ಸುಬ್ಬನ ಮನೆ ಗಣೇಶನ ಹಬ್ಬ !

ಸುಬ್ಬನ ಮನೆ ಗಣೇಶನ ಹಬ್ಬ !

ಭಾದ್ರಪದ ಮಾಸದ ತದಿಗೆ, ಭಾನುವಾರದ ಶುಭದಿನ ಬೆಳಿಗ್ಗೆ ಎಲ್ಲರಿಗಿಂತ ಮೊದಲು ಬಚ್ಚಲಿಗೆ ದಾಳಿಯಿಟ್ಟು ಶ್ಯಾಂಪೂ ಸ್ನಾನ ಮಾಡಿ, ತೆಳು ವಸ್ತ್ರದಲ್ಲಿ ತಲೆ ಒರೆಸಿಕೊಳ್ಳುತ್ತ ಹೊರಬಂದಿದ್ದು ... ನಮ್ ಸುಬ್ಬ!

ಬಿಳೀ ಹೊಗೆಯ ಮಧ್ಯೆ ಯಕ್ಷನಂತೆ ಹೊರಬಿದ್ದ ಸುಬ್ಬ ... ಒದ್ದೆ ಸಣ್ಣಪಂಚೆ ಧರಿಸಿ, ಮತ್ತೊಂದು ವಸ್ತ್ರದಲ್ಲಿ ತಲೆ ಒರೆಸಿಕೊಳ್ಳುತ್ತ ಹೊರಬಂದವನನ್ನು ಸ್ವಾಗತಿಸಿದ್ದು ಸುಬ್ಬನ ಅಜ್ಜಿಯ ಉರಿಗಣ್ಣು ... ಸುಬ್ಬನ ಅಮ್ಮನ ಮುಖದಲ್ಲಿ ’ವಿಘ್ನೇಶ್ವರ ಬರುವ ಮುನ್ನ ದಿನವೇ ವಿಘ್ನ ಶುರುವಾಯ್ತಲ್ಲ’ ಅನ್ನೋ ಆತಂಕ ... ಅಜ್ಜಿ ಉರಿದುಬಿದ್ದು ನುಡಿದರು "ಗಂಡಸಿಗ್ಯಾಕೆ ಗೌರಿ ದು:ಖ ಅಂತೀನಿ ... ನಿನಗೇನು ಅಂಥಾ ಅವಸರ?" ... ಪಿಳಿ ಪಿಳಿ ಕಣ್ಣು ಬಿಡುತ್ತ ನುಡಿದ ಸುಬ್ಬ "ಅಜ್ಜಿ ... ತಣ್ಣೀರ್ ರಾಮರಾಯರ ಮನೆಯಲ್ಲಿ ಗೌರಿ ಹಬ್ಬದ ಪೂಜೆ ಊಟಕ್ಕೆ ಕರೆದಿದ್ದಾರೆ ... ಹೋಗಬೇಕು" ... ಅಜ್ಜಿ ಮತ್ತೆ ಉರಿದುಬಿದ್ದು "ಅದಕ್ಕೇ? ನಾನು ನಾಲ್ಕು ಘಂಟೆಗೆ ಎದ್ದು ಒಲೆ ಉರಿ ಹಾಕಿ ನೀರು ಕಾಯಿಸಿಟ್ಟದ್ದನ್ನು ನೀನು ಸುರ್ಕೊಂಡು ಬರಬೇಕೂ ಅಂತೇನಾದ್ರೂ ಇದ್ದೀಯಾ?" 

"ಹಾಗಲ್ಲ ಅಜ್ಜೀ ಅದು " ... "ಹು.ಮು.ದೇ ... ವಿವೇಚನೆ ಅನ್ನೋದು ಇಲ್ವೇ ಇಲ್ಲ ... ಹೋಗ್ತಿರೋದು ಊಟಕ್ಕೆ. ಅವರು ಎಸರು ಇಡೋ ಮುಂಚೆ ನೀನು ಎಲೆ ಮುಂದೆ ಕೂತ್ರೆ ಹೇಗೆ? ಇಷ್ಟಕ್ಕೂ ನೀನು ಬೇಡ ಅಂದ್ರೂ ಅವರ ಮನೇಲಿ ಸ್ನಾನ ಆಗುತ್ತೆ ತಾನೇ?" ... "ಹೋಗಜ್ಜಿ ... ಅವರ ಮನೆಯಲ್ಲಿ ತಣ್ಣೀರು ಸ್ನಾನವೇ ಮಾಡಬೇಕು ... ಬಿಸಿ ನೀರು ಕೊಡಲ್ಲ ... ಹೋದ ವರ್ಷ ಅವರ ಮನೆಗೆ ಊಟಕ್ಕೆ ಹೋಗಿದ್ದಾಗ, ಆ ಮನೆ ಅಜ್ಜಿ, ಬಚ್ಚಲ ಮನೆ ಬಾಗಿಲಲ್ಲೇ ನಿಂತು ನಾನು ತಣ್ಣೀರು ಹಾಕ್ಕೋತ್ತೀನೋ ಇಲ್ವೋ ಅಂತ ನೋಡ್ತಿದ್ರು" ... "ನಿನಗೆ ಅಂಥವರೇ ಸರಿ ಹು.ಮು.ದೇ ... ಈ ವಯಸಲ್ಲೂ ಅವರ ಕೆಲಸ ಅವರು ಮಾಡಿಕೊಳ್ತಾರೆ ನೋಡು ... ಥಣ್ಣಗಿರಲಿ ಜೀವ" ... "ಥಣ್ಣಗೆ ಇಲ್ದೇ ಏನಜ್ಜಿ? ಅವರೂ ದಿನಾ ತಣ್ಣೀರ ಸ್ನಾನವೇ ಮಾಡೋದು" ... "ಸರಿ.. ಸರಿ... ಹೊರಗೆ ಬಾ ... ನೆತ್ತಿ ಮೇಲಿರೋ ಮೂರು ಕೂದಲೂ ಉದುರಿ ಹೋದೀತು ನೀನು ತಲೆ ಉಜ್ಜಿಕೊಳ್ತಿರೋ ರಭಸಕ್ಕೆ ... "

