೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ
ಲಲಿತಾ ಸಹಸ್ರನಾಮ - ಫಲಶ್ರುತಿ ಅಥವಾ ಉತ್ತರಭಾಗ
ಹೀಗೆ ಹಯಗ್ರೀವನು ಅಗಸ್ತ್ಯನಿಗೆ ಹೇಳುತ್ತಿದ್ದ ಒಂದು ಸಾವಿರ ನಾಮಗಳ ಉಚ್ಛಾರಣೆಯನ್ನು ಮುಗಿಸಿದ. ಹಯಗ್ರೀವನು ಅಗಸ್ತ್ಯನನ್ನು ಸಂಭೋದಿಸುವುದನ್ನು ಮುಂದುವರೆಸುತ್ತಾನೆ. ಈ ಸಹಸ್ರನಾಮದಲ್ಲಿ ಸರಿಯಾಗಿ ಒಂದು ಸಾವಿರ ನಾಮಗಳಿವೆ. (ಶಿವ ಸಹಸ್ರನಾಮದಲ್ಲಿ ೧೦೦೮ ನಾಮಗಳಿವೆ ಮತ್ತು ವಿಷ್ಣು ಸಹಸ್ರನಾಮದಲ್ಲಿ ೧೦೦೦ ನಾಮಗಳಿದ್ದು ಅನೇಕ ನಾಮಗಳು ಪುನರಾವೃತವಾಗಿವೆ). ಲಲಿತಾ ಸಹಸ್ರನಾಮವು ಅತ್ಯಂತ ನಿಗೂಢವಾಗಿದ್ದು ಲಲಿತಾಂಬಿಕೆಯು ಈ ಸಹಸ್ರನಾಮದ ಕುರಿತು ಬಹಳ ಅಕ್ಕರೆಯುಳ್ಳವಳಾಗಿದ್ದಾಳೆ. ಯಾವುದೇ ಮಂತ್ರವನ್ನು ರಹಸ್ಯಾತ್ಮಕವಾದದ್ದು ಎಂದು ಪರಿಗಣಿಸಲಾಗುತ್ತದೆ; ಅದರೊಳಗೆ ಅಡಕವಾಗಿರುವ ಬೀಜಾಕ್ಷರಗಳಿಂದಾಗಿ. ಲಲಿತಾ ಸಹಸ್ರನಾಮದ ಪ್ರತಿಯೊಂದು ನಾಮದಲ್ಲೂ ರಹಸ್ಯವಾದ ಬೀಜಾಕ್ಷರಗಳು ಹುದುಗಿವೆ ಎಂದು ಹೇಳಲಾಗುವುದರಿಂದ ಸಂಪೂರ್ಣ ಸಹಸ್ರನಾಮವು ಮಂತ್ರದ ಸ್ಥಾನವನ್ನು ಪಡೆಯುತ್ತದೆ.
ಲಲಿತಾ ಸಹಸ್ರನಾಮವನ್ನು ಉಚ್ಛರಿಸುವುದರಿಂದ ಕೆಳಗಿನ ಫಲಗಳು ದೊರೆಯುತ್ತವೆ:
೧) ರೋಗರಹಿತ ಜೀವನವನ್ನು ಕರುಣಿಸುತ್ತದೆ, ದಾರಿದ್ರ್ಯವನ್ನು ನಿರ್ಮೂಲನ ಮಾಡಿ ಐಹಿಕ ಸಂಪತ್ತನ್ನು ಪ್ರಸಾದಿಸುತ್ತದೆ.
೨) ಇದು ಅಸಹಜ ಮರಣ ಮತ್ತು ಅಪಘಾತಗಳಿಂದ ಉಂಟಾಗುವ ಸಾವುಗಳನ್ನು ನಿವಾರಿಸುತ್ತದೆ.
೩) ಉತ್ತಮ ಸಂತಾನವನ್ನು ಕರುಣಿಸುತ್ತದೆ
ವಾಚನದ ವಿಧಾನ:
ಸ್ನಾನಾದಿ ದಿನಕೃತ್ಯಗಳನ್ನು ಮುಗಿಸಿ, ಸಾಂಪ್ರದಾಯಿಕ ಪೂಜಾಚರಣೆಗಳನ್ನು ಕೈಗೊಂಡ ನಂತರ ಒಬ್ಬನು ಶ್ರೀ ಚಕ್ರದ ಆರಾಧನೆಯನ್ನು ಮಾಡಬೇಕು. ಶ್ರೀ ಚಕ್ರವನ್ನು ಪೂಜಿಸಿದ ನಂತರ ಒಬ್ಬನು ಪಂಚದಶೀ ಅಥವಾ ಷೋಡಶೀ ಮಂತ್ರಗಳನ್ನು ಜಪಿಸಬೇಕು. ನಿಗದಿತ ಸಂಖ್ಯೆಯ ಮಂತ್ರಜಪವನ್ನು ಪೂರೈಸಿದ ನಂತರ ಒಬ್ಬನು ಈ ಸಹಸ್ರನಾಮವನ್ನು ವಾಚಿಸಬೇಕು. ಸಹಸ್ರನಾಮವು ಸಂಪೂರ್ಣಗೊಂಡ ಮೇಲೆ ಒಬ್ಬನು ಲಲಿತಾಂಬಿಕೆಗೆ ಪುಷ್ಪಗಳನ್ನು ಸಮರ್ಪಿಸಬೇಕು. ಒಂದು ವೇಳೆ ಒಬ್ಬನು ಮಂತ್ರ ಜಪ ಅಥವಾ ಶ್ರೀ ಚಕ್ರೋಪಾಸನೆಯ ದೀಕ್ಷೆಯನ್ನು ಪಡೆಯದಿದ್ದಲ್ಲಿ ಅವನು ಕೇವಲ ಈ ಸಹಸ್ರನಾಮವೊಂದನ್ನೇ ಹೇಳಬಹುದು.
ಒಬ್ಬನು ಜೀವಿತಕಾಲದಲ್ಲಿ ಒಂದೇ ಒಂದು ಬಾರಿಗೆ ಈ ಸಹಸ್ರನಾಮವನ್ನು ಪಠಿಸಿದರೆ ಉಂಟಾಗುವ ಫಲಗಳು:
೧) ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಹೊಂದುವ ಫಲಕ್ಕಿಂತ ಅಧಿಕ ಫಲವನ್ನು ಪಡೆಯುತ್ತಾನೆ.
೨) ಕಾಶಿಯಲ್ಲಿ ಹಲವಾರು ಲಿಂಗಗಳನ್ನು ಪ್ರತಿಷ್ಠಾಪಿಸುವುದಕ್ಕಿಂತ ಹೆಚ್ಚಿನ ಪುಣ್ಯವನ್ನು ಪಡೆಯುತ್ತಾನೆ.
೩) ಸೂರ್ಯ ಗ್ರಹಣದ ಸಮಯದಲ್ಲಿ ವೇದಕೋವಿದರಾದ ಹಲವಾರು ಬ್ರಾಹ್ಮಣರಿಗೆ ಕುರುಕ್ಷೇತ್ರದಲ್ಲಿ (ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಭೋದಿಸಿದ ಯುದ್ಧಭೂಮಿ) ಮಾಡಿದ ಸುವರ್ಣ ದಾನಕ್ಕಿಂತ ಅಧಿಕವಾದ ಪುಣ್ಯವು ದೊರೆಯುತ್ತದೆ.
೪) ಗಂಗೆಯ ತಟದಲ್ಲಿ ಮಾಡುವ ಅಶ್ವಮೇಧಯಾಗಕ್ಕಿಂತ ಅಧಿಕವಾದ ಪುಣ್ಯವು ಸಿಗುತ್ತದೆ.
೫) ಸಹಸ್ರನಾಮದಲ್ಲಿನ ಯಾವುದೇ ಒಂದು ನಾಮವನ್ನು ಉಚ್ಛರಿಸಿದರೂ ಸಹ ಅವನು ಸಕಲ ಪಾಪಗಳಿಂದ ಮುಕ್ತನಾಗುತ್ತಾನೆ.
೬) ಒಬ್ಬನು ಶಾಸ್ತ್ರವಿಧಿತ ಕರ್ಮಗಳನ್ನು ಮಾಡದೇ ಇರುವುದರಿಂದ ಉಂಟಾಗುವ ಪಾಪಗಳೂ ಸಹ ಸಹಸ್ರನಾಮದ ಪಠಣದಿಂದ ನಿರ್ಮೂಲವಾಗುತ್ತವೆ.
೭) ಶ್ರೀ ವಿದ್ಯಾ ಉಪಾಸನೆಯ ದೀಕ್ಷೆಯನ್ನು ತೆಗೆದುಕೊಂಡವನು, ಇತರೇ ಪ್ರಾಯಶ್ಚಿತ್ತ ವಿಧಿಗಳನ್ನು ಪಾಲಿಸದೆ ಕೇವಲ ಲಲಿತಾ ಸಹಸ್ರನಾಮವೊಂದನ್ನೇ ಪಠಿಸಿದರೂ ಸಾಕು. ಒಂದು ವೇಳೆ ಅವನು ಇತರೇ ಪ್ರಾಯಶ್ಚಿತ್ತ ಕರ್ಮಗಳನ್ನು ಕೈಗೊಂಡರೆ ಅವನಿಗೆ ಮತ್ತಷ್ಟು ಪಾಪಗಳು ತಟ್ಟುವುವು ಎಂದು ಹೇಳಲಾಗುತ್ತದೆ.
೮) ಒಬ್ಬನು ಈ ಸಹಸ್ರನಾಮವನ್ನು ನಿತ್ಯವೂ ಪಠಿಸುತ್ತಿದ್ದರೆ ಲಲಿತಾಂಬಿಕೆಯ ಅವನ ಬಗೆಗೆ ಅತೀವ ಸಂತೋಷವನ್ನು ಹೊಂದಿ ಅವನ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ. ಈ ಸಹಸ್ರನಾಮವನ್ನು ಒಬ್ಬನು ನಿತ್ಯವೂ ಪಠಿಸದೇ ಇದ್ದರೆ ಅವನನ್ನು ಭಕ್ತನೆಂದು ಪರಿಗಣಿಸಲಾಗದು ಎಂದು ಹೇಳಲಾಗುತ್ತದೆ. ಒಬ್ಬ ಭಕ್ತನು ಭಕ್ತನೆನಿಸಿಕೊಳ್ಳಬೇಕಾದರೆ ತಾನು ಪೂಜಿಸುವ ದೈವದ ಬಗೆಗೆ ಅವನಿಗೆ ಅಗಣಿತ ಪ್ರೀತಿ ಇರಬೇಕು. ಲಲಿತಾಂಬಿಕೆಯು ಅಂತಹ ಭಕ್ತಿಯನ್ನು ಹುಟ್ಟುಹಾಕುತ್ತಾಳೆ; ಈ ಸಹಸ್ರನಾಮವನ್ನು ನಿತ್ಯವೂ ಸಂಪೂರ್ಣವಾಗಿ ಪಠಿಸಿದರೆ ಮಾತ್ರ.
೯) ಒಬ್ಬನಿಗೆ ಇದನ್ನು ನಿತ್ಯವೂ ಪಠಿಸಲು ಆಗದಿದ್ದರೆ ಅವನು ಇದನ್ನು ಕಡೇಪಕ್ಷ ಹಬ್ಬ ಹರಿದಿನಗಳಲ್ಲಾದರೂ ಪಠಿಸಬೇಕು. ಮುಖ್ಯವಾದ ದಿವಸಗಳೆಂದರೆ, ಸಂಕ್ರಾಂತಿ ಅಥವಾ ವಿಶು, ಉತ್ತಾರಾಯಣ ಮತ್ತು ದಕ್ಷಿಣಾಯನ ಪುಣ್ಯಕಾಲಗಳು, ಮೊದಲಾದವುಗಳು. ಸಹಸ್ರನಾಮವನ್ನು ಪಠಿಸಲು ಇತರೇ ಶುಭದಿನಗಳೆಂದರೆ ಅಷ್ಟಮೀ, ನವಮೀ ಮತ್ತು ಚತುರ್ದಶೀ ತಿಥಿಗಳು ಮತ್ತು ಶುಕ್ರವಾರಗಳು.
೧೦) ಎಲ್ಲದಕ್ಕಿಂತ ಹೆಚ್ಚು ಪ್ರಶಸ್ತವಾದ ಸಮಯವು ಹುಣ್ಣಿಮೆಯಾಗಿದೆ. ಪೂರ್ಣ ಚಂದ್ರನ ದರ್ಶನವನ್ನು ಪಡೆದ ನಂತರ ಒಬ್ಬರು ಈ ಸಹಸ್ರನಾಮವನ್ನು ಪಠಿಸಬೇಕು.
೧೧) ತನ್ನ ಹಾಗು ತನ್ನ ಸಂಗಾತಿಯ ಮತ್ತು ಮಕ್ಕಳ ಜನ್ಮ ನಕ್ಷತ್ರಗಳಿರುವ ದಿನಗಳೂ ಸಹ ಲಲಿತಾ ಸಹಸ್ರನಾಮ ಪಠಣಕ್ಕೆ ಅತ್ಯಂತ ಪ್ರಶಸ್ತ ದಿನಗಳೆಂದು ಪರಿಗಣಿತವಾಗಿವೆ.
ಇತರೇ ಒಳಿತುಗಳು:
೧) ಒಬ್ಬರು ಜ್ವರದ ತಾಪದಿಂದ ಬಳಲುತ್ತಿದ್ದರೆ, ಅಂತಹವರ ತಲೆಯ ಮೇಲೆ ಕೈಯಿರಿಸಿ ಈ ಲಲಿತಾ ಸಹಸ್ರನಾಮದ ಪಠಣವನ್ನು ಕೈಗೊಂಡಲ್ಲಿ ಅವರ ದೇಹದ ಉಷ್ಣತೆಯು ಶಮನಗೊಂಡು ಇತರೇ ವಿಧವಾದ ಬಾಧೆಗಳು ಇಲ್ಲವಾಗುತ್ತವೆ. ಒಂದು ವೇಳೆ ಒಬ್ಬರಿಗೆ ಶಾರೀರಿಕ ಯಾತನೆಗಳಿದ್ದರೆ, ಅವರು ಈ ಲಲಿತಾ ಸಹಸ್ರನಾಮದ ಪಠಣವನ್ನು ಮಾಡಿದಲ್ಲಿ ಅವರ ಯಾತನೆಗಳು ಕೊನೆಗೊಳ್ಳುತ್ತವೆ.
೨) ಪವಿತ್ರ ಭಸ್ಮದ ಮೇಲೆ ಕೈಯಿರಿಸಿ ಈ ಸಹಸ್ರನಾಮವನ್ನು ಪಠಿಸಿದ ನಂತರ ಆ ಪವಿತ್ರ ಭಸ್ಮವನ್ನು ಯಾತನೆಯಿಂದ ನರಳುತ್ತಿರುವವರ ದೇಹಕ್ಕೆ ಲೇಪಿಸಿದಲ್ಲಿ ಅವರ ಯಾತನೆಗಳು ಕಡಿಮೆಯಾಗುತ್ತವೆ.
೩) ಒಂದು ವೇಳೆ ಒಬ್ಬನು ಗ್ರಹದೋಷಗಳಿಂದ ಪೀಡಿತನಾಗಿದ್ದರೆ, ಅವನು ನೀರನ್ನು ಪವಿತ್ರಗೊಳಿಸಿ (ಮಡಿ ನೀರನ್ನು ಇಟ್ಟುಕೊಂಡು) ಆ ನೀರನ್ನು ಇಟ್ಟುಕೊಂಡು ಈ ಸಹಸ್ರನಾಮವನ್ನು ಪಠಿಸಿದಲ್ಲಿ ಅವನ ಗ್ರಹದೋಷಗಳು ದೂರವಾಗುತ್ತವೆ.
೪) ಮಕ್ಕಳಿಲ್ಲದವರಿಗೆ, ಈ ಸಹಸ್ರನಾಮದಿಂದ ಪವಿತ್ರಗೊಂಡ ಬೆಣ್ಣೆಯನ್ನು ತಿನ್ನಲು ಕೊಟ್ಟರೆ ಅವರಿಗೆ ಸಂತಾನಫಲವುಂಟಾಗುವುದೆಂದು ಹೇಳಲಾಗುತ್ತದೆ.
೫) ಭಗವಾನ್ ಶರಭೇಶ್ವರನು ಯಾರು ಈ ಸಹಸ್ರನಾಮವನ್ನು ನಿತ್ಯವೂ ಪಠಿಸುತ್ತಾರೆಯೋ ಅವನ ಶತ್ರುಗಳನ್ನು ಸರ್ವನಾಶ ಮಾಡುತ್ತಾನೆ.
೬) ಈ ಸಹಸ್ರನಾಮವನ್ನು ನಿತ್ಯವೂ ಜಪಿಸುವವರ ಮೇಲೆ ಉಂಟಾಗುವ ದುಷ್ಟ ಶಕ್ತಿಗಳ ಪೀಡನೆಯನ್ನು ಪ್ರತ್ಯಂಗಿರಾ ದೇವಿಯು ನಾಶಮಾಡುತ್ತಾಳೆ. ಪ್ರತ್ಯಂಗಿರಾ ದೇವಿಯು ಶರಭೇಶ್ವರನ ಸಂಗಾತಿಯಾಗಿದ್ದಾಳೆ.
೭) ಈ ಸಹಸ್ರನಾಮವನ್ನು ಪಠಿಸುವವರ ಮೇಲೆ ಯಾರಾದರೂ ಸಿಡುಕು ಮೋರೆ ತೋರಿದರೆ (ಸಿಟ್ಟಾದರೆ) ಅವರನ್ನು ಮಾರ್ತಾಂಡ ಭೈರವನು (ನಾಮ ೭೮೫) ಕುರಡಾಗಿಸುತ್ತಾನೆ.
