' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯಕಾವ್ಯ ' (ಬಾಗ 3)
ಬ್ರಿಟನ್ನಿನ ಸೌತಾಂಪ್ಟನ್ನಿನ ಬಂದರಿನಲ್ಲಿ ಎಲ್ಲರ ಕನಸಿನ ಟೈಟಾನಿಕ್ ಲಿವರ್ ಪೂಲ್ ಎಂಬ ದೊಡ್ಡ ಬರಹದ ನಾಮ ಫಲಕ ಹೊತ್ತ ಬೃಹತ್ತಾದ ಹಡಗು ತನ್ನ ಮೊದಲ ಯಾನಕ್ಕೆ ತಯಾರಾಗಿ ನಿಂತಿರುತ್ತದೆ. ಅದರಲ್ಲಿ ಪ್ರಯಾಣಿಸಲು ಉತ್ಸುಕರಾಗಿ ಓಡಾಡುತ್ತ ಎಲ್ಲ ಪ್ರಾಯದ ಎಲ್ಲ ಅಂತಸ್ತಿನ ಜನ ಹರ್ಷದಿಂದ ಟೈಟಾನಿಕ್ ಏರಲು ಸಿದ್ಧರಾಗಿ ನಿಂತಿರುತ್ತಾರೆ.. ಶ್ರೀಮಂತ ಕಾಲ್ ಹಾಕ್ಲಿ ತನ್ನ ಸಿರಿವಂತಿಕೆಯ ಎಲ್ಲ ಆಡಂಬರ ಮತ್ತು ಆಢ್ಯತೆಯೊಂದಿಗೆ ತನ್ನ ಭಾವಿ ವದು, ಆಕೆಯ ತಾಯಿ ಮತ್ತು ಆಳು ಕಾಳುಗಳೊಂದಿಗೆ ಟೈಟಾನಿಕ್ ಏರಲು ಬರುತ್ತಾನೆ. ಹರ್ಷಚಿತ್ತ ಮುಗ್ಧೆ ರೋಸ್ ಕುತೂಹಲಗೊಂಡು ಎಲ್ಲವನ್ನೂ ಬೆರಗುಗಣ್ಣು ಗಳಿಂದ ನೋಡುತ್ತ ಹಡಗನ್ನು ಪ್ರವೇಶಿಸುತ್ತಾಳೆ. ಅಲ್ಲಿಗೆ ಸ್ವಲ್ಪ ದೂರದಲ್ಲಿ ಸಾಮಾನ್ಯ ಕ್ಲಬ್ ಒಂದರಲ್ಲಿ ಜಾಕ್ ಡಾಸನ್ ಇಸ್ಪೀಟು ಜೂಜಿನ ಆಟದಲ್ಲಿ ತೊಡಗಿದ್ದಾನೆ. ಎಲ್ಲವನ್ನೂ ಸೋತ ಆತನ ಪ್ರತಿ ಜೂಜುಗಾರ ತಾನು ಕೊಂಡಿದ್ದ ಟೈಟಾನಿಕ್ ಹಡಗಿನ ಸಾಮಾನ್ಯ ದರ್ಜೆಯಲ್ಲಿ ಪಯಣಿಸಲು ಕೊಂಡಿದ್ದ ಟಿಕೆಟ್ ಜಾಕನಿಗೆ ಸೋಲುತ್ತಾನೆ. ಇದನ್ನು ನೋಡಿದ ಕ್ಲಬ್ಬಿನ ಉಸ್ತುವಾರಿಯನ್ನು ನೋಡಿ ಕೊಳ್ಳುವವ ಜಾಕನಿಗೆ ಇನ್ನು ಹದಿನೈದು ನಿಮಿಷಗಳಲ್ಲಿ ಟೈಟಾನಿಕ್ ಹೊರಡಲಿರುವ ವಿಷಯವನ್ನು ತಿಳಿಸುತ್ತಾನೆ. ಉತ್ಸಾಹದ ಚಿಲುಮೆಯಾದ ಯುವಕ ಜಾಕ್ ತನ್ನ ಇನ್ನೊಬ್ಬ ಸ್ನೇಹಿತನೊಂದಿಗೆ ಟೈಟಾನಿಕ್ ಹಡಗನ್ನು ಏರುತ್ತಾನೆ. ಅಲ್ಲಿ ಎಲ್ಲಿ ಯಾರನ್ನು ನೋಡಿದರೂ ಎಲ್ಲರ ಮುಖದಲ್ಲಿ ಟೈಟಾನಿಕ್ ಹಡಗಿನಲ್ಲಿ ಪ್ರಯಾಣಿಸಲು ಅವಕಾಶ ಪಡೆದ ಹೆಮ್ಮೆ ಇರುತ್ತದೆ. ಟೈಟಾನಿಕ್ ತನ್ನ ಸಂಭ್ರಮದ ಮೊದಲ ಪಯಣವನ್ನು ಪ್ರಾರಂಭಿಸುತ್ತದೆ.
