ಸೂಫಿ-ಸಂತ-ಸಾಮರಸ್ಯ - ಬಹುರೂಪಿಯೊಂದಿಗೆ ಮುಖಾ-ಮುಖಿ

ಸೂಫಿ-ಸಂತ-ಸಾಮರಸ್ಯ - ಬಹುರೂಪಿಯೊಂದಿಗೆ ಮುಖಾ-ಮುಖಿ

ಚಿತ್ರ

ರಂಗಾಯಣವು ಕಾರಂತರ ಕನಸಿನ ಕೂಸು. ಮೈಸೂರಿನಲ್ಲಿ ರಂಗಾಯಣವು ಹೊಸದೊಂದು ಬಗೆಯ ವಿನ್ಯಾಸ ಕಂಡುಕೊಂಡಿದ್ದು ಇವರಿಂದಲೆ. ತಮ್ಮ ಇಡೀ ಜೀವಮಾನವನ್ನು ರಂಗಭೂಮಿಗಾಗಿಯೆ ತೇಯ್ದು ಬಿಟ್ಟರು, ಅದರ ಫಲವಾಗಿಯೆ ರಂಗಭೂಮಿಯು ಇಂದಿಗೂ ಜೀವಂತಿಕೆಯನ್ನು ಕಂಡುಕೊಂಡಿರುವುದು. ಬಿ.ವಿ.ಕಾರಂತರಿಗೂ ಮುನ್ನ ಮೈಸೂರಿನಲ್ಲಿ ಸಾಕಷ್ಟು ಹವ್ಯಾಸಿ ಕಲಾವಿದರು ತಮ್ಮದೇ ಮಾರ್ಗಗಳ ಮೂಲಕ ಸತತವಾಗಿ ರಂಗಕ್ಷೇತ್ರಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಅವರನ್ನೆಲ್ಲ ತಿದ್ದಿ ಹೊಸದೊಂದು ಬಗೆಯ ರೂಪ ನೀಡುವ ಮೂಲಕ ನವ ಸಂಚಲನ ಪ್ರಾರಂಭಿಸಿದರು. ಕಾರಂತರ ವಿಭಿನ್ನ ಆಲೋಚನೆಗಳಿಗೆ ಸ್ಪಂಧಿಸಿದ ಕರ್ನಾಟಕ ಸರ್ಕಾರ ರಂಗಾಯಣ ಚಾಲನೆಗೆ ಹಸಿರು ನಿಶಾನೆ ತೋರುವುದರ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿಗೆ ರಂಗ ರಸಿಕರ ಆಕರ್ಷಣೆ ಮತ್ತಷ್ಟು ಹೆಚ್ಚಾಯಿತು.

೨೫ವರ್ಷಗಳ ಇತಿಹಾಸದಲ್ಲಿ ರಂಗಾಯಣವು ನೂರಾರು ನಾಟಕಗಳನ್ನು ತನ್ನ ಎದೆಯ ಮೇಲೆ ಮೂಡಿಸಿ ನೋಡುಗರಿಗೆ ಸಿಹಿಸ್ವವಾದವನ್ನುಂಟುಮಾಡಿದೆ. ಕಾವ್ಯ, ಕಾದಂಬರಿ, ಕಥೆಗಳು ಮುಂತಾದ ಸಾಹಿತ್ಯ ಪ್ರಕಾರಗಳನ್ನು ಕೂಡ ರಂಗಮಂಚದ ಮೇಲೆ ಹರಿದಾಡಿಸಿದ ಕೀರ್ತಿ ರಂಗಾಯಣಕ್ಕೆ ಸಲ್ಲುತ್ತದೆ. ಕುವೆಂಪುರವರ ಮಲೆಗಳಲ್ಲಿ ಮಧುಮಗಳು ಕಾದಂಬರಿಯನ್ನು ನಾಟಕವಾಗಿ ಪರಿವರ್ತಿಸಿ ೯ಗಂಟೆಗಳ ಕಾಲ ಪ್ರದರ್ಶನ ಮಾಡಿದ ರಂಗಾಯಣವು ಹೊಸ ಇತಿಹಾಸವನ್ನೆ ಬರೆಯಿತು. ಈಗಂತು ರಂಗಾಯಣವು ಹೊಸದೊಂದು ರೀತಿಯ ತಾಣವಾಗಿದೆ, ನಾಟಕ, ಸಂಗೀತ, ಲಲಿತಕಲೆಗಳು, ಸಾಹಿತ್ಯ, ವಿಜ್ಞಾನ ಮುಂತಾದವು ಸೇರಿದಂತೆ ಬುದ್ದಿಜೀವಿಗಳ ಮುಖಾ-ಮುಖಿಯ ಬಾಗಿಲಾಗುವುದರೊಂದಿಗೆ ೧೦ವರ್ಷದಿಂದ ಕರ್ನಾಟಕದ ಜನ ನಮುದಾಯವನ್ನು ತನ್ನೆಡೆಗೆ ಸೆಳೆಯುತ್ತಿರುವ ರಂಗಾಯಣವು ಬಹುರೂಪಿ ಕಾರ್ಯಕ್ರಮವನ್ನು ಅದ್ಬುತವಾಗಿ ರಾಷ್ಟ್ರಿಯ ಮಟ್ಟದಲ್ಲಿ ನಡೆಸಿಕೊಡುತ್ತಿದೆ. ಪ್ರಸ್ತುತ ೨೦೧೪ರ ಸಾಲಿನಲ್ಲಿ ನಿರ್ದೇಶಕರಾದ ಜನಾರ್ಧನ್ (ಜನ್ನಿ)ಯವರು ಬಹುರೂಪಿ ಕಾರ್ಯಕ್ರಮವನ್ನು ಯಾರು ಕಂಡರಿಯದ ರೀತಿಯಲ್ಲಿ ತೆಗೆದುಕೊಂಡು ಹೋಗುತಿದ್ದಾರೆ, ಈ ಬಾರಿಯ ಬಹುರೂಪಿ ಉತ್ಸವವು ಸೂಫಿ-ಸಂತ-ಸಾಮರಸ್ಯದೊಂದಿಗೆ ನಡೆಯುತ್ತಿರುವುದು ಶ್ಲಾಘನೀಯವು ಕೂಡ.

ಸೂಫಿ-ಸಂತರು ಸರಳಜೀವಿಗಳಾಗಿ ತಾತ್ವಿಕ ನೆಲೆಯಲ್ಲಿ ಭಾವೈಕ್ಯತೆಗಾಗಿ ಗುದ್ದಾಡಿದವರು. ಆಗಾಗಿ ಅವರ ಅಡಿಯಲ್ಲಿ ಉತ್ಸವ ನಡೆಯುತ್ತಿರುವುದು ಸಾಮಾಜಿಕವಾಗಿ ಹೆಮ್ಮೆಯ ಸಂಗತಿ ಹಾಗೂ ಜೊತೆಗೆ ಸೂಫಿಪಂಥ, ಭಕ್ತಿಪಂಥ, ವಚನಪಂಥ ಮುಂತಾದವುಗಳನ್ನುಪ್ರತಿನಿಧಿಸುತ್ತದೆ. ಆದ್ದರಿಂದ ಇವುಗಳನ್ನು ಕೂಲಂಕುಷವಾಗಿ ತಿಳಿಯುವುದು ಸೂಕ್ತವಾಗಿದೆ.

ಹಿಂದೂ ಸಮಾಜದ ಪ್ರಭಾವ ಇಸ್ಲಾಂ ಧರ್ಮದ ಮೇಲೆ ಉಂಟಾಗಿ ಅದರಲ್ಲಿ ಶುದ್ದೀಕರಣ ಚಳವಳಿ ಪ್ರಾರಂಭವಾಯಿತು. ಈ ರೀತಿಯ ಚಳವಳಿಯೆ ಸೂಫಿ ಚಳವಳಿ. "ಸೂಫಿಸಂ" ಎಂಬುದು ಅರೇಬಿಯನ್ ಪದ, "ಸೂಫ್ ಮತ್ತು ಸಾಫ್" ಎಂಬೆರಡು ಪದಗಳಿಂದ ನಿಷ್ಪನ್ನವಾಗಿದೆ. ಸೂಫ್ ಎಂದರೆ ಉಣ್ಣೆ ಬಟ್ಟೆಯ ಉದ್ದವಾದ ನಿಲುವಂಗಿ ಧರಿಸಿದ ಮುಸ್ಲಿಂ ಸಂತ ಎಂದರ್ಥ. ಸಾಫ್ ಎಂದರೆ ಪರಿಶುದ್ದ ನಡೆಯುಳ್ಳವನು ಎಂದರ್ಥ. ಸೂಫಿ ಪಂಥ ಮೊದಲು ಅರೇಬಿಯಾದಲ್ಲಿ ಉಗಮವಾಗಿ ಅನಂತರ ಪರ್ಷಿಯಾ, ಇರಾಕ್ ಮೂಲಕ ಭಾರತಕ್ಕೆ ಹರಡಿತು.

ಸೂಫಿ ಸಂತರು ಮೂಲಭೂತವಾದಕ್ಕೆ ವಿರುದ್ದವಾದ ಆಲೋಚನೆಯನ್ನು ಹೊಂದಿದ್ದು ಉದಾರವಾದ, ಸಮಾನತೆಯ ತತ್ವದಲ್ಲಿ ನಂಬಿಕೆಯುಳ್ಳವರಾಗಿದ್ದು ೧೨ನೇ ಶತಮಾನದ ವೇಳೆಗೆ ಭಾರತಕ್ಕೆ ಬರಲಾರಂಭಿಸಿದರು. ಅನಂತರ ಇಡೀ ಭಾರತದಾದ್ಯಂತ ಮಹತ್ವ ಪೂರ್ಣ  ತತ್ವಗಳೊಂದಿಗೆ ಸಂಚಲನವನ್ನುಂಟುಮಾಡಿದರು. ಆ ತತ್ವಗಳೆಂದರೆ

ಏಕೀಶ್ವರವಾದ

ಕಾಯಕಕ್ಕೆ ಮಹತ್ವ

ಎಲ್ಲರೂ ಸಮಾನರೆಂದು ಜಾತಿ ಪದ್ದತಿಯನ್ನು ಖಂಡಿಸುವುದು

ಹಿಂದೂ-ಮುಸ್ಲಿಂ ಭಾತೃತ್ವ

ಮುಕ್ತಿಗೆ ಭಕ್ತಿಯೇ ಪ್ರಧಾನ

ಎಲ್ಲಾ ಧರ್ಮಗಳು ಒಳ್ಳೆಯವು, ಮೂಲ ಉದ್ದೇಶ,ಸತ್ವ ಅರಿಯಬೇಕು.

ಮೂರ್ತಿಪೂಜೆ ಖಂಡಿಸುವುದು

ಸರಳ ಜೀವನಕ್ಕೆ ಮಹತ್ವ

ಈ ಮೇಲಿನ ತತ್ವಗಳ ಅಡಿಯಲ್ಲಿ ಸೂಫಿಪಂಥವು ದೇಶದುದ್ದಗಲಕ್ಕು ಸಂಚರಿಸುತ್ತ ಸಾಮಾನ್ಯ ಜನರ ಕಣ್ಣು ತೆರೆಯಲು ಪ್ರಮುಖ ಪ್ರೇರಕಾಂಶಗಳಾದವು. ಆದ್ದರಿಂದಲೇ ಸೂಫಿಗಳು ಅತಿಹೆಚ್ಚು ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಗಿದ್ದು. ಅಬುಲ್ ಫಜಲ್ನ ಪ್ರಕಾರ ಸೂಫಿಗಳಲ್ಲಿ ೧೪ಪಂಥಗಳಿದ್ದವು ಅವುಗಳಲ್ಲಿ ಚಿಸ್ತಿ ಮತ್ತು ಸೂರ್ಹಾವರ್ದಿ ಪಂಗಡಗಳು ಮಧ್ಯಕಾಲಿನ ಭಾರತದಲ್ಲಿ ಪ್ರಮುಖವಾಗಿ ಕಂಡುಬಂದವು. ಈ ಪಂಗಡಗಳ ಸಂತರಲ್ಲಿ ಪ್ರಮುಖರಾದವರು ಖ್ವಾಜಾ ಮುಯಿನುದ್ದೀನ್ ಚಿಸ್ತಿ ಮತ್ತು ಷೇಖ್ ನಿಜಾಮುದ್ದೀನ್ ಔಲಿಯ, ಸರಳ ಜೀವಿಗಳಾಗಿದ್ದ ಇವರು ತಮ್ಮ ಅತಿ ಹೆಚ್ಚು ಸಮಯವನ್ನು ಧ್ಯಾನಕ್ಕೆ ಮುಡುಪಾಗಿಡುತ್ತಿದ್ದರು. ಭಕ್ತರಿಗೆ ಕರುಣೆ, ಸದ್ಗುಣ ಮತ್ತು ಮನಃಶಾಂತಿಯ ಬಗ್ಗೆ ಸಂದೇಶ ನೀಡಿದರು. ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿ ಅಪಾರ ಪ್ರಮಾಣದಲ್ಲಿ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದರು. ಮೆಹ್ಬೂಬ್-ಇ-ಇಲಾಹಿ ಅವರ ಜನಪ್ರಿಯ ಬಿರುದಾಗಿದ್ದು, ಪರ್ಷಿಯಾದ ಕವಿ ಅಮೀರ್‍ ಖುಸ್ರು ಕೂಡ ಇವರ ಪ್ರಭಾವಕ್ಕೆ ಒಳಗಾದ ಶಿಷ್ಯರಲ್ಲೊಬ್ಬರು.

ಸಂಪ್ರದಾಯ, ಮೂಢನಂಭಿಕೆ, ಜಾತೀಯತೆ, ಬಹುದೇವತಾರಾಧನೆ ವಿರೋಧಿಸಿದ ಇವರು ವಿಶ್ವಭಾತೃತ್ವದ ತಳಹದಿಯ ಮೇಲೆ ಸಮಾಜ ನಿರ್ಮಿಸಲು ಪ್ರಯತ್ನಿಸಿ, ಹಿಂದೂ ಮುಸ್ಲಿಂ ಐಕ್ಯತೆಗಾಗಿ ದುಡಿದರು. ಇದರ ಪರಿಣಾಮವಾಗಿ,

ಹಿಂದೂ-ಮುಸ್ಲಿಂರಲ್ಲಿ ಐಕ್ಯತೆಯನ್ನುಂಟು ಮಾಡಿತು

ಸೂಫಿ ಪಂಥವು ಮುಸ್ಲಿಂರಲ್ಲಿ ಅನ್ಯ ಮತ ಸಹಿಷ್ಣುತೆಯ ಭಾವನೆಯನ್ನು ಬೆಳೆಸಿತು

ಸೂಫಿ ತತ್ವಗಳು ಮಧ್ಯಕಾಲಿನ ಭಾರತದ ಮುಸ್ಲಿಂ ದೊರೆಗಳ ಆಡಳಿತದ ಮೇಲೆ ಪ್ರಭಾವ ಬೀರಿತು

ಹಿಂದೂ ಧರ್ಮದ ಶುದ್ದೀಕರಣಕ್ಕೆ ಕಾರಣವಾಯಿತು

ಸೂಫಿ ಪಂಥವು ಭಕ್ತಿಪಂಥದ ಜನಪ್ರಿಯತೆಗೆ ಕಾರಣವಾಯಿತು

ಭಾರತದಲ್ಲಿ ಸೂಫಿ ಪರಂಪರೆಯ ಸಮಕಾಲಿನ ಚಳವಳಿಯೊಂದು ಪ್ರಾರಂಭವಾಯಿತೆಂದರೆ ಅದು ಭಕ್ತಿಪಂಥ. ಇದು ಭಾರತದ ಚರಿತ್ರೆಯಲ್ಲಿ ಮಹತ್ವಸ್ಥಾನ ಪಡೆದಿದೆ. ಧರ್ಮದಲ್ಲಿ ಕರ್ಮಕಾಂಡ ಬೆಳೆದು ಆಚಾರ, ಸಂಪ್ರದಾಯಗಳು ಅತಿಯಾದಾಗ ದೇವರು ಮಾರುಕಟ್ಟೆಯ ವಸ್ತುವಾಗುತ್ತನೆ. ಶುದ್ದ ಆಚಾರಕ್ಕೆ ಮತ್ತು ಸಂಪ್ರದಾಯಗಳಿಗೆ ಎಲ್ಲೆ ಬಂದಾಗ ಧರ್ಮ ಯಾಂತ್ರಿಕವಾಗುತ್ತದೆ. ಈ ರೀತಿ ಧರ್ಮ ಅವನತಿಯ ಹಾದಿಯನ್ನು ಹಿಡಿದಾಗ ಅದರ ಪರಿಷ್ಕಾರಕ್ಕಾಗಿ ಭಕ್ತಿ ಚಳವಳಿ ಉದಯವಾಯಿತು.

"ಭಕ್ತಿ" ಎಂದರೆ ದೇವರಿಗೆ ಸಮರ್ಪಿಸಿಕೊಳ್ಳುವುದು ಅಥವಾ ಅಚಲವಾದ ನಂಬಿಕೆ ಮತ್ತು ಪರಿಶುದ್ದವಾದ ಮನಸ್ಸಿನಿಂದ ಧ್ಯಾನಶಕ್ತರಾಗುವುದು ಎಂದರ್ಥ, ಭಕ್ತಿಯೆಂಬ ಸಂಸ್ಕೃತ ಪದವು "ಭಜ್" ಎಂಬ ಮೂಲದಿಂದ ಬಂದಿದ್ದು ಅದರ ಅರ್ಥ "ಧ್ಯಾನಮಾಡು" ಎಂದರ್ಥ.

ಭಾರತೀಯ ಸಮಾಜದಲ್ಲಿ ಜಾತಿಪದ್ದತಿ, ವಿಗ್ರಹಾರಾಧನೆ, ಯಜ್ಞಯಾಗಾದಿ, ಮೂಢನಂಬಿಕೆ ಇತರ ಅಂಶಗಳು ಹಿಂದೂ ಸಮಾಜದಲ್ಲಿ ನಿಂತ ನೀರಿನಂತೆ ಜಡವಾಗಿದ್ದ ಕಾಲದಲ್ಲಿ ಇಸ್ಲಾಂ ಧರ್ಮ ವಿಶ್ವವ್ಯಾಪ್ತಿ ಸಹೋದರತ್ವ ಏಕೀಶ್ವರವಾದ ಮತ್ತು ಮಾನವ ಸಮಾನತೆಯನ್ನು ಪ್ರಚಾರ ಮಾಡಿತು. ಈ ತರಹದ ವಿಚಾರಗಳಿಂದ ಪ್ರೇರೇಪಿತರಾದ ಹಿಂದೂಗಳು ಇಸ್ಲಾಂ ಧರ್ಮದ ಅನುಯಾಯಿಗಳಾದರು. ಆ ವೇಳೆಯಲ್ಲಿ ಹಿಂದೂ ಸಮಾಜದಲಿದ್ದ ಕೆಲವು ಚಿಂತಕರು, ಸಮಾಜ ಸುಧಾಕರು ಅನಿಷ್ಟ ಪದ್ದತಿಗಳನ್ನು ತೊಡೆದು ಹಾಕಲು ಶ್ರಮಿಸಿ ಏಕದೇವತಾರಾದನೆ, ಮಾನವ ಸಹೋದರತೆಯನ್ನು ಪ್ರಚಾರ ಪಡಿಸಿ ಹಿಂದೂ ಧರ್ಮವನ್ನು ಇಸ್ಲಾಂ ಪ್ರಭಾವದಿಂದ ರಕ್ಷಿಸಿದರು. ಈ ಚಳವಳಿಯನ್ನು " ಹಿಂದೂ ಧರ್ಮದ ಶುದ್ದೀಕರಣ ಚಳವಳಿ" ಎಂದು ಕರೆದರು.

ಭಕ್ತಿ ಪಂಥವು ಅತಿಯಾದ ಉರುಪುಗೊಳ್ಳುವಿಕೆಗೆ ಅದರ ತತ್ವಗಳೆ ಪ್ರಮುಖವಾದದವು ಅವುಗಳೆಂದರೆ,

ದೇವನೊಬ್ಬ ನಾಮ ಹಲವು

ಭಕ್ತಿಯಿಂದ ಮುಕ್ತಿ ಸಾಧ್ಯ

ಜಾತಿ ವ್ಯವಸ್ಥೆಯ ಖಂಡನೆ

ಪುರೋಹಿತಶಾಹಿ ವ್ಯವಸ್ಥೆಗೆ ವಿರೋಧ

ಭಕ್ತಿ ಚಳವಳಿ ಮಾನವ ಸಮಾನತೆ, ವಿಶ್ವಭಾತೃತ್ವ ಭೋದಿಸುವುದು

ಮೂರ್ತಿಪೂಜೆ, ಮೂಢನಂಬಿಕೆ, ಅರ್ಥರಹಿತ ಆಚರಣೆ ಮತ್ತು ಯಜ್ಞಯಾಗಾದಿಗಳನ್ನು ವಿರೋದಿಸುವುದು

ಭಕ್ತಿ ಪಂಥದಲ್ಲಿ ಸಮಾನತೆಯ ಪ್ರತೀಕವಾಗಿ ಹಲವಾರು ಸುಧಾರಕರು ಶ್ರಮಿಸಿದ್ದಾರೆ. ಅವರಲ್ಲಿ ರಮಾನಂದ, ಕಬೀರ್‍, ವಲ್ಲಭಾಚಾರ್ಯ, ಮೀರಾಬಾಯಿ, ರೈದಾಸರು, ತುಳಸಿದಾಸರು, ಗುರುನಾನಕ್ ಮುಂತಾದವರು ಆದರೆ ನಾವು ಅದರಲ್ಲಿ ಕಬೀರರನ್ನು ಪ್ರಮುಖವಾಗಿ ತೆಗೆದುಕೊಳ್ಳಬೇಕಾಗುತ್ತದೆ. ರಮಾನಂದರ ನೆಚ್ಚಿನ ಶಿಷ್ಯರಾದ ಕಬೀರರು ಮುಸ್ಲಿಂ ಸಂತ ಫರ್‍ ರಾಕಿಯ ತತ್ವಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಕಬೀರರು ಜಾತಿಭೇದ, ಧಾರ್ಮಿಕ ವಿಧಿವಿದಾನಗಳು ಮತ್ತು ಆಡಂಬರ ಆಚರಣೆಗಳನ್ನು ಖಂಡಿಸಿದರು, " ಪರಿಶುದ್ದ ಭಕ್ತಿಯೇ ಧರ್ಮದ ಜೀವಾಳ " ಎಂದು ಬೋದಿಸುತ್ತಾ, ಭಕ್ತಿರಹಿತ ವ್ರತ, ಉಪವಾಸ, ಉತ್ಸವ, ತೀರ್ಥಯಾತ್ರೆಗಳು ನಿರರ್ಥಕವೆಂದು ತಿಳಿಸಿ ಹಿಂದೂ - ಮುಸ್ಲಿಂ ಸಾಮರಸ್ಯ ಸಾಧನೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದರು. ರಾಮನೇ ರಹೀಮ-ಕೃಷ್ಣನೇ ಕಲೀಮ ಎನ್ನುತ್ತ ಒಂದೇ ದೇವರ ಹಲವು ಹೆಸರುಗಳು ಎಂದರು. ಹಿಂದೂ ಮತ್ತು ಮುಸಲ್ಮಾನರು ಒಂದೇ ಮಣ್ಣಿನಿಂದ ಮಾಡಿದ ಮಡಿಕೆಗಳು ಎಂದು ವರ್ಣಿಸಿದರು. ದೇವರೊಬ್ಬ ನಾಮ ಹಲವು ಎಂಬ ಏಕೀಶ್ವರ ತತ್ವವನ್ನು ಪ್ರತಿಪಾದಿಸಿದರು. ಭಕ್ತಿಪೂರಿತ ಭಜನೆ ಮೋಕ್ಷ ಸಾಧನೆಗಾಗಿ ನಿಜವಾದ ಸಾಧನ ಎಂದು ಕಬೀರರು ಬೋದಿಸಿದರು.

ಕಬೀರರು ಸಂಪ್ರದಾಯಸ್ಥರು, ಧರ್ಮಗಳಲ್ಲಿ ಅನುಸರಿಸುತ್ತಿದ್ದ ಕಂದಾಚಾರ, ಮೂಢನಂಬಿಕೆಗಳನ್ನು ಪ್ರಶ್ನಿಸುತ್ತಿದ್ದರು. ಆಮೂಲಕ ಜನರಲ್ಲಿ ವಿವೇಚನಾಶಕ್ತಿಯನ್ನು ಬೆಳೆಸಲು ಕೆಲವು ವಿಷಯಗಳನ್ನು ಜನತೆಯ ಗಮನಕ್ಕೆ ತರುತ್ತಿದ್ದರು.

ಕಲ್ಲನ್ನು ಪೂಜಿಸಿ ಮೋಕ್ಷ ಪಡೆಯುವುದಾದರೆ ನಾನು ಪರ್ವತವನ್ನೆ ಪೂಜಿಸುತ್ತೇನೆ.

ಧರ್ಮದ ನಿಜವಾದ ಅರ್ಥವನ್ನು ತಿಳಿಯದವರು ಧರ್ಮದ ಹೆಸರಿನಲ್ಲಿ ಕಚ್ಚಾಡುತ್ತಾರೆ.

ಸ್ನಾನ ಮಾಡುವುದರ ಮೂಲಕ ಮೋಕ್ಷ ಪಡೆಯುವುದಾದರೆ ಮೊದಲು ಕಪ್ಪೆಗಳು ಮೋಕ್ಷ ಪಡೆಯುತ್ತವೆ.

ಮನುಷ್ಯ ನೂರಾರು ಕೃತಿಗಳನ್ನು ಓದಿದರೂ ಪಂಡಿತನಾಗಲಾರ, ಪ್ರೇಮದ ಅರ್ಥವನ್ನು ಗ್ರಹಿಸಿದವರು ಪಂಡಿತರಾಗುತ್ತಾರೆ.

ಧರ್ಮ ಮತ್ತು ದೇವರು ಅಸಂಖ್ಯವಾದರು ದೇವರು ಒಬ್ಬನೇ.

ಶಿರ ಮುಂಡನದಿಂದ ದೇವರನ್ನು ಸೇರುತ್ತೇನೆಂದು ನಂಬಿದರೆ, ಬದುಕಿರುವಷ್ಟಯ ಕಾಲವು ಆಗಾಗ ಕೂದಲನ್ನು ಕಳೆದುಕೊಳ್ಳುವ ಕುರಿ ಖಂಡಿತವಾಗಿಯು, ಮೋಕ್ಷವನ್ನು ಪಡೆಯುವುದೇ ಎಂದು ಜನರಿಗೆ ತಿಳಿಹೇಳಿದರು. 

ಒಟ್ಟಾರೆ ಕಬೀರ್‍ ಒಬ್ಬ ಅನುಭವಿ ಸಂತನಾಗಿ, ಸಮಾಜ ಸುಧಾರಕನಾಗಿ, ದೀನ-ದಲಿತರ ಬಗೆಗೆ ಪ್ರಾಮಾಣಿಕ ಕಳಕಳಿಯುಳ್ಳವರಾಗಿ ಜನಮನದಲ್ಲಿ ಉಳಿದಿದ್ದಾರೆ. ಆಗಾಗಿ ಈ ಭಕ್ತಿ ಪಂಥದ ಪರಿಣಾಮವಾಗಿ ಹಿಂದೂ ಧರ್ಮ ಮತ್ತು ಸಮಾಜ ಪುನಶ್ಚೇತನ, ಹಿಂದೂ-ಮುಸ್ಲಿಂ ಐಕ್ಯತೆ, ಪ್ರಾದೇಶಿಕ ಭಾಷಾ ಸಾಹಿತ್ಯ ಬೆಳವಣಿಗೆ ಹಾಗೂ ಮತಾಂತರಕ್ಕೆ ತಡೆ ಮುಂತಾದ ರೀತಿಯ ಪರಿಣಾಮಗಳು ಭಕ್ತಿ ಪಂಥದಿಂದ ಸಾಧ್ಯವಾಗಿವೆ.

ಸೂಫಿ ಪಂಥ ಹಾಗೂ ಭಕ್ತಿ ಪಂಥದ ಸಮಕಾಲೀನವಾಗಿ ಕರ್ನಾಟಕದಲ್ಲಿ ಕಂಡುಬರುವುದೆಂದರೆ ಅದು ವಚನ ಚಳವಳಿ. ಇದನ್ನು ಒಂದು ರೀತಿಯಲ್ಲಿ ಸೂಫಿ ಪರಂಪರೆಗೆ ಕೊಂಡೊಯ್ಯಬಹುದು. ಅಂದಿನ ಶ್ರೇಷ್ಟ ಸಿದ್ದಾಂತಿಗಳಾಗಿದ್ದವರು, ಅಲ್ಲಮಪ್ರಭು, ಅಕ್ಕ ಮಹಾದೇವಿ, ದಾಸೀಮಯ್ಯ, ನೀಲಾಂಬಿಕೆ, ಗಂಗಾದೇವಿ, ಹರಳಯ್ಯ, ಉರಿಲಿಂಗಪೆದ್ದಿ, ಆಯ್ದಕ್ಕಿಮಾರಯ್ಯ, ಮುಂತಾದವರು ಆದರೆ ಪ್ರಧಾನವಾಗಿ ಕಂಡುಬರುವವರು ಬಸವಣ್ಣ.

ಹಳೆಯ ಶೈವ ಸಿದ್ದಾಂತಗಳನ್ನು ನಿರಾಕರಿಸಿದ ಬಸವಣ್ಣ ಶಿವನೇ ಪರಮದೈವವೆಂದು ನಿರ್ಧರಿಸಿ ಆರಾಧಿಸಲು ಆರಂಭಿಸಿದರು. ಶಿವನ ಆರಾಧನೆಯಲ್ಲಿ ಭಕ್ತಿ ಮಾತ್ರ ಅವಶ್ಯವೆಂದು ಯಾವ ರೀತಿಯ ಬೇರೆ ಆಚರಣೆಗಳು ಇರಬಾರದೆಂದು ದೇವರ ಹೆಸರಿನಲ್ಲಿ ನಡೆಯುತ್ತಿದ್ದ  ಕಂದಾಚಾರಗಳನ್ನು ಖಂಡಿಸಿದರು. ಮೂರ್ತಿಪೂಜೆಯನ್ನು ತಿರಸ್ಕರಿಸಿ ಅನನ್ಯ ಭಕ್ತಿಯಿಂದ, ಶ್ರದ್ದೆಯಿಂದ ದೇವರನ್ನು ಆರಾಧಿಸಬೇಕೆಂದು ಹೇಳುತ್ತಿದ್ದರು. ಅವರು ಗುರು, ಲಿಂಗ, ಜಂಗಮ ಮೋಕ್ಷ ಸಾಧನೆಗಾಗಿ ಮುಖ್ಯವೆಂದು, ಗುರುವಿನ ಮಾರ್ಗದರ್ಶನವಿಲ್ಲದೆ ಮುಕ್ತಿ ದೊರೆಯುವುದಿಲ್ಲವೆಂದರು.

ಬಸವಣ್ಣನವರ ತತ್ವ ಸಿದ್ದಾಂತವನ್ನು ಶಕ್ತಿ ವಿಶಿಷ್ಟಾದೈತವೆಂದು ಕರೆಯಲಾಗಿದೆ. ಏಕೆಂದರೆ ಅವರು ಶಿವನನ್ನು ಶಕ್ತಿ ಸ್ವರೂಪಿಯೆಂದು ಲಿಂಗದ ರೂಪದಲ್ಲಿ ಆರಾಧಿಸಿದರು. ಆಧ್ಯಾತ್ಮಿಕ ಬದುಕಿನಲ್ಲಿ ಭಕ್ತಿಗೆ ಹೆಚ್ಚಿನ ಸ್ಥಾನ ನೀಡಿದರು. ಸಂಪೂರ್ಣ ಲಿಂಗದ ಮೂಲಕ ಶರಣಾಗತಿಯಾಗಿ ಐಕ್ಯವಾಗುವುದನ್ನು ಅವರು ಮೋಕ್ಷ ಸಾಧನೆಗೆ ಸೂಕ್ತವೆಂದು ತಿಳಿಸಿದರು. ಜಂಗಮ ದೇವರ ಆದೇಶವನ್ನು ಜನಸಾಮಾನ್ಯರಿಗೆ ತಲುಪಿಸುತ್ತಾರೆ ತಮ್ಮ ಜೀವನವನ್ನು ಶಿವನ ಪೂಜೆಗೆ ಮೀಸಲಾಗಿಸುತ್ತಾರೆ ಅವರು ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆ ಎಂಬುದು ಬಸವಣ್ಣನವರ ಅಭಿಪ್ರಾಯ.

ಮೂರ್ತಿ ಪೂಜೆಯನ್ನು ಖಂಡಿಸಿದ ಬಸವಣ್ಣ ಮನುಷ್ಯರ ಆಚರಣೆಗೂ ಅವರ ನಡವಳಿಕೆಗೂ ಇರುವ ವ್ಯತ್ಯಾಸವನ್ನು ಹೀಗೆಳೆದರು,

ಕಲ್ಲ ನಾಗರ ಕಂಡರೆ ಹಾಲೆರವರಯ್ಯ

ದಿಟದ ನಾಗರ ಬಂದರೆ ಕೊಲ್ಲೆಂಬರಯ್ಯ

ಎಂದು ಅವರ ಡಾಂಭಿಕ ತನವನ್ನು ಬಯಲಿಗೆಳೆದರು, ಊಟ ಮಾಡದ ಲಿಂಗಕ್ಕೆ ಆಹಾರ ಅರ್ಪಿಸುವರು, ಹಸಿದ ಜಂಗುಮ ಬಂದರೆ ಓಡಿಸುವವರಲ್ಲಾ ಎಂದು ಛೇಡಿಸಿದರು. ದೇವರನ್ನು ಆರಾಧಿಸಲು ತೀರ್ಥಯಾತ್ರೆ ಹೋಗಬೇಕಿಲ್ಲ, ಎಲ್ಲೆಲ್ಲಿಯೂ ಇರುವ ಶಿವನಿಗೆ ಶಿವಾಲಯ ಕಟ್ಟಬೇಕಿಲ್ಲ ಬದಲು ಶುದ್ದ ಮನಸ್ಸಿದ್ದರೆ ಸಾಕು ಎಂದು  

ಉಳ್ಳವರು ಶಿವಾಲಯ ಮಾಡುವರು 

ನಾನೇನು ಮಾಡಲಯ್ಯ ಬಡವ

ಎನ್ನ ಕಾಲೇ ಕಂಬ

ದೇಹವೇ ದೇಗುಲ 

ಶಿರವೆ ಹೊನ್ನ ಕಳಸವಯ್ಯ

- ಕೂಡಲ ಸಂಗಮದೇವ

ಎನ್ನುತ್ತಾ ದೇವರನ್ನು ಹುಡುಕಿಕೊಂಡು ಹೋಗುವುದು ವ್ಯರ್ಥವೆಂದು ವಾದಿಸಿದರು ಮೂರ್ತಿಪೂಜೆಯನ್ನು ತಿರಸ್ಕರಿಸಿದಂತಹ ಬಸವಣ್ಣ, ಗುಹೇಶ್ವರನಾದ ಈಶ್ವರನನ್ನು ಭಕ್ತಿ ಭಾವದಿಂದ ಆರಾಧಿಸಬೇಕೆಂದರು.

ಮೋಕ್ಷ ಸಾಧನೆಗಾಗಿ ಯಾವ ಜಪತಪಗಳು ಬೇಡವೆಂದ ಬಸವಣ್ಣ, ಎಲ್ಲರೂ ಅನುಸರಿಸಬಹುದಾದ ಸರಳ ಸೂತ್ರವನ್ನು ಜನರ ಮುಂದಿಟ್ಟರು,

ಕಳ ಬೇಡ

ಕೊಲಬೇಡ

ಹುಸಿಯ ನುಡಿಯಲು ಬೇಡ

ಮುನಿಯ ಬೇಡ

ಅನ್ಯರಿಗೆ ಅಸಹ್ಯ ಪಡಬೇಡ

ತನ್ನ ಬಣ್ಣಿಸಲುಬೇಡ

ಇದಿರ ಹಳಿಯಲು ಬೇಡ

ಇದೇ ಅಂತರಂಗ ಶುದ್ದಿ

ಇದೇ ಬಹಿರಂಗ ಶುದ್ದಿ

ಕೂಡಲ ಸಂಗಮ ಮೆಚ್ಚುತ್ತಾನೆಂದು ನಿತ್ಯ ಜೀವನದಲ್ಲಿ ನೈತಿಕತೆಗೆ, ಮಾನವೀಯತೆಗೆ, ಪ್ರಾಮಾಣಿಕತೆಗೆ ಹೆಚ್ಚು ಒತ್ತು ನೀಡಿದರು. ಹೀಗಾಗಿ ಅವರು ಶಿವಭಕ್ತಿ, ಜಂಗಮ ಅಥವಾ ಶರಣರ ಸೇವೆ ಮತ್ತು ದಾಸೋಹಗಳಿಗೆ ಮಹತ್ವ ನೀಡಿದರು. ಬಸವಣ್ಣ ನವರು ಕಾಯಕವೇ ಕೈಲಾಸವೆಂದು ಕೂತು ತಿನ್ನುವುದಕ್ಕಿಂತ ದುಡಿದು ಉಣ್ಣುವುದು ಶ್ರೇಷ್ಟವೆಂದರು. ಜ್ಞಾನ, ಭಕ್ತಿಗಳ ಜೊತೆಯಲ್ಲಿ ಕಾಯಕವು ನಮ್ಮನ್ನು ದೇವರೆಡೆಗೆ ನಡೆಸಬಲ್ಲದೆಂಬುದು ಅವರ ನಂಬಿಕೆ, ಕಬೀರರದು ಕೂಡ ಇದೇ ನಿಲುವಾಗಿತ್ತು.

ಬಸವಣ್ಣನವರ ಬೋಧನೆ ಹಾಗೂ ಅವರ ಮಾರ್ಗದರ್ಶನ ಸಾಮಾಜಿಕ ಹಾಗೂ ಧಾರ್ಮಿಕ ಆಂದೋಲನಕ್ಕೆ ಕಾರಣವಾಗಿದ್ದಲ್ಲದೆ,  ಅವರು ಕರ್ನಾಟಕ ಮತ್ತು ದಕ್ಷಿಣದ ಉಳಿದ ಭಾಗಗಳಲ್ಲಿ ಉಂಟಾದ ಮಹತ್ತರ ಬದಲಾವಣೆಗಳಿಗೆ ಕಾರಣಭೂತರಾದರು. ಅವರು ಅಂದು ಹುಟ್ಟು ಹಾಕಿದ ಚಳವಳಿ, ಧಾರ್ಮಿಕ ಕ್ಷೇತ್ರವನ್ನು, ಸ್ವಚ್ಚಗೊಳಿಸಲು ಸಹಕಾರಿಯಾದುದ್ದಲ್ಲದೆ, ಸಾಮಾಜಿಕವಾಗಿ ಅವ್ಯವಸ್ಥೆಯನ್ನು ಕಿತ್ತೊಗೆಯಿತು. ಸಾಮಾನ್ಯವಾಗಿ ಕಲ್ಯಾಣ ಕ್ರಾಂತಿಯನ್ನು ಸಂಕುಚಿತ ದೃಷ್ಟಿಯಿಂದ ನೋಡಲಾಗುತ್ತಿದೆ. ಆದರೆ ಅದು ಅತ್ಯಂತ ಪರಿಣಾಮಕಾರಿಯಾದ  ಹಲವಾರು ಶತಮಾನಗಳವರೆಗೆ ತನ್ನ ಪ್ರಭಾವ ಬೀರಿದ ಕ್ರಾಂತಿ. ಕಲ್ಯಾಣ ಕ್ರಾಂತಿಯನ್ನು ಟರ್ಕರ ಆಕ್ರಮಣದ ನಂತರ ಕಾನ್ ಸ್ಟಾಂಟಿನೋಪಲ್ ನಗರದಲ್ಲಾದ ಬೆಳವಣಿಗೆಯಷ್ಟೆ ಮಹತ್ವವಾದುದು. ಅಲ್ಲಿದ್ದ ಶರಣರು ತಮ್ಮ ಅಮೂಲ್ಯ ಕಲ್ಯಾಣವಗಲಿ ತುಂಬಿದ್ದ ಜ್ಞಾನ ಭಂಡಾರದೊಂದಿಗೆ ದಕ್ಷಿಣದ ಉಳಿದ ಭಾಗಗಳಿಗೆ ಓಡಿ ಹೋಗಿ ಅಲ್ಲಿನ ಧಾರ್ಮಿಕ ಹಾಗೂ ಸಾಮಾಜಿಕ ಬದಲಾವಣೆಗೆ ಕಾರಣರಾದರು.

ಸೂಫಿ ಪಂಥವಾಗಿರಬಹುದು, ಭಕ್ತಿ ಪಂಥವಾಗಿರಬಹುದು, ವಚನ ಪರಂಪರೆಯಾಗಿರಬಹುದು ಇವುಗಳನ್ನು ಬೇರೆ ಬೇರೆ ರೀತಿಯಲ್ಲಿ ನೋಡಲಾಗುವುದಿಲ್ಲ. ಇವೆಲ್ಲವೂ ಭೌಗೋಳಿಕವಾಗಿ ವಿಭಿನ್ನವಾಗಿದ್ದರು ಕೂಡ ಸಾಮಾಜಿಕವಾಗಿ ಒಂದೇ ಮಾರ್ಗವಾಗಿದ್ದವು. ಆಗಾಗಿ ಈ ಮೂರು ಪರಂಪರೆಗಳನ್ನು ಒಂದೇ ರೀತಿಯಲ್ಲಿ ನೋಡಬೇಕಾಗುತ್ತದೆ. ಅದಕ್ಕಾಗಿಯೆ ೨೦೧೪ ರ ಬಹುರೂಪಿಯು ಒಂದು ವಿಶಿಷ್ಟ ವೇದಿಕೆಯನ್ನು ಸಿದ್ದಗೊಳಿಸಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಸೂಪಿ ಸಂತರನ್ನು ಮುಖಾ-ಮುಖಿಗೊಳಿಸಿದ್ದು, ಬಹುರೂಪಿಯಲ್ಲಿ ಏಕತಾರಿ ತಂಡದ ಗಾಯಕರಾದ ದೇವಾನಂದ್ ವರಪ್ರಸಾದ್ ರವರು ಸಂತ ಶಿಶುನಾಳ ಷರೀಫರ ತತ್ವಪದಗಳನ್ನು ಹಾಡುವುದರ ಮೂಲಕ ಸಂತ ಪರಂಪರೆಯನ್ನು ಮತ್ತೆ ಆಧುನಿಕ ಯುಗದಲ್ಲಿ ಉದ್ದೀಪನಗೊಳಿಸಿತು. ಆಗಾಗಿ ಈ ನಿಟ್ಟಿನಲ್ಲಿ ಪೂರಕವಾದ ಜನಾರ್ಧನ್ ಜನ್ನಿ ಹಾಗೂ ದೇವಾನಂದ್ ವರಪ್ರಸಾದ್ ರವರನ್ನು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಪರವಾಗಿ ಸ್ಮರಿಸಬೇಕು. ಇಂಥಹ ಕಾರ್ಯಕ್ರಮಗಳು ಮುಖಾ-ಮುಖಿಗೊಂಡು ಮತ್ತಷ್ಟು ರೀತಿಯಲ್ಲಿ ಸಾಮಾಜಿಕವಾಗಿ ಜನಮನಗಳಲ್ಲಿ ಉಳಿಯಬೇಕಾಗಿದೆ.

 

 

ಹಾರೋಹಳ್ಳಿ ರವೀಂದ್ರ

Rating
No votes yet