ಆ ವೃದ್ಧನ ತೊಳಲಾಟ!
ಆ ವೃದ್ಧರಿಗೆ 90 ವರ್ಷ ವಯಸ್ಸು. ಗಟ್ಟಿ ಮುಟ್ಟಾಗಿದ್ದಾರೆ. ಬೆಳಿಗ್ಗೆ 5.00 ಕ್ಕೆ ಎದ್ದು ಈಗಲೂ ವಾಕ್ ಮಾಡ್ತಾರೆ. ಮನೆಗೆ ಬಂದು ಒಂದು ಲೋಟ ಹಾಲು ಕುಡಿದು ಸ್ನಾನ ಮಾಡಿ ದೇವರ ಪೂಜೆ ಮಾಡ್ತಾರೆ. 8.30 ಕ್ಕೆ ಸರಿಯಾಗಿ ಎರಡು ಇಡ್ಲಿ, ಅಥವಾ ಒಂದು ದೋಸೆ, ಅಥವಾ ಅರ್ಧ ಪ್ಲೇಟ್ ಉಪ್ಪಿಟ್ಟು ಅವರಿಗೆ ರಡಿ ಇರಬೇಕು. ಇಲ್ಲದಿದ್ರೆ ಬೇಸರ ಪಟ್ಕೋ ತಾರೆ. ಪಾಪ! ಪತ್ನಿ ಸತ್ತು ಹತ್ತು ವರ್ಷ ಆಯ್ತು. ಒಳ್ಳೆಯ ಸೊಸೆ ಮಾವನನ್ನು ಚೆನ್ನಾಗಿ ನೋಡ್ಕೋತಾಳೆ. ತಿಂಡಿಯಾದ ಮೇಲೆ ಮಧ್ಯಾಹ್ನದ ವರೆಗೂ ವೇದಾಧ್ಯಯನ ಮಾಡ್ತಾರೆ. 1.30 ಕ್ಕೆ ಸರಿಯಾಗಿ ಒಂದು ತುತ್ತು ಅನ್ನ ಹಾಕಿ ಬಿಟ್ರೆ ಸ್ವಲ್ಪ ಅಡ್ಡಾಡಿ ಎರಡು ಗಂಟೆ ಇಂದ ನಾಲ್ಕು ಗಂಟೆ ವರಗೆ ಮಲಗಿದ್ದು ನಂತರ ಎದ್ದು ಪಾರ್ಕ್ ಕಡೆ ಹೋಗ್ತಾರೆ. ಸಂಜೆ 7.00 ಕ್ಕೆ ಮನೆಗೆ ಹಿಂದಿರುಗಿದರೆ 7.30 ಕ್ಕೆ ಸ್ವಲ್ಪ ಉಪಹಾರ. ನಂತರ ಪೇಪರ್ ಓದ್ತಾರೆ. ರಾತ್ರಿ 9.00 ಕ್ಕೆ ಮಲಗಿ ಬಿಡ್ತಾರೆ. ಇದು ಅವರ ನಿತ್ಯ ಕರ್ಮ.
ಮೊನ್ನೆ ಅಮೆರಿಕೆಯಲ್ಲಿರುವ ಅವರ ಮೊಮ್ಮಗ ಕುಟುಂಬ ಸಹಿತ ತಾತನನ್ನು ನೋಡೋಕೆ ಬಂದಿದ್ರು. ಮೊಮ್ಮೊಗ ಬಂದವನೇ ತಾತನಿಗೆ ನಮಸ್ಕಾರ ಮಾಡಿದ. ಆನಂತರ ಅವನ ಪತ್ನಿ ಬಗ್ಗಿ ಒಂದು ಕೈಯಲ್ಲಿ ತಾತನ ಕಾಲು ಮುಟ್ಟಿ ತನ್ನ ಎದೆ ಮೇಲಿಟ್ಟು ಕೊಂಡಳು.ಅನಂತರ ಇಪ್ಪತ್ತು ವರ್ಷ ಪ್ರಾಯದ ಮರಿಮೊಗಳೂ ಕೂಡ ಅಮ್ಮನನ್ನು ಅನುಸರಿಸಿದಳು.
-ಇವರ್ಯಾರೋ? ನಿನ್ನ ಸ್ನೇಹಿತರೇನೋ? ನಿನ್ನ ಹೆಂಡ್ತಿ ಮತ್ತು ಮಗಳೆಲ್ಲ್ಲಿ?
