ಮಕರಸಂಕ್ರಾಂತಿಯೆಂಬೋ ಹಬ್ಬ
ಪ್ರತಿಯೊಂದು ಹಬ್ಬಗಳಿಗೂ ನಮ್ಮ ಪೂರ್ವಜರು ಈ ಮೊದಲೇ ವೈಜ್ಞಾನಿಕ ನೆಲೆಗಟ್ಟಿನ ಮೇಲೆಯೇ ಅವುಗಳ ಆಚರಣೆಗೆ ಒಂದು ರೂಪ ಕೊಟ್ಟಿರುವರು.ಅವುಗಳಿಗೆ ಆಧ್ಯಾತ್ಮಿಕ ಆಯಾಮ ಕೊಟ್ಟು, ಆಚರಣೆಗೆ ಒಂದು ಭಕ್ತಿಯ ಮಾರ್ಗ ತೋರಿ, ಸಂಸ್ಕøತಿ ಮತ್ತು ಸಂಪ್ರದಾಯದ ಚೌಕಟ್ಟಿನಡಿ, ದೈವೀ ಕಾರ್ಯವೆಂದು ಹೆಸರಿಟ್ಟು, ಕಡ್ಡಾಯವಾಗಿ ಪಾಲ್ಗೊಳ್ಳುವಿಕೆಗೆ ಪ್ರೀತಿಯ ಒತ್ತಾಸೆ ಇರಿಸಿದ್ದನ್ನು ನೋಡಿದರೆ, ಅವರು ಆಡಳಿತಾತ್ಮಕವಾಗಿ ಎಲ್ಲವನ್ನೂ ಹಾಗೂ ಎಲ್ಲರನ್ನೂ ಹಬ್ಬಗಳ ಆಚರಣೆಯಲ್ಲಿ ಹೇಗೆ ಅಳವಡಿಸಿಕೊಂಡಿದ್ದರು ಎಂಬುದೇ ಅವರು ಅಂದು ತೆಗೆದುಕೊಂಡ ಜಾಣತನದ ದಿಟ್ಟ ನಿರ್ಧಾರಗಳು.
ಕಾಲಕ್ರಮೇಣ ಹಬ್ಬಗಳ ಆಚರಣೆಯಲ್ಲಿ ಆ ಮೊದಲಿನ ಲವಲವಿಕೆ, ಭಕ್ತಿಯ ತನ್ಮಯತೆ, ಪರಸ್ಪರ ಬೆರೆಯುವಿಕೆ , ಮುಖ್ಯವಾಗಿ ಈ ಹಬ್ಬ ನನ್ನದು ಮತ್ತು ನನಗಾಗಿ ಎಂಬ ಸ್ವಾರ್ಥ ಭಾವನೆಯು ಕಡಿಮೆಯಾಗಿ, ತೋರಿಕೆಗೆ ಮಾತ್ರ ಆಚರಣೆಗಳಾಗಿದ್ದು ಒಂದು ದುರಂತವೇ ಸರಿ.
ಈ ಮೊದಲು ನಗರೀಕರಣ ಬಹುತೇಕ ಇರಲಿಲ್ಲ. ಎಲ್ಲ ಕಡೆಯೂ ಅದೇ ಹಳ್ಳಿಯ ಬದುಕು, ಗ್ರಾಮೀಣ ಸೊಗಡು, ಹೀಗಾಗಿ ಹಬ್ಬಗಳ ಆಚರಣೆಗೆ ಒಂದು ವಿಶೇಷ ಅರ್ಥವಿತ್ತು ಹಾಗೂ ಅದು ಅನಿವಾರ್ಯವಾಗಿತ್ತು. ಎಲ್ಲರೊಂದಿಗೆ ಒಂದಾಗಿ ಸಾಮಾಜಿಕ ಬದುಕಿನಲ್ಲಿ ನಾನೂ ಒಬ್ಬ ಎಂಬ ಗರಿಮೆಯಲ್ಲಿ ಬದುಕು ನೆಲೆಗೊಂಡಿತ್ತು. ಈಗ ನಗರಗಳ ಕಬಂಧ ಬಾಹುಗಳು ಉದ್ದವಾಗುತ್ತಿರುವಂತೆ, ಅತ್ಯಾಧುನಿಕ ಸೌಲಭ್ಯಗಳನ್ನೆಲ್ಲಾ ಕೊರಳಿನಲ್ಲಿ ನೇತಾಡಿಸಿಕೊಂಡು ಏದುಸಿರು ಬಿಡುತ್ತಿರುವಂತೆ, ಟಿವಿ, ಮೊಬೈಲ, ಕಂಪ್ಯೂಟರ ಹಾಗೂ ಇನ್ನಿತರ ವಸ್ತುಗಳ ಕಪಿಮುಷ್ಟಿಯಲ್ಲಿ ನಮ್ಮತನವೆಂಬುದು ಸಿಲುಕಿದ್ದರಿಂದ, ಇದ್ದುದನ್ನು ಬಿಟ್ಟು ಇರದುದೆಡೆಗೆ ಪಯಣಿಸುತ್ತಿರುವಂತೆ, ಅತೃಪ್ತನಾಗಿ ಇನ್ನು ಹೆಚ್ಚಿಗೆ ಹಾಗೂ ಹೊಸದೊಂದು ಪಡೆಯಬೇಕೆನ್ನುವ ಭರದಲ್ಲಿ ಮರೀಚಿಕೆಯ ಬೆಂಬತ್ತಿದಂತೆ, ಹೀಗಾಗಿ ಯಾವುದನ್ನೂ ಸಂಪೂರ್ಣ ಅನುಭವಿಸದೇ, ಆಚರಿಸದೇ ಅಂತರ್ಮುಖಿಗಳಾಗಿ, ಯಾರೊಂದಿಗೂ ಸ್ನೇಹ, ಅನುರಾಗದಿಂದ ಬೆರೆಯದೇ, ಏಕಾಂಗಿಯಾಗಿ ಬದುಕಿನ ರಸಮಯ ಕ್ಷಣಗಳನ್ನು ನಾವಾಗಿಯೇ ಕಾಲಿನಿಂದ ಒದ್ದು ತಳ್ಳುತ್ತಿದ್ದೇವೆಯೇ ಎಂದೆನ್ನಿಸದಿರಲಾರದು.
ಎದುರು ಬಂದರೆ ಮಾತನಾಡದ ನಾವು ಅದೇ ವ್ಯಕ್ತಿಯ ಮೊಬೈಲಿಗೆ “ ಹಬ್ಬದ ಶುಭಾಶಯಗಳು ” ಎಂಬ ಸಂದೇಶ ರವಾನಿಸಿ ಕೈ ತೊಳೆದುಕೊಳ್ಳುವ ರೀತಿ ನಮ್ಮನ್ನು ಕುಬ್ಜರನ್ನಾಗಿಸುತ್ತಿದೆ. ಮನೆಗೆ ಬಂದವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸದೇ, ಆದರಾತಿಥ್ಯ ಮಾಡದೇ, ನಗುವಿನ ಸೋಗಿನಡಿ ಒಂದೆರಡು ಮಾತನಾಡಿ, ಅವರು ಹೋದ ಮೇಲೆ ,ತಾಸುಗಟ್ಟಲೇ ಟೀವಿ ನೋಡಿ, ನಂತರ ಅದೇ ಅತಿಥಿಯೊಡನೆ ಫೋನಿನಲ್ಲಿ ಉಭಯ ಕುಶಲೋಪರಿ ಮಾಡುವುದಕ್ಕೆ ಏನೆನ್ನಬೇಕೋ? ತನ್ನ ಮನೆಯ ಅಕ್ಕಪಕ್ಕದವರೊಡನೆ, ಕಾಲೋನಿ ನಿವಾಸಿಗಳೊಂದಿಗೆ ಖುಷಿಯಿಂದ ಬೆರೆಯದೇ, ತನ್ನ ಸಂಬಂಧಿಕರೊಂದಿಗೆ ಸಂಭ್ರಮಿಸದೇ, ಊರಲ್ಲಿ ಪರಿಚಯವಿರುವ ಇತರರೊಂದಿಗೆ ಕೂಡಿ ನಲಿಯದೇ, ಅಂತರ್ಜಾಲ ತಾಣದಲ್ಲಿನ ಪರಿಚಯವಿರದ ಜನರೆದುರಿಗೆ ನಾವು ಸಂತೋಷವೆಂಬೋ ಮುಖವಾಡದಡಿ ಅನಾವರಣಗೊಳ್ಳುವುದು ಎಷ್ಟು ಸರಿಯಾದ ಕ್ರಮ. ( ಅಂತರ್ಜಾಲ ತಾಣದ ವಿಹಾರ ತಪ್ಪು ಎಂದು ಹೇಳಲಾರೆ, ವಾಸ್ತವ ಸ್ಥಿತಿಯೊಂದಿಗಿರದೆ ಅವಾಸ್ತವಿಕವಾದುದನ್ನೇ ಅಪ್ಪಿಕೊಳ್ಳುವ ಕ್ರಮ ತಪ್ಪು ಎಂದು ಹೇಳಹೊರಟಿದ್ದು.) ಮೂಲ ಆಚರಣೆಯ ಪ್ರಫುಲ್ಲತೆಯನ್ನು ಧಿಕ್ಕರಿಸಿ, ಅದನ್ನು ಇನ್ನಾವುದೋ ಅಸಂಬದ್ಧ ರೂಪದಲ್ಲಿ ನೋಡಲೆತ್ನಿಸಿ ಕೊನೆಗೊಮ್ಮೆ ಖಿನ್ನರಾಗುವುದು, ಬದುಕಿನ ಮೂಲ ಉದ್ದೇಶಕ್ಕೆ ಕೊಡಲಿ ಏಟು ನೀಡಿದಂತೆ.
ದೀಪಾವಳಿ, ಸಂಕ್ರಾಂತಿ, ಯುಗಾದಿ, ದಸರೆ ಹೀಗೆ ನಮ್ಮ ಸಂಪ್ರದಾಯದಲ್ಲಿ ಹಬ್ಬಗಳಿಗೆ ಕೊರತೆಯೇ ಇಲ್ಲ. ಕೊರತೆಯೆಂಬುದು ನಮ್ಮಲ್ಲಿಯೇ ಮನೆ ಮಾಡಿದೆ. ಹಿರಿಯರು ಹೇಳಿಕೊಟ್ಟ ಆಚರಣೆಗಳಡಿ ಎಲ್ಲರೂ ಸೇರಿಕೊಂಡು ಅಧುನಿಕ ಬದುಕಿನ ಶೈಲಿಗಳೊಂದಿಗೆ ಸಮ್ಮಿಳಿತ ಮಾಡಿಕೊಂಡು ಹಬ್ಬವನ್ನು ಆಚರಿಸಿದರೆ ಕಾಲಕ್ಕನುಗುಣವಾಗಿ ನಮ್ಮನ್ನು ಸ್ವಾಗತಿಸುವ ಅವುಗಳಿಗೆ ನಿಜಾರ್ಥ ಬರುತ್ತದೆ. ಇಲ್ಲದಿದ್ದಲ್ಲಿ ಕಾಲನ ನಡಿಗೆಯಲ್ಲಿ ನಾವು ಹೇಗೆ ನಲುಗಿ ಹೋಗುತ್ತೇವೆಯೋ ಹಾಗೆಯೇ ಈ ಹಬ್ಬಗಳು ಜೀವ ಕಳೆದುಕೊಳ್ಳಬಹುದು. ನಮ್ಮ ಮುಂದಿನ ಪೀಳಿಗೆಗೆ ಹಬ್ಬಗಳ ಸಂಭ್ರಮಾಚರಣೆಯು ಅವಶ್ಯಕತೆ ಎಂದಾಗಬೇಕಾದರೆ ಅದರ ಆಚರಣೆಯೇ ಒಂದು ಧನಾತ್ಮಕ ಪ್ರಕ್ರಿಯೆ ಎಂದು ಸಂಕಲ್ಪಿಸುವುದೇ ಇಂದಿನ ಆದ್ಯ ಕರ್ತವ್ಯವಾಗಬೇಕು. ಸಂಪದಿಗರೆಲ್ಲರಿಗೂ...ಎಲ್ಲರಿಗೂ ಮಕರ ಸಂಕ್ರಾಂತಿ ಪರ್ವಕಾಲದ ಶುಭಾಶಯಗಳು. ದಯವಿಟ್ಟು ಕ್ಷಮಿಸಿ, ನನಗೆ ಅನುಮತಿ ನೀಡಿದರೆ ಹೋಗಿ ಬರುವೆ. ನನಗೆಂದು ಕಾಯ್ದುಕುಳಿತಿರುವ ನನ್ನವರೊಂದಿಗೆ ಹಬ್ಬ ಆಚರಿಸಬೇಕಿದೆ. ಅಪ್ಪಣೆಯೇ.....( ಚಿತ್ರ ಕೃಪೆ : ಗೂಗಲ್ ತಾಣ )
Comments
ಉ: ಮಕರಸಂಕ್ರಾಂತಿಯೆಂಬೋ ಹಬ್ಬ
ಶಶಿಕಾಂತ ದೇಸಾಯಿಯವರೆ, ತಮಗೂ ಮಕರ ಸಂಕ್ರಾಂತಿಯ ಶುಭಕಾಮನೆಗಳು. ಆಧುನಿಕ ಮಾಹಿತಿ ಕ್ರಾಂತಿಯ ಯುಗದ ಪರಿಣಾಮ ಮತ್ತು ಪ್ರಗತಿ ಪಥದಲಿ ದಾಪುಗಾಲಿಟ್ಟು ಎಡಬಲ ನೋಡದೆ ನಡೆಯುವ ಪ್ರತಿಫಲ - ವಿರಳವಾಗುತ್ತಿರುವ ಮುಖಾಮುಖಿ ಒಡನಾಟ ಮತ್ತು, ಹೆಚ್ಚುತ್ತಿರುವ ಕೃತಕ ಸಲಕರಣೆಗಳ ಮೇಲಿನ ಅವಲಂಬನೆ. ಸಂಪ್ರದಾಯದ ಆಚರಣೆ ಮತ್ತು ಈ ಸಲಕರಣೆಗಳ ಬಳಕೆ ಹಿತ ಮಿತವಾದ ರೀತಿಯಲ್ಲಿದ್ದರೆ ಒಳಿತು. ಆ ನಿಟ್ಟಿನಲ್ಲಿ ಪ್ರಗತಿ ಚಕ್ರ ನಮ್ಮನೆಲ್ಲ ನಡೆಸಲಿ ಎಂದು ಹಾರೈಸೋಣ :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಮಕರಸಂಕ್ರಾಂತಿಯೆಂಬೋ ಹಬ್ಬ by nageshamysore
ಉ: ಮಕರಸಂಕ್ರಾಂತಿಯೆಂಬೋ ಹಬ್ಬ
ಶ್ರೀಯುತರಾದ ನಾಗೇಶ ಮೈಸೂರ ಅವರಿಗೆ,ಪ್ರತಿಕ್ರಿಯೆಗೆ ಧನ್ಯವಾದಗಳು