' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ ' ಭಾಗ 1
ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ - ( ಭಾಗ 1 )
ಸಿನೆಮಾ ಸುಮಾರು ಮುಕ್ಕಾಲು ಶತಮಾನಕ್ಕೂ ಮಿಗಿಲಾಗಿ ಜಗತ್ತಿನಾದ್ಯಂತ ಜನ ಸಮೂಹವನ್ನು ರಂಜಿಸುತ್ತ ಬಂದಿದೆ. ಈ ಸಿನೆಮಾ ವ್ಯಾಮೋಹ ಬಹುವಾಗಿ ಆಕರ್ಷಿಸಿದ್ದು ಸುಳ್ಲಲ್ಲ. ನಮಗೆ ಅದರಲ್ಲಿಯೂ ಕನ್ನಡ ಸಿನೆಮಾ ಪ್ರೇಕ್ಷಕರಿಗೆ ಇದು ಒಂದು ಅಳತೆ ಜಾಸ್ತಿ ಎಂದೇ ಹೇಳಬೇಕು. ನಮಗೆ ಯಾವುದೇ ಭಾಷಾ ಪ್ರಬೇಧವಿಲ್ಲ ಕನ್ನಡ ಚಿತ್ರಗಳನ್ನು ಉಳಿದೆಲ್ಲ ಭಾಷಗಳ ಎಂದರೆ ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲೀಷ ಭಾಷೆಗಳ ಚಿತ್ರಗಳನ್ನು ನೋಡುತ್ತೇವೆ. ಇತ್ತೀಚೆಗೆ ಕನ್ನಡ ಚಿತ್ರಗಳು ಹಾಗೆಯೆ ಇರುತ್ತವೆನ್ನಿ. ನಮಗೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳ ಚಿತ್ರಗಳೆಂದರೆ ನಮಗೆ ಇನ್ನಿಲ್ಲದ ಆಸಕ್ತಿ. ಹೀಗಾಗಿ ಹಾಲಿವುಡ್ಡಿನ ಪ್ರಖ್ಯಾತ ಚಿತ್ರ ಸಂಸ್ಥೆಗಳ ನಟರ ಮತ್ತು ನಿರ್ದೇಶಕರ ಚಿತ್ರಗಳೆಂದರೆ ವಿಶೇಷ ಕುತೂಹಲ. ಅದರಲ್ಲಿಯೂ ಆಸ್ಕರ್ ಪ್ರಶಸ್ತಿ ಪುರಸ್ಕೃತ ಚಿತ್ರಗಳೆಂದರೆ ಅದರ ವೀಕ್ಷಣೆಯ ಸಂಭ್ರಮವೆ ಬೇರೆ. ಪ್ರತಿ ವರ್ಷ ಹಾಲಿವುಡ್ ಚಿತ್ರಗಳ ಆಸ್ಕರ್ ಪ್ರಶಸ್ತಿ ಸಮ್ಮಾನವೆಂದರೆ ಅದೊಂದು ರೀತಿಯ ವಿಶೇಷ ಸಂಭ್ರಮ. ಒಂದು ಕಾಲದಲ್ಲಿ ನನಗೂ ಈ ಸಂಭ್ರಮ ವಿಶೇಷವಾಗಿಯೆ ಇತ್ತು. ಏರುತ್ತಿರುವ ವಯಸ್ಸು ಸರಿಯುತ್ತಿರುವ ದಿನ ಮಾನಗಳು ನನ್ನನ್ನು ಮಾಗಿಸಿವೆ. ಆದರೂ ಒಂದು ರೀತಿಯ ಸಣ್ಣ ಕುತೂಹಲ ಈಗಲೂ ಇದೆ ಎಂದು ಹೇಳುವಲ್ಲಿ ಹಿಂಜರಿಕೆಯಿಲ್ಲ. ಆದರೂ ಸುಮಾರು ಹದಿನೈದು ವರ್ಷಗಳ ಹಿಂದೆ ಜಗತ್ತಿನಲ್ಲೆಡೆ ಪ್ರದರ್ಶನ ಕಂಡು ಜನ ಮನ ರಂಜಿಸಿದ ‘ಟೈಟಾನಿಕ್’ ಚಿತ್ರದ ಅಗ್ಗಳಿಕೆಯೆ ಬೇರೆ. ಎಲ್ಲರೂ ನೋಡಿದ ಹಳೆಯ ಚಿತ್ರದ ಬಗೆಗೆ ಈಗ್ಯಾಕೆ ಎನ್ನುವ ಪ್ರಶ್ನೆ ಓದುಗರನ್ನು ಕಾಡಬಹುದು. ಅದೊಂದು ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ ಹೀಗಾಗಿ ಈ ಲೇಖನ.
ಈ ಸಂಧರ್ಭದಲ್ಲಿ ಹಾಲಿವುಡ್ ಚಿತ್ರಗಳ ಬೃಹತ್ತ ಮೆರವಣಿಗೆಯೆ ನನ್ನ ಮನದ ಮುಂದೆ ಸಾಗಿ ಬಂತು. ಆಗ ಶುರುವಾಯಿತು ನೋಡಿ ಚಿತ್ರಗಳ ದಿಬ್ಬಣ. ಅವುಗಳಲ್ಲಿ ಕೆಲವೊಂದು ಚಿತ್ರಗಳು ನನ್ನ ಸ್ಮೃತಿ ಪಟಲದಲ್ಲಿ ಹಾದು ಹೋದವು. ಅವುಗಳಲ್ಲಿ ಪ್ರಮುಖವಾದವುಗಳು ದಿ ಟೆನ್ ಕಮಾಂಡಮೆಂಟ್ಸ್, ದಿ ಬೈಬಲ್, ಜ್ಯೂಡಾ ಬೆನಹರ್, ದ ಬ್ರಿಡ್ಜ ಆನ್ ರಿವರ್ ಖ್ವಾಯ್, ಲಾರೆನ್ಸ್ ಆಫ್ ಅರೇಬಿಯಾ, ಡಾ.ಝಿವಾಗೊ, ದಿ ಗಾಂಧಿ ಮತ್ತು ಟೈಟಾನಿಕ್ ಮುಂತಾದ ಚಿತ್ರಗಳು. ಇವುಗಳಲ್ಲಿ ನಾನು ಕೊನೆಗೆ ನೋಡಿದ ಚಿತ್ರ ಟೈಟಾನಿಕ್ ಆಗಿದ್ದು ಅದು ಆಗ ಮಾಡಿದ್ದ ಮೋಡಿ ನಮ್ಮ ಮನದಾಳದ ಒಂದು ಮೂಲೆಯಲ್ಲಿ ಅಚ್ಚಳಿಯದೆ ನೆಲೆ ನಿಂತು ಬಿಟ್ಟಿದೆ.ಅದನ್ನು ಕುರಿತು ಬರೆಯಲು ಯೋಚಿಸಿದೆ.
ಅಂದಿಗೂ ಇಂದಿಗೂ ನಮ್ಮ ದೇಶದ ಎಲ್ಲ ಚಲನಚಿತ್ರ ಆಸಕ್ತರ ಕುತೂಹಲವಿರುವುದು ಯಾವ ಯಾವ ಹಾಲಿವುಡ್ ಇಂಗ್ಲೀಷ್ ಚಲನಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಭಾಜನವಾಗುತ್ತವೆ ಎನ್ನುವುದು. ಅದು 1998 ನೇ ಇಸವಿ ಹಲವು ಚಿತ್ರಗಳು ಆಸ್ಕರ ಪ್ರಶಸ್ತಿಯ ರೇಸಿನಲ್ಲಿದ್ದವು. ಆದರೆ ಟೈಟಾನಿಕ್ ಚಿತ್ರದ ಬಗೆಗೆ ಒಂದು ರೀತಿಯ ವಿಶೇಷ ಕುತೂಹಲವಿತ್ತು. ಜುರಾಸಿಕ್ ಪಾರ್ಕ್ ಮತ್ತು ಸಿಂಡ್ಲರ್ಸ್ ಲೀಸ್ಟ್ ಚಿತ್ರಗಳ ಖ್ಯಾತಿಯ ಸ್ಟಿವನ್ ಸ್ಟೀಲ್ ಬರ್ಗ್ ಹೆಸರು ಮುಂಚೂಣಿ ಯಲ್ಲಿತ್ತು. ಆದರೆ ಅತಿ ಹೆಚ್ಚು ಆಸ್ಕರ್ ಪ್ರಶಸ್ತಿಗಳನ್ನು ಬಾಚಿದ್ದು ಟೈಟಾನಿಕ್ ಚಿತ್ರ. ಎಲ್ಲ ಕುತೂಹಲಿಗಳ ನೆಗೆ ನಿರೀಕ್ಷೆ ಮೀರಿ ಅದು ಗಳಿಸಿದ್ದು ಬರೋಬರಿ 11 ಆಸ್ಕರ್ ಪ್ರಶಸ್ತಿಗಳನ್ನ, ಅದು 1959 ರಲ್ಲಿ 11 ಆಸ್ಕರ್ ಗಳಿಸಿದ್ದ ‘ಬೆನಹರ್’ ಚಿತ್ರವನ್ನು ಸರಿಗಟ್ಟಿತ್ತು. ಜೇಮ್ಸ್ ಕ್ಯಾಮರೂನ್ ತಾನೂ ಬೆನಹರ್ ನಿರ್ದೇಶಕ ವಿಲಿಯಂ ವೈಲರನಿಗೆ ಸರಿ ಸಮಾನನಾಗಿ ತಾನು ಸಾಧಿಸಿದ್ದೇನೆ ಎಂದು ಜಗತ್ತಿಗೆ ತೋರಿಸಿ ಕೊಟ್ಟ. ಆಗಲೆ ನಿರ್ಧಾರವಾಗಿ ಹೋಗಿತ್ತು ಟೈಟಾನಿಕ್ ಆ ವರೆಗೆ ಬಂದಿದ್ದ ಎಲ್ಲ ಹಾಲಿವುಡ್ ಚಿತ್ರಗಳ ಗಳಿಕೆಯ ದಾಖಲೆಯನ್ನು ಇದು ಮುರಿದು ಹಾಕುತ್ತದೆ ಎಂದು, ಹಾಗೆಯೆ ಆ ನಿರೀಕ್ಷೆ ನಿಜವಾಯಿತು ಕೂಡ. ಸುಮಾರು ಇನ್ನೂರು ಮಿಲಿಯನ್ ಅಮೇರಿಕನ್ ಡಾಲರ್ ಗಳ ಅಂದರೆ ನಮ್ಮ ಭಾರತೀಯ ಆಗಿನ ಲೆಖ್ಖದ ಪ್ರಕಾರ 800 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಯಾರಾದ ಈ ಚಿತ್ರ ಯಶಸ್ವಿ ಪ್ರದರ್ಶನಗೊಂಡು ಗಳಿಸಿದ್ದು ಬರೋಬರಿ 5000 ಕೋಟಿ ರೂಪಾಯಿಗಳು ಎಂದು ಪತ್ರಿಕೆಗಳಲ್ಲಿ ಓದಿದ ನೆನಪು. ಅಂದರೆ ಆ ಚಿತ್ರದ ಶೇಕಡಾವಾರು ಗಳಿಕೆ ಪ್ರತಿಶತ 625 ರಷ್ಟು. ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಆ ಚಿತ್ರ ಇನ್ನೂ ಹೆಚ್ಚಿನ ಹಣ ಬಾಚಿದ್ದಿರಬಹುದು ಕೂಡ ಎಂಬ ಅನಿಸಿಕೆ ಆ ಕಾಲದ ಸತ್ಯ ಕೂಡ.
ಬೆನಹರ್ ಮತ್ತು ಟೈಟಾನಿಕ್ ಗಳಿಗೆ ಹಲವು ಸಾಮ್ಯತೆಗಳಿದ್ದವು. ಬೆನಹರ್ ಕಳೆದ ಶತಮಾನದ ಆರನೆ ದಶಕದ ಮಹಾನ್ ಐತಿಹಾಸಿಕ ಕಾವ್ಯವಾಗಿದ್ದರೆ ಟೈಟಾನಿಕ್ ಇಪ್ಪತ್ತನೆಯ ಶತಮಾನದ ಅಂತ್ಯದ ಮಹಾನ್ ಪ್ರೇಮ ಕಾವ್ಯವಾಗಿತ್ತು. ಅದು ಅನೇಕ ದಿನಗಳ ಕಾಲ ಚಿತ್ರ ಪ್ರೇಮಿಗಳನ್ನು ಕಾಡಿದ ತನ್ನ ಬಂಧನದಲ್ಲಿ ಹಿಡಿದಿಟ್ಟು ಕೊಂಡಿದ್ದ ದೃಶ್ಯ ಕಾವ್ಯವಾಗಿತ್ತು. ಬೆನಹರ್ ಚಿತ್ರದಿಂದ ಆ ಚಿತ್ರದ ನಾಯಕ ಚಾರ್ಲಟನ್ ಹೇಸ್ಟನ್ ಗಡಸುತನದ ಶೌರ್ಯದ ಸಂಕೇತವಾಗಿ ಚಿತ್ರ ರಸಿಕರ ಹೃದಯಕ್ಕೆ ಲಗ್ಗೆ ಹಾಕಿದ್ದರೆ, ಹೊಂಬಣ್ಣದ ಕೂದಲಿನ ಹೊಳಪಿನ ನೀಲಿ ಬಣ್ಣದ ಕಂಗಳ ಟೈಟಾನಿಕ್ ಹೀರೋ ಲಿಯೋನಾರ್ಡ್ ಡಿ ಕ್ಯಾಪ್ರಿಯೋ ಹೃದಯವಂತ ಯುವ ಪ್ರೇಮಿಯಾಗಿ ಚಿತ್ರ ರಸಿಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದ. ಆದರೆ ಚಾರ್ಲಟನ್ ಹೇಸ್ಟನ್ ಅತ್ಯುತ್ತಮ ನಾಯಕ ನಟನೆಂದು 1959 ರಲ್ಲಿ ಆಸ್ಕರ್ ಪಡೆದಿದ್ದರೆ, 1998 ರಲ್ಲಿ ಲಿಯೋನಾರ್ಡ್ ಡಿ ಕ್ಯಾಪ್ರಿಯೋ ಅತ್ಯತ್ತಮ ನಾಯಕ ನಟ ಪ್ರಶಸ್ತಿಗೆ ಹೆಸರಿಸಲ್ಪಟ್ಟಿದ್ದ. ಕೇವಲ ಒಂದು ಮತದ ಅಂತರದಿಂದಾಗಿ ಆತನಿಗೆ ಆಸ್ಕರ್ ಪ್ರಶಸ್ತಿ ತಪ್ಪಿ ಹೋಗಿತ್ತು. ಆದರೆ ಡಿ ಕ್ಯಾಪ್ರಿಯೋ ಚಿತ್ರ ರಸಿಕರ ಮನ ಸೂರೆಗೊಂಡಿದ್ದ. ಅದಕ್ಕೂ ಮೊದಲು ಹಿಂದಿನ ವರ್ಷ ಸಹ ಆತ ‘ವಾಟ್ ಈಸ್ ಈಟಿಂಗ್ ಗಿಲ್ಬಟ್ಸ್ ಗ್ರೇಪ್ ಚಿತ್ರದ ನಟನೆಗಾಗಿ ಆಸ್ಕರ್ ಗೆ ಪ್ರಶಸ್ತಿಗೆ ಹೆಸರಿಸಲಪಟ್ಟಿದ್ದ. ಕೈಗೆಟುಕುವಷ್ಟು ಹತ್ತಿರಕ್ಕೆ ಎರಡು ಸಲ ಬಂದಿದ್ದ ಆಸ್ಕರ್ ಮಾಯಾ ಜಿಂಕೆ ಕಣ್ಣು ಮಿಟುಕಿಸಿ ಬೇರೆಯವರ ಪಾಲಾಗಿತ್ತು. ಆಗಷ್ಟೆ 24 ರ ತರುಣನಾಗಿದ್ದ ಆತ ಅಷ್ಟು ಮನಸಿಗೆ ಹಚ್ಚಿಕೊಂಡಂತೆ ಕಂಡು ಬಂದಿರಲಿಲ್ಲ. ಅದು ಬೆಳೆಯುವ ನಟನೊಬ್ಬನ ಪ್ರಮುಖ ಲಕ್ಷಣವಾಗಿತ್ತು. ಆತನ ಟೈಟಾನಿಕ್ ಚಿತ್ರವೊಂದರ ಅಭಿನಯವೆ ಸಾಕು ಆತ ಹಾಲಿವುಡ್ ಚಿತ್ರ ಪ್ರಪಂಚದ ಅತಿರಥ ಮಹಾರಥ ನಟ ರಾಗಿದ್ದ ಗ್ರೆಗರಿ ಪೆಕ್, ಆ್ಯಂಟನಿ ಕ್ವಿನ್, ಓಮಾರ್ ಶಾರೀಫ್, ಅಲ್ ಪಸಿನೊ, ಕರ್ಕ್ ಡಗ್ಲಾಸ್, ಪೀಟರ್ ಊ ಟೂಲ್, ಫ್ರ್ಯಾಂಕ್ ಸಿನಾತ್ರಾ, ಸ್ಟೀಫನ್ ಬಾಯ್ಡ್ ಮತ್ತು ಹಂಫ್ರಿ ಬೊಗಾರ್ಟ್ ಮುಂತಾದವರ ಸಾಲಿಗೆ ಸೇರುತ್ತಾನೆ ಎಂದು ಸಿನೆಮಾ ವಿಮರ್ಶಕ ವಲಯದಿಂದ ಮೆಚ್ಚುಗೆಗಳಿಸಿದ್ದ. ಆದರೆ ಡಿ ಕ್ಯಾಪ್ರಿಯೋ ಟೈಟಾನಿಕ್ ಯಶಸ್ಸಿನ ಅಮಲನ್ನು ತಲೆಗೆ ಅಷ್ಟು ಏರಿಸಿ ಕೊಂಡಿರಲಿಲ್ಲ. ಆಸ್ಕರ್ ಪ್ರಶಸ್ತಿ ತನಗೆ ದೊರೆಯಲಿಲ್ಲವಂಬ ವಿಷಾದ ಎಂದೂ ಆತನನ್ನು ಕಾಡಲಿಲ್ಲ. ಅದು ಒಬ್ಬ ಸ್ಥಿತಪ್ರಜ್ಞ ನಟನ ಲಕ್ಷಣ ಜೊತೆಗೆ ಕಲಾಕಾರನೊಬ್ಬನ ಬೆಳವಣಿಗೆಯ ಲಕ್ಷಣ ಕೂಡ ಆಗಿತ್ತು.
1942ರ ಕಾಲದ ಯುವ ಪೀಳಿಗೆ ಹಂಫ್ರಿ ಬೊಗಾರ್ಟ್ ಮತ್ತು ಇನ್ಗ್ರೀಡ್ ಮರ್ಗಮನ್ ಅಭಿನಯದ ‘ಕಾಸಾ ಬ್ಲಾಂಕಾ’ ಚಿತ್ರವನ್ನು ಅಮರ ಪ್ರೇಮ ಕಾವ್ಯವೆಂದು ಆರಾಧಿಸಿದ್ದರೆ 1998 ರ ಯುವ ಪೀಳಿಗೆ ಲಿಯೋನಾರ್ಡ್ ಡಿ ಕ್ಯಾಪ್ರಿಯೋ ಮತ್ತು ಕೇಟ್ ವಿನ್ಸಲೇಟ್ ಅಭಿನಯದ ‘ಟೈಟಾನಿಕ್’ ತಮ್ಮ ಕಾಲದ ಅಮರ ಪ್ರೇಮ ಕಥಾನಕವೆಂದು ಆರಾಧಿಸಿದರು. ಸುಮಾರು 56 ವರ್ಷಗಳ ಧೀರ್ಘ ಕಾಲದ ನಂತರ ಮೂಡಿ ಬಂದ ಅದ್ಭುತ ಪ್ರೇಮ ಕಾವ್ಯ ಅದಾಗಿತ್ತು. ಟೈಟಾನಿಕ್ ಚಿತ್ರ ಬಿಡುಗಡೆಯ ನಂತರ ಬೆಳಗಾಗುವುದರೊಳಗೆ ಡಿ ಕ್ಯಾಪ್ರಿಯೋ ಅಸಂಖ್ಯಾತ ಯುವತಿ ಯರ ಆರಾಧ್ಯ ದೈವವಾದರೆ, ಕೇಟ್ ವಿನ್ಸಲೇಟ್ ಯುವಕರ ಹೃದಯ ದೇವತೆಯಾಗಿ ಮಿನುಗಿದಳು. ಕೇಟ್ ಇಪ್ಪತ್ತನೆ ಶತಮಾನದ ಆಡ್ರಿ ಹೆಪ್ ಬರ್ನ್, ಇನ್ಗ್ರೀಢ ಬರ್ಗಮನ್, ಸ್ಟನ್ನಿಂಗ್ ಬ್ಯೂಟಿ ಮರ್ಲಿನ್ ಮೆನ್ರೋ, ಚಿರ ಯೌವನೆ ಎಲಿಜಬೆತ್ ಟೇಲರ್, ಸುಂದರ ಕಣ್ಣುಗಳ ಜ್ಯೂಲಿ ಕ್ರೈಸ್ತ್ ಮತ್ತು ಇಟಾಲಿಯನ್ ಮೂಲದ ಸುಂದರಿ ಸೋಫಿಯಾ ಲಾರೆನ್ ರವರ ಸಾಲಿನಲ್ಲಿ ನಿಲ್ಲಬಲ್ಲಂತಹವಳು ಎಂದು ಪರಿಗಣಿಸಲ್ಪಟ್ಟಿದ್ದಳು. ಇಪ್ಪತ್ತು ಮತ್ತು ಇಪ್ಪತೊಂದನೆ ಶತಮಾನಗಳ ಅದ್ಭುತ ನಟ ನಟಿಯರ ಕೊಂಡಿಯಾಗಿ ಕೇಟ್ ಮತ್ತು ಕ್ಯಾಪ್ರಿಯೋ ಮೂಡಿ ಬಂದಿದ್ದರು. ಹಾಗೆ ನೋಡಿದರೆ ಕೇಟ್ ಅಂತಹ ಅದ್ಭುತ ಅಂದಗಾತಿಯೇನೂ ಆಗಿರಲಿಲ್ಲ. ಸ್ನಿಗ್ಧ ಸೌಂದರ್ಯದ ಸ್ವಲ್ಪ ಧಡೂತಿ ದೇಹದ ಆದರೆ ಸುಂದರ ದಂತ ಪಂಕ್ತಿಗಳನ್ನು ಹೊಂದಿದ ನಕ್ಕರೆ ಕೆನ್ನೆಯಲ್ಲಿ ಗುಳಿ ಬೀಳುವ ನಿರ್ಮಲ ನಗುವಿನ ಮಾದಕ ನಟಿ ಅವಳಾಗಿದ್ದಳು. ಟೈಟಾನಿಕ್ ರೋಸ್ ಡಾಸನ್ ಪಾತ್ರದಲ್ಲಿ ಅವಳು ತನ್ನನ್ನು ತಾನೇ ಆ ಪಾತ್ರವೆಂದು ಪರಿಭಾವಿಸಿಕೊಂಡು ನಟಿಸಿದ್ದಳು. ಅಂತಹ ಅವಕಾಶಗಳು ಕಲಾವಿದರ ಜೀವನದಲ್ಲಿ ಸಿಗುವುದು ಒಮ್ಮೆ ಮಾತ್ರ, ಆದರೆ ಕೇಟ್ ಅದನ್ನು ಸಮರ್ಥವಾಗಿ ಬಳಸಿ ಕೊಂಡಳು. ಡೀ ಕ್ಯಾಪ್ರಿಯೊ ಸಹ ಅಷ್ಟೆ ಜಾಕ್ ಡಾಸನ್ ಪಾತ್ರವನ್ನು ತನ್ನ ಅದ್ಭುತ ನಟನೆಯ ಮೂಲಕ ಅಜರಾಮರ ಗೊಳಿಸಿದ್ದಾನೆ.
( ಮುಂದುವರಿದುದು )
*
ಚಿತ್ರಕೃಪೆ : ಅಂತರ್ ಜಾಲ
Comments
ಉ: ' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ ' ...
ಹಿರಿಯರಾದ ಪಾಟೀಲ ರವರೇ, ಹಾಲಿವುಡ್ ಸಿನಿಮಾಗಳ ಅದ್ಭುತ ಪ್ರೇಮಕಾವ್ಯಗಳ ಕುರಿತು ಬರೆದ ಲೇಖನ ತುಂಬ ಚನ್ನಾಗಿ, ಹಲವಾರು ನಟನಟಿಯರ, ನಿರ್ದೇಶಕರ, ಸಾಧನೆಗಳೊಂದಿಗೆ, ತುಲನಾತ್ಮಕ ನೋಟದೊಂದಿಗೆ ಅದ್ಭುತವಾಗಿ ಮೂಡಿದೆ. ಮೊದಲ ಭಾಗದಲ್ಲೆ ಮನವನ್ನ ಸೆರೆಹಿಡಿಯಿತು. ಮುಂದಿನ ಭಾಗವನ್ನು ಎದುರು ನೋಡುವಂತಾಗಿದೆ.ಧನ್ಯವಾದಗಳು
In reply to ಉ: ' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ ' ... by lpitnal
ಉ: ' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ ' ...
ಲಕ್ಚ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಟೈಟಾನಿಕ್ ಕುರಿತ ಬರಹ ಎಲ್ಲಿ ಅಪ್ರಸ್ತುತವೆನಿಸುತ್ತೋ ಎನ್ನುವ ಅಂಜಿಕೆ ನನಗಿತ್ತು, ತಮ್ಮ ಪ್ರೋತ್ಸಾಹಭರಿತ ಪ್ರತಿಕ್ರಿಯೆ ನನ್ನಲ್ಲಿ ಬರೆಯುವ ಉತ್ಸಾಹ ಮೂಡಿಸಿದೆ, ತಮ್ಮ ಮೆಚ್ಚುಗೆಯ ಪರಿಗೆ ಧನ್ಯವಾದಗಳು.
ಉ: ' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ ' ...
ಪಾಟೀಲರೆ ನಮಸ್ಕಾರ. ಸಿನೆಮಾ-ಪ್ರೇಮ : ತುಂಬಾ ಕುತೂಹಲಕಾರಿ ವಸ್ತುವನ್ನು ಆಯ್ದುಕೊಂಡಿದ್ದೀರ. ಸರಣಿ ರೋಚಕವಾಗಿರುವುದರಲ್ಲಿ ಸಂಶಯವಿಲ್ಲ. ಅಂತೆಯೆ, ನಮಗೆ ಗೊತ್ತಿಲ್ಲದ ಎಷ್ಟೊ ಹಳೆ / ಹೊಸ ವಿಷಯಗಳು , ಹೆಸರುಗಳು, ವ್ಯಕ್ತಿತ್ವಗಳು ಈಗಾಗಲೆ ಕಾಣಿಸಿಕೊಂಡು ಕುತೂಹಲ ಮೂಡಿಸಿವೆ. ಮಿಕ್ಕ ಭಾಗಗಳಿಗಾಗಿ ಎದುರು ನೋಡುವಂತೆ ಮಾಡಿದೆ ಈ ಬರಹ.
.
ಅಂದಹಾಗೆ ಟೈಟಾನಿಕ್ ದೃಶ್ಯಕಾವ್ಯದ ಕುರಿತು ಬರೆದಷ್ಟು ಕಡಿಮೆಯೆ. ಈಚೆಗೆ ಅದರ 3ಡಿ ಡೀವೀಡಿ ಕೂಡ ರಿಲೀಸ್ ಆಗಿದ್ದನ್ನು ನೋಡಿದೆ!
"
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ ' ... by nageshamysore
ಉ: ' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ ' ...
ನಾಗೇಶ ಮೈಸೂರು ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ,ತಮ್ಮ ಮೆಚ್ಚುಗೆ ಮತ್ತು ಕುತೂಹಲ ನನಗೆ ಸಂತಸ ತಂದಿದೆ, ಮುಂದಿನ ಭಾಗಗಳಲ್ಲಿ ಇದೆ ಕುತೂಹಲ ಉಳಿಸಿಕೊಂಡು ಹೋಗಲು ಪ್ರಯತ್ನಿಸುವೆ, ಟೈಟಾನಿಕ್ ಬಗೆಗೆ ಬಹಳ ಹಿಂದೆಯೆ ಬರೆಯ ಬೇಕೆಂದಿದ್ದೆ ಸೋಮಾರಿತನದಿಂದಾಗಿ ಬರೆಯ ಲಾಗಿರಲಿಲ್ಲ. ಮೆಚ್ಚುಗೆ ಭರಿತ ಪ್ರೋತ್ಸಾಹಕ್ಕೆಧನ್ಯವಾದಗಳು.
In reply to ಉ: ' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ ' ... by H A Patil
ಉ: ' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ ' ...
ನಮಸ್ಕಾರಗಳು ಸರ್
ನಿಮ್ಮ ಈ ಲೇಖನವು ಮತ್ತೋಮ್ಮೆ ಟೈಟಾನಿಕ್ ಚಿತ್ರವನ್ನು ನೆನಪಿಸಿಕೋಳ್ಳವಂತೆ ಮಾಡಿತ್ತು.
:) :) " ನಿಮಗು ,ನಿಮ್ಮ ಪರಿವಾರದವರಿಗು ಮಕರ ಸಂಕ್ತಮಣದ ಹಾರ್ದಿಕ ಶುಭಾಶೆಯಗಳು".:) :)
ಧನ್ಯವಾದಗಳು
In reply to ಉ: ' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ ' ... by ravindra n angadi
ಉ: ' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ ' ...
ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು.
ಲೇಖನದ ಮೆಚ್ಚುಗೆಗೆ ಧನ್ಯವಾದಗಳು, ತಮ್ಮನ್ನು ಸೇರಿದಂತೆ ಎಲ್ಲ ಸಂಪದದ ಸದಸ್ಯರಿಗೂ ಮಕರ ಸಂಕ್ರಾಂತ್ರಿಯ ಶುಭಾಶಯಗಳು.