ಎಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಅನುಭವ
ಪರ್ವತ ಪ್ರಸವದಂತೆ ಅನ್ನಿಸಿತು ನನಗೆ, ನಮ್ಮ ಜಿಲ್ಲೆಯಲ್ಲಿ ನಡೆದ ಎಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ. ಬಹುಶಃ ನನ್ನ ನಿರೀಕ್ಷೆಗಳು ಅತಿಯಾದವಾದ್ದರಿಂದ ಹೀಗಾಗಿರಬಹುದು.
ಪುಸ್ತಕ ಮಳಿಗೆಗಳು ಮತ್ತು ಊಟದ ವ್ಯವಸ್ಥೆ ಚೆನ್ನಾಗಿದ್ದವು. ಜನಸಂಚಾರದಿಂದ ಧೂಳೇಳದದಂತೆ ಪುಸ್ತಕಮಳಿಗೆಗಳಲ್ಲೆಲ್ಲಾ ಕಾರ್ಪೆಟುಗಳನ್ನು ಹಾಸಿದ್ದರು. ಆದರೆ ಸಂಚಾರ ನಿಯಂತ್ರಣ ಹೇಗೆ ಹೇಗೆಯೋ ಇದ್ದು ನಗರದೊಳಗಿಂದ ಸಮ್ಮೇಳನದ ಸ್ಥಳಕ್ಕೆ ಹೋಗಿ-ಬರಲು ಕಾಲ್ನಡಿಗೆಯೇ ಆಗಬೇಕಾಯಿತು. ಹಿರಿಯ ನಾಗರಿಕರಿಗೆ ಮಡಿಕೇರಿಯ ಗುಡ್ಡಗಳನ್ನು ಹತ್ತಿಳಿದು ಹೋಗಿ ಬರುವದು ಅತಿ ತ್ರಾಸದಾಯಕವಾಗಿತ್ತು.
ಎಲ್ಲೆಲ್ಲಿ ಏನೇನಿವೆ ಎನ್ನುವ ಸೂಚನಾಫಲಕಗಳಿಲ್ಲದೆ, ಇದ್ದ ಎರಡೇ ವೇದಿಕೆಗಳನ್ನು ಪತ್ತೆಹಚ್ಚುವದು ಕಷ್ಟವಾಯಿತು. ಕಾಲೆಜ್ ಸಭಾಂಗಣದಲ್ಲಿದ್ದ ಗೌರಮ್ಮ ವೇದಿಕೆಯಲ್ಲಿ ಧ್ವನಿವ್ಯವಸ್ಥೆ ಸರಿಯಿರಲಿಲ್ಲ.
ಮೊದಲ ದಿನದ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷರ ವಾಹನ ಅಲಂಕಾರವಿಲ್ಲದೆ ಬೋಳಾಗಿತ್ತು. ಪ್ರದರ್ಶನಗಳ ತಂಡಗಳ ನಡುವೆ ವಿಪರೀತ ಅಂತರವಿದ್ದು ಬೇಜಾರು ಹುಟ್ಟಿಸಿತು.
ಮೊದಲ ದಿನದ ಕಾರ್ಯಕ್ರಮ ರಾಜಕಾರಿಣಿಗಳದ್ದು.
ಮೈಕ್ ಮುಂದೆ ನಿಂತು ಮಾತಾಡುವಾಗ ಎತ್ತರಿಸಿದ ದನಿಯಲ್ಲಿ ಮಾತಾಡುವದು ಅನವಶ್ಯ; ಹಾಗೆ ಮಾತಾಡಿದರೆ ಸರಿಯಾಗಿ ಕೇಳಿಸದು ಎಂದು ಬರೇ ಕೆಲವೇ ಕೆಲವರಿಗೆ ಮಾತ್ರ ಗೊತ್ತಿರುವದು ಎಂದು ತೋರಿತು. ಗಂಟುಮುಖ ಹಾಕಿಕೊಂಡು ಮೈಕಿನ ಮುಂದೆ ಜಗಳವಾಡುತಿದ್ದರು. ಶಾಂತ, ಶಿಸ್ತಿನ ಸಭಾಸದಸ್ಯರೆದುರು ಇವರ ಆರ್ಭಟದ ಭಾಷಣಗಳೇ ಅಲ್ಲ; ಕವನ ವಾಚನಗಳೂ ನಗು ಹುಟ್ಟಿಸಿದವು!
"ಒಂದು ಪುಸ್ತಕಕ್ಕೆ ಐದು ರೂಪಾಯಿ!"; "ಒಂದು ಪುಸ್ತಕಕ್ಕೆ ಹತ್ತು ರೂಪಾಯಿ!"; "ಒಂದು ಪುಸ್ತಕಕ್ಕೆ ಇಪ್ಪತ್ತು ರೂಪಾಯಿ!", ಎಂದೆಲ್ಲಾ ಸಂತೆಯಲ್ಲಿ "ಯಾವ ಸಾಮಾನ್ ಬೇಕಾದ್ರೆ ತೊಗೊಳ್ಳಿ - ಹತ್ರೂಪಾಯಿ!" ಎಂದು ಕೂಗಿ ಪುಸ್ತಕ ಮಳಿಗೆಗಳಲ್ಲಿ ಮಾರುತಿದ್ದದು ಸಾಹಿತ್ಯ ಪ್ರಿಯರಿಗೆ ತಮಾಶೆಯೆನ್ನಿಸಿತು.
ಹರದಾಸ ಅಪ್ಪಚ್ಚ ಕವಿ ನೆನಪಿನ ದ್ವಾರದಲ್ಲಿ ಜನರಲ್ ತಿಮ್ಮಯ್ಯನವರ ಚಿತ್ರವನ್ನೇತಕ್ಕೆ ಹಾಕಿದರೋ ತಿಳಿಯಲಿಲ್ಲ.
ಭಾಷಣಗಳಿಂದ, ಕವನವಾಚನಗಳಿಂದ ನನಗೇನೂ ಖುಶಿಯಾಗಲಿಲ್ಲ. ನನ್ನ ಮೆಚ್ಚಿನ ಕೆಲವೇ ಸಾಹಿತಿಗಳಲ್ಲಿ ಯಾರಾದರೂ ಹತ್ತಿರದಲ್ಲಿ ದೊರೆತು ಮಾತಾಡಿಯೇನೆಂದು ಆಶಿಸಿದ್ದೆ. ಪುಸ್ತಕದ "ಲೋಕಾರ್ಪಣೆ"ಯಂತಹ ಸಣ್ಣ ಸಮಾರಂಭಗಳಲ್ಲೇ ವೇದಿಕೆಯಿಂದ ಕೆಳಗಿಳಿಯದ ಸಾಹಿತಿಗಳಿರುವಾಗ ಇಷ್ಟೊಂದು ದೊಡ್ಡ ಸಮಾವೇಶದಲ್ಲಿ ಹೀಗೆಲ್ಲಾ ಆಸೆಪಡುವದು ತಪ್ಪೆಂದು ಮನವರಿಕೆಯಾಯಿತು.
ಸ್ವಾತಂತ್ರ್ಯ ಹೋರಾಟಗಾರರೂ, ಸ್ವಾತಂತ್ರ್ಯದ ಉದ್ದೇಶಕ್ಕೆ ಪತ್ರಿಕೋದ್ಯಮವನ್ನು ನಡೆಸಿದ, ಕೊಡಗಿನ ಜನಜೀವನ, ಸಂಸ್ಕೃತಿಗಳ ಬಗ್ಗೆ ಪ್ರೌಢ ಕೃತಿಗಳನ್ನು ರಚಿಸಿದ ಬಿ ಡಿ ಗಣಪತಿ, ಹಾಗೂ ಕೊಡವ ಸಂಸ್ಕೃತಿಯನ್ನು ಪರಿಚಯಿಸಿ, ಭಾರತೀಯ ಸಾಹಿತ್ಯದಲ್ಲೇ ೨೦ನೇ ಶತಮಾನದ ಆದಿಯಲ್ಲೇ (೧೯೨೪) ಪ್ರಪ್ರಥಮವಾಗಿ ಸಮಗ್ರವಾಗಿ ಜಾನಪದ ಸಂಗ್ರಹವನ್ನು ಮಾಡಿದ (‘ಪಟ್ಟೋಲೆ ಪಳಮೆ’ಯಲ್ಲಿ ಜೀ ಶಂ ಪರಮಶಿವಯ್ಯನವರು) ನಡಿಕೇರಿಯಂಡ ಚಿಣ್ಣಪ್ಪ, ಮೊದಲಾದ ಅಧ್ಯಯನಶೀಲ ಸಾಹಿತಿಗಳನ್ನು ಬಿಟ್ಟು, ಕೆಲವು ಕತೆ-ಕಾದಂಬರಿಗಳನ್ನು ಬರೆದು ಹೆಸರು ಪಡೆದ ಗೌರಮ್ಮ, ಭಾರತೀಸುತರ ಹೆಸರುಗಳನ್ನು ವೇದಿಕೆಗಳಿಗಿಟ್ಟರು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕತೆ, ಕವನ ಮತ್ತು ಕಾದಂಬರಿಗಳನ್ನು ಬರೆಯುವವರಷ್ಟೇ ಸಾಹಿತಿಗಳೇನೋ!