ಒಲೆ ಉರಿ ಸರಿಪಡಿಸಲು ಅಜ್ಜಿ ಬಚ್ಚಲ ಒಳಗೆ ಹೊರಡಲು ಅನುವಾದರು ... ಸುಬ್ಬನ ಅಮ್ಮ "ಅತ್ತೇ, ಈ ಸುಬ್ಬ ಯಥಾಪ್ರಕಾರ ಎಲ್ಲ ಕಡೆ ನೀರು ಚೆಲ್ಲಾಡಿರ್ತಾನೆ. ಜಾರಿ ಬಿದ್ದೀರ. ನಾನೇ ನೋಡ್ತೀನಿ" ಅಂದು ಬಚ್ಚಲ ಒಳಗೆ ನೆಡೆದು, "ಅತ್ತೇ, ಸುಬ್ಬ ಬಾಯ್ಲರ್ ನೀರಿನಲ್ಲಿ ಸ್ನಾನ ಮಾಡಿರೋದು ! ಕಾಯಿಸಿರೋ ಹಂಡೆ ನೀರು ಹಾಗೇ ಇದೆ. ನೀವು ಸ್ನಾನ ಮಾಡಬಹುದು" ಅನ್ನೋದೇ? "ಅಲ್ಲಾ? ಮೊದಲೇ ಹೇಳಬಾರದೇ? ಹು.ಮು.ದು ಸುಮ್ನೆ ಬೈಸಿಕೊಂಡ" ... ಪದ ಪ್ರಯೋಗ ಅದೇ ಆಗಿದ್ದರೂ ಅದು ಬೈಗುಳ ಆಗಿರಲಿಲ್ಲ ! ಅಜ್ಜಿ-ಮೊಮ್ಮಗನ ಗಲಾಟೆ ಇದೇ ಮೊದಲಲ್ಲ, ಹಾಗಾಗಿ ಅವನಮ್ಮ ತಲೆ ಕೆಡಿಸಿಕೊಳ್ಳಲಿಲ್ಲ ಬಿಡಿ !

ಏಳಕ್ಕೆ ಮನೆ ಬಿಟ್ಟ ಸುಬ್ಬ, ಮನೆ ಸೇರಿದ್ದೇ ಎರಡು ಘಂಟೆಗೆ ... ಸುಬ್ಬ ಅಡಿಕೆ ಎಲೆ ಮೆಲ್ಲುತ್ತ ’ಉಸ್’ ಎಂದು ಕೂತು "ನಿಮ್ದೆಲ್ಲ ಊಟ ಆಯ್ತಾ?" ಅಂದ ! "ಅಲ್ವೋ, ಹು.ಮು.ದೇ ನಿಮ್ಮಮ್ಮ ಆಗ್ಲಿಂದ ನಿನಗೆ ಫೋನ್ ಮಾಡ್ತಿದ್ಲು. ಪೂಜೆಗೆ ಹೋದೋನು ಅಲ್ಲೇ ಮಲಗಿಬಿಟ್ಯಾ? " ಅಂದರು ... "ಅವರ ಮನೆ ಅಜ್ಜಿ ಬಲೇ ಜೋರು ಅಜ್ಜಿ ... ಪೂಜೆ ಮಧ್ಯೆ ನಿನ್ ಫೋನಿನ ಘಂಟೆ ನಮಗೆ ಬೇಡ ಅಂತ ನನ್ ಕೈಲಿ ಕಿತ್ಕೊಂಡು, ವಾಪಸ್ ಬರೋ ಮುಂಚೆ ಕೈಗೆ ಕೊಟ್ರು, ಅದೂ ಅಡಿಕೆ ಎಲೆ ಜೊತೆ ... ಅಲ್ಲಿ ಬಂದವರ್ಯಾರೋ ಫೋನ್ ದಾನ ಅಂದುಕೊಂಡರು" ... ಹಸಿದಿದ್ದ ಹೊಟ್ಟೆಗಳಿಗೆ ಇವನ ವರಾತ ಕೇಳಿಸಲಿಲ್ಲ ... ಅಮ್ಮ ಫೋನು ಮಾಡಿದ್ಯಾಕೆ ಅಂತ ಇವನು ಕೇಳಲಿಲ್ಲ, ಅವರೂ ಹೇಳಲಿಲ್ಲ.

