ಕಥೆ : ಪುಟ್ಟನ ಸೈಕಲ್ಲು
ಮನೆಯ ಅಂಗಳದಲ್ಲಿ ‘ಢಬ್ , ಢಬ್, ಟಣ್’ ಹೀಗೆ ಎರಡು ಮೂರು ಬಗೆಯ ಶಬ್ದ. ಅದಾದ ಮೇಲೆ “ಅಯ್ಯೋ ಅಮ್ಮಾ “ ಎಂದು ಕೂಗಿಕೊಂಡ ಸದ್ದು. ಅದಾದ ಮೇಲೆ ಮತ್ತೆ ಮೌನ . ಹೀಗೆ ಅನಾಹುತವನ್ನು ಸೂಚಿಸುವ ಶಬ್ದಗಳು ಒಂದಾದ ಮೇಲೊಂದರಂತೆ ಮೌನದಲ್ಲಿ ಇದ್ದಕ್ಕಿದ್ದಂತೆ ಕೇಳಿದ ಪುಟ್ಟನ ತಾಯಿ, “ಬೆಳಿಗ್ಗೆ ಬೆಳಿಗ್ಗೆ ಎಂಥಾ ಗ್ರಹಚಾರ ಶುರುವಾಯಿತನ” ಅಂದುಕೊಳ್ಳುತ್ತ ಮನೆಯ ಅಂಗಳದ ಕಡೆಗೆ ಧಾವಿಸಿದಳು. ಅಂಗಳದಲ್ಲಿ ಪುಟ್ಟ ಮನೆಯ ಮುಂದೆ ಇದ್ದ ತುಳಸಿ ಕಟ್ಟೆಯ ಬಳಿ ಬಿದ್ದಿದ್ದ. ಆತನ ಮುಖ ಅಳುವಂತೆ ತೋರುತ್ತಿದ್ದರೂ , ಆತನ ಪಿಳಿ ಪಿಳಿ ಕಣ್ಣುಗಳು ಅಳುವನ್ನು ಮರೆಮಾಡಲು ಪ್ರಯತ್ನಿಸುತ್ತಿತ್ತು. ಅದೆಷ್ಟೋ ವರ್ಷಗಳಿಂದ ಗುಡಿಸಿ ಸಾರಿಸಿ ಕಲ್ಲಿನಂತಾಗಿದ್ದ ಅಂಗಳದ ಮೇಲೆ ಬಿದ್ದು ಉಜ್ಜಿಕೊಂಡು ಪುಟ್ಟುವಿನ ಕೈ ತೋಳಿನ ಚರ್ಮ ಕಿತ್ತು ಬಂದು ರಕ್ತ ಬರಲು ಶುರುವಾಗಿತ್ತು. ಕಾಲಿಗೂ ಅಲ್ಲಲ್ಲಿ ತರೆದ ಗುಳ್ಳೆಗಳಾಗಿದ್ದವು. ಎರಡು ದಿನದ ಹಿಂದಷ್ಟೇ ನೆಟ್ಟಿದ್ದ ತುಳಸೀ ಗಿಡ ಮುರಿದು ಕಿತ್ತು ಬಂದಿತ್ತು. ಅಲ್ಲಿ ಏನಾಗಿರಬಹುದೆಂದು ಯೋಚನಾ ಶಕ್ತಿ ಯೋಚಿಸುವ ಮೊದಲೇ ಕೋಪ , ಕರುಣೆ, ಭಯ ಮುಂತಾದ ಎಲ್ಲಾ ರಸವನ್ನೂ ಒಮ್ಮೆಗೇ ಸೂಚಿಸುತ್ತಿದ್ದ ಪುಟ್ಟುವಿನ ತಾಯಿಯ ಕಣ್ಣುಗಳು, ಅಷ್ಟಾವಕ್ರವಾಗಿ ಅಲ್ಲಿಯೇ ಸ್ವಲ್ಪ ದೂರದಲ್ಲಿ ಬಿದ್ದಿದ್ದ ಪುಟ್ಟನ ಹೊಸ ಸೈಕಲ್ಲು ತನ್ನ ಚಕ್ರವನ್ನು ಕಷ್ಟ ಪಟ್ಟು ತಿರುಗಿಸುತ್ತ ಅದುವರೆಗೆ ನಡೆದ ಸಂಗತಿಯನ್ನು ಅಸ್ಪಷ್ಟವಾಗಿ ಹೇಳಲು ಪ್ರಯತ್ನಿಸುತ್ತಿದ್ದುದನ್ನು ನೋಡಿ, ನಡೆದ ಸಂಗತಿಯನ್ನು ಊಹಿಸಿತು. “ನಾನು ಎಷ್ಟು ಹೇಳಿದರೂ ಕೇಳಲಿಲ್ಲ ಅಲ್ವ, ಆ ಸೈಕಲ್ ನಿನ್ನ ಕೈಯಲ್ಲಿ ಹೊಡೆಯಲು ಆಗುವುದಿಲ್ಲ ಅಂದ್ರೂ ಕೇಳುವುದಿಲ್ಲ ನೀನು . ಈಗ ನೋಡು , ಎಲ್ಲಾದ್ರೂ ಕೈಕಾಲು ಮುರಿದು ಹೋಗಿದ್ರೆ ಎಂತದು ಮಾಡ್ಲಿಕ್ಕೆ ಬರ್ತಿತ್ತು ? ಮೊನ್ನೆ ಮೊನ್ನೆ ನೆಟ್ಟ ತುಳಸಿಗಿಡ ಬೇರೆ ಸತ್ತೋಯ್ತು . ಸೈಕಲ್ಲು ತರಬೇಕಾದರೆ ಬುದ್ದಿ ಬೇಡವಾ “ ಅಂತೆಲ್ಲ ತನ್ನನ್ನೇ ಬೈದುಕೊಂದಂತೆ ಹೇಳುತ್ತ ಪುಟ್ಟುವಿನ ಗಾಯಕ್ಕೆ ಹಚ್ಚಲು ಅದ್ಯಾವುದೋ ಡಬ್ಬಿಯಲ್ಲಿ ಇಟ್ಟಿದ್ದ ಔಷಧಿಯನ್ನು ಹುಡುಕಲು ಮನೆಯೊಳಕ್ಕೆ ಗಡಿಬಿಡಿಯಲ್ಲಿ ಧಾವಿಸಿದಳು .
ಆಚೆ ಓಣಿಯ ಸುಬ್ಬಣ್ಣ ತನ್ನ ಹೊಸ ಸೈಕಲ್ ಮಾರುತ್ತಾನೆಂದು ತಿಳಿದ ಕೂಡಲೇ ಪುಟ್ಟನ ಅಪ್ಪ , ಹೊಸ ಸೈಕಲ್ಲಿಗೆ ದುಡ್ಡು ಸುರಿಯುವ ಬದಲು ಚೌಕಾಸಿಯಲ್ಲಿ ಸಿಗುತ್ತಿದ್ದ ಸುಬ್ಬಣ್ಣನ ಸೈಕಲ್ಲನ್ನು ಕೊಳ್ಳಲು ನಿರ್ಧರಿಸಿದ್ದ. ಅಲ್ಲದೇ ಇನ್ನೊಂದು ಎರಡು ವರ್ಷದಲ್ಲಿ ಕನ್ನಡ ಶಾಲೆ ಮುಗಿಸಿ ಹೈ ಸ್ಕೂಲ್ ಮೆಟ್ಟಿಲೇರಲಿದ್ದ ಪುಟ್ಟನಿಗೆ ಈಗಲೇ ಕೊಡಿಸಿದರೆ ಮುಂದೆ ಅವನ ಕಟ ಕಟೆಯೂ ತಪ್ಪುತ್ತದೆ , ಜೊತೆಗೆ ಸ್ವಲ್ಪ ದುಡ್ದೂ ಉಳಿಯುತ್ತದೆ ಅಂತೆಲ್ಲ ಯೋಚಸಿ ನಿರ್ಧಾರಕ್ಕೆ ಸೆಕೆಂಡ್ ಹ್ಯಾಂಡ್ ಸೈಕಲ್ ಕೊಳ್ಳುವ ನಿರ್ಧಾರಕ್ಕೆ ಬಂದಿದ್ದ. ಅದೇ ದಿನವೇ ಸುಬ್ಬಣ್ಣನ ಮನೆಗೆ ಪುಟ್ಟನನ್ನೂ ಕರೆದುಕೊಂಡು ಸೈಕಲ್ ಕೊಳ್ಳಲು ಹೊರಟಿದ್ದ . ಇದ್ದಕ್ಕಿದ್ದಂತೆ ಸುಬ್ಬಣ್ಣ ತನ್ನ ಹೊಸ ಸೈಕಲ್ ಯಾಕೆ ಮಾರ್ತಾ ಇದ್ದಾನೆ , ಅದ್ರಲ್ಲೆನ್ನಾದ್ರೂ ದೋಷ ಇರಬಹುದಾ ಅಂತ ಅನುಮಾನದಿಂದಲೇ ಸುಬ್ಬಣ್ಣನನ್ನು ಕೇಳಿದ್ದ “ಅದ ಎಂತಕ್ಕೆ ಇದ್ದಕ್ಕಿದ್ದಹಾಗೆ ಹೊಸ ಸೈಕಲ್ ಮಾರ್ತ ಇದ್ದೀರಿ ಮಾರಾಯ್ರೆ ?” . “ಈ ಹಾಳಾದ ಮಳೆಗಾಲ ಮಾರಾಯ್ರೆ , ಯಾವುದೋ ಸುಡುಗಾಡ ಗ್ರಾಚಾರ ಅಂತ ಕಾಣ್ತದೆ . ಅರ್ಜೆಂಟಿಗೆ ದುಡ್ಡು ಬೇಕು ಅಂತ ಒಂದ್ ನಾಲ್ಕ ಅಡಕೆ ಕೊಯ್ಯೋಣ ಅಂತ ಮರ ಹತ್ತಿದ್ದೆ . ಹಾಳಾದ್ದು ಕಾಲ ಜಾರ್ ಬಿಡಬೇಕ. ಬಿದ್ದು ಈಗ ಸೊಂಟ ನೋವು ಒಂದು ತಿಂಗಳ್ ಆಯ್ತು . ಏನ್ ಮಾಡಿದ್ರೂ ಕಡಿಮೇನೆ ಆಗುವುದಿಲ್ಲ. ಅದಕ್ಕೆ ನೋವು ಕಡಿಮೆ ಆಗು ವರೆಗೆ ಸೈಕಲ್ಲು ಹೊಡೆ ಯುದು ಬೇಡ ಹೇಳಿ ಮಾರಿಬಿಡುವ ಅಂತ” ಸುಬ್ಬಣ್ಣ ಅದೇನೋ ಕಾರಣ ಹೇಳುತ್ತ ಪಕ್ಕದಲ್ಲೇ ಇದ್ದ ನೋವಿನ ಎಣ್ಣೆಯನ್ನು ತನ್ನ ಬೆನ್ನಿನ್ನ ಸುತ್ತ ತಿಕ್ಕತೊಡಗಿದ್ದ . ಅಂತೂ ಅರ್ಧಗಂಟೆ ಚೌಕಾಸಿ ಮಾಡಿ ಪುಟ್ಟುವಿನ ಅಪ್ಪ ಸುಬ್ಬಣ್ಣನ ಬಚ್ಚಲು ಮನೆಯ ಮಾಡಿನ ಅಡಿಗೆ ನಿಲ್ಲಿಸಿ ಇಟ್ಟಿದ್ದ ಸೈಕಲ್ಲನ್ನು ಮನೆಗೆ ತಂದಿದ್ದ.
ಹೊಸ ಸೈಕಲ್ಲಾದರೂ ಸುಮಾರು ದಿನದಿಂದ ಸುಬ್ಬಣ್ಣನ ಬಚ್ಚಲ ಮನೆಯ ಹೊಗೆತಿಂದು ಆಗಲೇ ಕರ್ರಗಿನ ಹೊಸ ಹೊಳಪು ಅದಕ್ಕೆ ಬಂದಿತ್ತು. ಟೈರಿನ ಗಾಳಿಯೆಲ್ಲ ಹೋಗಿ , ಬ್ರೇಕಿನ ತಂತಿಗೆಲ್ಲ ತುಕ್ಕುಹಿಡಿದು ದೂಡಿಕೊಂಡು ಹೋಗಲೂ ಕಷ್ಟಪಡ ಬೇಕಾಗಿತ್ತು. ಬೇರೆ ದಾರಿಯಿಲ್ಲದೇ ಪುಟ್ಟುವಿನ ಅಪ್ಪ ರಿಯಾಜ್ ಸಾಬಿಯ ಸೈಕಲ್ ಅಂಗಡಿಗೆ ರಿಪರಿಗೆ ಕೊಟ್ಟರೆ , ಆತ ಹೊಸ ಟೈಯರು , ಟ್ಯೂಬು , ಒಯ್ಲಿಂಗು, ಸೀಟ್ ಕವರು ಅಂತೆಲ್ಲ ಹೇಳಿ ಸುಮಾರು ಖರ್ಚು ಮಾಡಿಸಿದ್ದ. ಅಷ್ಟೆಲ್ಲ ಬಂದೋಬಸ್ತು ಸೈಕಲ್ಲಿಗೆ ಮಾಡಿಸಿದರೂ ಒಂದು ಸಮಸ್ಯೆ ಮಾತ್ರ ಹಾಗೇ ಉಳಿದಿತ್ತು. ತೆಂಗಿನ ಮರದಂತ ನೀಳ ಕಾಲುಗಳ ಸುಬ್ಬಣ್ಣ , ತನ್ನ ಕಾಲಿನ ಅಳತೆಗೆ ತಕ್ಕಂತೆ ಸೈಕಲ್ಲನ್ನೂ ತಂದಿದ್ದ ಅಂತ ಕಾಣಿಸುತ್ತದೆ. ಸ್ವಲ್ಪ ಕುಳ್ಳಗೆ ಇದ್ದ ಪುಟ್ಟನಿಗೆ ಸೀಟಿನ ಮೇಲೆ ಕೂತರೆ ಕಾಲು ಪೆಡಲ್ ತುಳಿಯಲೂ ಮುಟ್ಟುತ್ತಿರಲಿಲ್ಲ. ಹಾಗಾಗಿ ಈ ಸಮಸ್ಯೆಗೆ ಬೇರೆ ಪರಿಹಾರ ಕಾಣದೆ ಪುಟ್ಟು, ಸೈಕಲ್ಲಿನ ತ್ರಿಕೊನದಂತಿದ್ದ ಸಂದಿಯಲ್ಲೇ ಕಾಲನ್ನು ತೋರಿ ಒಂದೇ ಕಡೆ ವಾಲಿಕೊಂಡು , ಸೀಟಿನ ಪಕ್ಕದಲ್ಲೇ ತಲೆಯಿರಿಸಿ ಅಷ್ಟಾ ವಕ್ರವಾಗಿ ಸೈಕಲ್ಲು ತುಳಿಯುತ್ತಿದ್ದ. ಈ ರೀತಿಯ ಅಸಂಬದ್ದ ಸೈಕಲ್ ತುಳಿಯುವುದರಿಂದಲೋ ಏನೋ ಆಯ ತಪ್ಪಿ ಬೀಳುವುದು ಪುಟ್ಟುವಿಗೆ ಸಾಮಾನ್ಯ ವಾಗಿತ್ತು . ಅದಕ್ಕೆ ಪುಟ್ಟುವಿನ ತಾಯಿ “ಸೈಕಲ್ಲು ತರಬೇಕಾದರೆ ಬುದ್ದಿ ಬೇಡವ ಅಂತೆಲ್ಲ ಬೈದಿದ್ದು”.
*******
ಅಂತೂ ಹೈಸ್ಕೂಲ ಮೆಟ್ಟಿಲೇರುವ ಹೊತ್ತಿಗೆ ಪುಟ್ಟು ಸೀಟಿನ ಮೇಲೆ ಕುಳಿತು ಸೈಕಲ್ ಹೊಡೆಯುವುದನ್ನ ಕಷ್ಟಪಟ್ಟು ಕಲಿತಿದ್ದ. ಪ್ರತಿ ಪೆಡಲ್ ತುಳಿಯುವಾಗಲೂ ಅತ್ತಿಂದಿತ್ತ ವಾಲಬೇಕಿದ್ದರೂ , ಆಯ ತಪ್ಪದಷ್ಟು ಪರಿಣಿತಿ ಸಾಧಿಸಿದ್ದ. ದಿನ ಕಳೆದಂತೆ ಪುಟ್ಟನಿಗೆ ಆ ಸೈಕಲ್ಲಿನ ಮೇಲೆ ಅದೇನೋ ಅಂದು ತರಹದ ಆಕರ್ಷಣೆ ಬೆಳೆಯತೊಡಗಿತ್ತು . ವಿವಿಧ ಭಂಗಿಯಲ್ಲಿ ಸೈಕಲ್ಲನ್ನು ಹೊಡೆದು ಯಾರೂ ಸಾಧಿಸಿದ್ದನ್ನು ತಾನು ಸಾಧಿಸಿದೆ ಎನ್ನುವ ಹುರುಪು. ಕೆಲವೊಮ್ಮೆ ಸೈಕಲ್ಲಿನ ಮೇಲೆ ಎರಡೂ ಕೈಯನ್ನು ಬಿಟ್ಟು ಇಷ್ಟೆಲ್ಲಾ ದೂರ ಬಂದೆನಾ ಎನ್ನುವ ಆಶ್ಚರ್ಯ. ಊರಿನ ಬಹುತೇಕ ಎಲ್ಲರೂ ತಳ್ಳಿಕೊಂಡೇ ಹೋಗುತ್ತಿದ್ದ ಊರಿನ ಶಾಲೆಯ ಬಳಿಯ ದೊಡ್ಡ ಕೊರಕಲು ಘಟ್ಟವನ್ನು ಎದುರುಸಿರು ಬಿಡುತ್ತ ಒಮ್ಮೆಯೂ ಸೈಕಲ್ಲಿನಿಂದ ಇಳಿಯದೇ ಹತ್ತಿಸಿದಾಗಲಂತೂ ಪುಟ್ಟನ ಅಹಮ್ಮು ಇಮ್ಮಡಿಸುತ್ತಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ಸೈಕಿಲ್ಲಿಗೆ ತನ್ನ ಮೇಲೆ ಅದೇನೋ ವಿಶೇಷ ಪ್ರೇಮ ಇದೆ ಅಂತಲೂ ಪುಟ್ಟುವಿಗೆ ಕೆಲವೊಮ್ಮೆ ಅನಿಸತೊಡಗಿತ್ತು.
ಹೇಳಿ ಕೇಳಿ ಅದು ಕರಾವಳಿ ಒಂದು ಊರು. ಹಾಗಾಗಿ ಮಳೆಗಾಲವೆಂದರೆ ಕೇಳಬೇಕೇ ? ಎಡೆಬಿಡದೆ ಸುರಿಯುವ ಮಳೆ. ಆಗಾಗ್ಗೆ ಬೀಸುವ ಗಾಳಿ , ರಸ್ತೆಗಳೆಲ್ಲ ಹೊಳೆಗಳಾಗಿ , ಹೊಳೆಗಳು ನದಿಗಳಾಗಿ ಮಾರ್ಪಡುವ ಕಾಲ. ಅಷ್ಟೇ ಅಲ್ಲದೇ ಅದೇ ವರ್ಷ ಬೇಸಿಗೆಯಲ್ಲಿ ಗ್ರಾಮ ಪಂಚಾಯಿತಿಯ ಅದ್ಯಾವುದೋ ಯೋಜನೆಯ ಅಡಿಯಲ್ಲಿ ಲಕ್ಷ ಗಟ್ಟಲೆ ಹಣ ಖರ್ಚುಮಾಡಿ ಊರಿನ ರಸ್ತೆಗೆಲ್ಲ ಮಣ್ಣು ಹಾಕಿಸಿ ಹದಮಾಡಿಸಿದ್ದರು, ತಾಲೂಕಿನ ಯಾವುದೋ ದೊಡ್ಡ ಪುಡಾರಿಯ ಅಮೃತ ಹಸ್ತದಿಂದ ಹೊಸ ರಸ್ತೆಯ ಉದ್ಘಾಟನೆಯ ಜೊತೆಗೆ ಊರಿನ ಶಾಲೆಯ ಆವರಣದಲ್ಲಿ ರಾತ್ರಿ ಹಮ್ಮಿಕೊಂಡಿದ್ದ ಒಂದಿಷ್ಟು ಅದ್ದೂರಿಯ ಮನರಂಜನೆಯ ಕಾರ್ಯಕ್ರಮವನ್ನೂ ಊರಿನ ಜನತೆ ಚಂದಗಾಣಿಸಿ ಕೊಟ್ಟಿದ್ದರು. ಆದರೆ ಎರಡೇ ವಾರದಲ್ಲಿ ಕಲ್ಲು ಲಾರಿಗಳು ಆ ರಸ್ತೆಯಲ್ಲಿ ಓಡಾಡಿ , ಹಾಕಿದ ಮಣ್ಣೆಲ್ಲ ಸಡಿಲವಾಗಿ , ಧೂಳೆದ್ದು , ರಸ್ತೆಯ ಅಕ್ಕ ಪಕ್ಕದ ಗಿಡಮರಗಳೆಲ್ಲ ಚೈತ್ರ ಕಾಲದಲ್ಲೂ ಕೆಂಬಣ್ಣ ತಾಳಿ , ಪ್ರಕೃತಿಯ ಮಹಿಮೆಯನ್ನೇ ಅಣಕವಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲೂ ಹಲವಾರು ಸಾರಿ ಲಾರಿ, ಬಸ್ಸುಗಳನ್ನು ಹಿಂದಿಕ್ಕಿ ಪುಟ್ಟುವಿನ ಸೈಕಲ್ಲು ಮುನ್ನುಗ್ಗಿ ಬಿರುಗಾಳಿಗೆ ಏಳುವಂಥ ಧೂಳಿನಿಂದ ಪುಟ್ಟನನ್ನು ರಕ್ಷಿಸುತ್ತಿತ್ತು. ಅಲ್ಲದೇ ಆ ವರ್ಷದ ಮಳೆಗಾಲದಲ್ಲಿ ರಸ್ತೆಯ ಹೊಸ ಮಣ್ಣು ಮಳೆಯ ನೀರಿನ ಜೊತೆ ಬೆರೆತು , ಕಲ್ಲು ಲಾರಿಯ ಟೈರು ಅದರಮೇಲೆ ಹರಿದಾಡಿ , ಉತ್ತಲು ಹದಮಾಡಿದ ಭತ್ತದ ಗದ್ದೆಯ ಮಣ್ಣಿನ ಹದ ರಸ್ತೆಯ ಮಣ್ಣಿಗೆ ಬಂದಿತ್ತು. ರಸ್ತೆ ಯಾವುದು? ಹಳ್ಳ ಯಾವುದು ? ರಸ್ತೆಯ ಯಾವ ಬದಿಗೆ ಹೋದರೆ ಟೈರು ಹೂತುಕೊಳ್ಳುವುದಿಲ್ಲ ? ಎಲ್ಲಿ ಮುಳ್ಳಿದೆ ? ಎಲ್ಲಿ ಕಲ್ಲಿದೆ ಅಂತೆಲ್ಲ ಹಲವಾರು ನಿರ್ಧಾರಗಳನ್ನು ಸೈಕಲ್ ಸವಾರ ಒಮ್ಮೆಲೇ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇದ್ದುದರಿಂದ ಹಲವಾರು ದ್ವಂದದ ಸಂಧರ್ಭದಲ್ಲಿ ಪುಟ್ಟ ಏನು ಮಾಡಬೇಕೆಂದು ನಿರ್ಧರಿಸಲಾಗದೆ ಇರುವಾಗ ಆ ಸೈಕಲ್ಲೇ ಸಮಯೋಚಿತ ನಿರ್ಧಾರ ಕೈಗೊಂಡು ರಸ್ತೆಯನ್ನು ದಾಟಿದ್ದೂ ಉಂಟು ! ಅಷ್ಟೇ ಅಲ್ಲದೇ ಮಳೆ ಬಂದಾಗ ಸೈಕಲ್ ಹೊಡೆಯಲು ಪುಟ್ಟ , ಒಂದು ಕೈಯಲ್ಲಿ ಛತ್ರಿ ಹಿಡಿದು ಮತ್ತೊಂದು ಕೈಯಲ್ಲಿ ಸೈಕಲ್ ಹೆಂಡಲ್ ಹಿಡಿದು ಗಾಳಿ ಬೀಸಿದ ದಿಕ್ಕಿಗೆ ಕೊಡೆ ಹಿಡಿದುಕೊಂಡು ಅದು ಗಾಳಿಯ ರಭಸಕ್ಕೆ ಹಿಮ್ಮುಖವಾಗಿ ಮಡಚಿಕೊಳ್ಳದಂತೆ ನೋಡಿಕೊಳ್ಳುತ್ತಾ ಜೊತೆಗೆ ಬೆನ್ನಿಗೆ ಹಾಕಿರುವ ಪುಸ್ತಕದ ಚೀಲವೂ ಮಳೆಗೆ ಒದ್ದೆಯಾಗದಂತೆ ನೋಡಿಕೊಳ್ಳುತ್ತಾ , ಎಲ್ಲಿ ಹೈಸ್ಕೂಲು ತಲುಪಲು ತಡವಾಗಿ ಮಾಸ್ತರ ಬೈಗುಳ ತಪ್ಪಿಸಿಕೊಳ್ಳಲು ಏನಾದರೂ ಸಬೂಬು ಯೋಚಿಸಬೇಕಾದ ಸಂಧರ್ಭಗಳಲ್ಲಿ, ಪುಟ್ಟುವಿನ ಸೈಕಲ್ಲೇ ರಸ್ತೆಯಲ್ಲಿ ಹೇಗೆ ಸಾಗಬೇಕೆಂಬ ನಿರ್ಧಾರ ಕೈಗೊಳ್ಳಬೇಕಿತ್ತು , ಹೀಗೆ ಇಂತಹ ಕಠಿಣ ಪರಿಸ್ಥಿತಿಯಲ್ಲೂ ತನ್ನ ಕೈ ಬಿಡದೆ ಸುರಕ್ಷಿತವಾಗಿ ದಿನವೂ ತಲುಪಿಸುತ್ತಿದುದರಿಂದ ಪುಟ್ಟುವಿಗೆ ಆ ಸೈಕಲ್ ಮೇಲೆ ಅದೇನೋ ಮಮತೆ. ಜೊತೆಗೆ ಸೈಕಲ್ಲಿಗೂ ತನ್ನ ಮೇಲೆ ಅದೇನೋ ಬಗೆಯ ಅವ್ಯಕ್ತ ಪ್ರೇಮ ಎಂಬ ಅನುಮಾನ.
“ಇಲ್ಲೆ ಶೆಟ್ರ ಅಂಗಡಿಗೆ ಹೋಗಿ ಈ ಚೀಟೀಲಿ ಬರದದ್ದನ್ನ ತಕೊಂಡು ಬಾ “,
ಪಕ್ಕದ ಮನೆಯ ಯಾರೋ ಬಂದು “ಇಲ್ಲೆ ಸ್ವಲ್ಪ ಹೋಗ ಬರ್ತೆ ಹಾಂ “,
“ಹಿಂದೆ ಸೀಟು ಖಾಲಿ ಇದ್ಯಲ್ಲ . ನನ್ನ ಸ್ವಲ್ಪ ಅಲ್ಲಿವರೆಗೆ ಬಿಟ್ಟ ಬಿಡು ”
“ನಾನೊಂದ ಸಾರ್ತಿ ನಿನ್ ಸೈಕಲ್ಲು ಹೊಡೆದು ನೋಡತ್ನ”,
“ನಿನ್ನ ಸೈಕಲ್ಲು ಹಂಗೆ ಹಿಂಗೆ ಅಂತೆಲ್ಲ ಕೊಚ್ಚಿ ಕೊಳ್ತಿಯಲ್ಲ , ನನ್ನ ಒಂದು ಸಾರ್ತಿ ರೇಸಲ್ಲಿ ಹಿಂದೆ ಹಾಕು ನೋಡೆಬಿಡುವ ”
ಅಂತೆಲ್ಲ ದ್ವನಿಗಳು ಕೇಳಿದಾಗ ತಕ್ಷಣಕ್ಕೆ ತಯಾರು ಆಗಿ ಇರುವುದು ಪುಟ್ಟುವಿನ ಸೈಕಲಿಗೆ ಸಾಮಾನ್ಯವಾಗಿತ್ತು . ಹೀಗೆ ಪುಟ್ಟನನ್ನು ಹೈಸ್ಕೂಲ್ ಸುರಕ್ಷಿತವಾಗಿ ಸೇರಿಸುವದರ ಜೊತೆಗೆ ಇನ್ನಿತರ ಗುರುತರ ಜವಾಬ್ದಾರಿಗಳನ್ನೂ ನಿಭಾಯಿಸುತ್ತ , ಪುಟ್ಟುವಿನ ಪೋಷಕರಷ್ಟೇ ಸಂಸಾರಿಕ ಜವಾಬ್ದಾರಿಯನ್ನು ಪುಟ್ಟುವಿನ ಸೈಕಲ್ಲೂ ಹೊತ್ತಿತ್ತು !
*******
ಪುಟ್ಟ ಕಾಲೇಜಿಗೆ ಹೋಗುವಷ್ಟರಲ್ಲಿ ಸೈಕಲ್ಲಿಗೂ , ಪುಟ್ಟುವಿಗೂ ಇದ್ದ ಅನ್ಯೋನ್ಯತೆ ಸ್ವಲ್ಪ ಕಡಿಮೆಯಾಗತೊಡಗಿತು ಅಂತಲೇ ಹೇಳಬೇಕು . ಕಾಲೆಜಿಗೆಲ್ಲ ಪುಟ್ಟ ಬಸ್ಸಿನಲ್ಲೇ ಹೋಗಿ ಬರುವುದು ಆರಂಭವಾದಮೇಲೆ ಸೈಕಲ್ಲಿಗಿದ್ದ ಮಹತ್ವದ ಜವಾಬ್ದಾರಿಯೊಂದು ಕಡಿಮೆಯಾಗಿತ್ತು. ಮೋಟಾರಿನ ಮೇಲೆ ಓಡಾಡುವ ಸುಖವೋ ಅಥವಾ ಮಜವೋ ಗೊತ್ತಿಲ್ಲ ಆದರೆ ಪುಟ್ಟನ ಆಕರ್ಷಣೆ ಈಗ ಮೋಟಾರಿನ ಮೇಲೆ ತಿರುಗಿತ್ತು. ಹಾಗಂತ ಆ ಸೈಕಲ್ಲಿಗೆ ಇದ್ದ ಇತರ ಹೊಣೆಗಳೆನೂ ಕಡಿಮೆಯಾದವು ಅಂತಲ್ಲ. ಈಗ ಆ ಸೈಕಲ್ಲಿಗೆ ಪುಟ್ಟನ ಮನೆಯ ಜೊತೆಗೆ, ನೆರೆಮನೆಯಿಂದ ಪ್ರಾರಂಭವಾಗಿ ಕೆಲವೊಮ್ಮೆ ಇಡೀ ಓಣಿಯ ಜನರ ಬೇಕು ಬೇಡಗಳನ್ನು ಪೂರೈಸಲು ಸಹಾಯಮಾಡಬೇಕಾದ ಅನಿವಾರ್ಯತೆ ಇರುತ್ತಿತ್ತು. ಅಷ್ಟೇ ಇಲ್ಲದೆ ಮನೆಯ ಕೆಲಸದ ಮಾರನ ಜೊತೆ ಬೆಟ್ಟಕ್ಕೆ ಹೋಗಿ ಅವನು ನಿಷ್ಕರುಣೆಯಿಂದ ಹೊರಿಸಿದಷ್ಟು ಸೊಪ್ಪು, ಸೌದಿ ಹೇರಿಕೊಂಡು ಕಲ್ಲು ಮುಳ್ಳುಗಳಿಂದಲೇ ತುಂಬಿರುವ ಕೊರಕಲು ರಸ್ತೆಯನ್ನು ತನ್ನ ಸವೆದ ಟೈರಿನಿಂದ ತೆವಳುತ್ತಾ ಸಾಗುವುದೂ ಆ ಸೈಕಲ್ಲಿನ ದಿನಚರಿಯಲ್ಲಿ ಸೇರ್ಪಡೆಯಾಗಿತ್ತು. ಹಾಗಾಗಿಯೇ ಏನೋ ಆಗಾಗ್ಗೆ ರಿಯಾಜ್ ಸಾಬಿಯ ಸೈಕಲ್ ಅಂಗಡಿಗೆ ಹೋಗಲೇಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗುತ್ತಿತ್ತು. ಪುಟ್ಟುವೇನು ಸೈಕಲ್ಲಿನ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತಾಳಿದ ಅಂತನೂ ಅಲ್ಲ. ಕೆಲವೊಮ್ಮೆ ಅಲ್ಲಿ ಇಲ್ಲಿ ತಿರುಗಾಡಲು, ಯಾರನ್ನೋ ಬೆಟ್ಟಿ ಮಾಡಬೇಕು ಅಂತೆಲ್ಲ ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ಆದರೆ ಯಾಕೋ ಏನೋ ಸೈಕಲ್ಲಿಗೆ ತನ್ನ ಮೇಲೆ ಏನೋ ಒಂದು ತರಹದ ಪ್ರೇಮವಿದೆ ಎಂಬೆಲ್ಲ ಅನುಮಾನಗಳೆಲ್ಲ ಈಗ ಬರುತ್ತಿರಲಿಲ್ಲ !
**********
ಕಾಲೇಜು ಮುಗಿಯುವ ಹೊತ್ತಿಗೆ ಪುಟ್ಟುವಿನ ಮನೆಯ ಮುಂದೆ ಹೊಸ ಮೋಟಾರು ಸೈಕಲ್ಲು ಬಂದು ನಿಂತಿತ್ತು. ಜೊತೆಗೆ ಊರಿನ ಮಣ್ಣಿನ ರಸ್ತೆಗೆಲ್ಲ ಟಾರು ಹಾಕಿ ಕಿತ್ತು ಬಂದು ರಸ್ತೆಯ ತುಂಬೆಲ್ಲ ಸೃಷ್ಟಿಯಾಗಿದ್ದ ಹೊಂಡಗಳು, ಒಂದಿಷ್ಟು ಭಾಗಕ್ಕೆ ಹಂಚು ಇನ್ನುಳಿದ ಭಾಗಕ್ಕೆ ಆರ್.ಸಿ.ಸಿ ಹಾಕಿಸಿ ಕಾಣಸಿಗುವ ವಿಶಿಷ್ಟ ಬಗೆಯ ಮನೆ ಮಾಡುಗಳು. ಆಗಷ್ಟೇ ನಿರ್ಮಾಣವಾದ ಹೊಸ ಮೊಬೈಲ್ ಟಾವರ್, ಕೇಬಲ್ ಟಿವಿ, ಸುಮಾರಾಗಿ ಎಲ್ಲರ ಮನೆಯ ಮುಂದೂ ನಿಲ್ಲಿಸಿದ ಧೂಳು ಹಿಡಿದ ಮೋಟಾರು ಸೈಕಲ್ಲು , ಅಲ್ಲಲ್ಲಿ ಕೆಲವೊಬ್ಬರ ಮನೆಯ ಅಂಗಳದಲ್ಲಿ ನಿಲ್ಲಿಸಿದ ಕಾರು , ಜೀಪುಗಳು. ಕೆಲವೊಂದು ದಿನ ರಜೆ ಹಾಕಿದರೂ ಕರ್ತವ್ಯಕ್ಕೆ ಹಾಜರಾಗುವ ಸರ್ಕಾರಿ ಬಸ್ಸು. ಸರಿಸುಮಾರು ಮನೆಗೊಬ್ಬರಂತೆ ಬೆಂಗಳೂರಿಗೆ ಹೋಗಿ ಕೆಲಸ, ಪೇಟೆಯ ಶಾಲೆಗೆ ಹೋಗುವ ಮಕ್ಕಳನ್ನು ಕರೆದುಕೊಂಡು ಹೋಗಲು ಬೆಳಿಗ್ಗೆ ಹಾಜರವುಗುವ ಶಾಲೆಯದ್ದೇ ಬಸ್ಸು ಹೀಗೆ ಇವೆಲ್ಲಾ ಊರಿನಲ್ಲಿ ಬದಲಾವಣೆಯ ಗಾಳಿ ಬೀಸಿ ಅದು ಅಭಿವೃದ್ದಿಯ ಪಥದಲ್ಲಿ ಸಾಗುತ್ತಿರುವುದನ್ನು ಸೂಚಿಸುತ್ತಿತ್ತು ! ಆದರೆ ಪುಟ್ಟನ ಮನೆಯ ಕೊಟ್ಟಿಗೆಯ ಮೂಲೆಯಲ್ಲಿ ತುಕ್ಕು ಹಿಡಿದು ಶರಶಯ್ಯೆಯಲ್ಲಿ ಅರ್ಧ ಜೀವಾವಸ್ಥೆಯಲ್ಲಿ ಮಲಗಿದ್ದ ಸೈಕಲ್ಲಿಗೆ ಈ ಅಭಿವೃದ್ಧಿಯ ಗಾಳಿಯು ಸ್ವಲ್ಪವೂ ತಾಗುವಂತೆಯೂ ಇರಲಿಲ್ಲ. ಅದಕ್ಕಾಗಿಯೇ ಏನೋ ಪುಟ್ಟುವಿನ ಆ ಹಳೆಯ ಸೈಕಲ್ಲು ಯಾರಿಗೂ ಬೇಡವಾಗಿ ಅಲ್ಲಿ ಸೇರಿದ್ದು. ಹೊಸ ಮೋಟಾರು ಸೈಕಲ್ಲು ಈಗ ಪುಟ್ಟುವಿನ ಹಳೆ ಸೈಕಲ್ಲಿನ ಜವಾಬ್ದಾರಿಗಳ ಹೊಣೆ ಹೊರಲು ಸಿದ್ದವಾಗಿತ್ತು. ಹೈ ಸ್ಕೂಲಿಗೆ ಹೋಗುವಾಗ ಸೈಕಲ್ಲಿನ ಮೇಲೆ ಇದ್ದ ಪುಟ್ಟನ ಮಮತೆ ಈಗ ಈ ಹೊಸ ಮೋಟಾರಿನ ಮೇಲೆ ತಿರುಗಿತ್ತು. ಯಾರೂ ಈಗಿನ ಕಾಲದಲ್ಲಿ ಕೊಂಡುಕೊಳ್ಳಲೂ ತಯಾರಿಲ್ಲದ ಆ ಸೈಕಲ್ಲನ್ನು ಗುಜರಿಗೆ ಹಾಕೋಣವೆಂದರೂ ಪುಟ್ಟನ ಮನಸ್ಸಿನ ಮೂಲೆಯಲ್ಲಿ ಎಲ್ಲೋ “ಹಾಗೇ ಇರ್ಲಿ, ನೋಡುವ “ ಎನ್ನುವ ಅಭಿಪ್ರಾಯ.
ಇಂಥಹ ಸ್ಥಿತಿಯಲ್ಲೂ ಯಾಕೋ ಏನೋ ಆ ಸೈಕಲ್ಲಿಗೆ ಮಾತ್ರ ಏನನ್ನೋ ಸಾಧಿಸಿದ ಸಂತೃಪ್ತಿ . ತನ್ನ ಕಾಲಮಾನದ ವ್ಯವಸ್ಥೆಯ ಪರಿಸ್ಥಿತಿಗಳನ್ನು ಧೈರ್ಯವಾಗಿ ಎದುರಿಸಿದ ಸಂತೋಷ . ಅಲ್ಲದೇ ಬದಲಾದ ಕಾಲಕ್ಕೆ ತನ್ನ ಕೊಡುಗೆಯೂ ಇದೆ ಎನ್ನುವ ಹೆಮ್ಮೆ. ಇರುವಷ್ಟು ದಿನ ಹಳೆಯ ನೆನಪುಗಳಲ್ಲೇ ನೋವನ್ನು ಮರೆಯುವ ಪ್ರಯತ್ನ, ಈ ರೀತಿಯ ಅವ್ಯಕ್ತ ಭಾವನೆಗಳು ಮಾತ್ರ ಆ ಪುಟ್ಟನ ಸೈಕಲ್ಲನ್ನು ಈಗ ನೋಡಿದಾಗ ಯಾರಿಗಾದರೂ ಅನಿಸದೆ ಇರುತ್ತಿರಲಿಲ್ಲ.