ಸಂಕ್ರಾಂತಿ ಹುಡುಗಿಯೂ, ಮೋಟಾರು ಬೈಕೂ...

ಸಂಕ್ರಾಂತಿ ಹುಡುಗಿಯೂ, ಮೋಟಾರು ಬೈಕೂ...

ಸರಿ ಸುಮಾರು 90ರ ಆಚೀಚೆಗೆ ಬರೆದಿದ್ದ ಸಂಕ್ರಾಂತಿ ಕವನ, ಲಘು ಹಾಸ್ಯದ ದಾಟಿಯಲ್ಲಿ. ಈಗೆಲ್ಲ ಮೋಟಾರು ಬೈಕುಗಳ ಜಾಗದಲ್ಲಿ ಕಾರುಗಳೆ ಬಂದು ಕೂತುಬಿಟ್ಟಿವೆಯೆಂದು ಕಾಣುತ್ತದೆ. ಆದರೂ ಮೂಲ ಥೀಮಿಗೆ ಕಾರು - ಬೈಕಿನ ಎಫೆಕ್ಟ್ ಒಂದೆ ಆದ್ದರಿಂದ, ಸಂಪದದಲ್ಲಿ ಹಾಕುತ್ತಿದ್ದೇನೆ - ಕವನದ ಪ್ರಬುದ್ಧತೆಗಿಂತ ಆ ದಿನಗಳ ತುಂಟ ಹಾಸ್ಯದ ಇಣುಕು ನೋಟವನ್ನು ಎತ್ತಿ ಹಿಡಿಯಲೆಂದು. ಎಳ್ಳು ಬೀರಲು ಹೊರಟ ಸಂಕ್ರಾಂತಿ ಹುಡುಗಿ ಮತ್ತು ಹಿಂದಿನ ದಿನ ಜಗಳವಾಡಿ ಮುನಿಸಿಕೊಂಡು ಕೂತಿದ್ದ ಹುಡುಗನ ಊಹಾತ್ಮಕ ಕಲ್ಪನೆಯ ಹಿನ್ನಲೆಯಲ್ಲಿ ಹೆಣೆದ ಕವನ , ಸಂಕ್ರಾಂತಿಯ ದಿನಕ್ಕೆ ಆ ಹುಡುಗ ಹುಡುಗಿಯರ ಮನಗಳಿಗೆ / ಮನೋಭಾವನೆಗಳಿಗೆ ಹೊಂದುತ್ತಾ ಮುದ ಕೊಡುವುದೆಂಬ ಆಶಯದಲ್ಲಿ :-)

ಸಂಕ್ರಾಂತಿ ಹುಡುಗಿಯೂ, ಮೋಟಾರು ಬೈಕೂ...
------------------------------------------------------

ಸಂಕ್ರಾಂತಿಯ ಸಂಜೆ 
ಹುಡುಗಿ ಬಂದಳು-
ರಂಗುರಂಗಿನ ದಿರುಸು
ಮೈಯ ಮರೆಸಿ 
ಬಂದವಳ ಕಣ್ತುಂಬಾ 
ಪ್ರೀತಿಯಾ ಸುರಿಮಳೆ 
ತುಟಿ ತುಂಬಾ ಅರಳಿದ 
'ಕ್ಲೋಸ್ ಅಪ್ ಸ್ಮೈಲ್' ಕಳೆ.

ಬಣ್ಣ ಬಣ್ಣದ ನವಿಲ 
ಚಿತ್ತಾರ ಕೈತುಂಬಾ 
ಸನಿಹ ನಿಂತೆಂದಳು 
'ಇಕೋ, ಸಂಕ್ರಾಂತಿಯ ಎಳ್ಳು'?
ನಿನ್ನೆಯ ವಿರಸದ 
ಹಗಲು ನೆನಪಾಯ್ತು 
ಚಕ್ಕನೆ ಚಾಚಿದ ಕೈಯ 
ಹಿಂದಕಿಡಿದೆ
(ಹುಸಿ) ಮುನಿಸಿಂದ ಎಳ್ಳ
ಬೇಡವೆಂದೆ ..

ಅವಳೋ
ಮುದ್ದಾಗಿ ನಕ್ಕಳು 
ಸಕ್ಕರೆ ಅಚ್ಚಿನಂತೆ..
ಅವಳ 
ಕಣ್ಣು ಬರೆದ ಕವಿತೆಗೆ
ನಾನು ಸೋತೆ ..
ಕಣ್ಣಿನಾ ಕೊನೆಯಲ್ಲೇ
ಮಿಂಚು ಹರಿಸುತ್ತ
ಓರೆನೋಟದ ಬಲೆಗೆ 
ನನ್ನ ಕೆಡವುತ್ತ
ಮೇಲೆತ್ತಿ ಸುರಿದಳು 
ಕೈಯ ತುಂಬಾ
ನವಿನವಿರು ಕನಸುಗಳು 
ಮೈಯ ತುಂಬಾ..!

ಕನಸುಗಳ ಅಪ್ಪಿ ನಾ
ಇಹವನ್ನೇ ಮರೆತು 
ಹುಡುಗಿಯಾ ಕೈ ಹಿಡಿದು 
ಕೆಲ ಕ್ಷಣಗಳುರುಳಿತ್ತು...
ಎಂಥ ಚಂದದ ನಲ್ಲೆ, 
ನಗುವ ಸುಂದರ ಮೊಲ್ಲೆ,
ಸ್ವರ್ಗಕೊಂದಡಿ ಕೆಳಗೆ 
ನಾ ವಿಹರಿಸಿದ್ದೆ..
ಎಂಥ ಸೊಗದವಕಾಶ
ಬಿಡಲು ನಾ ಪೆದ್ದೆ
ಅವಳ ಸನಿಹವದೆಂಥ 
ಸೊಗದ ನಿದ್ದೆ?

ನನ್ನುಡುಗಿಯೆಂದಳು-
'ನಿನದೆಷ್ಟು ಒಳ್ಳೆತನ..'
ಮನದಲ್ಲಿ ನಡೆದಿತ್ತು 
ಕನಸುಗಳ ಸಂಕಲನ..
ಕೊನೆಗೂ ಅವಳೆಂದಳು 
ದಿನ ಕೊನೆಯ ಮಾತು 
'ಹೊರಡಬೇಕಿದೆ ನನಗೆ 
ವೇಳೆಯಾಯ್ತು..........' 
ನಡುವೆ ತಡೆದು ದನಿಯ 
ಉಗುಳು ನುಂಗಿ,
ಇನಿ ಇಳಿದಾ ದನಿಯಲಿ 
ಜಗ್ಗಿ ಅಂಗೀ:
"ಊರೆಲ್ಲ ನಾನೀಗ ಎಳ್ಳು 
ಹಂಚ ಬೇಕು 
ತರಲಾರೆಯ 
ನಿನ್ನ ಮೋಟಾರು ಬೈಕು ?"

================================
ನಾಗೇಶ ಮೈಸೂರು 
=================================
 

Comments

Submitted by nageshamysore Wed, 01/15/2014 - 03:40

In reply to by venkatb83

ಸಪ್ತಗಿರಿಗಳೆ, ತಮಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಎಲ್ಲರು ಎಳ್ಳು ತಿಂದು ಒಳ್ಳೆ ಮಾತಾಡಿದರೆ, ನೀವು ಸಂಪದದ ಲೇಖನಗಳನ್ನೆ 'ತಿಂದು' ಒಳ್ಳೆ ಮಾತಾಡುತ್ತಾ ಇದ್ದೀರ :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by nageshamysore Wed, 01/15/2014 - 03:44

In reply to by ravindra n angadi

ರವೀಂದ್ರರೆ, ಹೇಳಿ ಕೇಳಿ 90ರ ಹುಡುಗಿ ಈಗಾಗಲೆ ನಡುವಯಸ್ಕಳಾಗಿ ಮೊದಲ ಆಕರ್ಷಣೆ ಇರಲಾರದು ಅಂದುಕೊಂಡಿದ್ದೆ, ನಿಮ್ಮ ಸರ್ಟಿಫಿಕೇಟಿನಿಂದ ಆ ಆತಂಕವೂ ದೂರವಾಯ್ತು. ಸಂಕ್ರಾಂತಿ ಹುಡುಗೀನೂ ಖುಷಿಯಾಗಿರುತ್ತಾಳೆ ತಮ್ಮ ಮಾತಿಗೆ :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by H A Patil Tue, 01/14/2014 - 19:46

