ಕವಿಗೋಷ್ಠಿ - ಲಕ್ಷ್ಮೀಕಾಂತ ಇಟ್ನಾಳ
ಕವಿಗೋಷ್ಠಿ
ಕವಿಗೋಷ್ಠಿ ಇತ್ತು,
ನಾನಾ ಕವಿಗಳ
ಕವನ ವಾಚನ ಆಲಿಸಿದೆ,
ಬಲು ಬೇಫಾಮ್ ಆಗಿದ್ದವು,
ಮರಳಿ ಬರುವಾಗ
ಗೆಳೆಯ ಎದುರಾದ,
ಎಲ್ಲಿಂದ ಬಂದಿರಿ? ಎಂದ,
ಕವಿಗೋಷ್ಠಿಯಿಂದ ಎಂದೆ,
ಯಾರು ಓದಿದರು ಎಂದಿದ್ದಕ್ಕೆ
ಒಬ್ಬರ ಹೆಸರು ಹೇಳಿದೆ,
ಅಲ್ಲಿ ಇಂಥವರು ಇದ್ದರು ತಾನೆ,
ಹೌದು ಇದ್ದರೆಂದೆ,
ಅಲ್ಲಿ ಅವರೂ ಇದ್ದಿರಬೇಕಲ್ಲ ಎಂದ,
ಹೌದು ಇದ್ದರು ಎಂದೆ,.
ಮತ್ತೆ ಇಂತಿಂಥವರೂ ಇದ್ದಿರಬೇಕಲ್ಲ ಎಂದ,
ಕವಿಗಳು ತಾನೆ ಅವರೆಲ್ಲ,
ಇದ್ದೇ ಇದ್ದರು ಎಂದೆ.
ಏನು, ಗಾಂಧಿ, ಸುಭಾಸರನ್ನು ನೆನೆದರೆ?
ಇಲ್ಲ,
ಪಂಪ, ರನ್ನ ಕುಮಾರವ್ಯಾಸರನ್ನು ನೆನೆದರೆ?
ಇಲ್ಲ
ಅವರು ಇನ್ಯಾರನ್ನೋ ನೆನದರು ಎಂದೆ,
ಗೊತ್ತಿತ್ತು ಎಂದ!
ಇನ್ನೊಂದು ಕವಿಗೋಷ್ಠಿ ಇದೆ,
ಇಂಥ ದಿನ ಎಂದ,
ಅಲ್ಯಾರಿರುತ್ತಾರೆ ಎಂದೆ,
ಅಲ್ಲಿ ಅಂಥವರು ಇರುವುದಿಲ್ಲ
ಇಂಥವರು ಇರುವುದಿಲ್ಲ
ಎಂದು ಕಣ್ಣು ಬೆಳ್ಳಗೆ ಮಾಡಿ
ಆಕಾಶ ನೋಡುತ್ತ ಪಟ್ಟಿ ಮಾಡಿದ,
ಮತ್ತೆ, ಇರುತ್ತಾರೆ ಯಾರು ಎಂದೆ?
ಕವಿಗಳು ಇರುತ್ತಾರೆ ಎಂದ,
ಹೆಸರೇನಂದೆ ಗೊತ್ತಿಲ್ಲ ಎಂದ!
ಕೆಣಕಿ ಕೇಳಿದೆ,
ತುಂಬಿದ ಹೊಟ್ಟೆ ಒಂದೆಡೆ,
ಹಸಿದ ಹೊಟ್ಟೆ ಇನ್ನೊಂದೆಡೆ
ಅರ್ಥವಾಯಿತೇ? ಎಂದ
ಇಲ್ಲ ಎಂದೆ!
ಅವನತ್ತ,
ನಾನಿತ್ತ
ತಲೆ
ಗೊಂದಲದ ಗಡಿಗೆ!
Comments
ಉ: ಕವಿಗೋಷ್ಠಿ - ಲಕ್ಷ್ಮೀಕಾಂತ ಇಟ್ನಾಳ
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
'ಕವಿ ಗೋಷ್ಟಿ' ನಿಮ್ಮದೇ ಶೈಲಿಯ ಹೊಸ ಬಗೆಯ ನಿರೂಪಣೆಯ ತಾಜಾತನ ತುಂಬಿದ ಕವನ. ಓದಿ ಖುಷಿಯಾಯಿತು <<< ತುಂಬಿದ ಹೊಟ್ಟೆ ಒಂದೆಡೆ,ಹಸಿದ ಹೊಟ್ಟೆ ಇನ್ನೊಂದೆಡೆ >>> ಹಾಗೂ <<< ಇಲ್ಲ ಎಂದ ಅವನತ್ತ ನಾನಿತ್ತ ತಲೆ ಗೊಂದಲದ ಗಡಿಗೆ >>> ಅರ್ಥಪೂರ್ಣ ಸಾಲುಗಳು, ಧನ್ಯವಾದಗಳು.
In reply to ಉ: ಕವಿಗೋಷ್ಠಿ - ಲಕ್ಷ್ಮೀಕಾಂತ ಇಟ್ನಾಳ by H A Patil
ಉ: ಕವಿಗೋಷ್ಠಿ - ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಾದ ಪಾಟೀಲ ಸರ್ ಗೆ ವಂದನೆಗಳು. ತಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್. ತೀರ ಇತ್ತೀಚೆಗೆ ನನಗೆ ಗೆಳೆಯರೊಬ್ಬರು ಈ ತರಹ ಪ್ರಶ್ನೆ ಮಾಡಿದ್ದು, ಎಲ್ಲೋ ಮನದಲ್ಲಿ ಕಾಡುತ್ತಿತ್ತು. ಒಲಿದಂತೆ ಈ ತರಹ ಶೈಲಿಯಲ್ಲಿ ಮೂಡಿತು, ಹೊಳವು ಹೊಳೆದಂತೆಯೇ ದಾಖಲಿಸಲು ಪ್ರಯತ್ನಸಿದೆ. ಅದನ್ನೆ ಕವನವನ್ನಾಗಿಸುವ ಪ್ರಯತ್ನ ಇಲ್ಲಿ ಅಷ್ಟೆ ಸರ್. ಮತ್ತೊಮ್ಮೆ ವಂದನೆಗಳು
ಉ: ಕವಿಗೋಷ್ಠಿ - ಲಕ್ಷ್ಮೀಕಾಂತ ಇಟ್ನಾಳ
ಒಟ್ಟಾರೆ ನಿಜವಾದ ಕವಿಗೆ / ಕವಿತ್ವಕ್ಕೆ ಹೊಟ್ಟೆ ತುಂಬಿರುವುದಿಲ್ಲ, ಸದಾ ಹಸಿವು - ದೈಹಿಕವೊ, ಮಾನಸಿಕವೊ ಯಾವುದಾದರೂ ಒಂದು; ಅದೆ ಸಶಕ್ತ ಕಾವ್ಯದ ಮೂಲ. ಕವಿ ಗೋಷ್ಟಿಯ ಕೀರ್ತಿಕಾಮನೆಯ ಹಸಿವಿಲ್ಲದ ನಿಜವಾದ ಕವಿ, ಗೋಷ್ಟಿಗಳಿಗೆ ಹೋಗುವುದಿಲ್ಲ, (ಅದೆ ಅವನ ಬಳಿಗೆ ಬಂದರೂ ಬರಬಹುದೇನೊ?). ಕವಿಗೋಷ್ಟಿಯತ್ತ ಹೊರಡುವುದು ಹೆಚ್ಚಾಗಿ ಆ ಹಸಿವೆಯಿಲ್ಲದ, ಹೊಟ್ಟೆ ತುಂಬಿದ ಕವಿ-ಕಾವ್ಯಗಳು, ಹೀಗಾಗಿ ಸತ್ವ-ತೀವ್ರತೆ ತುಸು ಕಡಿಮೆಯೆನ್ನುವ ಭಾವವೆ? (ಆ ಲೆಕ್ಕದಲ್ಲಿ ಹೊರಟರೆ ನಾನಂತೂ ಕವಿಯಾಗುವುದಿಲ್ಲ, ಬೇಸತ್ತು ಕಾವಿಯಾಗಬೇಕಷ್ಟೆ :-))
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು