' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯಕಾವ್ಯ ' (ಭಾಗ 2 )

' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯಕಾವ್ಯ ' (ಭಾಗ 2 )

ಚಿತ್ರ

 

             

         ಈ ಟೈಟಾನಿಕ್ ಚಿತ್ರಕ್ಕೆ ಜೇಮ್ಸ್ ಕ್ಯಾಮರೂನನಿಗೆ ಪ್ರೇರಣೆ 1912 ರ ಎಪ್ರೀಲ್ 14 ರಾತ್ರಿ ಅಟ್ಲಾಂಟಿಕ್ ಮಹಾ ಸಾಗರದಲ್ಲಿ ನೀರ್ಗಲ್ಲು ಬಂಡೆಗೆ ಅಪ್ಪಳಿಸಿ ಟೈಟಾನಿಕ್ ಹೆಸರಿನ ಹಡಗು ಮುಳುಗಿದ ಘಟನೆ. ಚಿತ್ರದಲ್ಲಿ ಬರುವ ರೋಸ್ ಮತ್ತು ಜಾಕ್ ಡಾಸನ್ ರವರ ಪ್ರೇಮ ಕಥೆ, ಅದಕ್ಕೆ ಪೂರಕವಾಗಿ ಬರುವ ರೋಸ್ ತಾಯಿ, ರೋಸ್ ಳ ಭಾವಿ ಗಂಡನ ಪಾತ್ರದ ಕಾಲ್ ಹಾಕ್ಲಿ ಮತ್ತು ಇತರೆ ಪೂರಕ ಪಾತ್ರಗಳು ನಿರ್ದೆಶಕ ಕ್ಯಾಮರೂನನ ಕಲ್ಪನೆಯ ಮೂಸೆಯಲ್ಲಿ ಮೂಡಿ ಬಂದ ಅದ್ಭುತ ಪಾತ್ರಗಳು. ಇದಕ್ಕೆ ಪೂರಕವಾಗಿ ಟೈಟಾನಿಕ್ ಹಡಗು ಮುಳುಗು ತ್ತಿದ್ದರೂ ಹಡಗಿನ ಚುಕ್ಕಾಣಿಯನ್ನು ಹಿಡಿದು ನಡೆಸಿದ ಕ್ಯಾಪ್ಟನ್ ಸ್ಮಿತ್ ಮತ್ತು ಸಿಬ್ಬಂದಿ ಹಡಗು ಮುಳುಗುವುದು ಖಚಿತವೆಂದು ತಿಳಿದರೂ ಕರ್ತವ್ಯಚ್ಯುತನಾಗಲು ಒಪ್ಪದೆ ತನ್ನ ಕಛೇರಿಯಿಂದ ಹೊರ ಬರದ ಹಡಗಿನ ವಿನ್ಯಾಸಕ ಥಾಮಸ್ ಆ್ಯಂಡ್ರೂಸ್, ಹಡಗು ಮುಳುಗುತ್ತಿದ್ದು ತಮ್ಮ ಸಾವು ಖಚಿತವೆಂದು ತಿಳಿದಿದ್ದರೂ ಸಾವಿನ ಪರಿಧಿಯನ್ನು ದಾಟಲು ನುಗ್ಗಿದ ಜನ ಸಮೂಹವನ್ನು ನಿಯಂತ್ರಿಸಲಾಗದೆ ವಿಷಾದದಿಂದ ತನ್ನ ತಲೆಗೆ ತಾನೆ ಗುಂಡು ಹೊಡೆದು ಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಹಡಗಿನ ಅಧಿಕಾರಿ ವಿಲಿಯಂ ಮರ್ಡೋಕ್, ತನ್ನ ಶ್ರೀಮಂತಿಕೆಯಿಂದ ಏನನ್ನೂ ಕೊಳ್ಳ ಬಲ್ಲೆನೆಂಬ ಅಹಮ್ಮಿನ ಸ್ವಾರ್ಥ ಕಾಲ್ ಹಾಕ್ಲಿ, ಮುಳುಗುತ್ತಿರುವ ಹಡಗಿನಲ್ಲಿ ಸ್ವಲ್ಪ ಸಮಯದಲ್ಲಿಯೆ ಸಾವು ಎಲ್ಲವನ್ನೂ ಕಬಳಿಸಲಿದೆ ಎಂಬ ಪರಿವೆಯೂ ಇಲ್ಲದೆ ತನ್ನ ತಂದೆ ತಾಯಿಗಳಿಂದ ತಪ್ಪಿಸಿಕೊಂಡು ದಿಕ್ಕೆಟ್ಟು ಅಳುತ್ತ ನಿಂತ ಮುಗ್ಧ ಬಾಲಿಕೆಯನ್ನು ಎತ್ತಿಕೊಂಡು ಜೀವ ರಕ್ಷಕ ಬೋಟಿನಲ್ಲಿ ಕೂಡ್ರಿಸಿ ಕೊಳ್ಳುವುದು ಇತ್ಯಾದಿಯಾಗಿ ಕಥೆಗೆ ಪೂರಕವಾಗುವಂತೆ ಪಾತ್ರಗಳನ್ನು ಸೃಷ್ಟಿಸಿ ದುಡಿಸಿ ಕೊಂಡಿರುವುದು ಕ್ಯಾಮರೂನನ ಪ್ರತಿಭೆಗೆ ಸಾಕ್ಷಿ.

     ಟೈಟಾನಿಕ್ ತೆರೆಗೆ ತರುವಲ್ಲಿ ಕ್ಯಾಮರೂನ ವಹಿಸಿದ ಶ್ರದ್ಧೆ, ಪರಿಶ್ರಮ ಮತ್ತು ಕಲ್ಪನೆಗಳು ಇಲ್ಲಿ ಅದ್ಭುತವನ್ನೆ ಸೃಷ್ಟಿಸಿವೆ. ಕ್ಯಾಮರೂನ ಟೈಟಾನಿಕ್ ಹಡಗು ಮುಳುಗಿದ್ದ ಮೂಲ ಸ್ಥಳಕ್ಕೆ ಅನೇಕ ಬಾರಿ ಹೋಗಿ ಬಂದಿದ್ದಾನೆ. ಚಿತ್ರೀಕರಿಸಲು ಟೈಟಾನಿಕ್ ಹಡಗನ್ನು ಮರು ಸೃಷ್ಟಿಸಿದ್ದಾನೆ. ಮುಳುಗಿದ ಟೈಟಾನಿಕ್ ಹಡಗಿಗೆ ಕೆಂಪು ಕಾರ್ಪೆಟ್ ಒದಗಿಸಿದ್ದ ಕಂಪನಿಯಿಂದಲೆ ಟೈಟಾನಿಕ್ ಚಿತ್ರೀಕರಿಸುವ ವೇಳೆ ಕೆಂಪು ಕಾರ್ಪೆಟ್ ಪಡೆದು ಚಿತ್ರೀಕರಿಸಿದ್ದಾನೆ. ಹಡಗು ನೀರ್ಗಲ್ಲಿಗೆ ಅಪ್ಪಳಿಸಿದಾಗ ಐದು ವಾಟರ್ ಟೈಟ್ ಚೇಂಬರ್ ಗಳಿಗೆ ತೀವ್ರ ಪೆಟ್ಟು ಬಿದ್ದು ನೀರು ಒಳ ನುಗ್ಗುವುದನ್ನೂ ಹಾಗೆಯೆ ಆ ನೀರು ಹಡಗಿನ ಪ್ರತಿಯೊಂದು ಭಾಗಕ್ಕೂ ನುಸುಳುತ್ತ ಭೋರ್ಗರೆಯುತ್ತ ಅಪ್ಪಳಿಸಿ ಹಡಗನ್ನು ನುಚ್ಚು ನೂರು ಗೊಳಿಸುತ್ತ ಸಾಗುವದನ್ನು, ನೀರು ನುಗ್ಗುವ ಅಪಾಯವನ್ನು ಗ್ರಹಿಸಿ ನುಗ್ಗುತ್ತಿರುವ ನೀರಿನ ಮುಂದೆ ಓಡುವ ಇಲಿಗಳ ಗುಂಪು, ಹಡಗು ನೀರಿನಲ್ಲಿ ನಿಧಾನವಾಗಿ ಮುಳುಗುತ್ತ ನೀರು ಹಡಗಿನಲ್ಲಿ ಆವರಿಸುತ್ತಿದ್ದ ವೇಳೆ ತನ್ನ ಮಕ್ಕಳಿಗೆ ಕಥೆ ಹೇಳಿ ಅವುಗಳನ್ನು ಮಲಗಿಸುವ ತಾಯಿ, ಹಡಗಿನಲ್ಲಿ ಜೀವ ರಕ್ಷಕ ಬೋಟುಗಳ ಸಂಖ್ಯೆ ಕಡಿಮೆಯಿದ್ದು ಪ್ರಥಮ ದರ್ಜೆಯ ಪ್ರಯಾಣಿಕರನ್ನು ಸುರಕ್ಷಿತವಾಗಿ ಪಾರು ಮಾಡುವ ತರಾತುರಿಯಲ್ಲಿ ಮೂರನೆ ದರ್ಜೆಯ ಪ್ರಯಾಣಿಕರು ಹೊರಗೆ ಬಾರದಂತೆ ಡೆಕ್ ಗೆ ಬೀಗ ಹಾಕಿದಾಗ ತನ್ನ ಮಕ್ಕಳೊಡಗೂಡಿ ಡಕ್ ನ ಬಾಗಿಲು ತೆಗೆಯುವುದನ್ನೆ ನಿರೀಕ್ಷಿಸುತ್ತ ನಿಂತ ತಾಯಿಗೆ ಆಕೆಯ ಚಿಕ್ಕ ಮಗಳು ಏಕೆ ಬೀಗ ಹಾಕಿದ್ದಾರೆ ಎಂದು ಪ್ರಶ್ನಿಸಿದಾಗ ಆ ತಾಯಿ ಅಷ್ಟೆ ಶಾಂತ ಸ್ವರದಲ್ಲಿ ಪ್ರಥಮ ದರ್ಜೆಯ ಗಣ್ಯ ವ್ಯಕ್ತಿಗಳನ್ನು ಸುರಕ್ಷಿತವಾಗಿ ಪಾರು ಮಾಡಿದ ನಂತರ ನಮ್ಮ ಡೆಕ್ ಬಾಗಿಲು ತೆಗೆಯುತ್ತಾರೆ ಎಂದು ಹೇಳುವ ತಾಯಿಯ ಪಾತ್ರವನ್ನು ಆಡಂಬರವಿಲ್ಲದೆ ಬಹಳ ಸರಳವಾಗಿ ಆದರೆ ಮಾರ್ಮಿಕವಾಗಿ ಚಿತ್ರಿಸಿದ್ದಾನೆ. ಬಡವ ಬಲ್ಲಿದನೆಂಬ ಬೇಧವಿಲ್ಲದೆ ಎಲ್ಲರನ್ನೂ ನುಂಗಲು ಸಾವು ತನ್ನ ಕರಾಳ ನಾಲಿಗೆಯನ್ನು ಚಾಚಿರುವ ವೇಳೆ ನಮ್ಮ ನಾಗರಿಕ ಪ್ರಪಂಚದ ವರ್ಗೀಕರಣ ಕ್ರಮವನ್ನು ವಿಡಂಬನಕಾರಿಯಾಗಿ ತೋರಿಸಿದ್ದಾನೆ. ಅದನ್ನು ಮನವರಿಕೆ ಮಾಡಿ ಕೊಡುವುದೆ ಕ್ಯಾಮರೂನನ ಉದ್ದೇಶ. ಅದರಲ್ಲಿ ಆತ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾನೆ.

     ಟೈಟಾನಿಕ್ ನಿರೂಪಣೆಯಲ್ಲಿ ಕ್ಯಾಮರೂನ್ ಫ್ಲ್ಯಾಶ್ ಬ್ಯಾಕ್ ತಂತ್ರವನ್ನು ಅಳವಡಿಸಿ ಕೊಂಡಿದ್ದಾನೆ. ಈ ಕಥಾನಕದ ನಿರೂಪಣೆ ಪ್ರಾರಂಭವಾಗುವುದು ಅಟ್ಲಾಂಟಿಕ್ ಮಹಾ ಸಾಗರದಲ್ಲಿ ಮುಳುಗಿದ ಟೈಟಾನಿಕ್ ಹಡಿಗಿನಲ್ಲಿ ಇದೆ ಎನ್ನಲಾದ ಬೆಲೆ ಬಾಳುವ ವಜ್ರದ ನೆಕ್ ಲೇಸ್ ಪಡೆಯಲು ಬ್ಯಾಕ್ ಲೋವೆಟ್ ಎನ್ನುವ ನಿಧಿ ಶೋಧಕ ತನ್ನ ತಂಡದೊಂದಿಗೆ ಟೈಟಾನಿಕ್ ನ ಭಗ್ನ ಅವಶೇಷಗಳಲ್ಲಿ ಮೂರು ವರ್ಷಗಳಿಂದ ಹುಡುಕಾಟ ಪ್ರಾರಂಭಿಸಿರುತ್ತಾನೆ ಸಾಗರದ ತಳದಲ್ಲಿ ಅವಶೇಷಗಳೆಡೆಯಲ್ಲಿ ಹುಡುಕುತ್ತ ಸಾಗಿದಾಗ ಲೋವೆಟ್ ಕಣ್ಣಿಗೆ ಒಂದು ತಿಜೋರಿ ಕಂಡು ಬರುತ್ತದೆ. ಅದನ್ನು ಸಾಗರದ ತಳದಿಂದ ಮೇಲಕ್ಕೆ ತಂದಾಗ ಆತನ ತಂಢಕ್ಕೆ ನಿಧಿ ಸಿಕ್ಕಷ್ಟೆ ಸಂತೋಷವಾಗುತ್ತದೆ. ಆ ತಿಜೋರಿಯನ್ನು ಒಡೆದು ನೋಡಿದಾಗ ಅದರೊಳಗೆ ಸೇರಿ ಕೊಂಡಿದ್ದ ತಿಳಿ ಮಣ್ಣಿನ ರಾಶಿಯ ಒಳಗಿನಿಂದ ನೆನದು ತೊಯ್ದು ತೊಪ್ಪೆಯಾದ ಕರೆನ್ಸಿ ನೋಟುಗಳ ಕಟ್ಟುಗಳು ದೊರೆಯುತ್ತವೆ. ಆದರೆ ಅವರು ನಿರೀಕ್ಷಿಸಿದ ವಜ್ರದ ನೆಕ್ಲೆಸ್ ದೊರೆಯುವುದಿಲ್ಲ. ಆ ತಿಜೋರಿಯಲ್ಲಿ ಫೋಟೋ ಆಲ್ಬಂ ತರಹದ ಚಿತ್ರಗಳ ಸಂಗ್ರಹದ ಕಟ್ಟು ದೊರೆಯುತ್ತದೆ. ಅದನ್ನು ನೀರಿನಿಂದ ತೊಳೆದಾಗ ಅದರಲ್ಲಿ ದೊರೆತ ಒಂದು ಚಿತ್ರದಲ್ಲಿ ತನ್ನ ಕತ್ತಿನಲ್ಲಿ ನೆಕ್ಲೆಸ್ ಧರಿಸಿ ನಗ್ನಾವಸ್ಥೆಯಲ್ಲಿ ಮಲಗಿದ ಒಬ್ಬ ಯುವತಿಯ ಚಿತ್ರ ಅದಾಗಿರುತ್ತದೆ. ಲೋವೆಟ್ ಹುಡುಕುತ್ತಿದ್ದ ವಜ್ರದ ನೆಕ್ಲೆಸ್ ಗೂ ಆ ಯುವತಿ ಧರಿಸಿದ್ದ ನೆಕ್ಲೆಸ್ಸಿಗೂ ಹೊಂದಿಕೆಯಿರುತ್ತದೆ. ಈ ಬಗ್ಗೆ ಮಾಹಿತಿಯಿರುವವರ ಸಹಾಯವನ್ನು ನಿಧಿ ಶೋಧಕ ಲೋವೆಟ್ ತಂಡದವರು ಕೇಳಿರುತ್ತಾರೆ. ಟೆಲಿವಿಜನ್ನಿನಲ್ಲಿ ಪ್ರಸಾರವಾಗುತ್ತಿದ್ದ ಅದನ್ನು ತನ್ನ ಮನೆಯಲ್ಲಿ ಮಣ್ಣಿನ ಪಾತ್ರೆಯ ತಯಾರಿಕೆಯಲ್ಲಿ ತೊಡಗಿದ್ದ ಹಣ್ಣು ಹಣ್ಣು ಮುದುಕಿ ರೋಸ್ ಡೇವಿಸ್ ಬುಕೆಟರ್ ನೋಡುತ್ತಾಳೆ. ಈ ಬಗ್ಗೆ ಲೋವೆಟ್ ತಂಡದವರೊಂದಿಗೆ ತನ್ನ ಮೊಮ್ಮಗಳ ಮುಖೇನ ಟೆಲಿಫೋನ್ ಸಂಪರ್ಕ ಬೆಳೆಸುತ್ತಾಳೆ. ಆ ತಂಡದವರು ರೋಸ್ ಳನ್ನು ಹೆಲಿಕ್ಯಾಪ್ಟರಿನಲ್ಲಿ ಟೈಟಾನಿಕ್ ಹಡಗು ಮುಳುಗಿದ ಸ್ಥಳಕ್ಕೆ ಕರೆ ತರುತ್ತಾರೆ.

     ಅಲ್ಲಿ ಟೈಟಾನಿಕ್ ಹಡಗಿನ ಭಗ್ನ ಅವಶೇಷಗಳ ಎಡೆಯಿಂದ ಹುಡುಕಿ ತೆಗೆದ ವಸ್ತುಗಳು ಇರುತ್ತವೆ. ಒಂದು ದುಂಡಗಿನ ಆಕಾರದ ಸೀಳುಬಿಟ್ಟ ಕೈಗನ್ನಡಿ, ಒಂದು ಹಸಿರು ಬಣ್ಣದ ಪತಂಗದ ಆಕಾರದ ಹೇರ್ ಕ್ಲಿಪ್ ಮತ್ತು ಬರಿ ನೆಕ್ಲೆಸ್ ಧರಿಸಿ ಮಲಗಿದ ನಗ್ನ ಯುವತಿಯ ಚಿತ್ರಗಳಿದ್ದು ಆ ಚಿತ್ರ 103 ವರ್ಷದ ವೃದ್ಧೆ ರೋಸಳ ಗಮನ ಸೆಳೆಯುತ್ತದೆ. ಅವಳ ಕುತೂಹಲ ಭರಿತ ವರ್ತನೆ ನಿಧಿ ಶೋಧಕ ತಂಡದ ಗಮನ ಸೆಳೆಯುತ್ತದೆ. ಅವಳಿಂದ ಏನಾದರೂ ಮಾಹಿತಿ ದೊರೆಯ ಬಹುದು ಎಂದು ಕುತೂಹಲಭರಿತರಾಗಿ ಆಕೆಯ ಸುತ್ತ ಸೇರುತ್ತಾರೆ. ಸ್ವತಃ ಟೈಟಾನಿಕ್ ಹಡಗಿನಲ್ಲಿ ಪ್ರಯಾಣಿಸಿ ಘೋರ ಸಾವಿನಅಂಚಿಗೆ ಹೋಗಿ ಬದುಕಿ ಬಂದ ರೋಸ್ ತನ್ನ ನೆನಪು ಗಳಿಗೆ ಜೀವ ತುಂಬುತ್ತ ಟೈಟಾನಿಕ್ ಪಯಣವನ್ನು ನೆನೆಯುತ್ತ ಹೋಗುತ್ತಾಳೆ. ಆಕೆ ಸ್ವಗತವಾಗಿ ಹೇಳಿಕೊಳ್ಳ ತೊಡಗುತ್ತಾಳೆ. ಈ ಘಟನೆ ನಡೆದು 84 ವರ್ಷಗಳು ಉರುಳಿವೆ ಈಗಲೂ ನನಗೆ ಅದರ ಹೊಸ ಬಣ್ಣದ ವಾಸನೆ ಮೂಗಿನಲ್ಲಿ ಕಟ್ಟಿದಂತಿದೆ. ಇನ್ನೂ ಯಾರೂ ಉಪಯೋಗಿಸಿರದ ಚೀನಾ ಪಿಂಗಾಣಿ ವಸ್ತುಗಳು, ಯಾರೂ ಉಪಯೋಗಿಸದೆ ಇದ್ದ ಹಾಸಿಗೆ ಹೊದಿಕೆಗಳು ‘ಟೈಟಾನಿಕ್ ಕನಸುಗಳ ಹಡಗು’ ಎಂದು ಕರೆಯಲ್ಪಟ್ಟಿತ್ತು. ಅದು ಹಾಗೆಯೆ ಇತ್ತು ನಿಜಕ್ಕೂ ಹಾಗೆಯೆ ಇತ್ತು. ರೋಸ್ ತನ್ನ ಗತ ಕಾಲದ ನೆನಪಿಗೆ ಜಾರುತ್ತಾಳೆ. ಕ್ಯಾಮರೂನನ ಅಮರ ಪ್ರೇಮದ ಕಲ್ಪನೆ ಅಲ್ಲಿಂದ ಪ್ರಾರಂಭವಾಗುತ್ತದೆ.

                                                       (   ಮುಂದುವರೆಯುವದು )

     

 ಚಿತ್ರಕೃಪೆ: ಅಂತರ್ ಜಾಲ                                                                         

                                                                           *

 

 

Rating
No votes yet

Comments

Submitted by lpitnal Mon, 01/13/2014 - 23:43

ಹಿರಿಯರಾದ ಪಾಟೀಲರವರಿಗೆ, ವಂದನೆಗಳು, ಸರ್, ಟೈಟಾನಿಕ್ ಚಿತ್ರದ ಪ್ರತಿ ಸನ್ನಿವೇಷದ ವಿವರಣೆ, ವಿಮರ್ಶೆ, ಅದರ ಹಿಂದಿನ ಚಿತ್ರಣದ ವಿವರ, ಟೊಟಲ್ ನಾಸ್ಟಾಲಜಿ, ಚನ್ನಾಗಿ ಮೂಡಿಬಂದಿದೆ. ಸುಂದರ ಬರಹಗಳ ಲೇಖನ. ಧನ್ಯವಾದಗಳು ಸರ್..

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ನಿಮ್ಮ ಪ್ರತಿಕ್ರಿಯೆ ಓದಿದೆ, ನೀವೆಲ್ಲ ನನ್ನ ಬರಹ ಮೆಚ್ಚುತ್ತಿರುವ ರೀತಿ ನನಗೆ ಇನ್ನಷ್ಟು ಬರೆಯಲು ಪ್ರೇರೇಪಿಸುತ್ತಿದೆ ಎಂದು ಮಾತ್ರ ಹೇಳಬಲ್ಲೆ, ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by ಗಣೇಶ Mon, 01/13/2014 - 23:58

ಪಾಟೀಲರೆ,ಟೈಟಾನಿಕ್ ಪುನಃ 3Dಯಲ್ಲಿ ನೋಡಿದ ಹಾಗಾಯಿತು. ಮುಂದಿನ ಭಾಗಕ್ಕೆ ಇನ್ನೇನು ಉಳಿದಿದೆ ಅಂದು ಆಲೋಚಿಸುತ್ತಿರುವೆ:) ಮುಂದಿನ ಭಾಗದ ನಿರೀಕ್ಷೆಯಲ್ಲಿ..

Submitted by nageshamysore Tue, 01/14/2014 - 02:19

In reply to by ಗಣೇಶ

+1. ನಿನ್ನೆ ತಾನೆ ಫಲಿತಾಂಶ ಹೊರಬಿದ್ದ ಗೋಲ್ಡನ್ ಗ್ಲೋಬ್ ಅವಾರ್ಡ್ - 2014 ನಲ್ಲಿ, ಡೀಕಾರ್ಪಿಯೊ ಬೆಸ್ಟ್ ಆಕ್ಟರ್ ಅವಾರ್ಡ್ ಗೆದ್ದುಕೊಂಡಿದ್ದಾನೆ, ತನ್ನ 'ದ ವೊಲ್ಫ್ ಆಫ್ ವಾಲ್ ಸ್ಟ್ರೀಟ್' ನಟನೆಗಾಗಿ! ನಿಮ್ಮ ಈ ಕಂತಿನ ಟೈಟಾನಿಕ್ ಹಿನ್ನಲೆ ಎಳೆಎಳೆಯಾಗಿ ಬಿಡಿಸಿಟ್ಟ ಬಗ್ಗೆ ಓದುತ್ತಿದ್ದರೆ, ಚಿತ್ರದ ತುಣುಕುಗಳೆಲ್ಲ ಕಣ್ಮುಂದೆ ಬಂದಂತಾಗುತ್ತಿತ್ತು. ಗಣೇಶರು ಹೇಳಿದ ಹಾಗೆ ನಿಮ್ಮ ವಿವರಣೆಯ ವಿಶೇಷ 3ಡಿ ಎಫೆಕ್ಟಿನೊಂದಿಗೆ ಮತ್ತೆ ನೋಡಿದ ಅನುಭವ!
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಾಗೇಶ ಮೈಸೂರು ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಲಿಯೋನಾರ್ಡ್ ಡಿ ಕ್ಯಾಪ್ರಿಯೋಗೆ 2೦14 ರ ಗೋಲ್ಡನ್ ಗ್ಲೊಬ್ ಅವಾರ್ಡ್ ಸಂದ ವಿಷಯ ತಿಳಿದು ಸಂತಸ ವಾಯಿತು. ಆತನ ಟೈಟಾನಿಕ್ ಚಿತ್ರದ ನಾಯಕನ ಪಾತ್ರ ಇನ್ನೂ ನನ್ನ ಕಣ್ಮುಂದೆ ಕಟ್ಟಿದಂತಿದೆ. ಇಟ್ನಾಳರು, ಗಣೇಶಜಿ ಮತ್ತು ನೀವು ಮೆಚ್ಚಿದ ರೀತಿ ನಿಮಗೆ ಏನು ಹೇಳುವುದು ನನಗೆ ತೋಚುತ್ತಿಲ್ಲ. ಹಳೆಯ ವಿಷಯವಾದರೂ ಅಭಿಮಾನದಿಂದ ಓದಿದ್ದೀರಿ, ನಿಮ್ಮೆಲ್ಲರ ಸಹನೆಗೆ ಪ್ರತಿಕ್ರಿಯಿಸುವ ರೀತಿಗೆ ಧನ್ಯವಾದಗಳು.

ಗಣೇಶ ರವರಿಗೆ ವಂದನೆಗಳು
ನಿಮ್ಮ ಪ್ರತಿಕ್ರಿಯೆ ಓದಿದೆ, ನಿಮ್ಮ ಅಭಿಮಾನ ನನ್ನನ್ನು ಮೂಕ ವಿಸ್ಮಿತನನ್ನಾಗಿ ಮಾಡಿದೆ, ಆ ಚಿತ್ರ ನನ್ನ ಮೇಲೆ ಮಾಡಿದ ಪ್ರಭಾವ ಮತ್ತು ಸ್ವಲ್ಪ ಕಥಾ ವಸ್ತುವಿನ ನಿರೂಪಣೆಯೊಂದಿಗೆ ಇನ್ನೆರಡು ಕಂತುಗಳಲ್ಲಿ ಮುಗಿಸುವೆ, ಧನ್ಯವಾದಗಳೊಂದಿಗೆ