ವೈದಿಕ ಪರಂಪರೆಯ ಉಳಿವಿಗಾಗಿ, ವಿಕೃತ ಸಂಪ್ರದಾಯಗಳು ಬೇಕಾಗಿವೆ

ವೈದಿಕ ಪರಂಪರೆಯ ಉಳಿವಿಗಾಗಿ, ವಿಕೃತ ಸಂಪ್ರದಾಯಗಳು ಬೇಕಾಗಿವೆ

ಚಿತ್ರ

 

 

ಭಾರತೀಯ ಸಮಾಜದೊಳಗೆ ಧರ್ಮಗಳು, ಸಂಸ್ಕೃತಿಗಳು, ವಿವಿಧ ಭಾಷೆಗಳು, ಜೊತೆಗೆ ಅನಿಷ್ಟ ಆಚರಣೆಗಳು ಎಲ್ಲವೂ ಅಡಕವಾಗಿವೆ. ಆದರೆ ನಮಗೆ ಧರ್ಮ ಯಾವುದು? ಭಾಷೆಗಳೇನು? ಸಂಸ್ಕೃತಿಯ ಪ್ರಭೇದದ ಅರ್ಥಗಳೇನು? ಅನಿಷ್ಟ ಆಚರಣೆಗಳ ಕುತಂತ್ರಗಳೇನು? ಎಂಬುದನ್ನು ಅರಿಯುವುದರಲ್ಲಿ ವಿಫಲರಾಗಿದ್ದೇವೆ. ನಾವು ಪ್ರತಿಯೊಂದು ಆಚರಣೆಯನ್ನು ಸಂಸ್ಕೃತಿ ಎಂದು ಹೇಳಿದರೆ ತಪ್ಪಾಗುತ್ತದೆ. ಕೆಟ್ಟ ಆಚರಣೆಗಳನ್ನು ಸಂಸ್ಕೃತಿ ಹೆಸರಿನಲ್ಲಿ ಅಂಧ ನಿಮಿತ್ತ ಪೋಷಿಸಿಕೊಂಡು ಬರುತ್ತಿರುವುದರಿಂದಲೆ ಅದು ನಮ್ಮನ್ನು ತಿನ್ನುವುದರೊಂದಿಗೆ ನವ ಪೀಳಿಗೆಯನ್ನು ಕೂಡ ತಿನ್ನುವುದಕ್ಕೆ ದಾರಿ ಮಾಡಿಕೊಡುತ್ತಿದ್ದೆವೆ.

ವೈದಿಕ ಪರಂಪರೆಯನ್ನು ಒಳಹೊಕ್ಕಿ ನೋಡಿದಾಗ ಹಲವಾರು ರೀತಿಯ ಹೀನ ಸಂಸ್ಕೃತಿಗಳು ಭೌತಿಕವಾಗಿ ಗೋಚರಿಸುತ್ತವೆ. ಕೆಲವೊಂದು ಅಭೌತಿಕವಾಗಿಯೂ ಉಳಿದುಕೊಂಡು ಬಂದಿವೆ. ಕಣ್ಣಿಗೆ ಗೋಚರಿಸುದಕ್ಕೆ ಸಂಸ್ಕೃತಿ ಬಣ್ಣ ಕಟ್ಟಿ, ಗೋಚರಿಸದೇ ಹೋದುದನ್ನು ದೈವಿಕ ಬಣ್ಣ ಕಟ್ಟಿ, ಶತ ಶತಮಾನಗಳಿಂದಲೂ ಅದಕ್ಕೆ ಬಗೆ ಬಗೆಯ ಪಟ್ಟಿಯನ್ನು ಕಟ್ಟುತ್ತಾ, ಅದು ಬಿರುಕುಗೊಂಡಾಗ ಜೊತೆ ಜೊತೆಗೆ ಲಪ್ಪ ಹೊಡೆಯುವುದರ ಮೂಲಕ ಅಲ್ಲಲ್ಲೆ ಗಟ್ಟಿಗೊಳಿಸಿಕೊಳ್ಳುತಿದ್ದಾರೆ. ಯಾವುದೇ ಸಂಸ್ಕೃತಿಯಾಗಲಿ ಅದು ಹೆಚ್ಚು ಪರಿಣಾಮ ಬೀರುವುದೆ ತಳ ಸಮುದಾಯಗಳ ಮೇಲೆ, ಯಾಕೆಂದರೆ ಚಾಚು ತಪ್ಪದೆ ಸಂಸ್ಕೃತಿಯನ್ನು ಆಚರಿಸುವವರೆ ಇವರು. ಆದರೆ ಮೇಲ್ವರ್ಗಗಳು ಇದನ್ನು ಪಾಲಿಸುವುದಿಲ್ಲ, ಅವರಿಗೆ ಬೇಕಿರುವುದು ಆಚರಿಸುವ ಕ್ರಿಯೆಯಿಂದ ತಮಗೆಷ್ಟು ಲಾಭ ಬರುತ್ತದೆ ಎಂಬುದು ಮುಖ್ಯವೇ ಹೊರತು ಪರಿಪಾಲನೆಯ ಅಗತ್ಯತೆ ಅವರಿಗಿಲ್ಲ, ಹಾಗಾಗಿ ಇದನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಳ್ಳ ಬೇಕಾಗುತ್ತದೆ. ಬಹಳ ಹಿಂದೆ ದೇವದಾಸಿ ಪದ್ದತಿ, ಬೆತ್ತಲೆ ಸೇವೆ, ಮಲ ಹೊರುವುದು ಮುಂತಾದವು ಸೆರಿದಂತೆ ನಡೆದುಕೊಂಡು ಬಂದಿದ್ದೆ, ಈ ಸಂಸ್ಕೃತಿ, ಆಚರಣೆ, ಎಲ್ಲವೂ ಧರ್ಮ ಎನ್ನುವ ಪರಿಕಲ್ಪನೆಯಿಂದಲೆ ಕಾಲ ಕ್ರಮೇಣ ಅವೆಲ್ಲ ಅಸಂವಿಧಾನಿಕ ಎಂದು ನಿಷಿದ್ದವಾಗಿವೆ. ಆದರೂ ಕೂಡ ಕಂಡರೂ ಕಾಣದಂಗೆ ಕೆಲವೊಂದು ಕಡೆ ಜರುಗುತ್ತಿವೆ. ಈ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಕೈಗೆತ್ತಿಕೊಳ್ಳುವುದು ಯಾರಿಗೂ ಇಷ್ಟವಿಲ್ಲವಾದ್ದರಿಂದ ಮೌಡ್ಯ ಸಂಪ್ರದಾಯಗಳು ಮತ್ತು ಅದಕ್ಕೆ ಕುಮ್ಮಕ್ಕು ಕೊಡುವವರೆ ಧಣಿಗಳಾಗಿದ್ದಾರೆ.

ಕಾಲಾತೀತದಲ್ಲಿ ಎಲ್ಲವೂ ನಗಣ್ಯ ಆದುನೀಕತೆಯು ಮೆರೆದಂತೆ, ಪಾಶ್ಚಿಮಾತ್ಯ ಸಂಸ್ಕೃತಿ ಆವರಿಸಿದಂತೆ, ಎಲ್ಲಾ ಮೌಡ್ಯ ಸಂಪ್ರದಾಗಳು ನಾಶವಗಿ ಬಿಡುತ್ತವೆ ಎಂಬುದು ಕೆಟ್ಟ ಕಲ್ಪನೆ. ಅಂಧಕಾರದ ಆಚರಣೆಗಳು ಬಗೆ ಬಗೆಯ ರೂಪತಾಳಿ ತಾಂಡವಾಡಲು ಪ್ರಾರಂಭಿಸಿವೆ. ಹಳೆಯ ಕುಸಿದರೇನಂತೆ ಮತ್ತೊಂದು ಸಂಪ್ರದಾಯವನ್ನು ಹುಟ್ಟು ಹಾಕಿ ಮತ್ತಷ್ಟು ಜನರನ್ನು ಘಾಸಿಗೊಳಿಸುವವರೆ ಅತಿಯಾಗಿ ಹೋಗಿದ್ದಾರೆ.

ಕೀಳು ಸಂಸ್ಕೃತಿಗಳು, ಕೆಟ್ಟ ಆಚರಣೆಗಳು, ಮೌಡ್ಯಗಳು ಅತಿ ಹೆಚ್ಚು ಕಂಡುಬರುವುದೆ ಶೂದ್ರರು ಮತ್ತು ಅತಿ ಶೂದ್ರರಲ್ಲಿ. ಅವರು ಆಚರಿಸುವ ಆಚರಣೆಗೋಸ್ಕರ ತಮ್ಮಶಿರವನ್ನು ಬೇಕಾದರು ಕೊಡಬಲ್ಲರು ಅಂತಹ ವೈವಿದ್ಯಮಯ ಪರಿಪಾಲಕರು. ಇದಕ್ಕೆಲ್ಲ ಒಂದು ಮುಕ್ತಿ ಸಿಗಬೇಕೆಂದರೆ ವಿದ್ಯಾವಂತರು ಸೃಷ್ಟಿಯಾಗಬೆಕು, ಪ್ರಜ್ಞಾವಂತ ಸಮಾಜ ನಿರ್ಮಾಣವಾಗಬೆಕು ಎಂದು ಸೈದ್ದಾಂತಿಕವಾಗಿ ಸಾಕಷ್ಟು ಜನ ಹೇಳುತ್ತಾರೆ ಆದರೆ ಅದನ್ನು ಒಪ್ಪಲಾಗುವುದಿಲ್ಲ. ಪ್ರಸಕ್ತವಾಗಿ ಹೇಳುವುದಾದರೆ ಅತಿ ಹೆಚ್ಚು ಕಂದಾಚಾರಗಳು ಪ್ರಜ್ಞಾವಂತರಿಂದಲೆ ನಡೆಯುತ್ತವೆ, ಅನಿಷ್ಟ ಪದ್ದತಿಗಳನ್ನು ವಿದ್ಯಾವಂತರೆ ಆಚರಿಸುತ್ತಾರೆ. ನೀವು ಇಷ್ಟೆಲ್ಲಾ ಓದಿ ಒಳ್ಳೆಯ ಉದ್ಯೋಗದಲಿದ್ದು ವೈಚಾರಿಕ ಚಿಂತನೆಯೆ ಇಲ್ಲ ಎಂದು ಪ್ರಶ್ನೆ ಹಾಕಿದರೆ, ನಮ್ಮ ಹಿಂದಿನ ಪೀಳಿಗೆ ಬಿಟ್ಟು ಹೋದ ಸಂಸ್ಕೃತಿಗಳನ್ನು ಬಿಡಲು ಸಾದ್ಯವೆ ಎಂದು ಸಂಸ್ಕೃತಿ ಜನಕರಂತೆ ಮಾತನಾಡುತ್ತಾರೆ. ಹೀನ ಸಂಸ್ಕೃತಿಗಳನ್ನು, ಸಂಪ್ರದಾಯಗಳನ್ನು, ವಿದ್ಯಾವಂತಿಕೆ ಮುಂದುವರಿದಷ್ಟು ಸಂಪ್ರದಾಯಗಳು ಕುಂದುತ್ತಾ ಹೋಗುತ್ತವೆ ಎಂದು ಹೇಳಲು ಸುಲಭವಾಗಿ ಸಾಧ್ಯವಿಲ್ಲ. ಯಾಕೆಂದರೆ ಪ್ರತಿಯೊಂದು ಆಚರಣೆಗಳು ನಮ್ಮ ಮಾನಸಿಕ ಸಂವೇದನೆಗಳಾಗಿರುತ್ತವೆ. ಅವು ಬಲವಾಗಿ ಮನಸ್ಸಿನ ನೆಲೆಗೊಳ್ಳುವುದರಿಂದಲೆ ಅಷ್ಟು ಸುಲಭವಾಗಿ ನಮ್ಮನ್ನು ಬಿಟ್ಟು ಹೋಗಲಾರವು. ಈ ಸಂಸ್ಕೃತಿಯನ್ನು ಆಚರಿಸದೇ ಹೊದಲ್ಲಿ ನಮಗೆ ಭವಿಷ್ಯದಲ್ಲಿ ತೊಂದರೆಯಾಗಬಹುದು ಅಥವಾ ಮತ್ಯಾವುದೋ ಸಮಸ್ಯೆ ಸಂಭವಿಸಬಹುದು ಮುಂತದ ರೀತಿಯ ಅಲೋಚನೆಗಳು ಮನಸ್ಸಿನ ಮೇಲೆ ಗಂಬೀರ ಚರ್ಚೆಗಳಗುತ್ತವೆ. ಆದ್ದರಿಂದ ಇವುಗಳನ್ನೆಲ್ಲ ಮೆಟ್ಟಿ ನಿಲ್ಲಲು ಬೇಕಾಗಿರುವುದು ವಿದ್ಯಾವಂತಿಕೆಯ ಜೊತೆಗೆ ಮಾನಸಿಕ ಸದೃಢತೆ, ಆತ್ಮಸ್ಥೈರ್ಯದ ಪರಿಪಕ್ವತೆ ಇದರ ಮೂಲಕವೆ ಇಂತಹ ಅಚರಣೆಗಳನ್ನು  ನೀಗ್ರಹಿಸಲು ಸಾದ್ಯ. ಆಗಾಗಿ ನಮಗಿರ ಬೇಕಾಗಿರುವುದು ಮಾನಸಿಕ ಸಧೃಡತೆ.

ನಾನು ಮೊದಲೇ ತಿಳಿಸಿದಂತಹ ಅನಿಷ್ಟ ಪದ್ದತಿಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯಂನಲ್ಲಿ ಮಡೆಸ್ನಾನವು ಒಂದಾಗಿದೆ. ಯವುದು ಈ ಮಡೆಸ್ನಾನ? ಇದು ಯಾಕೆ ನಡೆಯಬೇಕು? ಸಮಾಜಕ್ಕಿದು ಅನಿವಾರ್ಯವೆ? ಎಂಬುದನ್ನು ವಿಶ್ಲೇಷಣೆ ಮಾಡಬೇಕಾಗುತ್ತದೆ. ಮಡೆಸ್ನಾನವನ್ನು ಆಚರಿಸುವುದರಿಂದ ವಿಜ್ಞಾನ ಜಗತ್ತಿಗಾಗಲಿ ಅಥವಾ ಸಾಮಾಜಿಕ ಬದುಕಿಗಾಗಲಿ ಯಾವುದೇ ರೀತಿಯ ಪ್ರಯೋಜನವನ್ನು ಕಾಣಲು ಸಾಧ್ಯವಿಲ್ಲ. ಅದು ಉಪಯೋಗಕ್ಕೆ ಬರುವುದು ವೈದಿಕರ ಧಾರ್ಮಿಕ ಜಗತ್ತಿಗೆ ಮಾತ್ರ. ಇದೇ ವೈದಿಕ ಶಾಯಿ ಪರಂಪರೆ ನಿಂತಿರುವುದು ಇಂತಹ ಕೆಟ್ಟ ಆಚರಣೆಗಳ ಹೆಗಲ ಮೇಲೆ ಹೊರತು, ಬೇರೆಲ್ಲು ಅಲ್ಲ. ಮಡೆಸ್ನಾನವನ್ನು ಆಚರಿಸಿಕೊಂಡು ಬರುತ್ತಿರುವವರು ಸಾಮಾನ್ಯವಾಗಿ ಮಲೆಕುಡಿ ಎಂಬ ಬುಡಕಟ್ಟು ಜನಾಂಗ, ಆ ಜನಾಂಗವು ಗೊತ್ತಿದ್ದು ಆಚರಣೆ ಮಾಡುತ್ತಿದೆಯೋ? ಅಥವಾ ಗೊತ್ತಿಲ್ಲದೇ ಆಚರಿಸುತ್ತಿದೆಯೋ? ಅದು ಅವರಿಗೆ ತಿಳಿಯದು. ಅವರು ಬುಡಕಟ್ಟು ಜನಾಂಗವಾದ್ದರಿಂದ ಸಾಮಾಜಿಕ ಚಲನವಲನಗಳನ್ನು ಅರಿಯದೆ, ಇದೇ ನಮ್ಮ ನಿಜವಾದ ಭಾಂದವ್ಯ, ಇದೇ ನಮ್ಮ ಲೋಕ ಎಂದು ಕಣ್ಣು ಕಂಡರು ಕಾಣದಂಗೆ ನಡೆದು ಕೊಳ್ಳುತ್ತಿದ್ದಾರೆ. ಆಗಾಗಿ ಈ ಮಡೆಸ್ನಾನವು ಇನ್ನು ಚಾಲ್ತಿಯಲ್ಲಿರುವುದು ಈ ಜನಾಂಗದ ಕೃಪಾ ಕಟಾಕ್ಷದಿಂದಲೆ.

೨೧ನೇ ಶತಮಾನದಲ್ಲಿಯೂ ಕೂಡ ಇದರ ಮುಂದುವರಿಕೆ ನಿಂತಿಲ್ಲವೆಂದರೆ ಪರಿಣಾಮ ಕುರಿತು ಕೊಂಚ ಯೋಚಿಸಬೇಕಗುತ್ತದೆ, ಯಾವುದೇ ಒಬ್ಬ ನಗರೀಕ ವ್ಯಕ್ತಿ ಇಂತಹ ವಿಕೃತ ಆಚರನೆಗಳನ್ನು  ಒಪ್ಪಿಕೊಳ್ಳುವುದಿಲ್ಲ. ಆದರೆ ಅಲ್ಲಿ ವಿರೋದಿಸುವವರಿಗಿಂತ ಒಪ್ಪುವವರೇ ಅತಿಯಾಗಿ ಹೋಗಿದ್ದಾರೆ. ಈ ರಾಜ್ಯದ ಸಾಕಷ್ಟು ಬುದ್ದಿಜೀವಿಗಳು, ಸಾಹಿತಿಗಳು. ಹೋರಾಟಗಾರರು, ಸಾಮಾಜಿಕ ಚಿಂತಕರು ಹಾಗೂ ಪ್ರಗತೀಕರರು ಮುಂತಾದವರು ಸೇರಿದಂತೆ ಇದನ್ನು ನಿಲ್ಲಿಸಲೇ ಬೇಕು ಎಂದು ಶತಯಾ ಗತಯಾ ಪ್ರಯತ್ನಿಸಿದರು ಕೂಡ ಅದರ ಬೇರನ್ನು ಕೀಳಲಾಗುತ್ತಿಲ್ಲ. ಯಾರೋ ಹಾಕಿದ ಭೀಜವಾಗಿದ್ದರೆ ಅದನ್ನು ಬೇರು ಸಹಿತ ಹೀಜಬಿಡಬಹುದಿತ್ತು, ಆದರೆ ವೈದಿಕರು ಹಾಕಿದ ಬೀಜವನ್ನು ಅಷ್ಟು ಸುಲಭವಾಗಿ ಕೀಳಲು ಸಾಧ್ಯವಿಲ್ಲ.

ಮಡೆಸ್ನಾನದಲ್ಲಿ ಎರಡು ರೀತಿಯ ಸೇವೆಗಳಿವೆ ಒಂದು ಬ್ರಾಹ್ಮಣರು ತಿಂದ ಎಂಜಲು ಎಲೆಯ ಮೇಲೆ ಉರುಳುವುದು, ಮತ್ತೊಂದು ಬ್ರಾಹ್ಮಣರು ತಿಂದ ಎಂಜಲು ಎಲೆಯನ್ನು ತಲೆಯಲ್ಲಿಟ್ಟುಕೊಂಡು ಹೋಗಿ ನದಿ ಪಾತ್ರಕ್ಕೆ ಹಾಕುವುದು, ಈ ಎರಡು ಸೇವೆಗಳು ಕುಕ್ಕೆ ಸುಬ್ರಹ್ಮಣ್ಯಂನಲ್ಲಿ ಪ್ರತಿಷ್ಟಿತ ಸೇವೆಗಳಾಗಿವೆ. ಎಂಜಲು ಎಲೆಯ ಮೇಲೆ ಉರುಳಾಡುತ್ತಿರುವುದನ್ನು ನೋಡಿ ಆ ದೇವರಿಗಾದರು ಕರುಣೆ ಬಾರ ಬಾರದೆ? ಆ ದೇವರಿಗೆ ಕರುಣೆ ಬರುವುದಿಲ್ಲ ಯಾಕೆಂದರೆ ಅದು ವೈದಿಕರ ಕಪಿಮುಷ್ಟಿಯಲ್ಲಿರುವ ದೇವರು, ಹೇಳಿದಷ್ಟೆ ಕೇಳುವುದು ಅವನ ಕೆಲಸ. ಇಂತಹ ಹೀನ ಕೃತ್ಯಗಳನ್ನು ನಿಲ್ಲಿಸಿ ಸ್ವಾಮಿ ಎಂದು ಉಡುಪಿ ಮಠದ ಪೀಠಾಧಿಪತಿಗಳಾದಂತಹ ವಿಶ್ವೇಶ್ವರ ತೀರ್ಥ ಪೇಜಾವರರ ಗಮನಕ್ಕೆ ತಂದರೆ, ಅವರು ಹೇಳುತ್ತಾರೆ ಮಡೆಸ್ನಾನದ ಬದಲು ಎಡೆಸ್ನಾನ ಮಾಡಿಸಿ ಎಂದು. ಅಲ್ಲ ತಮ್ಮ ಪರಂಪರೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಮತ್ತೆ ಪುನರ್‍ ಉಚ್ಚರಿಸಬೇಕು ಎನ್ನುವ ಹಂಬಲ ಇವರಿಗೂ ಇದೆ ಎಂದಂಗಾಯಿತು. ಮಡೆಸ್ನಾನವೆಂದರೆ ಇಷ್ಟೆ! ಬ್ರಾಹ್ಮಣರು ತಿಂದ ಎಲೆಯ ಮೇಲೆ ಉರುಳುವುದು. ಅದರ ಬದಲಾಗಿ ಎಡೆಸ್ನಾನಬೇಕು ಎನ್ನುತ್ತಾರೆ, ಅಂದರೆ ದೇವರ ಪ್ರಸಾದದ ಮೇಲೆ ಉರುಳುವುದು. ಇದು ಹೇಗಯಿತೆಂದರೆ? ಅಳಿಯ ಅಲ್ಲ ಮಗಳ ಗಂಡ ಅಂದಂಗಾಯತು. ಮುಂದಲ ಬಾಗಿಲ ಮುಚ್ಚುತ್ತೇವೆ ಎಂದರೆ, ಹಿಂದೆಯೊಂದು ಬಾಗಿಲ ತೆರೆಯುವ ಹುನ್ನಾರ ಇವರದಾಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ವೈಜ್ಞಾನಿಕ ಹುಡುಕಾಟಗಳು ಅತಿ ಹೆಚ್ಚಾದಂತೆ, ಸಂಪ್ರದಾಯಗಳಿಗು ವೈಜ್ಞಾನಿಕ ತಳುಕುಗಳನ್ನು ಕಟ್ಟಲು ಹೊರಟಿದ್ದಾರೆ. ಬಹಳ ಹಿಂದೆ ಅಂದರೆ, ನಾವು ಚಿಕ್ಕವರಿದ್ದಾಗ ಸೂರ್ಯ ಗ್ರಹಣ ಉಂಟಾಗುವಾಗ ಮನೆಯ ಹೊರಗಡೆ ಹೋಗಲು ನಮ್ಮ ಪೂರ್ವಜರು ಬಿಡುತ್ತಿರಲಿಲ್ಲ, ನಾವು ಕಾರಣ ಕೇಳಿದರೆ ಹೇಳುತ್ತಿರಲಿಲ್ಲ, ಆಗ ನವು ಅದನ್ನು ಮೌಡ್ಯ ಎಂದು ತಿಳಿದು ಕೊಳ್ಳುತಿದ್ದೆವು. ಕಾಲಾನಂತರ ಅದನ್ನು ವಿಶ್ಲೇಷಿತ್ತಾ ಹೋದ ಮೇಲೆ ತಿಳಿಯಿತು ಅದಕ್ಕೆ ವೈಜ್ಞಾನಿಕ ಕಾರಣಗಳಿವೆ ಎಂದು. ಅಂತಹ ಸಂಧರ್ಭದಲ್ಲಿ ಹೊರಗೆಲ್ಲು ಹೋಗಬಾರದು ಎಂದು ಹೇಳುವುದು ಅದರ ಕಿರಣಗಳು ಹಾನಿಕಾರಕವೆಂದು. ಅದೇ ರೀತಿಯಲ್ಲಿ ಸಾಕಷ್ಟು ವೈಜ್ಞಾನಿಕವಾಗಿ ಬೆರೆತು ಹೋಗಿದ್ದರೂ ಕೂಡ ಅವುಗಳಲ್ಲಿ ಯಾವುದು ವೈಜ್ಞಾನಿಕ? ಯಾವುದು ಅವೈಜ್ಞಾನಿಕ ಎಮಬುದನ್ನು ತಿಳಿಯುವುದು ಸೂಕ್ತವಾಗಿದೆ.

ಮಡೆಸ್ನಾನವನ್ನು ವಿರೋದಿಸಿದಾಗ ಇಂತಹ ಸಾಕಷ್ಟು ಅವೈಜ್ಞಾನಿಕ ಉದಾಹರಣೆಗಳನ್ನು ಅವರು ನೀಡಿದ್ದಾರೆ. ಮಡೆಸ್ನಾನ ಮಾಡುವುದರಿಂದ ಚರ್ಮರೋಗಗಳು ಹಾಗೂ ಇನ್ನಿತರ ಖಾಯಿಲೆಗಳು ದೂರವಾಗುತ್ತವೆ ಎಂದು ಒಂದೊಂದು ರೀತಿಯ ವೈಜ್ಞಾನಿಕ  ಕಾರಣಗಳನ್ನು ನೀಡುವುದರ ಮೂಲಕ ತಮ್ಮ ಸಂಪ್ರದಾಯಗಳನ್ನು ಮತ್ತಷ್ಟು ಬಲಗೊಳಿಸಿಕೊಳ್ಳುತಿದ್ದಾರೆ. ಇಲ್ಲಿ ವೈಜ್ಞಾನಿಕ ಮತ್ತು ಅವೈಜ್ಞಾನಿಕ ಎಂದು ಚಿಂತೆ ಮಾಡಿದರೂ ಕೂಡ ಅದು ಅಪ್ರಯೋಜಕವೆ, ಯಾಕೆಂದರೆ ಎಂಜಲು ಎಲೆಯ ಮೇಲೆ ಉರುಳಾಡುವುದೇ ಒಂದು ಅವೈಜ್ಞಾನಿಕ ಅಂಶವಗಿರುವಾಗ ಅದನ್ನು ವೈಜ್ಞಾನಿಕ ಪ್ರಕ್ರಿಯೆಗೆ ಹೇಗೆ ಅಳವಡಿಸಿಕೊಳ್ಳುತ್ತೀರಿ? ಇಂತಹ ನೀಚ ಸಂಸ್ಕೃತಿ ಈ ಸಮಾಜಕ್ಕೆ ಬೇಡವೆಂದು ಸಾಕಷ್ಟು ಜನ ಅಲ್ಲಿಗೆ ಹೋಗಿ ವಿರೋದಿಸಿದರು. ಜೊತೆಗೆ ಮಂತ್ರ ಹೇಳುವ ಬಾಯಲ್ಲಿ ಬೈಗುಳ ಕೇಳಬೇಕಾಯಿತು, ಹೂ ಹಾರ ಹಾಕುವುದಷ್ಟೆ ಕಾಯಕ ಮಾಡಿಕೊಂಡಿದ್ದ ಪೂಜಾರರ ಕೈಯಲ್ಲಿ ಗೂಸಾ ತಿನ್ನಬೇಕಾಯಿತು. ಈ ಒಂದು ವಿಚಾರವು ಅಲ್ಲಲ್ಲೆ ಬುಸುಗುಡುತ್ತಿದ್ದು ಅತಿ ಹೆಚ್ಚು ಚಾಲ್ತಿಗೆ ಬಂದದ್ದೆ ಮಾದ್ಯಮದರಿಂದ ಅತಿ ಹೆಚ್ಚು ಚರ್ಚೆಗಳಿಗು ಕೂಡ ಇವರೇ ಕಾರಣ. ಚಿತ್ರೀಕರಣಕ್ಕೆಂದು ಸುಬ್ರಹ್ಮಣ್ಯಕ್ಕೆ ಹೋದ ಮಾಧ್ಯಮ ಪ್ರತಿನಿಧಿಗಳು ಕೂಡ ಹೊಡೆತ ತಿನ್ನ ಬೇಕಾಯಿತು. ಸಮಾಜದ ಅನಿಷ್ಟ ಪದ್ದತಿಗಳನ್ನು ವಿರೋದಿಸುವುದಕ್ಕೂ ಕೂಡ ಹೊಡೆತ ತಿನ್ನಬೇಕಲ್ಲ ಇದೆಂತ ವಿಕೃತ ಮನಸ್ಸಿನ ಪೈಶಾಚಿಕೆಗಳು ಎಂದೆನಿಸಿ  ಬಿಡುತ್ತದೆ.

ಈ ಮಡೆಸ್ನಾನವು ಎಷ್ಟು ಅತಿರೇಕಕ್ಕೋಯಿತು ಅಂದರೆ, ಕೊನೆಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ನಮ್ಮಲ್ಲಿ ಅನೇಕ ಅನಿಷ್ಟ ಪದ್ದತಿಗಳನ್ನು ಕೋರ್ಟ್ ಕಾನೂನುಗಳ ಮೂಲಕವೆ ಇದುವರೆಗೂ ಮಟ್ಟ ಹಾಕಿರುವುದು. ನಮ್ಮ ಈ ಸಾಮಾಜಿಕ ಹಿನ್ನೆಲೆಯನ್ನು ಗಮನಿಸಿದಾಗ ಒಂದಷ್ಟು ನ್ಯಾಯ ಸಿಕ್ಕಿದೆ. ಆದರೆ ಮಡೆಸ್ನಾನ ವಿಚಾರದಲ್ಲಿ ಯಾಕೆ ಮೌನ ತಾಳಿತು ಎಂಬುದೇ ತಿಳಿಯಲಿಲ್ಲ. ಇಲ್ಲಿನ ದೇವದಾಸಿ ಪದ್ದತಿಯಾಗಿರಬಹುದು, ಬೆತ್ತಲೆ ಸೇವೆಯಾಗಿರಬಹುದು ಮುಂತಾದ ರೀತಿಯ ಅನಿಷ್ಟ ಪದ್ದತಿಗಳನ್ನು ಸರ್ಕಾರಗಳು ಕೋರ್ಟ್‌ಗಳೇ ನೇರ ತೀರ್ಮಾನಗಳನ್ನು ತೆಗೆದುಕೊಂಡು ಅವುಗಳನ್ನು ನಿರ್ಮೂಲನ ಮಾಡುವಲ್ಲಿ ಯಶಸ್ವಿಯಾದವು, ಆದರೆ ಮಡೆಸ್ನಾನದ ವಿಚಾರ ಮುಂದಿಟ್ಟುಕೊಂಡು ಕೋರ್ಟ್ ಮೆಟ್ಟಿಲೇರಿದವರಿಗೆ ಸಿಕ್ಕಿದ್ದು ಅವಮಾನ. ಮಡೆಸ್ನಾನವೆಂಬುದು ನಂಬಿಕೆಗೆ ಬಿಟ್ಟ ವಿಚಾರ, ಅದು ಅವರವರ ನಂಬಿಕೆಗೆ ಎಂದು ಕೋರ್ಟ್ ಕೈತೊಳೆದುಕೊಂಡಿತು. ನಂಬಿಕೆಯ ವಿಚಾರವನ್ನು ಮುಂದಿಟ್ಟುಕೊಂಡು ಮಾತನಾಡುವುದಾದರೆ, ದೇವದಾಸಿ ಮತ್ತು ಬೆತ್ತಲೆ ಸೇವೆಗಳು ಕೂಡ ನಂಬಿಕೆಯ ಮೇಲೆ ನಡೆಯುತ್ತಿದ್ದಂತಹ ಸೇವೆಗಳು ಅವುಗಳನ್ನು ಅನಿಷ್ಟ ಪದ್ದತಿಗಳೆಳದು ನಿಲ್ಲಿಸಿದ ಮೇಲೆ ಮಡೆಸ್ನಾನವನ್ನು ನಂಬಿಕೆ ಎಂದು ಹೇಳಿ ಪುಷ್ಟೀಕರಣ ನೀಡಿದ ಇವರಿಗೆ ಹೇಗೆ ಹೇಳುವುದು?

ಯಾವುದೇ ಧರ್ಮವಾಗಲಿ ಅದರಲ್ಲಿ ಸಂಸ್ಕೃತಿ, ನಂಬಿಕೆಗಳು ಇರಬೇಕು ಆದರೆ ಮಾನವ ಕುಲವನ್ನೆ ಹೀನ ಸ್ಥಿತಿಗೆ ನಿಲ್ಲಿಸುವಂತಹ ನಂಬಿಕೆಗಳು ಇರಕೂಡದು. ಅವು ಈ ಸಮಾಜಕ್ಕೆ ರಾಸಯನಿಕ ವಿಷ ಅನಿಲಗಳಿದ್ದಂತೆಯೆ. ನಮ್ಮ ಹಳೆಯ ಸಂತಾನಗಳು ಹೇಳುತ್ತಿದ್ದವು, ಅರಣ್ಯಕ್ಕೋಗಬೇಡ ಕ್ರೂರ ಮೃಗಗಳಿವೆ ತಿಂದು ಬಿಟ್ಟಾವು ಎಂದು, ಆದರೆ ಕ್ರೂರ ಮೃಗಗಳು ಕಾಡಿನಲ್ಲಿಲ್ಲ, ಅವು ನಾಡಿನಲ್ಲಿಯೇ ಇವೆ. ನಂಬಿಕೆಯ ಹೆಸರಿನಲ್ಲಿ ಸಮಾಜವನ್ನು ಅದಗೆಡಿಸುವಂತಹ ಮಾನವ ಮೃಗಗಳಿಗೆ ಹೋಲಿಸಿದರೆ ಆ ಕಾಡು ಮೃಗಗಳು ಸಾಧುಗಳೇ. ಏನೇ ಆಗಲಿ ವೈದಿಕಶಾಯಿ ಪರಂಪರೆಯ ಉಳಿವಿಗಾಗಿ, ವಿಕೃತ ಸಂಪ್ರದಾಯಗಳು ಬೇಕಾಗಿರುವುದರಿಂದ ಅವುಗಳನ್ನು ಉಳಿಸಿಕೊಳ್ಳುವ ಯತ್ನ ಅವರದಾಗಿದೆ. ವೈಚಾರಿಕ ಪ್ರಜ್ಞೆಯನ್ನು ಎಲ್ಲಿಯವರೆವಿಗೂ ಮೈಗೂಡಿಸಿ ಕೊಳ್ಳುವುದಿಲ್ಲವೋ ಅಲ್ಲಿಯವರೆವಿಗೂ ಇಂತಹ ಪೈಶಾಚಿಕೆ ಸಂಸ್ಕೃತಿಗಳು ನಡೆಯುತ್ತಲೇ ಇರುತ್ತವೆ ನಿರಂತರವಾಗಿ.

 

-ಹಾರೋಹಳ್ಳಿ ರವೀಂದ್ರ

Rating
No votes yet

Comments