ಜಾಕ್ ತನ್ನ ಬರ್ತ್ ನಲ್ಲಿ ಲಗೇಜ್ ಬ್ಯಾಗನ್ನು ಎಸೆದು ಡಕ್ಕಿಗೆ ಬರುತ್ತಾನೆ. ವಿಸ್ತಾರವಾಗಿ ದಶದಿಕ್ಕು ಗಳಿಗೆ ವ್ಯಾಪಿಸಿದ ಅಟ್ಲಾಂಟಿಕ್ ಸಾಗರದ ಮೇಲೆ ಹೆಮ್ಮೆಯಿಂದ ಸಾಗುತ್ತಿದ್ದ ಟೈಟಾನಿಕ್ ಹಡಗಿನ ಮುಂಭಾಗದಲ್ಲಿ ಸುತ್ತಲೂ ರಕ್ಷಣೆಗೆಂದು ಹಾಕಿದ್ದ ಕಬ್ಬಿಣದ ಸರಳುಗಳ ಮೇಲೆ ನಿಂತು ತನ್ನೆರಡು ಕೈಗಳನ್ನು ವಿಸ್ತಾರವಾಗಿ ಎಡ ಬಲಕ್ಕೆ ಎತ್ತಿ ನಾನು ಜಗತ್ತಿನ ರಾಜ ಎಂದು ಕೂಗುತ್ತಾನೆ. ಅಲೆಮಾರಿ ಜಾಕ್ ಹಡಗಿನ ಡಕ್ ಮೇಲೆ ಅನಂತಾಕಾಶ ದೆಡೆಗೆ ಮುಖ ಮಾಡಿ ಅಲ್ಲಿ ಮಿನುಗುತ್ತಿರುವ ಅಸಂಖ್ಯ ನಕ್ಷತ್ರಗಳನ್ನು ನೋಡುತ್ತ ಸುಂದರ ರಾತ್ರಿಯ ನೀರವತೆಯಲ್ಲಿ ಲೀನವಾಗಿರುತ್ತಾನೆ. ಶ್ರೀಮಂತಿಕೆಯ ದುರಾಶೆಯ ತಾಯಿ ತನ್ನ ಸ್ವಭಾವಕ್ಕೆ ಹೊಂದಿಕೆಯಾಗದ ಭಾವಿ ಪತಿ ಹಾಕ್ಲಿಯ ವರ್ತನೆಯಿಂದ ಬೇಸತ್ತ ರೋಸ್ ಆತ್ಮಹತ್ಯೆ ಮಾಡಿ ಕೊಳ್ಳಬೇಕೆನ್ನುವ ಉದ್ದೇಶದಿಂದ ಹಡಗಿನ ಡಕ್ಕಿನ ತುದಿಗೆ ಬರುತ್ತಾಳೆ. ಸಂಧರ್ಭವನ್ನು ಗ್ರಹಿಸಿದ ಡಕ್ ಮೇಲೆ ಮಲಗಿದ್ದ ಜಾಕ್ ನೀರಿಗೆ ಹಾರುವ ಯತ್ನವನ್ನು ಕೈಬಿಟ್ಟು ಮರಳಿ ಬಾ ಎಂದು ರೋಸ್ ಳನ್ನು ಕರೆಯುತ್ತಾನೆ. ಸಿಟ್ಟುಗೊಂಡ ಆಕೆ ನನ್ನನ್ನು ತಡೆಯಲು ನೀನ್ಯಾರು ? ನನ್ನ ಹತ್ತಿರ ಬರಬೇಡ ಎನ್ನುತ್ತಾಳೆ. ಸಂಧರ್ಭವನ್ನು ಜಾಕ್ ನಿಭಾಯಿಸುವ ರೀತಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯುವಂತೆ ಕ್ಯಾಮರೂನ್ ನಿರ್ದೇಶಿಸಿದ್ದಾನೆ. ಸಿಗರೇಟನ್ನು ಸಾಗರಕ್ಕೆ ಎಸೆಯುವ ನೆಪದಲ್ಲಿ ರೋಸ್ ಅನುಮತಿ ಯನ್ನು ಪಡೆದು ಅವಳನ್ನು ಸಮೀಪಿಸುತ್ತಾನೆ. ಆಕೆಯನ್ನು ಉದ್ದೇಶಿಸಿ ಏ ಹುಡುಗಿ! ಈ ಸಾಗರದಲ್ಲಿ ಅಸಂಖ್ಯ ಶಾರ್ಕಗಳಿವೆ ಮೊಸಳೆಗಳಿವೆ, ಅವು ನಿನ್ನನ್ನು ಹರಿದು ತಿಂದು ಬಿಡುತ್ತವೆ ಮೇಲಾಗಿ ನೀರು ತುಂಬಾ ತಣ್ಣಗಿದೆ ಏನು ಮಾಡುತ್ತಿ ಆಲೋಚಿಸು ಎಂದು ಬಗೆ ಬಗೆಯಾಗಿ ಆಕೆಗೆ ವಾಸ್ತವದ ಪರಿಚಯ ಮಾಡಿ ಕೊಡುತ್ತಾನೆ. ಜಾಕ್ ಧ್ವನಿಯ ಮಾರ್ದವತೆಗೆ ಸಭ್ಯ ನಡೆಗೆ ಮನಸೋತ ಆಕೆ ಆತ್ಮಹತ್ಯೆ ಪ್ರಯತ್ನವನ್ನು ಕೈಬಿಡುತ್ತಾಳೆ. ಜಾಕ್ ಕೈ ಹಿಡಿದು ಆಕೆಯನ್ನು ಹಡಗಿನೊಳಕ್ಕೆ ಎಳೆದು ಕೊಳ್ಳುವ ವೇಳೆ ಆಕೆಯ ಕಾಲು ಜಾರಿ ಜಾಕ್ ನ ಕೈ ಹಿಡಿದು ನೇತಾಡ ತೊಡಗಿದ ಆಕೆ ಭಯದಿಂದ ಕಂಪಿಸಿ ಕೂಗಿಕೊಳ್ಳುತ್ತಾಳೆ. ಆಕೆಗೆ ಧೈರ್ಯ ನೀಡಿ ಜಾಕ್ ಆಕೆಯನ್ನು ಹಡಗಿನೊಳಕ್ಕೆ ಎಳೆದು ಕೊಂಡಾಗ ಆಯತಪ್ಪಿದ ಇಬ್ಬರೂ ಡಕ್ಕಿನ ಮೇಲೆ ಬೀಳುತ್ತಾರೆ. ಆಕೆ ಕೂಗಿ ಕೊಂಡದ್ದನ್ನು ಕೇಳಿದ ಕಾಲ್ ಹಾಕ್ಲಿ ಮತ್ತು ಆಕೆಯ ತಾಯಿ ಹಾಗೂ ಹಡಗಿನ ಸಿಬ್ಬಂದಿ ಸ್ಥಳಕ್ಕೆ ಬರುತ್ತಾರೆ. ಬಟ್ಟೆ ಅಸ್ತವ್ಯಸ್ತಗೊಂಡ ಸ್ಥಿತಿಯಲ್ಲಿದ್ದ ರೋಸ್ ಳನ್ನು ನೋಡಿದ ಅವರು ಜಾಕ್ ಆಕೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿರಬಹುದೆಂದು ಭಾವಿಸಿ ಅವನನ್ನು ಖಂಡಿಸಿ, ಹಡಗಿನ ಸಿಬ್ಬಂದಿ ವರ್ಗ ಅವನ ಮೇಲೆ ಕ್ರಮಕ್ಕೆ ಮುಂದಾದಾಗ, ಜಾಕ್ ಅಹವಾಲನ್ನು ಯಾರೂ ಕೇಳದ ಸ್ಥಿತಿ ಯಲ್ಲಿರುವಾಗ ರೋಸ್ ಆತನ ರಕ್ಷಣೆಗೆ ಬಂದು ಅದೊಂದು ಅಕಸ್ಮಿಕ ಘಟನೆಯೆಂದು ವಿವರಸುತ್ತಾಳೆ.
ಅದಕ್ಕೆ ಪ್ರತಿಯಾಗಿ ಆ ರಾತ್ರಿಯ ಔತಣ ಕೂಟಕ್ಕೆ ಜಾಕ್ ಆಹ್ವಾನ ಪಡೆಯುತ್ತಾನೆ. ಸುಸಂಕೃತ ಸಮಾಜದ ನಯ ನಾಜೂಕಿನ ನಡತೆಗಳ ಪರಿಚಯವಿಲ್ಲದ ಅಮಾಯಕ ಮುಗ್ಧ ಜಾಕ್ ಗೆ ಸನ್ನೆ ಹಾಗೂ ಪಿಸು ಮಾತುಗಳ ಮೂಲಕ ಡಿನ್ನರ್ ವೇಳೆ ಅನುಸರಿಸುವ ವಿಧಾನಗಳ ಬಗ್ಗೆ ಪಿಸು ನುಡಿಯುತ್ತಿದ್ದ ಸಂಧರ್ಭವನ್ನು ನೆನಪಿಸಿಕೊಳ್ಳುತ್ತ ರೋಸ್ ತನ್ನ್ನು ಸುತ್ತುವರಿದು ಕುಳಿತಿದ್ದ ಬ್ರ್ಯಾಕ್ ಲೋವೆಟ್ ಮತ್ತು ಆತನ ತಂಡಕ್ಕೆ ವಿವರಿಸುತ್ತ ಆ ರಾತ್ರಿ ಡಿನ್ನರ್ ಬರುವ ವೇಳೆ ಸ್ವಲ್ಪ ಜಾಕ್ ಅಧೈರ್ಯವುಳ್ಳವನಾಗಿದ್ದರೂ ಧೈರ್ಯಗೆಟ್ಟಿರಲಿಲ್ಲವೆಂದು ಅಭಿಮಾನದಿಂದ ನುಡಿಯು ತ್ತಾಳೆ. ಡಿನ್ನರ್ ವೇಳೆ ಪಾನೀಯವನ್ನು ಮಿತವಾಗಿ ನಾಜೂಕಾಗಿ ಕುಡಿಯುವ ವಿಧಾನ ಗೊತ್ತಿಲ್ಲದ ಜಾಕ್ ಪಾನೀಯ ಭರಿತ ಗ್ಲಾಸನ್ನು ಎತ್ತಿ ಒಂದೇ ಗುಟುಕಿಗೆ ಮುಗಿಸಿ ಬಿಡುತ್ತಾನೆ. ಪ್ಲೇಟಿನಲ್ಲಿದ್ದ ಬನ್ ಎತ್ತಿಕೊಂಡು ತಿನ್ನಲು ಪ್ರಾರಂಭಿಸುತ್ತಾನೆ. ರೋಸ್ ಕೊಡುವ ಸಲಹೆ ಸೂಚನೆಗಳು ಯಾವುವೂ ಅಲ್ಲಿ ಲೆಖ್ಖಕ್ಕೆ ಬರದೆ ಆಕೆ ಸ್ವಲ್ಪ ಮುಜುಗರ ವನ್ನು ಅನುಭವಿಸುವಂತಾದರೂ, ಆತನ ನಿಷ್ಕಲ್ಮಷ ನಡುವಳಿಕೆ ಆಕೆಯಲ್ಲಿ ಅನುಕಂಪವನ್ನು ಹುಟ್ಟಿಸುತ್ತದೆ. ಮರದಿನ ಹಗಲು ವೇಳೆ ಜಾಕ್ ಡಕ್ಕಿನ ಮೇಲೆ ಡ್ರಾಯಿಂಗ್ ಪೇಪರ್ ಮೇಲೆ ಸ್ಕೆಚ್ ಮಾಡುತ್ತ ಕುಳಿತ ವೇಳೆ ಅಲ್ಲಿಗೆ ಬರುವ ರೋಸ್ ಕುತೂಹಲಗೊಂಡು ಆ ಸ್ಕೆಚ್ ಪುಸ್ತಕವನ್ನು ಪಡೆದು ನೋಡುತ್ತ ಹೋಗುತ್ತಾಳೆ. ಅದರಲ್ಲಿ ಮಗುವನ್ನು ಅಪ್ಪಿ ಕೊಂಡು ನಿಂತಿರುವ ತಂದೆ, ಮಗುವಿಗೆ ಹಾಲೂಡಿಸುತ್ತಿರುವ ತಾಯಿ ಮತ್ತು ವಿವಿಧ ಭಂಗಿಗಳಲ್ಲಿ ಸ್ಕೆಚ್ ಮಾಡಿದ ಹೆಣ್ಣಿನ ಚಿತ್ರಗಳನ್ನು ನೋಡುತ್ತ ಜಾಕ್ ಕಡೆಗೆ ಪ್ರಶ್ನಾರ್ಥಕ ನೋಟ ಬೀರುತ್ತಾಳೆ. ಅವಳ ಮನೋಗತವನ್ನು ಗ್ರಹಿಸಿದ ಜಾಕ್ ನಿಸ್ಸಂಕೋಚವಾಗಿ ಎಲ್ಲವನ್ನೂ ವಿವರಿಸುತ್ತ ಮುಖ ಮುಚ್ಚಿಕೊಂಡು ಬೆನ್ನ ಹಿಂದೆ ಕೈಗಳನ್ನು ಚಾಚಿ ಮಲಗಿದ ಹೆಣ್ಣಿನ ಚಿತ್ರದ ಬಗೆಗೆ ವಿವರಿಸುತ್ತ ಆ ಚಿತ್ರದ ರೂಪದರ್ಶಿ ಒಬ್ಬಳು ವೇಶ್ಯೆಯೆಂದು ಆಕೆಯ ನೀಳವಾದ ಸುಂದರ ಕೈಗಳು ಮತ್ತು ಬೆರಳುಗಳು ತನ್ನನ್ನು ಆಕರ್ಷಿಸಿದ್ದು ಕೈಗಳಿಗೆ ಪ್ರಾಧಾನ್ಯತೆಯನ್ನು ನೀಡಿ ಆ ಚಿತ್ರ ಬಿಡಿಸಿರುವುದಾಗಿ ಮುಚ್ಚು ಮರೆಯಿಲ್ಲದೆ ವಿವರಿಸುತ್ತಾನೆ. ಆತನ ನಿಷ್ಕಲ್ಮಷ ಮುಕ್ತ ನಡವಳಿಕೆಗೆ ಮನಸೋತ ರೋಸ್ ಮಾನಸಿಕವಾಗಿ ಜಾಕನಿಗೆ ಹತ್ತಿರವಾಗುತ್ತ ಹೋಗುತ್ತಾಳೆ. ತನ್ನ ಸಿರಿವಂತಿಕೆ ಮತ್ತು ಸ್ಥಾನ ಮಾನಗಳ ಬಲ ದಿಂದ ಆಕೆಯನ್ನು ಗೆಲ್ಲಲು ಆಕೆಯ ಭಾವಿ ಪತಿ ಕಾಲ್ ಹಾಕ್ಲಿ ಪ್ರಯತ್ನಿಸಿ ಇಪ್ಪತ್ತೆರಡು ಕ್ಯಾರೆಟ್ಟಿನ ನೀಲಿ ಬಣ್ಣದ ವಜ್ರದ ಹರಳಿನ ನೆಕ್ಲೆಸನ್ನು ರೋಸ್ ಳಿಗೆ ನೀಡುತ್ತಾನೆ. ಆದರೆ ಕೋಮಲ ಮನದ ತನ್ನ ಭಾವಿ ವಧುವಿನ ಹೃದಯವನ್ನು ಅರಿಯದ ಹಾಕ್ಲಿ ಅವಳ ಮನದಾಳದಿಂದ ಮರೆಯಾಗುತ್ತ ಸಾಗುತ್ತಾನೆ. ಚಿತ್ರ ಪ್ರೇಕ್ಷಕರನ್ನು ತನ್ನೊಳಗೆ ಸೆಳೆದು ಕೊಳ್ಳುತ್ತ ಮುಂದುವರಿಯುತ್ತ ಹೋಗುತ್ತದೆ.
ರೋಸ್ ಆ ರಾತ್ರಿ ಜಾಕ್ ಡಾಸನ್ನನನ್ನು ತನ್ನ ಚಿತ್ರವನ್ನು ಬಿಡಿಸಲು ತನ್ನ ಖಾಸಗಿ ಕೋಣೆಗೆ ಆಹ್ವಾನಿಸುತ್ತಾಳೆ. ರೋಸ್ ಕುಳಿತು ಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಸೋಫಾವನ್ನು ಇರಿಸಿ ದಿಂಬುಗಳನ್ನು ಎಡ ಮತ್ತು ಬಲ ಬದಿಗಳಲ್ಲಿ ಹೊಂದಿಸಿ ಇಟ್ಟು ಸುಮಾರು ಅಂತರದಲ್ಲಿ ಡ್ರಾಯಿಂಗ್ ಶೀಟ್ ಹಿಡಿದುಕೊಂಡು ಪೆನ್ಸಿಲ್ಲನ್ನು ಹೆರೆದು ಅಣಿಗೊಳಿಸಿ ಕೊಳ್ಳುತ್ತ ಕುಳಿತಿರುತ್ತಾನೆ. ಆಗ ತನ್ನ ಡ್ರೆಸ್ಸಿಂಗ್ ರೂಮಿನಿಂದ ಕಪ್ಪು ಬಣ್ಣದ ಗೌನು ಮತ್ತು ಮೇಲು ಹೊದಿಕೆಯನ್ನು ಹೊದ್ದ ರೋಸ್ ಬರುತ್ತಾಳೆ. ಅವಳ ಸ್ನಿಗ್ಧ ಸೌಂದರ್ಯ ಮತ್ತು ನಿಂತಿರುವ ಭಾವ ಭಂಗಿಯನ್ನು ನೋಡಿ ಗರಬಡಿದವ ನಂತಾಗುತ್ತಾನೆ. ನಂತರ ಸಾವರಿಸಿಕೊಂಡು ಸೋಫಾ ಮೇಲೆ ಚಿತ್ರ ರಚನೆಗೆ ಅನುಕೂಲವಾಗುವ ರೀತಿಯ ಭಂಗಿಯಲ್ಲಿ ಕುಳಿತು ಕೊಳ್ಳುವಂತೆ ಸೂಚಿಸುತ್ತಾನೆ. ಮೇಲು ಹೊದಿಕೆ ಮತ್ತು ಗೌನನ್ನು ಕಳಚಿ ವಿವಸ್ತ್ರಳಾದ ರೋಸ್ ಳನ್ನು ನೋಡಿ ಒಂದು ಕ್ಷಣ ವಿಚಲಿತನಾದ ಜಾಕ್ ತಕ್ಷಣ ಸಾವರಿಸಿಕೊಂಡು ಸೋಫಾ ಮೇಲೆ ದಿಂಬುಗಳಿಗೆ ಒರಗಿ ಮಲಗಿದ ಭಂಗಿಯಲ್ಲಿ ಪವಡಿಸುವಂತೆ ಸೂಚಿಸುತ್ತಾನೆ. ಆಕೆಯ ಕತ್ತಿನಲ್ಲಿ ಕಾಲ್ ಹಾಕ್ಲಿ ಕೊಟ್ಟ ನೀಲಿ ಬಣ್ನಧ ವಜ್ರದ ನೆಕ್ಲೆಸ್ ಬಿಟ್ಟರೆ ಮತ್ತೇನೂ ಇರುವುದಿಲ್ಲ. ಆ ಸೂಕ್ಷ್ಮ ಸನ್ನೆವೇಶವನ್ನು ಕ್ಯಾಮರೂನ್ ಚಿತ್ರೀಕರಿಸಿದ ನೈಪುಣ್ಯತೆಯ ರೀತಿಗೆ ಪ್ರೇಕ್ಷಕ ತಲೆದೂಗಲೆ ಬೇಕಾಗುತ್ತದೆ. ಹಿತ ಮಿತವಾಗಿ ಕೇಟ್ ಳನ್ನು ಪರದೆಯ ಮೇಲೆ ಕ್ಯಾಮರೂನ್ ತೋರಿಸಿದ್ದಾನೆ. ತುಂಡು ಲಂಗ ಧರಿಸಿದ ಹೆಣ್ಣು ಪರದೆಯ ಮೇಲೆ ಕಾಣಿಸಿ ಕೊಂಡರೆ ಸಾಕು ಸೀಟಿ ಮತ್ತು ವಿಚಿತ್ರ ಕೂಜನಗಳಿಂದ ಸ್ವಾಗತಿಸುವ ಪ್ರೇಕ್ಷಕರನ್ನು ಕಾಣುವ ನಾವು ಮೇಲ್ಕಂಡ ದೃಶ್ಯ ತೆರೆಯ ಮೇಲೆ ಮೂಡಿ ಬಂದಾಗ ತುಂಬಿದ ಥಿಯೆಟರ್ ನಲ್ಲಿ ಒಂದೇ ಒಂದು ಕೂಗು ಮತ್ತು ಸೀಟಿಗಳು ನಮಗೆ ಕೇಳಿ ಬರುವುದಿಲ್ಲ. ಯಾಕೆಂದರೆ ಅಲ್ಲಿ ಯಾವ ಕ್ಷಣದಲ್ಲೂ ಅಶ್ಲೀಲ ಭಾವ ಬಾರದಂತೆ ಕ್ಯಾಮರೂನ್ ಆ ದೃಶ್ಯವನ್ನು ಕಲಾತ್ಮಕವಾಗಿ ನವಿರಾಗಿ ಚಿತ್ರೀಕರಿಸಿದ್ದಾನೆ. ಇದು ಕ್ಯಾಮರೂನ್ ನಿರ್ದೇಶನದ ಮೇಲೆ ಸಾಧಿಸಿದ ಹಿಡಿತವನ್ನು ತೋರಿಸುತ್ತದೆ. ತನ್ನೆದುರು ತನ್ನೆಲ್ಲ ಸೌಂದರ್ಯವನ್ನು ತೆರೆದಿಟ್ಟು ಚಿತ್ರ ರಚನೆಗೆ ಪೂರಕವಾದ ಭಂಗಿಯಲ್ಲಿ ಮಲಗಿದ ರೋಸ್ ಳನ್ನು ನೋಡಿ ವಿಚಲಿತನಾಗದೆ ಅವಳ ಚಿತ್ರವನ್ನು ಬಿಡಿಸುತ್ತಾನೆ. ಆತನ ಸುಸಂಸ್ಕೃತ ನಡವಳಿಕೆ ರೋಸ್ ಮನವನ್ನು ಗೆಲ್ಲುತ್ತದೆ ಅದರಂತೆ ಪ್ರೇಕ್ಷಕರನ್ನೂ ಸಹ. ಜಾಕ್ ಬಿಡಿಸಿದ ತನ್ನ ಚಿತ್ರವನ್ನು ನೋಡಿದ ರೋಸ್ ಅದನ್ನು ತನ್ನ ಖಾಸಗಿ ಕೋಣೆಯಲ್ಲಿರುವ ತಿಜೋರಿ ಯಲ್ಲಿ ಭದ್ರವಾಗಿ ಇಡುತ್ತಾಳೆ.
ನಂತರ ರೋಸ್ ಮತ್ತು ಜಾಕ್ ಡಾಸನ್ ಪರಸ್ಪರ ಮಾನಸಿಕವಾಗಿ ಹತ್ತಿರವಾಗುತ್ತ ಹೋಗುತ್ತಾರೆ. ಈ ವಿಷಯ ತಿಳಿದ ಕಾಲ್ ಹಾಕ್ಲಿ ರೋಸ್ ಳನ್ನು ಪ್ರಶ್ನಿಸಿ ವ್ಯಂಗ್ಯವಾಗಿ ಮಾತನಾಡಿ ಆಕೆಯ ಕೆನ್ನೆಗೆ ಬಾರಿಸುತ್ತಾನೆ. ರೋಸ್ ಅವಮಾನದಿಂದ ಕುದ್ದು ಹೋಗುತ್ತಾಳೆ ವಿಷಯದ ವಾಸನೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ ರೋಸ್ ಳ ತಾಯಿ ಏಕಾಂತದಲ್ಲಿ ಮಗಳನ್ನು ಕರೆದು ಜಾಕ್ ಬಗೆಗೆ ಗಟ್ಟಿಯಾಗಿ ಪ್ರಶ್ನಿಸಿ ಆತನಿಗೆ ಏನು ಇದೆ ? ಅವನೊಬ್ಬ ಅಲೆಮಾರಿ ಚಿತ್ರಕಾರ ಜೊತೆಗೆ ನೆಲೆ ಇಲ್ಲದವ ನಿನ್ನನ್ನು ಸರಿಯಾಗಿ ನೋಡಿ ಕೊಳ್ಳುವನೆ ? ನಿನಗಾಗಿ ನಾನು ಏನೆಲ್ಲ ಕಷ್ಟ ಪಟ್ಟಿದ್ದೇನೆ, ತಿಳಿದುಕೋ ಹಾಕ್ಲಿಯೆ ನಿನ್ನ ಗಂಡ ಎಂದು ವಾಸ್ತವ ಸ್ಥಿತಿಯನ್ನು ಮನಗಾಣಿಸುತ್ತಾಳೆ ತಾಯಿಯ ಹಿತವಚನಕ್ಕೆ ಕಟ್ಟು ಬಿದ್ದ ರೋಸ್ ಪ್ರಯತ್ನ ಪೂರ್ವಕವಾಗಿ ಜಾಕ್ನನ್ನುಮರೆಯಲುಪ್ರಯತ್ನಿಸುತ್ತಾಳೆ.ಅಷ್ಟರಲ್ಲಾಗಲೆ ತನಗರಿಯದಂತೆ ರೋಸ್ ಳನ್ನು ಪ್ರೀತಿಸಲು ತೊಡಗಿದ್ದ ಜಾಕ್ ಆಕೆಯನ್ನು ಏಕಾಂತದಲ್ಲಿ ಭೇಟಿಯಾಗಿ ತಾನು ಆಕೆಯನ್ನು ಪ್ರೀತಿಸುತ್ತಿರುವ ವಿಷಯವನ್ನು ರೋಸ್ ಳಿಗೆ ಹೇಳುತ್ತಾನೆ. ಜಾಕ್ ನನ್ನು ತಿರಸ್ಕರಿಸಲಾಗದೆ ಹಾಕ್ಲಿಯನ್ನು ಒಪ್ಪದೆ ತಾಯಿಯನ್ನು ಬೇಸರಿಸಬಾರದೆಂಬ ಗೊಂದಲದಲ್ಲಿದ್ದ ರೋಸ್ ತಾನು ಜಾಕ್ ನನ್ನು ಪ್ರೀತಿಸುವುದು ಸಾಧ್ಯವಿಲ್ಲವೆಂದು ನುಡಿಯುತ್ತಾಳೆ. ಈ ಘಟ್ಟದಲ್ಲಿ ಒಂದು ದೃಶ್ಯವನ್ನು ನಿರ್ದೇಶಕ ಎಷ್ಟು ಸಾಂಧರ್ಭಿಕ ವಾಗಿ ಕಥೆಗೆ ತಿರುವು ಕೊಡಲು ಬಳಸಿದ್ದಾನೆಂದರೆ ಜಾಕನ ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿ ಬಂದ ರೋಸ್ ಅನ್ಯಮನಸ್ಕಳಾಗಿ ತನ್ನ ತಾಯಿಯೊಡನೆ ಭೋಜನ ಕೂಟದಲ್ಲಿ ಕುಳಿತಾಗ ಆಕೆಯ ಮನ ಅನತಿ ದೂರದಲ್ಲಿ ಟೇಬಲ್ ಮುಂದೆ ಕುಳಿತ ಸಣ್ಣ ಮಗು ಮತ್ತು ಅದರ ತಾಯಿಯಡೆಗೆ ಹರಿಯುತ್ತದೆ. ಆ ತಾಯಿ ತನ್ನ ಮಗುವಿಗೆ ಸರಿಯಾಗಿ ಕುಳಿತುಕೊ ವಸ್ತ್ರವನ್ನು ತೊಡೆಯ ಮೇಲೆ ಹೀಗೆ ಹರಡಿಕೊ, ಫೋರ್ಕನ್ನು ಕೈಯಲ್ಲಿ ಹೀಗೆ ಹಿಡಿದುಕೋ ಎಂದು ಮುಂತಾಗಿ ಶಿಷ್ಟಾಚಾರವನ್ನು ಕಲಿಸುವುದನ್ನು ನೋಡುತ್ತಾಳೆ. ಜಾಕ್ ಡಾಸನ್ ಮತ್ತು ಕಾಲ್ ಹಾಕ್ಲಿಯವರ ಪೈಕಿ ಯಾರನ್ನು ಆಯ್ದು ಕೊಳ್ಳುವುದು ಎಂಬ ಗೊಂದಲದಲ್ಲಿ ಬಿದ್ದ ರೋಸ್ ಮಗುವಿಗೆ ತಾಯಿ ಕಲಿಸುತ್ತಿದ್ದ ಶಿಷ್ಟಾಚಾರವನ್ನು ನೋಡಿ ಒಂದು ವೇಳೆ ತಾನು ಕಾಲ್ ಹಾಕ್ಲಿಯನ್ನು ವರಿಸಿದರೆ ಆತನ ಶಿಷ್ಟಾಚಾರದ ಒತ್ತಡಗಳಿಗೆ ಮಣಿದು ಆತನ ಕೈಗೊಂಬೆಯಾಗಿ ಬದುಕ ಬೇಕಾಗುತ್ತದೆ ಎನ್ನುವುದನ್ನು ಗ್ರಹಿಸಿದ ರೋಸ್ ಸಿರಿವಂತನಲ್ಲದಿದ್ದರೂ ತನ್ನನ್ನು ಗೌರವಿಸುವ ಮತ್ತು ಪ್ರೀತಿಸುವ ಯಾವುದೆ ನಿರ್ಭಂಧ ಹೇರದ ಜಾಕ್ ನನ್ನು ನೆನೆದು ರೋಸ್ ಮನಸ್ಸು ಸ್ವಾತಂತ್ರವನ್ನು ಬಯಸಿ ಜಾಕ್ ಡಾಸನ್ ಕಡೆಗೆ ವಾಲುವುದನ್ನು ನಿರ್ದೇಶಕ ಬಹಳ ಅರ್ಥಗರ್ಭಿತವಾಗಿ ನವಿರಾಗಿ ಚಿತ್ರೀಕರಿಸಿದ್ದಾನೆ. ತಕ್ಷಣ ಡೈನಿಂಗ್ ಟೇಬಲ್ ನಿಂದ ಎದ್ದ ರೋಸ್ ಹಡಗಿನ ಮೇಲ್ಭಾಗದ ಡಕ್ ಮೇಲೆ ಇದ್ದ ಜಾಕ್ ಬಳಿ ಓಡಿ ಬಂದು ನಾನು ನನ್ನ ಮನಸನ್ನು ಬದಲಿಸಿದ್ದೇನೆ ಎಂದು ತಿಳಿಸುತ್ತಾಳೆ. ರೋಸ್ ಮನಗೆದ್ದ ಸಂತಸದಲ್ಲಿ ಜಾಕ್ ಆಕೆಯನ್ನ ಹಡಗಿನ ಮುಂಚೂಣಿಗೆ ಕಟಾಂಜನದ ಹತ್ತಿರ ಕರೆದೊಯ್ಯುತ್ತಾನೆ. ಪ್ರರಸ್ಪರರ ಪ್ರೀತಿ ಗೆದ್ದ ಸಂತಸದಲ್ಲಿದ್ದ ಇಬ್ಬರೂ ಮುಳುಗಿದ್ದಾರೆ. ಜಾಕ್ ರೋಸ್ ಗೆ ಕಟಾಂಜನಕ್ಕೆ ಅಳವಡಿಸಿದ ಕಬ್ಬಿಣದ ಸರಳುಗಳನ್ನು ಏರಿ ನಿಲ್ಲುವಂತೆ ಸೂಚಿಸುತ್ತಾನೆ. ಹಡಗಿನ ಎತ್ತರ ಮತ್ತು ನೀರಿನ ಆಳವನ್ನು ನೋಡಿ ರೋಸ್ ಒಂದು ಕ್ಷಣ ಹಿಂಜರಿಯುತ್ತಾಳೆ. ಜಾಕ್ ಆಕೆಗೆ ಧೈರ್ಯ ನೀಡುತ್ತಾನೆ. ತನ್ನ ಮನಗೆದ್ದ ಜಾಕ್ ಪ್ರೋತ್ಸಾಹಿಸುತ್ತಿರುವಾಗ ಯಾಕಾಗಬಾರದು? ಜಾಕ್ ಸಹಾಯದಿಂದ ಡಕ್ ನ ಮುಂಭಾಗದ ಕಟಾಂಜನವನ್ನು ಏರಿ ನಿಲ್ಲುತ್ತಾಳೆ ಆಕೆಯ ಹಿಂಭಾಗದಲ್ಲಿ ಆಕೆಗೆ ಆಸರೆಯಾಗಿ ಜಾಕ್ ನಿಲ್ಲುತ್ತಾನೆ. ಎದುರುಗಡೆ ಸುಧೀರ್ಘವಾಗಿ ಸುತ್ತಲೂ ಅಂತ್ಯವೆ ಕಾಣದಂತೆ ವಿಸ್ತಾರಕ್ಕೆ ಹರಡಿ ಕೊಂಡಿದ್ದ ನೀಲಿ ಸಮುದ್ರ ಮೇಲೆ ದೃಷ್ಟಿ ಹಾಯಿಸಿದರೆ ಅನಂತ ಆಕಾಶ, ದೂರ ದೂರಕೆ ದಿಟ್ಟಿಸಿದರೆ ಸಾಗರ ಮತ್ತು ಆಕಾಶಗಳು ಮಿಳಿತ ಗೊಂಡಂತೆ ಕಾಣುತ್ತಿವೆ. ರೋಸ್ ಳ ಯೌವನ ಜಾಕ್ ಮನಗೆದ್ದ ಹರುಷ ತನ್ನ ವೇಗವನ್ನು ವೃದ್ಧಿಸಿಕೊಂಡು ಅಟ್ಲಾಂಟಿಕ್ ಸಾಗರದಲ್ಲಿ ಸಾಗುತ್ತಿರುವ ಟೈಟಾನಿಕ್ ಹಡಗು, ಧೈರ್ಯ ತುಂಬುತ್ತ ತನಗೆ ಆಸರೆಯಾಗಿ ನಿಂತಿರುವ ಜಾಕ್, ಸಂತಸದ ಉನ್ಮಾದದಲ್ಲಿ ರೋಸ್ ಮುಕ್ತವಾಗಿ ನಗುತ್ತಾಳೆ ಕೂಗುತ್ತಾಳೆ, ಆಕೆಯ ಸಂತಸದಲ್ಲಿ ಜಾಕ್ ಸಹ ಪಾಲ್ಗೊಳ್ಳುತ್ತಾನೆ ಎಂತಹ ರಸಮಯ ಗಳಿಗೆ ಅದು ! ನಿರ್ದೇಶಕ ಕ್ಯಾಮರೂನನ ಅದ್ಭುತ ಪರಿಕಲ್ಪನೆಗೆ ಯಾರು ಬೆರಗಾಗದೆ ಇರಲು ಸಾಧ್ಯ?
ಚಿತ್ರಕೃಪೆ: ಗೂಗಲ್ ತಾಣ ( ಮುಂದುವರಿದುದು )
*
Comments
ಉ: ' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯಕಾವ್ಯ ' (ಬಾಗ 3)
ಪಾಟೀಲರೆ ನಮಸ್ಕಾರ. ಕ್ಯಾಮರೂನನ ನಿರ್ದೇಶನ ಅದ್ಭುತವೊ, ಅಲ್ಲವೊ - ಅದರೆ ಇಲ್ಲಿ ನಿಮ್ಮ ವಿವರಣೆ ಮಾತ್ರ ಅದ್ಭುತ! ಸಾಮಾನ್ಯ ನೋಟಕ್ಕೆ ಅರಿವಾಗದ ಸೂಕ್ಷ್ಮಗಳನ್ನೆಲ್ಲ ಸೊಗಸಾಗಿ ಬಿಚ್ಚಿ ತೋರಿಸುತ್ತ ಸಾಗುವ ಬರಹ ಮೂರು ಕಂತು ಮೀರಿ ಮುನ್ನಡೆದರೂ ರಸವತ್ತಾಗಿರುವುದರಲ್ಲಿ ಸಂದೇಹವಿಲ್ಲ. ನಿಮ್ಮ ಸಿನೆಮಾ ಅಭಿರುಚಿ ಮತ್ತು ಆಸಕ್ತಿ, ಶ್ರದ್ದೆಗಳಿಗೆ ಅಭಿನಂದನೆಗಳು !
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯಕಾವ್ಯ ' (ಬಾಗ 3) by nageshamysore
ಉ: ' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯಕಾವ್ಯ ' (ಬಾಗ 3)
ನಾಗೇಶ ಮೈಸೂರು ರವರಿಗೆ ವಂದನೆಗಳು
ಈ ಲೇಖನ ಕುರಿತ ತಮ್ಮ ಬೇಸರಿಯದೆ ತೋರಿದ ಪ್ರತಿಕ್ರಿಯೆ ನನಗೆ ಸಂತಸ ತಂದಿದೆ, ಈ ಚಿತ್ರ ನನ್ನ ಮೇಲೆ ಮಾಡಿದ ಪ್ರಭಾವವನ್ನು ಆತ್ಮೀಯರಾದ ಸಂಪದಿಗರೊಂದಿಗೆ ಹಂಚಿಕೊಳ್ಳ ಬೇಕೆಂಬ ಇರಾದೆ ನನ್ನಲ್ಲಿ ಬಹು ದಿನಗಳಿಂದ ಇತ್ತು, ನನ್ನ ಸೋಮಾರಿತನದಿಂದಾಗಿ ಬರೆಯ ಲಾಗಿರಲಿಲ್ಲ. ಈ ಬರಹವನ್ನು ಹೆಚ್ಚಿಗೆ ಬೆಳೆಸಲು ಹೋಗುವುದಿಲ್ಲ, ಕೊನೆಯ ಕಂತಿನಲ್ಲಿ ಮುಗಿಸುವೆ, ಧನ್ಯವಾದಗಳು.