ಸಾಗರ ತಾಲ್ಲೂಕು ಮಟ್ಟದ ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಭಾಷಣ

ಸಾಗರ ತಾಲ್ಲೂಕು ಮಟ್ಟದ ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಭಾಷಣ

ಚಿತ್ರ

ಕನ್ನಡ ಸಾಹಿತ್ಯ ಪರಿಷತ್ತು ಸಾಗರ ತಾಲ್ಲೂಕು
ತಾಲೂಕು ಮಟ್ಟದ ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನ
ದಿನಾಂಕ 28/01/2014ನೇ ಮಂಗಳವಾರ ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ

ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಭಾಷಣ

             ಕನ್ನಡ ನಾಡಿನ ಅಭಿಮಾನೀ ದೇವತೆಯೆನಿಸಿರುವ ತಾಯಿ ಭುವನೇಶ್ವರಿಯನ್ನು ಮನಸಾರೆ ಧ್ಯಾನಿಸುತ್ತಾ, ಕನ್ನಡ ಸಾರಸ್ವತ ಲೋಕದ ನುಡಿಜಾತ್ರೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸನ್ಮಾನ್ಯ ನಾ.ಡಿಸೋಜರವರಿಗೆ ಭಕ್ತಿ ಪೂರ್ವಕ ವಂದನೆಯನ್ನು ಸಲ್ಲಿಸುತ್ತಾ, ಇಂದು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದ ಮಾನ್ಯ ಉಪ ವಿಭಾಗಾಧಿಕಾರಿಗಳಿಗೂ,  ಹಾಗೂ ಈ ವೇದಿಕೆಯಲ್ಲಿ ಉಪಸ್ಥಿತರಿರುವ ಎಲ್ಲ ಹಿರಿಯ ಗಣ್ಯ ಮಾನ್ಯರಿಗೂ ಗೌರವ ಪೂರ್ವಕ ನಮನಗಳನ್ನು ಸಲ್ಲಿಸಿ, ಆಶೀರ್ವಾದವನ್ನು ಆಶಿಸುತ್ತಾ, ಇತ್ತೀಚೆಗೆ ಮಂಡ್ಯದಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವನ್ನು ಅಲಂಕರಿಸಿದ್ದ ಹಾಗೂ ಈ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷರೂ, ನನ್ನ ನೆಚ್ಚಿನ ಬಾಲ್ಯದ ಸಹಪಾಠಿಯಾದ ಕು|| ಶ್ರಾವ್ಯ ಸಾಗರ್‍ರವರೇ, ಮತ್ತು ಸೇರಿದ ಸಮಸ್ತ ಬಂಧುಗಳೇ, ಈ ಶುಭ ಸಮಾರಂಭದಲ್ಲಿ ತಮ್ಮೆಲ್ಲರ ಮುಂದೆ ನನ್ನ ಈ ಕೆಲವು ಭಾವನೆಗಳನ್ನು ಹಂಚಿಕೊಳ್ಳಲು ವಿನೀತನಾಗಿ ನಿಂತಿದ್ದೇನೆ.
       
      ಸನ್ಮಾನ್ಯರೇ

         ಈ ಬಗೆಯ ಸ್ಥಾನ ಮಾನ ಗೌರವಗಳಿಗೆ ನಾನೆಷ್ಟರ ಮಟ್ಟಿಗೆ ಅರ್ಹನೆಂಬ ಒಂದು ಅಳುಕು ಅನುಮಾನಗಳು ಕಳೆದ ಕೆಲವು ದಿನಗಳಿಂದ ನನ್ನನ್ನು ಸತತ ಕಾಡುತ್ತಿದೆ. ಆದರೆ ಸಣ್ಣವರಾಗಿ ಮಗುವಾಗಿ ಹುಟ್ಟಿದರೂ, ದೊಡ್ಡವರಾಗಿ ವ್ಯಕ್ತಿಯಾಗಿ ಬೆಳೆಯುವ ಅವಕಾಶವನ್ನು ಭಗವಂತನು ಎಲ್ಲರಿಗೂ ಕರುಣಿಸಿದ್ದಾನೆಂಬ ಹಿರಿಯರ ಮಾತು ನನಗಿಂದು ಅನುಭವಕ್ಕೆ ಬರುತ್ತಿದೆ. ‘ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ’ಯೆಂಬ ಜನಪ್ರಿಯ ನಾಣ್ಣುಡಿಯೂ ನನ್ನ ಪಾಲಿಗೆ ಅಕ್ಷರಶಃ ಸತ್ಯವಾಗಿದೆ. ನನಗೆ ಕನ್ನಡ ಇಂಗ್ಲಿಷ್ ಎಲ್ಲ ಅಕ್ಷರಗಳನ್ನು ಕಲಿಸಿದ್ದು ಬರೆಸಿದ್ದು ನಮ್ಮಮ್ಮ. ಆಕೆಯೇ ನನ್ನ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದುದರಿಂದ ಶಾಲೆಯಲ್ಲೂ ಪಾಠ ಮಾಡಿದ್ದೂ, ಪರೀಕ್ಷೆ ಮಾಡಿದೂ,್ದ ಅಂಕ ನೀಡಿದ್ದೂ ಕಿವಿಹಿಂಡಿ ಅವಮಾನಿಸಿದ್ದೂ ಎಲ್ಲ ನನ್ನಮ್ಮ. ಭಾಷೆ, ಕಲೆ, ಗಮಕ, ಯಕ್ಷಗಾನ ಮತ್ತು ಸಂಸ್ಕøತಿಗಳನ್ನು ತೋರಿಸಿ ಕಲಿಸಿದ್ದು ನಮ್ಮಪ್ಪ. ಮಾತಿನಿಂದ ಕೃತಿಯಿಂದ ಒಳಿತನ್ನು ಸಾಧಿಸುವುದು ಸಾಧ್ಯವೆಂದು ತೋರಿಸಿ ಕೊಟ್ಟಿದ್ದು ನನ್ನ ಅಜ್ಜ. ಪ್ರೀತಿ ತೋರಿ ಮುದ್ದಿಸಿದ್ದು ಅಜ್ಜಿ, ಕಾಕಂದಿರು ಚಿಕ್ಕಮ್ಮಂದಿರು, ತಮ್ಮಂದಿರು ಮತ್ತು ಸ್ನೇಹಿತರು. ಕಲಿಸುವಾಗಲೂ ಅಕ್ಕರೆ ತೋರಿ ಕ್ಷಮಿಸಿ ತೀಡಿದವರು ನನ್ನ ಪೂಜ್ಯ ಮಾತಾಜಿಯವರುಗಳು. ಕೈಗಳಿಗೆ ಕುಂಚವನ್ನು ಹಿಡಿಸಿ ಪ್ರೋತ್ಸಾಹಿಸಿದ್ದು ರವಿವರ್ಮ ಚಿತ್ರಶಾಲೆಯ ವೆಂಕಿ ಸರ್‍ರವರು. ಈಗ ನನ್ನ ಎಲ್ಲರೂಪು ಸರಿಗೊಳಿಸುತ್ತಿರುವವರು ನನ್ನ ಗುರುವೃಂದದವರು. ಪ್ರಜ್ಞಾ ಭಾರತೀ ವಿದ್ಯಾ ಮಂದಿರ, ಶಿವಲಿಂಗಪ್ಪ ಪ್ರೌಢಶಾಲೆ ಮತ್ತು ಸೇವಾಸಾಗರ ಸಂಸ್ಥೆಗಳು ತೋರಿದ ಗುರಿ ಮತ್ತು ಗುರುತನಗಳಿಂದಾಗಿ ಇಂದಿಲ್ಲಿ ನಿಲ್ಲಲು ಸಾಧ್ಯವಾಗಿದೆ. ಇಂದು ಗುರ್ತಿಸಿದ ಕನ್ನಡ ಸಾಹಿತ್ಯ ಪರಿಷತ್ತಿಗೆ ನಾನು ಆಜೀವ ಪರ್ಯಂತ ಕೃತಜ್ಞನಾಗಿರುವೆ.

       ಈ ನಾಡಿನ ಎಲ್ಲ ಸಾಂಸ್ಕøತಿಕ ಪರಂಪರೆಯ ಸಾರವನ್ನು ಹೀರಿ ಬೆಳೆದ ಸಾಗರದಲ್ಲಿ ಜನಿಸಿದ್ದು ನನಗೆ ಧನ್ಯತೆಯೆನಿಸಿದೆ. ಪಾರಂಪರಿಕ ಕಲೆಯಾದ ಯಕ್ಷಗಾನ, ದಂತಕಲೆ, ಹಸೆ ಚಿತ್ತಾರಗಳು ಅರಳಿದ್ದು ಈ ನೆಲದ ಸಿರಿವಂತ ಸಹೃದಯತೆಯಲ್ಲಿ. ವಿಜಯ ನಗರದ ವೈಭವವು ಕಣ್ಮರೆಯಾದಾಗ ದೇಶೀಯ ಕುಶಲ ಕರ್ಮಿಗಳಿಗೆ ಕಲಾವಿದರಿಗೆ, ಸಕಲ ಧರ್ಮೀಯರಿಗೆ ಆಶ್ರಯವನ್ನು ನೀಡಿದ್ದು ಕೆಳದಿಯರಸರು. 47ವರ್ಷಗಳ ಕಾಲ ಕನ್ನಡದ  ನೆಲವನ್ನು ಆಳಿದ, ಹೆಮ್ಮೆಯ ದೋನೇಜ ವೆಂಕಟಪ್ಪನಾಯಕನು ರಾಜಧಾನಿಯನ್ನು ಕಟ್ಟಿ ಮೆರೆಸಿದ್ದು ನಮ್ಮ ಇಕ್ಕೇರಿಯಲ್ಲಿ. ದೇವನದಿ ಸಮಾನಳಾದ ವರದೆ ಉಗಮಿಸಿದ ಪಣ್ಯ ಭೂಮಿ ನಮ್ಮೂರು. ಭಗವಾನ್ ಶ್ರೀಧರರ ತಪೋಭೂಮಿಯಾಗಿ  ಸಂಪನ್ನವಾಗಿದೆ. ಋಷಿಸದೃಶ ಕವಿ ಪರಮದೇವನು ರಚಿಸಿದ ತುರಂಗಭಾರತ ಕನ್ನಡದ ಒಡತಿಯನ್ನು ಅಲಂಕರಿಸಿದ ಕಾವ್ಯ ರತ್ನ. ನಮ್ಮೂರಿನ ನೀನಾಸಂ ವಿಶ್ವ ರಂಗಭೂಮಿಯಲ್ಲಿ ಗುರುತಿಸಲ್ಪಟ್ಟಿರುವುದು ಹೆಮ್ಮೆಯೆನಿಸಿದರೆ, ನಮ್ಮ ತಂದೆಯವರ ಒಂದು ಪದ್ಯದ ಸಾಲಿನಂತೆ ‘ಕಥೆಗಳಲಿ ಮಾಸ್ತಿ, ಭಾವದಲಿ ಕುವೆಂಪು, ರಸಸೃಷ್ಟಿಯಲಿ ಬೇಂದ್ರೆ’ ಯಂತಿರುವವರು ನಮ್ಮ ನಾ.ಡಿಸೋಜರವರು. ಮಲೆನಾಡಿನ ಜನರ ನಾಡಿ ನಾಡಿಯ ಮಿಡಿತವನ್ನರಿತವರು ಪೂಜ್ಯ ನಾಡಿಯವರು. ನುಡಿತೇರನ್ನೆಳೆದವರವರು. ಇವರ ಕೃತಿಗಳು ಕನ್ನಡ ಸಾರಸ್ವತ ಲೋಕದ ಅಮೂಲ್ಯ ರತ್ನಗಳಾಗಿವೆ. ಪಂಪ ಪ್ರಶಸ್ತಿ ಪುರಸ್ಕøತ ಪೂಜ್ಯ ಶ್ರೀ ಶಂಕರ ಭಟ್ಟರವರಿಗೆ ನನ್ನ ನಮನಗಳು. ನೂರಾರು ಕವಿಗಳು ಈ ನೆಲದ ಸಾರವನ್ನು ಅಕ್ಷರಾಭಿವ್ಯಕ್ತಿಯಲ್ಲಿ ಮೊಳಗಿಸಿದ್ದಾರೆ. ಎಲೆಮರೆಯ ಕಾಯಿಗಳಂತೆ ಮಲೆನಾಡಿನಲ್ಲಿ ಅಲ್ಲಲ್ಲಿ ಕುಳಿತು ತಾದಾತ್ಮ್ಯದಲ್ಲಿ ಕನ್ನಡದ ನುಡಿಸೇವೆಗೈಯುತ್ತಿರುವವರು ಇಂದಿಗೂ ಅನೇಕರಿದ್ದಾರೆ. ಅವರೆಲ್ಲರ ಸಾಂಸ್ಕøತಿಕ ಕೊಡುಗೆಯನ್ನು ಗೌರವಿಸಿ ನಮಿಸಿ ಆರಾಧಿಸುತ್ತೇನೆ. ಪಶ್ಚಿಮ ಘಟ್ಟದ ಮಲೆನಾಡಿನ ಮಡಿಲಲ್ಲಿ ಜೀವನದಿ ಶರಾವತಿ ಹರಿದು ಜಗದ್ವಿಖ್ಯಾತ ರಮಣೀಯ ಜಲಪಾತವನ್ನು ಸೃಷ್ಟಿಸಿದ್ದು, ಅಪಾರ ವೃಕ್ಷ ವನರಾಜಿಗಳ ಹಸಿರಿನ ಒಡಲಿನಲ್ಲಿ, ತೆಂಗು ಕಂಗುಗಳ ಮಡಿಲಿನಲ್ಲಿ ನೆಲಸಿದ ಸಾಗರದ ಸಾಂಸ್ಕøತಿಕ ರಾಯಭಾರಿಗಳಾದ ಜನಸಮುದಾಯದ ಸಾಂಸ್ಕøತಿಕ ಬದುಕು, ಕಾವ್ಯ ಸಾಹಿತ್ಯಗಳ ಸೃಷ್ಟಿಗೆ ಕಾರಣವಾದುದ್ದನ್ನು ಆದರದಿಂದ ಗೌರವಿಸುತ್ತೇನೆ.

          ಈ ನಿಸರ್ಗದ ಸುಂದರ ತಾಣದಲ್ಲಿ ಬೆಳೆದು, ಆದರ್ಶದ ಬದುಕನ್ನು ರೂಪಿಸಿಕೊಂಡು, ಈ ನೆಲದ ಕೀರ್ತಿಯನ್ನು ಬೆಳಗಿಸುವ ಗುರಿ ನಮ್ಮೆಲ್ಲರದಾಗಿದೆ. ಕನ್ನಡ ನುಡಿಯ ಕಂಪನ್ನು ಎಲ್ಲ ಕವಿ ಕೃತಿಗಳನ್ನು ಓದುವ ಮೂಲಕ, ಇಡೀ ಕರ್ನಾಟಕದ ಪರಂಪರೆಯನ್ನು ಗೌರವಿಸಿ, ಕನ್ನಡದ ಕಂಪನ್ನೂ ಸಾರವನ್ನೂ ಹೀರಿ ಬೆಳೆಯುವ ಗಿಡವಾಗಿ ಈ ನೆಲದಲ್ಲಿ ನಾವು ಬೆಳೆಯಬೇಕು. ಉದಾರತೆ, ಶಾಂತಿ, ಸಹನೆ, ಸಂಯಮದಿಂದ ಪ್ರಸಿದ್ಧವಾದ ಕನ್ನಡ ನಾಡಿನ ಹೆಮ್ಮೆಯ ಮಕ್ಕಳಾದ ನಾವು ಮೌಲ್ಯಯುತ ಜೀವನವನ್ನು ನಮ್ಮ ಶಿಕ್ಷಣದಿಂದ ಗಳಿಸಿಕೊಂಡು ಶಿಸ್ತು, ವಿದ್ಯೆ ಮತ್ತು ವಿನಯಗಳಿಂದ ಸಂಪನ್ನರಾಗಿ ಶರೀರ, ಬುದ್ಧಿ ಮತ್ತು ಮನಸ್ಸುಗಳನ್ನು ಗಟ್ಟಿಗೊಳಿಸಿಕೊಂಡು ನಾಡಿನ ಹೆಮ್ಮೆಯ ಕುವರರೆನಿಸುವ ಭಾಗ್ಯ ನಮ್ಮೆಲ್ಲರದಾಗಬೇಕು.

           ಆಧುನಿಕ, ವೈಜ್ಞಾನಿಕ, ತಾಂತ್ರಿಕ ಸಾಧನೆಯ ಹೊಸಗಾಳಿಯಲ್ಲಿ ಮೌಢ್ಯವನ್ನೂ ತೂರಿಬಿಡುವ ಛಲ ನಮ್ಮದಾಗಬೇಕು. ನಮ್ಮೆಲ್ಲರ ತಾಯಿ ಕನ್ನಡಾಂಬೆಯನ್ನು ಸಿರಿವಂತಗೊಳಿಸಿದ ಪರಿಸರ, ನದಿ, ನದ, ಮಣ್ಣು ನಮ್ಮ ಆರಾಧ್ಯ ದೈವವಾಗಬೇಕು. ಶಿಕ್ಷಣದ ಮೂಲಕ ನಮ್ಮನ್ನೆಲ್ಲ ವಿಕಾಸ ಗೊಳಿಸುವ ಶಿಕ್ಷಕರು ತೋರುವ ಸನ್ಮಾರ್ಗದಿಂದ ವಿದ್ಯೆಯ ಸಾಧನ ಸಂಪತ್ತನ್ನು ಗಳಿಸಿ ಉತ್ತಮ ನಾಗರಿಕರಾಗಿ ಬೆಳೆಯಬೇಕು. ಹೊಸ ಬದುಕಿನ ಹೊಸ್ತಿಲಲ್ಲಿರುವ ನಾವು ನಮ್ಮ ಪರಂಪರೆಯನ್ನು ಗೌರವಿಸಿದಷ್ಟೇ, ನಮ್ಮ ಹಿರಿಯರನ್ನು ವೃದ್ಧರನ್ನು ತಂದೆ ತಾಯಿಯರನ್ನು ಮನಃ ಪೂರ್ವಕವಾಗಿ ಗೌರವಿಸಬೇಕು. ಈ ಸಂಯಮವನ್ನು ಆ ತಾಯಿ ನಮಗೆಲ್ಲರಿಗೂ ನೀಡಲೆಂದು ನಾನು ಪ್ರಾರ್ಥಿಸುತ್ತೇನೆ. ಬಾಲಕರಾದ ನಮ್ಮ ಅಭಿವ್ಯಕ್ತಿಯ ನೆಲೆಯಾದ ನುಡಿಯೇ ತಾಯ್ನುಡಿ. ಅಂದ್ರೆ ಇಂಗ್ಲೀಷ್ ಹಿಂದಿ ಸಂಸ್ಕøತ ಭಾಷೆಗಳೆಲ್ಲಾ ಕಲಿತೀವಿ. ಆದ್ರೆ ಮಾತ್ರಾ ಕನ್ನಡದಲ್ಲಿ ಮಾತಾಡ್ತಿರ್ತೀವಿ. ತಾಯ್ನುಡಿಯಲ್ಲಿ ಕಲಿತು ಮಾತನಾಡುತ್ತ ಕನ್ನಡ ತಾಯಿಯ ವಿನಮ್ರ ವಿದ್ಯಾರ್ಥಿಗಳಾಗಿ ಬದುಕುವ ಆಶಯವನ್ನು ಹೊಂದೋಣ.

         ಮಲೆನಾಡಿನ ಸಿರಿಯು ಕಳಚಿ ಹೋಗುತ್ತಿದೆಯೋ ಎಂಬ ಆತಂಕವಿದೆ. ಇಲ್ಲಿನ ಹಳ್ಳ, ಕೊಳ್ಳ, ತೊರೆ, ನದಿಗಳು ಬತ್ತಿಹೋಗುತ್ತಿವೆಯೇನೋ ಎನಿಸುತ್ತಿದೆ. ಆದರೆ ತಂಪಾದ ಸುಂದರ ಪ್ರಕೃತಿಯಿಂದಲೇ ಸೊಬಗು ಕಂಡ ಮಲೆನಾಡಿಗೆ ಎಂದಿಗೂ ನಮ್ಮಿಂದ ಮಾರಕವಾಗದಿರಲಿ. ತಾಲೂಕಿನ ಬಹುಪಾಲು ಜನರ ನಿತ್ಯದ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಅಡಕೆಗೆ ಭಯ ಕಾಡದಿರಲಿ. ಜೋಗದ ಸಿರಿ ಬೆಳಕಿನಲ್ಲಿ ಎಂದು ಹಾಡಿದ ಕವಿಭಾವಕ್ಕೆ ಚ್ಯುತಿಬಾರದಂತೆ ಸರ್ವಋತು ಶೋಭೆಯ ಜಲಪಾತವನ್ನು ನಿರ್ಮಿಸುವ, ನೋಡಲು ಬರುವ ಪ್ರವಾಸಿಗರಿಗೆ ಸಮರ್ಪಕ ಸೌಲಭ್ಯಗಳು ದೊರೆಯುವ ಗಂಭೀರ ಪ್ರಯತ್ನಗಳು ಇಂದು ಅತ್ಯವಶ್ಯವಾಗಿದೆ. ಶರಾವತಿ ಮತ್ತು ವರದೆಯರು ಹಿಂಗದಿರಲಿ, ಜಲಪಾತದ ಸೊಬಗು ಎಂದೆಂದೂ ಮಾಸದಿರಲಿ.

              ಕೆಳದಿ ಮತ್ತು ಇಕ್ಕೇರಿಯಂತಹ ಐತಿಹಾಸಿಕ ತಾಣಗಳು, ಕಾನೂರಿನ ಕಾಡಿನ ನಡುವೆ ಅಡಗಿ ಕಥೆ ಹೇಳುತ್ತಿರುವ ಕಾನೂರು ಕೋಟೆ, ಇನ್ನೂ ಹಳೆಯ ಕಾಲದ ಕಲಸಿ, ಹೊಸಗುಂದಗಳು, ಅಲ್ಲಲ್ಲಿರುವ ಪ್ರಾಚೀನ ದೇಗುಲಗಳು, ಬಸ್ತಿಗಳೂ ನಾಶವಾಗದಂತೆ ಕಾಪಿಡುವ ಮತ್ತು ಅಧ್ಯಯನಗಳಿಗೆ ಪ್ರೇರೇಪಿಸುವ ಹಾಗೆ ಸಜ್ಜುಗೊಳಿಸಬೇಕಾದ ಅನಿವಾರ್ಯತೆ ನಿಜಕ್ಕೂ ಇದೆ.

                   ಮಕ್ಕಳ ಸಾಹಿತ್ಯವೂ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳ್ಳಬೇಕು. ಮಕ್ಕಳ ಸಾಹಿತ್ಯ ಕೃತಿಗಳೂ ಗ್ರಂಥಾಲಯ ಸೇರಬೇಕು. ಮಕ್ಕಳ ಸಾಹಿತ್ಯದ ಧ್ವನಿಯನ್ನು ವಿವೇಚಿಸಿ ದಾರಿದೀಪವಾಗಿ ಹಿರಿಯರು ಸಲ್ಲಬೇಕು. ಮಕ್ಕಳ ಕೈಗೆ ಜ್ಞಾನವನ್ನು ಹೆಚ್ಚಿಸುವ, ನೂತನ ಆವಿಷ್ಕಾರಗಳನ್ನು ವಿವರಿಸುವ, ಬದುಕನ್ನು ರೂಪಿಸುವ ಓದುವ ಪುಸ್ತಕಗಳನ್ನು ಒದಗಿಸಿ. ಅನ್ನ ಅಶನ ವಸನ ಹಣಗಳನ್ನು ಎಲ್ಲರಿಗೂ ನೀಡಬೇಕಿಲ್ಲ. ನಮ್ಮ ನಮ್ಮ ತಂದೆ ತಾಯಿಗಳು ನೀಡುತ್ತಾರೆ. ಪ್ರತೀ ಮಗುವೂ ಓದುವ ಆ¸ಕ್ತಿ ಮೂಡಿಸುವ ಪುಸ್ತಕಗಳನ್ನು ಸುಲಭವಾಗಿ ಪಡೆಯುವಂತಿದ್ದರೆ ನಾಡು ನುಡಿಯ ಬಗ್ಗೆ ಹೆಮ್ಮೆ ಪಡುವ ಭಾಗ್ಯ ನಮ್ಮದಾಗುತ್ತದೆ.
                
                 ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಬಾಲಭಾಷೆಯ ಕೃತಿಗಳಿಗೆ ತಾವು ತೋರಿದ ಆದರಕ್ಕೆ ನಾವು ಸದಾ ಋಣಿಗಳಾಗಿರೋಣ. ಈ ದಿನದ ನಿಮ್ಮೆಲ್ಲರ ಒತ್ತಾಸೆಯ ಅಧ್ಯಕ್ಷನಾಗಿರುವ ನಾನು ನುಡಿತೇರಿನ ಆರಾಧ್ಯ ಭಕ್ತನಾಗಿ ಸದಾ ಸೇವೆಗೈಯುವ ಅವಕಾಶಕ್ಕೆ ಎಂದೆಂದಿಗೂ ನಾನು ಕಟಿಬದ್ಧನಾಗಿರುತ್ತೇನೆ. ಈ ಅವಕಾಶವನ್ನು ನೀಡಿದ ಕನನನ್ನಡ ಸಾಹಿತ್ಯ ಪರಿಷತ್ತಿನ ಮಾದರಿ ಕ್ರಿಯಾಶೀಲ ಜಿಲ್ಲಾ ಅಧ್ಯಕ್ಷರಾದ ಡಿ.ಮಂಜುನಾಥರವರಿಗೂ, ತಾಲೂಕು ಕ.ಸಾ.ಪ. ಅಧ್ಯಕ್ಷರಾದ ವಿ.ಟಿ.ಸ್ವಾಮಿಯವರಿಗೂ, ಪದಾಧಿಕಾರಿಗಳೂ ಹಾಗು ನನ್ನ ಪೂಜ್ಯ ಗುರುಗಳಾದ ಎಸ್. ಆರ್. ಭಡ್ತಿಯವರಿಗೂ ಜಿ.ನಾಗೇಶ್ ಮತ್ತು ಅಲ್ಲಿನೆಲ್ಲ ಸದಸ್ಯರಿಗೂ ನನ್ನ ನಮನಗಳನ್ನು ಸಲ್ಲಿಸುವೆ. ನನ್ನ ಮೊದಲ ಕೃತಿಗೆ ಮುನ್ನುಡಿ ಬರೆದು ಹುರಿದುಂಬಿಸಿದ ಡಾ|| ವೆಂಕಟೇಶ ಜೋಯಿಸ್‍ರವರಿಗೂ, ಸದಾ ಪ್ರೇರಕರಾದ ಸೇವಾಸಾಗರದ ನಾರಾಯಣಮೂರ್ತಿ ಮಾಷ್ಟರ್‍ಜೀಯವರಿಗೂ, ಶಂಕರ ಶಾಸ್ತ್ರೀಯವರಿಗೂ, ಹಾಗು ಸ್ಪೂರ್ತಿ ನೀಡಿದ ಎಲ್ಲರಿಗೂ ನನ್ನ ಪ್ರಣಾಮಗಳು.

           ಈ ದಿನದ ಸಮ್ಮೇಲನಾಧ್ಯಕ್ಷತೆಯ ಹೊಣೆಹೊತ್ತ ನಾನು ಈ ದಿನ ಸಾಗರದ ಸಾಹಿತ್ಯಾಸಕ್ತರಿಗೆ ಎಲ್ಲ ಗೋಷ್ಟಿಗಳು ವಿಚಾರ ವೇದ್ಯವಾಗಲಿ. ಇನ್ನೂ ನೂರಾರು ಜನ ನನ್ನ ಸಹಪಾಠಿಗಳು ಕಾವ್ಯ ಸಾಹಿತ್ಯ ಕೃಷಿಯಲ್ಲಿ ತೊಡಗುವಂತಾಗಲಿ ಎಂದು ಆಶಿಸುತ್ತೇನೆ.  ಮಕ್ಕಳ ಸಾಹಿತ್ಯ ಕೃತಿಗಳ ವಿಮರ್ಶೆ, ಪ್ರಕಟಣೆ, ಅಧ್ಯಯನ, ಪ್ರಸಾರ, ನಿರಂತರÀ ನಡೆದು ಎಲ್ಲ ಮಕ್ಕಳ ಅಭಿವ್ಯಕ್ತಿಗೆ ತಾಯಿ ಭಾರತಿ ಒಲಿದು ನೆಲೆಯಾಗಲೆಂದು ಆಶಿಸಿ ಈ ದಿನ ಹೊಸನಾಡ ಕಟ್ಟುವ ಕವಿ ಗೋಪಾಲಕೃಷ್ಣರ ಅಡಿಗರ ನುಡಿಯನ್ನು ಸ್ಮರಿಸಿ ವಿರಮಿಸುತ್ತೇನೆ.

ಕಟ್ಟೋಣ ನಾವು ಹೊಸ ನಾಡೊಂದನು, ರಸದ ಬೀಡೊಂದನು.
ಸಿರಿಗನ್ನಡಂ ಗೆಲ್ಗೆ ಬಾಳ್ಗೆ

ಅನೀಶ ಎಸ್. ಶರ್ಮ
ಸಮ್ಮೇಳನದ ಸರ್ವಾಧ್ಯಕ್ಷರು
10ನೇ ತರಗತಿ
ಸೇವಾಸಾಗರ ಪ್ರೌಢಶಾಲೆ - ಸಾಗರ

Rating
No votes yet

Comments