ಬೀಟ್ರೂಟ್ ಲಡ್ಡು

ಬೀಟ್ರೂಟ್ ಲಡ್ಡು

ಬೇಕಿರುವ ಸಾಮಗ್ರಿ

ಕೆಂಪಗಿದೆಯೆಂದೋ, ಸಿಹಿಯಾದಿದೆಯೆಂದೋ, ತಿನ್ನಲು ಇಷ್ಟವಿಲ್ಲವೆಂದೋ.....ಹತ್ತಾರು ನೆಪವೊಡ್ಡಿ ನಾವು ದಿನೇ ತಿನ್ನುವ ತರಕಾರಿಗಳಲ್ಲಿ ಅತಿಯಾಗಿ ಕಡೆಗಣಿಸುತ್ತಿರುವುದೆಂದ್ರೆ ಬೀಟ್ರೂಟು. Beta vulgaris ಎಂಬ ಸಸ್ಯ ಶಾಸ್ತ್ರದ ಹೆಸರಿನಿಂದ ಕರೆಯಲ್ಪಡುವ ಈ ಬೀಟ್ರೂಟಿನ ಇತಿಹಾಸ ಎರಡನೇ ಶತಮಾನದಷ್ಟು ಹಳೆಯದಂತೆ. ಔಷಧೀಯ ಗುಣಗಳುಳ್ಳ ಈ ಬೀಟ್ರೂಟನ್ನ ಗ್ರೀಕ್ ಆರೋಗ್ಯ ದೇವತೆಯಾದ ಅಪೋಲೋವಿಗೆ ಅರ್ಪಿಸಿ ಅದರಷ್ಟೇ ತೂಕದ ಬೆಳ್ಳಿಯನ್ನ ಪಡೆಯುತ್ತಿದ್ದರಂತೆ!! ಅಷ್ಟು ಬೆಲೆಯುಳ್ಳದ್ದಾಗಿತ್ತು!!

ಪಾಲಕ್ ಸೊಪ್ಪಿನಂತೆಯೇ ಇರುವ ಬೀಟ್ರೂಟಿನ ಎಲೆಗಳನ್ನ ಮೊದಲಿಂದಲೂ ಆಹಾರವಾಗಿ ಬಳಸುತ್ತಿದ್ದರಂತೆ. ಆದರೆ ಬೀಟ್ರೂಟಿನ ಗಡ್ಡೆಯನ್ನ ಊಟಕ್ಕೆ ಬಳಸಬಹುದೆಂದು ಕಂಡುಕೊಂಡವರಲ್ಲಿ ಫ್ರೆಂಚರು ಮೊದಲಿಗರು. ಅಧಿಕ ರಕ್ತದೊತ್ತಡ, ಹೃದಯ, ಯಕೃತ್, ಅಜೀರ್ಣಕ್ಕೆ ಸಂಭಂದಿಸಿದ ಖಾಯಲೆಗಳಿಗೆ ಈ ಬೀಟ್ರೂಟ್ ಒಂಥರಾ ನೈಸರ್ಗಿಕ ಔಷಧಿಯೇ ಸರಿ. ಇದರ ಗಾಡವಾದ ಕೆಂಪು ಬಣ್ಣದಿಂದಾಗಿ ಬೀಟ್ರೂಟು ಪುಡಿಯನ್ನ ಫುಡ್ ಕಲರಿಂಗಾಗಿ ಜಾಮ್, ಜೆಲ್ಲಿ, ಜ್ಯೂಸು, ಐಸ್ಕ್ರೀಮ್,ಕೇಕುಗಳಲ್ಲಿ ಬಳಸುತ್ತಾರಂತೆ.