ನಾಗೇಶ ಮೈಸೂರು ರವರಿಗೆ ವಂದನೆಗಳು
ಸಂಕ್ರಾಂತಿ ಹುಡುಗಿಯೂ ಮೋಟಾರ್ ಬೈಕೂ ತುಂಬ ಲವ ಲವಿಕೆಯ ಕಚಗುಳಿಯಿಡುವ ಕವನ, 90ರ ದಶಕದಲ್ವಲಿ ಬರೆದ ಕವನ ವಾದರೂ ಒಂದು ತಾಜಾತನ ಅದರಲ್ಲಿದೆ, ಓದಿ ಖುಷಿಯಾಯಿತು, ಹೀಗೆಯೆ ಬರೆಯುತ್ತಾ ಇರಿ ಧನ್ಯವಾದಗಳು.

Submitted by nageshamysore Wed, 01/15/2014 - 03:53

In reply to by H A Patil

ಪಾಟೀಲರೆ ನಮಸ್ಕಾರಗಳು ಮತ್ತು ಮಕರ ಸಂಕ್ರಮಣದ ಶುಭಾಶಯಗಳು. ಸಂಕ್ರಾಂತಿ ಹುಡುಗಿ ಇನ್ನೂ ತಾಜಾ ಇದ್ದಾಳೆಂದು ಹೇಳಿ ಮತ್ತಷ್ಟು ಬರೆಯಲು ಪ್ರೇರಣೆ, ಸ್ಪೂರ್ತಿ ಕೊಟ್ಟಿದ್ದೀರಾ. ಸಂಕ್ರಾಂತಿ ಹುಡುಗಿಗೆ ತಾಜಾತನದ ಜಾಗದಲ್ಲಿ ಸ್ವಲ್ಪ ವಯೊ ಸಹಜ ಗಾಂಭೀರ್ಯ ಬಂದಿದ್ದರೂ, ಆಗಾಗ್ಗೆ ಇಣುಕುವ ತುಂಟತನ ಹಳೆಯ ನೆನಪುಗಳ ಮೆಲುಕು ಹಾಕಿಸದೆ ಇರದು. ಧನ್ಯವಾದಗಳು :-)

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by bhalle Tue, 01/14/2014 - 23:56

ಸುವ್ವಿ ಸುವ್ವಿ ಸಂಕ್ರಾಂತಿಯಂದು
ಟುವ್ವಿ ಟುವ್ವಿ ಅಂತ ಹಾಡು ಹಾಡ್ಕೊಂಡು
ಯವ್ವಿ ಯವ್ವಿ ಅಂತ ಹುಬ್ಬೆರಿಸೋ ಹಾಗೆ
ಓಡಾಡ್ತಿದ್ದ ಹುಡುಗಿ ಇಂದು
Heavy heavy !

Submitted by nageshamysore Wed, 01/15/2014 - 04:05

In reply to by bhalle

ಭಲ್ಲೆ ಜಿ ನಮಸ್ಕಾರ ಮತ್ತು ಮಕರ ಸಂಕ್ರಮಣದ ಶುಭಾಶಯಗಳು.  ನಿಮ್ಮ 'ಹೆವಿ' ಡೋಸನ್ನೆ ಎಷ್ಟು ಲೈಟಾಗಿ, ಸೊಗಸಾಗಿ ಕಟ್ಟಿ ಕೊಟ್ಟಿದ್ದೀರಿ - ಎಳ್ಳು ಬೆಲ್ಲದ ಪೊಟ್ಟಣದ ಹಾಗೆ. ಧನ್ಯವಾದಗಳು :-)
ಹುಡುಗಿ, ಸಪೂರ
ಹುಡುಗ, ಚಿತ್ತ ಚೋರ
ಬದಲಿಸಿಕೊಂಡೆ ಬಿಟ್ಟರು ಹಾರ
ಹೊಸತಲಿ ಮಾಯ, ಅಯೋಮಯ
ಕೊನೆಗುಳಿದಿದ್ದೊಂದೆ ಸ್ಥೂಲಕಾಯ :-)
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು