ಹಿಂದೂಸ್ಥಾನದ ವ್ಯಾಘ್ರ ‘ಟಿಪ್ಪು ಸುಲ್ತಾನ್’, ಒಂದು ಐತಿಹಾಸಿಕ ನೋಟ

ಹಿಂದೂಸ್ಥಾನದ ವ್ಯಾಘ್ರ ‘ಟಿಪ್ಪು ಸುಲ್ತಾನ್’, ಒಂದು ಐತಿಹಾಸಿಕ ನೋಟ

ಭಾರತ ಕಂಡ ಅತ್ಯಪೂರ್ವ ಮಾತ್ರವಲ್ಲ, ಏಕೈಕ ಸ್ವಾತಂತ್ರ್ಯ ವೀರ ಟಿಪ್ಪು ಸುಲ್ತಾನ್. ರಣರಂಗದಲ್ಲಿ ಬೆರಳೆಣಿಕೆಯಷ್ಟಿನ ಸೈನಿಕರನ್ನು ಕಟ್ಟಿಕೊಂಡು ಬ್ರಿಟಿಷರಿಗೆ ಶರಣಾಗದೆ ಹುತಾತ್ಮರಾದ ಅದ್ಭುತ ಚೇತನ ಟಿಪ್ಪು. ಈ ವೀರ, ರಾಜನಾದ ಮಾತ್ರಕ್ಕೆ ಇವರ ಆಡಳಿತದಲ್ಲಿ ಕೆಲವರು ಎಸಗಿರಬಹುದಾದ ಪ್ರಮಾದಗಳ ಕಾರಣ, ಭಾರತ ಮಾತೆಯನ್ನು ಬ್ರಿಟಿಷರ ಕಪಿ ಮುಷ್ಟಿಯಿಂದ ಬಿಡುಗಡೆ ಮಾಡಿಸಲು ಹೋರಾಡಿದ ಆ ಗುಣ ಇಂದಿನ ಜನರಿಗೆ ಬೇಡ. ಯಾವನೋ ಪರಂಗಿ ಇತಿಹಾಸಕಾರ ಟಿಪ್ಪು ಬಗ್ಗೆ ಬರೆದಿದ್ದನ್ನು ವೇದವಾಕ್ಯ ಎಂದು ನಂಬುತ್ತಾ, ಟಿಪ್ಪು ಸುಲ್ತಾನರ ಬಗ್ಗೆ ಇಲ್ಲ ಸಲ್ಲದ ಅಪವಾದ, ಅವಹೇಳನ ಮಾಡುತ್ತಾ, ಕಥೆ ಕಾದಂಬರಿ ಬರೆಯುತ್ತಾ ಜನರ ಮನಸಿನಲ್ಲಿ ಟಿಪ್ಪು ಒಬ್ಬ ಕ್ರೂರ ಎಂದು ಬಿಂಬಿಸಲು ಯತ್ನಿಸುತ್ತಿರುವುದು ಖೇದಕರ. ಸ್ವಾತಂತ್ರ್ಯ ಕಲಿಗಳ ಬಗ್ಗೆ,, ಅವರ ತ್ಯಾಗದ ಬಗ್ಗೆ ಆದರ ಇಲ್ಲದಿದ್ದರೂ ಪರವಾಗಿಲ್ಲ, ಅನಾದಾರ ಬೇಡ. ಸ್ವಾತಂತ್ರ್ಯ ಕಲಿಗಳ ಸಾಹಸವನ್ನು ಅವಗಣನೆ ಮಾಡುವುದು ಸಲ್ಲದು. ಆದರೆ ಇದನ್ನು ಹೇಳುವುದಾದರೂ ಯಾರಿಗೆ? ಹೋಬಳಿ ಗಳನ್ನು ಆಳಿದ ಪಾಳೆಗಾರರ ಬಗ್ಗೆ ನಮಗೆ ಅತೀವ ಭಕ್ತಿ, ಅಭಿಮಾನ ಇದೆ. ಆದರೆ ಟಿಪ್ಪುವಿಗೆ ಮಾತ್ರ ಈ ಉಪಚಾರ ಅಲಭ್ಯ. ಟಿಪ್ಪು, ಕರುನಾಡಿನಲ್ಲಿ ಹುಟ್ಟಿದ ಕೆಚ್ಚೆದೆಯ ಕನ್ನಡಿಗ. ನಮ್ಮ, ನೆಲ, ಸಂಸ್ಕಾರ, ಜೀವನ ರೀತಿ, ಭಾಷೆ ಎಲ್ಲವನ್ನೂ ಕಲುಷಿತಗೊಳಿಸಲು ಬಂದ ಶತ್ರುವನ್ನು ಸದೆ ಬಡಿಯಲು ಟಿಪ್ಪೂ ನಡೆಸಿದ ಹರಸಾಹಸ ನಮಗೆ ಸ್ಮರಣೀಯವಾಗಬೇಕು. ಹಾಗೆ ಮಾಡದೆ ಕೃತಘ್ನ ಗುಣವನ್ನ ಮೆರೆಯೋ ನಾವು ದೇಶಪ್ರೇಮಿಗಳು.    

ಟಿಪ್ಪು ಮನಸ್ಸು ಮಾಡಿದ್ದರೆ, ಸ್ವಾರ್ಥಿಯಾಗಿದ್ದರೆ, ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡು, ಸಂಧಿ ಮಾಡಿಕೊಂಡು, ಜನ್ಮವೆತ್ತಿದ ನಾಡಿನಲ್ಲಿ ಎರಡನೇ ದರ್ಜೆಯ ಪ್ರಜೆಯಾಗಿ ಬದುಕುತ್ತೇನೆ ಎಂದು ಬ್ರಿಟಿಷರಿಗೆ ಆಶ್ವಾಸನೆ ನೀಡಿದ್ದರೆ ಸುಲಭವಾಗಿ ಕಿರೀಟ ಉಳಿಸಿ ಕೊಳ್ಳಬಹುದಿತ್ತು . ಹಾಗೆ ಮಾಡದೆ ಸಾಧಾರಣ ಸೈನಿಕನಂತೆ ಹೋರಾಡಿ ವೀರ ಮರಣನ್ನಪ್ಪಿದ ಟಿಪ್ಪುವಿಗೆ ಅಪಮಾನ. ಬ್ರಿಟಿಷರೊಂದಿಗೆ ಸಂಬಂಧ ಬೆಳೆಸಿ ಕೊಂಡು, ಕಿರೀಟ ಸಿಕ್ಕಿಸಿಕೊಂಡು ಮೆರೆದವರಿಗೆ ಸಮ್ಮಾನ. ಅವರ ಬಗ್ಗೆ ನಮ್ಮ ನಾಡಿಗೆ ಅಭಿಮಾನ. ಟಿಪ್ಪುವಿನಂಥ ಕೆಚ್ಚೆದೆಯ ಕಲಿ ಬೇರೆ ದೇಶದಲ್ಲಿ ಬಾಳಿ ಬದುಕಿದ್ದರೆ ಆ ವ್ಯಕ್ತಿಯ ಬಗ್ಗೆ ಬರೆಯಲು, ಆ ಶೂರನನ್ನು ದಂತ ಕಥೆಯಾಗಿಸಲು ಪೈಪೋಟಿಯೇ ಏರ್ಪಡುತ್ತಿತ್ತು. ನಮ್ಮ ದೇಶದಲ್ಲೂ ನಡೆಯುತ್ತಿದೆ ಪೈಪೋಟಿ, ಟಿಪ್ಪು ಹೆಸರಿಗೆ, ಕೀರ್ತಿಗೆ ಹೇಗೆ ಕೆಸರೆರಚಿ ಹೆಸರು ಮಾಡಿಕೊಳ್ಳುವ ಪೈಪೋಟಿ.  

೧೭೫೦ ರಲ್ಲಿ ಹೈದರಲಿ – ಫಖ್ರುನ್ನಿಸ ದಂಪತಿಗಳಿಗೆ ಜನಿಸಿದ ಟಿಪ್ಪೂ ಬ್ರಿಟಿಷರ ವಿರುದ್ಧ ಹೋರಾಡಿದ ಅಮೋಘ ವೀರ, ಅಪ್ರತಿಮ ಶೂರ. ಸ್ವಾತಂತ್ರ್ಯದ ಪ್ರಪ್ರಥಮ ಕಹಳೆ ಝಳಪಿಸುವ ಟಿಪ್ಪೂ ಖಡ್ಗದ ಮೂಲಕ.  ಆರ್ಕಾಟ್ ಪ್ರದೇಶದ ಸೂಫಿ ಸಂತರ ಹೆಸರನ್ನು ತನ್ನ ಮಗನಿಗೆ ನಾಮಕರಣ ಮಾಡಿದ ಟಿಪ್ಪೂ ತಾಯಿ ತನ್ನ ಮಗನಲ್ಲಿ ಉದಾತ್ತ ಗುಣಗಳು ಮನೆಮಾಡುವಂತೆ ನೋಡಿಕೊಂಡರು. ಈ ಗುಣಗಳೇ ಟಿಪ್ಪು ತನ್ನ ಪ್ರಜೆಗಳ ಮನ್ನಣೆ, ಆದರ ಗೌರವ, ನಿಷ್ಠೆ ಗಳಿಸಿ ಕೊಳ್ಳಲು ನೆರವಾದವು.  

ತನ್ನಲ್ಲಿ ದೈವದತ್ತವಾಗಿ ಬಂದ ಸ್ಫೋಟಕ ಸ್ಥೈರ್ಯ, ಶೌರ್ಯದ ಕಾರಣ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಟಿಪ್ಪೂ, ಶತ್ರುವನ್ನು ಲೀಲಾಜಾಲವಾಗಿ ಮಣಿಸಿದ್ದರು. ಟಿಪ್ಪು ಕೇವಲ ೧೩ ನೆ ವಯಸ್ಸಿನಿಂದಲೇ ತಂದೆಯ ಗರಡಿಯಲ್ಲಿ ಪಳಗಿ ಅಪ್ರತಿಮೆ ಯೋಧ ಎನಿಸಿಕೊಂಡಿದ್ದರು. ಬೆನ್ನು ತಿರುಗಿಸಿ ಓಡಿ ಸಮಯ ಸಿಕ್ಕಾಗ ಬೇಟೆಯಾಡೋ ಕಲಿಗಳ ಪೈಕಿಯವರಾಗಿರಲಿಲ್ಲ ಟಿಪ್ಪು. ರಣರಂಗದಲ್ಲಿ ಟಿಪ್ಪು ಹೋರಾಡುವ ಪರಿ, ಅವರ ಪಾದರಸದಂಥ, ಮಿಂಚಿನ ಚಲವಲನ ಕಂಡ ಶತ್ರು ಹೇಳುತ್ತಿದ್ದು ಯಾವ ದಿಕ್ಕಿನಲ್ಲ್ಲಿ ತಿರುಗಿದರೂ ನಮಗೆ ಟಿಪ್ಪುವೇ ಕಾಣುತ್ತಿದ್ದುದು ಎಂದು. ಟಿಪ್ಪುವಿನ ಶೌರ್ಯ ಸಾಹಸ, ರಣನೀತಿಗಳಿಂದ ನಾಡಿನೊಳಗಿನ ಶತ್ರುಗಳೂ, ಲಂಡನ್ನಿನಲ್ಲಿ ಕೂತ ಪರಂಗಿಗಳೂ ಭಯದಿಂದ ಹೆಪ್ಪುಗಟ್ಟುತ್ತಿದ್ದರು.  

ಟಿಪ್ಪು ಹುತಾತ್ಮರಾಗಿ ಬಿದ್ದಿದ್ದರೂ ಅವರು ಸತ್ತಿರಲಿಕ್ಕಿಲ್ಲ ಎಂದು ಅತೀ ಸಮೀಪದಿಂದ ಮತ್ತಷ್ಟು ಗುಂಡುಹಾರಿಸಿ ಟಿಪ್ಪು ಹತರಾದರು ಎಂದು ಖಾತರಿ ಪಡಿಸಿ ಕೊಂಡ ನಂತರವೇ ಬ್ರಿಟಿಶ್ ಸೇನೆ ಅವರ ಪಾರ್ಥಿವ ಶರೀರದ ಹತ್ತಿರ ಬರಲು ಧೈರ್ಯ ತೋರಿಸಿದ್ದು. ಖಡ್ಗದ ಹಿಡಿತ ಬಿಡದೆ, ರಕ್ತದ ಮಡುವಿನಲ್ಲಿ ಟಿಪ್ಪು ಹತರಾಗಿ ಬಿದ್ದ ಆ ಸ್ಥಳಕ್ಕೆ ಧಾವಿಸಿ ಬಂದ ಬ್ರಿಟಿಶ್ ಸೈನಿಕನೊಬ್ಬ ಟಿಪ್ಪೂರವರ ಕೈಯ್ಯಲ್ಲಿದ್ದ ಭಾರೀ ಖಡ್ಗ ವನ್ನು ತನ್ನ ಕೈಯ್ಯಲ್ಲಿ ತೆಗೆದು ಕೊಂಡು ಹೇಳಿದ್ದು, ಈ ಅಪ್ರತಿಮ ವೀರನ ಖಡ್ಗ ನನ್ನ ಕೈಯಲ್ಲಿ ಸೇರಿದ್ದು ನನಗೆ ಅತೀವ ಹೆಮ್ಮೆ ತೋರುತ್ತಿದೆ, ಎಂದು ಕಣ್ಣೀರು ಹಾಕುತ್ತಾನೆ. ಟಿಪ್ಪುವಿಗೆ ಸಲ್ಲಬೇಕಾದ ಗೌರವಾರ್ಹ, ಮಿಲಿಟರಿ ಶವಸಂಸ್ಕಾರ ಬ್ರಿಟಿಶ್ ಸೇನೆ ಮಾಡುತ್ತದೆ. ಕರ್ನಲ್ ವೆಲ್ಲೆಸ್ಲಿ ಟಿಪ್ಪೂ ಸುಲ್ತಾನರ ಶೌರ್ಯಕ್ಕೆ ಮೆಚ್ಚಿ ಅವರ ಸ್ಮರಣಾಥ ಮಡಿದ ಸ್ಥಳದಲ್ಲಿ ಒಂದು ಸ್ಮಾರಕ ನಿರ್ಮಿಸುತ್ತಾನೆ. ಶತ್ರುವಿಗೆ ಇರುವ ಅಂತಃಕರಣ ದೇಶವಾಸಿಗೆ ಇಲ್ಲದೆ ಹೋಯಿತು.                

ಈ ಮಹಾನ್ ಚೇತನದ ಬಗ್ಗೆ ಬರೆಯುವ ಸುದೈವ ನನಗೆ ಒದಗಿ ಬಂದಿದ್ದನ್ನು ನೋಡಿ ಸಂತಸವಾಗುತ್ತಿದ್ದರೂ, ಬರಹದ ಉದ್ದೇಶ ಟಿಪ್ಪೂ ಬಗೆಗಿನ ಅಪವಾದ ನೀಗಿಸುವ ಅವಶ್ಯಕತ ಎನ್ನುವ ಅರಿವು ನನ್ನಲ್ಲಿ ಖೇದವನ್ನೂ ಉಂಟು ಮಾಡುತ್ತಿದ್ದೆ. ಟಿಪ್ಪು ಈ ನಾಡಿಗೆ ಸಂದ ಸೌಭಾಗ್ಯ. ಯಾವುದೇ ದೇಶವೂ ಹೆಮ್ಮೆ ಪಡಬಹುದಾದ ಒಬ್ಬ ಸ್ವಾತಂತ್ರ್ಯ ಯೋಧ. ಅಮೆರಿಕೆಯ ಜಾರ್ಜ್ ವಾಷಿಂಗ್ಟನ್, ಫ್ರಾನ್ಸ್ ನ ನೆಪೋಲಿಯನ್ ರಂಥ ಮಹನೀಯರ ಸಮಕಾಲೀನರಾಗಿದ್ದ ಟಿಪ್ಪುವಿಗೆ ಈ ಮಹನೀಯರುಗಳಿಗೆ ಅವರ ದೇಶಗಳು ತೋರಿದ ಕೃತಜ್ಞತಾ ಭಾವ ದಕ್ಕದೆ ಹೋದುದು ನಮಗೆ ನಾವೇ ಮಾಡಿ ಕೊಂಡ ಅವಮಾನ.  

ಟಿಪ್ಪು ಸುಲ್ತಾನ್ ರನ್ನು ಹಿಂದೂ ವಿರೋಧೀ ಎಂದು ಅಪಪ್ರಚಾರ ಮಾಡುವ ಜನರಿಗೆ ಶೃಂಗೇರಿ ಆಚಾರ್ಯ ರೊಂದಿಗೆ ಟಿಪ್ಪು ನಡೆಸಿದ ೩೦ ಪತ್ರಗಳ ಸಂವಾದ, ವಿವರಣೆ ಯನ್ನು ಸರಕಾರ, ಮತ್ತು ಶೃಂಗೇರಿ ಮಠ ಕೊಟ್ಟು ಟಿಪ್ಪೂ ರವರ ಬಗ್ಗೆ ಇಲ್ಲಸಲ್ಲದ ನ್ನು ಬರೆದು ದಿಢೀರ್ ಹೆಸರುವಾಸಿಯಾಗಲು ಪ್ರಯತ್ನಿಸುತ್ತಿರುವ ಇತಿಹಾಸ್ಯಕಾರರು, ಮತ್ತು ‘ಪತ್ರಕರ್ತ’ ಇತಿಹಾಸ್ಯಕಾರರ ಪ್ರಯತ್ನಗಳನ್ನು ಕೊನೆಗಾಣಿಸಬೇಕು.

ಶೃಂಗೇರಿಯ ಶಾರದ ಮಾತೆಯ ಪೀಠದ ಮೇಲೆ ಉಗ್ರ ಧಾಳಿ ನಡೆಸಿದ ಮರಾಠ ಸೇನೆ ಮತ್ತು ಅದರ ಸೇನಾ ನಾಯಕ ತೋರಿದ ಕ್ರೌರ್ಯಕ್ಕೆ ಟಿಪ್ಪು ಬೆಚ್ಚಿ ಬಿದ್ದಿದ್ದರು. ಶಾರದಾ ಮಾತೆಯ ವಿಗ್ರಹಗಳನ್ನು ಬೀದಿಗೆಸೆದು, ಅಲ್ಲಿನ ಅರ್ಚಕರನ್ನು ಕೊಂದು, ಅಟ್ಟಹಾಸಗೈದ ಮರಾಠರ ಕ್ರೌರ್ಯ ಕಂಡು ಶೃಂಗೇರಿ ನಲುಗಿತು. ಒಂದು ಪವಿತ್ರ ಕ್ಷೇತ್ರದ ಮೇಲೆ ಧಾಳಿ ಮಾಡಿದ್ದ ಮರಾಠರ ವಿರುದ್ಧ ಅಲ್ಲಿನ ಆಚಾರ್ಯು ಮೊರೆ ಹೋಗಿದ್ದು ಟಿಪ್ಪುವಿನಲ್ಲಿಗೆ. ಆಚಾರ್ಯರು ಟಿಪ್ಪುವಿನ ಸಹಾಯ ಯಾಚಿಸಿದ ಸುದ್ದಿ ತಿಳಿದ ಮರಾಠರು ಟಿಪ್ಪು ರವರ ಶಕ್ತಿ ಸಾಮರ್ಥ್ಯಕ್ಕೆ ಹೆದರಿ ಶೃಂಗೇರಿಯಿಂದ ಕಾಲು ಕೀಳುತ್ತಾರೆ. ಮರಾಠರಿಂದ ದಾಳಿಗೀಡಾದ ಮಠದ ದುರಸ್ತಿಗೆ ಟಿಪ್ಪು ಸುಲ್ತಾನ್ ಉದಾರವಾಗಿ ಧನಸಹಾಯ ಮಾಡುತ್ತಾರೆ. ಕೆಲ ಸಮಯದ ನಂತರ ಮರಾಠ ದಾಳಿಯ ನೇತೃತ್ವ ವಹಿಸಿದ್ದ ರಘುನಾಥ ರಾವ್ ಮಠದೊಂದಿಗೆ ಸಂಬಂಧ ಬೆಳೆಸಲು ತಾನಿರುವಲ್ಲಿಗೆ ಆಚಾರ್ಯರನ್ನು ಕರೆಸುತ್ತಾನೆ. ತನ್ನ ಕಡು ಶತ್ರು ಮರಾಠ ರೊಂದಿಗೆ ಸಂಬಂಧ ಬೆಳೆಸಲು ಹೋಗುವ ಆಚಾರ್ಯರಿಗೆ ಅವರು ಹೋಗುವ ಹಾದಿಯಲ್ಲಿ ಯಾವ ತೊಂದರೆಯೂ ಆಗಂತೆ ಎಲ್ಲಾ ಸಜ್ಜೀಕರಣದ ವ್ಯವಸ್ಥೆ ಮಾಡುವುದು ಮಾತ್ರವಲ್ಲದೆ ಆಚಾರ್ಯ ಹಿಂತಿರುಗಿ ಬರುವುದು ತಡವಾದಾಗ ಅದರ ಕುರಿತು ಆತಂಕಿತರಾಗಿ ವಿಚಾರಿಸುತ್ತಾರೆ ಟಿಪ್ಪು.

ಟಿಪ್ಪು ಹೇಳುತ್ತಿದ್ದುದು, ನನಗಿರುವುದು ದೇವರ ದಯೆ, ಆಚಾರ್ಯರ ಆಶೀರ್ವಾದ, ಮತ್ತು ನನ್ನ ಶಸ್ತ್ರ ಭಂಡಾರ. ಟಿಪ್ಪು ಮತ್ತು ಶಾರದಾ ಪೀಠದ ಆಚಾರ್ಯರ  ನಡುವೆ ೩೦ ಪತ್ರಗಳ ಸಂವಾದ ಸಹ ನಡೆಯುತ್ತದೆ.  

ಟಿಪ್ಪು ಸೈನ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಇದ್ದುದು ಹಿಂದೂಗಳು. ಟಿಪ್ಪೂ ಸುಲ್ತಾನರ ಪ್ರಧಾನಿ ಪೂರ್ಣಯ್ಯ, ಓರ್ವ ಬ್ರಾಹ್ಮಣ. ಕಂದಾಯ ಮಂತ್ರಿ ಕೃಷ್ಣ ರಾವ್, ಮತ್ತೊಬ್ಬ ಬ್ರಾಹ್ಮಣ. ಸೇನಾ ದಂಡನಾಯಕ ಶ್ರೀನಿವಾಸ ರಾವ್.  ಶ್ರೀರಂಗ ಪಟ್ಟಣದ ಶ್ರೀ ರಂಗನಾಥನ ದೇಗುಲ, ಕಲ್ಲಾಳದ ಲಕ್ಷ್ಮಿಕಾಂತ ದೇವಾಲಯ, ಮೇಲುಕೋಟೆಯ ನಾರಾಯಣ ಸ್ವಾಮೀ ಮಂದಿರಗಳನ್ನೂ  ಸೇರಿಸಿ ೧೫೦ ಕ್ಕೂ ಹೆಚ್ಚು ಹಿಂದೂ ದೇವಾಯಗಳಿಗೆ ಉದಾರ ಧನಸಹಾಯ. ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ‘ಹಕೀಂ ನಂಜುಂಡ’ ಎನ್ನುವ ಲಿಂಗವನ್ನು ಟಿಪ್ಪು ಕೊಟ್ಟಿದ್ದಂತೆ.

ಶ್ರೀರಂಗ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಕೆರೆ ತೊನ್ನೂರುಎನ್ನುವ ಗ್ರಾಮದಲ್ಲಿ ೧೨ ನೆ ಶತಮಾನದ ಕೆಲವು ದೇವಾಲಯಗಳಿವೆ. ಈ ದೇವಾಲಯಗಳಿಗೆ ಟಿಪ್ಪು ಭೇಟಿ ನೀಡಿದ್ದರಂತೆ.  

ಟಿಪ್ಪು ಸುಲ್ತಾನರ ಬದುಕಿನ ಧ್ಯೇಯ ತನ್ನ ನಾಡಿನ ಜನ ಸುಭಿಕ್ಷರನ್ನಾಗಿಸೋದು ಮಾತ್ರವಲ್ಲ ಅವರನ್ನು ಗುಲಾಮಗಿರಿಯ ಸಂಕೋಲೆಗಳಿಂದ ದೂರ ಇಡುವುದೇ ಆಗಿತ್ತು. ಪಟ್ಟ ಭದ್ರ ಮತ್ತು ಪುರೋಹಿತಶಾಹಿ ಶಕ್ತಿಗಳ ಕೈಗಳಿಂದ ಜಮೀನನ್ನು ನಿರ್ಗತಿಕರಿಗೆ, ಬಡವರಿಗೆ ನೀಡಿ ಸಮಾಜಿಕ ಸುಧಾರಣೆಯ ಅಡಿಗಲ್ಲನ್ನು ಹಾಕಿದರು ಟಿಪ್ಪು. ಇದನ್ನೇ ಇಂದಿರಾ ಗಾಂಧೀ ಅನುಕರಿಸಿದ್ದು ಉಳುವವನೇ ಹೊಲದೊಡೆಯ ನೀತಿಯ ಮೂಲಕ. ಬಹುಶಃ ಜಮೀನನ್ನು ಕಸಿದುಕೊಂಡು ಬಡವರಿಗೆ, ನಿರ್ಗತಿಕರಿಗೆ ಟಿಪ್ಪು ಹಂಚಿದ್ದು ನುಂಗಲಾರದ ತುತ್ತಾಗಿರಬಹುದೇ? ಫ್ರಾನ್ಸ್ ದೇಶದಿಂದ ಬಂದ ಯಾತ್ರಿಕರು ಮೈಸೂರು ಸಂಸ್ಥಾನದ ಪ್ರಗತಿ, ಬೆಳವಣಿಗೆ ಕಂಡು ವಿಸ್ಮಿತರಾಗಿದ್ದರು.  

ಟಿಪ್ಪು ಸುಲ್ತಾನರ ವಿರುದ್ಧ ಹೋರಾಡಿದ್ದ ಬ್ರಿಟಿಶ್ ಸೈನಿಕರಾದ ಕಿರ್ಕ್ ಪಾಟ್ರಿಕ್, ವಿಲ್ಕ್ಸ್ ಮುಂತಾದವರು ಯುದ್ಧ ಮುಗಿದ ಕೂಡಲೇ ಇತಿಹಾಸಕಾರರಾಗಿ ತಮಗೆ, ತಮ್ಮ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನನಾಗಿದ್ದ ವ್ಯಕ್ತಿಯನ್ನು ತಮಗೆ ತೋಚಿದ ರೀತಿಯಲ್ಲಿ ಬಿಂಬಿಸಿ ಬರೆದರು. ಟಿಪ್ಪುವನ್ನು ಮತಾಂಧ, ಕ್ರೂರ ಎಂದು ಚಿತ್ರೀಕರಿಸಿದರು. ನಮ್ಮ ನೆಲ, ಜಲವನ್ನು, ಖನಿಜ ಸಂಪತ್ತನ್ನು ಡೊಗ್ಗು ಸಲಾಮು ಹಾಕಿ ಬ್ರಿಟಿಷರಿಗೆ ಅರ್ಪಿಸದೆ ಸವಾಲೆಸೆದು, ಅವರನ್ನು ದೇಶದಿಂದ ಹೊರಗಟ್ಟಲು ತೋರಿಸಿದ ಕೆಚ್ಚು ಇವರ ಲೆಕ್ಕಾಚಾರದಲ್ಲಿ ಟಿಪ್ಪು ತೋರಿಸಿದ ಕ್ರೌರ್ಯ.

ನರಬಲಿ, ಮದ್ಯಸೇವನೆ ನಿಷೇಧ, ಗಾಂಜಾ ಕೃಷಿಯ ಮೇಲಿನ ನಿರ್ಬಂಧ, ವೇಶ್ಯಾವಾಟಿಕೆಯ ನಿರ್ಮೂಲನ.....ಮುಂತಾದ ಹಲವಾರು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದರು ಟಿಪ್ಪು. ಊಹಿಸಿ ನೋಡಿ,, ಇಷ್ಟಲ್ಲಾ ಕಾರ್ಯಗಳನ್ನು ಮರಾಠ, ನಿಜಾಮರ ಜೊತೆಗೂಡಿ ನಮ್ಮ ನಾಡನ್ನು ಕಬಳಿಸಲು ಹೊಂಚು ಹಾಕುತ್ತಿದ್ದ ಬ್ರಿಟಿಷರ ಉಪಟಳದ ನಡುವೆ ಟಿಪ್ಪು ಹೇಗೆ ಮಾಡಿರಬಹುದು ಎಂದು. 

ಬ್ರಿಟಿಷರೊಂದಿಗೆ ಕೈ ಜೋಡಿಸಲು ಉತ್ಸುಕರಾಗಿದ್ದ ಜನರ ವಿರುದ್ಧ ಹೋರಾಡಲು ಟಿಪ್ಪು ಹಿಂದೆ ಮುಂದೆ ನೋಡಲಿಲ್ಲ. ಜಾತಿ ಧರ್ಮ ನೋಡಲಿಲ್ಲ. ತನ್ನದೇ ಧರ್ಮೀಯರಾದ ಕೇರಳದ ಮಾಪಿಳ್ಳೆ, ಮತ್ತು ನಿಜಾಮರ ವಿರುದ್ಧವೂ ಟಿಪ್ಪು ಸೆಣಸಿದ್ದರು. ಕರ್ನೂಲಿನ ನಾವಾಬರನ್ನೂ ಬಿಡಲಿಲ್ಲ ಟಿಪ್ಪು. ತಮ್ಮ ಕುತಂತ್ರಗಳಿಂದ ಮರಾಠರು ಮತ್ತು ನಿಜಾಮರ ಸಹಾಯ ಟಿಪ್ಪುವಿಗೆ ಸಿಗದಂತೆ ಮಾಡಿದ ಬ್ರಿಟಿಷರು ದೇಶ ಕಬಳಿಸುವ ತಮ್ಮ ಕೆಲಸ ಸುಗಮವಾಗುವಂತೆ ನೋಡಿಕೊಂಡರು.

ಆತ್ಮಾಭಿಮಾನಿ ಟಿಪ್ಪು ನಾಡಿನೊಳಗಿನ ಜನರ ಸಹಕಾರದ ಕಾರಣ ಬ್ರಿಟಿಶ್ ಶತ್ರು ತನ್ನ ನಾಡನ್ನು ಆಕ್ರಮಿಸುವುದನ್ನ ಕಾಣಲಾರದೆ ದೂರದ ದೇಶಗಳ ಮೊರೆ, ಸಹಕಾರ ಯಾಚಿಸಬೇಕಾಯಿತು. ತುರ್ಕಿ, ಇರಾನ, ಇರಾಕ್, ಇಟಲಿ, ಫ್ರಾನ್ಸ್ ದೇಶಗಳ ಸಹಕಾರ ಬೇಡಿದ ಟಿಪ್ಪುವಿಗೆ ಈ ಸಹಾಯ ಸಿಕ್ಕಿದ್ದರೆ ಭಾರತದ ಚರಿತ್ರೆಯೇ ಬೇರೆಯಾಗುತ್ತಿತ್ತು. ಕೇವಲ ನಾಲ್ಕೈದು ಸಾವಿರ ಫ್ರೆಂಚ್ ಸೈನಿಕರ ಸಹಾಯ ಸಿಕ್ಕಿದ್ದರೂ ಬ್ರಿಟಿಶ್ ಸೂರ್ಯ ನಿರಾಯಾಸವಾಗಿ ಅಸ್ತಂಗತವಾಗಿ ಬಿಡುತ್ತಿತ್ತು. ನಾಲ್ಕನೇ ಮೈಸೂರು ಯುದ್ಧದ ಗತಿಯೇ ಬದಲಾಗುತ್ತಿತ್ತು. ಮಹಾತ್ಮಾ ಗಾಂಧಿ, ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫ್ಫಾರ್ ಖಾನ್ ರಂಥ ಸ್ವಾತಂತ್ರ್ಯ ಹೋರಾಟಗಾರರ ಅವಶ್ಯಕತೆ ಬರುತ್ತಿರಲಿಲ್ಲ ಈ ನಾಡನ್ನು ಗುಲಾಮ ಗಿರಿಯಿಂದ ಮುಕ್ತಗೊಳಿಸಲು.           

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪೂ ರೀತಿಯ ಮುಸ್ಲಿಂ ಬಾಂಧವರ ಪಾಲು ಹಿರಿದು. ಬ್ರಿಟಿಷರನ್ನು ನಾಡಿನಿಂದ ಓಡಿಸಲು ರಹಸ್ಯ ರೇಷ್ಮೆ ಪತ್ರ ಗಳ ಮೂಲಕ ಕಾರ್ಯಾಚರಣೆ ಮಾಡಿದ ದೇವೊಬಂದ್ ಮೌಲ್ವಿಗಳ ಬಗ್ಗೆ ನಮ್ಮ ದೇಶದ ಜನರಿಗೆ ಅರಿವಿಲ್ಲ. ಬ್ರಿಟಿಷರನ್ನು ನಾಡಿನಿಂದ ಓಡಿಸಲು ಟಿಪ್ಪೂ ರಂತೆಯೇ ಈ ಮೌಲ್ವಿಗಳೂ ಸಹ ಪರದೇಶಗಳ ಸಹಾಯ ಯಾಚಿಸಿದ್ದರು. ಹಾಗೆಯೇ ಭಾರತದ ತ್ರಿವರ್ಣ ಧ್ವಜವನ್ನು ರಚಿಸಿದ ಮುಸ್ಲಿಂ ಮಹಿಳೆಯ ಪರಿಚಯ ಉಂಟೆ ನಮಗೆ? ಈ ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂ ಬಹಳಷ್ಟು ಹೊರಾಡಿದ್ದಾನೆ. ಅವನಿಗೆ ಕೀರುತಿಯ, ಮೂರುತಿಯ ಅವಶ್ಯಕತೆಯೂ ಇಲ್ಲ. ಎಲ್ಲಾದರೂ ಕೇಳಿದ್ದೀರಾ, ಮುಸ್ಲಿಮರು ತಮ್ಮ ಧರ್ಮಕ್ಕೆ ಸೇರಿದ ವೀರರ ಪ್ರತಿಮೆ ಸ್ಥಾಪಿಸಲು ಮಾಡಿದ ಮನವಿ ಬಗ್ಗೆ? ರಸ್ತೆ ಬೀದಿ ಗಳಿಗೆ ನಮ್ಮ ಮಹನೀಯರ ನಾಮಕರಣ ಮಾಡಿ ಎಂದು ಬೇಡಿಕೆ ಇಟ್ಟ ಬಗ್ಗೆ?

ನಾಡಿನ ಇತಿಹಾಸಕಾರೊಂದಿಗೆ, ನಾನೂ ಇತಿಹಾಸ್ಯಕಾರ ಎನ್ನುವ ಭ್ರಮೆಯಲ್ಲಿರುವ ಪತ್ರಕರ್ತರಲ್ಲಿ ನನ್ನ ಮನವಿ. ನಮ್ಮ ಸಂಸ್ಕಾರ, ಹಿಂದೂ ಮತ್ತು ಮುಸ್ಲಿಂ, ಜ್ಞಾನ ಮತ್ತು ಜ್ಞಾನಾರ್ಜನೆಯನ್ನು ಒಂದು ಆರಾಧನೆಯನ್ನಾಗಿ ಪರಿಗಣಿಸುತ್ತವೆ. ಅದೇ ಕಾರಣಕ್ಕಾಗಿ ಸರಸ್ವತೀ ದೇವಿಯನ್ನು ವಿದ್ಯಾ ದೇವಿಯನ್ನಾಗಿ ಕಾಣಲಾಗುತ್ತದೆ.  ನಮ್ಮಲ್ಲಿ ಮನೆ ಮಾಡಿಕೊಂಡ ಪೂರ್ವಾಗ್ರಹ ಪೀಡಿತ ವಿಚಾರಗಳು, ಹಗೆ, ಪ್ರಶಸ್ತಿಗಾಗಿ ರಾಜಕೀಯ ಪಕ್ಷಗಳನ್ನ ಸಂಪ್ರೀತಗೊಳಿಸಲು ಮುಗ್ಧ ಜನರನ್ನು ದಾರಿ ತಪ್ಪಿಸುವ ಕಾರ್ಯ, ಇವು ‘ಸರಸ್ವತೀ ಸಮ್ಮಾನ’ವಲ್ಲ. ಇದು ಸರಸ್ವತೀ ವಂದನೆ ಯಂತೂ ಖಂಡಿತಾ ಅಲ್ಲ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎನ್ನುವ ನಾಣ್ಣುಡಿ ಯ ಹಿಂದಿನ ಉದ್ದೇಶ ಅರ್ಥ, ಸಂಬಂಧ, ಬಾಂಧವ್ಯ ನಿರ್ಮಿಸಲು ಸುಳ್ಳನ್ನು ಬೇಕಾದರೂ ಹೇಳಬೇಕು ಎಂದು. ಆದರೆ ಸಾವಿರ ಸುಳ್ಳನ್ನು ಹೆಣೆದು ಶಾಂತಿ ಸೌಹಾರ್ದ ಹದಗೆಡಿಸುವ, ದೊಂಬಿ ಎಬ್ಬಿಸುವ ಪರಿಪಾಠ ನಮ್ಮ ಸಂಸ್ಕಾರಕ್ಕೆ ಹೇಳಿಸಿದ್ದಲ್ಲ. ಟಿಪ್ಪುವಿನೊಂದಿಗೆ ಹೋರಾಡಿದ್ದು ಮುಸ್ಲಿಂ ಸೈನಿಕರು ಮಾತ್ರವಲ್ಲ ಅದರಲ್ಲಿ ಬಹುಪಾಲು ಹಿಂದೂಗಳೂ ಇದ್ದರು. ಧರ್ಮಾಂಧತೆಯ ಸೊಂಕಿಲ್ಲದ, ಟಿಪ್ಪುವಿಗೆ ಸ್ವಾಮೀ ನಿಷ್ಠೆ ಪ್ರದರ್ಶಿಸಿದ ಈ ಯೋಧರಿಗೆ ನಾವು ಮಾಡುವ ಅವಮಾನ ಟಿಪ್ಪು ದೇಶ ಭಕ್ತಿಯನ್ನು ಪ್ರಶ್ನಿಸುವುದು.   ದೇಶ ಭಕ್ತ ಯಾವುದೇ ಧರ್ಮೀಯನಾಗಿರಲಿ ಅವನು ಭಾರತೀಯ ಎನ್ನುವುದನ್ನು ಮರೆಯದಿರಿ. ಹಿಂದೂಸ್ಥಾನವು ಎಂದೂ ಕಾಣದ, ಭಾರತ ರತ್ನ ಟಿಪ್ಪು ಮತ್ತು ಅವರಂಥ ಕಲಿಗಳಿಗೆ ಅಪಮಾನ ಎಸಗಬೇಡಿ.

“ಇನ್ನೂರು ವರ್ಷ ಕುರಿಗಳ ಥರ ಬಾಳುವುದಕ್ಕಿಂತ, ಎರಡು ದಿನಗಳ ಹುಲಿಯ ಬದುಕೇ ಶ್ರೇಷ್ಠ”.

ಟಿಪ್ಪೂ ಸುಲ್ತಾನರ ಮೇಲಿನ ನುಡಿಗಳು ನಮ್ಮ ಮನಃಪಟಲದಲ್ಲಿ ಮಾಸದೆ ಇದ್ದಿದ್ದರೆ, ಟಿಪ್ಪುವಿನಂಥ ದೇಶಭಕ್ತರನ್ನು ಆದರಿಸಿದ್ದರೆ  ದೇಶ ಇಂದು ವಿದೇಶೀಗಳ ಹಂಗಿನಲ್ಲಿ ಇರುತ್ತಿರಲಿಲ್ಲ. ಕಾಶ್ಮೀರದ ಒಂದು ತುಣುಕನ್ನು ಕಳೆದು ಕೊಂಡಿದ್ದರಿಂದ ಹಿಡಿದು, ಚೀನಾಕ್ಕೆ ೩೮ ಸಾವಿರ ಚದರ ಕಿಲೋ ಮೀಟರುಗಳ ಪವಿತ್ರ ಸ್ಥಳವನ್ನೂ ಬಿಟ್ಟು ಕೊಟ್ಟು, ಕೊನೆಗೆ ಅಮೆರಿಕೆಯಲ್ಲಿನ ನಮ್ಮ ರಾಜತಂತ್ರಜ್ಞೆ ದೇವಯಾನಿಯ ಮುಖ ಭಂಗದವರೆಗೆ, ನಮಗೆ ಕಾಣಸಿಗುವ ಕಾರಣ ನಮ್ಮಲ್ಲಿನ ಕೆಚ್ಚಿನ ಕೊರತೆ. ಅಭಿಮಾನಶೂನ್ಯತೆ.  

ಸ್ಕಾಟ್ಲೆಂಡ್ ದೇಶದ ಸುಪ್ರಸಿದ್ಧ ಕವಿ, ನೆಪೋಲಿಯನ್ ಬೋನಪಾರ್ಟೆ ಬಗ್ಗೆ ಬರೆಯುತ್ತಾ, ಹೈದರಾಲಿಯಲ್ಲಿ ಕಾಣಲು ಸಿಕ್ಕಿದ್ದ ರಾಜಕೀಯ ದೂರದೃಷ್ಟಿ ಮತ್ತು ವಿಶಾಲ ಮನೋಭಾವ ನೆಪೋಲಿಯನ್ ನಲ್ಲಿ ಇಲ್ಲದಿದ್ದರೂ, ರಣರಂಗದಲ್ಲಿ ಟಿಪ್ಪು ತೋರಿದ್ದ ಛಲ, ಮತ್ತು ಪರಾಕ್ರಮ ಮತ್ತು ಅಂತಿಮ ಹೋರಾಟದಲ್ಲಿ ನಿಜವಾದ ಗಂಡಿನಂತೆ ಕೈಯಲ್ಲಿನ ಖಡ್ಗ ವನ್ನು ಮುಷ್ಟಿಯಲ್ಲೇ ಇರಿಸಿ ಟಿಪ್ಪು ಸಾವನ್ನಪ್ಪಿದ ರೀತಿ ನೆಪೋಲಿಯನ್ ಧೈರ್ಯ ತೋರಿಸಿದ್ದ ಎಂದು ಮುಕ್ತ ಕಂಠ ದಿಂದ ಟಿಪ್ಪುವನ್ನು ಹೊಗಳುತ್ತಾನೆ. ಕನ್ನಡ ನಾಡಿನ ಇತಿಹಾಸಕಾರ ಮಾಡಬೇಕಾದ ಕೆಲಸವನ್ನ ದೂರದ ಸ್ಕಾಟ್ಲೆಂಡಿನ ಮುತ್ಸದ್ದಿಯೊಬ್ಬ ಮಾಡುತ್ತಾನೆ.

picture courtesy: www.sacredartindia.org

 

Comments

Submitted by Dr Pannag kamat Thu, 01/16/2014 - 17:14

ನಿಮ್ಮಿಂದ‌ ಟಿಪ್ಪುವಿನ‌ ಗುಣಗಾನ‌ ಕೇಳಿ ಸಂತಸವಾಯಿತು. ತಾವು ಅತ್ಯುತ್ತಮ‌ ಇತಿಹಾಸಕಾರರಂತೆ ತೋರುತ್ತಿದೆ. ಇದೇ ರೀತಿ ವೀರ‌ ಸಾವರ್ಕರ‌ ಅವರ‌ ಬಗ್ಗೆ ಬರೆಯುವಬಹುದೇ? ಅವರು ಮಹಾನ್ ದೇಶ‌ ಭಕ್ತರು. ಅವರ‌ ಬಗ್ಗೆಯೂ ಬಹಳ ತಪ್ಪು ಕಲ್ಪನೆಗಳು ಜನರಲ್ಲಿ ಮೂಡಿವೆ.
ಪ್ರತಿಕ್ರಿಯೆಗೆ ಕಾಯುತ್ತಿದ್ದೆನೆ.

ನನ್ನಂತೆಯೇ ತಾವೂ ಸಹ ಟಿಪ್ಪು ಅಭಿಮಾನಿಗಳು ಎಂದು ತಿಳಿದು ಸಂತಸವಾಯಿತು. ವೀರ ಸಾವರ್ಕರ್ ಜಿ ಬಗ್ಗೆ 'ಔಟ್ ಲುಕ್' ಪತ್ರಿಕೆಯಲ್ಲಿ ಸವಿವರ ವರ್ಣನೆ ಓದಿದ ನೆನಪು ನನಗೆ. ಬಹುಶಃ ತಾವೂ ಓದಿರಬಹುದು. ಪ್ರತಿಕ್ರಿಯೆಗೆ ಧನ್ಯವಾದಗಳು, ಡಾಕ್ಟರ್.

Submitted by ಗಣೇಶ Sun, 01/26/2014 - 23:12

ಅಬ್ದುಲ್ಲರೆ,
ಬ್ರಿಟಿಷರ ವಿರುದ್ಧ ಹೋರಾಡಿದ "ಮೈಸೂರ ಹುಲಿ" (ಹಿಂದೂಸ್ಥಾನದ ವ್ಯಾಘ್ರ ) ಬಗ್ಗೆ ನನಗೂ ಹೆಮ್ಮೆ. ಟಿಪ್ಪು ಟಿವಿ ಸೀರಿಯಲ್ ಸಹ ಬಿಡದೇ ನೋಡಿ ಮೆಚ್ಚಿದ್ದೆ. ಈಗಲೂ ಟಿಪ್ಪುವಿನ ವಿರುದ್ಧ ಇರುವ ಆಪಾದನೆಗಳು ಸುಳ್ಳಾಗಲಿ ಎಂದೇ ಬಯಸುವೆ. ಅದಕ್ಕಾಗಿ ನಿಮ್ಮ ಲೇಖನ ನೋಡಿದರೆ, ನೀವು ಆಪಾದನೆ ಮಾಡಿದವರ ವಿರುದ್ಧ ಹರಿಹಾಯ್ದದ್ದು ಬಿಟ್ಟರೆ ಬೇರೇನಿಲ್ಲ.
ಅಜರುದ್ದೀನ್ ಸೆಂಚುರಿ ಮೇಲೆ ಸೆಂಚುರಿ ಬಾರಿಸುತ್ತಿದ್ದಾಗ "ಇಡೀ ದೇಶವೇ" ಅವನನ್ನು ಕೊಂಡಾಡಿತ್ತು. ನಂತರ ಬೇಗನೆ ಔಟಾದರೂ, ಕಮ್ಮಿ ರನ್ ಪಡೆದರೂ, ಮುಂದಿನ ಮ್ಯಾಚಲ್ಲಿ ಸೆಂಚುರಿ ಬಾರಿಸಲಿ ಎಂದು ಆಶಿಸುತ್ತಿದ್ದೆವು. ಯಾವಾಗ ಆತನ ಮೇಲೆ ಮ್ಯಾಚ್ ಫಿಕ್ಸಿಂಗ್ ಆಪಾದನೆಗಳು ಬಂತೋ ಆಗಲೂ ಅದು ನಿಜವಾಗದಿರಲಿ ಎಂದು ಬಯಸಿದ್ದೆವು. ಆದರೆ ಆತ ಏನು ಮಾಡಿದ- ಆಪಾದನೆ ತೀರಾ ಆತನ ಕೊರಳಿಗೆ ಸುತ್ತಿಕೊಂಡಾಗ ತನ್ನ"ಮುಸ್ಲಿಂಕಾರ್ಡ್" ಹೊರತೆಗೆದ. ಇದೇ ರೀತಿ ಶಾರುಕ್ ಖಾನ್ ಸಹ ಒಮ್ಮೆ "ತಾನು ಮುಸ್ಲಿಂ ಆದುದರಿಂದ....." ರಾಗ ತೆಗೆದಿದ್ದ.. ತಪ್ಪನ್ನೂ ಹೇಳಬಾರದು-ಇದ್ಯಾವೂರ ನ್ಯಾಯ?
ಅಬ್ದುಲ್ಲರೆ,
ಟಿಪ್ಪು ಹಿಂದುಗಳನ್ನು ಕೊಲ್ಲಿಸಿದ, ಮತಾಂತರ ಮಾಡಿಸಿದ, ದೇವಸ್ಥಾನಗಳನ್ನು ಕೆಡವಿದ ಎಂದೆಲ್ಲಾ ಆಪಾದಿಸಿ, ಹಿಂದುಗಳಿಗಾಗಿದ್ದ ಅನ್ಯಾಯಕ್ಕೆ ಪ್ರತಿಯಾಗಿ ಕರ್ನಾಟಕ ಸರ್ಕಾರ ಹಿಂದುಗಳಿಗೆ ೩೦% ರಿಸರ್ವೇಶನ್ ಕೊಡಿ ಎಂದೇನೂ ಕೇಳುತ್ತಿಲ್ಲ. ಇತಿಹಾಸ ಮುಗಿದ ಅಧ್ಯಾಯ. ಅಲ್ಲಿಂದ ಒಳ್ಳೆಯ ಅಂಶ ತೆಗೆದುಕೊಳ್ಳೋಣ. ತಪ್ಪು ಮುಂದೆ ಜರುಗದಂತೆ ನೋಡಿಕೊಳ್ಳೋಣ. ಇತಿಹಾಸವನ್ನು ನಮಗೆ ಬೇಕಾದಂತೆ ತಿದ್ದಿಬರೆಯುವುದಲ್ಲ.
ತನ್ನ ಧರ್ಮದ ಬಗ್ಗೆ ಹೆಮ್ಮೆ, ಪ್ರೀತಿ ಇರಬೇಕು. ತನ್ನ ಧರ್ಮದವ ಎಂಬ ಒಂದೇ ಕಾರಣಕ್ಕೆ ಆತನ ತಪ್ಪುಗಳನ್ನೆಲ್ಲಾ ಸರಿ ಎಂದು ವಾದಿಸುವುದಲ್ಲ. ನೀವು ಬುದ್ಧಿವಂತರು- ಅರ್ಥಮಾಡಿಕೊಳ್ಳುವಿರಿ ಅಂದುಕೊಳ್ಳುತ್ತೇನೆ.

ಇತಿಹಾಸವನ್ನು ಇತಿಹಾಸವಾಗಿಯೇ ನೋಡಬೇಕು. ಅದಕ್ಕೆ ಜಾತಿ, ಮತ, ಧರ್ಮಗಳ ಠಳಕು ಸಲ್ಲದು. ನೈಜ ಇತಿಹಾಸವನ್ನು ಮತೀಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದು, ಮತೀಯ ಆಧಾರದಲ್ಲಿ ಸರಿ/ತಪ್ಪುಗಳನ್ನು ಹೇರುವುದು ತರವಾಗಲಾರದು. ಗಣೇಶರ ಅಭಿಪ್ರಾಯವೇ ನನ್ನದೂ ಕೂಡ!