ಹಸಿಯಾಗಿ, ತುರಿದು, ಬೇಯಿಸಿ, ಅರೆದು ಹೇಗೆಲ್ಲಾ ಸೇವಿಸಬಹುದಾದ ಈ ಬೀಟ್ರೂಟಿನಿಂದ ನಾ ತಯಾರಿಸಿದ್ದು ಬೀಟ್ರೂಟ್ ಲಡ್ಡು, ಈ ಬೀಟ್ರೂಟ್ ಲಡ್ಡು ಚಿಕ್ಕ ಮಕ್ಕಳಿಗೆ ಬಹಳ ಇಷ್ಟವಾಗುವುದು ಮತ್ತು ನಿಮಗೂ ಸಹ. ನೀವೂ ಕೂಡ ಒಮ್ಮೆ ಇದನ್ನ ಮಾಡಿ ಸವಿದು ನೋಡಿ :) 

ಬೇಕಾಗುವ ಪದಾರ್ಥಗಳು:

ತುರಿದ ಬೀಟ್ರೂಟ್ - 3 ಬಟ್ಟಲು
ತುರಿದ ಒಣ ಕೊಬ್ಬರಿ - 1 ಬಟ್ಟಲು
ಸಕ್ಕರೆ -1 ಬಟ್ಟಲು
ತುಪ್ಪ - 2 ಚಮಚ
ಏಲಕ್ಕಿ ಪುಡಿ -1/4 ಚಮಚ
ನಿಮಗೆ ಬೇಕಾದರೆ- ಬಾದಾಮಿ, ದ್ರಾಕ್ಷಿ, ಗೋಡಂಬಿ - ನಿಮ್ಮಿಷ್ಟದಷ್ಟು :)

ತಯಾರಿಸುವ ವಿಧಾನ

1. ದಪ್ಪ ತಳದ ಬಾಣಲೆ/ಪಾತ್ರೆಗೆ 2 ಚಮಚ ತುಪ್ಪ ಹಾಕಿ, ಕಾದ ನಂತರ ತುರಿದ ಬೀಟ್ರೂಟನ್ನ ಹಾಕಿ ಹಸಿತನ ಹೋಗುವವರೆಗೂ ಒಂದೈದು ನಿಮಿಷ ಸಣ್ಣನೆಯ ಉರಿಯಲ್ಲಿ ಬಾಡಿಸಿ.
2. ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ,ತುರಿದ ಕೊಬ್ಬರಿಯನ್ನ ಹಾಕಿ.ಸಕ್ಕರೆ ಕರಗಿ ಮಿಶ್ರಣವು ಗಟ್ಟಿಯಾಗುವವರೆಗೂ ಚಮಚದಲ್ಲಿ ಕದಡುತ್ತಿರಿ, ತಳ ಹತ್ತಲು ಬಿಡಬೇಡಿ.
3. ಮಿಶ್ರಣವು ಉಂಡೆ ಕಟ್ಟುವ ಹದಕ್ಕೆ ಬಂದ ನಂತರ ಅದನ್ನ ಬೇರೊಂದು ತಟ್ಟೆಗೆ ಸುರಿದು, ತಣ್ಣಗಾಗುವ ಮೊದಲೇ ಚಮಚದಲ್ಲಿ ಸ್ವಲ್ಪ ತೆಗೆದುಕೊಂಡು ತುಪ್ಪ ಸವರಿಕೊಂಡ ಕೈಗಳದಿಂದ ಉಂಡೆ ಕಟ್ಟಿ. ಅದರ ಮೇಲೊಂದು ಗೋಡಂಬಿ, ಬಾದಾಮಿಯನ್ನ ಇಡಿ ಮತ್ತು ಮೇಲೆ ತುರಿದ ಕೊಬ್ಬರಿಯಿಂದ ಅಲಂಕರಿಸಿದರೆ ಬೀಟ್ರೂಟ್ ಲಡ್ಡು ಸವಿಯಲು ರೆಡಿ. :)
4. ನಿಮಗೆ ಉಂಡೆ ಬೇಡವೆಂದರೆ ತುಪ್ಪ ಸವರಿದ ತಟ್ಟೆಯ ಮೇಲೆ ಮಿಶ್ರಣವನ್ನ ಸಮತಟ್ಟಾಗಿ ಸುರಿದು ಚೌಕಾಕಾರ ಇಲ್ಲವೇ ನಿಮಗಿಷ್ಟವಾದ ಆಕಾರದಲ್ಲಿ ಕಟ್ ಮಾಡಿ, ಮೇಲೆ ಒಣ ದ್ರಾಕ್ಷಿ, ಗೋಡಂಬಿ,ಬಾದಾಮಿ, ತುರಿದ ಕೊಬ್ಬರಿಯನ್ನ ಹರಡಿ. ಇದು ತಣ್ಣಗಾದ ಮೇಲೆ ಮಿಠಾಯಿಯ ರೀತಿಯಲ್ಲಿ ಕೂಡಾ ತಿನ್ನಬಹುದು. 
ಬಳಕೆ: 7-8 ದಿನಗಳು 

