ಬೆಳಕು ಎರವಲು ಕೊಡ್ತೀರ?
ನನ್ನೊಳಗೆ ಸಾಯಂಕಾಲ ಸೂರ್ಯ ಮುಳುಗಿತು. ಕ್ಷಣಕ್ಷಣಕ್ಕೂ ಕಪ್ಪು ಆವರಿಸುತ್ತಿದ್ದರೂ ಆಕಾಶದಂಚು ಇನ್ನೂ ಸೋತಿಲ್ಲ ಎಂಬಂತೆ ಕೆಂಪನ್ನು ಹಿಡಿದೇ ಇದೆ. ಸ್ವಲ್ಪ ಹೊತ್ತಿನ ಮುಂಚಷ್ಟೇ ನಿಚ್ಚಳವಾಗಿ ಕಾಣುತ್ತಿದ್ದದ್ದು ಕತ್ತಲಲ್ಲಿ ಸದ್ದು ಮಾಡದೆ ಕರಗುತ್ತಿದೆ. ಲೀನವಾಗುವುದು ಎಂದರೆ ಹೀಗೇ ಇರಬೇಕು, ಅದನ್ನು ಕಲಿಯಬೇಕು ಅಂತ ಸುತ್ತಮುತ್ತ ದಿಟ್ಟಿಸುತ್ತಾ ಉಳಿದೆ. ಕತ್ತಲು ಪೂರ್ತಿ ತುಂಬಿಕೊಳ್ಳೋವರೆಗೂ.
ಆದರೆ ಈಗ ಒಂದಷ್ಟು ಬೆಳಕು ಎರವಲು ಪಡೀಬೇಕು. ನಾನು ಬೆಳಕು ಎರವಲು ಕೇಳಿದವರೆಲ್ಲಾ ನಗತಾರೆ. ಯಾವಾಗ ವಾಪಸು ಕೊಡುತ್ತೀ ಅಂತ ಕುಹಕವಾಡತಾರೆ. ಬೆಳಿಗ್ಗೆ ಕೊಡತೀನಿ ಅಂತಂದು ನಾಲಗೆ ಕಚ್ಚಿಕೋತ್ತೀನಿ. ಹೌದಲ್ಲ, ಬೇಡ ಅಂದರೂ ಕಣ್ತುಂಬೊ ಬೆಳಕು ಇರೋ ಬೆಳಿಗ್ಗೆ ನಾನು ವಾಪಸು ಕೊಡೋ ಜುಜುಬಿ ಬೆಳಕು ಯಾರಿಗೆ ಬೇಕು? ಅವರಿಗೆ ನಗು ಬರೋದು ಸರೀನೆ. ಆದರೆ ಕುಹಕ ಬೇಕಾಗಿಲ್ಲ. ಅವರಿಗೂ ಒಂದಲ್ಲ ಒಂದು ದಿನ ಬೆಳಕು ಎರವಲು ಪಡೆಯೋ ಸಂದರ್ಭ ಬಂದೇ ಬರುತ್ತಲ್ವ? ಯಾಕೆಂದರೆ ಬೆಳಕು ಎರವಲು ಬೇಡ್ಕೊಂಡು ನಿಮ್ಮ ಮುಂದೇನೆ ಓಡಾಡ್ತಾ ಇರುತೀವಿ. ಒಂದು ಸಲ ನಮ್ಮ ಕಣ್ಣು ನೋಡಿ ಗೊತ್ತಾಗತ್ತೆ. ಎಂಥ ದಾಹದಲ್ಲಿ ಹುಡುಕ್ತಾ ಇರತ್ತೆ ಅಂತ. ಅಥವಾ ಇದು ನನಗೆ ಮಾತ್ರ ಆಗತಿರಬಹುದು. ಒಳಗಿನ ಕತ್ತಲೆಲ್ಲಾ ಅನುಮಾನ ತುಂಬಿಕೋತು. ಅಥವಾ ಅನುಮಾನಾನೆ ಕತ್ತಲ?
ಹೋಗಲಿ ನನ್ನದೇ ಒಂದು ದೀಪ ಹಚ್ಚಕೋಬೇಕು. ಹಣತೆಯೋ, ಮೋಂಬತ್ತಿಯೋ, ಕಂದೀಲೋ. ಸಿಡ್ನಿಯಲ್ಲಿ ಮನೆ ಮಠ ಇಲ್ಲದೇನೋ ಅಥವಾ ಮನೆ ಮಠದಲ್ಲಿ ಇರೋರು ಬೇಡದೇನೋ ಪಾರ್ಕ್‌ನಲ್ಲಿ, ಅಂಗಡಿ ಬಾಗಲಲ್ಲಿ ಪೇಪರ್ ಹೊದ್ದು ನಡಗತಾ ರಾತ್ರಿ ಕಳಿಯೋ ಮಂದೀನ ಕೇಳಬೇಕು. ಹೇಗೆ ಮಾಡ್ತೀರ ಅಂತ. ಎಲ್ಲಾರ ಹತ್ರಾನೂ ಕಲಿಯೋದು ಇರತ್ತೆ ನೋಡಿ. ಅವರು ನನ್ನನ್ನ ಉಗೀಬಹುದು ಅಥವಾ ನನ್ನ ಭುಜದ ಮೇಲೆ ತಲೆಯಿಟ್ಟು ಯಾರನ್ನೋ ನೆನಸ್ಕೊಂಡು ಅಳಬಹುದು. ಆಮೇಲೆ ಅವರ ಹತ್ತಿರ ಮಾತ್ರ ಉಳಿದರೋ ಗುಟ್ಟನ್ನ ಹಂಚ್ಕೋಬಹುದು.
ದೀಪ ಹಚ್ಚಿಕೊಂಡ ಮೇಲೆ ಇದ್ದೇ ಇದೆ. ಅದರ ಮುಂದೆ ಕೈ ಹಿಡಿದು ಗೋಡೆ ಮೇಲೆ ಅಕರಾಳ ವಿಕರಾಳ ಎಲ್ಲ ದೊಂಬಿ ಎಬ್ಬಿಸೋದು. ಅಕರಾಳ ವಿಕರಾಳ ಕಂಡಿದ್ದಕ್ಕೆ ಹೆದರೋದು. ಹೆದರಿಕೆ ಮರೆಯೋದಕ್ಕೆ ಕೋಡಂಗಿ ಥರ ಬೆರಳು ಕುಣಿಸಿ ನಗೋದು. ಗೋಡೆ ಮೇಲೆ ಮೂಡೋ ಒಂದೊಂದು ನೆರಳೂ ಜೀವ ಪಡ್ಕೊಂಡು ಆಡೋದು. ಆಟ ಅಂತ ಶುರು ಆಗಿದ್ದು ತಪ್ಪಿಸ್ಕೊಳ್ಳೋಕೆ ಆಗದಂಥ ಮತ್ತಾಗೋದು; ಆಮೇಲೆ ಅದೇ ಜೈಲಾಗೋದು.
ಮತ್ತೆ ಬೆಳಗಾಗತ್ತೆ. ಎಲ್ಲ ಸರಿಯಾಗಿದೆ ಅಂತ ಅನ್ಸೋದಕ್ಕೆ ಶುರು ಆಗತ್ತೆ.