- ಅದ್ಯಾಕೆ ತಾತ ನಿನಗೆ ಅಷ್ಟು ಚೆನ್ನಾಗಿ ಕಣ್ ಕಾಣುತ್ತೆ.ಹೀಗೆ ಅಂತೀಯಲ್ಲಾ! ಇವಳು ನನ್ನ ಹೆಂಡ್ತಿ ಪಮ್ಮಿ ಮತ್ತು ಇವಳು ಮಗಳು ಸುಷ್ಮಾ.
- ಇದೇನೋ ಇದು ಗಂಡಸರಂತೆ ಪ್ಯಾಂಟ್ ಮತ್ತು ಟೀ ಶರ್ಟ್ ಹಾಕಿ ಕೊಂಡು ಜರ್ಕಿನ್ ಬೇರೆ ಹಾಕಿ ಕೊಂಡಿದ್ರೆ ನನಗೆ ಹೇಗೆ ಗೊತ್ತಾಗ ಬೇಕೋ? ಹಣೆಯಲ್ಲಿ ಕುಂಕುಮವಿಲ್ಲ. ತಲೇಲಿ ಜಡೆ ಇಲ್ಲ. ಇದೆಲ್ಲಾ ಏನೋ? ಬಿಡಪ್ಪಾ ,ನನಗೆಲ್ಲಾ ಗೊತ್ತಾಗುಲ್ಲಾ. ಹೇಗಾದ್ರೂ ಇದ್ದುಕೊಳ್ಳಿ. ಹೋಗಿ ಕೈಕಾಲು ತೊಳೆದು ತಿಂಡಿ ತಿನ್ನಿ.
ಮೊಮ್ಮಗ ಬಂದು ನಾಲ್ಕು ದಿನ ಕಳೆಯುತ್ತೆ. ಅದೇ ಅಮೇರಿಕಾ ಜೀವನ ಇಲ್ಲೂ ಕೂಡ. ತಾಯಿ ಮಗಳಿಬ್ಬರೂ ಚಡ್ಡಿ ಹಾಕಿಕೊಂಡು ಓಡಾಟ ಶುರು ಮಾಡಿದರು. ತಾತನಿಗೆ ಇಂತಾ ವೇಶ ಬೂಷಗಳನ್ನು ನೋಡಲು ಸಾಧ್ಯವಾಗಲೇ ಇಲ್ಲ. ಮನೆಯಲ್ಲಿರಲು ಮನಸ್ಸು ಒಪ್ಪದಂತಾ ಸ್ಥಿತಿ! ಅವರ ಜೀವನದ ಸ್ಟೈಲ್ ಬದಲಿಸಿ ಕೊಂಡು ಬಿಟ್ರು. ಬೆಳಗಾಗೆದ್ದು ಸ್ನಾನ ಮಾಡಿ ಒಂಚೂರು ತಿಂಡಿ ತಿಂದು ಪಾರ್ಕ್ ಕಡೆ ಹೋದರೆ ತೀರಾ ಹಸಿವಾದಾಗ ಮನೆಗೆ ಹಿಂದಿರುಗುತ್ತಿದ್ದರು. ಬರು ಬರುತ್ತಾ ಮೌನವಾದರು. ಆರೋಗ್ಯದಲ್ಲಿ ಏರು ಪೇರಾಗಿ ಹಾಸಿಗೆ ಹಿಡಿದರು. ಅವರ ಎರಡ ನೆಯ ಮಗ ಮೈಸೂರಿಂದ ಅಪ್ಪನನ್ನು ನೋಡಲು ಬಂದವನೇ ಅಪ್ಪನ ಸ್ಥಿತಿ ನೋಡಿ ಬೆಚ್ಚಿದ. ಅವನ ಅಣ್ಣ ನನ್ನು ಕೇಳಿದ
-ಹೋದ ತಿಂಗಳು ಬಂದಾಗ ತುಂಬಾ ಗಟ್ಟಿ ಮುಟ್ಟಾಗಿದ್ದರಲ್ಲಾ! ಏನಾಯ್ತು?
-ಹದಿನೈದು ದಿನದಿಂದ ಅವರಿಗೆ ಏನಾಯ್ತೆಂದು ಗೊತ್ತಾಗಿಲ್ಲ ಕಣೋ, ಮೌನವಾಗಿಬಿಟ್ಟಿದ್ದಾರೆ. ಊಟ ತಿಂಡಿ ಸರಿಯಾಗಿ ತೆಗೆದುಕೊಳ್ಳುವುದಿಲ್ಲ.
ತಮ್ಮ ಪ್ರದೀಪ ಕಾರ್ ನಲ್ಲಿ ಬಂದಿದ್ದ. ಅಪ್ಪನನ್ನು ಕಾರ್ ನಲ್ಲಿ ಮಲಗಿಸಿ ಕೊಂಡು ಹೋಗಿ ಮೈಸೂರಲ್ಲಿ ನರ್ಸಿಂಗ್ ಹೋಮ್ ಒಂದರಲ್ಲಿ ನಾಲ್ಕು ದಿನ ಇಟ್ಟುಕೊಂಡು ಚೇತರಿಸಿಕೊಂದಮೇಲೆ ಮನೆಗೆ ಕರೆದು ಕೊಂಡು ಹೋದ. ಪುನ: ತಾತ ಈಗ ಆರೋಗ್ಯವಾಗಿದ್ದಾರೆ. ಎಂದಿನಂತೆ ಅವರ ಚಟುವಟಿಕೆ ಶುರುವಾಗಿದೆ.
ಅಪ್ಪನನ್ನು ಪ್ರದೀಪ ವಿಚಾರಿಸ್ತಾನೆ
-ಏನಾಯ್ತಪ್ಪ?
-ಅಲ್ಲಾ ಕಣೋ ಪ್ರದೀ ಆ ಕೃಷ್ಣನ ಹ್ಜೆಂಡ್ತಿ ಮತ್ತು ಮಕ್ಕಳು ಹೆಂಗಸರೇನೋ! ಪ್ರತೀ ದಿನ ಅದೆಂತದೋ ಕೆಟ್ಟ ಹಾಡನ್ನು ಹಾಕೊಂಡು ಮಗಳು ಚಡ್ದೀಲಿ ಕುಣೀತಿದ್ರೆ ಅಮ್ಮ ತಾಳ ಹಾಕ್ತಾಳೆ.ಈ ಬೆಪ್ಪಾ ನೋಡ್ತಾ ಇರ್ತಾನೆ. ನನ್ನ ಕಿವಿ ಕಿವುಡಾಗಿ ಹೋಯ್ತು. ಬೆಳಗಾಗೆದ್ದು ನಿಮ್ಮಣ್ಣ ಮತ್ತು ನಾನು ಹೇಳುತ್ತಿದ್ದ ಮಂತ್ರದ ತರಂಗಗಳಿಂದ ಆ ಮನೆಯಲ್ಲಿ ಎಂತಹಾ ವಾತಾವರಣ ಇತ್ತು. ಇವರು ಬಂದು ಹದಿನೈದು ದಿನದಲ್ಲಿ ಮನೆಯನ್ನು ಹಾಳುಮಾಡಿ ಬಿಟ್ಟರಲ್ಲಾ! ನಿಮ್ಮಣ್ಣನಿಗೆ ನುಂಗಲಾರದ ಬಿಸಿ ತುಪ್ಪ ವಾಗಿ ಬಿಟ್ಟ ಅವನ ಮಗ!!!!
-ಬಿಡಪ್ಪಾ, ರಜಕ್ಕೆ ಬಂದಿದ್ದಾರೆ. ಇನ್ನೇನು ಹೊರಡ್ತಾರೆ.
-ಮಗು, ಅವರು ಹೊರಡಲೀ ಅಂತಾ ನಾನೇಕೆ ಹೇಳಲಿ? ಅವರು ಈಗ ಹೋಗಿ ಬಿಟ್ರೆ ಆಯ್ತಾ? ಅವನ ಮಗಳನ್ನು ಯಾರು ಮದುವೆ ಆಗ್ತಾರೋ? ಹೆಣ್ಣಿನ ಒಂದು ಗುಣವೂ ಅವಳಲ್ಲಿ ಕಾಣುವುದಿಲ್ಲವಲ್ಲೋ?
-ಏನೋ ಮುದ್ದಾಗಿ ಬೆಳಸಿದ್ದಾನೆ. ಸರಿ ಹೋಗುತ್ತೆ.
-ಇಲ್ಲಾ ಕಣೋ ಮಗು, ಆ ವಾತಾವರಣ ನೋಡಿದ್ರೆ, ಸರಿಯಾಗುವಂತೆ ಕಾಣುಲ್ಲ. ನಿಮ್ಮ ಅಣ್ಣನಿಗೂ ಬುದ್ಧಿ ಕೆಟ್ಟು ಹೋಗುತ್ತೆ, ಅಷ್ಟೆ.
. . . . . . . . . . . . . . . . . . . . . . . . .ಪಾಪ! ಒಂದು ಸಂಸಾರಕ್ಕಾಗಿ 90 ವರ್ಷ ವಯಸ್ಸಿನ ತಾತ ಮತ್ತು ಮಗ ಚಡಪಡಿಸುತ್ತಿದ್ದರು. ಆ ಸಮಯಕ್ಕೆ ನಾನು ಆ ಮನೆಗೆ ಎಂಟ್ರಿ ಕೊಟ್ಟಿದ್ದೆ. ಮಿತ್ರ ಪ್ರದೀಪ ಎಲ್ಲವನ್ನೂ ಹೇಳಿದ. ನಾನೂ ಪೇಚಾಡಿದೆ. ಈಗ ನಿಮ್ಮ ಸರತಿ.ನೀವೂ ಪೇಚಾಡುವುದಾದರೆ ಪೇಚಾಡಿ.ಅಥವಾ ನಿಮ್ಮ ಪೀಳಿಗೆ ತೊಲಗಬೇಕು,ಆಗ ನಾವು ಹೇಗೆ ಬೇಕೋ ಹಾಗೆ ಇರ್ತೀವಿ, ಅಂತಾ ಅನ್ನೋದಾದರೆ ಅನ್ನಿ, ಆದರೆ ಒಂದು ನೆನಪಿರಲಿ, ನಮ್ಮ ಋಷಿ ಮುನಿಗಳು ಕೊಟ್ಟಿರುವ ಜೀವನ ಪದ್ದತಿಯಿಂದ ವಿಮುಖರಾದರೆ ನೆಮ್ಮದಿಯ ಜೀವ ಯಾರಿಗೂ ಸಾಧ್ಯವಿಲ್ಲ.
Comments
ಉ: ಆ ವೃದ್ಧನ ತೊಳಲಾಟ!
ವಿದೇಶಗಳಲ್ಲಿ ಹುಟ್ಟಿದ ಪೀಳಿಗೆ ಅಲ್ಲಿನ ಜನಜೀವನ ಹಾಗೂ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತದೆ ಏಕೆಂದರೆ ಪರಿಸರದ ಪ್ರಭಾವ ಮಾನವನ ಬೆಳವಣಿಗೆಯ ಮೇಲೆ ಅಷ್ಟರ ಮಟ್ಟಿಗೆ ಇದೆ. ವಿದೇಶಗಳಿಗೆ ಹೋಗಿ ಹಣ ಗಳಿಸಬೇಕು, ಸಂಸ್ಕೃತಿಯನ್ನೂ ಉಳಿಸಿಕೊಳ್ಳಬೇಕು ಎಂದರೆ ಬಹಳ ಕಷ್ಟ ಏಕೆಂದರೆ ಹುಟ್ಟಿ ಬೆಳೆದ ನಾಡಿನ ಪರಿಸರ ಮಾನವನ ವಿಕಾಸದ ಮೇಲೆ ಉಂಟು ಮಾಡುವ ಪರಿಣಾಮವನ್ನು ತಡೆಯಲು ಸಾಧ್ಯವಿಲ್ಲ. ಹೀಗಾಗಿ ಇದಕ್ಕೆ ನಾವು ಹೊಂದಿಕೊಳ್ಳಬೇಕು. ಯಾವ ಸಂಸ್ಕೃತಿಯಲ್ಲಿ ಜೀವಿಸಿದರೆ ಏನು? ಜೀವನದ ನೆಮ್ಮದಿ ಎಂಬುದು ಭಾರತದ ಸಂಸ್ಕೃತಿಯಲ್ಲಿಯೇ ಇದೆ ಎಂದು ಹೇಳಲಾಗದು. ಅಮೇರಿಕಾದಲ್ಲಿಯೂ ಜನ ನೆಮ್ಮದಿಯಾಗಿಯೇ ಇದ್ದಾರೆ. ಭಾರತದ ಸಂಸ್ಕೃತಿಯೇ ಸರ್ವಶ್ರೇಷ್ಠ ಎಂದು ಹೇಳುವಂತಿಲ್ಲ. ಅವರವರ ದೇಶದ ಸಂಸ್ಕೃತಿ ಅಲ್ಲಿನವರಿಗೆ ಶ್ರೇಷ್ಠವೇ . ಹೀಗಾಗಿ ನಾವು ತಲೆಬಿಸಿ ಮಾಡಿಕೊಳ್ಳಬೇಕಾಗಿಲ್ಲ.