ವಜ್ರ ಕವಚ
ನಭದೊಡಲ ಸೀಳುತಲೆರಗುವೆನು ಬರ ಸಿಡಿಲಾಗಿ
ವಜ್ರನಖಾಘಾತೊದೆಳೆತ್ತುವೆನು ಸೆಳೆಯುತಲಿ
ಹಾರುವೆನು ನಭದೊಳಗೆ ನಖದ ಬಿಗಿ ಹಿಡಿತದಲಿ
ಕುಕ್ಕುತಲಿ ಕೊಕ್ಕಿನಲಿ ಸೀಳುವೆನು ಸೊಕ್ಕಿನಲಿ
ವಜ್ರ ಕವಚವ ಹರಿಯುವೆನು ನಿರ್ದಯದಿ
ಹೀರುತಲಿ ಜೀವರಸವ ಹನಿಹನಿಯ ಸವಿಯುತ
ಬಿಡಿಸಲಾರಿಹರಿನ್ನಿಲ್ಲ ತಡೆವಾರರೆನ್ನನೀ ನಭದೊಳು
ಗರುಡನಿವನೆರಗಿಹನು ನೆನೆ ನಿನ್ನ ದೈವವನು
ಕ್ರೂರ ಕರ್ಮವಿದೆನೆಗೆ ಜೀವನದ ಧರ್ಮ ಕೂರ್ಮಾ
ವಜ್ರ ಕವಚದ ಭದ್ರ ರಕ್ಷೆಯ ಭೀಮಶಕ್ತಿಯ ಕೂರ್ಮನಿಹೆನು
ಮಥನ ಕಾಲದಿ ಮಂದರ ಪರ್ವತವನೆತ್ತಿ ಹೊತ್ತಿಹೆನು
ಆದಿಶೇಷನ ಹಾಲಾಹಲದ ಭುಗಿಲ ಬೇಗೆಯ ಬಲ್ಲೆನು
ದೇವದಾನವ ಮಥನ ಕಾಲದ ದಿಗಿಲ ಬಗೆಹರಿಸಿಹೆನು
ಮೇರುದಂಡದ ಮಥನ ಘರ್ಷಣ ದಾರುಣವನುಂಡ ಬೆನ್ನಿನವನು
ಇಂದಿರೆಯ ಚಂದಿರನ ಮದಿರಾಮೃತದ ಹುಟ್ಟ ಕಂಡಿಹೆನು
ಕಾಲಘಟ್ಟದ ಕರ್ಮನಿರತನು ಧ್ಯೇಯ ಧರ್ಮದ ಪಥಿಕನು
ವಜ್ರನಖಗಳ ಕ್ರೂರಕೊಕ್ಕಿನ ಮೇರು ರೆಕ್ಕೆಯ ಸೊಕ್ಕದೇತಕೆ
ವಜ್ರಕವಚದ ಭದ್ರರಕ್ಷೆಯ ಸೀಳುವಾಸೆಯ ತೊರೆದು ಬಾ
ವಿರಮಿಸೆನ್ನಯ ಬೆನ್ನಮೇಲೆಯೆ ಶಕ್ತಿಸಂಚಯ ಸ್ನೇಹಕೆ
ನಭದೊಳಗೆ ಚಿಮ್ಮಿಹಾರುವೆಯಂತೆ ಮತ್ತೊಮ್ಮೆ ವಿಶ್ವದುನ್ನತಿಗೆ
ಕಾಲಗರ್ಭದಿ ಕಾಯುವೆನು ದೈವ ಕಾರ್ಯದ ಕರೆಯ ಕಂಕಣಕೆ
ಪದ್ಯಪಾನ(ಚಿತ್ರ-92) ನಾ ಕಂಡಂತೆ
Comments
ಉ: ವಜ್ರ ಕವಚ
ನಮಸ್ಕಾರ ಜಯಪ್ರಕಾಶರೆ,
ಗರುಡನ ಕ್ರೌರ್ಯಾವೇಶದಷ್ಟೆ ಕೂರ್ಮನ ಸೌಮ್ಯ ಪ್ರಬುದ್ಧತೆ ಚೆನ್ನಾಗಿ ಪ್ರತಿಬಿಂಬಿಸಿದೆ. ಕೂರ್ಮನ ಆಹ್ವಾನವನ್ನು ಗರುಡ ಸ್ವೀಕರಿಸಿದನೊ ಬಿಟ್ಟನೊ ಆ ಆಶಯವಂತೂ ಸರ್ವಕಾಲಿಕ ಮೌಲ್ಯ :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ವಜ್ರ ಕವಚ by nageshamysore
ಉ: ವಜ್ರ ಕವಚ
ಸೌಮ್ಯ- ಸುಂದರ
ಕ್ರೌರ್ಯ- ಭೀಬತ್ಸ
ಧನ್ಯವಾದ ನಾಗೇಶ ರವರೆ