ಮೋಹನಸ್ವಾಮಿ
ಈಚೆಗೆ ರಜೆಯಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದಾಗ ಕನ್ನಡ ಪುಸ್ತಕ ಖರೀದಿಸಲು ಹೋದಾಗ ಕೊಂಡ ಪುಸ್ತಕಗಳಲ್ಲಿ ವಸುಧೇಂದ್ರರ ಇತ್ತೀಚೆಗೆ ಬಿಡುಗಡೆಯಾದ ಹೊಸ ಸಣ್ಣ ಕಥೆಗಳ ಸಂಕಲನ 'ಮೋಹನಸ್ವಾಮಿ' ಒಂದು. ಈ ಪುಸ್ತಕದ ಕಿರು ಪರಿಚಯದ ಯತ್ನ ಈ ಬರಹ.
ಈ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿದ್ದು ಅದರಲ್ಲಿ ನಾಲ್ಕೈದು ಕಥೆಗಳು ನಮ್ಮ ಕಥೆಗಳಲ್ಲಿ ಅಪರೂಪವಾದ 'ಹೆಣ್ಣಿಗ' (ಸಲಿಂಗಕಾಮಿ) ವ್ಯಕ್ತಿತ್ವವನ್ನು ಬಿಂಬಿಸುವ ಕಥೆಯಾಗಿರುವುದು ಈ ಸಂಕಲನದ ವಿಶೇಷಗಳಲ್ಲಿ ಒಂದು. ಸಂಕಲನದ ಮೊದಲ ಕಥೆ 'ತುತ್ತತುದಿಯಲ್ಲಿ ಮೊತ್ತಮೊದಲು' ಕೂಡ ಇದೆ ಕಥಾವಸ್ತುವಿನಿಂದಲೆ ಆರಂಭವಾಗುವ ಕಥಾನಕ. ಇಲ್ಲಿ (ಮತ್ತೂ ಕೆಲವು ಕಥಾನಕಗಳಲ್ಲಿ ಸಹ) ಬರುವ ಮೋಹನಸ್ವಾಮಿ ಪಾತ್ರ ಆಂತರ್ಯದಲ್ಲಿ ಹೆಣ್ಣಿನ ಮನಸತ್ವವಿರುವ ಅಧುನಿಕ ಜಗದಲ್ಲಿ ಇತರ ಸಾಮಾನ್ಯರಂತೆ ಜೀವಿಸುತ್ತಿರುವ ವ್ಯಕ್ತಿತ್ವ. ಓದು, ಕೆಲಸ , ಬಾಹ್ಯ ನಡುವಳಿಕೆ - ಎಲ್ಲವೂ ಇತರರಂತೆ ಇದ್ದರೂ ಆಂತರ್ಯದಲ್ಲಿ ಪಕ್ಕಾ ಹೆಣ್ಣಿನ ಮನಸತ್ವವಿರುವ ಗಂಡಿನ ಸಾಂಗತ್ಯ ಬಯಸುವವ. ಆದರೆ ಸಾರ್ವಜನಿಕವಾಗಿ ಆ ನಡುವಳಿಕೆಗಿರುವ ತಿರಸ್ಕಾರದ ಭೀತಿಯಿಂದಾಗಿ ಅದನ್ನು ಅಳುಕಿನಿಂದ ರಹಸ್ಯವಾಗಷ್ಟೆ ನಿಭಾಯಿಸಿಕೊಂಡು ಹೋಗುವ ವ್ಯಕ್ತಿ. ಆತನ ಈ ರಹಸ್ಯ ಜೀವನಕ್ಕೆ ಸಂಗಾತಿಯಾಗಿ ಸಿಕ್ಕವನೊಬ್ಬ ಸಹಜೀವನ ನಡೆಸುತಿದ್ದರೂ ಬಾಹ್ಯ ಜಗತ್ತಿಗೆ ಮಾತ್ರ ಮಾಮೂಲಿ ಸಹವರ್ತಿಯೆಂಬ ಪರದೆ. ಹೆಣ್ಣಿಗ ವ್ಯಕ್ತಿಯೊಬ್ಬನ ಸ್ವಾಭಾವಿಕ ಹೆಣ್ತುಡಿತಗಳನ್ನು, ಆತಂಕ , ಅವಮಾನಗಳನ್ನು ಜೀವಂತಿಕೆಯಿಂದ ಸೆರೆಹಿಡಿಯುವ ಅಸಾಧಾರಣ ಕಥಾಶೈಲಿ; ವಿಮಾನಯಾನದ ಅನಿರೀಕ್ಷಿತ ಸಂಘಟನೆಯೊಂದರ ನಿಮಿತ್ತವಾಗಿ ತನ್ನೆಲ್ಲ ಕೀಳರಿಮೆ ಕಳೆದುಕೊಂಡು ತನ್ನ ಪುರುಷಸಾಂಗತ್ಯ ಸಂಬಂಧವನ್ನು ಧೈರ್ಯವಾಗಿ ಒಪ್ಪಿಕೊಳ್ಳುವ ಪರಿ , ಒಂದೆಡೆ ತನ್ನ ಕೀಳರಿಮೆಯನ್ನು ಜಯಿಸಿದ ಸಂಕೇತವಾದರೆ ಅದಕ್ಕೆ ಪ್ರೇರಕವಾಗಿಬಿಡುವ ಮೇಲ್ನೋಟಕ್ಕೆ ಎದ್ದು ಕಾಣದ ನೇರ ಸಂಬಂಧವಿರದ ಅನಿರೀಕ್ಷಿತಗಳು ಅದಕ್ಕೆ ಕಾರಣೀಭೂತವಾಗುವುದು ವಿಪರ್ಯಾಸ. ಇಲ್ಲಿನ ಕಥನಗಳೆಲ್ಲದರಲ್ಲೂ ಈ ರೀತಿಯ ಒಂದಲ್ಲ ಒಂದು ರೀತಿಯ ಅಕಸ್ಮಿಕಗಳೊ, ಒತ್ತಡಗಳೊ ಕಾರಣವಾಗಿ ನಿರೀಕ್ಷಿಸದ ರೀತಿಯ ತಿರುವು ಪಡೆಯುವುದು ಬಹುಶಃ ವಸುಧೇಂದ್ರರ ಕಥನ ತಂತ್ರಗಾರಿಕೆಯ ವಿಶೇಷವೆಂದು ಪರಿಗಣಿಸಬಹುದು.
ಸಂಕಲನದ ಎರಡನೆ ಕಥೆ 'ಕಗ್ಗಂಟು' ಮೊದಲ ಕಥೆಯ ಮೂಲವಸ್ತುವಿನ ಕಥಾಹಂದರದ ಮತ್ತೊಂದು ಆಯಾಮವನ್ನು ಬಿತ್ತರಿಸುವ ಕಥೆ. ಇಲ್ಲಿನ ಮೋಹನಸ್ವಾಮಿಯ ತಿಕ್ಕಾಟ, ಜಿಜ್ಞಾಸೆಯ ಮೂಲದ್ರವ್ಯ ಆ ತನಕ ಸಂಗಾತಿಯಾಗಿದ್ದವ ಇದ್ದಕ್ಕಿದ್ದಂತೆ ಬೇರೆ ಹೆಣ್ಣೊಬ್ಬಳ ಜತೆ ಮದುವೆಯಾಗ ಹೊರಟಾಗ ಉಂಟಾಗುವ ದಿಗ್ಭ್ರಮೆ, ತಲ್ಲಣ, ನೋವು, ನಿರಾಶೆಗಳ ಸಂಕಲನ. ಆ ವಿಷಯವನ್ನು ಬೇರೊಬ್ಬರಿಂದ ತಿಳಿಯಬೇಕಾಗಿ ಬಂದು ಹಪಹಪಿಸುವ ರೀತಿ, ತುಸುತುಸುವೆ ದೂರಾಗುತ್ತಿರುವವನನ್ನು ಕಂಡು ವಿಲವಿಲನೆ ಒದ್ದಾಡುವ ಹೆಣ್ಣು ಮನದ ಗಂಡಿನ ಚಿತ್ರಣ ಇಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಯಥಾರೀತಿ ಇಲ್ಲಿಯೂ ಕೀಳರಿಮೆ, ರಹಸ್ಯಾತ್ಮಕತೆಯ ಹೊದಿಕೆಯಿದ್ದರೂ ಬೇರ್ಪಡುವಿಕೆಯ ಆತಂಕ, ವೇದನೆಗಳನ್ನು ಚಿತ್ರಿಸಿದ ರೀತಿ ವಿಶಿಷ್ಠವಾಗುತ್ತದೆ. ಇಲ್ಲಿಯೂ ಮೋಹನಸ್ವಾಮಿ ತನ್ನನ್ನು ಬಂಧಿಸಿ ಹಿಡಿದ ಭಾವನಾತ್ಮಕತೆಯ ಮುಸುಕನ್ನು ಹರಿದು ಹೊಸ ಆಯ್ಕೆಯತ್ತ ಮನಗೊಡುವುದು ಗತವನ್ನು ಹಿಂದಿಕ್ಕಿ ಮುಂದೆ ಸಾಗುವ ಆಶಾವಾದದ ಕುರುಹಾಗುತ್ತದೆ.
ಖಾಸಗಿಯಾಗಿ ಸ್ತ್ರೀತ್ವದ ವ್ಯಕ್ತಿತ್ವವಾಗಿದ್ದರು ಸಾರ್ವತ್ರಿಕವಾಗಿ ಅದನು ಅನುಕರಿಸಲು ಬಿಡದ ಸಾಮಾಜಿಕ ಪರಿಸರ ಕಟ್ಟಳೆಯನ್ನು, ವ್ಯಕ್ತಿತ್ವದ ದೌರ್ಬಲ್ಯವಾಗಿಸಿ ದುರುಪಯೋಗಪಡಿಸಿಕೊಳ್ಳುವ ಕಥಾನಕ 'ಕಾಶೀವೀರರು'. ಇಲ್ಲಿನ ಮೋಹನಸ್ವಾಮಿಯ ಅಂಜುಬುರುಕತನವನ್ನೆ ಬಂಡವಾಳವಾಗಿಸಿಕೊಂಡು, ಅವನು ಬರೆದಿದ್ದ ಪತ್ರವೊದನ್ನು ಹಿಡಿದುಕೊಂಡು ಅವನನ್ನೆ ಭಾವನಾತ್ಮಕವಾಗಿ ಶೋಷಿಸುವ ಕಾಶೀವೀರ, ವ್ಯವಸ್ತೆಯ ನಿರ್ದಯೆ, ಕ್ರೌಯ, ಸಮಯ ಸಾಧಕತೆಯ ಪ್ರತೀಕವಾಗುತ್ತಾನೆ. ಭಾವನಾತ್ಮಕ ದೌರ್ಬಲ್ಯವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಚಾಣಾಕ್ಷರ ಕುಟಿಲತೆ ಹೊಸದಲ್ಲವಾದರೂ ಮೋಹನಸ್ವಾಮಿಯ ವ್ಯಕ್ತಿತ್ವದ ಹಿನ್ನಲೆಯಲ್ಲಿ ವಿಶೇಷವಾಗಿ ಕಾಣುತ್ತದೆ. ತೀರಾ ಅನಿವಾರ್ಯ ಪರಿಸ್ಥಿತಿಯ ಒತ್ತಡದಲ್ಲಿ ಇಂತಹ 'ಮರ್ಯಾದಸ್ತ' ಮೋಹನಸ್ವಾಮಿಯೂ ಕಾಶೀವೀರನಿಗೆ ತಿರುಗಿಬಿದ್ದು ಎದುರಿಸುವ ಧೈರ್ಯ ಮಾಡುವುದು - ಒಂದೆಡೆ ಅನುಭವಗಳಿಂದ ಗಟ್ಟಿಯಾಗುತ್ತಾ ಹೋಗುವ ಪಕ್ವತೆಯ ಮನಸತ್ವದ ಪ್ರತೀಕವಾದರೆ ಮತ್ತೊಂದೆಡೆ ಸಹನೆಯ ಮಿತಿ ಮೀರಿದ ಸ್ತರದಲ್ಲಿ ಮೃದು ವ್ಯಕ್ತಿತ್ವದ ಹಠಾತ್-ಸ್ಪೋಟಕ್ಕೆ ನೆಪವಾಗುವ ಸಾಮಾನ್ಯ ಘಟಿತಗಳ ವಿಸ್ಮಯವನ್ನು ಸಾರುತ್ತದೆ.
ಏಕಾಂಗಿತನದ ಬಲೆಯಲಿ ಸಿಕ್ಕಿ ಅದರಿಂದಲೆ ವಿಚಿತ್ರ ಭೀತಿಯಲ್ಲಿ ನರಳುವ ಮೋಹನಸ್ವಾಮಿಯ ಕಥೆ 'ಒಲ್ಲದ ತಾಂಬೂಲ'. ಸದ್ಯದಲ್ಲೆ ವಿದೇಶಕ್ಕೆ ತೆರಳಲಿದ್ದಾಗ ಗೆಳೆಯನ ಸಲಹೆಯಂತೆ ಫ್ಲಾಟೊಂದನ್ನು ಕೊಂಡಿಟ್ಟುಬಿಟ್ಟರೆ, ವಾಪಾಸ್ಸು ಬಂದಾಗ ಅನುಕೂಲವೆಂದು ಒತ್ತಾಯಪೂರ್ವಕವಾಗಿ ಅಗ್ರಹಪಡಿಸಿದಾಗ ಅದರಂತೆ ಫ್ಲಾಟು ನೋಡಲು ಹೊರಟವನ ಮೇಲೆ ಏಕಾಂಗಿತನದ ಛಾಯೆ ಹರಡುವ ತರತರದ ಭೀತಿ, ಆತಂಕಗಳನ್ನು ಕಟ್ಟಿಕೊಡುವ ಕಥೆ. ಒಬ್ವಂಟಿತನದ ಅನುಭವ, ತುಸು ದೊಡ್ಡದಾದ ಜಾಗದಲ್ಲಿರಲು ಭೀತಿ ಪಡುವ ರೀತಿ, ತನ್ನನ್ನು ಅಥವಾ ತನ್ನ ವ್ಯಕ್ತಿತ್ವವನ್ನು ಅನಾವರಣಗೊಳಿಸಬಲ್ಲ ಪ್ರತಿಯೊಂದು ಅವನ ಏಕಾಕಿತನವನ್ನು ಕಬಳಿಸಿ ವ್ಯಕ್ತಿತ್ವವನ್ನೆ ಇಲ್ಲವಾಗಿಸುವುದೆಂಬಂತೆ ತಡಬಡಿಸುವ ಮೋಹನಸ್ವಾಮಿ, ಫ್ಲಾಟು ಖರೀದಿಯಂತಹ ಗಹನ ಕಾರ್ಯವನ್ನು ನಿಮಿಷಗಳಲ್ಲೆ ಮುಗಿಸಿ ಅಲ್ಲಿಂದ ಹೊರಡಲು ಹವಣಿಸುವ ರೀತಿ ಅವನ ವಿಲಕ್ಷಣ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಲೆ ಅವನ ಭೀತಿಯ ಮುಖವನ್ನು ಪರಿಚಯಿಸುವ ಕಥಾನಕ.
ಈ ಸಂಕಲನದ ಐದನೆ ಕಥೆ ಕಿಲಿಮಂಜಾರೋ, ನುರಿತ ಸ್ಥಳೀಯನೊಬ್ಬನ ನೆರವಿನಿಂದ ಕಿಲಿಮಂಜಾರೋ ಶಿಖರದ ತುದಿ ಹತ್ತಲು ಹೊರಟವನ ಕಥನ. ಕಡಿದಾದ ಶಿಖರ, ಅರೆಜೀವವಾಗಿಸುವ ಚಳಿ, ದೇಹದ ಜತೆ ಮನಸನ್ನೂ ದುರ್ಬಲವಾಗಿಸಿಬಿಡುವ ಅರೋಹಣ ಪ್ರಕ್ರಿಯೆಯೆಲ್ಲದರ ನಡುವೆ ಮಗುವಿನಂತಾಗಿಬಿಡುವ ವ್ಯಕ್ತಿತ್ವ , ಜಡ್ಡುಬಿದ್ದು ಒದ್ದಾಡಿಕೊಂಡು ಹೇಗೊ ಹೆಣಗಿ ತುದಿಯನ್ನು ತಲುಪಿದಾಗ ಹುಟ್ಟುವ ಧನ್ಯತೆಯ ಭಾವ, ಭಾವೋನ್ಮೇಷಕ್ಕೊಳಗಾಗಿಸಿ ಕಟ್ಟಿಟ್ಟ ಯಾತನೆಯನೆಲ್ಲ ಕರಗಿಸಿಬಿಡುವಂತೆ ಅಳುವಿನ ರೂಪ ತಾಳುವುದಷ್ಟೆ ಅಲ್ಲದೆ ಅಲ್ಲಿಯತನಕದ ನಂಬಿಕೆಯ ತಳಹದಿಯನ್ನೆ ಅಲುಗಾಡಿಸಿ ಸ್ಥಿತ್ಯಂತರಿಸಿಬಿಡುತ್ತದೆ. ಆದರೆ ಎತ್ತರದಿಂದ ಕೆಳಗಿಳಿದು ಬರುತ್ತಿದ್ದಂತೆ ನಿಧನಿಧಾನವಾಗಿ ಆ ಉನ್ಮೇಷವೆಲ್ಲಾ ಕರಗಿ ಸೋರಿಹೋಗಿದ್ದ ಕಶ್ಮಲವೆಲ್ಲ ಮತ್ತೆ ಆವರಿಸಿಕೊಂಡ ಹಾಗೆ ಮತ್ತೆ ಹಿಂದಿನ ಸ್ಥಿತಿಯತ್ತ ಮರಳುವುದು, ಪರಿಸ್ಥಿತಿಗನುಗಣವಾಗಿ ವಿಚಿತ್ರವಾಗಿ ವರ್ತಿಸುವ ಮನೋವ್ಯಾಪಾರದ ಒಂದು ಮಜಲನ್ನು ಎತ್ತಿ ತೋರುತ್ತದೆ. ಧನ್ಯತೆಯ ಶಿಖರ ಸಾನಿಧ್ಯದ ಪರ್ಯಾಯದಂತೆ ವರ್ಣಿತವಾಗುವ, ಚಾರಣಿಗರು ತಟ್ಟೆಯಲ್ಲಿ ತಿನ್ನದೆ ಬಿಟ್ಟಿದ್ದನ್ನು ಉಣ್ಣುವ ಸ್ಥಳೀಯರ ಬದುಕಿನ ದಾರುಣತೆ ನಾಣ್ಯದ ಎರಡು ಮುಖಗಳಂತಿರುವ ಧನ್ಯತೆ-ದೈನ್ಯತೆಯ ಪರಿಚಯ ಮಾಡಿಕೊಡುತ್ತದೆ.
ಅಭಿವ್ಯಕ್ತಿ ಸ್ವಾತ್ಯಂತ್ರ ಎನ್ನುವುದು ಸಂಪ್ರದಾಯ, ನಡಾವಳಿಗಳ ಚೌಕಟ್ಟಿನಲ್ಲಿರದೆ ತಂತಾನೆ ಅನಾವರಣವಾಗುವ ಸ್ವೇಚ್ಛೆಯ ರೂಪ ತಾಳಿದರೆ, ಅದೇ ಸಂಪ್ರದಾಯದ ಮುಸುಕಿನಡಿ ತಗಣಿಯಂತೆ ಹೊಸಕಿಹಾಕಲು, ಯಾವ ಮಟ್ಟಕ್ಕೂ ಇಳಿಯಲು ಹೇಸದ ಸುತ್ತಣ ಪರಿಸರದ ಚಿತ್ರವನ್ನು ಕಟ್ಟಿಕೊಡುವ ಕಥೆ 'ತಗಣಿ'. ತನ್ನ ಹೆಣ್ಣು ವ್ಯಕ್ತಿತ್ವವನ್ನು ಗುಟ್ಟಾಗಿರಿಸದೆ ರಾಜಾರೋಷವಾಗಿ ಪ್ರದರ್ಶಿಸಿಕೊಂಡು ಬದುಕುವ ಧೀಮಂತಿಕೆಯನ್ನು ತೋರುವ ಶಂಕರಪ್ಪ ಎಲ್ಲರ ಕೆಂಗಣ್ಣಿಗೆ ಗುರಿಯಾಗುವುದು ಮಾತ್ರವಲ್ಲದೆ ತನ್ನವರ ಕೈಯಿಂದಲೆ ಹೊಸಕಿಸಿಕೊಂಡು ಅಂತ್ಯ ಕಾಣುವ ಪರಿ ಒಂದೆಡೆ ಆ ವ್ಯಕ್ತಿತ್ವದ ದಿಟ್ಟತನವನ್ನು ಎತ್ತಿ ಹಿಡಿದರೆ ಮತ್ತೊಂದೆಡೆ ಅದನ್ನು ಮೆಟ್ಟಿ ನಿಂತು ಸದೆ ಬಡಿಯುವ ವ್ಯವಸ್ಥೆಯ ನಿರ್ದಾಕ್ಷೀಣ್ಯತೆಯನ್ನು ತಣ್ಣಗೆ ಪ್ರದರ್ಶಿಸುತ್ತದೆ.
'ದುರ್ಭೀಕ್ಷ ಕಾಲ' ಐಟಿ ಜಗತ್ತಿನ ಊಹೆಗೆ ಮೀರಿದ ಅನಿರೀಕ್ಷಿತ / ಧಿಡೀರ ಪ್ರಕ್ರಿಯೆಗಳಿಗೆ ಕನ್ನಡಿ ಹಿಡಿವ ಕಥಾನಕ. ಬೆಂಗಳೂರಿನಂತಹ ಮಹಾಸಾಗರಕ್ಕೆ ದೇಶದೆಲ್ಲೆಡೆಯಿಂದ ಬಂದು ಸೇರುವ ಲಕ್ಷಾಂತರ ಜನರ ಜೀವನ ಪರಿಯ ಪಕ್ಷಿನೋಟವೊಂದು ಈ ಕಥೆಯಲ್ಲಿ ದಟ್ಟವಾಗಿ ಕಾಣಿಸಿಕೊಳ್ಳುತ್ತದೆ. ಬದುಕಿನ ಹಾದಿ ಹುಡುಕುತ್ತ ಬಂದ ಹೆಣ್ಣೊಬ್ಬಳು ತನ್ನ ಶ್ರದ್ದೆ, ಛಲಗಳ ಬಲದಿಂದ ಗಟ್ಟಿ ನೆಲೆ ಕಂಡುಕೊಳ್ಳುವ ಚಿತ್ರಣದೊಂದಿಗೆ ಸಾಗುವ ಕಥಾನಕ, ಮೂಲಭೂತ ಅಗತ್ಯಗಳ, ಸೌಲಭಗಳ ಗಮ್ಯ ತಲುಪುತ್ತಿದ್ದಂತೆ ಬದುಕಿನ ಇತರ ಕಾಳಜಿಯತ್ತ ತುಡಿಯಲು ಆರಂಭಿಸುತ್ತದೆ. ಆಗ ಧಾಳಿಯಿಕ್ಕುವ ಐಟಿ ಜಗತ್ತಿನ ವೈಪರೀತ್ಯಗಳ ವೇಗದ ವಿಧ್ವಂಸಕ ಪರಿ, ರಾತ್ರೋರಾತ್ರಿ ಐಷಾರಾಮಿ ಜೀವನ ಮಟ್ಟಕ್ಕೇರಿಸುವ ಈ ಮಾಯಾಜಗ ಅಷ್ಟೆ ದಾರುಣವಾಗಿ ಪಾತಾಳಕ್ಕಿಳಿಸುವ ಬಗೆಯನ್ನು, ಅದಕ್ಕೆ ಹೊಂದಿಕೊಳ್ಳಲು ಮಾಡಿಕೊಳ್ಳಬೇಕಾದ ಹೊಂದಾಣಿಕೆ, ವೈಯಕ್ತಿಕ ಸ್ತರ, ಪರಿಗಣನೆಗಳನ್ನು ದಾಟಿ ಕಠೋರ ನಿರ್ಲಿಪ್ತತೆಯಾಗುವುದು ಐಟಿ ಜಗತ್ತಿನ ಮಾಮೂಲಿ ವ್ಯವಹಾರದಂತೆ ಕಂಡರೂ, ಕಥಾನಕದ ಹಿಂದಿರುವ ಕ್ರೂರ ವಾಸ್ತವ ಬೆಚ್ಚಿಸದೆ ಬಿಡದು.
'ಭಗವಂತ, ಭಕ್ತ ಮತ್ತು ರಕ್ತ' ಸಾಮಾಜಿಕ ಪರಿಸರದಲಿ ಅಳವಡಿಸಿಕೊಂಡ ಮುಖವಾಡಕ್ಕೂ, ನಿಜ ಜೀವನದ ವೈಯಕ್ತಿಕ ನೆಲೆಗಟ್ಟಿನಲ್ಲಿ ಪ್ರಸ್ತುತವಿರುವ ನೈಜತೆಗೂ ಇರುವ ದ್ವಂದ್ವವನ್ನು ತೋರುವ ಪರಿಣಾಮಕಾರಿ ಕಥಾನಕ. ಈ ಕಥೆಯ ಗಟ್ಟಿತನವಿರುವುದು, ಸಾಮಾಜಿಕ ಸ್ತರದಲ್ಲಿ ಭಕ್ತರ ನಂಬಿಕೆಗಳ ಸಾಂಕೇತಿಕ ಅಭಿವ್ಯಕ್ತಿಯಾಗಿಬಿಡುವ ವ್ಯಕ್ತಿತ್ವಗಳು, ಒಂದು ಹಂತ ಮೀರಿದ ಮೇಲೆ ವ್ಯಕ್ತಿಯ ಸ್ವಂತ ನಿಯಂತ್ರಣವನ್ನು ಮೀರಿ ಮತ್ತಾರದೊ ಹತೋಟಿಯ ಪರಭಾರೆಯಾಗುವುದು, ಜೀವನ್ಮರಣದ ಹಂತದಲ್ಲೂ ಆ ಪರಭಾರೆಯ ನಿರ್ಧಾರಗಳ ಅವಲಂಬನೆಗೊಳಗಾಗುವ ಕರುಣಾಜನಕ ಸ್ಥಿತಿ ಅನಾವರಣಗೊಳ್ಳುವ ತರದಲ್ಲಿ. ತಾನು ಭೋಧಿಸುವ ತತ್ವಗಳ ಎಲ್ಲೆ ಮೀರಿದ ಮಗಳನ್ನು ಗುಟ್ಟಾಗಿ ಕದ್ದು ಭೇಟಿಯಾಗುವ ಅಸಹಾಯಕತೆಯಾಗಿಬಿಡುವ ವ್ಯಕ್ತಿತ್ವದ ಮತ್ತೊಂದು ಮುಖ ಬದುಕಿನ ಹುನ್ನಾರಗಳ ಮತ್ತೊಂದು ಮಜಲನ್ನು ಪರಿಚಯಿಸುತ್ತದೆ.
ಗಂಡ ಸತ್ತ ಸಂಕಟದಲ್ಲಿ ಸಂಪ್ರದಾಯಬದ್ಧ ಬಾಳುವೆ ನಡೆಸಲು ಹೆಣಗುವ ವಿಧವೆ, ಆಧುನಿಕ ಜಗದ ಪ್ರತಿನಿಧಿಯಾಗಿ ತಾಯಿ ನಂಬಿದ ಜಗಕ್ಕೆ ಸವಾಲಾಗಿ ನಿಲ್ಲುವ ಮಗಳ ನಡುವಿನ ನಂಬಿಕೆಗಳ ತಿಕ್ಕಾಟದ ಕಥಾನಕ 'ಪೂರ್ಣಾಹುತಿ'. ಒಂದೆಡೆ ಸಾಂಪ್ರದಾಯಿಕತೆಯನ್ನೆ ಅತಿರೇಕಕ್ಕೆಳೆಯುತ್ತ ಮಗಳ ಭವಿಷ್ಯದ ಕುರಿತು ಕಳವಳಕ್ಕೊಳಗಾಗುವ ತಾಯಿಯಾದರೆ, ತನ್ನ ಆಧುನಿಕತೆಯ ಸ್ಪರ್ಶದ ತೆವಲನ್ನು ಹುಡುಗಾಟಿಕೆಯ ಅಮಲಿನಲ್ಲಿ ಮೀತಿ ಮೀರಿದ ಅತಿರೇಕಕ್ಕೊಯ್ಯುವ ಮಗಳು ಇನ್ನೊಂದೆಡೆ. ಎರಡು ವೈಪರೀತ್ಯಗಳು ಅವರಿಗೆ ಮುಳುವಾಗಿ ಪರಸ್ಪರರ ಪೂರ್ಣಾಹುತಿಯಲ್ಲಿ ಪರ್ಯಾವಸಾನ ಆಗುವ ದುರಂತ ಮನ ತಟ್ಟುತ್ತದೆ. ಅಂತೆಯೆ ಮೊಬೈಲ್ ಜಗದ ಅನಿವಾರ್ಯ ಅತಿರೇಕಗಳನ್ನು ಒಂದೆ ಹಂದರದಡಿ ಹೃದಯಂಗಮವಾಗಿ ಕಟ್ಟಿಕೊಡುತ್ತದೆ.
ಒಂದೆ ಓಘದಲ್ಲಿ ಸಾಗಿರುವ ಸಾಮಾಜಿಕತೆ, ಸಮಕಾಲೀನ ಕಥೆಗಳು ಇದ್ದಕ್ಕಿದ್ದಂತೆ ದಿಕ್ಕು ಬದಲಿಸಿ ಪೌರಾಣಿಕ ಹಾದಿ ಹಿಡಿದ ಕಥಾನಕ 'ದ್ರೌಪದಿ ಕಥಿ'. ಪೌರಾಣಿಕ ಪಾತ್ರಗಳನ್ನು ಸಾಮಾನ್ಯ ವ್ಯಕ್ತಿತ್ವದ ದೃಷ್ಟಿಕೋನದಿಂದ ಚಿತ್ರಿಸಿರುವ ಈ ಕಥೆ ಪಾಂಡವರೈವರ ಸತಿಯಾಗಿ ದ್ರೌಪದಿಯ ಯಾತನೆಗಳನ್ನು ಬಿಚ್ಚಿಡುತ್ತಾ ಹೋದಂತೆ, ರಾಜವಂಶ ಅರಮನೆಗಳ ರಾಜನೀತಿ, ರಾಜಕೀಯಗಳನ್ನು ತೆರೆಯುತ್ತ ಹೋಗುವ ರೀತಿ ಆಪ್ತವಾಗುತ್ತದೆ. ಅಂತೆಯೆ ನಾವರಿತ ಕಥೆಗಳ ಹಿನ್ನಲೆಯಲ್ಲಿರಬಹುದಾದ ಬೇರೆಯದೆ ಸತ್ಯದ ಸಾಧ್ಯತೆಗಳು ಬೆರಗು ಮೂಡಿಸುತ್ತವೆ.
ಈ ಸಂಕಲನದ ಕೊನೆಯ ಕಥೆ 'ಇವತ್ತು ಬೇರೆ', ಈ ಪುಸ್ತಕದ ಮಿಕ್ಕೆಲ್ಲಾ ಕಥೆಗಳಿಗೆ ಹೋಲಿಸಿದರೆ ಕಥಾವಸ್ತುವಿನ ಆಯ್ಕೆಯ ಸ್ತರದಲ್ಲಿ ತುಸು ಪೇಲವವೇನಿಸುವ ಕಥೆ. ವಸುಧೇಂದ್ರರ ಅದೆ ಸಹಜ ತಂತ್ರಗಾರಿಕೆಯ ಶೈಲಿಯಿಂದಾಗಿ ಸೊಗಸಾಗಿ ನಿರೂಪಿಸಿಕೊಳ್ಳುತ ಹೋಗುವ ಕಥಾನಕ ಕುಡಿತದ ಹವ್ಯಾಸವುಳ್ಳ ಗಂಡನ ಚಿತ್ರಣ ಕಟ್ಟಿಕೊಡುವ ಬಗ್ಗೆ ತುಸು ಜಾಳಾಯಿತೇನೊ ಅನಿಸುವುದು ಪ್ರಾಯಶಃ ಆ ವ್ಯಕ್ತಿತ್ವದ ಪೂರಕ ಹಿನ್ನಲೆಯ ದುರ್ಬಲ ಚಿತ್ರಣದಿಂದಿರಬಹುದು. ಆದರೂ ಮೊದಲಿಂದ ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳುವ ಕಥಾಶೈಲಿ ಗಮನ ಸೆಳೆಯುತ್ತದೆ. ಬೇರೆಯವರ ಕಣ್ಣಿನ ಗಂಡ ಸತ್ತನಲ್ಲಾ ಎಂಬ ಅನುಕಂಪ, ಪತ್ನಿಯ ಕಣ್ಣಲ್ಲಿ 'ಸದ್ಯ ಬಿಡುಗಡೆಯಾದೆನಲ್ಲಾ' ಎಂಬ ನಿರಾಳತೆ, ನೆಮ್ಮದಿಯಾಗಿ ಪರಿಸ್ತಿತಿಯ ವ್ಯಂಗ್ಯವೂ ಆಗಿ ಪರಿಣಮಿಸುವುದು ಈ ಕಥೆಯ ಅಂತ್ಯದಲ್ಲಿರುವ ಪುಟ್ಟ 'ಶಾಕ್'.
ಒಟ್ಟಾರೆ ಇಡೀ ಸಂಕಲನ ಎಲ್ಲೂ ಬೋರು ಹೊಡೆಸದೆ ಆಸಕ್ತಿ, ಕುತೂಹಲ ತೆರೆಸಿಕೊಳ್ಳುತ್ತ ಸಾಗುತ್ತವೆ. ಈ ಪರಿಗಣನೆಯಿಂದ ಮತ್ತು ವಸ್ತು ವೈವಿಧ್ಯದ ಅಗಾಧತೆ ಮತ್ತು ವಸ್ತು ಸೂಕ್ಷ್ಮಜ್ಞತೆಯನ್ನು ದುಡಿಸಿಕೊಂಡಿರುವ ಪರಿಯಿಂದಾಗಿ ಅಗತ್ಯವಾಗಿ ಓದಲೆಬೇಕಾದ ಕಥಾಸಂಕಲನ - ಮೋಹನಸ್ವಾಮಿ.
Comments
ಉ: ಮೋಹನಸ್ವಾಮಿ
ನಾಗೇಶ ಮೈಸೂರು ರವರಿಗೆ ವಂದನೆಗಳು
ಇಂದಿನ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ವಸುಧೇಂದ್ರರ ಹೊಸ ಸಣ್ಣ ಕಥೆಗಳ ಸಂಕಲನ ಮೋಹನ ಸ್ವಾಮಿ ಕುರಿತು ಬರೆದ ವಿಮರ್ಶೆ ಕಥೆಗಳ ಹೂರಣವನ್ನು ನಮಗೆ ಉಣ ಬಡಿಸಿದ್ದೀರಿ, ಈ ಸಂಕಲನ ಓದಲು ನಿಮ್ಮ ವಿಮರ್ಶೆ ಒಂದು ಮಾರ್ಗದರ್ಶಿ, ಧನ್ಯವಾದಗಳು.
In reply to ಉ: ಮೋಹನಸ್ವಾಮಿ by H A Patil
ಉ: ಮೋಹನಸ್ವಾಮಿ
ಪಾಟೀಲರೆ ನಮಸ್ಕಾರ. ಪ್ರತಿಕ್ರಿಯೆಗೆ ಧನ್ಯವಾದಗಳು. ಕುತೂಹಲಕರವಾಗಿ ಓದಿಸಿಕೊಂಡು ಹೋಗುತ್ತಿದ್ದ ಕಾರಣ, ಸಂಕಲನವನ್ನು ಒಂದೆ ಓಘದಲ್ಲಿ ಓದಿ ಮುಗಿಸಿದ್ದೆ. ಆ ನಂತರದ ಅನಿಸಿಕೆಗೆ ಪದರೂಪ ಕೊಡಬೇಕೆನಿಸಿತು ಪರಿಚಯದ ರೂಪದಲ್ಲಿ - ಆಸಕ್ತಿಯುಳ್ಳವರಿಗೆ ಸಹಾಯಕವಾಗಬಹುದೆಂದು :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು