' ಸುಚಿತ್ರ ' ತೇರೆ ಬಿನಾ ಜಿಂದಗಿ ಕೋಯಿ ಸಿಕವಾ ನಹಿ
ಇಂದು ಬೆಳಿಗ್ಗೆ ಮಾಮೂಲಿನಂತೆ ದೂರ ದರ್ಶನ ಜಾಲವನ್ನು ಆನ್ ಮಾಡಿದಾಗ ಸುದ್ದಿ ತುಣುಕೊಂದು ಗಮನ ಸೆಳೆಯಿತು. ಆದರೆ ಅದು ಸಂತಸದ ಸುದ್ದಿಯಾಗಿರದೆ ಮಾಮೂಲಿನಂತೆ ವಿದಾಯದ ವಿಷಾದದ ಸುದ್ದಿ ಅದಾಗಿತ್ತು. ನಿನ್ನೆ ದಿನ ಹಿಂದೆ ಚಿಕಿತ್ಸೆಗಾಗಿ ಕೊಲ್ಕತ್ತಾ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದು ಆಕೆ ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ 17 ರಂದು ಬೆಳಿಗ್ಗೆ 8 ಗಂಟೆ 26 ನಿಮಿಷಕ್ಕೆ ಆಸ್ಪತ್ರೆಯಲ್ಲಿ ತನ್ನ ಕೊನೆಯುಸಿರೆಳೆದಿದ್ದಾಳೆ. ಅದು ಭಾರತೀಯ ಚಿತ್ರ ರಂಗದ ಖ್ಯಾತ ನಟಿ ಸುಚಿತ್ರಸೇನಳ ಸಾವಿನ ಸುದ್ದಿ. ಸುಮಾರು 82 ವರ್ಷ ಪ್ರಾಯದ ಬೆಂಗಾಲಿ ಸುಂದರಿ ಬದುಕಿಗೆ ವಿದಾಯ ಹೇಳಿ ನೇಪಥ್ಯಕ್ಕೆ ಸರಿದು ಹೋಗಿದ್ದಾಳೆ. ಈ ಹೆಸರು ಬರಿ ಬಂಗಾಲಿಯಲ್ಲಿ ಮಾತ್ರ ಪ್ರಚಲಿತದಲ್ಲಿದ್ದ ಹೆಸರು ಮಾತ್ರವಲ್ಲ ಹಿಂದಿ ಚಲನಚಿತ್ರ ರಂಗದಲ್ಲಿ ಸಹ ತನ್ನದೆ ಛಾಪು ಮೂಡಿಸಿದ ನಟಿ ಇವಳು.
ನನಗೆ ಸುಚಿತ್ರಾಸೇನ್ ಎಂದ ತಕ್ಷಣ ನನ್ನ ನೆನಪಿಗೆ ಬಂದದ್ದು ಆಕೆಯ ಅಭಿನಯದ ‘ಮಮತಾ’ ಚಿತ್ರದಲ್ಲಿನ ಆಕೆಯ ಅಭಿನಯಕ್ಕೆ ಅಳವಡಿಸಿದ ಸುಶ್ರಾವ್ಯ ಮನಮೋಹಕ ಗೀತೆ.
ರಹೆ ನ ರಹೆ ಹಮ್ ಮಹಿ ಕಾ ಕರೇಂಗೆ
ಬನ್ ಕೆ ಕಲಿ ಬನ್ ಕೆ ಸದಾ
ಇದು ನಾನು ನೋಡಿದ ಸುಚಿತ್ರಾ ಅಭಿನಯದ ಮೊದಲ ಚಿತ್ರ. ಈ ಚಿತ್ರ 1966 ರಲ್ಲಿ ತೆರೆ ಕಂಡಿತ್ತು. ಇದರಲ್ಲಿ ಹಿಂದಿ ಚಿತ್ರರಂಗದ ಘಟಾನುಘಟಿಗಳ ಸಂಗಮವಿತ್ತು. ಇದರಲ್ಲಿ ಆಕೆಯದು ತಾಯಿ ಮಗಳ ದ್ವಿಪಾತ್ರಗಳ ಅಭಿನಯವಿತ್ತು. ಆಕೆ ಇದರಲ್ಲಿ ತಾಯಿಯ ಪಾತ್ರದಲ್ಲಿ ಅಶೋಕ ಕುಮಾರ ಜೊತೆ ಮತ್ತು ಮಗಳ ಪಾತ್ರದಲ್ಲಿ ಧರ್ಮೇಂದ್ರ ಜೊತೆ ಹೃದಯಂಗಮ ಅಭಿನಯ ನೀಡಿದ್ದಳು. ರೋಶನ್ ಲಾಲ್ ಈ ಚಿತ್ರಕ್ಕೆ ಮನಮೋಹಕ ಸಂಗೀತ ನೀಡಿದ್ದರು.