೮) ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವವರ ಸಿರಿಸಂಪದಗಳಿಗೆ ಯಾರಾದರೂ ಕಳ್ಳತನದ ಮೂಲಕ ಇತರೇ ವಿಧವಾಗಿ ಹಾನಿಯುಂಟು ಮಾಡಿದರೆ ಅವರನ್ನು ಕ್ಷೇತ್ರಪಾಲನು (ನಾಮ ೩೪೪) ಸಂಹರಿಸುತ್ತಾನೆ.
೯) ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವವರೊಂದಿಗೆ ಒಂದು ವೇಳೆ ಯಾರಾದರೂ ಅನಗತ್ಯವಾದ ವಾದವಿವಾದಕ್ಕಿಳಿದರೆ ನಕುಲೀಶ್ವರೀ ದೇವಿಯು ವಾದವಿವಾದ ಮಾಡುವ ಆ ವ್ಯಕ್ತಿಯ ವಾಕ್ಕನ್ನು (ಮಾತನ್ನು) ನಿಷ್ಪ್ರಯೋಜನಗೊಳಿಸುತ್ತಾಳೆ. ನಕುಲೀಶ್ವರೀ ದೇವಿಯನ್ನು ನವಾವರಣದಲ್ಲೂ ಪೂಜಿಸಲಾಗುತ್ತದೆ ಮತ್ತು ಈಕೆಯು ಮಂತ್ರಿಣೀ ದೇವಿ ಎಂದು ಕರೆಯಲ್ಪಡುವ ಶ್ಯಾಮಲಾ ದೇವಿಯ (ನಾಮ ೬೯, ೭೫) ಸಹಾಯಕಿಯಾಗಿದ್ದಾಳೆ.
೧೦) ಒಂದು ವೇಳೆ ಈ ಲಲಿತಾ ಸಹಸ್ರನಾಮವನ್ನು ನಿತ್ಯವೂ ಜಪಿಸುವವರ ಮೇಲೆ ಶತ್ರುತ್ವವನ್ನು ಒಬ್ಬ ರಾಜನೇ ತೆಳೆದಿದ್ದರೂ ಸಹ ಅವನ ಸೈನ್ಯವನ್ನು ಸ್ವಯಂ ಲಲಿತಾಂಬಿಕೆಯ ಸೇನಾ ಪ್ರಮುಖಳಾಗಿರುವ ದಂಡಿನೀ ದೇವಿಯು (ವಾರಾಹೀ) (ನಾಮ ೭೦, ೭೬) ನಾಶಪಡಿಸುತ್ತಾಳೆ; ಈ ವಿಷಯವಾಗಿ ಅವಳಲ್ಲಿ ಭಕ್ತನು ಬೇಡದಿದ್ದರೂ ಸಹ ಮತ್ತು ಅದಕ್ಕೆ ಲಲಿತಾಂಬಿಕೆಯ ಆಜ್ಞೆಯಿಲ್ಲದಿದ್ದರೂ ಸಹ.
೧೧) ಯಾರು ಈ ಸಹಸ್ರನಾಮವನ್ನು ಕನಿಷ್ಠ ಆರು ತಿಂಗಳ ಕಾಲ ನಿತ್ಯವೂ ಪಠಿಸುತ್ತಾರೆಯೋ ಅವನಿರುವ ಸ್ಥಳವನ್ನು ಬಿಟ್ಟು ಲಕ್ಷ್ಮೀ ದೇವಿಯು ಎಂದಿಗೂ ದೂರ ಹೋಗುವುದಿಲ್ಲ.
೧೨) ಯಾರು ಈ ಲಲಿತಾ ಸಹಸ್ರನಾಮವನ್ನು ಒಂದು ತಿಂಗಳ ಕಾಲ ತ್ರಿಕಾಲವೂ ಪಠಿಸುತ್ತಾರೋ ಅಂತಹವರ ಮಾತುಗಳಲ್ಲಿ ಮಾತಿನ ಅಧಿದೇವತೆಯಾದ ಸರಸ್ವತೀ ದೇವಿಯು ನಲಿಯುತ್ತಾಳೆ.
೧೩) ಒಂದು ವೇಳೆ ಈ ಸಹಸ್ರನಾಮವನ್ನು ಹದಿನೈದು ರಾತ್ರಿಗಳು ಪಠಿಸಿದರೆ ಅಂತಹ ವ್ಯಕ್ತಿಯು ಇತರೇ ಲಿಂಗದ ವ್ಯಕ್ತಿಗಳಿಗೆ ಆಕರ್ಷಣೀಯನಾಗುತ್ತಾನೆ.
೧೪) ಯಾರು ಈ ಸಹಸ್ರನಾಮವನ್ನು ಒಂದೇ ಒಂದು ಬಾರಿ ಪಠಿಸಿದವರ ದರ್ಶನವನ್ನು ಮಾಡುತ್ತಾರೋ ಅಂತಹವರು ಪಾಪಗಳಿಂದ ಮುಕ್ತರಾಗುತ್ತಾರೆ.
೧೫) ಲಲಿತಾಂಬಿಕೆಯನ್ನು ಸಂತುಷ್ಟ ಪಡಿಸಲು ಯಾರು ಈ ಸಹಸ್ರನಾಮವನ್ನು ಅರ್ಥಮಾಡಿಕೊಳ್ಳುತ್ತಾರೋ ಅವರಿಗೆ ಕಾಣಿಕೆ ಮತ್ತು ದಾನಗಳನ್ನು ಕೊಡಬೇಕು. ಯೋಗ್ಯ ವ್ಯಕ್ತಿಗಳಿಗೆ ದಾನವನ್ನು ಕೊಡುವುದೂ ಸಹ ಒಬ್ಬನ ಪ್ರಮುಖ ಕರ್ತವ್ಯವಾಗಿದೆ. ಅನರ್ಹ ವ್ಯಕ್ತಿಗೆ ಮಾಡಿದ ದಾನವು ಅಧಿಕವಾದ ಪಾಪಕರ್ಮವನ್ನುಂಟು ಮಾಡುತ್ತದೆ. ದಾನಕ್ಕಿಂತ ದಾನವನ್ನು ಕೊಡಲು ಯೋಗ್ಯ ವ್ಯಕ್ತಿಯನ್ನು ಆರಿಸುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.
೧೬) ಯಾರು ಶ್ರೀ ವಿದ್ಯಾ ದೀಕ್ಷೆಯನ್ನು ಪಡೆದು ಶ್ರೀ ಚಕ್ರದ ಪೂಜೆಯನ್ನು ಕೈಗೊಂಡು ಲಲಿತಾ ಸಹಸ್ರನಾಮದ ಪಠಣವನ್ನು ಮಾಡುತ್ತಾರೋ ಅಂತಹವರು ಅತ್ಯಂತ ಪೂಜನೀಯರು ಎಂದು ಪರಿಗಣಿಸಲ್ಪಡುತ್ತಾರೆ. ಮೂಲ ಶ್ಲೋಕದಲ್ಲಿ ಶ್ರೀ ವಿದ್ಯೆಯನ್ನು ಸೂಚಿಸಲು ’ಮಂತ್ರರಾಜಂ’ ಶಬ್ದವನ್ನು ಬಳಸಿದ್ದಾರೆ. (ಲಕ್ಷ್ಮೀನರಸಿಂಹ ಮಂತ್ರವನ್ನೂ ಸಹ ಮಂತ್ರರಾಜಂ ಹೆಸರಿನಿಂದ ಕರೆಯುತ್ತಾರೆ). ಶ್ರೀ ವಿದ್ಯಾ ಮಂತ್ರ ದೀಕ್ಷೆಯನ್ನು ಪಡೆಯದ ಹೊರತು ಒಬ್ಬನು ಸಹಸ್ರನಾಮವನ್ನು ಪಠಿಸಬಾರದೆಂದೂ ಸಹ ಹೇಳಲಾಗುತ್ತದೆ.
೧೭) ಈ ಸಹಸ್ರನಾಮದ ಅರ್ಥವನ್ನು ತಿಳಿಯದೇ ಪಠಿಸಿದಲ್ಲಿ ಅದು ಆರಿದ ಬೆಂಕಿಯಲ್ಲಿ ಕಟ್ಟಿಗೆಯ ಕೊರಡನ್ನಿಡುವುದಕ್ಕೆ ಸಮನಾದುದು. ಆದರೆ ನಾಮಗಳ ಅರ್ಥಗಳನ್ನು ತಿಳಿಯದವರೂ ಸಹ ಲಲಿತಾಸಹಸ್ರನಾಮವನ್ನು ಪಠಿಸಬಹುದೆಂದು ಹೇಳಲಾಗಿದೆ. ಇದರ ಒಟ್ಟಾರೆ ಉದ್ದೇಶವೇನೆಂದರೆ ಯಾರು ಸಹಸ್ರನಾಮದ ಅರ್ಥಗಳನ್ನು ತಿಳಿಯಲು ಶಕ್ಯರಾಗಿದ್ದಾರೋ ಅವರು ಅರ್ಥಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಯಾರಿಗೆ ಇದರ ಅರ್ಥಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯವಿಲ್ಲವೋ ಅವರಿಗೆ ಮಾತ್ರ ಇದರಿಂದ ವಿನಾಯತಿಯನ್ನು ಕೊಡಲಾಗಿದೆ. ಅವನಿಗೆ ಇದನ್ನು ಅರಿಯಲು ಬೇಕಾಗಿರುವ ಅವಶ್ಯವಾದ ಜ್ಞಾನವು ಮುಂದಿನ ಜನ್ಮದಲ್ಲಿ ದೊರೆಯುತ್ತದೆ.
೧೮) ಜೀವಿತಕಾಲದಲ್ಲಿ ಒಮ್ಮೆ ಶ್ರೀ ಚಕ್ರದ ಪೂಜೆಯನ್ನು ಒಂದು ಸಹಸ್ರ ಸುವಾಸನೆಯುಳ್ಳ ಪುಷ್ಟಗಳಿಂದ ಪೂಜಿಸಿದಲ್ಲಿ ಅವನಿಗೆ ಉಂಟಾಗುವ ಪುಣ್ಯಫಲವನ್ನು ಶಿವನಿಂದಲೂ ಸಹ ವಿವರಿಸಲು ಸಾಧ್ಯವಿಲ್ಲ. ಇದನ್ನೇ ಅರ್ಚನೆ ಎಂದು ಕರೆಯುತ್ತಾರೆ. ಪ್ರತಿಯೊಂದು ನಾಮದ ಕೊನೆಯಲ್ಲಿ ನಮಃ ಶಬ್ದವನ್ನು ಹೇಳಬೇಕು. ಹದಿನೈದು ವಿಧವಾದ ಪುಷ್ಟಗಳನ್ನು ಹೆಸರಿಸಲಾಗಿದೆ, ಆದರೆ ಯಾವುದೇ ವಿಧವಾದ ಪರಿಮಳಭರಿತ ಹೂವುಗಳನ್ನೂ ಸಹ ಅರ್ಚನೆಗೆ ಬಳಸಬಹುದು. ತುಳಸೀ ಗಿಡದ ಹೂವುಗಳನ್ನೂ ಸಹ ಬಳಸಬಹುದು ಆದರೆ ಪತ್ರಗಳನ್ನಲ್ಲ. ಎಲ್ಲಕ್ಕಿಂತ ಶ್ರೇಷ್ಠವಾದ ಪುಷ್ಪವೆಂದರೆ ಕೇಸರೀ ಹೂವು.
೧೯) ಅರ್ಚನೆ ಎಂದರೆ ಪ್ರತಿ ನಾಮಕ್ಕೂ ಓಂ-ಐಂ-ಹ್ರೀಂ-ಶ್ರೀಂನ್ನು ಪೂರ್ವಪ್ರತ್ಯಯವಾಗಿ ಜೋಡಿಸಬೇಕು ಮತ್ತು ನಮಃ ಎನ್ನುವುದನ್ನು ಉತ್ತರ ಪ್ರತ್ಯಯವಾಗಿ ಜೋಡಿಸಬೇಕು. ಉದಾಹರಣೆಗೆ ಮೊದಲನೇ ನಾಮವನ್ನು ‘ಓಂ-ಐಂ-ಹ್ರೀಂ-ಶ್ರೀಂ-ಶ್ರೀ ಮಾತ್ರೇ ನಮಃ’ ಎಂದು ಉಚ್ಛರಿಸಬೇಕು.
ಅರ್ಚನೆಯನ್ನು ಕೈಗೊಳ್ಳುವ ಮುನ್ನ ಒಬ್ಬರು ಸಂಕಲ್ಪವನ್ನು ಮಾಡಬೇಕು, ಅದನ್ನನುಸರಿಸಿ ನ್ಯಾಸ, ಅರ್ಚನೆ ಮತ್ತು ಪುನಃ ‘ಓಂ’ ಎಂದು ಕಡೆಯ ನಾಮದ ಅರ್ಚನೆಯಲ್ಲಿ ಹೇಳಬೇಕು - ಓಂ-ಐಂ-ಹ್ರೀಂ-ಶ್ರೀಂ-ಲಲಿತಾಂಬಿಕಾಯೈ ನಮಃ ಓಂ. ನಾವು ಹೂವುಗಳನ್ನು ಇರಿಸುವ ಕ್ರಮಕ್ಕೂ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಹೂವುಗಳು ಅರಳುವ ವಿಧಾನದಲ್ಲಿಯೇ ಅವುಗಳನ್ನು ಶ್ರೀ ಚಕ್ರದ ಮೇಲೆ ಇರಿಸಬೇಕು, ಅವುಗಳ ದಳಗಳು ಮೇಲ್ಮುಖವಾಗಿರಬೇಕು.
ಯಾರು ಮೇಲೆ ತಿಳಿಸಿದ ಪ್ರಕಾರ ಪೂಜೆಯನ್ನು ಹುಣ್ಣಿಮೆಯಂದು ಮಾಡುತ್ತಾರೋ ಅವರು ಲಲಿತಾಂಬಿಕೆಯ ಸ್ವರೂಪವನ್ನು ಪಡೆಯುತ್ತಾರೆ. ಒಂದು ವೇಳೆ ಯಾರು ಅಂತಹ ವ್ಯಕ್ತಿಗಳನ್ನು ಲಲಿತಾಂಬಿಕೆಯ ಸ್ವರೂಪವೆಂದು ಭಾವಿಸುವುದಿಲ್ಲವೋ ಅವರು ಪಾಪ ಬಾಧಿತರಾಗುತ್ತಾರೆ.
೨೦) ಯಾರು ಮೇಲೆ ತಿಳಿಸಿದ ಪೂಜೆಯನ್ನು ದಸರೆಯ ಒಂಬತ್ತನೇ ದಿನವಾದ ಮಹಾನವಮಿಯಂದು ಕೈಗೊಳ್ಳುತ್ತಾರೋ ಅವರು ಮುಕ್ತಿಯನ್ನು ಹೊಂದುತ್ತಾರೆ. ಮಹಾನವಮಿಯು ಶಿವ ಮತ್ತು ಶಕ್ತಿಯರ ದಿನವಾಗಿದೆ. ಅಷ್ಟಮಿಯು ರುದ್ರನಿಗೆ ಮತ್ತು ನವಮಿಯು ಶಕ್ತಿಗೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಇವೆರಡೂ ದಿನಗಳ ಸಂಧಿಕಾಲವು ಶಿವನನ್ನು ಪೂಜಿಸಲು ಅತ್ಯಂತ ಪ್ರಶಸ್ತ ಸಮಯವೆಂದು ಪರಿಗಣಿಸಲ್ಪಟ್ಟಿದ್ದು ಅಂದು ಪೂಜಿಸಿದವರ ಬೇಡಿಕೆಗಳು ಇಡೇರುತ್ತವೆ. ಅವನು ಪುತ್ರ-ಪೌತ್ರಾದಿಗಳೊಂದಿಗೆ ಬಹುಕಾಲ ಜೀವಿಸುತ್ತಾನೆ. ಅಂತಿಮವಾಗಿ ಅವನು ಲಲಿತಾಂಬಿಕೆಯ ಪಾದಪದ್ಮಗಳನ್ನು ಹೊಂದುತ್ತಾನೆ (ನಾಮ ೯೧೨).
೨೧) ಯಾರು ಇಂತಹ ಆಚರಣೆಗಳನ್ನು ಎಲ್ಲಾ ಶುಕ್ರವಾರಗಳಲ್ಲಿ ಕೈಗೊಳ್ಳುತ್ತಾರೆಯೋ ಅಂತಹವರು ಶ್ರೀ ವಿದ್ಯಾ ಉಪಾಸನೆಯಲ್ಲಿ ಪರಿಣಿತರಾದವರಿಗೆ ಭೋಜನವನ್ನು ಏರ್ಪಡಿಸಬೇಕು. ಹೀಗೆ ಮಾಡಿದಲ್ಲಿ ಲಲಿತಾಂಬಿಕೆಯು ಅತ್ಯಂತ ಸಂತುಷ್ಟಳಾಗಿ ಅವನು ಬೇಡಿದ ವರಗಳನ್ನೆಲ್ಲಾ ದಯಪಾಲಿಸುತ್ತಾಳೆ. ಅವನು ಸ್ವಯಂ ಲಲಿತಾಂಬಿಕೆಯ ಶಕ್ತಿಗಳನ್ನೇ ಪಡೆಯುವನೆಂದು ಹೇಳಲಾಗುತ್ತದೆ. ಇದಕ್ಕೆ ಸಂಭಂದಿಸಿದ ಅನುಷ್ಠಾನ ವಿಧಿಗಳು ಬಹಳಷ್ಟು ದೀರ್ಘವಾಗಿವೆ.
೨೨) ಯಾರು ಈ ಲಲಿತಾ ಸಹಸ್ರನಾಮವನ್ನು ಯಾವುದೇ ವಿಧವಾದ ಬಯಕೆಗಳಿಲ್ಲದೆ ಪಠಿಸುತ್ತಾರೋ ಅವರು ಸಂಸಾರ ಬಂಧನದಿಂದ ಮುಕ್ತರಾಗಿ ಅಂತಿಮವಾಗಿ ಆಕೆಯಲ್ಲಿ ಐಕ್ಯರಾಗುತ್ತಾರೆ.
೨೩) ಈ ಸಹಸ್ರನಾಮವು ಭುಕ್ತಿ-ಮುಕ್ತಿ ಪ್ರದಾಯಕವಾಗಿದೆ.
೨೪) ಒಬ್ಬನಿಗೆ ಶ್ರೀ ವಿದ್ಯಾ ದೀಕ್ಷೆಯು ಅವನ ಕಡೆಯ ಜನ್ಮದಲ್ಲಿ ಕೊಡಮಾಡಲ್ಪಡುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಅವಕಾಶವು ಏಕೆ ಸಿಗುತ್ತದೆಂದರೆ ಅವನು ಪೂರ್ವ ಜನ್ಮಗಳಲ್ಲಿ ಅನೇಕ ದೇವ-ದೇವಿಯರನ್ನು ಪೂಜಿಸಿ ಪುಣ್ಯವನ್ನು ಪಡೆದಿರಬೇಕು.
೨೫) ಒಬ್ಬನಿಗೆ ಸಹಸ್ರನಾಮದ ಉಪದೇಶವನ್ನು ಶ್ರೀ ವಿದ್ಯಾ ದೀಕ್ಷೆಯ ಮೊದಲೇ ಕೊಟ್ಟರೆ, ಅವನಿಗೆ ದೀಕ್ಷೆಯನ್ನು ಕೊಟ್ಟವರು ಮತ್ತು ದೀಕ್ಷೆಯನ್ನು ಪಡೆದುಕೊಂಡವರು ಇಬ್ಬರೂ ದೋಷಗ್ರಸ್ತರಾಗುತ್ತಾರೆ. ಅದೇ ವಿಧವಾಗಿ ಯಾರ ಮನಸ್ಸು ಪರಿಶುದ್ಧವಾಗಿಲ್ಲವೋ ಅಂತಹವರಿಗೆ ಶ್ರೀ ವಿದ್ಯಾ ದೀಕ್ಷೆಯನ್ನು ಕೊಟ್ಟರೆ ಆಗಲೂ ಸಹ ಇಬ್ಬರಿಗೂ ದೋಷವುಂಟಾಗುವುದು.
ಅಂತಿಮವಾಗಿ ಹಯಗ್ರೀವನು ಈ ರಹಸ್ಯವನ್ನು ಅಗಸ್ತ್ಯನೊಂದಿಗೆ ಹಂಚಿಕೊಂಡದ್ದು ಲಲಿತಾಂಬಿಕೆಯ ಆಜ್ಞೆಯ ಮೇರೆಗೆ ಎಂದು ಹೇಳುತ್ತಾನೆ. ಹಯಗ್ರೀವನು ಅಗಸ್ತ್ಯನಿಗೆ ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವಂತೆ ಹೇಳಿ, ಅದರ ಮೂಲಕ ಅವನು ಬೇಡಿದ್ದನ್ನು ದೇವಿಯು ಕರುಣಿಸುತ್ತಾಳೆ ಎಂದು ತಿಳಿಸುತ್ತಾನೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITA SAHASRANAMA - PALA SRUTI http://www.manblunder.com/2011/12/lalita-sahasranama-pala-sruti.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ
ಫಲಶೃತಿ ಹಾಕಿಲ್ಲ ತಿಳಿಸೋಣ ಅಂತ ಅಂದುಕೊಳ್ತಾ ಇದ್ದೆ ಇವತ್ತು ಸಂಪದ ತೆರೆದ ತಕ್ಷಣ ಅದೇ ಕಣ್ಣಿಗೆ ಕಾಣಿಸಿತು ಒಳ್ಳೆಯ ಮಾಹಿತಿಗೆ ಧನ್ಯವಾದಗಳು ............ಸತೀಶ್
In reply to ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ by sathishnasa
ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ
ಸತೀಶರೆ,
ಎಲೆಮರೆಯ ಕಾಯಿಯಂತೆ ನೀವು ಎಲೆಮರೆಯ ಓದುಗರು. ಅನೇಕ ವೇಳೆ ನಿಮ್ಮ ಹೆಸರೇ ಮರೆತು ಹೋಗಿರುತ್ತದೆ, ಆದರೆ ಖಂಡಿತಾ ನಿಮ್ಮ ಸಲಹೆ ಸೂಚನೆಗಳು ಪಾಲಿಸಲು ಸೂಕ್ತವಾದಂತಹುವುಗಳಾಗಿರುತ್ತವೆ. ವಿಷ್ಣು ಸಹಸ್ರನಾಮದ ಕುರಿತಾಗಿ ಹಿಂದಿನ ಪ್ರತಿಕ್ರಿಯೆಯಲ್ಲಿ ಕೇಳಿದ್ದಿರಿ, ಇದರ ಕುರಿತ ಒಂದು ಬಹಳ ಒಳ್ಳೆಯ ಕೃತಿಯನ್ನು ಇದಾಗಲೇ ಬೆಂಗಳೂರಿನ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾಗಿರುವ ಸ್ವಾಮಿ ಹರ್ಷಾನಂದರು ರಚಿಸಿದ್ದಾರೆ. ನಿಮ್ಮ ಸಮೀಪದ ರಾಮಕೃಷ್ಣ ಮಠದಲ್ಲಿ ಇದರ ಪ್ರತಿಗಳು ಸಿಗಬಹುದು. (ಬೆಳಿಗ್ಗೆ ಕಾರ್ಯನಿಮಿತ್ತ ತ್ವರಿತವಾಗಿ ಮನೆ ಬಿಡಬೇಕಾದ್ದರಿಂದ ಎಲ್ಲಾ ಪ್ರತಿಕ್ರಿಯೆಗಳಿಗೆ ಉತ್ತರಿಸಲಾಗಿರಲಿಲ್ಲ, ಹಾಗಾಗಿ ಕೇವಲ ಫಲಶ್ರುತಿಯೊಂದನ್ನು ಸೇರಿಸಿ ಅವಸರವಸರವಾಗಿ ನಾಗೇಶರ ಪ್ರತಿಕ್ರಿಯೆಯೊಂದಕ್ಕೆ ಮರುಪ್ರತಿಕ್ರಿಯಿಸಿ ಹೊರಟು ಹೋಗಿದ್ದೆ, ಈಗ ನಿಧಾನವಾಗಿ ಒಂದೊಂದಾಗಿ ಪ್ರತ್ಯುತ್ತರ ಕೊಡುತ್ತಿದ್ದೇನೆ).
ವಂದನಗೆಳು,
ಶ್ರೀಧರ್ ಬಂಡ್ರಿ
ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ
ಆತ್ಮೀಯ ಸಂಪದಿಗರೆ,
ಇಂದಿಗೆ ಈ ಕೃತಿಗೆ ಸಂಭಂದಿಸಿದ ಎಲ್ಲಾ ಕಂತುಗಳೂ ಮುಗಿದಿವೆ. ಈ ಮಾಲಿಕೆಯನ್ನು ನಿರಂತರವಾಗಿ ಓದುತ್ತಾ ನನ್ನನ್ನು ಉತ್ತೇಜನಗೊಳಿಸುವುದರೊಂದಿಗೆ ಲಲಿತಾಂಬಿಕೆಯ ಕುರಿತಾದ ಅನೇಕ ವಿಷಯಗಳನ್ನು ನಿಮ್ಮೊಂದಿಗೆ ನಾನೂ ಸಹ ಸೂಕ್ತವಾಗಿ ಅರಿತುಕೊಳ್ಳಲು ಸಹಾಯ ಮಾಡಿದ್ದೀರ. ಆದ್ದರಿಂದ ಎಲ್ಲಾ ಸಹೃದಯೀ ಓದುಗರಿಗೂ ನನ್ನ ಧನ್ಯವಾದಗಳು. ಈ ಕೃತಿಯನ್ನು ನಿರಂತರವಾಗಿ ಓದುವುದರೊಂದಿಗೆ ಆಗಾಗ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ಕೊಡುವುದರೊಂದಿಗೆ ವಿಶೇಷ ವಿಷಯಗಳ ಕುರಿತ ಮಾಹಿತಿಯುಳ್ಳ ಕೊಂಡಿಯನ್ನು ಒದಗಿಸಿದಕ್ಕೆ ಗಣೇಶರಿಗೆ ನನ್ನ ಕೃತಜ್ಞತೆಗಳು. ಅದರೊಂದಿಗೆ, ನಾನು ಆಲೋಚಿಸದೇ ಇದ್ದ ವಿಷಯಗಳ ಕುರಿತಾಗಿ ಸೂಕ್ತವಾದ ಪ್ರಶ್ನೆಗಳನ್ನು ಕೇಳಿ ವಿಷಯದ ಆಳಕ್ಕೆ ಇಳಿಯಲು ಸಹಾಯ ಮಾಡಿದ ಪಾರ್ಥಸಾರಥಿಯವರಿಗೆ ನನ್ನ ನಮಸ್ಕಾರಗಳು. ಅದರೊಂದಿಗೆ ಹಿರಿಯ ಓದುಗರಾದ ಸ್ವರ ಕಾಮತ್ ಸರ್, ಹೊರಲವೆಂ ಸರ್, ಹರಿಹರಪುರದ ಶ್ರೀಧರ್ ಸರ್, ಕವಿ ನಾಗರಾಜರು, ಮೌನ ಓದುಗರಾದ ಸತೀಶರು, ಶ್ರೀಮತಿ ಪ್ರೇಮಾ ಭಟ್, ನೀಳಾದೇವಿಯವರು ಮೊದಲಾದ ಓದುಗರಿಗೂ ಸಹ ನನ್ನ ನಮನಗಳು. ಹಲವಾರು ಕಡೆ ಸಂಸ್ಕೃತದ ಪದಗಳಿಗೆ ಸರಿಯಾದ ಅರ್ಥಗಳನ್ನು ತಿಳಿಸಿಕೊಡುವುದಲ್ಲದೇ ಅವುಗಳಿಗೆ ಸೂಕ್ತವಾದ ವಿವರಣೆಯನ್ನು ಒದಗಿಸಿದ ಅನಂತೇಶ್ ನೆಂಪು ಅವರು ವಿಶೇಷ ಮನ್ನಣೆಗೆ ಪಾತ್ರರು. ಇಲ್ಲಿ ಹೆಸರಿಸಲಾಗದೇ ಇರುವ ಅನೇಕ ಓದುಗರೂ ಸಹ ನಿರಂತರವಾಗಿ ಈ ಮಾಲಿಕೆಯನ್ನು ಓದಿ ನನ್ನನ್ನು ಈ ಕೃತಿಯನ್ನು ಪೂರ್ಣಗೊಳಿಸುವುದಕ್ಕೆ ಕಾರಣರಾಗಿದ್ದಾರೆ, ಅವರಿಗೂ ಸಹ ನನ್ನ ಕೃತಜ್ಞತೆಗಳು. ಈ ಮಾಲಿಕೆಯನ್ನು ಸಂಪದದಲ್ಲಿ ಪ್ರಕಟಿಸಲು ಅನುವು ಮಾಡಿ ಕೊಟ್ಟಿರುವ ಮತ್ತು ಹಲವಾರು ಕಂತುಗಳನ್ನು ವಾರದ ವಿಶೇಷ ಲೇಖನವಾಗಿ ಆಯ್ಕೆ ಮಾಡಿ ಕನ್ನಡ ಲೇಖನಗಳನ್ನು ಬರೆಯುವವರಿಗೆ ಪ್ರೋತ್ಸಾಹ ಕೊಟ್ಟಿರುವ ಶ್ರೀಯುತ ಹರಿಪ್ರಸಾದ ನಾಡಿಗರಿಗೂ ಸಹ ನನ್ನ ವಿಶೇಷ ಕೃತಜ್ಞತೆಗಳು. ಸಂಪದಿಗರೆಲ್ಲರಿಗೂ ಲಲಿತಾಂಬಿಕೆಯು ಸಿರಿ ಸಂಪದಗಳನ್ನು ಮತ್ತು ಆಯುರಾರೋಗ್ಯಗಳನ್ನು ಕರುಣಿಸಿಲಿ. ಈ ಮಾಲಿಕೆಯನ್ನು ಅನುವಾದಿಸಲು ಅನುಮತಿಯಿತ್ತ ಮತ್ತು ಅದಕ್ಕೆ ಪೂರಕವಾಗಿ ತಮ್ಮ ಮೂಲ ಕೃತಿಯನ್ನು ನನಗೆ ಪ್ರಸಾದ ರೂಪದಲ್ಲಿ ಇತ್ತ ಮತ್ತು ಶ್ರೀ ಲಲಿತಾಂಬಿಕೆಯ ಚಿತ್ರವನ್ನೂ ಸಹ ಕಳುಹಿಸಿಕೊಟ್ಟು ನನ್ನನ್ನು ನಿರಂತರ ಪ್ರೋತ್ಸಾಹಿಸಿ ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಪ್ರೇಮಪೂರ್ವಕ ಒತ್ತಾಯ ಮಾಡುತ್ತಿರುವ ಈ ಮಾಲಿಕೆಯ ಮೂಲ ಕರ್ತೃವಾದ ಮತ್ತು ಗುರು ಸ್ವರೂಪಿಯಾದ ಶ್ರೀಯುತ ರವಿಯವರಿಗೆ ನನ್ನ ಪ್ರಣಾಮಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ.
ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ
ಶ್ರೀಧರ ಬಂಡ್ರಿ ಯವರಲ್ಲಿ ನೀಳಾ ಮಾಡುವ ನಮಸ್ಕಾರಗಳು ಈ ೬-೭ ತಿಂಗಳು ನಮಗೆ ಲಲಿತಾ ಸಹಸ್ರನಾಮದ ತಿರುಳನ್ನು ಉಣಬಡಿಸಿದ್ದೀರ ೧೦೦೦ ನಾಮಗಳ ತಿರುಳನ್ನು ಓದಿ ನನ್ನ ಜನುಮ ಸಾರ್ತಕ ವಾಯಿತು ಓದುವಾಗ ಮನಸ್ಸು ಲಲಿತೆಯಲ್ಲೇ ತಲ್ಲೀನವಾಗುತ್ತಿತ್ತು ನಂತರದ ೫ ನಿಮಿಷಗಳು ಹೊರಬರಲು ಬೇಕಾಗುತ್ತಿತ್ತು
ತಮ್ಮ ಗುರುಗಳಾದ ಶ್ರೀಯುತ ರವಿ ಯವರಿಗೂ ನನ್ನ ನಮಸ್ಕಾರಗಳು ಅವರ ಆಂಗ್ಲ ಭಾಷೆಯ ತಿರುಳನ್ನು ಸಹ ಜತೆಜತೆಯಾಗಿ ಓದುತ್ತಿದ್ದೆ
ತಾವು ಇದನ್ನು ಪುಸ್ತಕ ರೂಪದಲ್ಲಿ ತಂದರೆ ಸಂಪದದಲ್ಲಿ ತಿಳಿಸಿ
ನಾಗೇಶ್ ಮೈಸೂರ್ ರವರ ಲಲಿತಾ ಸಹಸ್ರನಾಮದ ಕವನಗಳನ್ನೂ ಓದಿ ಮನ ಮುದಗೊಳ್ಳುತ್ತಿತ್ತು
ಹೀಗೇ ಆಂಜನೇಯನ ಬಗ್ಗೆ ತಾವು ಬರೆದರೆ ಓದಿ ನಾನು ಪಾವನಳಾಗುತ್ತಿನಿ
ಸಂಪದದ ಎಲ್ಲರಿಗೂ ಶ್ರೀ ಲಲಿತೆ ಶುಭವಾಗಲೆಂದು ಹರಸಲಿ
ನೀಳಾ
In reply to ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ by neela devi kn
ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ
ನೀಳಾ ಅವರೆ,
ನಿಮ್ಮ ಹೃದಯಪೂರ್ವಕ ಪ್ರತಿಕ್ರಿಯೆಗೆ ನಾನು ಆಭಾರಿಯಾಗಿದ್ದೇನೆ. ಇದನ್ನು ಪುಸ್ತಕ ರೂಪದಲ್ಲಿ ತರುವ ಆಲೋಚನೆಯಿದೆ ಅದು ಆರಂಭವಾದ ಮೇಲೆ ಖಂಡಿತಾ ನಿಮಗೆ ತಿಳಿಸುತ್ತೇನೆ. ಆಂಜನೇಯನ ಕುರಿತು ನನಗಿರುವುದು ಪರಿಮಿತ ಜ್ಞಾನ ಹಾಗಾಗಿ ಯಾರಾದರೂ ಇತರೇ ಭಾಷೆಯಲ್ಲಿ ಇಂಗ್ಲೀಷ್/ತೆಲುಗಿನಲ್ಲಿ ಸಕಲರಿಗೂ ಒಪ್ಪಿಗೆಯಾಗುವಂತಹ ಲೇಖನಗಳನ್ನು ರಚಿಸಿದ್ದರೆ ಅದನ್ನು ಅನುವಾದ ಮಾಡುವ ಸಾಹಸಕ್ಕೆ ಕೈಹಾಕುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ
ಶ್ರೀಧರರೆ, ಫಲಶ್ರುತಿಯ ಕಾವ್ಯರೂಪವನ್ನು ಸೇರಿಸುತ್ತಿದ್ದೇನೆ, ತಮ್ಮ ಪರಿಷ್ಕರಣೆಗೆ :-)
.
೨೧೨. ಲಲಿತಾ ಸಹಸ್ರನಾಮ - ಫಲಶ್ರುತಿಯ ವಿವರಣೆ
______________________________________
.
.
ಲಲಿತಾ ಸಹಸ್ರನಾಮ - ಫಲಶ್ರುತಿ ಅಥವಾ ಉತ್ತರಭಾಗ
_____________________________________
.
ದೇವಿಯನುಜ್ಞೆಯನುಸಾರ ಹಯಗ್ರೀವ, ಅಗಸ್ತ್ಯನಿಗೆ ಭೋಧಿಸುತ
ದೇವಿ ಲಲಿತೆಯ ಸಹಸ್ರ ನಾಮೋಚ್ಛಾರಣೆ ಸ್ತುತಿಯ ಮುಗಿಸುತ
ಕೇವಲ ನಾಮಗಳಲ್ಲ ನಿಗೂಢ ಮಂತ್ರ, ಶ್ರೀ ಲಲಿತೆಗೆ ಬಲು ಪ್ರೀತಿ
ಪ್ರತಿ ನಾಮದಲು ಬೀಜಾಕ್ಷರ ಹುದುಗಿ, ದೃಢಮಂತ್ರದ ಫಲಶೃತಿ ||
.
ಉಚ್ಛಾರಣ ಫಲ,ವಾಚನ ವಿಧಾನ:
________________________________________
.
ಸುಸಂತಾನಾರೋಗ್ಯ, ದಾರಿದ್ರ್ಯ ನಿರ್ಮೂಲ ನಾಮೋಚ್ಛಾರಣೆ ಫಲ
ಅಸಹಜ ಮರಣಾಪಘಾತ ನಿವಾರಣ,ಇಹದೈಶ್ವರ್ಯ ಅನುಕೂಲ
ಸ್ನಾನಾ ಪೂಜೋತ್ತರ ಶ್ರೀ ಚಕ್ರ, ನಮಿಸಿ ಪಂಚದಶೀ ಷೋಡಶಿ ಜಪ
ಸಹಸ್ರನಾಮವಾಚಿಸಿ ಪುಷ್ಪಸಮರ್ಪಣ, ದೀಕ್ಷೆರಹಿತ ಬರಿ ನಮಿಪ ||
.
ಒಬ್ಬನು ಜೀವಿತಕಾಲದಲ್ಲಿ ಒಂದೇ ಬಾರಿಗೆ ಈ ಸಹಸ್ರನಾಮವನ್ನು ಪಠಿಸಿದರೆ ಉಂಟಾಗುವ ಫಲಗಳು:
_____________________________________________________________
.
ಪವಿತ್ರ ನದಿ ಜಳಕಾಧಿಕ ಫಲ, ಕಾಶಿಲಿಂಗ ಪ್ರತಿಷ್ಟಾಪನೆ ಮೀರಿದ ಪುಣ್ಯ
ಕುರುಕ್ಷೇತ್ರ ಗ್ರಹಣ ಸುವರ್ಣ ದ್ವಿಜ ದಾನಕು, ಮಿಕ್ಕಿದ ಪುಣ್ಯದ ಕಾರುಣ್ಯ
ಗಂಗಾತಟದಾಶ್ವಮೇಧಕು ಅಧಿಕ, ಒಂದೆ ನಾಮೋಚ್ಛಾರಕು ಪಾಪ ಮುಕ್ತ
ಶಾಸ್ತ್ರವಿಧಿ ಕರ್ಮ ನಿರ್ಲಕ್ಷ್ಯ ಪಾಪ, ಸಹಸ್ರನಾಮ ಪಠನೆ ನಿರ್ಮೂಲಿಸುತ ||
.
ಪ್ರಾಯಶ್ಚಿತಕೆ ಶ್ರೀ ವಿದ್ಯಾ ಉಪಾಸಕ, ಸಹಸ್ರ ನಾಮ ಪಠನೆಯಲಷ್ಟೆ ಸ್ವಸ್ಥ
ಪ್ರೀತಿಯಿಂದ ನಿತ್ಯ ಪಠಿಸಿದರೆ ಭಕ್ತ, ಸಂಪ್ರೀತಳಾಗಿ ಸಕಲೆಚ್ಛೆ ಪೂರೈಸುತ
ನಿತ್ಯವಿರದಿರೆ ಹಬ್ಬಾ ಹರಿದಿನ, ಸಂಕ್ರಾಂತಿ-ವಿಶು-ಉತ್ತರಾ-ದಕ್ಷಿಣಾಯಣ
ಅಷ್ಟಮಿ-ನವಮಿ-ಚತುರ್ದಶೀ-ಶುಕ್ರ, ಹುಣ್ಣಿಮೆ-ಕುಟುಂಬ ಜನ್ಮನಕ್ಷತ್ರದಿನ ||
.
ಇತರೆ ಒಳಿತುಗಳು:
__________________________________________
.
ಜ್ವರತಾಪಕೆ ಶಿರದೆ ವರದಾ ಪಠನೆ, ಮಾಯವಾಗಿ ಶಾರೀರಿಕ ಯಾತನೆ
ಪವಿತ್ರಭಸ್ಮ ಪಠನಾ ಹಸ್ತ, ಲೇಪಿಸೆ ನರಳಿಕೆ ಯಾತನೆ ಕುಸಿದು ತಾನೆ
ಮಡಿ ನೀರೊಡ ಪಠಿಸೆ ಗ್ರಹದೋಷಕೆ, ನಾಮ ತೋಯ್ದ ಬೆಣ್ಣೆ ಸಂತಾನ
ನಿತ್ಯ ಪಠನೆಗೆ ಶತ್ರು ಮೆಟ್ಟುವ ಶರಭೇಶ್ವರ, ಪ್ರತ್ಯಂಗಿರಾ ದುಷ್ಟ ದಮನ ||
.
ಪಠಿತಗೆ ತೋರೆ ಸಿಡುಕುಮೋರೆ, ಕುರುಡಾಗಿಸಿ ಮಾರ್ತಾಂಡ ಭೈರವ
ನಿತ್ಯಪಠಕರ ಸಂಪದ ಹಾನಿಗೈಯೆ ಚೋರ, ಕ್ಷೇತ್ರಪಾಲ ಸಂಹರಿಸುವ
ಮಂತ್ರಿಣಿ ಸಹಚರಿಣಿ ನಕುಲೀಶ್ವರೀ, ಅನಗತ್ಯ ವಾದಿತನ ವಾಗ್ಬಂಧನ
ನಿತ್ಯ ಜಪಿತರ ಶತ್ರುದಂಡನೆ ವಾರಾಹೀ, ಬೇಡಲಿಬಿಡಲಿ ಕಾಯೆ ಭಕ್ತನ ||
.
ನಿತ್ಯ ಪಠಿಸೆ ಸಾಕು ಆರೇಮಾಸ, ಭಕ್ತನಾ ತಾಣ ಲಕ್ಷ್ಮಿ ಶಾಶ್ವತ ನಿವಾಸ
ಮಾಸ ಪೂರ್ಣ ತ್ರಿಕಾಲ ಪಠಣ, ಮಾತಲೆ ನೆಲೆಸಿ ಸರಸ್ವತಿಯ ಹಾಸ
ಪಕ್ಷ ಪಠನೆಗೆ ಲಿಂಗಾಕರ್ಷಣೆ ವರ, ಪಠಿತ ದರ್ಶನಕೆ ಪಾಪ ವಿಮುಕ್ತರ
ನಾಮವರಿತ ಯೋಗ್ಯರಿಗೆ ಕಾಣಿಕೆ ದಾನ, ಪಾಪಕರ್ಮ ಮುಕ್ತಿಗೆ ದ್ವಾರ ||
.
ಪೂಜನೀಯ ಶ್ರೀ ವಿದ್ಯಾ ದೀಕ್ಷಿತ, ಶ್ರೀ ಚಕ್ರಪೂಜೆ ನಾಮಾವಳಿ ಪರಮ
ಅರ್ಥವರಿಯಬಲ್ಲವ ಅರಿತೆ ಪಠಣ, ಅರಿಯದವಗೆ ಜ್ಞಾನ ಮರುಜನ್ಮ
ಕೇಸರಾದಿ ಸಹಸ್ರ ಸುವಾಸನಾ ಪುಷ್ಪದಲರ್ಚನೆ ನಮಃ ನಾಮಾಂತ್ಯಕೆ
ಓಂ-ಐಂ-ಹ್ರೀಂ-ಶ್ರೀಂ ನಾಮ ಪೂರ್ವ, ಶಿವನೂ ವರ್ಣಿಸಲಾಗದ ಪುಣ್ಯಕೆ ||
.
ಅರ್ಚನೆ ಮುನ್ನ ಸಂಕಲ್ಪ, ನ್ಯಾಸ ಅರ್ಚನೆ, ಕೊನೆ ನಾಮದ ಕೊನೆ ಓಂ
ಹೂವ್ವರಳುವ ತರದಲೆ ಶ್ರೀ ಚಕ್ರದಲಿಡುತ, ಮೇಲ್ಮುಖದಳದ ಕ್ರಮಂ
ಮಾಡಿದರೀ ಪೂಜೆ ಹುಣ್ಣಿಮೆಗೆ, ಪಡೆಯುವರು ಲಲಿತಾಂಬಿಕೆ ಸ್ವರೂಪ
ಓಂ-ಐಂ-ಹ್ರೀಂ-ಶ್ರೀಂ-ಲಲಿತಾಂಬಿಕಾಯೈ ನಮಃ ಓಂ, ನಂಬದಿರೆ ಪಾಪ ||
.
ಮಾಡಲೀ ಪೂಜೆ ಮಹಾನವಮಿಗೆ ಮುಕ್ತಿ, ಅಷ್ಟಮಿ ಸಂಧಿ ಶಿವಗೆ ಪ್ರಶಸ್ತ
ಬೇಡಿಕೆ ಈಡೇರಿ ಪುತ್ರ-ಪೌತ್ರಾದಿ ಸುಖ ಜೀವಿತ, ಅಂತಿಮಾ ದೇವಿಯತ್ತ
ಪ್ರತಿ ಶುಕ್ರವಾರ ಕೈಗೊಳ್ಳೆ ಪೂಜೆ, ಶ್ರೀ ವಿದ್ಯಾಪರಿಣಿತಗೆ ಭೋಜನ ಸೂಕ್ತ
ಲಲಿತೆಯ ಶಕ್ತಿ ಪ್ರತೀಕ, ಸಂತುಷ್ಟೆ ಲಲಿತೆ, ಬೇಡಿದ ವರವ ಕರುಣಿಸುತ ||
.
ಕಾಮನೆಗಳಿರದೆ ಪಠಿಸೆ ಸಂಸಾರ ಬಂಧ ವಿಮುಕ್ತಿ, ಅಂತಿಮ ದೇವಿಗೈಕ್ಯ
ಭುಕ್ತಿ-ಮುಕ್ತಿ ಪ್ರದಾಯಕ ನಾಮಾವಳಿ, ಕಡೆಯ ಜನ್ಮದ ದೀಕ್ಷೆ ಶ್ರೀ ವಿದ್ಯಾ
ಪೂರ್ವ ಜನ್ಮ ಸುಕೃತವಿರಲಷ್ಟೆ ಲಭ್ಯ, ಮನಃ ಪರಿಶುದ್ಧರಿಗಷ್ಟೆ ದೀಕ್ಷೆ ನಿಧಿ
ಶ್ರೀವಿದ್ಯಾ ದೀಕ್ಷೆ ಮುನ್ನ ನಾಮಾವಳಿ ಉಪದೇಶ, ದೋಷ ಗುರುಶಿಷ್ಯ ಸಿದ್ಧಿ ||
.
ಇಂತು ಹಯಗ್ರೀವ ಹಂಚಿಕೊಂಡ ನಿಗೂಢನಾಮ ಮಂತ್ರ, ಅಗಸ್ತ್ಯರ ಜತೆ
ಲಲಿತಾಂಬಿಕೆಯದೆ ಆಜ್ಞೆ ಪಸರಿಸಲವಳಾ ಕರುಣೆ, ನಿತ್ಯ ಪಠಿತರಿಗಿರುತೆ
ಬೇಡಿದ್ದ ನೀಡುವಳು ಕರುಣಾಸಾಗರ ದೇವಿ, ಪಠಿಸಿರೆ ನಿತ್ಯ ಸಹಸ್ರನಾಮ
ಸಂಪದಿಗ ಭಕ್ತರಿಗೆ ಜ್ಞಾನೈಶ್ವರ್ಯ ಆಯುರಾರೋಗ್ಯ, ನೀಡಿ ರಕ್ಷಿಪ ಧಾಮ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ by nageshamysore
ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ
ನಾಗೇಶರೆ,
ಎಂದಿನಂತೆ ಫಲಶ್ರುತಿಯ ಕಂತಿನ ಕವನಗಳೂ ಅರ್ಥಗರ್ಭಿತವಾಗಿ ಮೂಡಿ ಬಂದಿವೆ. ಎಲ್ಲಾ ಸರಿ ಆದರೆ ಕೇವಲ ಸಂಪದಿಗ ಭಕ್ತರಿಗೆ ಮಾತ್ರ ಏಕೆ ಈ ವಿಶೇಷ ರಿಯಾಯಿತಿ ಅಥವಾ ಪ್ರಾರ್ಥನೆ? :)
ಸಂಪದಿಗ ಭಕ್ತರಿಗೆ ಜ್ಞಾನೈಶ್ವರ್ಯ ಆಯುರಾರೋಗ್ಯ, ನೀಡಿ ರಕ್ಷಿಪ ಧಾಮ ||
ಸಂಪದಿಗ ಭಕ್ತರೆಂದರೆ ಇತರರಿಗೆ ಇದು ಸಂಪದವುಳ್ಳ ಭಕ್ತರಿಗೆ ಮಾತ್ರ ಎನ್ನುವ ವಿಪರೀತಾರ್ಥಕ್ಕೆ ಎಡೆಮಾಡಿಕೊಟ್ಟೀತು. ಇದನ್ನು ಸಕಲ ಭಕ್ತರಿಗೆ ಎಂದು ಬದಲಾವಣೆ ಮಾಡಿದರೆ ಸೂಕ್ತವಾದೀತೇನೋ?
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ by makara
ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ
ಶ್ರೀಧರರೆ, ಸಂಪದವುಳ್ಳವರೆಂದರೆ ಸಂಪತ್ತಿರುವವರು ಅನ್ನುವ ಅರ್ಥದಲ್ಲಿ ಬಳಸಲಿಲ್ಲ. ನಿಮ್ಮ ಅನುವಾದವನ್ನು ಭಕ್ತಿಯಿಂದ ಓದಿದ "ಸಂಪದಿಗ ಭಕ್ತರಿಗೆ" ಅನ್ನುವ ಅರ್ಥದಲ್ಲಿ ಬಳಸಿದ್ದೆ ! ಸಂಪದಿಗರು ಓದಿದವರಲ್ಲಿ ಮೊದಲಿಗರಾದ್ದರಿಂದ ಅವರಿಗೆ 'ಬಿಜಿನೆಸ್ ಕ್ಲಾಸ್ ಟ್ರೀಟ್ಮೆಂಟ್' ಎರಡು ದಿನದ ಮಟ್ಟಿಗೆ. ಅದಾದ ನಂತರ ಈಗ ಮಿಕ್ಕೆಲ್ಲರಿಗೆ ಇವತ್ತಿನಿಂದ :-)
ತಮಾಷೆಯಿರಲಿ, ನಿಮ್ಮ ಸಲಹೆಯಂತೆ 'ಸಕಲ ಭಕ್ತ' ವನ್ನೆ ತುಸು ಮಾರ್ಪಡಿಸಿ, 'ಸಕಲ ಭಕ್ತ ಜನರಿಗೆ' ಎಂದು ಮಾರ್ಪಡಿಸಿದ್ದೇನೆ. ಸೂಕ್ತವಾಗಿ ಕಾಣುವುದೆ ನೋಡಿ :-)
ಇಂತು ಹಯಗ್ರೀವ ಹಂಚಿಕೊಂಡ ನಿಗೂಢನಾಮ ಮಂತ್ರ, ಅಗಸ್ತ್ಯರ ಜತೆ
ಲಲಿತಾಂಬಿಕೆಯದೆ ಆಜ್ಞೆ ಪಸರಿಸಲವಳಾ ಕರುಣೆ, ನಿತ್ಯ ಪಠಿತರಿಗಿರುತೆ
ಬೇಡಿದ್ದ ನೀಡುವಳು ಕರುಣಾಸಾಗರ ದೇವಿ, ಪಠಿಸಿರೆ ನಿತ್ಯ ಸಹಸ್ರನಾಮ
ಸಕಲ ಭಕ್ತ ಜನರಿಗೆ ಜ್ಞಾನೈಶ್ವರ್ಯ ಆಯುರಾರೋಗ್ಯ, ನೀಡಿ ರಕ್ಷಿಪ ಧಾಮ ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ
ಶ್ರೀಧರರೆ, ಈ ಬರಹ ಲಲಿತಾ ಸಹಸ್ರನಾಮಕ್ಕೆ ಸಂಬದಿಸಿದ್ದು. ಅದಕ್ಜೆ ಇಲ್ಲಿ ಕೊಂಡಿ ಸೇರಿಸುತ್ತಿದ್ದೇನೆ :-)
.http://sampada.net/%E0%B2%AE%E0%B3%81%E0%B2%97%E0%B2%BF%E0%B2%A6%E0%B2%8...
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಉ: ೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ
ಶ್ರೀಧರ ಬಂಡ್ರಿ ಯವರಿಗೆ ವಂದನೆಗಳು
ಲಲಿತಾ ಸಹಸ್ರ ನಾಮದ ಅನುವಾದ ಕಾರ್ಯವನ್ನು ಬಹಳ ಸೊಗಸಾಗಿ ಮನಮುಟ್ಟುವಂತೆ ದಾಖಲಿಸಿದ್ದೀರಿ, ಕನ್ನಡದಲ್ಲಿನ ವಿವರಣೆ ಮನಕ್ಕೆ ಮುದ ನೀಡಿತು. ಧನ್ಯವಾದಗಳು.