ಮೂಡಿದ್ದರೆ ಮಹದೇವ ..
ಈಗಿನ ಒತ್ತಡದ ಬದುಕಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಕೆಲಸ ಕಾರ್ಯದಲ್ಲಿ ನಿರತರಾಗಿರುವ ಅನಿವಾರ್ಯ. ಹೀಗಾಗಿ ಒಂದರ ಹಿಂದೊಂದರಂತೆ ನಡೆಸುವ ಕ್ರಿಯೆಗಳಲ್ಲಿ ಮನದ ಆಸಕ್ತಿ ಒಂದೆ ತೆರನಾಗಿ ಇರುವುದೆಂದು ಹೇಳಬರುವುದಿಲ್ಲ. ಕೆಲ್ಲವೊಮ್ಮೆ ಉತ್ಸಾಹದ ಬುಗ್ಗೆ ಚಿಮ್ಮುತ್ತಿದ್ದರೆ, ಮತ್ತೆ ಕೆಲವೊಮ್ಮೆ ನಿರ್ಲಿಪ್ತತೆ ಮನೆ ಮಾಡಿರುತ್ತದೆ. ಮಿಕ್ಕ ಬಾರಿ ಆಕಾಶವೆ ತಲೆಯ ಮೇಲೆ ಬಿದ್ದ ನೀರವ ಭಾವ; ಏನು ಮಾಡಲೂ ಮನಸೆ ಇಲ್ಲದ ಉದಾಸ ಭಾವ, ಖಿನ್ನ ಮನದ ಕಾಡುವಿಕೆ.
ಮನದ ಭಾವ ಏನೆ ಇರಲಿ ಅದು ನಾವು ಮಾಡುವ ಪ್ರತಿ ಕೆಲಸದ ಮೇಲೂ ಪರಿಣಾಮ ಬೀರದೆ ಇರದು. ಮನೆಯಲ್ಲಿ ಯಾವುದೊ ಕಾರಣಕ್ಕೆ ಜಗಳವಾಡಿಕೊಂಡು ಹೋಗಿದ್ದರೆ ಆ ಮೂಡು ಆಫೀಸಿನ ವಾತಾವರಣದಲ್ಲೂ ಪ್ರಭಾವ ಬೀರುವುದು ಎಲ್ಲರಿಗು ಅನುಭವವಿರುವ ಸಂಗತಿ. ಅಂತೆಯೆ ಯಾವಾವುದೊ ಕಾರಣಗಳಿಂದ ಯಾವಾವುದೊ ಬಗೆಯ ವಿಶ್ವರೂಪ ತಾಳುವ ಮನದ ಬಗೆಯನ್ನು ಹೀಗೆ ಎಂದು ಮುಂಚಿತವಾಗಿ ನಿಖರವಾಗಿ ಹೇಳಬರದು.
ಒಟ್ಟಾರೆ ಸಾರಾಂಶದಲ್ಲಿ ಹೇಳುವುದಾದರೆ, ಮೂಡಿದ್ದಂತೆ ಮಹದೇವ. ಆ ಮೂಡಿನ ವೈವಿಧ್ಯಮಯ ರೂಪಿನ ಲಘುಲಹರಿ ಈ ಕೆಳಗಿನ ಪದ್ಯ. ಇದನ್ನು ಓದುವಾಗಲೂ ಅಷ್ಟೆ - ಸರಿಯಾದ ಮೂಡಿದ್ದರೆ ಹಿಡಿಸೀತು, ಮೂಡು ಸರಿಯಿಲ್ಲವಾದರೆ ಇಲ್ಲವಾದರೆ ಅಷ್ಟಕ್ಕಷ್ಟೆ. ಹೇಗೆ ಬಣ್ಣಿಸಲಿ ಮೂಡೆ, ನಿನ್ನ ವಿಶ್ವ ರೂಪವಾ....
ಮೂಡಿದ್ದರೆ ಮಹದೇವ
____________________
ಮೂಡಿದ್ದರೆ ಮಹದೇವ
ಏನೆಲ್ಲವ ಮಾಡಿಸಿಬಿಡುವ
ಮೂಢರನು ಮೇಲೆಬ್ಬಿಸಿಬಿಡುವ
ಗುಡ್ಡದ ಕಲ್ಲನೆ ಜರುಗಿಸಿಬಿಡುವ ||
ಎಲ್ಲಿಂದಲೊ ಬಂದಂತೆ ಹುರುಪು
ಉತ್ಸಾಹದ ಗೊಂಚಲ ನೆನಪು
ಚದುರಿದ್ದೆಲ್ಲ ಕುದುರಿಸಿಬಿಡುವ
ಬಂಡೆಕಲ್ಲ ಮನ ಕದಲಿಸಿಬಿಡುವ ||
ಆಲಸಿಕೆಯೆಲ್ಲಾ ಮಂಗಮಾಯ
ಮುನ್ನುಗ್ಗುವುದೊಂದೆ ನ್ಯಾಯ
ಗಣಿಸದೆ ಅಡ್ಡಿ ಆತಂಕ ಅಪಾಯ
ಹೂವೆತ್ತಿದಂತೆ ನಡೆಸಿಯೆಬಿಡುವ ||
ಪರಿಗಣಿಸದೆ ದೂರದ ಹಾದಿ
ಮೆಟ್ಟುತ ಕಾಡುವ ಒಳ ವ್ಯಾಧಿ
ಮಾಡದೆ ಯಾರಿಗೂ ಫಿರ್ಯಾದಿ
ನಡೆದಿರು ನೋಡದೆ ಎಡಬಲ ಬದಿ ||
ಮೂಡಿಲ್ಲದ ಮನವೆ ಕಿರುಬೆಟ್ಟ
ಶಿಖರವಿಟ್ಟು ಕಟ್ಟಿದಂತೆ ಜುಟ್ಟ
ಭಾರಕೆ ಬಾಗಿದ ಶಿರ ನಿಖರ
ತಲೆಯೊಳಗೇ ಸೇರಿದ ಭೀಕರ ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ಮೂಡಿದ್ದರೆ ಮಹದೇವ ..
ತುಂಬಾ ಚೆನ್ನಾಗಿದೆ ...... ಮನಸಿದ್ದರೆ ಮಹಾದೇವ ಬದಲು ಮೂಡಿದ್ದರೆ ಮಹಾದೇವ ಬಳಸಿ ಮೂಡು ಸರಿಮಾಡುವಂತಹ ಕವನವನ್ನೆ ಹೊಸೆದುಬಿಟ್ಟಿದ್ದೀರಿ!
In reply to ಉ: ಮೂಡಿದ್ದರೆ ಮಹದೇವ .. by partha1059
ಉ: ಮೂಡಿದ್ದರೆ ಮಹದೇವ ..
ಮೂಡು ತಾನೆ ಒಳ ಮನಸಿನ ಪ್ರಕಟ ಭಾವ? ಅದಕ್ಕೆ ಮೂಡು = ಮನಸು ಎಂದು ಸಮೀಕರಿಸಿದ ಭಾವ ಮೂಡಿ ಬಂತು. ಧನ್ಯವಾದಗಳು ಪಾರ್ಥ ಸಾರ್, ನಾಗೇಶ ಮೈಸೂರು.
ಉ: ಮೂಡಿದ್ದರೆ ಮಹದೇವ ..
ಸರ್ ನಮಸ್ಕಾರಗಳು
ತುಂಬಾನೆ ಚನ್ನಾಗಿದೆ ಸರ್ ಇಂದಿನ ಒತ್ತಡದ ಕಾಯಕದಲ್ಲಿ ಮನಸ್ಸು ಇದೆ ಅನ್ನುವ ಭಾವನೆ ಕಡಿಮೆಯಾಗಿದೆ .ಮನಸ್ಸಿನ ಒತ್ತಡದಿಂದ ದುಷ್ಚಟಕ್ಕೆ ದಾಸರಾಗಿದ್ದೆವೆ. ಅದೇ ಕಾರಣದಿಂದ ಆ ದುಷ್ಚಟಕ್ಕೆ ಕುಮ್ಮಕ್ಕು ಕೊಟ್ಟು ಅದನ್ನು ಹೆಚ್ಚಿಸುತ್ತಿದ್ದೇವೆಯೇ ಹೊರತು ಕಡಿಮೆ ಮಾಡಿಕೊಳ್ಳುವ ವಿಚಾರವನ್ನೇ ತಗೆದು ಹಾಕಿದ್ದೇವೆ.ಇದಕ್ಕೆಲ್ಲ ಈ ಮೂಡೇ ಕಾರಣ. ಏನಂತೀರಾ ಸರ್?.
In reply to ಉ: ಮೂಡಿದ್ದರೆ ಮಹದೇವ .. by ravindra n angadi
ಉ: ಮೂಡಿದ್ದರೆ ಮಹದೇವ ..
ನಮಸ್ಕಾರ ರವೀಂದ್ರರೆ. ಮನಸೊಳಗೇನೆ ಜಂಜಾಟ, ತಾಕಲಾಟಗಳಿದ್ದರೂ ಅದರ ಪ್ರಕಟ ರೂಪವನ್ನು ನಿಯಂತ್ರಿಸುವುದು ಮೂಡಿನ ಹತೋಟಿಗೆ ಸೇರಿದ್ದು. ದುಶ್ಚಟಗಳ ಪ್ರೇರಣೆಯನ್ನು ತಡೆದು ನಿಯಂತ್ರಿಸುವುದು ಅಥವಾ ಶರಣಾಗುವುದು ಎರಡು ಮೂಡಿನ ಸಹಾನುವರ್ತಿಗಳೆ ಅಲ್ಲವೆ? :-) - ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
In reply to ಉ: ಮೂಡಿದ್ದರೆ ಮಹದೇವ .. by nageshamysore
ಉ: ಮೂಡಿದ್ದರೆ ಮಹದೇವ ..
ನಮಸ್ಕಾರಗಳು ಸರ್,
ನಿಮ್ಮ ಮಾತು ನೂರಕ್ಕೆ ನೂರು ಸತ್ಯ.
ಧನ್ಯವಾದಗಳು.
ಉ: ಮೂಡಿದ್ದರೆ ಮಹದೇವ ..
ನಾಗೇಸ ಮೈಸೂರು ರವರಿಗೆ4 ವಂದನೆಗಳು
ಮೂಡಿದ್ದರೆ ಮಹದೇವ ಮನಸಿನ ಲಹರಿಯ ಸುತ್ತ ಅರಳಿಕೊಂಡ ಸರಲ ಸುಂದರ ಲೇಖನ, ಮನಕೆ ಮುದ ನೀಡುವ ಬರವಣಿಗೆ ಧನ್ಯವಾದಗಳು.
In reply to ಉ: ಮೂಡಿದ್ದರೆ ಮಹದೇವ .. by H A Patil
ಉ: ಮೂಡಿದ್ದರೆ ಮಹದೇವ ..
ನಮಸ್ಕಾರ ಪಾಟೀಲರೆ. ಮನಸಿನ ವ್ಯಾಪಾರಕ್ಕೆ ಬೇಲಿ ಕಟ್ಟಲೊ ಅಥವ ಬಿಚ್ಚಲೊ ಪ್ರೇರಕವಾಗುವ ಮೂಡಿನ ವಿಶ್ವರೂಪದ ಸಣ್ಣ ಕಿಡಿ ಈ ಕವನ. ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು :-)ನಾಗೇಶ ಮೈಸೂರು
ಉ: ಮೂಡಿದ್ದರೆ ಮಹದೇವ ..
ಮೂಡಿದ್ದರೆ ಮೂಢನೂ ಏನೂ ಮಾಡಬಲ್ಲ ಎಂದಿರುವುದು ಸರಿಯಾಗಿದೆ. ಧನ್ಯವಾದ, ನಾಗೇಶರೇ.
In reply to ಉ: ಮೂಡಿದ್ದರೆ ಮಹದೇವ .. by kavinagaraj
ಉ: ಮೂಡಿದ್ದರೆ ಮಹದೇವ ..
ಕವಿಗಳೆ, ಮೂಡಿದ್ದರೆ ಕೆಲಸ ಓಡುವ ಪರಿ ನಾಗಲೋಟದ ಕುದುರೆ. ಮೂಡಿಲ್ಲದಿದ್ದರೆ ವರಹಾರೂಪದಲಿ ಬಿದ್ದೊರಗಿದ ಸೋಮಾರಿ :-)