ಬಂಗಾಲಿಯಲ್ಲಿ ಇವಳ ಮೊದಲ ಅಭಿನಯದ ಚಿತ್ರ ಉತ್ತಮ ಕುಮಾರ ಜೊತೆಗಿನದು, ಆದರೆ ಅದು ತೆರೆಗೆ ಬರಲಿಲ್ಲ. ಆಕೆಯ ಎರಡನೆ ಚಿತ್ರ ಅವಳಿಗೆ ಹೆಸರನ್ನು ತಂದು ಕೊಟ್ಟಿತು. ತನ್ನ ಶ್ರದ್ಧ ಮತ್ತು ಪರಿಶ್ರಮಗಳಿಂದ ಉತ್ತಮ ಅಭಿನೇತ್ರಿ ಎಂದು ಹೆಸರು ಪಡೆದು ತನ್ನ ಸ್ಥಾನವನ್ನು ಬೆಂಗಾಲಿ ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿಸಿಕೊಂಡಳು. ತನ್ನ ಬೆಂಗಾಲಿ ಚಿತ್ರಗಳ ಮೂಲಕ ಪಡೆದ ಪ್ರಸಿದ್ಧಿ ಹಿಂದಿ ಚಿತ್ರರಂಗ ಸಹ ಆಕೆಯನ್ನು ಗಮನಿಸುವಂತೆ ಮಾಡಿತ್ತು. ಆ ಜಮಾನಾದ ಪ್ರಸಿದ್ಧ ನಿರ್ಮಾಪಕ ಮತ್ತು ನಿರ್ದೇಶಕ ರಾಜ್ ಖೋಸ್ಲಾ ಸುಚಿತ್ರಾಗೆ ತನ್ನ ಚಿತ್ರವೊಂದರಲ್ಲಿ ನಟಿಸಲು ಕರೆ ನೀಡಿದ್ದ ಆದರೆ ಆಕೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ.
ಆದರೆ ಸುಚಿತ್ರಾ ಹಿಂದಿ ಚಿತ್ರರಂಗದಿಂದ ಬಹಳ ಕಾಲ ದೂರ ಉಳಿಯಲಾಗಲಿಲ್ಲ. 1955 ರಲ್ಲಿ ತಯಾರಿಸಲಾದ ‘ದೇವದಾಸ’ ಚಿತ್ರದಲ್ಲಿ ಪಾರೋಳ ಪಾತ್ರದಲ್ಲಿ ಅವಳು ನೀಡಿದ ಅಭಿನಯ ಅಮೋಘವಾದದ್ದು. ಈ ಚಿತ್ರದಲ್ಲಿ ಅವಳ ಜೊತೆಗೆ ಹಿಂದಿಯ ಖ್ಯಾತ ನಾಯಕ ನಟ ದಿಲೀಪ ಕುಮಾರ ಮತ್ತು ಖ್ಯಾತ ನಟಿ ವೈಜಯಂತಿಮಾಲ ಅಭಿನಯಿಸಿದ್ದರು. ಇಷ್ಟು ಖ್ಯಾತಿ ಗಳಿಸಿದ್ದ ಈ ನಟಿ ಹಿಂದಿಯಲ್ಲಿ ಅಭಿನಯಿಸಿದ್ದು ಕೇವಲ ಬೆರಳೆಣಿಕೆಯ ಆರೇಳು ಚಿತ್ರಗಳಲ್ಲಿ ಮಾತ್ರ. ಅವುಗಳನ್ನು ಹೆಸರಿಸುವು ದಾದಲ್ಲಿ ಬಂಬೈಕಾ ಬಾಬು, ಚಂಪಾಕಲಿ, ಸರಹದ್, ದೇವದಾಸ, ಮಮತಾ, ಖಾಮೋಶಿ ಮತ್ತು ಆಂಧಿ ಚಿತ್ರಗಳು. ಈಕೆ ತನ್ನ ಹಿಂದಿ ಚಿತ್ರರಂಗದ ಕರಿಯರ್ ನಲ್ಲಿ 1955 ರಿಂದ 1974 ರ ವರೆಗಿನ ಹತ್ತೊಂಭತ್ತು ವರ್ಷಗಳಲ್ಲಿ ಅಭಿನಯಿಸಿದ ಚಿತ್ರಗಳು ಮಾತ್ರ ಎನ್ನುವುದು ಗಮನಿಸ ಬೇಕಾದ ಸಂಗತಿ. 1974 ರಲ್ಲಿ ಈಕೆಯ ನಾಯಕಿ ಪಾತ್ರದ ಆಂಧಿ ತೆರೆ ಕಂಡಾಗ ಆಕೆಯ ಮಗಳು ಮೂನ್ ಮೂನ್ ಸೇನ್ ಹಿಂದಿ ಚಿತ್ರರಂಗದ ನಾಯಕಿ ನಟಿಯಾಗಿದ್ದ ನೆನಪು.
1974 – 75 ರ ಕಾಲಮಾನ ಈ ದೇಶವನ್ನು ಕರಾಳ ತುರ್ತು ಪರಿಸ್ಥಿತಿ ಹೇರಿದ್ದ ಕಾಲ. ಈ ಆಂಧಿ ಚಿತ್ರದ ಪಾತ್ರ ಮತ್ತು ಕಥೆ ದೇಶದ ಪ್ರಧಾನಿಯನ್ನು ಹೋಲುತ್ತದೆ ಎನ್ನುವ ಸಂಶಯದ ನೆಪದಲ್ಲಿ ಇದರ ಪ್ರದರ್ಶನಕ್ಕೆ ಅನುಮತಿಯನ್ನು ನಿರಾಕರಿಸಲಾಗಿತ್ತು. ಆ ಕರಾಳ ದಿನಗಳು ಕಳೆದ ನಂತರ ಈ ಚಿತ್ರ ಪ್ರದರ್ಶನ ಕಂಡು ದೇಶವ್ಯಾಪಿ ಅಭೂತಪೂರ್ವ ಯಶಸ್ಸನ್ನು ಪಡೆಯಿತು. ಚಿತ್ರದ ಕಥೆ ಸಂಭಾಷಣೆ, ಸಮರ್ಥ ನಿರ್ದೇಶನ, ಕವಿ ಗುಲ್ಜಾರರ ಸತ್ವಭರಿತ ಗೀತೆಗಳು, ರಾಹುಲ್ ದೇವ್ ಬರ್ಮನ್ ನೀಡಿದ ಮನ ಮಿಡಿವ ಸಂಗೀತ ಸಂಯೋಜನೆ, ಸುಂದರ ಹೊರಾಂಗಣ ಚಿತ್ರೀಕರಣ ಮತ್ತು ಪ್ರಮುಖ ಪಾತ್ರಧಾರಿಗಳಾಗಿದ್ದ ಸುಚಿತ್ರಾ ಸೇನ್ ಮತ್ತು ಸಂಜೀವ ಕುಮಾರರ ಪಾತ್ರವರಿತ ಸಮಯೋಚಿತ ಅಭಿನಯ ಈ ಚಿತ್ರದ ಜೀವಾಳ ವಾಗಿದ್ದವು. ಈಗಲೂ ಸುಚಿತ್ರಾಳ ಅಭಿನಯದ ದೇವದಾಸ, ಮಮತಾ, ಖಾಮೋಶಿ ಮತ್ತು ಆಂಧಿ ಚಿತ್ರಗಳ ಪಾತ್ರಗಳು ನನ್ನ ಮನದಾಳದಲಿ ನೆಲೆಯೂರಿವೆ.
ನಿನ್ನೆ ರಾತ್ರಿ ತೀವ್ರ ಹೃದಯ ತೊಂದರೆಯಿಂದಾಗಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಸೇರಿದ್ದ ಸುಚಿತ್ರಾ ಸಾವನ್ನು ಗೆಲ್ಲಲಾಗದೆ ‘ತೆರೆ ಬಿನಾ ಜಿಂದಗಿ ಕೋಯಿ ಸಿಕವಾ ನಹೀಂ’ ಎಂದು ಹಾಡುತ್ತ ನೇರವಾಗಿ ಎದ್ದು ಅವ್ಯಕ್ತ ಲೋಕದೆಡೆಗೆ ಸಾಗಿದ್ದಾಳೆ. ಅದೊಂದು ಕಂಡು ಕೇಳರಿಯದ ಲೋಕ ಅದರ ಅಸ್ತಿತ್ವ ಇದೆಯೊ ಇಲ್ಲವೋ ನಮಗೆ ಗೊತ್ತಿಲ್ಲದುದು. ಒಂದು ವೇಳೆ ಇದ್ದರೆ ಯಶಸ್ಸಿನ ಬದುಕು ಆಕೆಯದಾಗಲಿ. ಆಕೆಗೊಂದು ಹೃದಯಪೂರ್ವಕ ಬಿದಾಯಿ ನಮ್ಮೆಲ್ಲರಿಂದ.
***
ಚಿತ್ರಕೃಪೆ : ಅಂತರ್ಜಾಲ
Comments
ಉ: ' ಸುಚಿತ್ರ ' ತೇರೆ ಬಿನಾ ಜಿಂದಗಿ ಕೋಯಿ ಸಿಕವಾ ನಹಿ
ಸಂಕ್ಷಿಪ್ತವಾಗಿ ಸುಚಿತ್ರ ಸೇನ್ ಬಗ್ಗೆ ವಿವರ ದಾಖಲಿಸಿದ ಲೇಖನ ಚೆನ್ನಾಗಿದೆ, ಪಾಟೀಲರೆ. ಮತ್ತೊಂದು ಕಡೆ, ಅವಳು ಚಿತ್ರವೊಂದರ ವೈಫಲ್ಯದ ನಂತರ ಇದ್ದಕ್ಕಿದ್ದಂತೆ ನಟಿಸುವುದನ್ನು ನಿಲ್ಲಿಸಿಬಿಟ್ಟ ಕುರಿತು ಓದಿದೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸೋಣ.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ' ಸುಚಿತ್ರ ' ತೇರೆ ಬಿನಾ ಜಿಂದಗಿ ಕೋಯಿ ಸಿಕವಾ ನಹಿ by nageshamysore
ಉ: ' ಸುಚಿತ್ರ ' ತೇರೆ ಬಿನಾ ಜಿಂದಗಿ ಕೋಯಿ ಸಿಕವಾ ನಹಿ
ನಾಗೇಶ ಮೈಸೂರು ರವರಿಗೆ ವಂದನೆಗಳು
ಸುಚಿತ್ರ ಸೇಣ್ ಕುರಿತ ಬರಹಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ, ಬಹಳ ಕಡಿಮೆ ಹಿಂದಿ ಚಿತ್ರಗಳಲ್ಲಿ ಆಕೆ ಅಭಿನಯಿಸಿದ್ದರೂ ಆಕೆಗೆ ಅವಳದೆ ಆದ ಇಮೇಜ್ ಇತ್ತು, ಗೊತ್ತಿರುವ ಮಾಹಿತಿಯನ್ನು ದಾಖಲಿಸಿ ಒಂದು ಕೃತಜ್ಞತೆ ಸಲ್ಲಸುವ ಅನಿಸಿತು, ಹೀಗಾಗಿ ಬರೆದೆ ಮೆಚ್ಚುಗೆಗೆ ಧನ್ಯವಾದಗಳು.
ಉ: ' ಸುಚಿತ್ರ ' ತೇರೆ ಬಿನಾ ಜಿಂದಗಿ ಕೋಯಿ ಸಿಕವಾ ನಹಿ
ಪಾಟೀಲರಿಗೆ ನಮಸ್ಕಾರ
ಸುಚಿತ್ರಸೇನ್ ರ ಕುರಿತ ತಮ್ಮ ಕಿರು ಲೇಖನ ಸಂದರ್ಭೋಚಿತ ವಾಗಿತ್ತು.ಅವರು ನಟಿಸಿದ ಹಿಂದಿಚಿತ್ರಗಳ ಕೆಲವು ಸುಮಧುರ ಹಾಡುಗಳನ್ನು '
'ಯು ಟುಬ್ ' ನಲ್ಲಿ ಈಗಲೂ ಕೇಳಬೇಕೆನಿಸುತ್ತದೆ.
ವಂದನೆಗಳು
In reply to ಉ: ' ಸುಚಿತ್ರ ' ತೇರೆ ಬಿನಾ ಜಿಂದಗಿ ಕೋಯಿ ಸಿಕವಾ ನಹಿ by swara kamath
ಉ: ' ಸುಚಿತ್ರ ' ತೇರೆ ಬಿನಾ ಜಿಂದಗಿ ಕೋಯಿ ಸಿಕವಾ ನಹಿ
ರಮೇಶ ಕಾಮತರಿಗೆ ವಂದನೆಗಳು
ಈ ಬರಹ ಕುರಿತು ತಾವು ಬರೆದ ಮೆಚ್ಚುಗೆಯ ಪ್ರತಿಕ್ರಿಯೆ ಓದಿದೆ, ಆಕೆ ಹಿಂದಿಯಲ್ಲಿ ಅಭಿನಯಿಸಿದ್ದೆ ಚಿತ್ರಗಳೆ ಬೆರಳೆಣಿಕೆಯವು, ತಮ್ಮ ಅನಿಸಿಕೆ ಸರಿ ಆಕೆಯ ಪಾತ್ರಗಳಿಗೆ ಅಳವಡಿಸಲಾದ ಹಾಡುಗಳು ಸಾರ್ವಕಾಲಿಕ ಗೀತೆಗಳು ಮೆಚ್ಚುಗೆಗೆ ಧನ್ಯವಾದಗಳು.