"ನಾಳೆ ಪೂಜೆಗೆ ಎಲ್ಲ ಸಿದ್ದ ಮಾಡಬೇಕು ... ಅಯಾಸ ಅಂತ ಬಿದ್ಗೋಬೇಡ" ಅಂತ ಪಾಯಸ ತಿನ್ನುತ್ತ ನುಡಿದರು ಅಜ್ಜಿ ... ಅವರನ್ನುವುದಕ್ಕೂ ಬಂದ ಸದ್ದಿಗೂ ಸರಿ ಹೋಗಿತ್ತು .. ಅತ್ಲಾಗೆ ನೋಡಿದರೆ ಸುಬ್ಬ ಕೂತಲ್ಲೇ ಗೊರಕೆ ಹೊಡೀತಿದ್ದ !! ಒಂದೆರಡು ಘಂಟೆ ಕಳೆದು ನಿದ್ದೆ, ಕಾಫಿ ಅಂತ ಸಮಾರಾಧನೆ ಮುಗಿದು ಗಣೇಶನ ಆಗಮನಕ್ಕೆ ಸಿದ್ದ ಮಾಡಲು ಅನುವಾದ ಸುಬ್ಬ !

ಅಜ್ಜಿ ನುಡಿದರು "ನೆನ್ನೆ ತಂದಿದ್ದ ಮಾವಿನ ಎಲೆ, ಪಂಟ ಎಲ್ಲ ಮೇಜಿನ ಹತ್ರ ಇಟ್ಟಿದ್ದೀನಿ. ಮೊದಲು ಮಂಟಪಕ್ಕೆ ಮಾವಿನ ಎಲೆ ತೋರಣ ಸಿದ್ದಮಾಡಿಕೋ" ... ಉದ್ದನೆಯ ಗೋಣಿಹುರಿಗೆ ಮೂವತ್ತು ಎಲೆಗಳನ್ನು ಪಿನ್ ಮಾಡಿ "ಅಜ್ಜೀ ಸಾಕಾ?" ಅಂದ ..."ಹು.ಮು.ದೇ ಇದೇನು ಮಂಟಪಕ್ಕೆ ಅಂತ ಕಟ್ಟಿದ್ಯೋ ಅಥವಾ ಇಡೀ ಬೀದಿಗೇ ಕಟ್ಟಿದ್ಯೋ? ಅಂದಾಜು ಗೊತ್ತಾಗಲ್ಲ? ಕೊಡಿಲ್ಲಿ, ನಾನೇ ಬಿಡಿಸಿಕೊಡ್ತೀನಿ ... ನಿನ್ನ ಕೈಲಿ ಕೊಟ್ರೆ ಎಲೆಗಳನ್ನ ಹರಿದು ಹಾಕ್ತೀಯಾ .. " ಸುಬ್ಬನ ಕೈಲಿ ಲಾಂಗೂಲದ ತೋರಣ ತೆಗೆದುಕೊಂಡು ಮತ್ತೊಮ್ಮೆ ಸಿಡಿದರು "ಎಲೆ ಹಿಂಭಾಗ ಕಾಣೋ ಹಾಗೆ ಪಿನ್ ಒತ್ತಿ ಬಡ್ದಿದ್ದೀಯಲ್ಲೋ? ಥತ್! ನಾನೇ ಮಾಡ್ಕೋತೀನಿ, ನೀನು ಅಲ್ಲಿರೋ ಹೂಗಳನ್ನ ತೊಗೊಂಡ್ ಬಾ ... ಮಂಟಪದ ಅಲಂಕಾರಕ್ಕೆ ..."

ಹೂವಿನ ಬುಟ್ಟಿ ತಂದ ಸುಬ್ಬ "ಅಜ್ಜೀ, ಈ ಹೂವು ವಾಸನೇನೇ ಇಲ್ಲ" ..."ಥತ್! ಹು.ಮು.ದೇ ಪೂಜೆ ಮಾಡೋ ಹೂವಿನ ವಾಸನೆ ನೋಡಬಾರದು ಅಂತ ಗೊತ್ತಾಗೋಲ್ವಾ?" "ಶಬರಿ ರಾಮನಿಗೆ ಎಂಜಲು ಹಣ್ಣೂ ತಿನ್ನಿಸಿದ್ಲು ಅಂತ ನೀವೇ ಕಥೆ ಹೇಳಿದ್ರಲ್ಲಾ ಅಜ್ಜಿ? ಇದೂ ಹಂಗೇ?" ... "ಸರಿ ಸರಿ .. ಈ ತಲೆಹರಟೆಗೇನೂ ಕಮ್ಮಿ ಇಲ್ಲ ನೋಡು. ನಿನ್ ಮೂಗಿಗೆ ಹಿಡಿದ ಆ ಹೂವನ್ನ ಬೇರೆ ಹೂವಿನ ಜೊತೆ ಬೆರೆಸಬೇಡ." ... "ಈ ಹೂವು ಏನ್ ಮಾಡಲಿ ಅಜ್ಜಿ?" .... "ಮೊರದಗಳ ಕಿವಿ ಇದೆಯಲ್ಲ. ಅದರ ಮೇಲಿಟ್ಕೋ" ... "ಅಜ್ಜೀ, ನೀವು ನನ್ ಕಿವಿ ಹೇಳಿದ್ರಾ? ಗಣೇಶನ ಕಿವಿ ಹೇಳಿದ್ರೋ?" ಅಜ್ಜಿಗೆ ಉರಿದುಹೋಯ್ತು "ಮೂರಾಣೆ ಕೆಲಸ ಮಾಡಲ್ಲ ... ಮಾಡಿದ ಕೆಲಸ ಸರಿಯಾಗೂ ಮಾಡಲ್ಲ ... ಅದರ ಮೇಲೆ ಬರೀ ತಲೆಹರಟೆ" 

"ವಾಯಿನ ದಾನಕ್ಕೆ ತೆಂಗಿನಕಾಯಿ ಇಟ್ಟಿದ್ದೀನಿ. ತೊಗೊಂಡ್ ಬಾ" ... "ಅಜ್ಜೀ, ಬಿಳೀ ಕಾಯಿ ತರಲೋ, ಕರೀ ಕಾಯಿ ತರಲೋ?" ... "ಬಿಳೀ ಕಾಯಿ ನಿನ್ನ ಹಾಗೆ ಎಳಸು ಇರುತ್ತೆ. ಕರೀ ಕಾಯಿ ತೊಗೊಂಡು ಬಾ ... ಕಡೇಪಕ್ಷ ಮುಂದಿನ ಜನ್ಮಕ್ಕಾದರೂ ನಿನ್ ತಲೆ ಬಲಿಯುತ್ತೆ" ... "ಪುರೋಹಿತರಿಗೆ ಕಾಯಿ ಕೊಟ್ರೆ ನನ್ ತಲೆ ಮುಂದಿನ ಜನ್ಮಕ್ಕೆ ಹೇಗೆ ಬಲಿಯುತ್ತೆ?"

"ಅವೆಲ್ಲ ನಿನಗೆ ಅರ್ಥವಾಗೋಲ್ಲ. ಕಾಯಿ ತಂದ್ಯಾ?" ... "ತರ್ತಿದ್ದೀನಿ, ತರ್ತಿದ್ದೀನಿ ... ಅಜ್ಜೀ, ಕಾಯಿಗೆ ಜುಟ್ಟಿದೆ. ಹಾಗೇ ಇರ್ಲಾ, ಕಿತ್ತು ಹಾಕ್ಲಾ?" ... "ನಾ ಹೇಳಿದ ಕೆಲಸ ಬಿಟ್ಟು ಒಂದು ಕೆಲಸ ಹೆಚ್ಚಿಗೆ ಮಾಡಿದ್ರೆ, ನಿನ್ ಜುಟ್ಟು ಕಿತ್ತುಬಿಡ್ತೀನಿ. ಸುಮ್ನೆ ತೊಗೊಂಡ್ ಬಾ ಇಲ್ಲಿ"

ಎರಡು ದಿನದ ಹಿಂದೆಯೇ ಮಂಟಪ ತೊಳೆದು, ಹಿತ್ತಾಳೆ ಪಾಲಿಶ್ ಉಜ್ಜಿ, ಫಳ ಫಳ ಹೊಳೆಯುತ್ತಿದ್ದ ಮಂಟಪಕ್ಕೆ ಹಸಿರು ತೋರಣ, ಮೇಲೆಲ್ಲ ಡೇರೆ ಹೂವು, ಇಳಿ ಬಿಟ್ಟಂತೆ ಒಂದೆರಡು ಫಲಗಳು ಅಂತೆಲ್ಲ ಶೃಂಗಾರ ಆಯಿತು. ಎರಡಡಿ ಎತ್ತರದ ಅಗಲವಾದ ಮೇಜಿನ ಮೇಲೆ ಮಂಟಪ ಕೂಡಿಸಿ ಇಕ್ಕೆಲಗಳಲ್ಲಿ ಹೂವು, ಗರಿಕೆ ಎಲ್ಲ ಸಿದ್ದವಿಟ್ಟಿದ್ದಾಯ್ತು. ಸುಬ್ಬನ ಅಮ್ಮ ಗೆಜ್ಜೆ ವಸ್ತ್ರಕ್ಕೆ ಕುಂಕುಮ ಹಚ್ಚುತ್ತಿದ್ದರು. ನೀರಲ್ಲಿ ಒಮ್ಮೆ ಬೆರಳದ್ದಿ ಒತ್ತಿಯೂ ಒತ್ತಿಕೊಳ್ಳದಂತೆ ಕುಂಕುಮಕ್ಕೆ ಬೆರಳೊತ್ತುವುದ ಕಂಡು ಸುಬ್ಬ "ಅಮ್ಮಾ, ಕುಂಕುಮ ಬಿಸೀನಾ?" ಎಂದ. 

ಅಜ್ಜಿ ಗಣೇಶನನ್ನು ಕೂಡಿಸಲು ಮಂಟಪದ ಒಳಗೆ ಅಕ್ಕಿ ಹರವಿ, ಅದರ ಮೇಲೆ ಓಂ ಎಂದು ಬರೆಯಲು ಹೇಳಿದರು. "ಕನ್ನಡದಲ್ಲಿ ಬರೀಲಾ? ಇಂಗ್ಲೀಷಿನಲ್ಲಿ ಬರೀಲಾ?" ಅಂದ ಸುಬ್ಬ ... ಈಗ ತಲೆಹರಟೆ ಸರದಿ ಅಜ್ಜೀದು "ನೀ ಬರೆದ ಓಂ ಮೇಲೆ ಗಣೇಶ ಕೂತ್ಕೋತಾನೆ. ನೀನೇನು ಬರೆದಿದ್ದೇನೂ ಕಾಣಲ್ಲ ಬಿಡು ಅವನಿಗೆ." ಸುಬ್ಬನ ಅಮ್ಮ ಮಂಟಪದ ಮುಂದೆ ರಂಗೋಲಿ ಹಾಕಿ, ಕೆಮ್ಮಣ್ಣೂ ಬಳಿದರು. "ಅಮ್ಮ, ಆ ಕೆಂಪು ಲೈನ್ ಯಾಕೆ?" "ಒಂದು ಕಾರಣ ಅಂದರೆ ಅಲಂಕಾರ. ಇನ್ನೊಂದು, ರಂಗೋಲಿ ಯಾರೂ ತುಳೀಬಾರದು ಅಂತ. ಕೆಂಪು ಗೆರೆ ಕಂಡ ಕೂಡಲೆ ಅಲ್ಲೇ ನಿಲ್ಲಿ, ರಂಗೋಲಿ ಇದೆ ಅಂತ"... "ಅಂದ್ರೇ,  ಸಿಗ್ನಲ್ ಲೈಟ್ ತರಹ" ... "ಹಾಗೇ ಅಂದುಕೋ" ಅಂದು ಮಾತಿಗೆ ಅಲ್ಲಿಯೇ ಮಂಗಳ ಹಾಡಿದರು. ಸಕಲ ತಯಾರಿಯೂ ಆಯಿತು.

ಹಬ್ಬದ ಹಗಲು ... ಸುಬ್ಬ ಎಂದಿನಂತೆ ನಿಧಾನವಾಗಿ ಎದ್ದ. ಅಜ್ಜಿಯ ವರಾತ "ಹಬ್ಬದ ದಿನ ಬೇಗ ಏಳೋದು ಬಿಟ್ಟು, ಇದೇನು ಸೂರ್ಯ ನೆತ್ತಿಗೆ ಬಂದ ಮೇಲೆ ಏಳೋದು?" ... "ಅಲ್ಲಾ, ಅಜ್ಜಿ ... ನೆನ್ನೆ ಹಬ್ಬ, ಬೇಗ ಎದ್ದು ಸ್ನಾನ ಮಾಡಿದೆ ಅಂತ ಬೈಸಿಕೊಂಡೆ. ಇವತ್ತು ನಿಧಾನಕ್ಕೆ ಎದ್ದೂ ಬೈಸಿಕೊಂಡೆ. ಇದೊಳ್ಳೇ ಕಥೆಯಾಯ್ತಲ್ಲಾ?" "ಸರಿ ಸರಿ ಬೇಗ ಸ್ನಾನ ಮಾಡು ... ಇವತ್ತೇನೂ ಊಟಕ್ಕೆ ಕರೆದಿಲ್ವಾ ತಣ್ಣೀರು ರಾಮರಾಯರ ಮನೆಯವರು?" 

"ನೆನ್ನೆ ಊಟ ಆದ ಮೇಲೆ ನಾನೇ ಕೇಳಿದೆ ಅಜ್ಜಿ, ನಾಳೆ ಎಷ್ಟು ಹೊತ್ತಿಗೆ ಬರಲಿ ಅಂತ. ಅದಕ್ಕೆ ಅವರು ವರ್ಷಾವರಿ ಗಂಡು ಮಕ್ಕಳ ಹಬ್ಬ. ನಿಮ್ಮ ಮನೇಲಿ ನೀನು ಹಬ್ಬದ ಊಟ ಮಾಡು. ಮುಂದಿನ ಗೌರಿಗೆ ತಪ್ಪದೆ ಬಾ ಅಂದರು" ... "ಹಾಗೆಲ್ಲ ನೀನೇ ಔತಣ ಇಟ್ಕೊಂಡು ಊಟಕ್ಕೆ ಹೋಗಬೇಡ ಅಂತ ಹೇಳಿ ಹೇಳಿ ಸಾಕಾಯ್ತು ನನಗೂ" ... "ಅಜ್ಜೀ, ಕಾಫಿ ಕುಡಿದು ಸ್ನಾನಕ್ಕೆ ಹೋಗ್ಲಾ?" ... "ಗಣೇಶನ ಪೂಜೆ ಮಾಡಿ, ಮುಂದಿನ ಜನ್ಮದಲ್ಲಾದರೂ ಚುರುಕು ಬುದ್ದಿಯವನಾಗಲಿ ಅಂತ ಕೇಳ್ಕೊಂಡ ಮೇಲೇ ಕಾಫಿ, ತಿಂಡಿ ಎಲ್ಲ ... ಪ್ರತಿ ವರ್ಷ ಇದೇ ಹಾಡು" 

ಸ್ನಾನ ಮುಗಿಸಿ ಬಂದ ಸುಬ್ಬ, ಅಜ್ಜಿ ಎತ್ತಿಟ್ಟಿದ್ದ ರೇಷ್ಮೆ ವಸ್ತ್ರ ತೊಟ್ಟು, ಅಪ್ಪ ಊರಲ್ಲಿ ಇಲ್ಲದ ಕಾರಣ ಕ್ಯಾಸೆಟ್ ಹಾಕಿ ಶ್ರದ್ದೆಯಿಂದ ಪೂಜೆ ಮಾಡಿದ ಅನ್ನಿ. ಪೂಜೆ ಮಧ್ಯೆ ತಲೆಹರಟೆ ಮಾಡಿದರೆ ಕಡುಬು ಖೋತ ಅಂತ ಅಜ್ಜಿ ಹೇಳಿದ್ದ ವಿಷಯ ಬೇರೆ ಮಾತು ಬಿಡಿ. ಪೂಜೆ ಮುಗಿದ ಮೇಲೆ ಬಸ್ಕಿ ಹೊಡೆವ ಕಾರ್ಯಕ್ರಮ. ಇದಂತೂ ಸುಬ್ಬನಿಗೆ ಮಹಾ ಪ್ರಯಾಸದ ಕೆಲಸ. ಇಪ್ಪತ್ತೊಂದು ಬಸ್ಕಿ ಹೊಡೆಯುವುದರ ಜೊತೆಗೆ ಇಪ್ಪತ್ತೊಂದು ಬಾರಿ ಪಂಚೆ ಕಟ್ಟಿಕೊಳ್ಳೋದಂತೂ ಗ್ಯಾರಂಟಿ.

ಅಂತೂ ಉಸ್ ಬುಸ್ ಅಂದುಕೊಂಡು ಇಪ್ಪತ್ತೊಂದು ಬಸ್ಕಿ ಹೊಡೆದು ಸಾಷ್ಟಾಂಗ ಬಿದ್ದ ಗಣೇಶನ ಮುಂದೆ. ಬಸ್ಕಿ ನಂತರ ಸಾಷ್ಟಾಂಗ ಹಿತವಾಗಿತ್ತು. ಹಾಗೇ ಮಲಗಿದ್ದವನನ್ನು ಅಜ್ಜಿಯ ಘರ್ಜನೆ ಎಬ್ಬಿಸಿತು. "ವಾಯಿನ ದಾನದ ತಟ್ಟೆ ತೆಗೆದುಕೊಂಡು ಹೋಗಿ ಆ ರಾಮರಾಯರಿಗೆ ಕೊಟ್ಟು ನಮಸ್ಕಾರ ಮಾಡಿಕೊಂಡು ಬಾ"... ಆಯ್ತು ಎಂದು ಮತ್ತೊಮ್ಮೆ ಪಂಚೆ ಬಿಗಿದು ಬಾಳೆ ಎಲೆ ಮುಚ್ಚಿದ್ದ ತಟ್ಟೆಯನ್ನು ಹೊತ್ಕೊಂಡು ಹೊರಟ. 

ಒಂದು ಕೈಲಿ ಪಂಚೆ ಹಿಡಿದುಕೊಂಡು, ಮತ್ತೊಂದು ಕೈಲಿ ತಟ್ಟೆ ಹಿಡಿದರೆ ಬಾಳೆ ಎಲೆ ಹಾರಿಹೋಗುತ್ತೆ. ಹಾಗೆಂದು ಎರಡೂ ಕೈಲಿ ತಟ್ಟೆ ಹಿಡಿದರೆ ಪಂಚೆ ಉದುರುತ್ತೆ. ಎರಡು ಕೈಲಿ ಪಂಚೆಯೇ ಹಿಡಿದರೆ ರಾಮರಾಯರ ಮನೆಗೆ ಹೋಗುವ ಗೋಜೇ ಇಲ್ಲ. ಏನು ಮಾಡೊದು? ಮತ್ತೊಮ್ಮೆ ಪಂಚೆ ಬಿಗಿದು, ತಟ್ಟೆಯ ತಳಭಾಗವನ್ನು ಎಡಗೈಲಿ ಪಿಡಿದು, ಬಲಗೈಯಿಂದ ಬಾಳೆ ಎಲೆ ಒತ್ತಿ ಹಿಡಿದು, ಮೊಣಕೈಗಳಿಂದ ಪಂಚೆಯನ್ನು ಒತ್ತಿ ಹಿಡಿದು ಹೊರಟ ನಮ್ ಸುಬ್ಬ !

ಪೂಜೆ ಮಾಡಿದ ಮನೆ ಯಾಕೋ ಬಾಗಿಲು ಹಾಕಿತ್ತು. ಇದೊಳ್ಳೇ ಕಥೆಯಾಯ್ತಲ್ಲ ಅಂದುಕೊಂಡು, ಬಾಗಿಲ ಮುಂದೆ ನಿಂತು ತಲೆಯಿಂದಲೇ ಒಮ್ಮೆ ಬಾಗಿಲನ್ನು ಕುಟ್ಟಿದ ಸುಬ್ಬ. ಗಾಳಿಗೆ ದೀಪ ಆರದಿರಲಿ ಎಂದು ಬಾಗಿಲು ಮುಂದೆ ಮಾಡಿದ್ದರು ಅಷ್ಟೇ. ಬಾಗಿಲ ಹಿಂದೆಯೇ ಇದ್ದ ಅಜ್ಜಿಗೆ ಬಾಗಿಲು ಸರಿಯಾಗಿ ಬಡಿದಿತ್ತು. ಬೆಚ್ಚಿ ಬಿದ್ದ ಅಜ್ಜಿ ಬಾಗಿಲು ತೆರೆದು ನೋಡಿದರೆ ಸುಬ್ಬ. ತಟ್ಟೆಯನ್ನು ಹಿಡಿಯಲಾರದೆ, ಪಂಚೆಯನ್ನು ಹಿಡಿಯಲಾರದೆ ಒದ್ದಾಡ್ತಿದ್ದ .... ಅವನನ್ನು ಬೈಯ್ಯಲು ಮನ ಬಾರದೆ ಮೊದಲು ಒಳಗೆ ಬಾ ಅಂದರು ...

"ಅಜ್ಜೀ ಮೊದಲು ಪಂಚೆ ಹಿಡಿದುಕೊಳ್ಳಿ, ನಾನು ತಟ್ಟೆ ಕಟ್ಕೋಬೇಕು" ಅಂದ ... ಪಾಪ ಅಜ್ಜೀಗೆ ಸಂಪೂರ್ಣ ಗೊಂದಲ ... "ಅಯ್ಯೋ ಅಜ್ಜೀ ಮೊದಲು ತಟ್ಟೆ ಹಿಡಿದುಕೊಳ್ಳಿ, ನಾನು ಪಂಚೆ ಕಟ್ಕೋಬೇಕು" ಅಂದ ... ಅಜ್ಜಿಗೆ ತಟ್ಟೆಯನ್ನು ಕೊಡಲು ಹೋಗಿ, ತಟ್ಟೆಯನ್ನು ವಾಲಿಸಿದ ಸುಬ್ಬ ... ಕರೀ ತೆಂಗಿನ ಕಾಯಿ ಉರುಳಿ ಅಜ್ಜಿಯ ಪಾದದ ಮೇಲೆ ಬಿತ್ತು ... ಮೊದಲೇ ವಯಸ್ಸಾದವರು, ನೋವು ತಡೆಯದೆ ಕಣ್ಣುಮುಚ್ಚಿ ಜೋರಾಗಿ ಒಮ್ಮೆ ಚೀರಿದರು ... ಬೆದರಿದ ಸುಬ್ಬನ ಪಂಚೆ ಉದುರಿ ಬಿತ್ತು ... ಪುಣ್ಯಕ್ಕೆ ಸಣ್ಣಪಂಚೆ ಉಟ್ಟಿದ್ದ.

ರಾಮರಾಯರು ಒಳಗಿನಿಂದ ಓಡಿ ಬಂದು, ಆದ ಅವಾಂತರ ಅರ್ಥಮಾಡಿಕೊಂಡು ಸಾವಧಾನವಾಗಿಯೇ ನುಡಿದರು "ಅಲ್ವೋ ಸುಬ್ಬ ! ಗಣೇಶ ಸೊಂಟಕ್ಕೆ ಹಾವು ಸುತ್ಕೊಂಡ ಹಾಗೆ ಒಂದು ಬೆಲ್ಟು ಕಟ್ಕೊಂಡು ಬರಲಿಕ್ಕೆ ಆಗ್ತಿರ್ಲಿಲ್ವೇ? ಅಥವಾ ಜಾರೋ ಜತಾರಿ ಪಂಚೆ ಬದಲು ಮಾಮೂಲಿ ಪಂಚೆ ಉಟ್ಟು ಬಂದಿದ್ರೂ ಸಾಕಾಗಿತ್ತು. ಹೋಗಲಿ ಬಿಡು ಅಮ್ಮನ ಕಾಲು ಮುರುದಿಲ್ಲ ಅಂದುಕೊಳ್ತೀನಿ. ದಾನದ ತಟ್ಟೆ ಅಲ್ಲೇ ಇಡು. ಇಲ್ದೆ ಇದ್ರೆ ನನ್ ಕಾಲೂ ಮುರಿದೀಯಾ?"

ತಟ್ಟೆ ಅಲ್ಲಿಟ್ಟವನೇ ಹೊರ ನೆಡೆದಿದ್ದ ಸುಬ್ಬ ! ಈಗ ಯಾವುದೇ ಗೋಜಲೂ ಇಲ್ಲದೆ, ಎರಡು ಕೈಲಿ ಪಂಚೆ ಹಿಡಿದು ಸುಬ್ಬ ಮನೆ ಸೇರಿಕೊಂಡ ....

{ಅಪರಂಜಿ - ತಿಳಿ ನಗೆ ಕಾರಂಜಿ ಮಾಸಿಕ ಪತ್ರಿಕೆಯ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟಗೊಂಡಿದ್ದ ನಮ್ ಸುಬ್ಬ. ಪತ್ರಿಕೆಗಾಗಿ ಇಲ್ಲಿ ಕ್ಲಿಕ್ಕಿಸಿ http://aparanjimag.in/ }

 

Comments

Submitted by nageshamysore Wed, 01/22/2014 - 19:37

ಭಲ್ಲೆ ಜೀ,

ನಾನು ಸಂಪದದಲ್ಲಿ ಸಕ್ರೀಯನಾದ ಮೇಲೆ ಸುಬ್ಬನ ಕುರಿತು ಆಗಾಗ್ಗೆ ಪ್ರತಿಕ್ರಿಯೆಗಳಲ್ಲಿ, ಹೆಚ್ಚು ಕೇಳಿದ್ದೆ. ಈಗ ನೇರ ಒಂದು ಲೇಖನ ಓದುವ ಅವಕಾಶ ಸಿಕ್ಕಿದಂತಾಯ್ತು. ಚೆನ್ನಾಗಿ ಬಂದಿದೆ ಸುಬ್ಬನ ಪಂಚೆ ಪಜೀತಿ, ಹಾಗೆಯೆ ಅಜ್ಜಿಯ ಸುಬ್ಬನ ಮೇಲಿನ ಪ್ರೀತಿ :-)

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by bhalle Wed, 01/22/2014 - 21:04

In reply to by nageshamysore

ನಾಗೇಶರಿಗೆ ನಮಸ್ಕಾರಗಳು
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಸುಬ್ಬನ ವ್ಯಕ್ತಿತ್ವ ಕೊಸುಗಡ್ಡೆಯ೦ತೆ. ಸುಲಿದ೦ತೆಲ್ಲ ಹೊಸತಾಗಿ ಕಾಣುತ್ತೆ. ಅವನ ವಿಶೇಷ ಗುಣಗಳು ಸುಲಿದಷ್ಟೂ ಬರುತ್ತಲೇ ಇರುತ್ತದೆ :-))

Submitted by sathishnasa Wed, 01/22/2014 - 21:03

ಬಹಳ ದಿನಗಳ ನಂತರ ಮತ್ತೆ " ಸುಬ್ಬ" ನ ಆಗಮನ ಅದು " ಗಣೇಶ " ನ ಹಬ್ಬದೊಂದಿಗೆ ...!! ಸೂಪರ್ ಭಲ್ಲೆಯವರೇ......ಸತೀಶ್

Submitted by bhalle Wed, 01/22/2014 - 21:10

In reply to by sathishnasa

ಸತೀಶ್
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಸುಬ್ಬನ ಮುಂದಿನ ಗಲಾಟೆ ಕೂಡ ಸಿದ್ದವಿದೆ. ತಿ೦ಗಳಿಗೊಮ್ಮೆ ಸುಬ್ಬನನ್ನು ತರಬೇಕು ಅಂತಿದೆ. ಸಮಯ ಆಗಬೇಕಷ್ಟೆ, ಅವನಿಗೆ :-)))))