ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು .....!

ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು .....!

ನಲ್ಲೆಯೊಬ್ಬಳು ಮೊಟ್ಟ ಮೊದಲ ಬಾರಿಗೆ ಕೈ ಹಿಡಿದಾಗ ಆಗುವ ಅನುಭವ, ಅನುಭೂತಿ, ಉದ್ವೇಗ, ಉಲ್ಲಾಸ, ಕಳವಳ, ಭೀತಿಗಳೆಲ್ಲದರ ಸಂಗಮಿಸಿದ ಅನುಭವ ಈ ಕವನದ ಆಶಯ. ಕೈ ಹಿಡಿಯಲು ಯಾವುದೊ ನೋವೆ ಕಾರಣವಾದರೂ, ಆ ನೆಪದ ಸ್ಪರ್ಶವೆ ಹುಟ್ಟಿಸುವ ಭಾವೋನ್ಮಾದದ ಉತ್ಕರ್ಷ ಇಲ್ಲಿ ವ್ಯಕ್ತವಾಗಿದೆ.

ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು .....!
______________________________

ಹೆಪ್ಪುಗಟ್ಟಿದ ಮೋಡ ಭೋರ್ಗರೆದು ಸುರಿದಂತೆ
ಎದೆಯೊಳಗೆ ನೂರು ನದಿ ತಡೆ ಕಿತ್ತು ಹರಿದಂತೆ
ಕನಸೊ? ನನಸೋ ! ಬೆರಗು ಮೂಡಿತ್ತು
ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು ||

ಕಾಲ ಚಕ್ರದ ಚಲನೆ ಸ್ತಬ್ದವಾದಂತೆ
ಹೃದಯ ಕೋಶವೇ ದಹಿಸಿ ದಗ್ಧವಾದಂತೆ
ಭಾವದಾಭಾವದಲಿ ಮನವು ಮುಳುಗಿತ್ತು
ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು ||

ಮನದ ಮಾತುಗಳನ್ನು ಮೌನ ಮರೆಸಿತ್ತು
ನೂರೆಂಟು ಆಸೆಗಳ ಕಣ್ಣು ಅರಸಿತ್ತು
ಮೈ ಪೂರ 'ಜುಂ' ಎನಿಸಿ ಪುಳಕದಾ ಮತ್ತು
ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು ||

ಅಪ್ಪಿದಾ ಕೈಗಳಲದೇನು ಸಂಚಲನೆ
ಅನುಭಾವದಾ ಝರಿಯ ಮಿಂಚಿನಾ ಚಲನೆ
ಪದ ಹಿಡಿಯಲಾಗದಾ ಅನುಭೂತಿಯಿತ್ತು
ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು ||

ಯಾವ ಯಾತನೆ ನಿನ್ನ ಹಾಗೆ ಕಾಡಿತ್ತೋ?
ಯಾವ ನೋವಿನ ಚಿತ್ರ ಕರುಳ ಹಿಂಡಿತ್ತೊ?
ಆಸರೆಯ ಬಯಸಿ ಲತೆ ಬಳಸಿದಂತಿತ್ತು
ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು ||

ತೆರೆದ ಬಾಹುಗಳೊಳಗೆ ಅಪ್ಪಿ ನಿನ್ನನು ಹಿಡಿದು
ಮೆತ್ತನೆಯ ಮಡಿಲಲ್ಲಿ ನೋವುಗಳ ತಡೆತಡೆದು
ಸಂತೈಸುವ ತುಡಿತ ಮನದಿ ಮೂಡಿತ್ತು
ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು ||

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Comments

Submitted by H A Patil Fri, 01/17/2014 - 20:53

ನಾಗೇಶ ಮೈಸೂರು ರವರಿಗೆ ವಂದನೆಗಳು
ಕವನ ಚೆನ್ನಾಗಿ ಮೂಡಿ ಬಂದಿದೆ, ಒಂದೊಂದು ನುಡಿಯೂ ಮನ ಮುಟ್ಟುವಂತಿವೆ. ಭಾವಪೂರ್ವಕವಾಗಿ ಪ್ರೇಮವನ್ನು ಕವನದಲ್ಲಿ ಅನಾವರಣ ಗೊಳಿಸಿದ್ದಿರಿ, ಕವನ ಓದಿ ಖುಷಿಯಾಯಿತು, ಧನ್ಯವಾದಗಳು.

Submitted by nageshamysore Sat, 01/18/2014 - 15:40

In reply to by H A Patil

ಪಾಟೀಲರೆ ನಮಸ್ಕಾರ. ಈ ಕವನವೂ ತೊಂಭತ್ತರ ಆಸು ಪಾಸಿನಲ್ಲಿ ಬರೆದದ್ದು. ನನ್ನ ಕೆಲ ಮಿತ್ರರಿಗೂ ತುಂಬಾ ಇಷ್ಟವಾಗಿದ್ದ ಸರಳ ಕವನ ಇದು. ನಾನು ಬಹುಶಃ 'ಯೂಥ್ ಅಪೀಲ್' ಇರಬಹುದಾದ ಕವನ ಅಂದುಕೊಂಡಿದೆ. ತಮ್ಮ ಕವಿ ಹೃದಯದ ಕದವನ್ನು ಸಹ ತಟ್ಟಿತೆಂದರೆ, ಅದರಲ್ಲಿನ ಥೀಮು ತೀರಾ ಅಪ್ರಸ್ತುತವಲ್ಲ - ಈ ಕಾಲಮಾನದ ಪರಿಗಣನೆಯಲ್ಲೂ ಎನ್ನಬಹುದು. ತಮ್ಮು ಸುಂದರ ಪ್ರತಿಕ್ರಿಯೆಗೆ ನಮನಗಳು :-)

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು