜಾತಕ ಬಂತು. ಗಂಡಿನ ಜಾತಕವೇ ಇಲ್ಲ. ಹುಡುಗಿಯ ಅಣ್ಣ ಮತ್ತು ನಾನು ಒಂದು ದಿನದ ಅಂತರದಲ್ಲಿ ಹುಟ್ಟಿದ್ದೆವು. ಇದು ಎರಡೂ ಮನೆಗೆ ಗೊತ್ತಿದ್ದ ವಿಚಾರ.ಹುಡುಗಿ ಅಣ್ಣನ ಜಾತಕ ತರಿಸಿದ್ದಾಯ್ತು. ಅವನು ಹುಟ್ಟಿದ್ದು ಶನಿವಾರ. ನಾನು ಶುಕ್ರವಾರ ಮಧ್ಯಾಹ್ನ ೨.೦೦ ಗಂಟೆಗೆ. ಪುರೋಹಿತರು ಸ್ಥಳದಲ್ಲೇ ನನ್ನ ಜಾತಕ ಬರೆದದ್ದಾಯ್ತು. ತಾಳೆ ಹಾಕುತ್ತಾರೆ. ಇಲ್ಲ,ಇಲ್ಲ, ಜಾತಕ ಹೊಂದಾಣಿಗೆ ಆಗುವುದೇ ಇಲ್ಲ ಪುರೋಹಿತರು ತೀರ್ಮಾನ ಕೊಟ್ಟೇ ಬಿಟ್ಟರು. ಅವರನ್ನು ಅಲ್ಲೇ ಕೊಂದುಬಿಡಲೇ  ಎಂಬ ಸಿಟ್ಟು ನನಗೆ. ಸರಿಯಾಗಿ ನೋಡಿ ಪುರೋಹಿತರೇ  ಎಂದು ನಮ್ಮ ತಾಯಿ ಹೇಳಿದರು.ಆ ಪುರೋಹಿತರೋ ಮಧ್ಯಾಹ್ನ ೨.೦೦ ಗಂಟೆಯ ಬದಲು ಹಿಂದಿನ ರಾತ್ರಿ ೨.೦೦ ಗಂಟೆಯನ್ನು ಗಣನೆಗೆ ತೆಗೆದುಕೊಂಡು ಜಾತಕ ಬರೆದಿದ್ದರು. ನಮ್ಮ ತಾಯಿ ಹೇಳಿದ ಮೇಲೆ ಮತ್ತೊಮ್ಮೆ ಬರೆದು ಜಾತಕ ತಾಳೆ ಮಾಡಿದರು ಓಹ್ ಶ್ರೀರಾಮ ಚಂದ್ರ- ಸೀತಾದೇವಿಯ ಜಾತಕ ಇದ್ದಂತೆ ಇದೆ. ಏನೂ ಯೋಚಿಸದೆ ಮದುವೆ ಮಾಡಬಹುದು ಎಂದರು.

ಎಷ್ಟೋ ಹುಡುಗಿಯರ ಮದುವೆ ವಯಸ್ಸಿಗೆ ಸರಿಯಾಗಿ ಆಗದೆ ಸುಳ್ಳು ಜಾತಕ ಬರೆಸಿ ಮದುವೆ ಮಾಡಿರುವ ಹಲವು ಉಧಾಹರಣೆಗಳನ್ನು ಬಲ್ಲೆ. ಹೀಗಾಗಬೇಕೇ? ಜಾತಕದ ವಿಷಯ ಹಾಗಿರಲಿ.

 

ಸುಖ ದಾಂಪತ್ಯಕ್ಕೆ ವೇದವು ಏನು ಹೇಳುತ್ತದೆ? ನೋಡೋಣ. ಅಥರ್ವಣ ವೇದದ ಒಂದು ಮಂತ್ರವು ಇನ್ನೂ ಅದ್ಭುತವಾಗಿ ಹೇಳುತ್ತದೆ.

ಇಹೇಮಾವಿಂದ್ರ ಸಂ ನುದ ಚಕ್ರವಾಕೇವ ದಂಪತೀ|

[ಕಾಂಡ ೧೪ ಸೂಕ್ತ ೨ ಮಂತ್ರ ೬೪]

ಅರ್ಥ: ಪತಿ ಪತ್ನಿಯರಿಬ್ಬರೂ ಚಕ್ರವಾಕ ಪಕ್ಷಿಗಳಂತೆ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲಿ.

ವೇದ ಮಂತ್ರಗಳೆಂದರೆ ಕೇವಲ ಪೂಜೆ ಪುನಸ್ಕಾರಕ್ಕೆ ಇರುವ ಮಂತ್ರಗಳೇ? ಈ ಮೇಲಿನ ಮಂತ್ರದ ಅರ್ಥವನ್ನು ಗ್ರಹಿಸಿದಾಗ ಆಶ್ಚರ್ಯವಾಗದೇ ಇರದು.

ಚಕ್ರವಾಕ ಪಕ್ಷಿಗೆ ಕೋಕ ಪಕ್ಷಿ  ಎಂತಲೂ ಹೇಳುತ್ತಾರೆ. ಗಂಡು ಹೆಣ್ಣು ಸದಾಕಾಲ ಒಟ್ಟೊಟ್ಟಿಗೆ  ಇದ್ದು ಸಾಯುವವರೆಗೂ ಸಂತೋಷ ಅನುಭವಿಸಿಯೇ ಸಾಯುತ್ತವೆ. ಅಂತಹ ಪಕ್ಷಿಗಳಂತೆ ಪತಿ ಪತ್ನಿಯರು ಪರಸ್ಪರ ಪ್ರೀತಿಯಿಂದಿರಬೇಕು-ಎಂಬುದು ವೇದದ ಆಶಯ. ಈಗ ಹೇಳಿ, ವೇದವು ವೈರಾಗ್ಯವನ್ನು ಹೇಳುವುದೇ? ಇಲ್ಲಿ ಕೋಕ ಪಕ್ಷಿಯಂತೆ ಪರಸ್ಪರ ಪ್ರೀತಿಯಿಂದ ಪತಿ ಪತ್ನಿಯರು ಇರಬೇಕೆಂಬುದು  ಸ್ವಲ್ಪ ವಿಪರೀತವೆನಿಸಿದರೂ ಜೀವನದ ಹಲವು ಘಟ್ಟಗಳಲ್ಲಿ ನಾವು  ಹೇಗೆ ಜೀವನವನ್ನು  ನಿರ್ವಹಿಸಬೇಕೆಂದು ವೇದವು ನಮ್ಮನ್ನು ಸದಾಕಾಲ ಜಾಗೃತ ಸ್ಥಿತಿಯಲ್ಲೂ ಇಡುತ್ತದೆ.

ಮಹಾಭಾರತದ ಶಾಂತಿಪರ್ವದಲ್ಲಿ ಪತ್ನಿಯ ಬಗ್ಗೆ ಎಷ್ಟು ಅದ್ಭುತ ವರ್ಣನೆ  ಇದೆ ನೋಡಿ.. . . . .

ನಾಸ್ತಿ ಭಾರ್ಯಾಸಮೋ ಬಂಧು: 

ಪತ್ನಿಗಿಂತ ಮಿಗಿಲಾದ ಮಿತ್ರರು/ಬಂಧು ಯಾರೂ ಇಲ್ಲ. ಇದಕ್ಕಿಂತ ಅದ್ಭುತವಾದ ಮಾತು ಬೇಕೇ? ಪತ್ನಿಗೆ ಪತಿ, ಪತಿಗೆಪತ್ನಿಯ ಹತ್ತಿರದ ಬಾಂಧವ್ಯದಷ್ಟು ಬೇರೆ ಯಾರಾದರೂ ಇರಲು ಸಾಧ್ಯವೇ? ಮಗನಿಗೆ ಮದುವೆಯಾಯ್ತು.ಪತ್ನಿಯ ಕೈಗೊಂಬೆಯಾದ.-ಇದು ಸಾಮಾನ್ಯವಾಗಿ ತಾಯಿಯ ಬಾಯಲ್ಲಿ ಕೇಳುವ ಮಾತು. ಹೆತ್ತ ಮಗನ ಮೇಲಿನ ವ್ಯಾಮೋಹದಿಂದ ತಾಯಿಯ ಬುದ್ಧಿ ಎಷ್ಟು ದುರ್ಬಲವಾಗಿರುತ್ತದೆಂದರೆ ಹಲವು ಮನೆಗಳಲ್ಲಿ ಇಂತಹ ಕೆಟ್ಟ ಸ್ಥಿತಿಯನ್ನು ನಾವು ನೋಡುತ್ತೇವೆ.

ಮಗನ ಸಂಸಾರ ಚೆನ್ನಾಗಿರಬೇಕೆಂಬ ಆಸೆ ಹೆತ್ತ ತಾಯಿಗೆ ಇಲ್ಲವೇ? ಇರುತ್ತದೆ. ಆದರೆ ಹೆತ್ತಮ್ಮನಿಗೆ ಎಂತಹ ವ್ಯಾಮೋಹದ ಮುಸುಕು ಆವರಿಸಿರುತ್ತದೆಂದರೆ ಎಲ್ಲಿ ನನ್ನ ಮಗ ನನ್ನ ಕೈಬಿಟ್ಟು ಹೋಗುತ್ತಾನೋ, ಎಂಬ ಚಿಂತೆಯಲ್ಲಿ ಮಗನ ದಾಂಪತ್ಯದ ಬಗ್ಗೆ  ಸರಿಯಾಗಿ ಯೋಚಿಸುವುದೇ ಇಲ್ಲ. ಮಗನು ಸದಾ ತನ್ನ ಕಣ್ಮುಂದಿರಬೇಕು. ಪತ್ನಿಯೊಡನೆ ವಾಯು ವಿಹಾರಕ್ಕೆ ತೆರಳಿದರೂ ಅವಳ ಬಗ್ಗೆ ಸಂಶಯ.  ಸೊಸೆಯು ಎಲ್ಲಿ ತನ್ನ ಮೆಲೆ ಇಲ್ಲ ಸಲ್ಲದ ಚಾಡಿ ಹೇಳಿಬಿಡುತ್ತಾಳೋ ಎಂಬ ಅನುಮಾನ. ಸಹಜವಾಗಿ ಪತಿಪತ್ನಿ ಏಕಾಂತದಲ್ಲಿರುವಾಗ ನೋವು-ನಲಿವುಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಆಗೆಲ್ಲಾ ಅತ್ತೆ-ಸೊಸೆಯರಲ್ಲಿ  ಸಣ್ಣದಾಗಿ ಶುರುವಾದ  ಬಿರುಕು ದೊಡ್ದದಾಗಿ ಬೇರೆ ಮನೆಯನ್ನು ಮಾಡುವ ವರೆಗೂ ತಲುಪುತ್ತದೆ. ನಾಸ್ತಿ ಭಾರ್ಯಾಸಮೋ ಬಂಧು: ಎಂಬ ವಿಚಾರ ಪತಿಗೆ ಅಷ್ಟೇ ಅಲ್ಲ ಪತಿಯ ಅಪ್ಪ-ಅಮ್ಮನಿಗೆ , ಅಣ್ಣ ತಮ್ಮ ಅಕ್ಕ-ತಂಗಿಯರಿಗೆ ತಿಳಿದಿರಬೇಕು. ಕಾರಣ ಈ ಸತ್ಯವನ್ನು ಅವರವರ ಜೀವನದಲ್ಲಿ ಎಲ್ಲರೂ ಒಪ್ಪಿಕೊಂಡಾಗ ಎಲ್ಲರ ಸಂಸಾರವೂ ಸುಂದರ ಅಲ್ಲವೇ? ಸುಂದರ ದಾಂಪತ್ಯದ ಬಗ್ಗೆ ಮುಂದಿನ ವಾರ ಮತ್ತಷ್ಟು ಅಂಶಗಳನ್ನು ನೋಡೋಣ.

Rating
No votes yet

Comments

Submitted by hariharapurasridhar Mon, 01/06/2014 - 11:14

ಒಂದು ವಿಚಾರವನ್ನು ಲೇಖನದಲ್ಲಿ ಹೇಳುವುದನ್ನು ಮರೆತಿದ್ದೆ. ಈ ಲೇಖನ ಮಾಲೆ ಆರಂಭಿಸುವ ಮುಂಚೆ ಹಾಸನದ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ ಕಳೆದ ವರ್ಷ 52 ವಾರಗಳು ನಿರಂತರವಾಗಿ ಪ್ರಕಟವಾದ ನನ್ನ ಲೇಖನ ಮಾಲೆ "ಎಲ್ಲರಿಗಾಗಿ ವೇದ " ಓದಿದ ಕೆಲವು ಅಭಿಮಾನಿಗಳೇ ಹೊಸ ಲೇಖನ ಮಾಲೆ ಆರಂಭಕ್ಕೆ ಸ್ಪೂರ್ತಿ ಕೊಟ್ಟವರು.ಈ ಲೇಖನ ಮಾಲೆ ಆರಂಭಿಸುವ ಮುಂಚೆ ಲೇಖನ ಮಾಲೆಗೆ ಹೆಸರು ಅಭಿಮಾನಿಗಳನ್ನು ಕೇಳಿದಾಗ 30 ಹೆಸರುಗಳನ್ನು ಸೂಚಿಸಿದರು. ಅದರಲ್ಲಿ "ಜೀವನ ವೇದ " ಎಂಬ ಶೀರ್ಷಿಕೆಯನ್ನು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಆಯ್ಕೆ ಮಾಡಿದರು. ಅದೇ ಹೆಸರಿನಲ್ಲಿ ಇನ್ನುಮುಂದೆ ಪ್ರತೀ ಭಾನುವಾರ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ ಲೇಖನ ಪ್ರಕಟುವಾಗುತ್ತದೆ .ಪ್ರತೀ ಮಂಗಳವಾರ ಸಂಪದದಲ್ಲಿ ಪ್ರಕಟಿಸಲಾಗುವುದು. "ಎಲ್ಲರಿಗಾಗಿ ವೇದ" ಮಾಲಿಕೆಯನ್ನು ಈಗಲೂ http://janamitra.epapertoday.com/ ನಲ್ಲಿ ಓದಲು ಲಭ್ಯವಿದೆ. ಹೆಸರು ಸೂಚಿಸಿದ ಮತ್ತು ಲೇಖನಮಾಲೆಯನ್ನು ಓದಿ ಉತ್ತೇಜಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು