ಧನುರ್ಮಾಸ

ಧನುರ್ಮಾಸ

ಡಿಸೆಂಬರಿನ ಆಚೀಚೆ, ಸಂಕ್ರಮಣಕೆ ಮುನ್ನದ ಧನುರ್ಮಾಸ ಪ್ರಾಯಶಃ ಎಲ್ಲರಿಗೂ ಪರಿಚಿತವೆ. ಅದರಲ್ಲೂ ಬಾಲ್ಯಕ್ಕೆ ಓಡಿದರೆ ನೆನಪಾಗುವ ಚಿತ್ರಣ, ರವಿ ಮೂಡುವ ಮುನ್ನದ ಕತ್ತಲಲೆ ಥರಗುಟ್ಟುವ ಚಳಿಯಲ್ಲೆ ಸ್ನಾನಾದಿಗಳನ್ನು ಮುಗಿಸಿ ಅಶ್ವಥಕಟ್ಟೆಯನ್ನು ಸುತ್ತಲು ಹೊರಡುವ ಹೆಣ್ಣುಮಕ್ಕಳ ಚಿತ್ರಣ - ಧನುರ್ಮಾಸದ ಪೂಜೆಯೆಂದರೆ ಒಳ್ಳೆಯ ಗಂಡ ಸಿಗುವನೆಂಬ ಆಶಯದಲ್ಲಿ. ಅದೆ ಹೊದರಿನ ಮತ್ತೊಂದು ಚಿತ್ರಣ ನಮ್ಮ ಕೇರಿಗಳಲ್ಲಿ ರಾಮಮಂದಿರಗಳಲ್ಲಿ ನಡೆಯುತಿದ್ದ ಬೆಳಗಿನ ಭಜನೆ, ಪೂಜೆ. ಆ ಪೂಜೆ ಆರು ಗಂಟೆಗೆಲ್ಲ ಮುಗಿದು ಹೋಗುತ್ತಿತ್ತು ಮತ್ತು ಪೂಜೆಯ ಕೊನೆಯ ಪ್ರಸಾದವಾಗಿ ಉಂಡುಂಡೆ ಪೊಂಗಲ್! ಕೆಲವೊಮ್ಮೆ ಖಾರ ಪೊಂಗಲ್ ಕೊಟ್ಟರೆ ಮತ್ತೆ ಕೆಲವೊಮ್ಮೆ ಸಿಹಿ ಪೊಂಗಲ್. ವಿಶೇಷ ದಿನಗಳಲ್ಲಿ ಎರಡು ಒಟ್ಟಾಗಿ ಸಿಗುತ್ತಿದ್ದುದು ಉಂಟು.

ಇಲ್ಲೊಂದು ತಮಾಷೆಯೂ ಇತ್ತು - ಆ ಪೂಜೆಗೆ ಹೆಚ್ಚಾಗಿ ಪೊಂಗಲಿನ ಆಸೆಯಿಂದ ಬರುವ ಮಕ್ಕಳೆ ಹೆಚ್ಚಿರುತ್ತಿದ್ದರು, ತಲೆ ಮಾಸಿದ ಹಿರಿಯರನ್ನು ಬಿಟ್ಟರೆ. ಆ ಗುಂಪು ಸಾಕಷ್ಟು ದೊಡ್ಡದೆ ಇರುತ್ತಿದ್ದ ಕಾರಣ ಪೊಂಗಲಿಗೆ ಕಡೆಯಲ್ಲಿ ದೊಡ್ಡ ಸರತಿಯ ಸಾಲಲ್ಲಿ ನಿಲ್ಲಬೇಕಿತ್ತು. ಅದರಲ್ಲೂ ಸಾಲಿನ ಕೊನೆಯಾದರೂ, ನಿಮ್ಮ ಪಾಳಿ ಬರುವ ಹೊತ್ತಿಗೆ ಪಾತ್ರೆ ಖಾಲಿಯಾಗಿ ಬಿಡುತ್ತಿದ್ದರೆ ಅಚ್ಚರಿಯೇನೂಬಿರುತ್ತಿರಲಿಲ್ಲ. ಆ ಸಾಲಿನಲ್ಲಿ ನುಗ್ಗಾಡಿ ಮೊದಲಿಗರಾಗಿ ನಿಲ್ಲಲು ನಾವು ಹರಸಾಹಸ ಪಡುತ್ತಿದ್ದುದು ದಿನ ಸಾಮಾನ್ಯ ಕಾಣುತ್ತಿದ್ದ ದೃಶ್ಯ. ಆದರೆ, ಬಲು ಬೇಗನೆ ಸಾಲಿನಲ್ಲಿ ನಿಲ್ಲದೆ 'ವಿಶೇಷ' ಅತಿಥಿಗಳ ಲೇಬಲ್ ಹಾಕಿಕೊಂಡು ವಿಐಪಿ ಸೇವೆ ಪಡೆಯುವ ಹೊಸ ಹಾದಿಯೊಂದು ತಟ್ಟನೆ ಗೋಚರಿಸಿದಾಗ, ಎಲ್ಲಾ ತೊಂದರೆಗು ಖಾಯಂ ಪರಿಹಾರ! ಹಾದಿಯೇನೂ ಕಷ್ಟದ್ದಿರಲಿಲ್ಲ - ದಿನಾಗಲೂ ಬಿಡಿ ಹೂವ್ವಿನ ಪೊಟ್ಟಣವೊಂದನ್ನು ತೆಗೆದುಕೊಂಡು ಹೋದರೆ ಸಾಕು - ನಿಮಗೊಂದು ಸೀಟು, ಹಗ್ಗದ ಆ ಬದಿಯ ವಿಐಪಿ ಕಾರ್ನರಿನಲ್ಲಿ. ಪೊಂಗಲನ್ನು ಹಂಚುವಾಗಲೂ ಸಹ ಮೊದಲು ಈ ಗುಂಪಿಗೆ; ಉಂಡೆಯ ಸೈಜೂ ಸಹ ದೊಡ್ಡದಿರುತ್ತಿತ್ತು - ಹೂವ್ವಿನ ಸೈಜಿಗೆ ತಕ್ಕ ಪೊಂಗಲಿನ ಉಂಡೆ ಸೈಜು! ನಾವೂ ಹೂವ್ವೇನು ಕೊಂಡು ತರುತ್ತಿರಲಿಲ್ಲ ಎನ್ನಿ. ಹಿಂದಿನ ಸಂಜೆ ಗುಂಪಾಗಿ ಹೂವು ಬೆಳೆದ ಕಾಂಪೌಂಡುಗಳ ಮನೆ ಮೂಂದೆ ಅಡ್ಡಾಡಿ ಬಿದ್ದ ಹೂಗಳನ್ನು ಆಯ್ದುಕೊಂಡು ಬರುತ್ತಿದ್ದೆವಷ್ಟೆ. ಹೆಚ್ಚು ಆಯ್ದು ತರಲು ಸ್ಪರ್ಧೆಯಂತೂ ಇರುತ್ತಿತ್ತು. 

ದೊಡ್ಡವರಾಗುತ್ತ ಬಂದಾಗ ಕಾಡಿದ್ದು ಧನುರ್ಮಾಸದ ದ್ವಂದ್ವ. ಬೆಳಗಿನ ಅಸೀಮ ಚಳಿಗೆ, ಹಗಲಿನ ಸಂವಾದಿ ಚುರುಕು ಬಿಸಿಲು. ಒಂದು ರೀತಿ ಅರ್ಧನಾರೀಶ್ವರ, ನಾರೀಶ್ವರೀ ಅಸ್ಥಿತ್ವವಿದ್ದಂತೆ. ಇದು ದ್ವಂದ್ವದ ದ್ವೈತವೊ, ಅದ್ವೈತದ ಪ್ರಕಾಶ ವಿಮರ್ಶಾ ರೂಪಾಗಿ ಪ್ರಕೃತಿ ಅನಾವರಣಗೊಳ್ಳುವ ತರವೊ (ಬಹುಶಃ ಸಹಸ್ರನಾಮಾವಳಿಯ ಶ್ರೀಧರರನ್ನೆ ಕೇಳಬೇಕು ಉತ್ತರಕ್ಕೆ :-) ), ಎರಡರ ಪ್ರಖರತೆಯೆ ಒಟ್ಟಾರೆ ಅನುಭವ ಒಂದೆ ಬಾರಿಗೆ ಸಹನೀಯ ಮಟ್ಟದಲ್ಲಿ ಆಗುವುದು ಕೇವಲ ಧನುರ್ಮಾಸದಲ್ಲಿ ಮಾತ್ರವೆಂದು ಕಾಣುತ್ತದೆ. ಬಹುಶಃ ನಡುಗಿಸುವ ಋತುವಿನ ಪರಿಯನ್ನು ಹಿಂದಿಕ್ಕಿ, ಹೊಸ ಬಿಸಿಲಿನ ರಥವನ್ನೇರುವ ಸಂಕ್ರಮಣದ ಋತುವನ್ನು ಸ್ವಾಗತಿಸುವ ಪ್ರಕೃತಿಯ ಪರಿವರ್ತನೆಯ ಪರಿಯೂ ಇರಬಹುದು.

ಈ ಧನುರ್ಮಾಸದ ನೆನಪು ಕಾಡಿದಾಗ ಮೂಡಿದ ಕವನಗಳಲ್ಲೊಂದೆರಡು, ಈ ಕೆಳಗೆ - ಅದರ ನವಿರನ್ನು ಒಗರನ್ನು ಆಸ್ವಾದಿಸಲು :-)

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

01. ದ್ವಂದ್ವದ ದ್ವೈತ, ಧನುರ್ಮಾಸಕೆ ಸ್ವಂತ
___________________________

ಬಿಸಿಲಲು ಬೀಸುವ ಮಾರುತ
ಧನುರ್ಮಾಸದ ಸ್ವಗತ
ಪಕಳೆ ಪಕಳೆಯ ಎಸಳು
ಗಾಳಿ ತೇರಿನಲಿ ತೇಲ್ಮುಗಿಲು ||

ನಿಡುಸುಯ್ದ ಬಿಸಿ ಬಿಸಿಲಿಗೆ
ರಣಮಾರಿಯಾಗದ ಹೊಲಿಗೆ
ಮಂದ ಮಾರುತನ ಚಳಿ ಗಳಿಗೆ
ನೇವರಿಸಿ ಸವರಿ ತಂಪು ಮಳಿಗೆ ||

ದೂರುವಂತಿಲ್ಲ ಬಿಸಿಲ ಧಗೆಗೆ
ಸೆಕೆಯಾರುವಂತಿಲ್ಲ ಆಗಲೆ ಬಿಡದೆ
ಮೊಗೆಮೊಗೆದ ಕಾವು ಶಾಖದ ಮೊತ್ತ
ಜಿಗಿಜಿಗಿದ ಶೀತ ಸುತ್ತ ಆವರಿಸುತ್ತ ||

ಇರುಳಿನ ನಡುಗಿಸುವ ಚರಣ
ಹಗಲ ಬೇಗೆಯಲಿ ಸರಿತೂಗೆ ತುಲನ
ಯಾವ ಋತುವಿನಲೂ ಕಾಣದ ದ್ವಂದ್ವ
ಸುಖದುಃಖ ಹೊಂದಾಣಿಕೆ ಹೊದ್ದ ಭಾವ ||

ನಡುಕವಾಗೆ ಕಷ್ಟಕಾಲದ ಮಯಕ
ಬೆಚ್ಚಗಿರಿಸುವ ಸುಖದ ಕೈ ಚಳಕ
ಧನುರ್ಮಾಸದ ಎಣಿಕೆಗಿದೆಯೆ ಈ ಲೆಕ್ಕ?
ಋತುಗಾನದ ವಿಶಿಷ್ಠ ಈ ಮಾಸದ ಸಖ ||

02. ಧನುರ್ಮಾಸದ ದ್ವಂದ್ವ
___________________

ದ್ವೈತದ ಪಕ್ಕಾ ಜೂಜುಗಾರ
ಈ ಧನುರ್ಮಾಸ ಧುರಂದರ
ಪ್ರಕಾಶ ವಿಮರ್ಶಾ ಸ್ವರೂಪಿ
ಹಗಲಿರುಳ ದ್ವಂದ್ವ ಉಲೂಪಿ ||

ಥರಗುಟ್ಟಿಸುವ ಚಳಿ ಚಳಿ
ಇರುಳಿನ ವಿಮರ್ಶಾ ರೂಪ
ಗುರುಗುಟ್ಟಿಸುವ ಬಿಸಿ ಬಿಸಿ
ಹಗಲಲಿ ಬಿಸಿಲ ಪ್ರಕೋಪ ||

ಚಳಿಗಾಲದ ರಾತ್ರಿ ಬಯಸೆ
ಬಿಸಿಯಪ್ಪುಗೆ ನಲ್ಲೆಗೆ ಕಂಬಳಿ
ಹಗಲ್ಹೊತ್ತು ಸೂರ್ಯನ ದೆಸೆ
ಬಿಸಿಲುಡುಗೊರೆಯ ಉಂಬಳಿ ||

ರೇಗಿ ಬೈದಾಡುತಲೆ ಬೆಚ್ಚಗೆ
ತೆರೆದಿಟ್ಟ ಬೆಚ್ಚಗಿನ ಉಡುಪು
ಕವಿಯುತಿರಲೆ ಮುಸ್ಸಂಜೆಗೆ
ಹೊದಿಕೆ ಮುನಿಸೆ ಹುಳುಕು ||

ಸಂಧಿ ಕಾಲ ಸಂಧ್ಯಾ ಸಂಜೆ
ಹಿತಮಿತ ಹದ ಬೆರೆತ ಹೆಜ್ಜೆ
ಚಳಿಯನೆಳೆದಿಟ್ಟ ಬಿಸಿಲ್ಗೊನೆ
ಬಿಸಿಲ ತಂಪಾಗಿಸಿ ಚಳಿತಾನೆ ||

ಅಂತು ಶಿವ ಶಕ್ತಿಯ ಮಿಲನ
ಸಂಧ್ಯಾಕಾಲದಾ ಸಮ್ಮೇಳನ
ಅರ್ಧ ನಾರೀಶ್ವರ ನಾರೀಶ್ವರಿ
ಬಿಸಿಲು ಚಳಿ ಬೆರೆತಾಗಮನ ||

ಮಾಸದ ಧನುರ್ಮಾಸ ತೆರೆ
ಸಂಕ್ರಮಣಕೆ ಕಾದ ಸಮೀರೆ
ಮೈಚಳಿ ಬಿಟ್ಟಾಗುವ ಬಿಸಿಲೆ
ಆಗುವವರೆಗು ಪ್ರಕೃತಿ ಲೀಲೆ ||

---------------------------------
ಧನ್ಯವಾದಗಳೊಂದಿಗೆ, 
ನಾಗೇಶ ಮೈಸೂರು
----------------------------------
 

Comments

Submitted by H A Patil Sat, 01/11/2014 - 20:13

ನಾಗೇಶ ಮೈಸೂರು ರವರಿಗೆ ವಂದನೆಗಳು
'ಧನುರ್ಮಾಸ' ಚಳಿಯ ಕಟುತ್ವ ಜೊತೆಗೆ ಆ ಕಾಲದಲ್ಲಿ ಜಗದ ಆಚರಣೆ ಸ್ಥಿತಿ ಕುರಿತು ಬಹಳ ಅಪ್ಯಾಯಮಾನವಾದ ನಿರೂಪಣೆ ಚೆನ್ನಾಗಿದೆ. ದೊಡ್ಡವರಾಗುತ್ತ ಬಂದಂತೆ ಕಾಡಿದ ಧನುರ್ಮಾಸದ ದ್ವಂದ್ವವನ್ನು ಬಹಳ ಅಪ್ಯಾಯಮಾನವಾಗಿ ನಿರೂಪಿಸಿದ್ದೀರಿ, ಇದು ಬರಲಿರುವ ಎಳ್ಳು ಬೆಲ್ಲದ ರುಚಿಯನ್ನು ಜ್ಞಾಪಿಸಿತು, ಓಳ್ಳೆಯ ಬರವಣಿಗೆ ಧನ್ಯವಾದಗಳು.

Submitted by nageshamysore Sat, 01/11/2014 - 22:29

In reply to by H A Patil

ಪಾಟೀಲರೆ ನಮಸ್ಕಾರ, ಈ ಧನುರ್ಮಾಸದ ದ್ವಂದ್ವದ ಅನುಭವ ಎಲ್ಲಾಕಡೆಯೂ ಒಂದೆರೀತಿ ಇರುವುದೊ ಇಲ್ಲವೊ ಗೊತ್ತಿಲ್ಲ. ಆದರೆ ಕವನ / ಬರಹದ ಪ್ರೇರಣೆ ಮಾತ್ರ ಮೈಸೂರಿನ ಧನುರ್ಮಾಸದ ಕುರಿತು ಬರೆದದ್ದು. ಈಗಲೂ ಮೈಸೂರಿನಲ್ಲಿ ಧನುರ್ಮಾಸದ ಅನುಭವ ಹೀಗೆ ಇರುವುದರಿಂದ ಪ್ರಸ್ತುತವಾಗಿ ಕಂಡಿತು. ಅದರಲ್ಲೂ ಸ್ಥಿತ್ಯಂತರ ಕಾಲದ ನಡುವೆ ಸಿಕ್ಕಂತೆ, ಎರಡೂ ರೀತಿಯ ಋತು ಪರ್ಯಾಯ ಆರಂಭವಾಗುವುದೆ ಇಲ್ಲಿಂದವಾದ್ದರಿಂದಲೂ ತುಸು ವಿಶಿಷ್ಠವೆನಿಸಿತು. ತಮ್ಮ ಎಂದಿನ ಪ್ರತಿಕ್ರಿಯೆಗೆ ಧನ್ಯವಾದಗಳು. :-)
ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು