ಹಳೆ ಮರದಲ್ಲಿ ...? ಕಸಿ ಮಾಡಿ ನೋಡುವ..!

ಹಳೆ ಮರದಲ್ಲಿ ...? ಕಸಿ ಮಾಡಿ ನೋಡುವ..!

ಬರಹ

ಹಳೆ ಮರದಲ್ಲಿ ...! ಕಸಿ ಮಾಡಿ ನೋಡುವ..!

ಇದು ನಿವೇನಾದರು ಕೃಷಿ ಕ್ಷೇತ್ರದಲ್ಲಿ ಕೆಲ್ಸ ಮಾಡ್ತಿದೀರಿ, ಅಂತ ತಿಳಿದ್ ಕೂಡ್ಲೆ ಶ್ರೀ ಶ್ಯಾಮಸುಂದರ ಭಟ್ಟರು, ತಕ್ಷಣ ಕೇಳುವ ಮೊದಲ ಪ್ರಶ್ನೆ !

ಈ ಜೂನ್ ೭, ೨೦೦೭ ರ 'ತುಷಾರ' ಸಂಚಿಕೆಯಲ್ಲಿ, ಕೃಷಿಗಾಗಿಯೇ ಮೀಸಲಾದ, ನೀವು ತಪ್ಪದೆ ಓದಲೇ ಬೇಕಾದ ಲೇಖನವಿದು :

"ಕಸಿ ಕೌಶಲದ ಕರಾಮತ್ತು," ಎಂಬ ಶಿರೊನಾಮದ ಲೇಖನ ವನ್ನು ಬರೆದಿದ್ದಾರೆ, ಶ್ರೀ ಪಂ. ರಾಮಕೃಷ್ಣ ಶಾಸ್ತ್ರಿಗಳು. ಪುಟ ೪೬.

ಇದು ಅತ್ಯಂತ ಉಪಯುಕ್ತವಾದ ಮಾಹಿತಿಗಳಿಂದ ಕೂಡಿದ್ದು, ಸಾಮಾನ್ಯ ಕೃಷೀಆಸಕ್ತರಿಗಲ್ಲದೇ, ಕೃಷಿ ಸಂಶೋಧಕರಿಗೂ ಮಾರ್ಗದರ್ಶನ ಮಾಡುವಲ್ಲಿ ಜಯಶೀಲವಾಗಿದೆ, ಎಂದು ನನ್ನ ಅಭಿಪ್ರಾಯ. ಬೆಳೆಸಬೇಕಾದ ಇನ್ನೂ ಚಿಕ್ಕ-ಪುಟ್ಟಗಿಡಗಳಿಗೆ ಕಸಿ ಮಾಡುವುದನ್ನು ನಾವೆಲ್ಲಾ ಕಂಡಿರುವ ಸಂಗತಿ. ಆದರೆ ಅತಿ ಹಳೆಯತಲೆಮಾರಿನ ನಮ್ಮ ತಾತನಕಾಲದ, ಅಥವಾ ಓಬೀರಾಯನ ಕಾಲದ ಬೃಹದ್ ವೃಕ್ಷಗಳಿಗೆ ಕಸಿಕಟ್ಟುವ ವಿಚಾರಗಳಂತೂ ನಾವು ಅರಿಯೆವು. ನೀವೇನಾದರೂ ತಿಳಿದಿದ್ದೀರಾ ಹೇಗೆ ?

ಕೇವಲ ಕೃಷಿ ವಿಶ್ವವಿದ್ಯಾಲಯಗಳೇ ಕೃಷಿ ಸಂಶೋಧನೆ ಮಾಡಬೇಕೆಂದಿಲ್ಲ. ಅವರಿಗೆ ಸರ್ಕಾರದ ಗ್ರಾಂಟ್ ಸಿಗುತ್ತದೆ. ಮತ್ತು ವಿಜ್ಞಾನ ತಂತ್ರಜ್ಞಾನಗಳ ಅತ್ಯಾಧುನಿಕ ಸಲಕರಣೆಗಳು ಅಲ್ಲಿ ಲಭ್ಯ. ಅವರ ದಿನನಿತ್ಯದ ಕಾರ್ಯಪ್ರನಾಳಿಯೇ ಅನುಸಂಧಾನವಾಗಿದೆ. ಅಲ್ಲಿ ಕೆಲಸಮಾಡುವ ಸರ್ವರಿಗೂ ಸೌಲಭ್ಯಗಳೋ ಅಪಾರ. ಸೃಜನಶೀಲ ಮನಸ್ಸಿರುವ ಎಲ್ಲರೂ ತಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕೆನ್ನುವ ಪ್ರವೃತ್ತಿಯುಳ್ಳವರಿಗೆ, ಈ ಲೇಖನ ಒಂದು ದಿವ್ಯ ನಿದರ್ಶನ. ಇಂತಹ ಲೇಖನಗಳನ್ನು ಪ್ರಸ್ತುತಪಡಿಸುತ್ತಿರುವ ತುಷಾರ ಪತ್ರಿಕೆಯ ಪ್ರವರ್ತಕರಿಗೆ ನಮನಗಳು.

ಅಂತಹ ಸ್ತುತ್ಯ ವ್ಯಕ್ತಿ, ಇಲ್ಲಿ ನಮಗೆ ಗೋಚರಿಸುತ್ತಿರುವವರು, ನಮ್ಮ ಕನ್ನಡಿಗರೇ ಆದ, ಬೈಕುಡೆ ಮನೆಯ ಶ್ರೀ ಶ್ಯಾಮಸುಂದರಭಟ್ಟರು. ಇದು ಬೆಳ್ತಂಗಡಿ ತಾಲ್ಲೂಕಿನ ಮಚ್ಚಿನ ಗ್ರಾಮದಲ್ಲಿದೆ. ಅವರು ಬೆಳ್ತಂಗಡಿಯ, ೩೫ ವರ್ಷದ ಹರೆಯದ ಯುವಪ್ರತಿಭೆ !

ಮೂಲತಹಃ ಅವರು, ಒಬ್ಬ ಬಿ. ಎಸ್ಸಿ. ಪದವೀಧರರು. ಸ್ವಲ್ಪ ಕಂಪ್ಯೂಟರ್ ಬಗ್ಗೆಯೂ ಜ್ಞಾನಾರ್ಜನೆಮಾಡಿದ್ದಾರೆ. ಅವರಿಗೆ ಪ್ರೇರಣೆ, ಪುತ್ತೂರಿನ 'ಸಮೃದ್ಧಿಬಳಗ'ದ ಸ್ನೇಹಿತರು, ಮತ್ತು ಈಗಾಗಲೇ ಕೃಷಿ ಕ್ಷೇತ್ರದಲ್ಲಿ ತಮ್ಮ ಆಳವಾದ ಛಾಪುಮೂಡಿಸಿರುವ ಶ್ರೀ ಪಡ್ರೆ, ಸೇಡಿಯಾಪು ಜನಾರ್ಥನ ಭಟ್ಟರೇ, ಮೊದಲಾದ ಕೃಷಿಪಂಡಿತರು. ನಾವು ಸಾಧಾರಣವಾಗಿ ತಿಳಿದಿರುವ ಸಂಗತಿ ಎಂದರೆ, ಕಸಿಕಟ್ಟಲು ಪುಟ್ಟ ಸಸಿಗಳೇ ಬೇಕು ಎನ್ನುವ ವಿಚಾರ. ಇದು ಬಲಿತು ಗಿಡವಾಗಲು ಸುಮಾರು ೧೦ ರಿಂದ ೨೦ ವರ್ಷಗಳಂತೂ ಬೇಕೇ ಬೇಕು. ಈ ಕ್ರಿಯೆ ಬಹಳ ಸಮಯ ತೆಗೆದುಕೊಳ್ಳುತ್ತದೆ.

ಕಸಿಮಾಡುವ ಕಲೆಯಲ್ಲಿ ಭಟ್ಟರು ಪರಿಣಿತಿ ಪಡೆದದ್ದು ಸುಮಾರು ೨೦ ವರ್ಷಗಳ ಸತತ ಪ್ರಯತ್ನದಿಂದ. ಇವರ ಕಾರ್ಯಕ್ಷೇತ್ರ, ತಮ್ಮ ಮುತ್ತಾತಂದಿರು ಬೆಳೆಸಿಕೊಂಡು ಬಂದಿದ್ದ ಅಡಿಕೆ-ತೋಟ. ಅಲ್ಲಿ ಎಲ್ಲಾ ತರಹದ ಮರಗಳೂ ಇವೆ. ಬೃಹದಾಕಾರದ ಕಾಡುಮರಗಳು ತಮ್ಮ ಕರ್ಯಾಚರಣೆಯಲ್ಲಿ ಮಾರ್ಪಾಡನ್ನು ಪಡೆದಿವೆ. ಹಾಗೆಯೇ ಮಾವಿನಮರದಲ್ಲಿ ಒಂದು ಕೊಂಬೆಯಲ್ಲಿ ತೋತಾಪುರಿ ಬೆಳೆದರೆ, ಇನ್ನೊಂದು ಕೊಂಬೆ ನಿಮಗೆ ಬಂಗನ ಪಲ್ಲಿ ಮಾವಿನ ಕಾಯಿಯನ್ನು ಪ್ರದರ್ಶಿಸುತ್ತದೆ. ಅದೇ ಮರದ ಮತ್ತೊಂದು ರೆಂಬೆ ನೀಲಮ್, ಮುಂಡಪ್ಪ ಇನ್ನೂ, ಏನೇನೊ. ಅಡಿಕೆ ತೋಟದ ಸುತ್ತಲೂ ಒಟ್ಟು ೫೦ ಮರಗಳಿಗೂ ಹೆಚ್ಚು ವನಸಂಪತ್ತಿದೆ. ಮನೆಯ ಅಂಗಳದಲ್ಲೇ ಮುಗಿಲೆತ್ತರದ ನೆಲ್ಲಿಕಾಯಿ ಮರವಿದೆ. ಅರ್ಧಭಾಗದ ಮರದಲ್ಲಿ ಊರಿನ ನೆಲಿಕಾಯಿ ಬಿಟ್ಟರೆ, ಉಳಿದರ್ಧದಲ್ಲಿ ಬನಾರಸಿ ನೆಲ್ಲಿಕಾಯಿ ಬಿಡುತ್ತದೆ. ಮತ್ತೆ ಒಂದೇ ಮರದಲ್ಲಿ ಜಂಬುನೇರಳೆ, ಪನ್ನೇರಳೆ ಹಣ್ಣುಗಳು ಬಿಡುತ್ತವೆ. ನಕ್ಷತ್ರ ನೇರಳೆಯ ಎರಡು ಜಾತಿಯ ಹಣ್ಣುಗಳಾಗುವುದೂ ಹೇಗೇಯೇ.

ಆದರೆ ಬೃಹದಾಕಾರದ ಮರಗಳಲ್ಲೂ ಕಸಿಮಾಡಿ ಬೇಗ ಫಲಪಡೆಯುವ ನೆಕ್ಕರೆ, ಮತ್ತಿತರ ಕಾಡುಮಾವಿನ ಮರಗಳು ನಮಗೆ ಅಚ್ಚರಿ ತರುತ್ತವೆ. ಭಟ್ಟರಿಗೆ, ಈ ಕೆಲಸದಲ್ಲಿ ವಿಶೇಷ ಆಸಕ್ತಿ ಮತ್ತು ಹುಮ್ಮಸು ಹೆಚ್ಚು. ಬಿದಿರು ಏಣಿಗಳ ಸಹಾಯದಿಂದ ಅವರು ಮರಗಳನ್ನು ಹತ್ತಲು, ಮೊದಲು ಅಭ್ಯಾಸಮಾಡಿಕೊಂಡರು. ಏಕೆಂದರೆ ಈ ಕೆಲಸಕ್ಕೆ ಮರಹತ್ತುವ ಕಲೆ ಕಲಿಯಲೇಬೇಕಾದ ಒಂದು ಪ್ರಮುಖ ಪ್ರಕ್ರಿಯೆ ! ದೊಡ್ಡಮರಗಳ ಕೊಂಬೆಗಳನ್ನು ಕತ್ತರಿಸಿದರು. ಅಲ್ಲಿ ಚಿಗುರು ಮೂಡುವುದನ್ನೇ ಕಾದು, ಆ ಜಾಗಕ್ಕೆ ವಿಭಿನ್ನ ಜಾತಿಯ ಕೊಂಬೆಗಳನ್ನು ಕತ್ತರಿಸಿ ತಂದು ಇವಕ್ಕೆ ಕಸಿಕಟ್ಟಿದರು. ಮೊದ ಮೊದಲು ಇದು ಸಾಧ್ಯವೇ ಎಂದು ಅವರಿಗೂ ಅಪನಂಬಿಕೆ ಕಾಡಿತ್ತು. ಈಗ "ಅಂಗಕಸಿ ಶಸ್ತ್ರಚಿಕೆತ್ಸೆ" ಯಶಸ್ವಿಯಾಯಿತು. ಕಸಿ ಗೆಲ್ಲು ಚಿಗುರಿತು. ಆಮೇಲೆ ಅವರು ತಮ್ಮ ಗೆಳೆಯರಿಂದ ದಾವಣಗೆರೆ, ಚಿತ್ರದುರ್ಗಗಳಿಂದ ಕಸಿಗೆ, ಕೊಂಬೆಗಳನ್ನು ತರಿಸಿ ಪ್ರಯೋಗಗಳನ್ನು ಮಾಡುತ್ತಲೇ ಹೋದರು. ಒಂದೇ ಮರದ ಹಣ್ಣುಗಳು ಸಿಹಿ- ಹುಳಿಯಾಗಿವೆ. ಗೊರಟು ಸಣ್ಣದು. ನೀಲಮ್ ಮಾವಿನಹಣ್ಣಿನ ಪ್ರಜಾತಿ ಇದೆ.

ಒಂದೇ ಮರದಲ್ಲಿ ಬೇರೆ ಬೇರೆ ಜಾತಿಯ ಕಸಿ :

ಪುನರ್ಪುಳಿ ಮರಕ್ಕೆ ಹಳದಿ ಬಣ್ಣದ ಗಾರ್ಸಿನಿಯೋ ಕೋವಾದ ಕಸಿ ಕಟ್ಟಿದ್ದು, ಸುವಾಸನಾಭರಿತ ಹಣ್ಣುಗಳು ಬರುತ್ತಿವೆ. ವಿದೇಶಿ ಸೀಬೆಯ ವೈಶಿಷ್ಠ್ಯ ವೆಂದರೆ, ಹಣ್ಣೇನೋ ರುಚಿ ; ಆದರೆ ಎಲೆಗಳು ಬೇರೆ ವಿಧಾನದ್ದು. ಅಂಬುರ್‍ ಟಾನ್, ವೆಲ್ ವೆಟ್ ಆಪಲ್, ನೀರುಗುಚ್ಛೆ ಇತ್ಯಾದಿ, ಹಲವಾರು ರೀತಿಯ ಹಣ್ಣಿನ ವಿಶಿಷ್ಠ ತಳಿಗಳಿವೆ. ಗಣೇಷನ ಬಿದಿರು,ವೃದ್ಧರ ಊರುಗೋಲಿಗೆ ಉಪಯೋಗವಾಗುತ್ತದೆ. ದ್ರುಢವಾದ ವಿದೇಶದ ವಿಖ್ಯಾತ, ಗಟ್ಟಿ-ಬಿದಿರಿನ ಮರಗಳೂ ಇವರಲ್ಲಿವೆ. ಅಪ್ಪೆ ಮಾವಿನಗೆಲ್ಲುಗಳನ್ನು ಸಾಗರದಿಂದ ತಂದಿದ್ದರು

ಸಣ್ಣಪುಟ್ಟ ಕಾಟು ಮಾವಿನ ಗಿಡಗಳಿಗೂ ಕಸಿಯ ಚಿತ್ತಾರಮಾಡಿದ್ದಾರೆ. ಅವುಗಳ ಕೊಂಬೆಗಳು, ಮಾವಿನ ಫಲದ ಭಾರದಿಂದ ಬಗ್ಗಿ ನೆಲನೋಡುತ್ತಿವೆ. ಭಟ್ಟರ ಸಾಧನೆಯ ಮತ್ತೂಂದು ವಿಶೇಷವೆಂದರೆ, ೩ ಇನ್ ಒನ್ ಹಲಸಿನದು :

ಬಕ್ಕೆ, ಬಿಳುವ ಮತ್ತು ರುದ್ರಾಕ್ಷಿಹಲಸು, ಒಂದೇ ಮರದ ಎರಡು ವಿಶೇಷಗಳು. ಹಲಸಿನಕಾಯಿಯಾಗುವಂತಹ ಮರಕ್ಕೆ ಕೊಂಬೆ ಕಸಿ ಮಾಡಿದರೆ, ಹೆಚ್ಚಾಗಿ ಸಫಲವಾಗುವುದಿಲ್ಲ. ಅವರಲ್ಲಿ ಬಕ್ಕೆ ಕಾಯಿ ಆಗುವ ಮರದಲ್ಲಿ ಇನ್ನೆರಡು ಜಾತಿಯ ಕಸಿ ಸೇರಿ ಕಾಯಿಯೂ ಆಗುತ್ತಿತ್ತು. ಆ ಮರ ಈಗ ಸತ್ತು ಹೋಗಿದೆ. ಆದರೆ, ಅಂಗಳದ ಪಕ್ಕದಲ್ಲಿರುವ ಬಕ್ಕೆ ಮರಕ್ಕೆ ರುದ್ರಾಕ್ಷಿಯ ಕಸಿಮಾಡಿದ್ದು, ಈ ವರ್ಷ ಇವೆರಡು ಜಾತಿಯ ಕಾಯಿಗಳೂ ಸಮೃದ್ಧವಾಗಿವೆ. ಹೆಬ್ಬಲಸಿನ ಮರಕ್ಕೆ 'ಗಮ್ ಲೆಸ್' ಹಲಸಿನ ಕಸಿಮಾಡಿದ್ದು ಇನ್ನೂ ಕಾಯಿ ಬಿಟ್ಟಿಲ್ಲ. ಈ ಕ್ಷೇತ್ರದಲ್ಲಿ ಶ್ಯಾಮಸುಂದರ ಭಟ್ಟರ ಸಾಧನೆಗಳು ಗಮನೀಯವಾಗಿವೆ.

ಎಲ್ಲರೂ ಭಟ್ಟರ ಸಲಹೆಗೆ ಹಾತೊರೆಯುವವರೇ. ಪ್ರತಿಫಲಾಪೇಕ್ಷೆಇಲ್ಲದ ಬಟ್ಟರು ಕೃಷಿಯ ಒಳಿತಿಗಾಗಿ ತಮ್ಮ ಸಮಯವನ್ನು ಕೊಡಲು ಯಾವಾಗಲೂ ಮುಂದು. ಹಂಚಿತಿನ್ನುವ ಪ್ರವೃತ್ತಿಯನ್ನು ನಮ್ಮ "ಕಸಿಪ್ರವೀಣ", ಶ್ಯಾಮಸುಂದರಭಟ್ಟರನ್ನು ನೋಡಿ ಕಲಿಯಬಹುದು.