ಧನ್ಯವಾದಗಳು
ಸವಿತ ಎಸ್ ಆರ್

(ಚಿತ್ರಕೃಪೆ: ಸ್ವಂತದ್ದು)

Comments

Submitted by ಸುಮ ನಾಡಿಗ್ Fri, 01/10/2014 - 20:48

ರುಚಿ ಚೆನ್ನಾಗಿದೆ. ನಾನೂ ಪ್ರಯತ್ನ ಮಾಡಿ ನೋಡುವೆ... 

Submitted by venkatb83 Mon, 10/06/2014 - 19:30

In reply to by ಸುಮ ನಾಡಿಗ್

ಬೀಟ್ರೂಟ್ ಲಡ್ಡು ಕೇಳಲು ಹೊಸದು -ಮಾಡಲು ಪ್ರಯತ್ನಿಸುವೆ ..ಊಟ ತಿಂಡಿ ವಿಷ್ಯದಲ್ಲಿ ನಮ್ಮ ಗಣೇಶ್ ದೇವರು -ಗಣೇಶ್ ಅಣ್ಣಾ ನಂತರ ನಂತರದ ಸ್ಥಾನ ನಮ್ಮದೇ ...!!

ನೆಟ್ಟಿನಲ್ಲಿ -ದಿನ ನಿತ್ಯದ ಪತ್ರಿಕೆ ಇತ್ಯಾದಿಗಳಲ್ಲಿ ನಾ ಹುಡುಕೋದು -ಇದ್ದರೆ ಪೇಪರ್ ಕಟ್ಟಿಂಗ್ ಕಟ್ ಮಾಡಿ ಇಟ್ಟುಕೊಂಡು ಆ ರುಚಿ ತಯಾರಿಸಲು ಪ್ರಯತ್ನಿಸುವೆ .. ನೀವ್ ಇಲ್ಲಿ ಚಿತ್ರ ಸಮೇತ ನೀಡಿರುವ ಸರಳಡುಗೆ ವಿಧಾನ ನೋಡಿ ಓದಿ ಬಾಯಲ್ಲಿ ನೀರೂರಿದ್ದು ಸತ್ಯ ..!!  ಈ ತರ್ಹದ ಬರಹಗಳನ್ನು ಸದಾ ಬರೆಯಿರಿ ಎಂದು ಕೋರುವೆ ....
ಶುಭವಾಗಲಿ

ನನ್ನಿ

\|/ 

Submitted by ಗಣೇಶ Mon, 10/13/2014 - 00:53

In reply to by venkatb83

ಬೀಟ್ರೂಟ್ ಬಗ್ಗೆ ವಿವರ ಹಾಗೂ ಸಿಹಿ ಲಡ್ಡು ಮಾಡುವ ವಿಧಾನ ತಿಳಿಸಿದ್ದಕ್ಕೆ ಸವಿತಾ ಅವರಿಗೆ ಧನ್ಯವಾದಗಳು.

ಸುಮಾ ಅವರೆ, ಪ್ರಯತ್ನ ಮಾಡಿ ನೋಡುವ ಮೊದಲೇ ರುಚಿ ಚೆನ್ನಾಗಿದೆ ಅಂತ ಹೇಗೆ ಗೊತ್ತಾಯಿತು? :)

 "ಲಡ್ಡು" ಅಂದರೆ "ಸಪ್ತಗಿರಿವಾಸಿ". ಅದಕ್ಕೆ ಈ ಸ್ಪೆಶಲ್ ಲಡ್ಡು ತಿನ್ನಲು ಹಾಜರ್:)