`ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!

`ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!

ಬರಹ

`ಥಟ್ ಅಂತ ಹೇಳಿ` ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕ್ವಿಜ್ ಕಾರ್ಯಕ್ರಮ. ಇದರ ೭೫೦ ನೆಯ ಕಂತು ಇದೇ ಸೋಮವಾರ, ಜೂನ್ ೪ ರ ರಾತ್ರಿ ೯.೩೦ ನಿಮಿಷಗಳಿಗೆ ಪ್ರಸಾರವಾಗುತ್ತಿದೆ. ಮರುಪ್ರಸಾರ ಮರುದಿನ, ಅಂದರೆ ೫.೦೬.೦೭ ರ ಬೆಳಿಗ್ಗೆ ೧೧.೦೦ ಕ್ಕೆ ನಡೆಯಲಿದೆ.

ನಮ್ಮ ನಡುವೆ ಇರುವ ಸಭ್ಯ ಸಾಹಿತಿಗಳಲ್ಲಿ ನಿಸಾರರು ಅಗ್ರಗಣ್ಯರು. ೭೧ ಹರಯದ ನಿಸಾರರು ಊರು ದೇವನಹಳ್ಳಿ. ಓದಿದ್ದು ಭೂಗರ್ಭಶಾಸ್ತ್ರ. ಅಧ್ಯಾಪನದ ಎಲ್ಲ ಮಜಲುಗಳನ್ನು ಏರಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ನಿಸಾರರನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟವರು ಕುವೆಂಪು ಅವರು. ಜಿ.ಪಿ.ರಾಜರತ್ನಂ, ವಿ.ಸೀತಾರಾಮಯ್ಯ ಮುಂತಾದವರ ಪ್ರೀತಿಯಲ್ಲಿ ತಮ್ಮ ಸಾಹಿತ್ಯ ಬದುಕನ್ನು ಅರಳಿಸಿಕೊಂಡ ನಿಸಾರ್, ತಮ್ಮ ವಿಡಂಬನಾತ್ಮಕ ಕವನ `ಕುರಿಗಳು ಸಾರ್....`ನಿಂದ ಕನ್ನಡಿಗರಿಗೆ ಹತ್ತಿರವಾದರು.

ನಿಸಾರ್ ಅವರು ನವ್ಯಕಾಲದ ಕವಿಗಳಾದರೂ, ಅವರನ್ನು ಹಾಗೆ `ಬ್ರಾಂಡ್` ಮಾಡುವುದು ಸರಿಯಾಗಲಾರದೇನೋ! `ನಿತ್ಯೋತ್ಸವ`ದಂತಹ ಅರ್ಥವತ್ತಾದ ಹಾಗೂ ಸುಶ್ರಾವ್ಯವಾದ ಗೀತೆಯ ಮೂಲಕ ಕನ್ನಡ ಸುಗಮ ಸಂಗೀತಕ್ಕೆ ಒಂದು ದಾರಿಯನ್ನು ಹಾಕಿಕೊಟ್ಟವರು. ನಿಸಾರರನ್ನು ಪಂಥಗಳಲ್ಲಿ ಕಟ್ಟಿಹಾಕುವುದನ್ನು ಬಿಟ್ಟು ಅವರನ್ನೊಬ್ಬ ಸಹೃದಯ ಕವಿ ಎಂದು ಕರೆದರೆ ಸಾಕಾಗುತ್ತದೆ.

ನಿಸಾರರ `ನಿಮ್ಮೊಡನಿದ್ದು ನಿಮ್ಮಂತಾಗದೆ....` ಕವನವನ್ನು ಎಲ್ಲ ಕನ್ನಡಿಗರು ಓದಬೇಕು. ನಿಸಾರರನ್ನು ನಮ್ಮೊಡನೆ ಒಬ್ಬರನ್ನಾಗಿಸಿಕೊಳ್ಳಬೇಕು.

ಪುಸ್ತಕ ಸಂಸ್ಕೃತಿಯನ್ನು ಬೆಳೆಸುವಲ್ಲಿ ತನ್ನ `ಥಟ್ ಅಂತ ಹೇಳಿ` ಕಾರ್ಯಕ್ರಮದ ಮೂಲಕ ಅಳಿಲು ಸೇವೆಯನ್ನು ಮಾಡುತ್ತಿದೆ ಬೆಂಗಳೂರು ದೂರದರ್ಶನ. ಹಾಗಾಗಿ ತನ್ನ ೭೫೦ ನೆಯ ಕಾರ್ಯಕ್ರಮಕ್ಕೆ ಕವಿ-ಸಾಹಿತಿಯನ್ನೇ ಕರೆಸಬೇಕು ಎಂದು ತೀರ್ಮಾನಿಸಿ, ನಿಸಾರರನ್ನು ಕರೆಸಿದೆ. ಬನ್ನಿ. ನಮ್ಮ ಪ್ರೀತಿಯ ಪ್ರೊಫೆಸರ್ ಸಾಹೇಬರ ಜೊತೆಯಲ್ಲಿ ಒಂದರ್ಧ ಗಂಟೆ ಕಳೆಯೋಣ.

- ನಾ.ಸೋಮೇಶ್ವರ